ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಣ್ಣರ ಕಾಡುವ ಕ್ಯಾನ್ಸರ್‌

Last Updated 12 ಫೆಬ್ರುವರಿ 2016, 19:30 IST
ಅಕ್ಷರ ಗಾತ್ರ

ವಯಸ್ಕರು ಹಾಗೂ ಮಕ್ಕಳಲ್ಲಿ ಕಂಡು ಬರುವ ಕ್ಯಾನ್ಸರ್‌ಗಳ ನಡುವೆ ಯಾವ ವ್ಯತ್ಯಾಸಗಳಿವೆ?
ಮಕ್ಕಳಲ್ಲಿ ಕಂಡು ಬರುವ ಕ್ಯಾನ್ಸರ್‌ಗಳ ವಿಧಗಳು ಸಾಮಾನ್ಯವಾಗಿ ವಯಸ್ಕರಲ್ಲಿ ಕಂಡು ಬರುವ ಕ್ಯಾನ್ಸರ್‌ಗಿಂತ ಭಿನ್ನವಾಗಿರುತ್ತವೆ. ಮಕ್ಕಳಲ್ಲಿ ಹುಟ್ಟಿನ ಆರಂಭದಲ್ಲಿಯೇ ಉಂಟಾಗುವಂತಹ ಡಿಎನ್‌ಎ ಬದಲಾವಣೆಗಳೇ ಕಾರಣ, ಕೆಲವೊಮ್ಮೆ ಹುಟ್ಟಿದ ನಂತರವೂ ಸಂಭವಿಸಬಹುದು.  ಮಕ್ಕಳಲ್ಲಿ ಕಂಡು ಬರುವ ಕ್ಯಾನ್ಸರ್‌ಗಳು ಜೀವನಶೈಲಿ ಅಥವಾ ಪರಿಸರ ಅಪಾಯದ ಅಂಶಗಳೊಂದಿಗೆ ಸಂಬಂಧ ಹೊಂದಿರುವುದಿಲ್ಲ. ಬಾಲ್ಯದಲ್ಲಿ ಕಂಡು ಬರುವ ಕ್ಯಾನ್ಸರ್‌ಗಳು, ಕಿಮೊಥೆರಪಿಯಂತಹ (ಕಿಮೊ ಎಂದು ಕರೆಯಲಾಗುತ್ತದೆ) ಚಿಕಿತ್ಸೆಗಳಿಗೆ ಚೆನ್ನಾಗಿ ಪ್ರತಿಕ್ರಿಯಿಸುತ್ತವೆ. ಮಕ್ಕಳ ದೇಹ, ವಯಸ್ಸಕರ ದೇಹಕ್ಕಿಂತ ಚೆನ್ನಾಗಿ ಕಿಮೊಥೆರಪಿಗೆ ಶೀಘ್ರವಾಗಿ ಸ್ಪಂದಿಸುತ್ತದೆ.  ಆದರೆ, ಕಿಮೊ ಹಾಗೂ ವಿಕಿರಣ ಚಿಕಿತ್ಸೆಯಂತಹ ಕ್ಯಾನ್ಸರ್ ಚಿಕಿತ್ಸೆಗಳು ದೀರ್ಘಾವಧಿ ಅಡ್ಡಪರಿಣಾಮಗಳನ್ನು ಉಂಟು ಮಾಡಬಲ್ಲವು. ಆದ್ದರಿಂದ ಕ್ಯಾನ್ಸರ್ ಇರುವ ಮಕ್ಕಳು ತಮ್ಮ ಜೀವನದ ಉಳಿದ ಸಮಯದುದ್ದಕ್ಕೂ ಆರೋಗ್ಯದ ಕಡೆ ನಿಗಾವಹಿಸಬೇಕು.
ಮಕ್ಕಳಲ್ಲಿ ಕಂಡು ಬರುವ ಕ್ಯಾನ್ಸರ್‌ ವಿಧಗಳು
ಮಕ್ಕಳಲ್ಲಿ ಕಂಡು ಬರುವಂತಹ ಕ್ಯಾನ್ಸರ್‌ಗಳು ವಯಸ್ಕರಲ್ಲಿ ಕಂಡು ಬರುವ ಕ್ಯಾನ್ಸರ್‌ಗಿಂತ ಭಿನ್ನವಾಗಿರುತ್ತವೆ. ಮಕ್ಕಳಲ್ಲಿ ಸಾಮಾನ್ಯವಾಗಿ ಕಂಡು ಬರುವಂತಹ ಕ್ಯಾನ್ಸರ್‌ಗಳೆಂದರೆ:
* ಲ್ಯೂಕೇಮಿಯಾ (ಬಹಳ ಸಾಮಾನ್ಯ)
* ಮೆದುಳು ಹಾಗೂ ಇತರೆ ಕೇಂದ್ರೀಯ ನರ ವ್ಯವಸ್ಥೆಯ ಗಡ್ಡೆಗಳು
* ನ್ಯೂರೊಬ್ಲಾಸ್ಟೊಮಾ
* ವಿಲ್ಮ್ಸ್ ಟ್ಯೂಮರ್
* ಲಿಂಫೊಮಾ (ಹಾಡ್ಜ್‌ಕಿನ್ ಹಾಗೂ ನಾನ್-ಹಾಡ್ಜ್‌ಕಿನ್ ಒಳಗೊಂಡಂತೆ)
* ರ್ಹಾಡೊಮಯೊಸಾರ್ಕೊಮಾ
* ರೆಟಿನೊಬ್ಲಾಸ್ಟೊಮಾ
* ಮೂಳೆಗಳ ಕ್ಯಾನ್ಸರ್
ಮಕ್ಕಳಲ್ಲಿ ಕ್ಯಾನ್ಸರ್‌ನ ಸಂಭವನೀಯ ಸೂಚನೆಗಳು
* ಅಸಾಧಾರಣವಾದ ಗಡ್ಡೆ ಅಥವಾ ಊತ
* ವಿವರಿಸಲಾಗದಂತಹ ದೇಹದ ಬಿಳಿಚಿಕೊಳ್ಳುವಿಕೆ ಹಾಗೂ ಶಕ್ತಿಯ ನಷ್ಟ
* ಸುಲಭವಾಗಿ ಗಾಯಗೊಳ್ಳುವುದು
* ದೇಹದ ಯಾವುದಾದರೂ ಒಂದು ಭಾಗದಲ್ಲಿ ನಿರಂತರ ನೋವು
* ಕುಂಟುವುದು
* ವಾಸಿಯಾಗದಿರುವಂತಹ, ವಿವರಿಸಲಾಗದಿರುವಂತಹ ಜ್ವರ ಅಥವಾ ಅನಾರೋಗ್ಯ
*  ಆಗಾಗ ವಾಂತಿಯೊಂದಿಗೆ ತಲೆನೋವು ಬರುವುದು
* ಇದ್ದಕ್ಕಿದ್ದಂತೆ ಕಣ್ಣು ಅಥವಾ ದೃಶ್ಯ ಬದಲಾವಣೆಗಳು
* ಇದ್ದಕ್ಕಿದ್ದಂತೆ ದೇಹದ ತೂಕದಲ್ಲಿ ಇಳಿಕೆ

ಕ್ಯಾನ್ಸರ್‌ನ ಕಾರಣಗಳು
ಮಕ್ಕಳಲ್ಲಿ ಕ್ಯಾನ್ಸರ್ ಗೋಚರಿಸಲು ಕಾರಣಗಳು ತಿಳಿದಿಲ್ಲ. ಆದರೆ 5% ರಷ್ಟು ಮಕ್ಕಳಲ್ಲಿ ಕ್ಯಾನ್ಸರ್ ಬರಲು, ಆನುವಂಶಿಕ ಮಾರ್ಪಾಡುಗಳು (ಪೋಷಕರಿಂದ ಮಕ್ಕಳಿಗೆ ವರ್ಗಾವಣೆಯಾಗುವಂತಹ ಆನುವಂಶಿಕ ಮಾರ್ಪಾಡು) ಕಾರಣವಾಗಿದೆ. ಮಕ್ಕಳಲ್ಲಿ ಕಂಡು ಬರುವ ಬಹುಪಾಲು ಕ್ಯಾನ್ಸರ್‌ಗಳು, ವಯಸ್ಕರಲ್ಲಿ ಕಂಡು ಬಂದಂತೆ, ಅನಿಯಂತ್ರಿತ ಜೀವಕೋಶಗಳ ಬೆಳವಣಿಗೆ ಹಾಗೂ ಮುಂದೆ ಕ್ಯಾನ್ಸರ್‌ಗೆ ತಿರುಗಲು ಕಾರಣವಾಗುವಂತಹ, ಜೀನ್ಸ್‌ನಲ್ಲಾಗುವ ಮಾರ್ಪಾಡುಗಳೇ ಕಾರಣ.

ಮಕ್ಕಳಲ್ಲಿ ಗೋಚರಿಸುವ ಕ್ಯಾನ್ಸರ್‌ಗಳಿಗೆ ಯಾವ ರೀತಿಯ ಚಿಕಿತ್ಸೆ ಲಭ್ಯವಿದೆ?
ಮಕ್ಕಳಲ್ಲಿ ಕಂಡು ಬರುವ ಕ್ಯಾನ್ಸರ್ ಖಾಯಿಲೆಗೆ ನೀಡುವ ಚಿಕಿತ್ಸೆಗಳು ಮುಖ್ಯವಾಗಿ ಖಾಯಿಲೆಯ ವಿಧ ಹಾಗೂ ಹಂತವನ್ನು ಅವಲಂಭಿಸಿರುತ್ತದೆ. ಚಿಕಿತ್ಸೆ ಆಯ್ಕೆಗಳಲ್ಲಿ ಶಸ್ತ್ರಚಿಕಿತ್ಸೆ, ವಿಕಿರಣ ಚಿಕಿತ್ಸೆ, ಕಿಮೊಥೆರಪಿ ಇಲ್ಲವೆ ಇನ್ನಿತರ ಚಿಕಿತ್ಸೆಗಳು ಒಳಗೊಂಡಿವೆ. ಬಹುತೇಕ ಪ್ರಕರಣಗಳಲ್ಲಿ ಈ ಪೈಕಿ ಒಂದಕ್ಕಿಂತ ಹೆಚ್ಚಿನ ಸಂಖ್ಯೆಯ ಚಿಕಿತ್ಸೆಗಳನ್ನು ಪ್ರಯೋಗಿಸಲಾಗುತ್ತದೆ. ಒಟ್ಟಾರೆಯಾಗಿ ಮಕ್ಕಳಲ್ಲಿ ಕಂಡು ಬರುವ ಕ್ಯಾನ್ಸರ್‌ಗಳ ಪೈಕಿ 70% ರಷ್ಟು ಗುಣಪಡಿಸಬಹುದು. ಬಹುಪಾಲು ಮಕ್ಕಳು ಉತ್ತಮ ಗುಣಮಟ್ಟದ ಜೀವನಶೈಲಿಯನ್ನು ಅನುಸರಿಸುತ್ತಾರೆ. ಮಕ್ಕಳು ಖಾಯಿಲೆ ಇಲ್ಲದಿರುವಾಗ ಹಾಗೂ ಕಿಮೊಥೆರಪಿಯನ್ನು ಪಡೆಯದೆ ಇರುವ ಸಮಯದಲ್ಲಿ ಶಾಲೆಗೆ ಹೋಗಬಹುದು. ಬಹಳಷ್ಟು ಮಕ್ಕಳು ಸಾಮಾನ್ಯ ವಯಸ್ಕರಾಗಿ ಬೆಳೆಯುತ್ತಾರೆ ಹಾಗೂ ತಮ್ಮ ಕನಸುಗಳನ್ನು ಸಾಕಾರಗೊಳಿಸಿಕೊಳ್ಳುತ್ತಾರೆ.
( ಲೇಖಕರು: ಬಿಜಿಎಸ್‌ ಆಸ್ಪತ್ರೆಯ ಹೆಮಟಾಲಜಿ ತಜ್ಞರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT