ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿನ್ನಾಭರಣ ವ್ಯಾಪಾರಿ ಕೊಲೆ ರಹಸ್ಯ ಬಯಲು

ಚಂಬಲ್‌ ಕಣಿವೆ ದರೋಡೆಕೋರರಿಂದ ಕೃತ್ಯ
Last Updated 23 ಏಪ್ರಿಲ್ 2014, 20:02 IST
ಅಕ್ಷರ ಗಾತ್ರ

ಬೆಂಗಳೂರು:  ವರ್ಷದಿಂದ ನಿಗೂಢವಾಗಿದ್ದ ರಾಜಾಜಿ­ನಗರ ರಿಷಬ್ ಜ್ಯುವೆಲರ್ಸ್‌ ಮಳಿಗೆ ಮಾಲೀಕ ಶ್ರವಣ್‌­ಕುಮಾರ್‌ ಪೋಖರ್ನೆ (45) ಕೊಲೆ ಪ್ರಕರಣದಲ್ಲಿ ಕುಖ್ಯಾತ ಚಂಬಲ್‌ ಕಣಿವೆ ದರೋಡೆಕೋರರ ಕೈವಾಡವಿರುವುದನ್ನು ಅಹಮದಾಬಾದ್ ಪೊಲೀಸರು ಬಯಲು  ಮಾಡಿದ್ದಾರೆ.

ಗುಜರಾತ್‌, ಉತ್ತರ ಪ್ರದೇಶ ಮತ್ತು ರಾಜಸ್ತಾನದಲ್ಲಿ ನಡೆದಿದ್ದ ಮೂವರು ಚಿನ್ನಾಭರಣ ವ್ಯಾಪಾರಿಗಳ ಕೊಲೆ ಪ್ರಕರಣ ಸಂಬಂಧ ಮನೀಷ್‌ ಗೋಸ್ವಾಮಿ, ಗೌರವ್‌ ಟೋಮರ್‌ ಹಾಗೂ ವಿನಯ್‌ ಪಾರ್ಮರ್‌ ಎಂಬುವರನ್ನು ಅಹಮದಾಬಾದ್‌ ಪೊಲೀಸರು ಸೋಮವಾರ ಬಂಧಿಸಿದ್ದಾರೆ.  ಆರೋಪಿಗಳು 2013ರ ಮಾ.23ರಂದು ರಾಜಾಜಿನಗರದ ಶ್ರವಣ್‌­ಕುಮಾರ್ ಎಂಬ ಚಿನ್ನಾಭರಣ ವ್ಯಾಪಾರಿಯನ್ನು ಕೊಲೆ ಮಾಡಿ, ಆಭರಣ ದೋಚಿದ್ದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ.

ಹೀಗಾಗಿ ಅಹಮದಾಬಾದ್‌ ಪೊಲೀಸರು ನಗರ ಪೊಲೀಸ್‌ ಕಮಿಷನರ್‌ ರಾಘವೇಂದ್ರ ಔರಾದಕರ್‌ ಅವರಿಗೆ ಕರೆ ಮಾಡಿ ಬಂಧನದ ವಿಷಯವನ್ನು ಖಚಿತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬಾಡಿ ವಾರಂಟ್‌ ಮೇಲೆ ವಶಕ್ಕೆ ಪಡೆಯಲು ಮಲ್ಲೇಶ್ವರ ಉಪವಿಭಾಗದ ಎಸಿಪಿ ಸಾ.ರಾ.ಫಾತಿಮಾ ಅವರ ನೇತೃತ್ವದ ತಂಡ ಗುರುವಾರ ಅಹಮದಾಬಾದ್‌ಗೆ ತೆರಳಲಿದೆ.

ಮಧ್ಯಪ್ರದೇಶದ ಚಂಬಲ್‌ ತಂಡದ ದುಷ್ಕರ್ಮಿಗಳು, ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ಚಿನ್ನಾಭರಣ ವ್ಯಾಪಾರಿಗಳನ್ನೇ ಗುರಿಯಾಗಿಸಿಕೊಂಡು ದರೋಡೆ ಮಾಡುತ್ತಾರೆ. ಏಕಾಏಕಿ ಚಿನ್ನಾಭರಣ ಮಳಿಗೆಗೆ ನುಗ್ಗುವ ಇವರು, ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಆಭರಣದೊಂದಿಗೆ ಪರಾರಿಯಾಗುತ್ತಾರೆ. ಇದೇ ರೀತಿ 2013ರಲ್ಲಿ ಅಹಮದಾಬಾದ್‌ನಲ್ಲಿ ಮೂವರು ವ್ಯಾಪಾರಿಗಳನ್ನು ಕೊಲೆ ಮಾಡಿದ್ದರು. ಈ ಎಲ್ಲ ಪ್ರಕರಣಗಳ ಪ್ರಮುಖ ಆರೋಪಿ ವಿಶಾಲ್‌ ಗೋಸ್ವಾಮಿ ತಲೆಮರೆಸಿಕೊಂಡಿದ್ದಾನೆ.

ಈ ಸರಣಿ ಹತ್ಯೆಗಳಿಂದ ಕಾರ್ಯಪ್ರವೃತ್ತರಾದ ಸ್ಥಳೀಯ ಪೊಲೀಸರು, ಇತ್ತೀಚೆಗೆ ಎಲ್ಲ ಚಿನ್ನಾಭರಣ ವ್ಯಾಪಾರಿಗಳಿಗೆ ಬಂದು ಹೋಗುವ ಕರೆಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದರು. ಆಗ ಒಬ್ಬ ವ್ಯಾಪಾರಿಗೆ ಚಂಬಲ್‌ ತಂಡದ ಸದಸ್ಯ ಕರೆ ಮಾಡಿದ್ದಾನೆ. ಈ ಮಾಹಿತಿ ಆಧರಿಸಿ ಕಾರ್ಯಾಚರಣೆ ಆರಂಭಿಸಿರುವ ಪೊಲೀಸರು, ಮೂವರನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಏನಿದು ಪ್ರಕರಣ: ರಾಜಸ್ತಾನದ ಬೇಗೂನ್‌ ಜಿಲ್ಲೆಯ ಶ್ರವಣ್‌ ಕುಮಾರ್, 20 ವರ್ಷಗಳಿಂದ ನಗರದಲ್ಲಿ ನೆಲೆಸಿದ್ದರು. ಪತ್ನಿ ರೇಖಾ, ಮಗ ರಿಷಬ್‌ ಹಾಗೂ ಮಗಳು ಶ್ರೇಯಾ ಜತೆ ಚಾಮರಾಜಪೇಟೆಯಲ್ಲಿ ವಾಸವಾಗಿದ್ದ ಅವರು, ರಾಜಾಜಿನಗರದ 41ನೇ ಅಡ್ಡರಸ್ತೆಯಲ್ಲಿ ಮಗನ ಹೆಸರಿನಲ್ಲೇ ಚಿನ್ನಾಭರಣ ಮಳಿಗೆ ನಡೆಸುತ್ತಿದ್ದರು.

ವಿಧಾನಪರಿಷತ್ ಸದಸ್ಯ ಲೆಹರ್‌ಸಿಂಗ್ ಅವರ ದೂರದ ಸಂಬಂಧಿಯಾದ ಶ್ರವಣ್‌, 2013ರ ಮಾ.23ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಅಂಗಡಿ ಬಾಗಿಲು ತೆಗೆಯುತ್ತಿದ್ದರು. 
ಕೊಲೆ ರಹಸ್ಯ ಬಯಲು

ಈ ವೇಳೆ ಮಾರಕಾಸ್ತ್ರಗಳೊಂದಿಗೆ ನುಗ್ಗಿದ್ದ ದುಷ್ಕರ್ಮಿಗಳ ತಂಡ, ಅವರ ಮೇಲೆ ಮನಬಂದಂತೆ ಹಲ್ಲೆ ನಡೆಸಿ ಆಭರಣಗಳೊಂದಿಗೆ ಪರಾರಿಯಾಗಿತ್ತು. ತೀವ್ರ ರಕ್ತಸ್ರಾವವಾಗಿ ಶ್ರವಣ್‌ ಸ್ಥಳದಲ್ಲೇ ಸಾವನ್ನಪ್ಪಿದ್ದರು. ದುಷ್ಕರ್ಮಿಗಳು ಮಳಿಗೆಯಲ್ಲಿದ್ದ ಸಿ.ಸಿ ಟಿ.ವಿ ಕ್ಯಾಮೆರಾ ಹಾಗೂ ರೆಕಾರ್ಡರ್‌ಗಳನ್ನು ಬಿಚ್ಚಿಕೊಂಡು ಹೋಗಿದ್ದರಿಂದ ಸುಳಿವು ಸಿಗದೆ ನಗರ ಪೊಲೀಸರಿಗೆ ಈ ಪ್ರಕರಣ ಸವಾಲಾಗಿ ಪರಿಣಮಿಸಿತ್ತು.

ಸೋದರಿ ಮದುವೆಯಲ್ಲಿ ಸಿಕ್ಕಿಬಿದ್ದ ಆರೋಪಿ
ದುಷ್ಕರ್ಮಿಗಳು 2013ರ ಜ.3ರಂದು ಪಂಕಜ್‌ ವಾಗಾಡಿಯಾ ಎಂಬ ಚಿನ್ನಾಭರಣ ವ್ಯಾಪಾರಿಯನ್ನು ಕೊಲೆ ಮಾಡಿದ್ದರು. ಅದೇ ರೀತಿ ನ.3ರಂದು ಪ್ರಕಾಶ್‌ ಪಟೇಲ್‌ ಎಂಬುರನ್ನು ಹತ್ಯೆ ಮಾಡಿದ್ದ ಅವರು, ನ.20ರಂದು ಪ್ರಕಾಶ್‌ ಸೋನಿ ಎಂಬ ವ್ಯಾಪಾರಿಯನ್ನು ಗುಂಡಿಟ್ಟು ಕೊಂದಿದ್ದರು.

ಪ್ರಕಾಶ್‌ ಸೋನಿ ಕೊಲೆ ಪ್ರಕರಣದಲ್ಲಿ ಗೌರವ್‌ ಟೋಮರ್‌ ಭಾಗಿಯಾಗಿರುವ ಬಗ್ಗೆ ಪೊಲೀಸರಿಗೆ ಸ್ಥಳೀಯರಿಂದ ಮಾಹಿತಿ ಸಿಕ್ಕಿತ್ತು. ಈ ಮಾಹಿತಿ ಆಧರಿಸಿದ ಪೊಲೀಸರು, ಆತನನ್ನು ಹುಡುಕಿಕೊಂಡು ಚಂಬಲ್‌ ಕಣಿವೆಗೆ ತೆರಳಿದ್ದರು. ಗೌರವ್‌ನ ಸೋದರಿಯ ಮದುವೆ ಮೆರವಣಿಗೆ ನಡೆಯುತ್ತಿದ್ದ ಸಂದರ್ಭದಲ್ಲೇ ಪೊಲೀಸರು ಆತನನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಆತ ನೀಡಿದ ಮಾಹಿತಿ ಆಧರಿಸಿ ಉಳಿದ ಆರೋಪಿಗಳನ್ನು ಪತ್ತೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT