ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಮಿಣಿ ಬೆಳಕಲ್ಲಿ ಬಾವಿ ಕೊರೆದ ಸಂಸಾರ

ದೇಶಮೂಲೆಯಲ್ಲಿ ಈಶ್ವರ ನಾಯ್ಕರ ದೇಶ ಮೆಚ್ಚುವ ಕಾಯಕ
Last Updated 19 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ಬದಿಯಡ್ಕ: ಅನೇಕ ವರ್ಷಗಳಿಂದ ಕುಡಿಯುವ ನೀರಿಗಾಗಿ ಪರದಾಡುತ್ತಿದ್ದ ಬಡ ಕುಟುಂಬವೊಂದು ಚಿಮಿಣಿ ದೀಪದ ಬೆಳಕಿನಲ್ಲಿ ಬಾವಿ ತೋಡಿ ನೀರಿನ ಮೂಲವನ್ನು ಕಂಡುಕೊಂಡ ಭಗೀರಥ ಪ್ರಯತ್ನವೊಂದು ಕಾಸರಗೋಡು ಜಿಲ್ಲೆ ಎಣ್ಮಕಜೆ ಗ್ರಾಮ ಪಂಚಾಯಿತಿಯ ವಾಣಿನಗರ ದೇಶಮೂಲೆಯಲ್ಲಿ ನಡೆದಿದೆ.

ದೇಶಮೂಲೆಯ ಈಶ್ವರ ನಾಯ್ಕರ ಕುಟುಂಬ ಸುಮಾರು 8 ತಿಂಗಳ ಪ್ರಯತ್ನದ ಬಳಿಕ 48 ಅಡಿ ಆಳದಲ್ಲಿ ಶುದ್ಧ ನೀರನ್ನು ಕಂಡಿದ್ದು, ನೀರಿನ ಬರವನ್ನು ಸ್ವಂತವಾಗಿ ನೀಗಿಸಿಕೊಂಡಿದೆ. ಈ ಪ್ರದೇಶದಲ್ಲಿ ಇನ್ನೂ ನೀರು, ರಸ್ತೆ, ವಿದ್ಯುತ್‌ ಮೊದಲಾದ ಮೂಲ ಸೌಕರ್ಯಗಳಿಲ್ಲ. ಈಶ್ವರ ನಾಯ್ಕರ ಕುಟುಂಬ ನೀರಿಗಾಗಿ ಪರದಾಡುತ್ತಿತ್ತು.  ದುಡ್ಡು ಕೊಟ್ಟು ಬಾವಿ ತೋಡಿಸುವ ಶಕ್ತಿ ಕುಟುಂಬಕ್ಕೆ ಇಲ್ಲ.

ಕೊಳವೆ ಬಾವಿಯ ಮಾತು ದೂರವೇ ಉಳಿಯಿತು. ಇದಕ್ಕೆ ಪರಿಹಾರ ಕಾಣುವ ನಿಟ್ಟಿನಲ್ಲಿ ಹಗಲು ಕೂಲಿ ಕೆಲಸಕ್ಕೆ ಹೋಗುತ್ತಿದ್ದ, ಮನೆ ಮಂದಿಯೆಲ್ಲಾ ಸೇರಿ ರಾತ್ರಿ ಚಿಮಿಣಿ ಬೆಳಕಿನಲ್ಲಿ ಬಾವಿ ತೋಡಲು ಆರಂಭಿಸಿದರು. ಅವರ ಪ್ರಯತ್ನಕ್ಕೆ ಕೊನೆಗೂ ಫಲ ದೊರಕಿತು. ಈಶ್ವರ ನಾಯ್ಕರ ಪುತ್ರ ಚಂದ್ರಶೇಖರ, ಹೆಣ್ಣು ಮಕ್ಕಳಾದ ಗೀತಾ, ಯಶೋದಾ ಹಾಗೂ ಪತ್ನಿ ವಸಂತಿಯ ಸಹಕಾರದಲ್ಲಿ ಈ ಭಗೀರಥ ಪ್ರಯತ್ನ ಯಶಸ್ವಿಯಾಯಿತು. ಸುಮಾರು 6ರಿಂದ 7 ಕಾರ್ಮಿಕರು ಪರಿಶ್ರಮದಿಂದ ದುಡಿದು ನಿರ್ಮಿಸಬೇಕಾದ ಬಾವಿಯನ್ನು ಕುಟುಂಬವೊಂದು ಅಗೆದು ನಿರ್ಮಿಸಿರುವುದು ಅಚ್ಚರಿ ಮೂಡಿಸಿದರೂ, ಅದು ಇಂದು ವಾಸ್ತವ ಘಟನೆಯಾಗಿ ಕಣ್ಣೆದುರಲ್ಲಿ ಇದೆ.

ಬಿರು ಬೇಸಿಗೆಯ ಈ ದಿನಗಳಲ್ಲಿ ಬಾವಿಯಲ್ಲಿ 3 ಅಡಿಗಿಂತಲೂ ಹೆಚ್ಚು ನೀರು ಇದೆ. ಬಾವಿ ತೋಡುವಾಗ ಎದುರಾದ ಕಡು ಕಪ್ಪು ಕಲ್ಲು ಹಾಗೂ ನಂತರದ ಮಣ್ಣನ್ನು ಚಂದ್ರಶೇಖರ ಒಬ್ಬರೇ ದಿನಂಪ್ರತಿ ರಾತ್ರಿ ಅಗೆದಿದ್ದರು. ಈಶ್ವರ ನಾಯ್ಕ ಅವರು ಹೆಣ್ಮಕ್ಕಳೊಂದಿಗೆ ಸೇರಿಕೊಂಡು ಬಾವಿಯ ಮಣ್ಣು ಮೇಲೆತ್ತಿ ಸಾಗಿಸುವ ಕೆಲಸ ನಿರ್ವಹಿಸಿದ್ದರು. 
ಪ್ರಶಾಂತ ರಾಜ್‌ ವಿ.ಟಿ.ಅಡೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT