ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿರತೆ ಭೀತಿಯ ನಡುವೆಯೇ ಶಾಲೆಗಳು ಪುನರಾರಂಭ

Last Updated 11 ಫೆಬ್ರುವರಿ 2016, 19:41 IST
ಅಕ್ಷರ ಗಾತ್ರ

ಬೆಂಗಳೂರು: ವರ್ತೂರು, ನಲ್ಲೂರಹಳ್ಳಿ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಆತಂಕ ಮೂಡಿಸಿರುವ ಚಿರತೆ ಗುರುವಾರವೂ ಪತ್ತೆಯಾಗಲಿಲ್ಲ. ಈ ನಡುವೆ ಚಿರತೆ ಭೀತಿಯಿಂದ ರಜೆ ಘೋಷಿಸಲಾಗಿದ್ದ ಆ ಭಾಗದ ಶಾಲೆಗಳು ಶುಕ್ರವಾರದಿಂದ ಪುನರಾರಂಭವಾಗಲಿವೆ.

ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆಗಾಗಿ ಗುರುವಾರ ಬೆಳಿಗ್ಗೆಯಿಂದ ಸಂಜೆವರೆಗೂ ಶೋಧ ನಡೆಸಿದರು. ಆದರೆ, ಅಲ್ಲಲ್ಲಿ ಪ್ರಾಣಿಗಳ ಹೆಜ್ಜೆ ಗುರುತು ಪತ್ತೆಯಾಗಿದ್ದು ಬಿಟ್ಟರೆ ಚಿರತೆ ಇರುವಿಕೆಯ ಸುಳಿವು ಸಿಗಲಿಲ್ಲ.

‘ಶಾಲೆಗಳಿಗೆ ರಜೆ ಘೋಷಿಸಿರುವುದರಿಂದ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ತೊಂದರೆಯಾಗುತ್ತಿದೆ. ಪರೀಕ್ಷೆ ಹತ್ತಿರ ಬರುತ್ತಿರುವ ಕಾರಣ ಮಕ್ಕಳ ಸುರಕ್ಷತೆಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು, ಈ ಪ್ರದೇಶದ 75 ಖಾಸಗಿ ಹಾಗೂ 52 ಸರ್ಕಾರಿ ಶಾಲೆಗಳ ತರಗತಿಗಳನ್ನು ಶುಕ್ರವಾರದಿಂದ ಪುನರಾರಂಭಿಸಲು ನಿರ್ಧರಿಸಲಾಗಿದೆ.

ಪೋಷಕರು ಮಕ್ಕಳನ್ನು ಒಂಟಿಯಾಗಿ ಶಾಲೆಗೆ ಕಳುಹಿಸಿದೆ, ಕೆಲ ದಿನ ತಾವೇ ಕರೆತರಬೇಕು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ಕುಮಾರ್
ಹೇಳಿದ್ದಾರೆ.

ಮತ್ತೊಂದು ಬೋನು: ನಲ್ಲೂರಹಳ್ಳಿ ದುರ್ಗಾದೇವಿ ದೇವಸ್ಥಾನದ ಬಳಿ ಇರುವ ಖಾಲಿ ಜಾಗದಲ್ಲಿ ಚಿರತೆ ಕಾಣಿಸಿಕೊಂಡ ಬಗ್ಗೆ ನಿವೃತ್ತ ಎಎಸ್‌ಐ ಮಾಹಿತಿ ನೀಡಿದ್ದರಿಂದ ಅರಣ್ಯ ಇಲಾಖೆ ಅಧಿಕಾರಿಗಳು ಗುರುವಾರ ಬೆಳಗಿನ ಜಾವ ಅಲ್ಲಿಗೂ ಒಂದು ಬೋನು ತಂದಿಟ್ಟಿದ್ದಾರೆ. ನೀಲಗಿರಿ ಸೊಪ್ಪಿನಿಂದ ಬೋನನ್ನು ಮುಚ್ಚಿ, ಚಿರತೆಯನ್ನು ಆಕರ್ಷಿಸಲು ಒಳಗೆ ನಾಯಿಗಳನ್ನು ಕಟ್ಟಿ ಹಾಕಿದ್ದಾರೆ.

ಹುಸಿ ಸಂದೇಶ ಬೇಡ:  ‘ಅಲ್ಲಿ ಚಿರತೆ ಕಾಣಿಸಿತು, ಇಲ್ಲಿ ಓಡಿ ಹೋಯಿತು, ಜತೆಗೆ ಎರಡು ಮರಿಗಳೂ ಇದ್ದವು’ ಎಂಬ ಸುದ್ದಿಗಳು ವಾಟ್ಸ್‌ಆ್ಯಪ್‌ ಮೂಲಕ ಜನರಿಂದ ಜನರಿಗೆ ಹರಿದಾಡುತ್ತಿವೆ. ಈ ಕಾರಣದಿಂದ ಜನ ಆತಂಕದಿಂದ ಹೊರ ಬರಲು ಸಾಧ್ಯವಾಗುತ್ತಿಲ್ಲ.  ಇಂಥ ಹುಸಿ ಸಂದೇಶ ಪಸರಿಸುವ ಕೆಲಸವನ್ನು ಯಾರು ಮಾಡಬೇಡಿ’ ಎಂದು ಸ್ಥಳೀಯ ಪೊಲೀಸರು ನಾಗರಿಕರಲ್ಲಿ ಮನವಿ ಮಾಡಿದ್ದಾರೆ.

ಸ್ಥಳೀಯರ ಆತಂಕ ನಿವಾರಣೆ ಮಾಡುವ ಸಲುವಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಕೆಲ ಎನ್‌ಜಿಒ ಸಂಘಟನೆಗಳ ಜತೆ ಸೇರಿ ಮುನ್ನಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.

ವಿಬ್ಗಯೊರ್‌ಗೆ ಇಂದೂ ರಜೆ
‘ಚಿರತೆ ನುಗ್ಗಿ ಅವಾಂತರ ಸೃಷ್ಟಿಸಿದ್ದ ವಿಬ್ಗಯೊರ್ ಶಾಲೆಯಲ್ಲಿ ಭದ್ರತಾ ಕ್ರಮ ಹೆಚ್ಚಿಸಲು, ಕಾಂಪೌಂಡ್‌ಗೆ ಫೆನ್ಸಿಂಗ್ ಅಳವಡಿಸಲಾಗುತ್ತಿದೆ. ಹೀಗಾಗಿ ಈ ಶಾಲೆಗೆ ಸೋಮವಾರದವರೆಗೆ ರಜೆ ಘೋಷಿಸಲಾಗಿದೆ’ ಎಂದು ಪ್ರಾಂಶುಪಾಲ ರೋಷನ್ ಡಿಸೋಜಾ ತಿಳಿಸಿದರು.

‘ಚಿರತೆ ಹಿಡಿಯುವ ಕಾರ್ಯಾಚರಣೆ ವೇಳೆ ಕೆಲವು ಗಾಜುಗಳು ಒಡೆದು ಹೋಗಿವೆ. ಶೌಚಾಲಯದ ಗೋಡೆಗೆ ಕಬ್ಬಿಣದ ಸರಳುಗಳನ್ನು ಅಳವಡಿಸಲಾಗುತ್ತಿದೆ. ಈ ಎಲ್ಲ ಕೆಲಸಗಳು ಇನ್ನು ಒಂದೆರಡು ದಿನಗಳಲ್ಲಿ ಪೂರ್ಣಗೊಳ್ಳಲಿವೆ’ ಎಂದು ಡಿಸೋಜಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT