ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾ: ಪಾಶ್ಚಿಮಾತ್ಯ ಮೌಲ್ಯಗಳ ಪಾಠ

ಎಚ್ಚರಿಕೆಯನ್ನು ಅಕ್ಷರಶಃ ಜಾರಿಗೆ ತಂದರೆ ನಾನು ಬೋಧಿಸುವ ವಿಚಾರಗಳು ‘ನಿಷೇಧಿತ’ ವರ್ಗಕ್ಕೇ ಸೇರುತ್ತವೆ
Last Updated 19 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

‘ಅಮೆಜಾನ್‌’ನಲ್ಲಿ ನಾನು ಖರೀದಿಸಿದ್ದ ಪುಸ್ತಕಗಳನ್ನು ಗಡಿಯಲ್ಲಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ‘ದಿ ನ್ಯೂಯಾರ್ಕ್‌ ಟೈಮ್ಸ್‌’ ಮತ್ತು ‘ಗೂಗಲ್‌ ಸ್ಕಾಲರ್‌’ಗಳನ್ನು ಅಂತರ್ಜಾಲದಲ್ಲಿ ಓದುವ ನನ್ನ ಅಗತ್ಯ ಬಹಳ ಹಳೆಯದು. ಆದರೆ ಸೆನ್ಸಾರ್‌ ಪದ್ಧತಿ ಯಿಂದಾಗಿ ಅದು ಸಾಧ್ಯವಾಗುತ್ತಿಲ್ಲ. ತಂತ್ರಜ್ಞಾನ ಸ್ನೇಹಿ ವಿದ್ಯಾರ್ಥಿಗಳ ನೆರವಿನಿಂದ ಈ ನಿರ್ಬಂಧಗಳನ್ನೂ ಮೀರಿ ಈ ತಾಣಗಳನ್ನು ನಾನು ನೋಡುವುದಕ್ಕೆ ಸಾಧ್ಯವಾಗುತ್ತದೆ.

‘ಪಾಶ್ಚಿಮಾತ್ಯ ಶೈಲಿಯ’ ನಾಗರಿಕ ಮತ್ತು ರಾಜಕೀಯ ಸ್ವಾತಂತ್ರ್ಯವನ್ನು ಚೀನಾ ಸರ್ಕಾರ ಹತ್ತಿಕ್ಕುವುದು ದೊಡ್ಡ ಆಶ್ಚರ್ಯದ ಸಂಗತಿಯೇನೂ ಅಲ್ಲ. ಆದರೆ ವಿಶ್ವವಿದ್ಯಾಲಯಗಳಲ್ಲಿ ಮಾರ್ಕ್ಸ್‌ವಾದಿ ಸಿದ್ಧಾಂತಗಳ ಬೋಧನೆಯನ್ನು ಗಟ್ಟಿಗೊಳಿಸಲು ಮತ್ತು ಪಾಶ್ಚಿಮಾತ್ಯ ಮೌಲ್ಯಗಳನ್ನು ಪಸರಿಸುವ ಬೋಧನಾ ಪರಿಕರಗಳನ್ನು ನಿಷೇಧಿಸಲು ನೀಡಿರುವ ಕರೆ ಕೆಲವರಿಗಾದರೂ ಮಹತ್ವದ ಸುದ್ದಿ.

ಹೊರನೋಟಕ್ಕೇ ಇದು ಅಸಂಗತ ಅನಿಸಿಬಿಡುತ್ತದೆ. ಇದು ಜಾನ್‌ ಸ್ಟುವರ್ಟ್‌ ಮಿಲ್‌ ಮತ್ತು ಜಾನ್‌ ರಾಲ್ಸ್‌ ಅವರ ಚಿಂತನೆಗಳಿಗೆ ಮಾತ್ರ ಅಲ್ಲ, ಕಾರ್ಲ್‌ ಮಾರ್ಕ್ಸ್‌ ಮತ್ತು ಫ್ರೆಡರಿಕ್‌ ಎಂಗೆಲ್ಸ್‌ ಅವರಂತಹ ಚಿಂತಕರಿಗೂ ನಿಷೇಧ ಎಂಬ ಅರ್ಥ ಕೊಡುತ್ತದೆ.  ಪಾಶ್ಚಿಮಾತ್ಯ ಮೌಲ್ಯಗಳ ಪ್ರಭಾವದ ವಿರುದ್ಧದ ಘೋಷಣೆ ಚೀನಾದ ಉನ್ನತ ಶಿಕ್ಷಣದಲ್ಲಿ ವಾಸ್ತವದಲ್ಲಿ ಏನಾಗುತ್ತಿದೆ ಎಂಬುದಕ್ಕೆ ವ್ಯತಿರಿಕ್ತವಾಗಿದೆ. 1980ರ ದಶಕದಿಂದಲೇ ವಿದೇಶಿ ಹಸ್ತಕ್ಷೇಪಗಳ ವಿರುದ್ಧ ಆಗಾಗ ಆಂದೋಲನಗಳು ನಡೆಯುತ್ತಲೇ ಇವೆ. ಈ ಪ್ರವೃತ್ತಿ ಈಗಲೂ ಮುಂದುವರಿದಿದೆ. ಪಾಶ್ಚಿಮಾತ್ಯ ವಿಶ್ವವಿದ್ಯಾಲಯಗಳೊಂದಿಗೆ ಹೆಚ್ಚಿನ ಅಂತರರಾಷ್ಟ್ರೀಯ ನಂಟು ಇದೆ ಎಂದಾದರೆ ಅಲ್ಲಿ ಪ್ರಾಧ್ಯಾಪಕರ ಆಯ್ಕೆ ಮತ್ತು ಬಡ್ತಿಯಲ್ಲಿ ಪ್ರತಿಭೆಗೆ ಹೆಚ್ಚಿನ ಮನ್ನಣೆ, ರಾಜಕೀಯ ಸಿದ್ಧಾಂತಗಳಿಗೆ ಮಹತ್ವ ಕಡಿಮೆ ಎಂದು ಅರ್ಥ. ಹಾಗೆಯೇ ಅಲ್ಲಿ ವಿವಿಧ ರೀತಿಯ ಉದಾರವಾದಿ ಕಲಾ ಶಿಕ್ಷಣದ ಪ್ರಯೋಗಗಳೂ ನಡೆಯುತ್ತವೆ. ‌

ಈ ಪ್ರವೃತ್ತಿಯನ್ನು ತಲೆಕೆಳಗು ಮಾಡುವುದಕ್ಕೆ ಸರ್ಕಾರಕ್ಕೆ ಖಂಡಿತ ಸಾಧ್ಯ ಇದೆ. ಆದರೆ ಆಧುನಿಕ ಶಿಕ್ಷಣ ವ್ಯವಸ್ಥೆಯಲ್ಲಿ ವಿದೇಶಗಳಿಂದ ಎಷ್ಟು ಹೆಚ್ಚು  ಪಡೆದುಕೊಳ್ಳುವುದಕ್ಕೆ ಸಾಧ್ಯವೋ ಅಷ್ಟು ಉತ್ತಮ ಎಂಬುದು ಚೀನಾದ ರಾಷ್ಟ್ರೀಯ ನಾಯಕರಿಗೆ ತಿಳಿದಿದೆ.
ನನ್ನ ಪ್ರಕರಣವನ್ನೇ ತೆಗೆದುಕೊಂಡರೆ, ಚೀನಾದ ಪ್ರಮುಖ ವಿಶ್ವವಿದ್ಯಾಲಯಗಳಲ್ಲಿ ಒಂದಾದ ತ್ಸಿಂಗ್ವಾ ವಿಶ್ವವಿದ್ಯಾಲಯದಲ್ಲಿ  ದಶಕಕ್ಕೂ ಹೆಚ್ಚಿನ ಕಾಲದಿಂದ ರಾಜಕೀಯ ಸಿದ್ಧಾಂತ ಬೋಧಿಸುತ್ತಿದ್ದೇನೆ. ಇಂದಿಗೂ ತರಗತಿಯಲ್ಲಿ ಇರುವ ಸ್ವಾತಂತ್ರ್ಯ ನನಗೆ ಅಚ್ಚರಿ ಮೂಡಿಸುತ್ತದೆ.

ಸಾಮಾನ್ಯವಾಗಿ, ರಾಜಕೀಯವಾಗಿ ಅತ್ಯಂತ ಸೂಕ್ಷ್ಮವಾದ ವಿಚಾರಗಳನ್ನು ನಾನು ಬೋಧಿಸುತ್ತೇನೆ. ಒಂದು ವೇಳೆ ಸರ್ಕಾರದ ಎಚ್ಚರಿಕೆಗಳನ್ನು ಅಕ್ಷರಶಃ ಅನುಷ್ಠಾನಕ್ಕೆ ತಂದರೆ ನಾನು ಬೋಧಿಸುವ  ವಿಚಾರಗಳು ‘ನಿಷೇಧಿತ’ ವರ್ಗಕ್ಕೇ ಸೇರುತ್ತವೆ. ಈ ವರ್ಷ ನಾವು ಫ್ರಾನ್ಸಿಸ್‌ ಫುಕುಯಮಾ ಅವರ ಕೃತಿಗಳನ್ನು ಓದುತ್ತಿದ್ದೇವೆ. ರಾಜಕೀಯ ಸಿದ್ಧಾಂತದ ಬಗೆಗಿನ ಚರ್ಚೆಯನ್ನು ಘೋಷಿಸಿದ 1989ರ ಪ್ರಸಿದ್ಧ ಲೇಖನದಿಂದ ಆರಂಭಿಸಿ ಉದಾರವಾದಿ ಪ್ರಜಾತಂತ್ರದ ವಿಜಯದ ವರೆಗಿನ ಲೇಖನಗಳನ್ನು ಓದುತ್ತಿದ್ದೇವೆ. ತಾವು ಪಶ್ಚಿಮದ ಯಾವುದೋ ಒಂದು ವಿಶ್ವವಿದ್ಯಾಲಯದಲ್ಲಿ ಇದ್ದೇವೆ ಎಂಬ ರೀತಿಯಲ್ಲಿ ವಿದ್ಯಾರ್ಥಿಗಳು ತಮ್ಮ ಮನಸ್ಸಲ್ಲಿ ಇರುವುದನ್ನು ಹೇಳುತ್ತಾರೆ. ಶ್ರೇಷ್ಠ ರಾಜಕೀಯ ಚಿಂತಕರ ಚಿಂತನೆಗಳನ್ನು ಅತ್ಯುತ್ತಮ ರೀತಿಯಲ್ಲಿ ವಿದ್ಯಾರ್ಥಿಗಳ ಮುಂದೆ ಇರಿಸಲು ನಾನು ಪ್ರಯತ್ನಿಸುತ್ತೇನೆ. ಅವುಗಳ ಮಹತ್ವವನ್ನು ಚರ್ಚಿಸುವ ಕೆಲಸವನ್ನು ವಿದ್ಯಾರ್ಥಿಗಳಿಗೆ ಬಿಡುತ್ತೇನೆ. ಮಿಲ್‌ನ ‘ಆನ್‌ ಲಿಬರ್ಟಿ’ ಬಗ್ಗೆ ಪಾಠ ಮಾಡುವಾಗ ನಾನು ವಾಕ್‌ ಸ್ವಾತಂತ್ರ್ಯವನ್ನು ಅತ್ಯುತ್ತಮ ರೀತಿಯಲ್ಲಿ ಮಂಡಿಸಲು ಯತ್ನಿಸುತ್ತೇನೆ. ಹಾಗೆಯೇ ಕನ್‌ಫ್ಯೂಷಿಯಸ್‌ನ ‘ಅನಲೆಕ್ಟ್ಸ್‌’ ಬಗ್ಗೆ ಬೋಧನೆ ಮಾಡುವಾಗ ಸೌಹಾರ್ದದ ಮೌಲ್ಯವನ್ನು ಅದೇ ರೀತಿಯಲ್ಲಿ ವಿವರಿಸುತ್ತೇನೆ. ಚೀನಾ ಮತ್ತು ಪಶ್ಚಿಮದ ಮಹತ್ವದ ಚಿಂತಕರನ್ನು ಅವರ ರಾಜಕೀಯ ನಿಲುವುಗಳು ಏನೇ ಇರಲಿ ವಿಶ್ವವಿದ್ಯಾಲಯಕ್ಕೆ ಕರೆಸಿ ಅತಿಥಿ ಉಪನ್ಯಾಸಗಳನ್ನು ಏರ್ಪಡಿಸುತ್ತೇನೆ. ಒಳ್ಳೆಯ ಸುದ್ದಿ ಏನೆಂದರೆ ನನ್ನ ತರಗತಿಗಳು ರಾಜಕೀಯ ಹಸ್ತಕ್ಷೇಪಗಳಿಂದ ಬಹುತೇಕ ಮುಕ್ತವಾಗಿವೆ.

2004ರಲ್ಲಿ ನಾನು ಬೀಜಿಂಗ್‌ಗೆ ಬಂದ ಆರಂಭದ ದಿನಗಳಲ್ಲಿನ ಒಂದು ಘಟನೆ ಇದಕ್ಕೆ ಅಪವಾದ. ನಾನು ಮಾರ್ಕ್ಸ್‌ವಾದವನ್ನು ಬೋಧಿಸಲು ಬಯಸಿದ್ದೆ. ಆದರೆ ನನ್ನ ವ್ಯಾಖ್ಯಾನ ಅಧಿಕೃತ ಸಿದ್ಧಾಂತಕ್ಕಿಂತ ಭಿನ್ನವಾಗಿರುವ ಸಾಧ್ಯತೆ ಇರುವುದರಿಂದ ನಾನು ಮಾರ್ಕ್ಸ್‌ವಾದವನ್ನು ಬೋಧಿಸದಿರುವುದು ಉಚಿತ ಎಂದು ಹೇಳಿದ್ದರು. ಆದರೆ ‘ಮಾರ್ಕ್ಸ್‌ವಾದಿ’ ಎಂಬ ಪದವನ್ನು ಕೋರ್ಸ್‌ನ ಹೆಸರಿನಲ್ಲಿ ಎಲ್ಲಿಯೂ ಬಳಸದೆ ಈ ಅಡ್ಡಿಯನ್ನು ದಾಟಲು ನಾನು ಕಲಿತುಕೊಂಡೆ.

ಸಂಶೋಧನೆ ಇಲ್ಲಿ ಹೆಚ್ಚು ಸವಾಲಿನದ್ದಾಗಿದೆ. ಯಾವುದೇ ಹಸ್ತಕ್ಷೇಪ ಇಲ್ಲದೆ ನಾನು ಇಂಗ್ಲಿಷ್‌ನಲ್ಲಿ ಪುಸ್ತಕಗಳು ಮತ್ತು ಲೇಖನಗಳನ್ನು ಪ್ರಕಟಿಸಬಲ್ಲೆ. ಆದರೆ ನನ್ನ ಕೃತಿಗಳು ಚೀನೀ ಭಾಷೆಗೆ ಅನುವಾದವಾಗುವಾಗ   ಸೆನ್ಸಾರ್‌ ತನ್ನ ಕೆಲಸ ಮಾಡುತ್ತದೆ.
ರಾಜಕೀಯದಲ್ಲಿ ಕನ್‌ಫ್ಯೂಷಿಯನ್‌ವಾದ ಹೆಚ್ಚುತ್ತಿರುವುದರ ಬಗೆಗಿನ ನನ್ನ ಪುಸ್ತಕ 2008ರಲ್ಲಿ ಪ್ರಕಟವಾಗಬೇಕಿತ್ತು. ಆದರೆ ಒಲಿಂಪಿಕ್ಸ್‌ ನಡೆಯಲಿರುವುದರಿಂದ ಪುಸ್ತಕ ಮುದ್ರಿಸುವುದು ಸಾಧ್ಯವಿಲ್ಲ ಎಂದು ನನಗೆ ತಿಳಿಸಿದರು. ಇಡೀ ಜಗತ್ತು ಚೀನಾವನ್ನು ಗಮನಿಸುತ್ತಿರುವಾಗ ಅಲ್ಲಿನ ಸಮಕಾಲೀನ ರಾಜಕೀಯದ ಬಗ್ಗೆ ಅತ್ಯಂತ ಕನಿಷ್ಠ ಮಟ್ಟದಲ್ಲಿ ವಿಮರ್ಶಾತ್ಮಕವಾಗಿರುವ ವಿಷಯ ಕೂಡ ಪ್ರಕಟವಾಗುವುದಕ್ಕೆ ಅವಕಾಶ ಇಲ್ಲ.  2009 ಇನ್ನೊಂದು ಅತ್ಯಂತ ಸೂಕ್ಷ್ಮ ವರ್ಷವಾಗಿತ್ತು. ಆ ವರ್ಷ ಆಧುನಿಕ ಚೀನಾ ಸ್ಥಾಪನೆಯ 60ನೇ ವರ್ಷವಾಗಿತ್ತು. 2010ರ ಕೊನೆಯಲ್ಲಿ ಷಾಂಗೈನಲ್ಲಿ ನಡೆಯಬೇಕಿದ್ದ ‘ವರ್ಲ್ಡ್‌ ಎಕ್ಸ್‌ಪೊ’ ಆ ವರ್ಷದ ಆರಂಭದಲ್ಲಿನ ಪ್ರಕಟಣೆಗಳಿಗೆ ತಡೆ ಒಡ್ಡಲು ಇನ್ನೊಂದು ನೆಪವಾಗಿತ್ತು. ಆಶ್ಚರ್ಯವೆಂದರೆ 2010ರ ರಾಜಕೀಯವಾಗಿ ಅಷ್ಟೊಂದು ಸೂಕ್ಷ್ಮವಲ್ಲದ, ಶರತ್ಕಾಲದ  ಸಂದರ್ಭದಲ್ಲಿ ನನ್ನ ಪುಸ್ತಕ ಪ್ರಟಕವಾಯಿತು.

ನಂತರ ಕತ್ತರಿ ಪ್ರಯೋಗ (ಸೆನ್ಸಾರ್‌ಶಿಪ್‌) ಹೆಚ್ಚು ತೀವ್ರಗೊಂಡಿತು.  ಇದಕ್ಕೆ ಕಾರಣ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರ ಭ್ರಷ್ಟಾಚಾರ ವಿರೋಧಿ ಆಂದೋಲನ. ಈ ಆಂದೋಲನದಿಂದಾಗಿ  ರಾಜಕೀಯ ನಾಯಕತ್ವವನ್ನು ಶಿಥಿಲಗೊಳಿಸುವ ಬಲವಾದ ಉದ್ದೇಶ ಹೊಂದಿರುವ ವರ್ಗ ಸೃಷ್ಟಿಯಾಗಿದೆ. ಹಾಗಾಗಿ ಶೈಕ್ಷಣಿಕ ಉದ್ದೇಶದ್ದೇ ಆಗಿದ್ದರೂ ರಾಜಕೀಯ ವಿಷಯಗಳ ಪ್ರಕಟಣೆಗಳ ಮೇಲೆ ಹಿಂದೆಂದಿಗಿಂತಲೂ ಹೆಚ್ಚಿನ ಕತ್ತರಿ ಪ್ರಯೋಗ ನಡೆಯುತ್ತಿದೆ.

‘ಅಮೆಜಾನ್‌’ನಲ್ಲಿ ನಾನು ಖರೀದಿಸಿದ್ದ ಪುಸ್ತಕಗಳನ್ನು ಗಡಿಯಲ್ಲಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ‘ದ ನ್ಯೂಯಾರ್ಕ್‌ ಟೈಮ್ಸ್‌’ ಮತ್ತು ‘ಗೂಗಲ್‌ ಸ್ಕಾಲರ್‌’ಗಳನ್ನು ಅಂತರ್ಜಾಲದಲ್ಲಿ ಓದುವ ನನ್ನ ಅಗತ್ಯ ಬಹಳ ಹಳೆಯದು. ಆದರೆ ಸೆನ್ಸಾರ್‌ ಪದ್ಧತಿಯಿಂದಾಗಿ ಅದು ಸಾಧ್ಯವಾಗುತ್ತಿಲ್ಲ. ನನ್ನ ಕೆಲವು ತಂತ್ರಜ್ಞಾನ ಸ್ನೇಹಿ ವಿದ್ಯಾರ್ಥಿಗಳ ನೆರವಿನಿಂದ ಈ ನಿರ್ಬಂಧಗಳನ್ನೂ ಮೀರಿ ಈ ತಾಣಗಳನ್ನು ನಾನು ನೋಡುವುದಕ್ಕೆ ಸಾಧ್ಯವಾಗುತ್ತದೆ. ಆದರೆ ಅದು ಬೆಕ್ಕು ಇಲಿಯಾಟವೇ ಹೊರತು ಇನ್ನೇನಲ್ಲ. ಇತ್ತೀಚೆಗಂತೂ ಬೆಕ್ಕು  ಹೆಚ್ಚು ಹೆಚ್ಚು ಚಾಣಾಕ್ಷವಾಗುತ್ತಿದೆ. ಅಂತರ್ಜಾಲ ಲಭ್ಯತೆ ಎಷ್ಟು ಸುಲಲಿತವಾಗುತ್ತದೆ ಎಂಬುದರ ಮೇಲೆ ನನ್ನ ಮನಸ್ಥಿತಿ ನೇರ ಸಂಬಂಧ ಹೊಂದಿದೆ. ಇತ್ತೀಚಿನ ದಿನಗಳಲ್ಲಂತೂ ನನ್ನ ಮನಸ್ಥಿತಿ ಅತ್ಯಂತ ಕೆಟ್ಟದಾಗಿದೆ.

ವ್ಯಂಗ್ಯವೆಂದರೆ, ಚೀನಾದ ರಾಜಕೀಯ ವ್ಯವಸ್ಥೆಯ ತಳಪಾಯವಾಗಿರುವ ತತ್ವಗಳ ಬಗ್ಗೆ ಧನಾತ್ಮಕವಾದ ಕೃತಿಯೊಂದನ್ನು ರಚಿಸುವುದಕ್ಕಾಗಿ ಅಂತರ್ಜಾಲದಲ್ಲಿ ಕೆಲವು ಮೂಲಗಳನ್ನು ನೋಡುವುದು ನನಗೆ ಬಹಳ ಕಷ್ಟದ ಕೆಲಸವಾಗಿ ಪರಿಣಮಿಸಿತು. ಅಂತರ್ಜಾಲದ ಲಭ್ಯತೆ ಮತ್ತು ಇಂಗ್ಲಿಷ್‌, ಚೀನೀ ಭಾಷೆಯಲ್ಲಿರುವ ಕೆಲವು ನಿಷೇಧಿತ ಪುಸ್ತಕಗಳಿಗಾಗಿ ನಾನು ಹಲವು ತಿಂಗಳ ಕಾಲ ದೇಶ ಬಿಟ್ಟು ಹೊರಗೆ ಹೋಗಬೇಕಾಯಿತು.

ಇಂತಹ ತೊಡಕುಗಳ ಶೈಕ್ಷಣಿಕ ವ್ಯವಸ್ಥೆಯ ನಡುವೆಯೂ ನಾನು ಅಲ್ಲಿ ಕೆಲಸ ಮುಂದುವರಿಸುತ್ತಿರುವುದು ಏಕೆ ಎಂಬ ಪ್ರಶ್ನೆ ಮೌಲಿಕವೇ ಆಗಿದೆ. ನನ್ನ ಕುಟುಂಬದ ಅರ್ಧ ಭಾಗ ಚೀನೀ ಆಗಿದ್ದು, ಈ ದೇಶದ ಮೇಲೆ ನನಗೊಂದು ವಿಶೇಷ  ಮಮತೆ ಇದೆ. ಅತ್ಯುತ್ತಮ ವಿದ್ಯಾರ್ಥಿಗಳು ಮತ್ತು ಸಹೋದ್ಯೋಗಿಗಳನ್ನು ಹೊಂದಲು ಇದು ನೆರವಾಗುತ್ತದೆ. ಫುಕುಯಮಾ ಅವರ ‘ಎಂಡ್‌ ಆಫ್‌ ಹಿಸ್ಟರಿ’ ಪ್ರಬಂಧ ಇನ್ನೊಂದು ಆಸಕ್ತಿಕರ ವಿಚಾರವನ್ನು ಹೇಳುತ್ತದೆ: ಯಾರೊಬ್ಬರೂ ರಾಜಕೀಯ ಸಿದ್ಧಾಂತಗಳನ್ನು ಚರ್ಚಿಸದೇ ಇರುವ ಜಗತ್ತು ಶಾಂತಿಯುತವಾಗಿ ಇರಬಹುದು. ಆದರೆ ಅದು ಬಹಳ ನೀರಸ ಜಗತ್ತಾಗಿರುತ್ತದೆ. ಚೀನಾ ಯಾವತ್ತೂ ನೀರಸವಲ್ಲ. ಉದಾರವಾದಿ ಜನತಂತ್ರಕ್ಕೆ ಚೀನಾ ಶೈಲಿಯ ಪ್ರತಿಭಾಪರ ಪ್ರಜಾತಂತ್ರವೇ ಈಗ ಇರುವ ಕಾರ್ಯಸಾಧ್ಯವಾದ ಏಕೈಕ ಪರ್ಯಾಯ. ಚೀನಾದ ಪ್ರಯೋಗಗಳನ್ನು ನಾನು ಮುನ್ನೆಲೆಯಲ್ಲಿ  ನಿಂತು ನೋಡಿದ್ದೇನೆ. ರಾಜಕೀಯ ಚಿಂತಕನಿಗೆ ಇದಕ್ಕಿಂತ ಇನ್ನೇನು ಬೇಕು?

ಹೀಗೆ ಹೇಳಿದರೂ, ವಿಶ್ವವಿದ್ಯಾಲಯದಲ್ಲಿ ಮುಕ್ತ ಮಾತಿನ ವಾತಾವರಣವನ್ನು ನಾನು ಬೆಂಬಲಿಸುತ್ತೇನೆ. ಚೀನಾದ ಚಿಂತಕರಲ್ಲಿ ಹೆಚ್ಚಿನವರು ಇಂತಹುದೇ ನಿಲುವನ್ನು ಹೊಂದಿದ್ದಾರೆ. ಸಾರ್ವಜನಿಕವಾಗಿ ಜನರು ಏನನ್ನೇ ಹೇಳಲಿ, ಖಾಸಗಿಯಾಗಿ ಮಾತನಾಡುವಾಗ, ಸಮಾಜವಾದಿ, ಉದಾರವಾದಿ ಅಥವಾ ಕನ್‌ಫ್ಯೂಷಿಯನ್‌ವಾದಿ ಯಾರೇ ಆಗಿರಲಿ ಪಾಂಡಿತ್ಯಪೂರ್ಣ ಕೃತಿಗಳಿಗೆ ಕತ್ತರಿ ಪ್ರಯೋಗದ ಪರವಾಗಿ ವಾದಿಸುವ ಒಬ್ಬನೇ ಒಬ್ಬ ಚಿಂತಕನನ್ನು ನಾನು ಕಂಡಿಲ್ಲ. ಕತ್ತರಿ ಪ್ರಯೋಗ ಚಿಂತಕರನ್ನು ಜನರಿಂದ ದೂರ ಮಾಡುತ್ತದೆ ಎಂಬುದೇ ಸತ್ಯ.

ಈಗ ಇರುವ ರಾಜಕೀಯ ವ್ಯವಸ್ಥೆಯ ನೆಲಗಟ್ಟಿನಲ್ಲಿಯೇ ಸುಧಾರಣೆಗಳು ನಡೆಯಬೇಕೇ ಹೊರತು ಅದರ ವಿರುದ್ಧ ಅಲ್ಲ ಎಂದು ನನ್ನ ವಿದ್ಯಾರ್ಥಿಗಳು ವಾದಿಸುತ್ತಾರೆ. ಇಂತಹ ವಿಷಯಗಳನ್ನು ಚರ್ಚಿಸದಂತೆ ಅವರಿಗೆ ಹೆಚ್ಚು ಹೆಚ್ಚು ತಡೆ ಒಡ್ಡಿದ ಹಾಗೆಯೇ ಅವರ ನಿರಾಸಕ್ತಿ ಹೆಚ್ಚುತ್ತಾ ಹೋಗುತ್ತದೆ. ದೀರ್ಘಾವಧಿಯಲ್ಲಿ ಇದು ಹೆಚ್ಚಿನ ತೊಂದರೆಯನ್ನೂ ಉಂಟು ಮಾಡುತ್ತದೆ.

ನನ್ನ ಅಭಿಪ್ರಾಯದಲ್ಲಿ ಮುಕ್ತವಾಗಿರುವಿಕೆಯಿಂದ ವ್ಯವಸ್ಥೆಗೆ ಅನುಕೂಲವೇ ಹೆಚ್ಚು. ಕ್ರಮೇಣ ಪರಿಸ್ಥಿತಿ ಸುಧಾರಿಸಲಿದೆ ಎಂಬ ವಿಶ್ವಾಸ ನನ್ನಲ್ಲಿದೆ. ಹಾಗಿದ್ದಾಗಲೂ ಒಂದು ಮಾತು ನಾನು ಒಪ್ಪಿಕೊಳ್ಳಲೇಬೇಕು– ಹತ್ತು ವರ್ಷದ ಹಿಂದೆ ಈ ವಿಶ್ವಾಸ ನನ್ನಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿತ್ತು.

(ಲೇಖಕರು ಬೀಜಿಂಗ್‌ನಲ್ಲಿರುವ ತ್ಸಿಂಗ್ವಾ ವಿಶ್ವವಿದ್ಯಾಲಯದ ಶ್ವಾರ್ಜ್‌ಮನ್‌ ಸ್ಕಾಲರ್ಸ್‌ ಕಾರ್ಯಕ್ರಮದ ಪ್ರಾಧ್ಯಾಪಕರು.  ‘ದಿ ಚೈನಾ ಮಾಡೆಲ್‌: ಪೊಲಿಟಿಕಲ್‌ ಮೆರಿಟೋಕ್ರಸಿ ಅಂಡ್‌ ದಿ ಲಿಮಿಟ್ಸ್‌ ಆಫ್‌ ಡೆಮಾಕ್ರಸಿ’ ಅವರ ಇತ್ತೀಚಿನ ಕೃತಿ)
editpage feedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT