ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ವೇಳೆಯಲ್ಲೇ ವಿವಾಹ ವಿವಾದ

Last Updated 16 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

‘ನಾನು ಯಾರಿಗಾಗಿ ಭ್ರಷ್ಟಾ­ಚಾರದಲ್ಲಿ ತೊಡಗಬೇಕು?  ನನಗೆ ಹಿಂದು–ಮುಂದು ಯಾರೂ ಇಲ್ಲ. ನನ್ನ ಇಡೀ ದೇಹ, ಹೃದಯವನ್ನು ದೇಶಕ್ಕೆ ಅರ್ಪಿಸಿದ್ದೇನೆ’

–ಬಿಜೆಪಿ ಪ್ರಧಾನಿ ಅಭ್ಯರ್ಥಿ, 63 ವರ್ಷದ ನರೇಂದ್ರ ಮೋದಿ ಈ ವರ್ಷ ಚುನಾವಣಾ ರ‌್ಯಾಲಿಯೊಂದರಲ್ಲಿ ಮಾಡಿದ ಘೋಷಣೆ ಇದು. ತಾವು ಅವಿವಾಹಿತನಾಗಿರುವುದರಿಂದ ಭ್ರಷ್ಟ­ನಾ­ಗಲು ಸಾಧ್ಯವಿಲ್ಲ ಎಂಬರ್ಥದಲ್ಲಿ ಅವರು ಈ ಹೇಳಿಕೆ ನೀಡಿದ್ದರು.

ಆದರೆ, ಕಳೆದ ಬುಧವಾರ ಗುಜರಾತ್‌ನ ವಡೋದರಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ­ಯಾಗಿ ನಾಮಪತ್ರ­ಸಲ್ಲಿಸುವಾಗ ಘೋಷಿಸಿದ್ದ ಪ್ರಮಾಣ­ಪತ್ರದಲ್ಲಿ ಅವರು ತಾವು ‘ವಿವಾಹಿತ’ ಎಂದು ನಮೂದಿಸಿದ್ದಾರೆ. (ಜಶೋದಾ­ಬೆನ್‌ ಚಮನ್‌­ಲಾಲ್‌ ಅವರು ತಮ್ಮ ಪತ್ನಿ ಎಂದೂ ಘೋಷಿಸಿ­ಕೊಂಡಿದ್ದಾರೆ)

ಈ ಹಿಂದೆ, ನಾಲ್ಕು ಚುನಾವಣೆಗಳಲ್ಲಿ ಸಲ್ಲಿ­ಸಿದ್ದ ಪ್ರಮಾಣ ಪತ್ರದಲ್ಲಿ  ಅವರು ವೈವಾಹಿಕ ಸ್ಥಿತಿ ಅಂಕಣವನ್ನು ಖಾಲಿ ಬಿಟ್ಟಿದ್ದರು. 45 ವರ್ಷಗಳ ಹಿಂದೆ ನಡೆದ ಮದುವೆಯ ಬಗ್ಗೆ ಮೋದಿ ಅವರು ಅಧಿಕೃತವಾಗಿ ಒಪ್ಪಿಕೊಂಡಿರುವುದು ಇದೇ ಮೊದಲು. 

ಸನ್ಯಾಸಿಯಾಗಲು ಅಥವಾ ಹಿಂದೂ ಸಂಘ­ಟನೆ­­­ಯೊಂದರ ಪೂರ್ಣ­ಪ್ರಮಾಣದ ಕಾರ್ಯ­ಕರ್ತ­­­ನಾಗಲು ಬಯಸಿ ಮನೆ ಹಾಗೂ ಪತ್ನಿಯನ್ನು ತೊರೆದಿದ್ದ ಮೋದಿ ಅವರು ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಿ ದೇಶದ ರಾಜಕೀಯಲ್ಲಿ ಮುಂಚೂಣಿಗೆ ಬರುತ್ತಿ­ದ್ದಂತೆಯೇ ಅವರ ಮದುವೆಯ ಬಗ್ಗೆ ಮಾಧ್ಯಮ­ಗಳಲ್ಲಿ, ರಾಜಕೀಯ ವಲಯ­ಗಳಲ್ಲಿ ಚರ್ಚೆ ಆರಂಭವಾಯಿತು.

ಆದರೆ, ಈ ಚರ್ಚೆಗಳಿಂದ ದೂರ ಉಳಿಯಲು ಮೋದಿ ಹಾಗೂ ಬಿಜೆಪಿ ಯತ್ನಿಸುತ್ತಲೇ ಬಂದಿವೆ. ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದ ಜಶೋದಾಬೆನ್‌ ಅವರನ್ನು ಪತ್ರಕರ್ತರು ಸಂದರ್ಶನ ನಡೆಸಿದ್ದ ಸಂದರ್ಭದಲ್ಲೂ ಮೋದಿ ತುಟಿ ಬಿಚ್ಚಿರಲಿಲ್ಲ. ಅಷ್ಟೇ ಏಕೆ, ಒಂದು ವಾರದಿಂದೀಚೆಗೆ ಮಾಧ್ಯಮ­ಗಳಲ್ಲಿ ಈ ವಿವಾದದ ಬಗ್ಗೆ ಚರ್ಚೆ ನಡೆಯುತ್ತಿ­ದ್ದರೂ ಮೋದಿ ಮೌನ ಮುರಿದಿಲ್ಲ.

ಆದರೆ, ಅವರ ಹಿರಿಯ ಅಣ್ಣ ಸೋಮಭಾಯಿ ದಾಮೋದರದಾಸ್‌ ಮೋದಿ ಅವರು ಕಳೆದ ಗುರುವಾರ ಪ್ರಕಟಣೆಯೊಂದನ್ನು ನೀಡಿ ‘ಅದೊಂದು ಔಪಚಾರಿಕ ಮದುವೆಯಾಗಿತ್ತು’ ಎಂದು  ಹೇಳಿದ್ದಾರೆ.

‘ನರೇಂದ್ರನದ್ದು ತ್ಯಾಗಮಯ ಜೀವನ. ಅದನ್ನು ನಾವು ಒಪ್ಪಿಕೊಳ್ಳ­ಬೇಕು. ಅವನು ಮಾಡಿ­ರುವ ತ್ಯಾಗದ ಬಗ್ಗೆ ಇಡೀ ದೇಶದ ಜನರಿಗೆ ಗೊತ್ತಿದೆ. ಈ ಮದುವೆ 40 ಅಥವಾ 50 ವರ್ಷ­ಗಳ ಹಿಂದೆ ಸಂಪ್ರದಾಯಸ್ಥ, ಬಡ ಕುಟುಂಬಗಳ ಪರಿಸ್ಥಿತಿ­ಯಲ್ಲಿ ನಡೆದಿರು­ವಂತಹದ್ದು. ಇಡೀ ಪ್ರಸಂಗವನ್ನು ನಾವು ಈ ದೃಷ್ಟಿಯಲ್ಲಿ ನೋಡ­ಬೇಕು’ ಎಂದು ದಾಮೋದರದಾಸ್‌ ಅಭಿಪ್ರಾಯಪಟ್ಟಿದ್ದಾರೆ.

ಮೋದಿ ಅವರು ದೇಶದ ಜನರನ್ನು ವಂಚಿಸು­ತ್ತಿದ್ದಾರೆ ಎಂದು ಕಾಂಗ್ರೆಸ್‌ ಮುಖಂಡರು ಆರೋಪಿ­ಸುತ್ತಿದ್ದಾ­ರಾ­ದರೂ, ಈ ವಿವಾದವು ಬಿಜೆಪಿ ಪ್ರಧಾನಿ ಅಭ್ಯರ್ಥಿಯ ವರ್ಚಸ್ಸಿಗೆ ಹಾನಿ ಮಾಡ­ಲಿದೆಯೇ ಎಂಬುದು ಇನ್ನೂ ಸ್ಪಷ್ಟ­ವಾಗಿಲ್ಲ.

ಭಾರತದಲ್ಲಿ ಸಾರ್ವಜನಿಕ ಜೀವನ­ದಲ್ಲಿ ತೊಡ­ಗಿ­ರುವವರು ಸಂಸಾರ ತ್ಯಜಿಸು­­ವುದು ರೂಢಿ­ಯಲ್ಲೇ ಬಂದಿದೆ. ರಾಷ್ಟ್ರಪಿತ ಮಹಾತ್ಮ ಗಾಂಧಿ ಕೂಡ ಮದುವೆಯಾಗಿ ಸಂಸಾರ ತೊರೆದು ಸನ್ಯಾಸಿಯಾಗುವ ಪಣತೊಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು.

ಚುನಾವಣಾ ‘ಸಾಧನ’?: ಅವಿವಾಹಿತರು ಎಂದು ಸಾರ್ವಜನಿಕ­ವಾಗಿ ಬಿಂಬಿಸಿ­ಕೊಂಡಿದ್ದ ಮೋದಿ ಹಾಗೂ ರಾಹುಲ್‌ ಗಾಂಧಿ ಅವರು ದೇಶದ ಉನ್ನತ ಪಟ್ಟಕ್ಕಾಗಿ ಮುಖಾಮುಖಿ­ಯಾಗಿದ್ದ­ರಿಂದ ಈ ಬಾರಿಯ ಲೋಕಸಭಾ ಚುನಾವಣೆ ಕಳೆಕಟ್ಟಿತ್ತು.

ಕಳೆದ ವರ್ಷ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ್ದ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ, ‘ನನಗೆ ಮದುವೆಯಾಗುವ ಯೋಚನೆ ಇಲ್ಲ. ಈಗ ಇರುವಂತೆಯೇ ಇರುತ್ತೇನೆ’  ಎಂದು ಹೇಳುವ ಮೂಲಕ ವಿವಾಹ ವದಂತಿಗೆ ತೆರೆ ಎಳೆದಿದ್ದರು.

ಹಿಂದೂ ಧರ್ಮದ ಪ್ರಕಾರ, ಮನುಷ್ಯನೊಬ್ಬ ತನ್ನ ಜೀವನದಲ್ಲಿ –ಬ್ರಹ್ಮಚರ್ಯ, ಗೃಹಸ್ಥಾ­ಶ್ರಮ, ವಾನ­ಪ್ರಸ್ಥ ಮತ್ತು ಸನ್ಯಾಸ ಎಂಬ ನಾಲ್ಕು ಹಂತಗಳನ್ನು ದಾಟುತ್ತಾನೆ. ಭ್ರಷ್ಟಾ­ಚಾರದ ಕುರಿತಾಗಿ ಜನರಲ್ಲಿರುವ ಕೋಪ­ವನ್ನು ಗ್ರಹಿಸಿರುವ ಪ್ರಧಾನಿ ಪಟ್ಟದ ಮೇಲೆ ಕಣ್ಣಿಟ್ಟಿರುವ ಇಬ್ಬರು, ಈ ಸಂಪ್ರದಾಯವನ್ನು ‘ಸಾಧನ’­ವನ್ನಾಗಿ ಬಳಸುತ್ತಿದ್ದಾರೆ ಎಂದು ಹೇಳುತ್ತಾರೆ ಇತಿಹಾಸ ತಜ್ಞ ರಾಮಚಂದ್ರ ಗುಹಾ.

ಮೋದಿ ಅವರ ಹೊಸ ಜೀವನ ಚರಿತ್ರೆ ಪ್ರಕಾರ, ಹಿಮಾ­ಲಯ­ದಲ್ಲಿ ಸುತ್ತಾಡು­ವು­ದ­ಕ್ಕಾಗಿ ಸಂಸಾರ ಬಂಧನ ಕಡಿದು­ಕೊಂಡು ಮನೆಯನ್ನು ತೊರೆ­ದಾಗ ಮೋದಿ ಅವರಿಗೆ ಕೇವಲ 17 ವರ್ಷ. ಆ ಸಂದರ್ಭ­­ದಲ್ಲಿ ಅವರು ಸನ್ಯಾಸಿ­ಯಾಗಲು ಬಯಸಿದ್ದರು.

ಮದುವೆಯಾದ ನಂತರ ಮೋದಿ ಹಾಗೂ ಜಶೋದಾಬೆನ್‌ ಅವರು ಯಾವತ್ತೂ ಸಹ­ಜೀವನ ನಡೆಸಿಲ್ಲ ಎಂದೂ ಜೀವನಚರಿತ್ರೆ ಹೇಳುತ್ತದೆ.
‘ಸಮಾಜದಿಂದ ಹಾಗೂ ಕುಟುಂಬ­ದಿಂದ ಎಷ್ಟು ಒತ್ತಡ ಬಂದರೂ ತಮಗೆ ಇಷ್ಟ ಇಲ್ಲದ್ದನ್ನು ಮಾಡಲು ನರೇಂದ್ರ ಅವರಿಗೆ ಇಷ್ಟವಿರಲಿಲ್ಲ’ ಎಂದು ಪುಸ್ತಕದಲ್ಲಿ ಹೇಳಲಾಗಿದೆ.

‘ನರೇಂದ್ರ ಅವರ ಪತ್ನಿಯಾಗಿರಲು ಜಶೋದಾ­­ಬೆನ್‌ ಅವರಿಗೆ ಭಾರತೀಯ ಕಾನೂನು ರೀತ್ಯ ಯಾವುದೇ ನಿಬಂಧನೆ­ಗಳಿರ­ಲಿಲ್ಲ. ತನಗೆ ಬೇಕಾದ ಇನ್ನೊಬ್ಬ ವರ­ನನ್ನು ಅವರು ಸ್ವತಃ ಹುಡುಕ­ಬಹುದಿತ್ತು ಅಥವಾ ಹುಡುಕುವಂತೆ ಪೋಷಕರಿಗೆ ಹೇಳಬಹುದಿತ್ತು’ ಎಂದೂ ಜೀವನಚರಿತ್ರೆಯಲ್ಲಿ  ಉಲ್ಲೇಖಿಸ­ಲಾಗಿದೆ.

ಬೇರೆಯದೇ ಚಿತ್ರಣ: ಆದರೆ, ಜಶೋದಾ­ಬೆನ್‌ ಅವರನ್ನು ಪತ್ತೆ­ಮಾಡಿದ ಪತ್ರಕರ್ತರು ನೀಡುವ ಚಿತ್ರಣ ವಿಷಾದನೀಯವಾದದ್ದು.
ಈ ವರ್ಷದ ಆರಂಭದಲ್ಲಿ ‘ದಿ ನ್ಯೂ ಇಂಡಿ­ಯನ್‌ ಎಕ್ಸ್‌ಪ್ರೆಸ್‌’ ವರದಿ­ಗಾರ­ರೊಬ್ಬರು ಜಶೋದಾ­­­ಬೆನ್‌ ಅವರನ್ನು ಸಂದರ್ಶಿಸಿದ್ದರು. ತಾವು ಮೂರು ತಿಂಗಳು­ಗಳಿಗಿಂತ ಹೆಚ್ಚು ಸಮಯ ಮೋದಿ ಅವರೊಂದಿಗೆ ಇರಲಿಲ್ಲ ಎಂದು ಜಶೋದಾಬೆನ್‌ ಸಂದರ್ಶನದಲ್ಲಿ ಹೇಳಿದ್ದರು.
ತಮಗೆ ಮೋದಿ ಮೇಲೆ ಯಾವ ದ್ವೇಷ ಇಲ್ಲ ಎಂದು ಸ್ಪಷ್ಟಪಡಿಸಿದ್ದ ಜಶೋದಾಬೆನ್‌,  ‘ಈ ಅನು­ಭವದ ನಂತರ, ಎರಡನೇ ಮದುವೆ­ಯಾ­ಗಲು ಮನಸ್ಸು ಒಪ್ಪಲಿಲ್ಲ’ ಎಂದು, ಯಾಕೆ ಮರು ವಿವಾಹ ಆಗಲಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದರು.

ಶೌಚಾಲಯ, ಸ್ನಾನದ ಕೋಣೆ­ಗಳಿಲ್ಲದ ಕೇವಲ ಒಂದು ಕೊಠಡಿಯ ಮನೆಯಲ್ಲಿ ವಾಸ­ವಿದ್ದ ಜಶೋದಾಬೆನ್‌ ಅವರು ತಿಂಗಳಿಗೆ ರೂ.100  ಬಾಡಿಗೆ ಕಟ್ಟುತ್ತಿದ್ದರು. ಪ್ರತಿ ತಿಂಗಳು ಬರುವ ರೂ.14,000  ಪಿಂಚಣಿಯಲ್ಲಿ ಜೀವನ ಸಾಗಿಸುತ್ತಿದ್ದರು.

ತಾವು ಜಶೋದಾಬೆನ್‌ ಅವರನ್ನು ಹುಡು­ಕು­ತ್ತಿದ್ದುದನ್ನು ಅರಿತ ಉದ್ರಿಕ್ತ ಜನರ ಕೈಯಿಂದ ತಪ್ಪಿಸಲು ಕಷ್ಟಪಡ­ಬೇಕಾಯಿತು ಎಂದು ಮೊತ್ತ ಮೊದಲ ಬಾರಿಗೆ ಜಶೋದಾಬೆನ್‌ ಸಂದರ್ಶನ ನಡೆಸಿದ್ದ ‘ಇಂಡಿಯನ್‌ ಎಕ್ಸ್‌ಪ್ರೆಸ್‌’ ವರದಿಗಾರ ದರ್ಶನ್‌ ದೇಸಾಯಿ ಹೇಳುತ್ತಾರೆ.
ಸಂದರ್ಶನ ಮುಗಿಸಿ ಮನೆಗೆ ತಲುಪಿದ ಕೆಲವೇ ನಿಮಿಷಗಳಲ್ಲಿ ನರೇಂದ್ರ ಮೋದಿ ಅವರು ದೂರವಾಣಿ ಕರೆ ಮಾಡಿ ‘ನಿಮ್ಮ  ಉದ್ದೇಶ ಏನು‘ ಎಂದು ಕೇಳಿದ್ದನ್ನು ದೇಸಾಯಿ  ನೆನೆಯುತ್ತಾರೆ.

ಮೋದಿಗೆ ನೆರವಾಗಿದ್ದ ಅವಿವಾಹಿತ ಪಟ್ಟ: ನಂತ­ರದ ವರ್ಷಗಳಲ್ಲಿ ಮೋದಿ ಅವರ ಅವಿ­ವಾಹಿತ ಸ್ಥಿತಿ ಅವರ ರಾಜಕೀಯ ಚರಿತ್ರೆಯ ಪ್ರಮುಖ ಭಾಗವೇ ಆಗಿ ಹೋಯಿತು ಎಂದು ಪ್ರತಿಪಾದಿಸು­ತ್ತಾರೆ ‘ನರೇಂದ್ರ ಮೋದಿ: ದ ಮ್ಯಾನ್‌, ದ ಟೈಮ್ಸ್‌’ ಕೃತಿಯ  ಲೇಖಕ ನೀಲಾಂಜನ ಮುಖ್ಯೋಪಾಧ್ಯಾಯ. ಭ್ರಷ್ಟಾಚಾರ, ಹಗರಣ­ಗಳಿಂದಾಗಿ ವರ್ಚಸ್ಸು ಕಳೆದುಕೊಂಡ ಆಡಳಿತಾ­ರೂಢ ಕಾಂಗ್ರೆಸ್‌ಗೆ ಹೊಸ ಪರ್ಯಾಯ­ವಾಗಿ ನರೇಂದ್ರ ಮೋದಿ ಅವರು ಹೊರಹೊಮ್ಮಲು ಅವರ ‘ಒಂಟಿ ಜೀವನ’ ನೆರವಾಯಿತು ಎಂದು ಅಭಿಪ್ರಾಯಪಡುತ್ತಾರೆ.

‘ತಮ್ಮ ತಾಯಿಯನ್ನು ಕೂಡ ಅವರು ಜತೆಗೆ ಇಟ್ಟುಕೊಳ್ಳದೇ, ತನಗಾಗಿ, ತಮ್ಮವರಿಗಾಗಿ ಏನೂ ಮಾಡದೇ ಏಕಾಂಗಿ ಜೀವನ ನಡೆಸು­ತ್ತಿರುವುದು ಮೋದಿ ಅವರ ನೈತಿಕ ಪ್ರಭಾವಳಿ­ಯನ್ನು ಇನ್ನಷ್ಟು ಹೆಚ್ಚಿಸಿತು’ ಎಂದು ಮುಖ್ಯೋ­ಪಾಧ್ಯಾಯ ಹೇಳುತ್ತಾರೆ.

ಮೋದಿ ಅವರಿಗೆ ಹೋಲಿಸಿದರೆ ರಾಹುಲ್‌ ಗಾಂಧಿ ಅವರ ಕೌಟುಂಬಿಕ ಚಿತ್ರಣ ಸಂಪೂರ್ಣ ಭಿನ್ನ. ಅವರು ದೇಶದ ದೊಡ್ಡ ರಾಜಕೀಯ ಕುಟುಂಬದ ಕುಡಿ. ದೇಶದ ಪ್ರಧಾನಿಗಳಾಗಿದ್ದ ಅಜ್ಜಿ ಮತ್ತು ತಂದೆಯ ಹತ್ಯೆಗಳನ್ನು ಚಿಕ್ಕಂದಿನಲ್ಲೇ ನೋಡಿದವರು.

ಕುಟುಂಬದ ಚಟುವಟಿಕೆಗಳಲ್ಲಿ ತಮ್ಮ ಜವಾಬ್ದಾರಿ ನಿಭಾಯಿಸುವ ವಿಚಾರ­ದಲ್ಲಿ ರಾಹುಲ್‌ ಅವರದ್ದು ಡೋಲಾಯ­ಮಾನ ನಿಲುವು. ತಮ್ಮ ಕುಟುಂಬವೇ ಯಥಾಸ್ಥಿತಿ ವಾದದ ಕೇಂದ್ರ ಬಿಂದು ಎಂಬುದನ್ನು  ಮರೆತು ಯಥಾಸ್ಥಿತಿ ವಾದವನ್ನು ಅವರು ಟೀಕಿಸುತ್ತಾರೆ.

‘43 ವರ್ಷದ ರಾಹುಲ್‌ ಅವರಿಗೆ ಹಲವು ಗೆಳತಿ­ಯರಿದ್ದರು. ಅವರು ಹೋದಲ್ಲೆಲ್ಲಾ ಮದುವೆ ಯಾವಾಗ ಎಂಬ ಪ್ರಶ್ನೆ ಎದುರಾ­ಗುತ್ತಿತ್ತು’ ಎಂದು ಹೇಳುತ್ತಾರೆ ‘ಡಿಕೋಡಿಂಗ್‌ ರಾಹುಲ್‌ ಗಾಂಧಿ’ ಪುಸ್ತಕದ ಲೇಖಕಿ ಆರತಿ ರಾಮಚಂದ್ರನ್‌.

ಆದರೆ, ಕಳೆದ ವರ್ಷ ಅವರು ‘ನಾನು ಹೀಗೆಯೇ ಇರುತ್ತೇನೆ’ ಎಂದು ಹೇಳಿಕೆ ನೀಡಿದ ನಂತರ ಅವರ ಮದುವೆ ಕುರಿತ ವದಂತಿಗಳಿಗೆ ಶಾಶ್ವತವಾಗಿ ತೆರೆ­ಬಿದ್ದಂತಾಗಿದೆ ಎಂಬುದು ಅವರ ಅಂಬೋಣ. ಭಾರತದ ರಾಜಕಾರಣದಲ್ಲಿ ಗಮನಾರ್ಹ ಸಂಗತಿ ಎಂದರೆ, ಪ್ರಮುಖ ರಾಜಕಾರಣಿ­ಗಳಲ್ಲಿ ಹಲವರು ಅವಿವಾಹಿತರು ಎಂಬುದು. 

ಮುಂದಿನ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸ­ಬಹುದಾದ ಮೂವರು ಮಹಿಳಾ ರಾಜ­ಕಾರಣಿ­ಗಳಾದ ಎಐಎಡಿಎಂಕೆ ಮುಖ್ಯಸ್ಥೆ ಹಾಗೂ ತಮಿಳುನಾಡು ಮುಖ್ಯಮಂತ್ರಿ ಜಯ­ಲಲಿತಾ, ತೃಣಮೂಲ ಕಾಂಗ್ರೆಸ್‌ ಮುಖ್ಯಸ್ಥೆ, ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ  ಅವಿವಾಹಿತರು ಎಂಬುದು ಇಲ್ಲಿ ಉಲ್ಲೇಖನೀಯ.

(ಇಂಟರ್‌ನ್ಯಾಷನಲ್‌ ನ್ಯೂಯಾರ್ಕ್‌ ಟೈಮ್ಸ್‌)

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT