ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ಸಿಬ್ಬಂದಿ, ಮತಗಟ್ಟೆ ಗೊಂದಲ

Last Updated 24 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಪ್ರತಿ ಚುನಾವಣೆಯಲ್ಲೂ ಮತ­ದಾನ ಕೇಂದ್ರಗಳಲ್ಲಿ ಚುನಾವಣಾ ಸಿಬ್ಬಂದಿ­ಗಳು ಒಂದಲ್ಲೊಂದು ಎಡವಟ್ಟು ಮಾಡುವ ವರದಿಗಳು ಬರುತ್ತವೆ. ಈ ಬಾರಿಯೂ ಅನೇಕ ಕಡೆಗಳಲ್ಲಿ ತೋರು ಬೆರಳಿಗೆ ಶಾಯಿ ಹಚ್ಚಿದ ಮತ್ತಿತರ ತಪ್ಪುಗಳನ್ನು ಮಾಡಿದ ವರದಿಗಳು ಬಂದಿವೆ.

ಪ್ರತಿ ಸಾರಿಯೂ ಚುನಾವಣಾ ಸಿಬ್ಬಂದಿ­­ಗಳಿಗೆ ಸರಿಯಾದ ತರಬೇತಿ ನೀಡುತ್ತಾರೆ. ಅಂತಹ ತರಬೇತಿ ಸಂದರ್ಭ­­­ದಲ್ಲಿ ಅಧಿಕೃತ ರಾಜಕೀಯ ಪಕ್ಷಗಳ ಪ್ರತಿನಿಧಿಗಳನ್ನೂ ಚುನಾವಣಾ­ಧಿ­­ಕಾರಿಗಳು ಆಹ್ವಾನಿಸುತ್ತಾರೆ. ಅಲ್ಲಿ ಅಂತಹ ಪ್ರತಿನಿಧಿಗಳೂ ಸಹ ತಮಗೆ ಅವಶ್ಯವಿರುವ ಸ್ಪಷ್ಟೀಕರಣ ಪಡೆದು­ಕೊಳ್ಳಲು ಅವಕಾಶವಿರುತ್ತದೆ. ಅಂತಹ ಹಲವಾರು ಸಭೆಗಳಲ್ಲಿ ಪಕ್ಷದ ಪ್ರತಿನಿಧಿ­ಯಾಗಿ ನಾನು ಭಾಗವಹಿಸಿದ್ದೇನೆ. ಅನೇಕ ಸಂದರ್ಭಗಳಲ್ಲಿ ತರಬೇತಿ ಪಡೆ­ಯ­ಬೇಕಾದವರು ಅಲ್ಲಿ ತಿಳಿಸುವ ಮಾಹಿತಿ­ಗಳನ್ನು ಪಡೆಯುವಲ್ಲಿ ನಿರಾ­ಸಕ್ತಿ ತೋರುವುದನ್ನೂ ಕಂಡಿದ್ದೇನೆ.

ಮೊನ್ನೆ ನಡೆದ ಲೋಕಸಭೆ ಚುನಾವ­ಣೆಯ ಸಂದರ್ಭದಲ್ಲಿ ನಡೆದ ಘಟನೆ: ಸೊರಬ ಪಟ್ಟಣದ ಒಂದು ಶಾಲೆಯಲ್ಲಿ ಎರಡು ಮತ ಕೇಂದ್ರಗಳಿದ್ದವು. ಬೆಳಿಗ್ಗೆ­ಯೇ ಮತ ಚಲಾವಣೆ ಮಾಡಲು ಅಲ್ಲಿಗೆ ಹೋದ ಮತದಾರರು ಚುನಾವ­ಣಾ­ಧಿಕಾರಿಗಳು ವಿತರಿಸಿದ್ದ ಮತ ಚೀಟಿ­ಯನ್ನು ಮಾತ್ರ ತೆಗೆದುಕೊಂಡು ಹೋಗಿ­ದ್ದರು. ಆದರೆ ಆ ಎರಡೂ ಮತ­ಕೇಂದ್ರದ ಅಧಿಕಾರಿಗಳು ಆ ಚೀಟಿಯ ಜೊತೆಗೆ ಗುರುತಿನ ಚೀಟಿ ಅಥವಾ  ಮತ್ತಾ­ವು­ದಾದರೂ ಗುರುತಿನ ದಾಖಲೆ­ಯನ್ನು ತರಲೇಬೇಕೆಂದು ಹೇಳಿ ಮತದಾ­ರ­ರನ್ನು ವಾಪಸ್‌ ಕಳುಹಿಸುತ್ತಿ­ದ್ದಾ­ರೆಂದು ರಾಜಕೀಯ ಪಕ್ಷವೊಂದರ ಮತ­ಗಟ್ಟೆ ಕಾರ್ಯಕರ್ತರ ಉಸ್ತುವಾರಿ ಜವಾ­ಬ್ದಾರಿ ಹೊಂದಿದ್ದ ನನಗೆ ತಿಳಿ­ಯಿತು. ನಾನೂ ಸಹಾ ಅದೇ ಮತ­ಗಟ್ಟೆಯ ಮತದಾರನಾದ್ದರಿಂದ ನೇರ­ವಾಗಿ ಅಲ್ಲಿಗೆ ಹೋಗಿ ವಿಚಾರಿಸಿದೆ. ನನಗೂ ಅದೇ ಉತ್ತರ ದೊರೆಯಿತು. ಅಷ್ಟೇ ಅಲ್ಲ. ನಮಗೆ ತರಬೇತಿಯಲ್ಲಿ ಹೀಗೇ ಹೇಳಿದ್ದಾರೆಂದು ಅಧಿಕಾರಿ ವಾದಿಸಿ­ದರು. ನಾವು ಸಹಾಯಕ ಚುನಾ­ವಣಾ­ಧಿಕಾರಿಗೆ ಫೋನ್‌ ಮಾಡಿ ವಿಷಯ ತಿಳಿಸಿ, ಅವರೇ ಸ್ಥಳಕ್ಕೆ ಬಂದು ಅಧಿಕಾರಿಗಳಿಗೆ ತಿಳಿಸಿ ಹೇಳಿದ ನಂತರ­ವಷ್ಟೇ ಮತ ಚಲಾಯಿಸಲು ಸಾಧ್ಯವಾ­ಯಿತು. ಮತಗಟ್ಟೆ ಪ್ರಧಾನ ಅಧಿಕಾರಿ ಸಾಕಷ್ಟು ವಿದ್ಯಾವಂತರಿದ್ದು ಜವಾಬ್ದಾರಿ ಸ್ಥಾನದ ಅಧಿಕಾರಿ ಆಗಿರುತ್ತಾರೆ. ಸರ್ಕಾರ ವಿತರಿಸಿದ ಮತಚೀಟಿಯ ಹಿಂಭಾಗ­ದಲ್ಲೇ ಅದನ್ನು ಗುರುತಿನ ಚೀಟಿ­ಯಾಗಿ ಪರಿಗಣಿಸಬಹುದು ಎಂದು ­ಸ್ಪಷ್ಟವಾಗಿ ತಿಳಿಸಲಾಗಿದೆ. ಇಷ್ಟು ಸಾಮಾನ್ಯ ಜ್ಞಾನವನ್ನೂ ಅಧಿಕಾರಿಗಳು ಹೊಂದಿರದಿದ್ದರೆ ಮತದಾರ ಏನು ಮಾಡ­ಬೇಕು. ವಿಶೇಷವಾಗಿ ನಗರ ಹಾಗೂ ­ಪಟ್ಟಣ ಪ್ರದೇಶಗಳ ಮತದಾ­ರರು ಮತ ಚಲಾವಣೆಗೆ ನಿರ್ಲಕ್ಷ್ಯ ತೋರುವ ಈ ದಿನಗಳಲ್ಲಿ ಒಮ್ಮೆ ಮತ­ಕೇಂದ್ರಕ್ಕೆ ಬಂದು ಹೋದ ಮತದಾ­ರ­ನನ್ನು ಪುನಃ ಕರೆತರುವುದು ಕಷ್ಟದ ಸಂಗತಿ.
ಸಾಗರ ತಾಲ್ಲೂಕಿನ ಮತ­ಕೇಂದ್ರವೊಂದರಲ್ಲಿ ಚಾಲೆಂಜ್‌ ವೋಟ್‌ ವಿಷಯ ವರದಿಯಾಗಿದೆ. 

ಮತ ಚಲಾವಣೆ ಪ್ರಕ್ರಿಯೆಯಲ್ಲಿ ಚಾಲೆಂಜ್‌ ವೋಟ್‌ ಮತ್ತು ಟೆಂಡರ್‌ ವೋಟ್‌ ಎಂಬ ಎರಡು ವಿಧಗಳಿವೆ. ಇವೆರಡಕ್ಕೂ ಬಹಳ ವ್ಯತ್ಯಾಸವಿದೆ. ಒಬ್ಬ ಮತದಾರ  ಮತ ಚಲಾಯಿಸಲು ಬಂದಾಗ ಅವನು ಆ ಮತದಾರ ಅಲ್ಲ ಎಂದು ಯಾವುದಾದರೂ ಏಜೆಂಟ್‌ ಆಕ್ಷೇಪಿಸಿದರೆ ಆಗ ಅಂತಹ ಏಜೆಂಟ­ನಿಂದ 2 ರೂಪಾಯಿ ಪಡೆದು ಆ ಮತ­ದಾರ ನಿಜವಾದ ಮತದಾರ ಹೌದೋ ಅಲ್ಲವೋ ಅಂತ ವಿಚಾರಣೆ ನಡೆಸು­ತ್ತಾರೆ. ಆ ಮತದಾರ ನಿಜವಾದ ಮತ­ದಾರ ಎಂದು ಖಚಿತವಾದರೆ ಅವನಿಗೆ ಮತ ಚಲಾಯಿಸಲು ಅವಕಾಶ ಕೊಡು­ತ್ತಾರೆ. ಆಗ ಎರಡು ರೂಪಾಯಿ ಶುಲ್ಕ ಸರ್ಕಾರಕ್ಕೆ ಮುಟ್ಟುಗೋಲು ಹಾಕಿ­ಕೊಳ್ಳುತ್ತಾರೆ. ಆ ಮತದಾರ ನಿಜವಾದ ಮತದಾರನಲ್ಲ ಎಂದು ಸಿದ್ಧವಾದರೆ ಅವನಿಗೆ ಮತಹಕ್ಕು ನಿರಾಕರಿಸಿ 2 ರೂ. ಗಳನ್ನು ಆಕ್ಷೇಪಿಸಿದ ಏಜೆಂಟರಿಗೆ ವಾಪಸ್‌ ಕೊಡುತ್ತಾರೆ. ಇದಕ್ಕೆ ಚಾಲೆಂಜ್‌ ವೋಟ್‌ ಅಂತ ಹೆಸರು. ಟೆಂಡರ್‌ ವೋಟ್‌ ಎಂದರೆ ನಿಜವಾದ ಮತದಾರ ಬರುವ ಮೊದಲೇ ಮತ್ತೊಬ್ಬ ಅವನ ಹೆಸರಿನಲ್ಲಿ (ಯಾರ ಗಮನಕ್ಕೂ ಬರದೇ) ಮತ ಚಲಾಯಿ­ಸಿ­ದರೆ ನಂತರ ನಿಜವಾದ ಮತದಾರ ಬಂದರೆ ಅವನು ನಿಜವಾದ ಮತದಾರ ಎಂದು ಖಚಿತಪಡಿಸಿಕೊಂಡು ಅವನಿಗೆ ಮತ ಚಲಾವಣೆಗೆ ಅವಕಾಶ ಕೊಡು­ತ್ತಾರೆ. ಮತ್ತು ಆ ಮತವನ್ನು (ಬ್ಯಾಲೆಟ್‌)­ ಪ್ರತ್ಯೇಕ ಲಕೋಟೆ­ಯಲ್ಲಿಟ್ಟು ಸೀಲ್‌ ಮಾಡುತ್ತಾರೆ. ಇದಕ್ಕೆ ಎರಡು ರೂಪಾಯಿ ಕೊಡಬೇಕಾಗಿಲ್ಲ. ಮತ್ತು ಅದನ್ನು ಎಣಿಕೆಯಲ್ಲಿ ಸೇರಿಸು­ವುದೂ ಇಲ್ಲ.

ಇಂತಹ ಪ್ರಕರಣದಲ್ಲಿ ಎರ­ಡನೇ ಬಾರಿಗೆ ಬಂದ ಮತದಾರ ನಿಜ­ವಾದ ಮತದಾರ ಎಂದು ಖಚಿತ­ವಾದಾಗ ಅವನಿಗೆ ಟೆಂಡರ್‌ ವೋಟ್‌ ಮಾಡಲು ಕೊಡಬೇಕೇ ಹೊರತು ಚಾಲೆಂಜ್‌ ವೋಟ್‌ ಅಲ್ಲ. ಇಂತಹ ಸಾಮಾನ್ಯ ಸಂಗತಿಗಳನ್ನೂ ಗಮ­ನಿ­ಸದ ಸಿಬ್ಬಂದಿ­ಗಳಿಂದ ಮತದಾರ­ರಿಗೆ ಆಗುವ ತೊಂದರೆಗಳು ಅದೆಷ್ಟೋ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT