ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆ ಅಗ್ನಿಪರೀಕ್ಷೆ

Last Updated 27 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಜಮ್ಮು ಮತ್ತು ಕಾಶ್ಮೀರ ಹಾಗೂ ಜಾರ್ಖಂಡ್‌ಗಳಲ್ಲಿ ನವೆಂಬರ್ 25ರಿಂದ ಡಿಸೆಂಬರ್ 20ರವರೆಗೆ ಐದು ಹಂತಗಳಲ್ಲಿ ವಿಧಾನಸಭಾ ಚುನಾ­ವಣೆಗಳು  ನಡೆಯಲಿವೆ. ಕಾಶ್ಮೀರದಲ್ಲಿ ಉಗ್ರರ ಹಾವಳಿ ಇದೆ. ಜಾರ್ಖಂಡ್‌­ನಲ್ಲಿ ಮಾವೊವಾದಿಗಳ ಉಪಟಳ ಇದೆ. ಈ ಕಾರಣಕ್ಕಾಗಿ ಭದ್ರ­ತೆಯ ದೃಷ್ಟಿಯಿಂದ  ಐದು ಹಂತಗಳಲ್ಲಿ ಚುನಾವಣೆ ನಡೆಯಲಿದೆ.  ನಿಗದಿತ ಕಾಲದಲ್ಲಿ  ಚುನಾವಣೆ ನಡೆಯಬೇಕೆಂಬ ವಿಚಾರದಲ್ಲಿ ಯಾವುದೇ ತಕರಾ­ರಿಲ್ಲ. ಆದರೆ ಈ ಚುನಾವಣಾ ದಿನಾಂಕಗಳಿಗೆ  ಜಮ್ಮು ಮತ್ತು ಕಾಶ್ಮೀರದ ಆಡ­ಳಿತ ಪಕ್ಷ  ನ್ಯಾಷನಲ್ ಕಾನ್ಫರೆನ್ಸ್‌ನಿಂದ  ಆಕ್ಷೇಪದ ದನಿ ವ್ಯಕ್ತವಾ­ಗಿತ್ತು.

ಪ್ರವಾಹದಿಂದ ನಲುಗಿ ಇನ್ನೂ ಪೂರ್ಣ ಚೇತರಿಸಿಕೊಳ್ಳದಿರುವ ರಾಜ್ಯದಲ್ಲಿ  ಚುನಾ­ವಣೆಗಳಿಂದ ಪರಿಹಾರ ಕಾರ್ಯಗಳಿಗೆ ಸಮಸ್ಯೆ ಎದುರಾಗುತ್ತದೆ ಎಂಬಂಥ ಕಾರಣವನ್ನು ನ್ಯಾಷನಲ್ ಕಾನ್ಫರೆನ್ಸ್ ಪಕ್ಷ ಮುಂದೊಡ್ಡಿದೆ.  ಆದರೆ ಪ್ರತಿಪಕ್ಷ ಬಿಜೆಪಿ ಹಾಗೂ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿಗಳು (ಪಿಡಿಪಿ) ಚುನಾವಣೆಗೆ ಈಗಾಗಲೇ ಸಜ್ಜಾಗಿವೆ. ಕಾಶ್ಮೀರದಲ್ಲಿ ಇನ್ನೂ ಮುಂದು­­ವರಿ­ದಿರುವ ಪರಿಹಾರ ಕಾರ್ಯಗಳಿಗೆ ಯಾವುದೇ ಆತಂಕ ಎದುರಾ­ಗು­ವುದಿಲ್ಲ ಎಂಬುದು  ಚುನಾವಣಾ ಆಯೋಗದ  ಸ್ಪಷ್ಟನೆ. ‘99 ಮತದಾನ ಕೇಂದ್ರಗಳನ್ನು ಬೇರೆಡೆ ವರ್ಗಾಯಿಸಬೇಕಾಗಿ ಬರುತ್ತದೆ. ಅಗತ್ಯ ಬಿದ್ದಲ್ಲಿ ಇಂತಹ ಇನ್ನೂ ಕೆಲವು ಕ್ರಮಗಳನ್ನು ಕೈಗೊಳ್ಳಲಾಗುವುದು’ ಎಂದು ಚುನಾವಣಾ ಆಯೋಗ ಹೇಳಿದೆ.

2004 ಹಾಗೂ 2009ರ ನಂತರ ಜಾರ್ಖಂಡ್‌ಗೆ ಇದು ಮೂರನೇ ವಿಧಾನಸಭಾ ಚುನಾವಣೆ. 2000ದಲ್ಲಿ ಜಾರ್ಖಂಡ್ ರಾಜ್ಯ ರಚನೆಯಾ­ದಾ­ಗ­ಲಿಂದ ಯಾವುದೇ ಪಕ್ಷಕ್ಕೂ ಈವರೆಗೆ  ಅಲ್ಲಿ  ನಿಚ್ಚಳ ಬಹುಮತ ಲಭಿ­ಸಿಲ್ಲ. ಏಳೆಂಟು ಬಾರಿ ಸರ್ಕಾರ ಬದಲಾಗಿದೆ. ಮೂರು ಬಾರಿ ರಾಷ್ಟ್ರಪತಿ ಆಡ­ಳಿತ­ವನ್ನೂ ರಾಜ್ಯ ಕಂಡಿದೆ. 2004 ಹಾಗೂ 2009ರ ಚುನಾವಣೆ­ಗಳಲ್ಲಿ ಅತಂತ್ರ ವಿಧಾನಸಭೆ ಉಂಟಾಗಿತ್ತು. ಆದರೆ ಏಪ್ರಿಲ್‌ನಲ್ಲಿ ನಡೆದ  ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 14 ಸ್ಥಾನಗಳಲ್ಲಿ 12 ಸ್ಥಾನಗಳನ್ನು ಬಿಜೆಪಿ ಗೆದ್ದಿದೆ ಎಂಬುದನ್ನು ಗಮನಿಸಬೇಕು. ಈಗ ವಿಧಾನಸಭೆ ಚುನಾವಣೆ­ಯಲ್ಲೂ ಅದೇ ಬಗೆಯ ಫಲಿತಾಂಶವನ್ನು ನಿರೀಕ್ಷಿಸಿರುವ ಬಿಜೆಪಿ,  ಬಹುಮತ ಪಡೆಯುವ ವಿಶ್ವಾಸವನ್ನು  ಹೊಂದಿದೆ.  

ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ದೊಡ್ಡ ಜಿಗಿತ ಲಭಿಸಿದೆ. ಅದೇ ವಿಶ್ವಾಸ­ದೊಂದಿಗೆ  ಜಾರ್ಖಂಡ್‌ ಚುನಾವಣೆ ಎದುರಿಸಲು ಪಕ್ಷ ಸಜ್ಜಾಗಿದೆ.  ಈ ಕಾರ­ಣ­ಕ್ಕಾಗಿ  ಜಮ್ಮು– ಕಾಶ್ಮೀರ ಮತ್ತು ಜಾರ್ಖಂಡ್ ಚುನಾವಣೆಗಳು ಸಾರ್ವ­ಜನಿಕ ವಲಯದಲ್ಲಿ ಕುತೂಹಲ ಹೆಚ್ಚಿಸಿವೆ. ಸೋಲಿನ ಮೇಲೆ ಸೋಲು ಕಂಡಿರುವ ಕಾಂಗ್ರೆಸ್‌ಗೆ  ಈ ಚುನಾವಣೆಗಳು ಮತ್ತೊಂದು ಅಗ್ನಿ­ಪರೀಕ್ಷೆ. ಈ ಎರಡೂ ರಾಜ್ಯಗಳಲ್ಲಿ ಮುಕ್ತ ಹಾಗೂ ನ್ಯಾಯಯುತ ಚುನಾ­ವಣೆ ನಡೆಸುವ ಸವಾಲು ಚುನಾವಣಾ ಆಯೋಗದ ಮುಂದಿದೆ. ಪ್ರಜಾ­ಪ್ರಭುತ್ವ ವಿರೋಧಿ ಶಕ್ತಿಗಳು ಚುನಾವಣೆಗೆ ಅಡ್ಡಿಪಡಿಸುವ  ಸಾಧ್ಯತೆಗಳಿದ್ದೇ ಇರುತ್ತವೆ. ಇದನ್ನು ಹುಸಿಗೊಳಿಸಲು ಸೂಕ್ತ ಭದ್ರತೆ ಕಲ್ಪಿಸಬೇಕು. ಎಲ್ಲಾ ಪಕ್ಷ­ಗಳ ಅಭ್ಯರ್ಥಿಗಳು ಮುಕ್ತವಾಗಿ ಪ್ರಚಾರ ನಡೆಸಲು ಹಾಗೂ ಚುನಾವ­ಣೆ­ಗಳಲ್ಲಿ ಭಾಗಿಯಾಗಲು ಅವಕಾಶ ಲಭಿಸಬೇಕು. ಜನರು ಮತದಾನ ಪ್ರಕ್ರಿಯೆ­ಯಲ್ಲಿ  ನಿರ್ಭಯವಾಗಿ ಪಾಲ್ಗೊಳ್ಳಲು ಸಾಧ್ಯವಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT