ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆಕ್‌ ಡ್ಯಾಮ್ ಜಲಗಾಥೆ

Last Updated 15 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ನಾಲ್ಕೈದು ಅಡಿ ಹುದಿ – ಬದು (ಟ್ರಂಚ್‌ ಕಮ್ ಬಂಡ್‌), ಒಂದು ಗುಂಟೆ ಕೃಷಿ ಹೊಂಡ ನಿರ್ಮಿಸಿಕೊಳ್ಳಲು ನೂರಾರು ನೆಪಗಳನ್ನು ಹೇಳುವ ರೈತರಿರುವ ಈ ಕಾಲಘಟ್ಟದಲ್ಲಿ ಚಿತ್ರದುರ್ಗ ತಾಲ್ಲೂಕಿನ ಕೆಳಗಳಹಟ್ಟಿಯ ರೈತರೊಬ್ಬರು ಚೆಕ್‌ಡ್ಯಾಂ ನಿರ್ಮಾ­ಣಕ್ಕಾಗಿ ಒಂಬತ್ತೂವರೆ ಎಕರೆ ಜಮೀನನ್ನು ಬಿಟ್ಟುಕೊಟ್ಟಿದ್ದಾರೆ. ಕಳೆದ ವಾರ ಬಂದ ಮಘೆ ಮಳೆಗೆ ಆ ಜಾಗದಲ್ಲೀಗ ಪುಟ್ಟ ಕೆರೆಯೊಂದು ನಿರ್ಮಾಣವಾಗಿದೆ!

ಕೆಳಗಳಹಟ್ಟಿಯ ಟಿ.ಗೋಪಾಲರೆಡ್ಡಿ ಈ ‘ಜಲಗಾಥೆ’ಯ ಯಜಮಾನ. ತಮ್ಮ ಜಮೀನಿನಲ್ಲಿ ಹರಿಯುವ ಹಳ್ಳದ ನೀರಿಗೆ ಚೆಕ್್ ಡ್ಯಾಂ ನಿರ್ಮಿಸಲು ಜಮೀನು ಬಿಟ್ಟುಕೊಟ್ಟಿದ್ದಾರೆ ಅವರು. ರೆಡ್ಡಿ ಅವರ ಈ ಜಲಕಾಯಕ ಅನೇಕ ರೈತರನ್ನು ಚೆಕ್‌ ಡ್ಯಾಂ ನಿರ್ಮಾಣಕ್ಕೆ ಉತ್ತೇಜಿಸುತ್ತಿದೆ.

ಬತ್ತಿರುವ ಕೆರೆಗೆ ಮರುಜೀವ
ಚಿತ್ರದುರ್ಗ– ಚಳ್ಳಕೆರೆ ರಸ್ತೆಯಲ್ಲಿ ಸಾಗಿದರೆ ರಸ್ತೆಯ ಬಲ ಬದಿಯಲ್ಲೇ ಈ ಪುಟ್ಟ ಕೆರೆ ಅರ್ಥಾತ್ ಚೆಕ್ ಡ್ಯಾಂ ಕಾಣುತ್ತದೆ. ಹೊಸ ಮಳೆಯ ತಿಳಿ ಕೆಂದನೆಯ ನೀರು ತುಂಬಿಕೊಂಡು ಪುಟ್ಟ ಕೆರೆಯಂತೆ ಕಂಗೊಳಿಸುವ ಈ ಕಿರು ಜಲ ಸಂಗ್ರಹಾಗಾರ, ಎರಡು ವರ್ಷಗಳಿಂದ ಬತ್ತಿದ್ದ ನೂರಾರು ಕೊಳವೆ ಬಾವಿಗಳಿಗೆ ಮರುಜೀವ ತುಂಬಿದೆ. ಬತ್ತಿದ ಕೊಳವೆ ಬಾವಿಗಳಿಂದ ಕಂಗಾಲಾಗಿದ್ದ ಈರುಳ್ಳಿ ಬೆಳೆಗಾರರ ಮೊಗದಲ್ಲಿ ಈ ಜಲಗಾರ ತುಸು ಮಂದಹಾಸ ಮೂಡಿಸಿದೆ.

2013ರ ಸೆಪ್ಟೆಂಬರ್ ತಿಂಗಳಲ್ಲಿ ಜಲಾನಯನ ಅಭಿವೃದ್ಧಿ ಇಲಾಖೆಯವರು ಕೆಳಗಳಹಟ್ಟಿಯ ಗೋಪಾಲರೆಡ್ಡಿ ಅವರ ಜಮೀನಿನಲ್ಲಿ ಚೆಕ್

ಡ್ಯಾಂ ನಿರ್ಮಾಣಕ್ಕೆ ಮುಂದಾದಾಗ, ‘ಇದರಿಂದ ಏನು ಪ್ರಯೋಜನ’ ಎಂದು ರೆಡ್ಡಿಯವರು ಹಿಂದೇಟು ಹಾಕಿದ್ದರು. ದೊಡ್ಡಸಿದ್ದವ್ವನಹಳ್ಳಿ ಜಿಲ್ಲಾ ಪಂಚಾಯ್ತಿ ಸದಸ್ಯ ಎಸ್.ರಮೇಶ್ ಅವರು ಇದರ ನಿರ್ಮಾಣ ದಿಂದ ಅಂತರ್ಜಲ ವೃದ್ಧಿಸುವ ಹಾಗೂ ಕೊಳವೆ ಬಾವಿ ಜಲಮರುಪೂರಣವಾಗುವ ಕುರಿತು ರೆಡ್ಡಿ ಅವರ ಮನವೊಲಿಸಿ ದರು.

ಕಿರು ಜಲಾಗಾರ ನಿರ್ಮಾಣಕ್ಕೆ ರೆಡ್ಡಿಯವರಿಂದ ಒಪ್ಪಿಗೆ ಕೊಡಿಸಿದರು. ನಂತರದಲ್ಲಿ ಸುಮಾರು 10 ಲಕ್ಷ ವೆಚ್ಚದಲ್ಲಿ ಚೆಕ್ ಡ್ಯಾಂ ನಿರ್ಮಾಣವಾಯಿತು. ‘ನಮ್ಮದು 69 ಎಕರೆ ಜಮೀನು. ನೀರಿನ ಕೊರತೆಯಿಂದಾಗಿ 18 ಎಕರೆ ಈರುಳ್ಳಿ ಕೃಷಿ ಬಿಟ್ಟು ಉಳಿದಿದ್ದೆಲ್ಲವನ್ನೂ ಬೀಳು ಬಿಟ್ಟಿದ್ದೆ. ಹೇಗೂ ಬೆದ್ಲು ಜಮೀನು. ಇದರಲ್ಲಿ ಏನೂ ಬೆಳೆಯುವುದಿಲ್ಲ. ಹೀಗಾದರೂ ನೀರು ನಿಂತು ಅಂತರ್ಜಲ ಹೆಚ್ಚಾದರೆ, ಕೊಳವೆ ಬಾವಿಗಳಾದರೂ ರೀಚಾರ್ಜ್್ ಆಗುತ್ತವೆ. ಒಂದಷ್ಟು ರೈತರಿಗೂ ಉಪಯೋಗವಾಗುತ್ತದೆ ಎಂದು ಕೊಂಡು ಚೆಕ್‌ಡ್ಯಾಂ ನಿರ್ಮಾಣಕ್ಕೆ 9.50 ಎಕರೆ ಜಮೀನನ್ನು ಬಿಟ್ಟುಕೊಟ್ಟೆ’ ಎನ್ನುತ್ತಾರೆ ಗೋಪಾಲರೆಡ್ಡಿ.

ಪುಟ್ಟಕೆರೆ ನಿರ್ಮಾಣ
ಚಿತ್ರದುರ್ಗ ತಾಲ್ಲೂಕಿನ ಕಾಸವರಹಟ್ಟಿ, ಲಿಂಗಾವರಹಟ್ಟಿ, ದ್ಯಾಮವ್ವನಹಳ್ಳಿ, ಮುಚ್ಚುಗೊಂಡನಹಳ್ಳಿಗಳ ಎತ್ತರದ ಪ್ರದೇಶದಲ್ಲಿರುವ ನೂರಾರು ಎಕರೆ ಜಮೀನಿನ ಮೇಲೆ ಸುರಿಯುವ ಮಳೆ ನೀರು ಕೆಳಗಳಟ್ಟಿಯ ಮೂಲಕ ವ್ಯರ್ಥವಾಗಿ ಹರಿದು ಹೋಗುತ್ತಿತ್ತು. ಆ ಇಳಿಜಾರಿಗೆ ಅಡ್ಡಲಾಗಿ 300 ಮೀಟರ್ ಉದ್ದ, 18 ರಿಂದ 20 ಅಡಿ ಆಳದ ಈ ಚೆಕ್‌ ಡ್ಯಾಂ ನಿರ್ಮಿಸಲಾಗಿದೆ. ಕೋಡಿ ನೀರು ಹರಿಯುವಲ್ಲಿ 15 ಮೀಟರ್ ಉದ್ದದ ಸಿಮೆಂಟ್ ರಚನೆ, ನಾಲ್ಕು ಅಡಿ ಆಳದಷ್ಟು ಗುಂಡಿ ಇದೆ. ಇದೇ ವರ್ಷದ ಆಗಸ್ಟ್ ಕೊನೆಯಲ್ಲಿ ನಾಲ್ಕೈದು ದಿನಗಳ ಕಾಲ ಸುರಿದ ಮಘೆ ಮಳೆಗೆ ಚೆಕ್ ಡ್ಯಾಂ ಭರ್ತಿಯಾಗಿದೆ. 

ಈರುಳ್ಳಿ ಬೆಳೆಗೆ ನೀರಾಸರೆ
ಕೆಳಗಳಹಟ್ಟಿ, ದ್ಯಾಮವ್ವನಹಳ್ಳಿ ವ್ಯಾಪ್ತಿಯಲ್ಲಿ ಕೊಳವೆಬಾವಿಗಳ ಆಶ್ರಯದೊಂದಿಗೆ ನೂರಾರು ಎಕರೆ ಈರುಳ್ಳಿ ಬೆಳೆ ಬೆಳೆಯುತ್ತಿದ್ದಾರೆ. ಚೆಕ್‌ ಡ್ಯಾಂ ಸುತ್ತಲಿನ 2 ಕಿ.ಮೀ ವ್ಯಾಪ್ತಿಯಲ್ಲಿ 70ಕ್ಕೂ ಹೆಚ್ಚು ಕೊಳವೆ ಬಾವಿಗಳಿವೆ. ಅವೆಲ್ಲ ಬತ್ತಿ ಹೋಗಿದ್ದು, ದೂರದ ದ್ಯಾಮವ್ವನ ಹಳ್ಳಿಯಿಂದ ಟ್ಯಾಂಕರ್ ಮೂಲಕ ರೈತರು ನೀರು ಪೂರೈಸುತ್ತಿದ್ದರು.

ಈ ಚೆಕ್‌ ಡ್ಯಾಂ ಭರ್ತಿಯಾದ ಮೇಲೆ ಜೋಡಿಚಿಕ್ಕೇನಹಳ್ಳಿ, ಪಲ್ಲವಗೆರೆ, ಬಾಲೇನಹಳ್ಳಿ ಸೇರಿದಂತೆ ಸುತ್ತಲ ಹಳ್ಳಿಗಳಲ್ಲಿರುವ ಕೊಳವೆ ಬಾವಿಗಳಲ್ಲಿ ನೀರಿನ ಒರತೆ ಕಾಣಿಸಿಕೊಂಡಿದೆ. ಹಾಗಾಗಿ ಕೆಲವು ರೈತರು ಟ್ಯಾಂಕರ್ ನೀರು ಪೂರೈಕೆಯನ್ನು ಸ್ಥಗಿತಗೊಳಿಸಿದ್ದಾರೆ. ‘ನಮ್ಮದು ಮೂರು ಎಕರೆ ಈರುಳ್ಳಿ ಬೆಳೆ ಇದೆ. ಮೊನ್ನೆವರೆಗೂ ಟ್ಯಾಂಕರ್ ನೀರು ಹೊಡೆಸುತ್ತಿದ್ದೆ. ಚೆಕ್‌ ಡ್ಯಾಂ ತುಂಬಿದ ಮೇಲೆ ನಮ್ ಬೋರ್ವೆಲ್‌ನಲ್ಲಿ 2 ಇಂಚು ನೀರು ಬರುತ್ತಿದೆ. ಟ್ಯಾಂಕರ್ ನೀರು ಹೊಡೆಸುವುದನ್ನು ನಿಲ್ಲಿಸಿದ್ದೇವೆ’ ಎನ್ನುತ್ತಾರೆ ಕೆಳಗಳಹಟ್ಟಿಯ ರೈತ ಹನುಮಂತಪ್ಪ.

‘ಚೆಕ್‌ ಡ್ಯಾಂನಲ್ಲಿ ನೀರು ಹೆಚ್ಚಾಗಿ ನಿಲ್ಲಬೇಕೆಂದು ಅಲ್ಲಲ್ಲಿ ನಡುವೆ 10 –15 ಅಡಿ ಆಳದ ಗುಂಡಿ ತೆಗೆದಿದ್ದಾರೆ. ಅದೇ ಮಣ್ಣನ್ನು ಏರಿಗೆ ಸೇರಿಸಿ ಎತ್ತರಿಸಿದ್ದಾರೆ. ಏರಿಯ ಒಳಭಾಗಕ್ಕೆ ಕಲ್ಲಿನ ಹೊದಿಕೆಯಿಂದ ಬಲಗೊಳಿಸಿದ್ದಾರೆ. ಹೀಗಾಗಿ ನೀರು ಸಂಗ್ರಹಣ ಸಾಮರ್ಥ್ಯ ಹೆಚ್ಚಿದ್ದು, ಪುಟ್ಟ ಕೆರೆಯೇ ನಿರ್ಮಾಣವಾಗಿದೆ’ ಎನ್ನುತ್ತಾರೆ ಕೃಷಿ ಪದವೀಧರರೂ ಆಗಿರುವ ಜಿಲ್ಲಾ ಪಂಚಾಯ್ತಿ ಸದಸ್ಯ ಎಸ್. ರಮೇಶ್.

ಮಾದರಿಯಾಗುವತ್ತ...
ಈ ಚೆಕ್‌ ಡ್ಯಾಂ ತುಂಬಿರುವುದನ್ನು ನೋಡಲು ಚಳ್ಳಕೆರೆ– ಚಿತ್ರದುರ್ಗ, ಪರಶುರಾಮಪುರ, ಮೊಳಕಾಲ್ಮುರು ಭಾಗದ ರೈತರು ಬರುತ್ತಿದ್ದಾರೆ. ಈ ಜಲಾಗಾರ ನೋಡಿದ ಕೆಲವು ನಿವೃತ್ತ ಎಂಜಿನಿಯರ್‌ಗಳು ‘ಬೆದ್ಲು ಭೂಮಿಯನ್ನು ಇದೇ ರೀತಿಯಲ್ಲಿ ಎಲ್ಲರೂ ಚೆಕ್‌ ಡ್ಯಾಂಕ್ ಮಾಡಿಕೊಂಡರೆ, ನೀರಾವರಿ ಯೋಜನೆಗಳ ಅವಲಂಬನೆ ತಪ್ಪಿಸಬಹುದು. ಇದು ಬರದ ಜಿಲ್ಲೆಗೆ ಹೊಂದುವಂತಹ ಜಲಸಂರಕ್ಷಣಾ ವಿಧಾನ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘ಚೆಕ್‌ ಡ್ಯಾಂ ನಿರ್ಮಾಣ ಕಾರ್ಯ ಆಂದೋಲನದ ರೂಪದಲ್ಲಿ ಸಾಮೂಹಿಕವಾಗಿ ನಡೆಯಬೇಕು’ ಎನ್ನುವುದು ಜಿ.ಪಂ ಸದಸ್ಯ ರಮೇಶ್ ಅಭಿಪ್ರಾಯ. ಕೆಳಗಳಹಟ್ಟಿಯ ಚೆಕ್‌ಡ್ಯಾಂ ಅಂಥದ್ದೊಂದು ಪ್ರಯತ್ನಕ್ಕೆ ಉತ್ತೇಜನ ನೀಡಿದೆ. ಇದು ಕಡಿಮೆ ವೆಚ್ಚದಲ್ಲಿ ಆಗಿರುವ ಕಾಮಗಾರಿ. ಕೆಲವೇ ದಿನಗಳಲ್ಲಿ ಅರಣ್ಯ ಇಲಾಖೆ ನೆರವಿನೊಂದಿಗೆ ಏರಿಯ ಮೇಲೆ ಕಾಡುಗಿಡಗಳನ್ನು ಬೆಳೆಸಿ ಏರಿಯನ್ನು ಬಲಗೊಳಿ­ಸಲಾಗುತ್ತದೆ. ಈ ಚೆಕ್ ಡ್ಯಾಂ ತಾಲ್ಲೂಕಿನಲ್ಲೇ ಮಾದರಿಯಾಗಬೇಕು. ಇದನ್ನು ನೋಡಿ, ಬೇರೆಯವರೂ ಮಾಡಿಕೊಳ್ಳುವಂತಾಗಬೇಕು’ ಎಂಬುದು ರಮೇಶ್ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT