ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಛಳೀರ್‌ಛಟ್ ಛಳೀರ್ ಛಟ್ ಛಳೀರ್ ಛಟ್

ಕವಿತೆ
Last Updated 9 ಮೇ 2015, 19:30 IST
ಅಕ್ಷರ ಗಾತ್ರ

ನಮ್ಮಂತಿದ್ದೂ ನಮ್ಮಂತಾಗದ
ನಮ್ಮಂತಾಗಲು ಪರಿಪರಿ ಪರದಾಡುವ
ನಿನ್ನ ಕಂಡರೆ ನಾನು ಮುಖ ತಿರುಗಿಸುತ್ತೇನೆ
ಜಿಗುಪ್ಸೆಗಲ್ಲ ಸಿಟ್ಟಿಗಲ್ಲ ; ನಿನ್ನಅಸಹಾಯಕತೆಗೆ
ನಿನಗೆ ಏನೂ ಮಾಡಲಾಗದ ನನ್ನ ಅಸಹಾಯಕತೆಯೂ ಬೆಸೆದು
ಬೆಸೆದುದ್ದ ಬಚ್ಚಿಡಲು

ಕೈಕೈ ಹಿಸುಕಿಕೊಳ್ಳುತ್ತೇನೆ
ನೀನು ವಿಚಿತ್ರವಾಗಿ ಮೇಕಪ್ಪು ಬಳಕೊಂಡು
ನಿಂತ ಗಾಡಿಗಳ ಮುಂದೆಲ್ಲ ಚಪ್ಪಾಳೆ ತಟ್ಟುವಾಗ
ಛಳೀರ್‌ ಛಟ್ ಛಳೀರ್ ಛಟ್ ಛಳೀರ್ ಛಟ್ ಛಳೀರ್ ಛಟ್
ರಪ್ಪರಪ್ಪನೆ ತಟ್ಟಿದಂತಾಗುತ್ತದೆ ಸಕಲಸೃಷ್ಟೀ ಮುಖಕ್ಕೆ

ಹಾಗೆ ಮಾಡಬೇಡವೇ ಪ್ಲೀಸ್
ಹೋಗು ಮನೆಗೆ ಹಿಟ್ಟೊ ಸೊಪ್ಪೊ ತಿಂದು ಒಳಗಿರು
–ಹೀಗೆ ಗದರುವಂತಾಗುತ್ತದೆ ; ಗೊತ್ತು, ಗದರುವ ಅಧಿಕಾರವೂ ನನಗಿಲ್ಲ
ಒಂದು ದಿನದ್ದಲ್ಲ ಒಪ್ಪೊತ್ತೂ ಹೊಟ್ಟೆ ಸುಮ್ಮನಿರುವುದಿಲ್ಲ
ಕೋಳಿ ನಿನಗೊಬ್ಬಳಿಗೆ ಕೂಗದೆಯು ಇರುವುದಿಲ್ಲ

ಬಾ ಇಲ್ಲಿ ಕೆಲಸ ಕೊಡುತ್ತೇನೆ
ಇಲ್ಲ ಹೀಗೆ ಹೇಳುವ ಗೈರತ್ತೂ ; ಹೆಚ್ಚೆಂದರೆ ಪಕ್ಕದ
ಗಂಡನಿಗೆ ಗೊತ್ತಾಗದ ಹಾಗೆ ಕೈಗಿಕ್ಕಿ ಕೈಗೆ ಬಂದಷ್ಟು
ನೀಗಿಕೊಳ್ಳುತ್ತೇನೆ ಆವೊತ್ತಿನ ರುಣ; ಇಕ್ಕಿ ಮುಖ ತಿರುಗಿಸುವ ಆ ಕ್ಷಣ
ಯಾರೂ ಇರುವುದಿಲ್ಲ ನನ್ನ ವಕೀಲಿಕೆಗೆ
ಆ ಪೂರ್ಣಸ್ಯ ಪೂರ್ಣಮಾದಾಯ ಪೂರ್ಣಮೇವನೂ

ಮುಂದಕ್ಕೆ ಹೋಗುತ್ತೀಯ
ಇಲ್ಲದ ಉಬ್ಬಿನ ಸಂದಿಗೆ ರೂಪಾಯಿ ಸಿಕ್ಕಿಸಿ
ಸುಮ್ಮಸುಮ್ಮನೆ ನಕ್ಕು ಮುಚ್ಚಿಕೊಳ್ಳುತ್ತೀಯ ಆದ ಅವಮಾನ
ಅವನು ಕೈಯಿಳಿಸಿದ್ದೆ ಇಷ್ಟವೆಂಬಂತೆ ನಟಿಸುತ್ತ ಪೋಲೀಮಾತುದುರಿಸಿ
ಕರೆದದ್ದು ಕೇಳಿಸದ ಹಾಗೆ ಸರಿಯುತ್ತ ಸಂತೋಷೀಮಾಳನ್ನೆ ಕಂಕುಳಲ್ಲಿಟ್ಟುಕೊಂಡವಳ
ಹಾಗೆ ಒನೆಯುತ್ತ ಕೊನೆಗೆ ತೆಗೆಯುತ್ತೀಯ ಜಗಳ
ಕೈ ಮೀರಿದ್ದಕ್ಕೆ ಹೊಟ್ಟೇಸಿಟ್ಟು ರಟ್ಟೆಗಿಳಿಯಲಾರದ ದುಃಖಕ್ಕೆ
ಮತ್ತದೆ ಛಟ್ ಛಳೀರ್ ಛಟ್ ಛಳೀರ್ ಛಟ್ ಛಳೀರ್ ಛಟ್ ಛಳಿರ್

ನಾಳೆ ನಮ್ಮಲ್ಲೊಬ್ಬರ
ವೀರ್ಯದಿಂದೊ ಯೋನಿದ್ವಾರದಿಂದೊ
ಹುಟ್ಟಬಹುದಾದ ನಿನ್ನಂಥವಳ ಸಾಧ್ಯತೆ ಮರೆತೂ
ಕಾರೆಮುಳ್ಳು ಚುಚ್ಚಿದ್ದಕ್ಕೂ ದೇವರ ಬೈಯ್ಕೊಳ್ಳುವ ನಾವು ಸಂಪನ್ನರು ನಗುತ್ತೇವೆ
ಕಂಡರೂ ಕಾಣದ ಕಣ್ಣಕೊನೆಯಲ್ಲೆ ನಿನ್ನ ಪೂರ್ತಿ ಕಂಡು

ಭಾಷಣವಿಲ್ಲದೆ ವಿಷವುಂಡು ನಂಜುಂಡೆಯಾದರೂ ಪೂಜೆಗೊಳ್ಳದವಳೇ ಕೇಳು
ನಮ್ಮಂತಿದ್ದೂ ನಮ್ಮಂತಾಗದೆ ಆಗಲು ಪರಿಪರಿ ಪರದಾಡುವವಳೇ ಕೇಳು
ಇದ್ದಾನೆ ನಮ್ಮೊಳಗೂ ಒಬ್ಬ ಅವನು
ಮತ್ತು ಅವನೊಳಗೂ ಒಬ್ಬ ಅವಳು
ಏನೆಂದರೆ
ನಿನಗೆ ಕೈಕೊಟ್ಟ ಅದೇ ಮೊಲೆಮುಡಿ ಗಡ್ಡಮೀಸೆ
ಪುಣ್ಯಕ್ಕಿಲ್ಲಿ ನೆಟ್ಟಗಿವೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT