ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಗತ್ತಿನ ಮೊದಲ ಕಾರು ಅಪಘಾತ!

Last Updated 1 ಜುಲೈ 2015, 19:30 IST
ಅಕ್ಷರ ಗಾತ್ರ

ಕಾರು ಅಪಘಾತ ಎಂದಾಕ್ಷಣ ಈಗ ಮೊದಲು ನೆನಪಾಗುವ ಹೆಸರು ನಟ ಸಲ್ಮಾನ್‌ ಖಾನ್‌. ದಿನಬೆಳಗಾದರೆ ಪತ್ರಿಕೆಗಳಲ್ಲಿ, ಟೀವಿಗಳಲ್ಲಿ ಅಪಘಾತಗಳ ಸುದ್ದಿ ಇದ್ದದ್ದೇ. ಆದರೆ ಜಗತ್ತಿನ ಮೊದಲ ಕಾರು ಅಪಘಾತದ ಸುದ್ದಿ ಯಾವಾಗಿನದ್ದು ಗೊತ್ತೇ? ಸುಮಾರು 240 ವರ್ಷಗಳಷ್ಟು ಹಿಂದೆ, ಅಂದರೆ 1771ರಲ್ಲಿ.

ಕಾರುಗಳು ಆಗ ಈಗಿನಷ್ಟು ಆಧುನೀಕರಣಗೊಂಡಿರಲಿಲ್ಲ. ಮಿಗಿಲಾಗಿ ಅದನ್ನು ಸುಧಾರಿಸುವ ನಿಟ್ಟಿನಲ್ಲಿ ಹೊಸ ಹೊಸ ಆವಿಷ್ಕಾರಗಳು ನಡೆಯುತ್ತಲೇ ಇದ್ದವು. ಫ್ರಾನ್ಸ್‌ನ ಅನ್ವೇಷಕ ನಿಕೊಲಸ್‌ ಜೋಸೆಫ್‌ ಕಗ್ನೋಟ್‌ ವಿಶ್ವದಲ್ಲಿ ಪ್ರಥಮ ಬಾರಿಗೆ ಪ್ರಯಾಣಿಕರನ್ನೂ ಕರೆದೊಯ್ಯಲು ಅನುಕೂಲವಾಗುವಂತಹ ಸ್ಟೀಮ್‌ ಎಂಜಿನ್‌ನ ಕಾರನ್ನು ತಯಾರಿಸಿದರು. ಈ ಮಾದರಿಯ ಕಾರನ್ನು ಚೀನಾದಲ್ಲಿದ್ದ ಫಾದರ್‌ ಫರ್ಡಿನೆಂಡ್‌ ವರ್ಬೀಸ್ಟ್‌ ಎಂಬುವವರು ಅದಕ್ಕೂ ಮೊದಲು ತಯಾರಿಸಿದ್ದರೂ ಅದು ಗಾತ್ರದಲ್ಲಿ ತೀರಾ ಚಿಕ್ಕದಾಗಿತ್ತು.

ಹೀಗಾಗಿ ಅದರ ಕೀರ್ತಿ ಒಲಿದಿರುವುದು ಕಗ್ನೋಟ್‌ಗೆ. ಇರಲಿ, ಈ ಕಾರು ಅಷ್ಟೇನೂ ವ್ಯಾಪಕವಾಗಿ ಬಳಕೆಗೆ ಬಂದಿರಲಿಲ್ಲ. 1769ರಲ್ಲಿ ಕಗ್ನೋಟ್‌ ತಾನು ವಿನ್ಯಾಸಗೊಳಿಸಿದ ಕಾರನ್ನು ಫ್ರೆಂಚ್ ಅಧಿಕಾರಿಗಳಿಗೆ ತೋರಿಸಿದ್ದರು. ಅದರಲ್ಲಿ ಮದ್ದುಗುಂಡುಗಳನ್ನು ಸಾಗಿಸಲು ಅನುಕೂಲವಾಗುವಂತಿತ್ತು. 1771ರವರೆಗೂ ಜನರನ್ನು ಸಾಗಿಸುವಂತಹ ಕಾರನ್ನು ತಯಾರಿಸುವ ಇರಾದೆ ಕಗ್ನೋಟ್‌ಗೆ ಇರಲಿಲ್ಲ.

ಹಳೆಯ ಮಾದರಿಯನ್ನೇ ತುಸು ಬದಲಿಸಿದ ಕಗ್ನೋಟ್ ನಾಲ್ಕೈದು ಮಂದಿಯನ್ನು ಕೂರಿಸಿಕೊಂಡು ಹೋಗುವಂತಹ ಕಾರನ್ನು ಸಿದ್ಧಪಡಿಸಿದರು. ತನ್ನ ಈ ಪ್ರಯತ್ನಕ್ಕೆ ಸಾಕ್ಷಿಗಳಾಗುವಂತೆ ಸರ್ಕಾರದಲ್ಲಿನ ಕೆಲವು ಅಧಿಕಾರಿಗಳಿಗೆ ಆಹ್ವಾನ ನೀಡಿದರು. ಆರಂಭದಲ್ಲೇನೋ ಕಾರು ಸಲೀಸಾಗಿಯೇ ಚಲಿಸಿತು. ಹೀಗೆ ಕಾರು ಪ್ರಯಾಣದ ಮಜವನ್ನೂ ಅಧಿಕಾರಿಗಳು ಸವಿಯುತ್ತಿದ್ದರು.

ಆದರೆ ಇದ್ದಕ್ಕಿದ್ದಂತೆ ಕಾರು ನಿಯಂತ್ರಣ ತಪ್ಪಿತು. ಗಂಟೆಗೆ 2 ಮೈಲು ವೇಗದಲ್ಲಿದ್ದ ಕಾರು ತೋಟವೊಂದರ ಗೋಡೆಗೆ ಡಿಕ್ಕಿ ಹೊಡೆಯಿತು. ಅದರಲ್ಲಿ ಕುಳಿತಿದ್ದವರಿಗೆ ಏನಾಯಿತು ಎಂಬುದು ವರದಿಯಾಗಿಲ್ಲ. ಈ ವರದಿಯ ಸತ್ಯಾಸತ್ಯತೆ ಬಗ್ಗೆ ಇತಿಹಾಸ ತಜ್ಞರು ಪ್ರಶ್ನೆ ಮಾಡಿದ್ದಾರೆ.

ನಿಖರ ದಾಖಲೆಯುಳ್ಳ ಅಪಘಾತ ವರದಿಯಾಗಿರುವುದು ಈ ಘಟನೆಯ 98 ವರ್ಷಗಳ ಬಳಿಕ. 1869ರಲ್ಲಿ ಐರ್ಲೆಂಡ್‌ನ ಮೇರಿ ವಾರ್ಡ್‌ ಎಂಬ ವಿಜ್ಞಾನಿ ಚಲಾಯಿಸುತ್ತಿದ್ದ ಕಾರು ಗೋಡೆಯೊಂದಕ್ಕೆ ಡಿಕ್ಕಿ ಹೊಡೆದ ರಭಸಕ್ಕೆ ಆಕೆ ಮುಂದಕ್ಕೆ ಹಾರಿ ಬಿದ್ದು, ಆಕೆಯ ಮೇಲೆ ಕಾರು ಹಾದು ಹೋಗಿತ್ತು. ಈ ಭೀಕರ ಅಪಘಾತ ಇತಿಹಾಸದ ಮೊದಲ ಕಾರು ಅಪಘಾತದ ಸಾವು ಎಂದು ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT