ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಸಾಮಾನ್ಯರಿಗೆ ಹಾಡು ಕೊಟ್ಟ ಕವಿ

Last Updated 19 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಚಲನಚಿತ್ರಗಳಿಗೆ ಬರೆದ ಗೀತೆಗಳನ್ನು ಕಾವ್ಯ ಅಥವಾ ಸಾಹಿತ್ಯ ಎಂದು ಕರೆಯುವುದಕ್ಕೆ ಸಾಹಿತ್ಯ ವಲಯದಲ್ಲಿ ತಕರಾರು ಇದ್ದೇಇದೆ. ಆದರೆ ಹಿರಿಯ ಕವಿಯೊಬ್ಬರು ಸಾಹಿತ್ಯ–ಸಿನಿಮಾದ ನಡುವಣ ತೆಳುವಾದ ಪರದೆಯನ್ನು ಬಹಳ ಸಹಜವಾಗಿ ತೆಗೆದುಹಾಕಿ ಉತ್ತಮವಾದ ಕಾವ್ಯವನ್ನು ಅದರ ಮೂಲ ಸೊಗಡಿನೊಂದಿಗೆ ಸಿನಿಮಾ ಹಾಡುಗಳಾಗಿ ಮಾರ್ಪಡಿಸಿದ ಜಾದೂ ಭಾರತೀಯ ಚಿತ್ರರಂಗದಲ್ಲಿ ಸಂಭವಿಸಿದೆ.

ಈ ಸಹಜಕವಿ ಸಿನಿಮಾಕ್ಕಾಗಿ ಕವಿತೆ ರಚಿಸುವಾಗ ಯಾವುದೇ ಯಮ ನಿಯಮಗಳ ಗೋಜಿಗೆ ಹೋಗಿಲ್ಲ; ಸಂಗೀತದ ರಾಗ-ತಾಳಗಳ ಒತ್ತಡಕ್ಕೆ ಮಣಿದು ಭಾವನೆಗಳನ್ನು ಬಲಿ ಕೊಟ್ಟಿಲ್ಲ. ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ಕೀರ್ತಿ ತಂದುಕೊಟ್ಟ ಈ ಅನನ್ಯ ಕವಿಯ ಶಬ್ದಗಳ ಸಾಧನೆ ಶಬ್ದಾತೀತ. ಭಾರತೀಯ ಚಿತ್ರರಂಗದ ಅವಿಭಾಜ್ಯ ಅಂಗವಾಗಿ ಐದು ದಶಕಗಳಿಗಿಂತಲೂ ಹೆಚ್ಚು ಕಾಲದಿಂದ ಗುರ್ತಿಸಿಕೊಂಡಿರುವ ಈ ಕವಿ – ಗುಲ್ಜಾರ್. ಅವರಿಗೀಗ ‘ದಾದಾ ಸಾಹೇಬ್ ಫಾಲ್ಕೆ’ ಪುರಸ್ಕಾರ.

ಗುಲ್ಜಾರ್ ಎಂದು ಸಹೃದಯರಿಗೆ ಪರಿಚಿತರಾಗಿರುವ ಇವರ ನಿಜನಾಮ ಸಂಪೂರ್ಣ ಸಿಂಗ್. ಹುಟ್ಟಿದ್ದು (ಆಗಸ್ಟ್ 18, 1934) ಪ್ರಸ್ತುತ ಪಾಕಿಸ್ತಾನದಲ್ಲಿರುವ ದೀನಾ ಎಂಬಲ್ಲಿ. ಇವರ ತಂದೆ ಮಖ್ಖನ್ ಸಿಂಗ್ ಕಾಲ್ರಾ. ಸಿಖ್ ಸಂಸ್ಕೃತಿ ಪ್ರತಿಪಾದಿಸುವ ಸಹಬಾಳ್ವೆ ಹಾಗೂ ಸಮಾನತೆ ಬಾಲ್ಯದಲ್ಲೇ ಗುಲ್ಜಾರ್ ಅವರನ್ನು ಪ್ರಭಾವಿಸಿದ್ದವು. ಆ ಪ್ರಭಾವವೇ ಬರವಣಿಗೆಗಾಗಿ ಬೇಕಾದ ಕಚ್ಚಾವಸ್ತುವಾಗಿ ಅವರಿಗೆ ಪರಿಣಿಮಿಸಿತು.

ಬ್ರಿಟಿಷರ ದಬ್ಬಾಳಿಕೆಯನ್ನು ಕಂಡುಂಡ ಗುಲ್ಜಾರರ ಬಾಲ್ಯ ಅನೇಕ ಸಿಹಿಕಹಿ ಅನುಭವಗಳ ಸಂಕಲನ. ದೇಶ ವಿಭಜನೆಯ ಸಮಯದಲ್ಲಿ ಇವರ ಪರಿವಾರ ಭಾರತಕ್ಕೆ ಬಂತು. ಇಡೀ ಕುಟುಂಬ ಅಮೃತಸರ್‌ದಲ್ಲಿ ನೆಲೆಸಿದರೆ, ಸಂಪೂರ್ಣ ಸಿಂಗ್ ಮಾತ್ರ ದಿಲ್ಲಿಗೆ ಹೋಗಿ ಒಂದು ಗ್ಯಾರೇಜ್‌ನಲ್ಲಿ ಮೆಕ್ಯಾನಿಕ್ ಕೆಲಸಕ್ಕೆ ಸೇರಿದರು. ಬಿಡುವಿನ ವೇಳೆಯಲ್ಲಿ ಓದಿನ ಹವ್ಯಾಸ. ಇದೇ ಕಾಲದಲ್ಲಿ ಕಾವ್ಯದ ನಂಟೂ ಶುರುವಾಯಿತು. ಮಗ ಓದು–ಬರಹ ಹಚ್ಚಿಕೊಂಡರೆ ಕೈಯಲ್ಲಿಯ ಕೆಲಸ ಕಳೆದುಕೊಳ್ಳುತ್ತಾನೆ ಎಂದು ಅವರ ತಂದೆ ಆತಂಕಪಟ್ಟರು. ‘ಬರಹಗಾರನಾದರೆ ನೀನು ಜೀವನವಿಡಿ ನಿನ್ನ ಅಣ್ಣ-ತಮ್ಮಂದಿರ ಮೇಲೆ ಅವಲಂಬಿಸಿರಬೇಕು. ಬರೆಯುವುದನ್ನು ಬಿಟ್ಟು ಚೆನ್ನಾಗಿ ದುಡಿಯುವುದನ್ನು ಕಲಿತುಕೋ’ ಎಂದು ಗದರಿಸಿದರು.

ಅವರು ಅಂದಂತೆಯೇ ಆಯಿತು. ಆದರೆ ಸಂಪೂರ್ಣ ಸಿಂಗ್ ಬದಲಾಗಲಿಲ್ಲ. ಬರೆಯುವ ತುಡಿತ ಅವರನ್ನು ದಿಲ್ಲಿಯಿಂದ ಮುಂಬಯಿಗೆ ಎಳೆದುಕೊಂಡು ಹೋಯಿತು. ೧೯೬೩ರಲ್ಲಿ ಮುಂಬಯಿ ಸೇರಿದ ಅವರು ‘ಗುಲ್ಜಾರ್ ದೀನ್ವಿ’ ಎಂಬ ಕಾವ್ಯನಾಮ ಇಟ್ಟುಕೊಂಡು ಬರೆಯತೊಡಗಿದರು. ಅಲ್ಲಿಂದ ಶುರುವಾಯಿತು ‘ಸಹಜಕಾವ್ಯ’ದ ಯುಗ. ತಂದೆಯಿಂದ ಬೈಗುಳ ತಿಂದ ಸಂಪೂರ್ಣ ಸಿಂಗ್ ಇಂದು ಭಾರತದ ಪ್ರಮುಖ ಕವಿಗಳಲ್ಲಿ ಒಬ್ಬರು.

೧೯೬೩ರ ಸಮಯ; ಮುಂಬಯಿಯಲ್ಲಿ ಪ್ರಖ್ಯಾತ ನಿರ್ಮಾಪಕ ವಿಮಲ ರಾಯ್ ಅವರು ‘ಬಂದಿನಿ’ ಚಿತ್ರ ನಿರ್ಮಿಸುತ್ತಿದ್ದರು. ವಿಮಲ್ ಅವರ ಸಹಾಯಕರಾಗಿ ಗುಲ್ಜಾರ್ ಕೆಲಸಕ್ಕೆ ಸೇರಿದರು. ಈ ಚಿತ್ರಕ್ಕೆಂದು ಸಚಿನ್ ದೇವ್ ಬರ್ಮನ್ ರಾಗ-ತಾಳ ಸಂಯೋಜಿಸುತ್ತಿದ್ದರು ಹಾಗೂ ಶಬ್ದಸಂಯೋಜನೆಯ ಭಾರ ಪ್ರಖ್ಯಾತ ಕವಿ ಶೈಲೇಂದ್ರ ಅವರ ಮೇಲಿತ್ತು. ಅದೇ ಸಮಯಕ್ಕೆ ಬರವಣಿಗೆಯಲ್ಲಿ ರೂಢಿಸಿಕೊಳ್ಳುತ್ತಿದ್ದ ಗುಲ್ಜಾರ್ ಅವರನ್ನು ಕಂಡು ಶೈಲೇಂದ್ರ ಈ ಚಿತ್ರಕ್ಕೆ ಉಳಿದ ಗೀತೆಗಳನ್ನು ಬರೆಯುವಂತೆ ಒತ್ತಾಯಿಸಿದರು.

‘ಬಂದಿನಿ’ಗಾಗಿ ಗುಲ್ಜಾರ್ ಪ್ರಪ್ರಥಮವಾಗಿ ಹಾಡೊಂದನ್ನು ಬರೆದರು- ‘ಮೋರಾ ಗೋರಾ ಅಂಗ್ ಲೇಲೋ/ ಮೋಹೆ ಶ್ಯಾಮ್ ರಂಗ್‌ ದೇದೋ/ ಛಿಪ್‌ ಜಾವುಂಗಿ ರಾತ್ ಹಿ ಮೇ/ ಮೋಹೆ ಪೀ ಕಾ ಸಂಗ್ ದೇದೋ’. ಈ ಹಾಡು ಅವರ ಯಶಸ್ಸಿನ ಮೊದಲ ಹೆಜ್ಜೆಯಾಯಿತು. ಅಲ್ಲಿಂದ ಗುಲ್ಜಾರ್ ಹಿಂತಿರುಗಿ ನೋಡಲೇ ಇಲ್ಲ. ಮೊದಲ ಹಾಡಿನಿಂದ ಹಿಡಿದು ಮೊನ್ನೆಯ ‘ಜೈ ಹೋ..’ ತನಕ ಅನೇಕ ರಾಗಗಳು ಬದಲಾದವು, ತಂತ್ರಗಾರಿಕೆ ಬದಲಾಯಿತು, ಧ್ವನಿಗಳೂ ಬದಲಾದವು. ಗುಲ್ಜಾರರ ಗೀತೆಗಳಲ್ಲಿರುವ ಸಹಜತೆ ಮಾತ್ರ ಬದಲಾಗಲೇ ಇಲ್ಲ.

ಹಲವು ಭಾಷೆಗಳ ಕವಿ
ಗುಲ್ಜಾರ್ ಅವರ ಅತ್ಯುತ್ತಮ ಹಾಡುಗಳು ಸಚಿನ್ ದೇವ್ ಬರ್ಮನ್ ಹಾಗೂ ಅವರ ಮಗ ರಾಹುಲ್ ದೇವ್ ಬರ್ಮನ್ ಅವರ ಸ್ವರಸಂಯೋಜನೆಯಲ್ಲಿಯೇ ಮೈದಳೆದವು. ಹೀಗಾಗಿಯೇ ಗುಲ್ಜಾರ್ ಈ ಇಬ್ಬರನ್ನು ತಮ್ಮ ಜೀವನದ ಪ್ರಮುಖ ವ್ಯಕ್ತಿಗಳೆಂದು ಹೇಳುತ್ತಾರೆ. ೧೯೬೩ರಿಂದ ಇಂದಿನವರೆಗೆ ಪ್ರಭಾವಿಯಾಗಿ ಬರೆಯುತ್ತಲೇ ಸಾಗಿರುವ ಗುಲ್ಜಾರ್‌ರ ಪ್ರಮುಖ ಕಾವ್ಯಭಾಷೆ ಉರ್ದು. ಆದರೆ ಅವರು ಹಿಂದಿ, ಪಂಜಾಬಿ, ಮಾರವಾಡಿ ಸೇರಿದಂತೆ ಹಲವು ಭಾಷೆಗಳಲ್ಲಿ ಕಾವ್ಯ ರಚಿಸಿದ್ದು ಅವರ ಭಾರತೀಯ ಏಕತೆಯ ಪ್ರಜ್ಞೆಯನ್ನು ಸೂಚಿಸುವಂತಿದೆ. ‘ಕವಿ ಒಂದು ಭಾಷೆಗೆ ಬದ್ಧನಾಗಿರಬೇಕಿಲ್ಲ’ ಎಂಬುದು ಅವರ ಕಾವ್ಯರೀತಿ.

ಗುಲ್ಜಾರ್ ಬರೆದಿದ್ದೆಲ್ಲವೂ ನವ ನವೀನ. ‘ದಿಲ್ ಹುಂ ಹುಂ ಕರೆ..’, ‘ಸುರಮೈ ಶಾಮ್ ಕಿಸ್ ತರಹ್ ಆಯಿ..’ ಇಂತಹ ಶಾಸ್ತ್ರೀಯ ಸಂಗೀತದ ಹಾಡುಗಳ ಜೊತೆಗೆ, ‘ಲಕಡಿ ಕಿ ಕಾಠಿ.. ಕಾಠಿ ಕಾ ಘೋಡಾ..’, ‘ಮಮ್ಮಿ ಓ ಮಮ್ಮಿ..’, ‘ಸುನ್ ಸುನ್ ದೀದಿ ತೇರೆ ಲಿಯೇ..’, ‘ಚಿಕನಿ ಚುಪಡಿ ಚಾಚಿ..’, ‘ಗೋಲಿ ಮಾರ್ ಭೇಜೆ ಮೇ..’ ರೀತಿಯ ವಿಚಿತ್ರ ಭಾವದ ಹಾಡುಗಳನ್ನು ರಚಿಸಿದರು.

ಸಂಗೀತಕಾರ ಆರ್.ಡಿ. ಬರ್ಮನ್ ಎಂದರೆ ಗುಲ್ಜಾರ್‌ಗೆ ಅಚ್ಚುಮೆಚ್ಚು. ಒಂದು ಕಾಲದಲ್ಲಿ ಬರ್ಮನ್ ಇಲ್ಲದೆ ಯಾವುದೇ ಶಬ್ದಗಳಿಗೆ ರಾಗ ಹಾಕುವುದು ಸಾಧ್ಯವಿಲ್ಲ ಎನ್ನುವಂತಹ ಮನಸ್ಥಿತಿ ಅವರದಾಗಿತ್ತು. ‘ಕಿನಾರಾ’ ಚಿತ್ರದಲ್ಲಿಯ ‘ಏಕ್‌ ಹಿ ಖಾಬ್ ಕಯಿ ಬಾರ್ ದೇಖಾ ಹೈ ಮೈನೆ..’ ಮತ್ತು ‘ಇಜಾಜತ್’ ಚಿತ್ರದಲ್ಲಿಯ ‘ಮೇರಾ ಕುಛ್ ಸಾಮಾನ್ ತುಮ್ಹಾರೇ ಪಾಸ್ ಪಡಾ ಹೈ..’ ಹಾಡುಗಳು ಈ ಇಬ್ಬರು ಗಾರುಡಿಗರ ಸಖ್ಯಕ್ಕೆ ಉದಾಹರಣೆ.

ಕಳೆದ ಎರಡು ದಶಕಗಳಿಂದ ಭಾರತೀಯ ಚಿತ್ರರಂಗದಲ್ಲಿ ಹೊಸ ನೀರು ಸಾಕಷ್ಟು ಹರಿದಿದೆ. ಆದರೆ, ಗುಲ್ಜಾರ್ ಅವರ ಬರಹ ಹಾಗೂ ಬದ್ಧತೆ ಕೊಂಚವೂ ಬದಲಾಗಿಲ್ಲ. ಮಾಚಿಸ್ ಚಿತ್ರದ ‘ಚಪ್ಪಾ ಚಪ್ಪಾ ಚರಕಾ ಚಲೆ’, ‘ಸತ್ಯಾ’ ಚಿತ್ರದ ‘ಸಪನೋಂ ಮೇ ಮಿಲ್ತಿ ಹೈ’,  ‘ದಿಲ್ ಸೇ’ ಸಿನಿಮಾದ ‘ಸತರಂಗಿರೇ..’, ‘ಓಂಕಾರ’ದ ‘ಬೀಡಿ ಜಲೈ ಲೇ..’ ಮತ್ತು ‘ಸ್ಲಂಡಾಗ್‌ ಮಿಲಿಯನೇರ್’ ಚಿತ್ರದ ‘ಜೈ ಹೋ’ ಗೀತೆಗಳು ಎಂಬತ್ತರ ವಯಸ್ಸಿನ ಗುಲ್ಜಾರ್ ಪ್ರತಿಭೆ ನವನವೋನ್ಮೇಶಶಾಲಿನಿ ಗುಣವನ್ನು ಸೂಚಿಸುವಂತಿವೆ.

ನಿರಾಭರಣ ಕಾವ್ಯಕನ್ನಿಕೆ
ಶಬ್ದಗಳ ಆಡಂಬರವಿಲ್ಲದೆ ಭಾವನೆಗಳ ಅಂತರಾಳವನ್ನು ತೆರದಿಡುವುದು ಗುಲ್ಜಾರ್ ಅವರ ವಿಶೇಷತೆ. ಬರೀ ಶಬ್ದಗಳೆಂದರೆ ತಪ್ಪಾದೀತು, ಅವರು ಬರೆದ ಕಥೆ, ಚಿತ್ರಕಥೆ, ಸಂವಾದ, ಅವರು ಚಿತ್ರಿಸಿದ ದೃಶ್ಯ, ಅವರು ರೂಪಿಸಿದ ಚಲನಚಿತ್ರಗಳು– ಇವೆಲ್ಲ ಭಾವನೆಗಳ ಸಾಗರಗಳೇ ಸರಿ. ಉರ್ದುಭಾಷೆಯ ಅನೇಕ ಕವಿಗಳಿಗೆ ಕ್ಲಿಷ್ಟವಾದ ಅಂಲಕಾರಿಕ ಶಬ್ದಗಳನ್ನು ಬರೆಯುವುದು ಅನಿವಾರ್ಯವೆನ್ನಿಸಿಬಿಡುತ್ತದೆ. ಗುಲ್ಜಾರ್ ಮಾತ್ರ ಇದಕ್ಕೆ ಅಪವಾದ. ಅವರು ‘ನನ್ನ ಬರವಣಿಗೆ, ನನ್ನ ಕಲಾಕೃತಿ ಸಾಮಾನ್ಯನಲ್ಲಿಯ ಸಾಮಾನ್ಯನಿಗೂ ತಿಳಿಯಬೇಕು, ನನ್ನ ಶಬ್ದಗಳು ಅವನ ಭಾವನೆಗಳಾಗಬೇಕು’ ಎನ್ನುತ್ತಾರೆ.

ನನ್ನ ಅನುಭವವೊಂದನ್ನು ಇಲ್ಲಿ ಹಂಚಿಕೊಳ್ಳಬೇಕು. ಗುಲ್ಜಾರ್ ಮತ್ತು ಜಗಜೀತ್ ಸಿಂಗ್ ಇಬ್ಬರನ್ನೂ ಒಮ್ಮೆಗೇ ಭೇಟಿಯಾಗುವ ಅವಕಾಶ ನನಗೊಮ್ಮೆ ದೊರೆತಿತ್ತು. ಅವರಿಬ್ಬರೂ ಬಿಳಿಯ ಜುಬ್ಬಾ ಮತ್ತು ಬಿಳಿಯ ಪಂಚೆಯನ್ನು ಧರಿಸಿಕೊಂಡು ಬಾಲ್ಯದ ಗೆಳೆಯರಂತೆ ಹರಟುತ್ತ ಕುಳಿತುಕೊಂಡಿದ್ದರು. ನಾನು ಬರೆದ ಗಜಲ್‌ಗಳನ್ನು ನೋಡಿ ಗುಲ್ಜಾರ್ ಹಾಗೂ ಜಗಜೀತ್ ಸಿಂಗ್ ‘ತುಮ್ ಅಭೀ ಛೋಟೆ ಹೋ, ರಾಸ್ತಾ ಬಹುತ್‌ ಲಂಬಾ ಹೈ. ಅಭಿ ತಜುರ್ಬಾ ಕರಲೋ’ ಎಂದು ಕಿವಿಮಾತು ಹೇಳಿದ್ದರು.

ಗಜಲ್ ಎಂದರೆ ನಿಧಾನ ಗಾಯನ ಎಂದು ಮೂಗು ಮುರಿಯುತ್ತಿದ್ದವರಿಗೆ ಹೊಸ ಮಾದರಿಯ ಗಜಲ್‌ಗಳನ್ನು ರಚಿಸಿ ಭಾರತೀಯ ಗಜಲ್ ಪರಂಪರೆಯನ್ನು ಉತ್ತುಂಗಕ್ಕೇರಿಸಿದ್ದು ಇದೇ ಜೋಡಿ. ಗುಲ್ಜಾರ್‌ರ ಶಬ್ದಗಳೊಂದಿಗೆ ಜಗಜೀತ್ ಸಿಂಗ್‌ರ ಧ್ವನಿ ಸೇರಿದರೆ ಅದು ರಸದೌತಣವೇ ಸರಿ. ಅಂದಹಾಗೆ, ಗುಲ್ಜಾರ್ ಅವರ ಹಲವಾರು ಪುಸ್ತಕಗಳು ಮಾರಾಟದ ದಾಖಲೆಗಳನ್ನು ನಿರ್ಮಿಸಿವೆ. ಅವರ ಸಮಗ್ರ ಕಾವ್ಯ ‘ಚಾಂದ್ ಪುಖ್‌ರಾಜ್‌ ಕಾ’, ‘ರಾತ್ ಪಶೇಮಾನಿ ಕಿ’, ‘ಪಂದ್ರಹ್ ಪಾಂಚ್ ಪಚ್ಹತ್ತರ್’ ಎಂಬ ಮೂರು ಸಂಪುಟಗಳಲ್ಲಿ ಪ್ರಕಟಗೊಂಡಿದೆ. ಅವರ ಸಮಗ್ರ ಕಥೆಗಳನ್ನು ‘ರಾವಿ ಪಾರ್’ ಹಾಗೂ ‘ಧುಂವಾ’ ಸಂಕಲನಗಳಲ್ಲಿ ಸಂಗ್ರಹಿಸಲಾಗಿದೆ.

ಮಾನವೀಯ ಸಂಬಂಧಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಚಿತ್ರಿಸುವಲ್ಲಿ ಗುಲ್ಜಾರ್ ಅವರಿಗೆ ಸಾಟಿಯಾಗುವವರು ಚಿತ್ರರಂಗದಲ್ಲಿ ಕಡಿಮೆ. ವಿವಾಹೇತರ ಸಂಬಂಧಗಳ ಕುರಿತ ‘ಲಿಬಾಸ’, ತಂದೆಯೊಬ್ಬನ ತವಕತಲ್ಲಣಗಳ ‘ಮಾಸೂಮ್’, ಪಂಜಾಬಿ ಯುವಕರ ಆರ್ತಧ್ವನಿಯಾದ ‘ಮಾಚಿಸ್’, ವೇಶ್ಯೆಯೊಬ್ಬಳ ಕಥಾನಕ ‘ಮನೋಜ್ಞ್’, ಭ್ರಷ್ಟಾಚಾರದ ಚಿತ್ರಣದ ‘ಹು ತು ತೂ’– ಇವೆಲ್ಲ ಗುಲ್ಜಾರ್ ಪ್ರತಿಭೆಯ ಕೆಲವು ತುಣುಕುಗಳಷ್ಟೇ.
‘ಮೇರೆ ಅಪ್ನೆ’, ‘ಪರಿಚಯ’, ‘ಕೋಶಿಶ್’, ‘ಅಚಾನಕ್’, ‘ಆಂಧೀ’ ಗುಲ್ಜಾರ್‌ ನಿರ್ದೇಶನದ ಸಿನಿಮಾಗಳು. ತುರ್ತುಪರಿಸ್ಥಿತಿಯ ವಿಷಯ ಒಳಗೊಂಡಿದ್ದ ‘ಆಂಧೀ’ ವಿವಾದಕ್ಕೆ ಸಿಲುಕಿ ಬಿಡುಗಡೆಯಾಗಲೇ ಇಲ್ಲ.

ನಾದಮಯ ಈ ಲೋಕವೆಲ್ಲ...
ಬೆಳ್ಳಿಪರದೆಯ ಒಳಿತು ಕೆಡಕುಗಳಿಗೆ ತಲೆಕೆಡಿಸಿಕೊಳ್ಳದೆ ತನ್ನ ಪಾಡಿಗೆ ತಾನು ಬರೆಯುತ್ತ ಸಾಗುವ ಕವಿ ಗುಲ್ಜಾರ್ ಹೆಚ್ಚಿನದನ್ನು ಬಯಸದ ಭಾವಜೀವಿ. ಸಾಹಿತ್ಯ ಹಾಗೂ ಚಲನಚಿತ್ರ ಕ್ಷೇತ್ರಗಳಲ್ಲಿ ಅವರ ಅಮೂಲ್ಯ ಸೇವೆಯನ್ನು ಪರಿಗಣಿಸಿ ಭಾರತ ಸರ್ಕಾರ ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ. ‘ಸ್ಲಂ ಡಾಗ್’ ಚಿತ್ರಕ್ಕೆ ಅವರು ಬರೆದ ‘ಜೈ ಹೋ’ ಗೀತೆಗೆ ಆಸ್ಕರ್ ಹಾಗೂ ಗ್ರ್ಯಾಮಿ ಪ್ರಶಸ್ತಿಗಳು ಒಲಿದಿವೆ. ಈಗ ’ದಾದಾ ಸಾಹೇಬ್ ಫಾಲ್ಕೆ ಪುರಸ್ಕಾರ’ದ ಸರದಿ.

‘ಸಂಗೀತ ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿದೆ. ದಿನನಿತ್ಯದ ಕಾರ್ಯಗಳಲ್ಲಿ ಬೆರೆತುಹೋಗಿರುವ ಸಂಗೀತ ಜನಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ದಿನಬೆಳಗಾದರೆ ಕಿವಿಗೆ ಬೀಳುವ ಪೂಜಾಶ್ಲೋಕ, ಹಾಲಿನವನು ತನ್ನ ಸೈಕಲ್ ತುಳಿಯುತ್ತ ಹಾಕುವ ಸಿಳ್ಳು, ಮನೆಮನೆಗೆ ಹೋಗಿ ಬೇಡಿಕೊಳ್ಳುವ ಫಕೀರನ ದುವಾ, ಅಡುಗೆಮನೆಯಲ್ಲಿ ತನ್ನ ಕೆಲಸದಲ್ಲಿ ನಿರತಳಾದ ಹೆಣ್ಣಿನ ಗುನುಗು– ಹೀಗೆ ಸಂಗೀತ ನಮ್ಮ ದೈನಿಕವನ್ನು ಆವರಿಸಿದೆ. ಈ ಸಂಗೀತವೇ ಶಾಂತಿಗೆ ನಾಂದಿ’ ಎಂದು ಗುಲ್ಜಾರ್ ಹೇಳುತ್ತಾರೆ.

ಶಬ್ದ, ಧ್ವನಿ, ಸಂಗೀತ, ಸಂಬಂಧ– ಇವೆಲ್ಲವನ್ನೂ ತಮ್ಮ ರಚನೆಗಳಲ್ಲಿ ಮೊಗೆಮೊಗೆದು ಸಹೃದಯರಿಗೆ ಉಣಬಡಿಸುತ್ತಿರುವ ಗುಲ್ಜಾರ್ ತಮ್ಮ ಬರವಣಿಗೆಯ ಮೂಲಕ, ಸಿನಿಮಾಗಳ ಮೂಲಕ ಸಾಮಾಜಿಕ ಸಾಮರಸ್ಯದ ರಾಯಭಾರಿಯಂತೆಯೂ ಕೆಲಸ ಮಾಡುತ್ತಿದ್ದಾರೆ ಎನ್ನುವುದು ಉತ್ಪ್ರೇಕ್ಷೆಯೇನಲ್ಲ.
...

ಗುಲ್ಜಾರ್ ಅವರ ಒಂದು ರಚನೆ

ಬೆಳ್ಳಂಬೆಳಿಗ್ಗೆ ಒಂದು ಕನಸು ಬಾಗಿಲು ತಟ್ಟಿತು,

ಬಡಿತ ಕೇಳಿ ಎದ್ದು ಬಾಗಿಲು ತೆರೆದೆ ನೋಡಿದೆ
ಗಡಿಯಾಚೆಯಿಂದ ಕೆಲವು ಅತಿಥಿಗಳು ಬಂದಿದ್ದಾರೆ
ಕಣ್ಣುಗಳೆಲ್ಲವೂ ನಿದ್ದೆಗೆಟ್ಟಿದ್ದವು, ಮುಖಗಳೆಲ್ಲವೂ ಮುದುರಿದ್ದವು.

ಕಾಲು-ಕೈ ತೊಳೆಸಿದೆ.. ಅಂಗಳದಲ್ಲಿ ಆಸನ ಹಾಕಿಸಿದೆ
ಮತ್ತೇ.. ತಂದೂರಿಯಲ್ಲಿ ಮೆಕ್ಕೆಜೋಳದ ದಪ್ಪನೆಯ ರೊಟ್ಟಿ ಮಾಡಿಸಿದೆ.. 
ನನ್ನ ಅತಿಥಿಗಳು ಗಂಟಿನಲ್ಲಿ ಕಳೆದ ಬೆಳೆಯ ಹಳೆಬೆಲ್ಲ ತಂದಿದ್ದರು

ಎಚ್ಚರವಾಯಿತು, ಕಣ್ಣು ತೆರೆದೆ.. ನೋಡಿದೆ..  
ಮನೆಯಲ್ಲಿ ಯಾರೂ ಇಲ್ಲ
ಮುಟ್ಟಿನೋಡಿದೆ.. ತಂದೂರಿಯ ಒಲೆ ಇನ್ನೂ ಆರಿಲ್ಲ.. 
ಮತ್ತೆ.. ತುಟಿಯ ಮೇಲಿದ್ದ ಸಿಹಿಬೆಲ್ಲದ ಸವಿ ಇನ್ನೂ ಮೆತ್ತುತ್ತಿದೆ

ಕನಸು ಬಿತ್ತೇನೋ? ಹೌದು.. ಕನಸೇ ಇರಬಹುದು!
ನಿನ್ನೆಯ ರಾತ್ರಿ ಕೇಳಿದ್ದೆ :
ಗಡಿಯಲ್ಲಿ ಮತ್ತೆ ಗುಂಡಿನ ದಾಳಿಯಾಗಿದೆಯಂತೆ
ನಿನ್ನೆಯ ರಾತ್ರಿ ಕೇಳಿದ್ದೆ :
ಗಡಿಯಲ್ಲಿ ಕೆಲವು ಕನಸುಗಳ ಕೊಲೆಯಾಗಿದೆಯಂತೆ

(ಸುಬಹ್‌ ಸುಬಹ್‌ ಇಕ್‌ ಖಾಬ್‌ ಕೆ ದಸ್ತಕ್‌ ಪರ್‌ ದರ್‌ವಾಜಾ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT