ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಾಭಿಪ್ರಾಯ ಸಂಗ್ರಹಕ್ಕೆ ಕ್ರಮ

ಯೋಜನಾ ಆಯೋಗದ ಬದಲು ಬೇರೆ ಸಂಸ್ಥೆ
Last Updated 19 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಯೋಜನಾ ಆಯೋಗವನ್ನು ರದ್ದು ಮಾಡಿ ಅದಕ್ಕೆ ಬದಲಾಗಿ ಬೇರೊಂದು ಸಂಸ್ಥೆ ರಚಿಸುವ ನಿರ್ಧಾರ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಈ ಸಂಬಂಧ ತಮ್ಮ ಆಲೋಚನೆ, ಪರಿಕಲ್ಪನೆಗಳನ್ನು ಹಂಚಿಕೊಳ್ಳುವಂತೆ ಜನತೆಗೆ ಮನವಿ ಮಾಡಿದ್ದಾರೆ.

ಈ ಸಂಬಂಧ ಸಲಹೆಗಳನ್ನು ಅಂತ­ರ್ಜಾ­ಲದ ಮುಕ್ತ ವೇದಿಕೆಯಲ್ಲಿ ಹಂಚಿ­ಕೊಳ್ಳಲು ಅನುವು ಮಾಡಿಕೊಡಲಾ­ಗಿದೆ. ಇದಕ್ಕಾಗಿ mygov.nic.in  ಅಂತರ್ಜಾಲ ತಾಣವನ್ನು ಮಂಗಳ­ವಾರ ತೆರೆಯಲಾಗಿದ್ದು, ಆಸಕ್ತರು ತಮ್ಮ ಆಲೋಚನೆ, ಪರಿಕಲ್ಪನೆ, ಸಲಹೆಗಳನ್ನು ಹಂಚಿಕೊಳ್ಳಬಹುದು.

‘ಸಮಾಜವಾದಿ ಕಾಲಘಟ್ಟದ, 64 ವರ್ಷಗಳ ಹಿಂದಿನ ಸಂಸ್ಥೆಯಾದ ಯೋಜನಾ ಆಯೋಗವನ್ನು ರದ್ದುಪಡಿಸಿ ಬೇರೊಂದು ಸಂಸ್ಥೆ ಸ್ಥಾಪಿಸಲಾಗುವುದು. ಹಿಂದೆಲ್ಲಾ ಆರ್ಥಿಕ ಬೆಳವಣಿಗೆಯಲ್ಲಿ ಕೇಂದ್ರ ಸರ್ಕಾರದ ಪಾತ್ರ ಹೆಚ್ಚಾಗಿ­ರುತ್ತಿತ್ತು. ಆದರೆ ಜಾಗತಿಕ ಬದಲಾವ­ಣೆಗಳಿಂದಾಗಿ ಇವತ್ತಿನ ಪರಿಸ್ಥಿತಿ ಬೇರೆ­ಯಾಗಿದೆ. ರಾಜ್ಯ ಸರ್ಕಾರಗಳು ಅಭಿ­ವೃದ್ಧಿಯ ಕೇಂದ್ರಗಳಾಗಿವೆ. ಇವನ್ನೆಲ್ಲಾ ಗಮನದಲ್ಲಿ ಇರಿಸಿಕೊಂಡು ಹೊಸ ಸಂಸ್ಥೆ ರಚಿಸಲಾಗುವುದು’ ಎಂದು ನರೇಂದ್ರ ಮೋದಿ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಹೇಳಿದ್ದರು.

‘ಕೆಲವೊಮ್ಮೆ ಹೆಚ್ಚು ಹಣ ಖರ್ಚಾದರೂ ಮನೆಯನ್ನು ದುರಸ್ತಿ ಮಾಡಿಸಲೇಬೇಕಾಗುತ್ತದೆ. ಆದರೂ ಒಮ್ಮೊಮ್ಮೆ ಅದು ತೃಪ್ತಿ ನೀಡುವುದಿಲ್ಲ. ಆಗ ಹೊಸ ಮನೆಯನ್ನೇ ಕಟ್ಟುವುದು ಒಳಿತು’ ಎಂದಿದ್ದರು.

ಪುನರ್‌ರಚನೆ ಸೂಕ್ತ– ಕಾಂಗ್ರೆಸ್‌
ಯೋಜನಾ ಆಯೋಗವನ್ನು ರದ್ದುಪಡಿಸುವ ಬದಲು ಅದನ್ನು ಪುನರ್‌ರಚನೆ ಮಾಡುವುದು ಸೂಕ್ತ. ಅದರ ರದ್ದತಿಯು ಅಪಕ್ವ ನಿರ್ಧಾರವಾಗುತ್ತದೆ ಎಂದು ಕಾಂಗ್ರೆಸ್‌ ಹೇಳಿದೆ. ‘ಪ್ರಧಾನಿ ಮೋದಿ ಅವರು ಬೇರೊಂದು ಪರ್ಯಾಯ ಕಲ್ಪನೆಯ ಬಗ್ಗೆ ಚಿಂತಿಸದೇ ಆಯೋಗವನ್ನು ರದ್ದುಪಡಿಸುವ ಬಗ್ಗೆ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡಿದ್ದಾರೆ. ಈ ನಿರ್ಧಾರಕ್ಕೆ ಬರುವ ಮುನ್ನ ಅವರು ರಾಜ್ಯಗಳ ಮುಖ್ಯಮಂತ್ರಿಗಳ ಅಭಿಪ್ರಾಯಗಳನ್ನು ಕೇಳಬೇಕಿತ್ತು. ರಾಷ್ಟ್ರೀಯ ಅಭಿವೃದ್ಧಿ ಮಂಡಳಿಯ ಸಭೆ ನಡೆಸಬೇಕಿತ್ತು’ ಎಂದು ಪಕ್ಷದ ವಕ್ತಾರ ಆನಂದ್‌ ಶರ್ಮಾ ಎಐಸಿಸಿ ಸಭೆಯ ವೇಳೆ ಸುದ್ದಿಗಾರರೊಂದಿಗೆ ಹೇಳಿದರು.

ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರೇ ಆಯೋಗವನ್ನು ಪುನರ್‌ರಚನೆ ಮಾಡುವ ಚಿಂತನೆಗೆ ಚಾಲನೆ ನೀಡಿದ್ದರು. ನಂತರ, ಆಯೋಗದ ಉಪಾಧ್ಯಕ್ಷ ಮೊಂಟೆಕ್‌ ಸಿಂಗ್‌ ಅಹ್ಲುವಾಲಿಯಾ ಅವರು ಈ ಕುರಿತು 15 ಪುಟಗಳ ಟಿಪ್ಪಣಿ ಸಿದ್ಧಪಡಿಸಿದ್ದರು. ಹಿಂದಿನ ಹಣಕಾಸು ಸಚಿವ ಪಿ.ಚಿದಂಬರಂ ಕೂಡ ಆಯೋಗದ ಗಾತ್ರವನ್ನು ಇಳಿಸಬೇಕು ಎಂದು ಅಭಿಪ್ರಾಯಪಟ್ಟಿದ್ದರು ಎಂದು ಶರ್ಮಾ ಸಮರ್ಥಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT