ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಪಾನ್‌ ಉದ್ಯಮಿಗಳಿಗೆ ಮೋದಿ ರತ್ನಗಂಬಳಿ

ಭಾರತದಲ್ಲಿ ಹೂಡಿಕೆಗೆ ಅನಂತ ಅವಕಾಶ
Last Updated 1 ಸೆಪ್ಟೆಂಬರ್ 2014, 10:29 IST
ಅಕ್ಷರ ಗಾತ್ರ

ಟೊಕಿಯೊ (ಪಿಟಿಐ):‘ಜಪಾನಿನ ಉದ್ಯಮಿಗಳೇ ಭಾರತದಲ್ಲಿ ಬಂಡವಾಳ ತೊಡಗಿಸಿ. ಎಲ್ಲ ಯೋಜನೆಗಳಿಗೆ ತ್ವರಿತಗತಿಯಲ್ಲಿ ಅನುಮೋದನೆ ನೀಡಲಾಗುವುದು.ಈಗ ಹಿಂದಿನಂತೆ ನಿರಾಶಾದಾಯಕ ವಾತಾ­ವರಣ ಇಲ್ಲ. ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್‌ಡಿಐ) ನೀತಿಯಲ್ಲಿ ಸಾಕಷ್ಟು ಉದಾರೀಕರಣ ತರಲಾಗಿದೆ. ಹೂಡಿಕೆ ಉತ್ತೇ­ಜನ ನೀಡಲು ವಿಶೇಷ ನಿರ್ವ­ಹಣಾ ತಂಡವನ್ನೇ ರಚಿಸಿದ್ದೇವೆ’.

ಪ್ರಧಾನಿ ನರೇಂದ್ರ ಮೋದಿ ಅವರು ಜಪಾನಿನ ಉದ್ಯಮಿಗಳಿಗೆ ರತ್ನಗಂಬಳಿ ಸ್ವಾಗತ ನೀಡಿದ ಪರಿ ಇದು.  ಸೋಮವಾರ ಜಪಾನ್‌ ಪ್ರಧಾನಿ ಶಿಂಝೊ ಅಬೆ ಜತೆ ನಡೆದ  ಸಭೆಯಲ್ಲಿ ಮೋದಿ ಅವರು ಭಾರತದಲ್ಲಿ ಬಂಡವಾಳ ಹೂಡಿಕೆಗೆ ಇರುವ ಅವಕಾಶಗಳ ಕುರಿತು ಮನವರಿಕೆ ಮಾಡಿಕೊಟ್ಟರು.

ಭಾರತದಲ್ಲಿ ಬಂಡವಾಳ ಹೂಡಿಕೆಗೆ ಮುಂದಾದರೆ  ಯಾವುದೇ ರೀತಿಯ ಅಡೆತಡೆಯೂ ಎದುರಾಗದಂತೆ ಶೀಘ್ರ ಗತಿಯಲ್ಲಿ ಅನುಮೋದನೆ ನೀಡ­ಲಾಗುವುದು. ಇತ್ತೀಚೆಗೆ ರಕ್ಷಣಾ ವಲಯ, ರೈಲ್ವೆ, ವಿಮಾ ಕ್ಷೇತ್ರ, ವಿಮಾಯಾನ ರಂಗಗಳಲ್ಲಿ ‘ಎಫ್‌ಡಿಐ’ ಮಿತಿಯನ್ನು ಹೆಚ್ಚಿಸಲಾಗಿದೆ. ಈ ವಲಯಗಳಲ್ಲಿ ಹೂಡಿಕೆಗೆ ಅನಂತ ಸಾಧ್ಯತೆಗಳಿವೆ ಎಂದರು.

ಸೇವಾ ಗುಣಮಟ್ಟ, ಸರಕು ವಿಲೇವಾರಿ ಮತ್ತು ಕೌಶಲ ಅಭಿವೃದ್ಧಿಯಲ್ಲಿ ಜಪಾನ್‌  ಭಾರತಕ್ಕೆ ಮಾದರಿಯಾಗಿದೆ. ನಾವು ಅಭಿವೃದ್ಧಿ ಪಥದಲ್ಲಿ ಮುನ್ನಡೆಯುತ್ತಿದ್ದೇವೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಣಕಾಸು ಮಾರುಕಟ್ಟೆಯಲ್ಲಿ ಸ್ಥಿರತೆ ಮೂಡಿದೆ. ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ‘ಜಿಡಿಪಿ’ ಶೇ 5.7ರಷ್ಟು ಪ್ರಗತಿ ಕಂಡಿದೆ. ಈಗ ಯುಪಿಎ ಸರ್ಕಾರ ಇದ್ದಾಗ ಇದ್ದ ನಿರಾಶಾದಾಯಕ ಸ್ಥಿತಿ ಇಲ್ಲ. ಉದ್ಯಮಿಗಳು ಧೈರ್ಯದಿಂದ ಬಂಡವಾಳ ತೊಡಗಿಸಬಹುದು ಎಂದರು.

ಬಹುಕೋಟಿ ನಿರೀಕ್ಷೆ
ಜಪಾನ್‌ ಭೇಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜತೆಗೆ ಇರುವ ತಂಡದಲ್ಲಿ ಐಸಿಐಸಿಐ ಬ್ಯಾಂಕಿನ ಅಧ್ಯಕ್ಷೆ ಚಂದಾ ಕೊಚ್ಚಾರ್‌ ಸಹ ಇದ್ದಾರೆ.

ಜೈವಿಕ ತಂತ್ರಜ್ಞಾನ, ಸ್ಮಾರ್ಟ್‌ ಸಿಟಿ ನಿರ್ಮಾಣ ಸೇರಿದಂತೆ ಹಲವು ವಲಯಗಳಲ್ಲಿ ಜಪಾನ್‌ನಿಂದ ಭಾರತಕ್ಕೆ  ಬಹುಕೋಟಿ ಬಂಡವಾಳ ಹೂಡಿಕೆ ಹರಿದು ಬರುವ ನಿರೀಕ್ಷೆ ಇದೆ ಎಂದು ಅವರು ಸುದ್ದಿಸಂಸ್ಥೆಗೆ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT