ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಪಾನ್ ಒತ್ತೆಯಾಳು ಶಿರಚ್ಛೇದ

ಐ.ಎಸ್‌ ಉಗ್ರರಿಂದ ಮತ್ತೊಂದು ವಿಡಿಯೊ ಬಿಡುಗಡೆ
Last Updated 1 ಫೆಬ್ರುವರಿ 2015, 19:30 IST
ಅಕ್ಷರ ಗಾತ್ರ

ಟೋಕಿಯೊ (ಎಎಫ್‌ಪಿ): ತನ್ನ ಒತ್ತೆಯಲ್ಲಿದ್ದ ಜಪಾನ್‌ನ ಹವ್ಯಾಸಿ ಪತ್ರಕರ್ತ ಕೆಂಜಿ ಗೊಟೊ ಶಿರಚ್ಛೇದ ಮಾಡಿರುವುದಾಗಿ ಐ.ಎಸ್‌ ಉಗ್ರರು ಹೇಳಿಕೊಂಡಿದ್ದಾರೆ. 47 ವರ್ಷ ಕೆಂಜಿ ಗೊಟೊ ಐ.ಎಸ್‌ ಉಗ್ರರಿಂದ ಹತ್ಯೆಗೊಳಗಾದ ಎರಡನೇ ಜಪಾನ್‌ ಮೂಲದ ವ್ಯಕ್ತಿಯಾಗಿದ್ದಾರೆ.

ಶನಿವಾರ ರಾತ್ರಿ ಅಂತರ್ಜಾಲದಲ್ಲಿ ಬಿಡುಗಡೆ ಮಾಡಲಾಗಿರುವ ವಿಡಿಯೊದಲ್ಲಿ ಗೊಟೊ ಅವರ ಶಿರಚ್ಛೇದ ಮಾಡಿರುವುದಾಗಿ ಉಗ್ರರು ಹೇಳಿ­ದ್ದಾರೆ. ಆದರೆ ಕೊಲ್ಲುವುದಾಗಿ ಹಲವು ದಿನ­ಗ­ಳಿಂದ ಬೆದರಿಕೆಯೊಡ್ಡುತ್ತಿದ್ದ ಜೋರ್ಡಾನ್‌ ಪೈಲಟ್‌ ಅಲ್‌ ಕಸಸ್‌ಬೆಹ್‌ ಕುರಿತು ಉಗ್ರರು ಪ್ರಸ್ತಾಪಿಸಿಲ್ಲ.

ಕಿತ್ತಳೆ ದಿರಿಸಿನಲ್ಲಿ ಮಂಡಿಯೂರಿ ಕುಳಿತಿರುವ ಗೊಟೊ ಬ್ರಿಟನ್‌ ಶೈಲಿಯ ಇಂಗ್ಲಿಷ್‌ನಲ್ಲಿ ತನ್ನ ಶಿರಚ್ಛೇದಕ್ಕಾಗಿ ಜಪಾನ್‌ ಸರ್ಕಾರವನ್ನು ಆರೋಪಿಸುವ ದೃಶ್ಯ ವಿಡಿಯೊದಲ್ಲಿದೆ. ಈ ಹಿಂದೆ ಬಿಡುಗಡೆ ಮಾಡಿದ್ದ ಶಿರಚ್ಛೇದದ ವಿಡಿಯೊಗಳಂತೆಯೇ ತಲೆಯಿಂದ ಕಾಲಿನವರೆಗೆ ಸಂಪೂರ್ಣ ಕಪ್ಪು ದಿರಿಸು ತೊಟ್ಟ ಮುಸುಕುಧಾರಿ ಗೊಟೊ ಪಕ್ಕದಲ್ಲಿ ನಿಂತು, ‘ಈ ಹತ್ಯೆ ಜಯಗಳಿಸ­ಲಾಗದ ಯುದ್ಧದಲ್ಲಿ ಭಾಗಿಯಾಗುವ ಜಪಾನ್‌ ಸರ್ಕಾರದ ಭಂಡ ನಿರ್ಧಾರದ  ಫಲಿತಾಂಶ’ ಎಂದು ಹೇಳುವ ದೃಶ್ಯ ವಿಡಿಯೊದಲ್ಲಿದೆ. ‘ಈ ವ್ಯಕ್ತಿ ಕೆಂಜಿಯ ಶಿರಚ್ಛೇದ ಮಾತ್ರವಲ್ಲ, ಇದನ್ನು ಮುಂದು­ವರಿಸುತ್ತಾನೆ. ನಿಮ್ಮ ಜನರು ಕಂಡಾಗ­ಲೆಲ್ಲಾ ಈ ರೀತಿಯ ಹತ್ಯೆಗೆ ಕಾರಣವಾಗಲಿದ್ದೀರಿ. ಇದು ಜಪಾನ್‌ ಪಾಲಿಗೆ ದುಃಸ್ವಪ್ನವಾಗಲಿದೆ’ ಎಂದೂ ಆತ ಹೇಳಿದ್ದಾನೆ.

ಕಿತ್ತಳೆ ದಿರಿಸು ತೊಟ್ಟ ದೇಹದ ಮೇಲೆ ಕತ್ತರಿಸಿದ ತಲೆಯನ್ನು ಇರಿಸಿದ ಚಿತ್ರದೊಂದಿಗೆ ವಿಡಿಯೊ ಅಂತ್ಯಗೊಂಡಿದೆ. ಉಗ್ರರು ತಮ್ಮ ವೆಬ್‌ಸೈಟ್‌­ಗಳಲ್ಲಿ ಬಿಡುಗಡೆ ಮಾಡಿರುವ ಈ ವಿಡಿಯೊವನ್ನು ಐ.ಎಸ್‌ ಪರ ಸಂಘಟನೆಗಳು ಸಾಮಾಜಿಕ ತಾಣಗಳಲ್ಲಿ ಹಂಚಿಕೆ ಮಾಡಿದ್ದಾರೆ.

ಉಗ್ರರ ಕೈಗೆ ಸಿಕ್ಕಿಬಿದ್ದಿದ್ದ ಜಪಾನ್‌ನ ಹರುವಾ ಯುಕವಾ ಅವರ ಬಿಡುಗಡೆ ಸಂಬಂಧ ಗೊಟೊ ಸಿರಿಯಾಕ್ಕೆ ತೆರಳಿದ್ದಾಗ ಅಕ್ಟೋಬರ್‌ನಲ್ಲಿ ಉಗ್ರರಿಗೆ ಸೆರೆಸಿಕ್ಕಿದ್ದರು. ಜಪಾನ್ ಯುಕವಾ ಮತ್ತು ಗೊಟೊ ಅವರ ಬಿಡುಗಡೆಗೆ ಸುಮಾರು 120 ಕೋಟಿ ಹಣ ನೀಡಬೇಕು. ಇಲ್ಲದಿದ್ದರೆ ಇಬ್ಬರನ್ನೂ ಹತ್ಯೆ ಮಾಡುವುದಾಗಿ ಉಗ್ರರು ಬೆದರಿಕೆಯೊಡ್ಡಿದ್ದರು. ಆದರೆ ಕಳೆದ ವಾರವಷ್ಟೇ ಯುಕವಾಅವರ ಶಿರಚ್ಛೇದದ ವಿಡಿಯೊ ಬಿಡುಗಡೆ ಮಾಡಲಾಗಿತ್ತು.

ಕ್ಷಮಿಸುವುದಿಲ್ಲ: ‘ಭಯೋತ್ಪಾದಕರನ್ನು ಎಂದಿಗೂ ಕ್ಷಮಿಸುವುದಿಲ್ಲ’ ಎಂದು ಜಪಾನ್‌ ಪ್ರಧಾನಿ ಶಿಂಜೋ ಅಬೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಕಣ್ಣಾಲಿಗಳಲ್ಲಿ ನೀರು ತುಂಬಿಕೊಂಡಿದ್ದ ದುಃಖ­ತಪ್ತ ಅಬೆ, ‘ಉಗ್ರರ ಈ ಹೇಯ ಮತ್ತು
ನೀಚ ಕೃತ್ಯದ ಕುರಿತು ನನಗೆ ಅತೀವ ಕೋಪವಿದೆ. ಉಗ್ರ­ರನ್ನು ನಾಫವು ಎಂದಿಗೂ ಕ್ಷಮಿಸುವುದಿಲ್ಲ’ ಎಂದು ಹೇಳಿದರು. ‘ಉಗ್ರರು ತಮ್ಮ ಕೃತ್ಯಗಳಿಗೆ ಪ್ರಾಯಶ್ಚಿತ್ತಪಟ್ಟು­ಕೊಳ್ಳು­ವಂತೆ ಮಾಡಲು ಅಂತರರಾಷ್ಟ್ರೀಯ ಸಮು­ದಾಯಕ್ಕೆ ಸಹಕಾರ ನೀಡುತ್ತೇವೆ’ ಎಂದರು.

‘ನನ್ನ ಮಗನ ದುಃಖಕರ ಸಾವಿನಿಂದ ನನಗಾದ ನೋವನ್ನು ಹೇಳಲು ಪದಗಳೇ ಸಿಗುತ್ತಿಲ್ಲ’ ಎಂದು ಗೊಟೊ ಅವರ ತಾಯಿ ಜುಂಕೊ ಇಷಿಡೊ ಹೇಳಿದರು.

ವಿಶ್ವಸಂಸ್ಥೆ ಖಂಡನೆ: ಉಗ್ರರ ಘೋರ ಕೃತ್ಯವನ್ನು ಖಂಡಿಸಿರುವ ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯ­ದರ್ಶಿ ಬಾನ್‌ ಕಿ ಮೂನ್ ಅವರ ವಕ್ತಾ­ರರು, ‘ಇರಾಕ್ ಮತ್ತು ಸಿರಿಯಾಗಳಲ್ಲಿನ  ಹಿಂಸಾ­ಕೃತ್ಯ­ಗಳನ್ನು ಈ ಹತ್ಯೆ ಒತ್ತಿ ಹೇಳುತ್ತದೆ’ ಎಂದರು.
ಈ ವಿಡಿಯೊದ ಅಧಿಕೃತತೆ ಖಚಿತ­ಪಡಿಸಿಕೊಳ್ಳುವ ಪ್ರಯತ್ನದಲ್ಲಿರುವುದಾಗಿ ಜಪಾನ್‌ ತಿಳಿಸಿದೆ.

ಫೈಲಟ್‌ ಬಿಡುಗಡೆಗೆ ಪ್ರಯತ್ನ
ಅಮ್ಮಾನ್‌ (ಎಎಫ್‌ಪಿ)
: ಐ.ಎಸ್‌ ಉಗ್ರರ ವಶ­ದಲ್ಲಿರುವ ತನ್ನ ಫೈಲಟ್‌ನ ಸುರಕ್ಷತೆಗೆ ಸಕಲ ಪ್ರಯತ್ನ ಮಾಡುವುದಾಗಿ ಜೋರ್ಡಾನ್‌ ಹೇಳಿದೆ.

‘ಫೈಲಟ್‌ ಅಲ್ ಕಸಸ್‌ಬೆಹ್‌ ಅವರ ಸುರಕ್ಷತೆ ಮತ್ತು ಬಿಡುಗಡೆ ಸಂಬಂಧ ಕಾರ್ಯಚಟುವಟಿಕೆ ನಡೆಸಲು ಎಲ್ಲಾ ವಿಭಾಗ­ಗಳೂ ಸನ್ನದ್ಧವಾಗಿವೆ’ ಎಂದು ಸರ್ಕಾರದ ವಕ್ತಾರ ಮೊಹಮದ್‌ ಅಲ್‌ ಮೊಮೆನಿ ತಿಳಿಸಿದರು.
ಕೆಂಜಿ ಗೊಟೊ ಅವರ ಹತ್ಯೆಯನ್ನು ಅವರು ತೀವ್ರವಾಗಿ ಖಂಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT