ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಯಲಲಿತಾ ಅಭಿಮಾನಿಗಳ ಪ್ರತಿಭಟನೆ: ಬಿಡುಗಡೆಗಾಗಿ ಉರುಳು ಸೇವೆ

Last Updated 1 ಅಕ್ಟೋಬರ್ 2014, 19:41 IST
ಅಕ್ಷರ ಗಾತ್ರ

ಬೆಂಗಳೂರು: ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಅವರ ಅಭಿಮಾನಿಗಳು ಹಾಗೂ ಬೆಂಬಲಿಗರು ನಗರದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಬಳಿ ಬುಧವಾರ ಉರುಳು ಸೇವೆ ಮಾಡಿ ಪ್ರತಿಭಟನೆ ನಡೆಸಿದರು.

ಪ್ರತಿಭಟನಾಕಾರರು, ಕಾರಾಗೃಹದಿಂದ ಸ್ವಲ್ಪ ದೂರದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಹಾಕಿರುವ ಬ್ಯಾರಿಕೇಡ್‌ಗಳನ್ನು ತಳ್ಳಿ ಜೈಲಿನ ಆವರಣಕ್ಕೆ ನುಗ್ಗಲು ಯತ್ನಿಸಿದರು. ಈ ವೇಳೆ ಪೊಲೀಸರು ಅವರನ್ನು ತಡೆದಿದ್ದರಿಂದ ಪರಸ್ಪರರ ನಡುವೆ ವಾಗ್ವಾದ ನಡೆದು ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

ಜಯಲಲಿತಾ ಅವರ ಬೆಂಬಲಿಗರಲ್ಲಿ ಕೆಲವರು ಹೊಸರೋಡ್‌ನಲ್ಲಿ ಉರುಳು ಸೇವೆ ಮಾಡಿದರು. ಮತ್ತೆ ಕೆಲವರು ಬಾಯಿ ಬಡಿದುಕೊಳ್ಳುತ್ತಾ ‘ಅಮ್ಮಾ’ಗೆ ಜಯವಾಗಲಿ ಎಂದು ಘೋಷಣೆ ಕೂಗಿದರು. ಮಹಿಳಾ ಅಭಿಮಾನಿಯೊಬ್ಬರು ಜಯಲಲಿತಾ ಅವರು ಜೈಲಿನಿಂದ ಬೇಗನೆ ಬಿಡುಗಡೆಯಾಗಲೆಂದು ಹರಕೆ ಹೊತ್ತು ತಲೆ ಬೋಳಿಸಿಕೊಂಡು ಬಂದಿದ್ದರು.

‘ಜಯಲಲಿತಾ ಅವರು ಯಾವುದೇ ತಪ್ಪು ಮಾಡಿಲ್ಲ. ಜೈಲು ಅಧಿಕಾರಿಗಳು, ಅವರನ್ನು ನೋಡಲು ಅವಕಾಶ ನೀಡುತ್ತಿಲ್ಲ’ ಎಂದು ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದರು. ನ್ಯಾಯಾಲಯವು ಬೇಗನೆ ಜಯಲಲಿತಾ ಅವರ ಜಾಮೀನು ಅರ್ಜಿಯ ವಿಚಾರಣೆ ನಡೆಸಬೇಕು.  ಅವರನ್ನು ಭೇಟಿಯಾಗಲು ಅನುಮತಿ ನೀಡಬೇಕು ಎಂದು ಒತ್ತಾಯಿಸಿದರು.

ಭೇಟಿಗೆ ನಿರಾಕರಣೆ: ಲೋಕಸಭೆ ಉಪಾಧ್ಯಕ್ಷ ಎಂ.ತಂಬಿದೊರೈ, ಸಚಿವರಾದ ಎನ್‌.ವಿಶ್ವನಾಥನ್‌, ಸಂಪತ್‌, ವೈದ್ಯಲಿಂಗಂ, ವಲಾರ್ಮತಿ, ಪಳನಿಯಪ್ಪನ್‌, ಷಣ್ಮುಗನಾಥನ್‌, ಸೋನಾಕ್ಷಿ, ಗೋಕುಲ ಇಂದಿರಾ, ಸಂಸದ ಅಶೋಕ್‌ಕುಮಾರ್‌, ಮಾಜಿ ಸಚಿವ ವಿಜಯ್‌ ಸೇರಿದಂತೆ ಎಐಎಡಿ­ಎಂಕೆಯ ಹಲವು ಮುಖಂಡರು ಹಾಗೂ ಕಾರ್ಯ­ಕರ್ತರು ಜಯಲಲಿತಾ ಅವರನ್ನು ಭೇಟಿಯಾಗಲು ಬೆಳಿಗ್ಗೆ 10 ಗಂಟೆ ವೇಳೆಗೆ ಜೈಲಿನ ಬಳಿ ಬಂದಿದ್ದರು.

ಆದರೆ, ತಮ್ಮ ಭೇಟಿಗೆ ಯಾರಿಗೂ ಅನುಮತಿ ನೀಡಬಾರದೆಂದು ಜಯಲಲಿತಾ ಅವರು ಕಾರಾಗೃಹ ಅಧಿಕಾರಿಗಳಿಗೆ ಸೂಚಿಸಿದ್ದರು. ಹೀಗಾಗಿ ಸಂಸದರು, ಸಚಿವರು ಹಾಗೂ ಕಾರ್ಯಕರ್ತರಿಗೆ ಜಯಲಲಿತಾ ಅವರನ್ನು ಭೇಟಿಯಾಗಲು ಸಾಧ್ಯವಾಗದೆ ನಿರಾಸೆಯಿಂದ ಹಿಂದಿರುಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT