ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಯಾ ಹಸಿರು ವ್ಯಾಮೋಹ

Last Updated 23 ಮೇ 2015, 19:30 IST
ಅಕ್ಷರ ಗಾತ್ರ

ಚೆನ್ನೈ (ಪಿಟಿಐ): ಮದ್ರಾಸ್‌ ವಿಶ್ವವಿದ್ಯಾಲಯ ಶತಮಾನೋತ್ಸವ ಸಭಾಂಗಣದಲ್ಲಿ ನಡೆದ ಜಯಲಲಿತಾ ಪ್ರಮಾಣ ವಚನ ಸಮಾರಂಭ ಸಂಪೂರ್ಣ ಹಸಿರುಮಯವಾಗಿತ್ತು.

ಸಂಪೂರ್ಣ ಹಸಿರು ಬಣ್ಣದಿಂದ ಕಂಗೊಳಿಸುತ್ತಿದ್ದ ವೇದಿಕೆಗೆ ಬಂದ ಜಯಲಲಿತಾ ಕೂಡ ದಟ್ಟ ಹಸಿರು ಸೀರೆ, ಗೌನು ತೊಟ್ಟಿದ್ದರು. ಅವರು ರಾಜ್ಯಪಾಲ ರೋಸಯ್ಯ ಅವರಿಗೆ ನೀಡಿದ ಹೂಗುಚ್ಛದ ಹೊದಿಕೆ ಕೂಡ ಹಸಿರು ಬಣ್ಣದ್ದಾಗಿತ್ತು.

ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಅವರು ಸಹಿ ಮಾಡಿದ ಪೆನ್ನು ಮತ್ತು ಶಾಹಿ ಬಣ್ಣ ಕೂಡ ಹಸಿರಾಗಿತ್ತು. ಅವರ ಬೆರಳಲ್ಲಿ ಹೊಳೆಯುತ್ತಿದ್ದ ಪಚ್ಚೆ ಹರಳಿನ ಉಂಗುರು ಕೂಡ ಹಸಿರಾಗಿತ್ತು.

ಜಯಾ  ಪ್ರಾಣ ಸ್ನೇಹಿತೆ  ಶಶಿಕಲಾ ಸೇರಿದಂತೆ  ಪಕ್ಷದ ಮಹಿಳಾ ಕಾರ್ಯಕರ್ತರು ಕೂಡ ಹಸಿರು ಸೀರೆ, ರವಿಕೆ ತೊಟ್ಟು ತಮ್ಮ ನಾಯಕಿಗೆ ಸಾಥ್‌ ನೀಡಿದರು. ಆಪ್ತರ ಪ್ರಕಾರ ಹಸಿರು ಬಣ್ಣವು ಜಯಾ ಅವರ ಅತ್ಯಂತ ಇಷ್ಟದ ಬಣ್ಣವಂತೆ. ಅವರ ಪಾಲಿಗೆ ಶುಭಕಾರಕ ಮತ್ತು ಅದೃಷ್ಟದ ಸಂಕೇತವೂ ಹೌದಂತೆ. 

ಮುಗಿಲು ಮುಟ್ಟಿದ ಸಂಭ್ರಮ:  ಎಐಎಡಿಎಂಕೆ ಕಾರ್ಯಕರ್ತರು, ಜಯಾ ಆಪ್ತರು, ಅಭಿಮಾನಿಗಳು ಸೇರಿದಂತೆ ಮೂರು ಸಾವಿರ ಜನರು ಪ್ರಮಾಣ ವಚನ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ರಾಜ್ಯದ ವಿವಿಧೆಡೆಯಿಂದ ಬೆಳಿಗ್ಗೆಯಿಂದಲೇ ಅಭಿಮಾನಿಗಳು, ಕಾರ್ಯಕರ್ತರು ಚೆನ್ನೈನತ್ತ ತಂಡೋಪತಂಡವಾಗಿ ಬಂದಿದ್ದರು. ಪೋಯಸ್ ಗಾರ್ಡನ್‌ ನಿವಾಸದಿಂದ ಸಮಾರಂಭ ನಡೆದ ಮದ್ರಾಸ್‌ ವಿ.ವಿಯ ಏಳು ಕಿ.ಮೀ  ರಸ್ತೆಯುದ್ದಕ್ಕೂ  ಜನರು ಜಯಾ ಬರುವಿಕೆಗಾಗಿ ಕಾದು ಕುಳಿತಿದ್ದರು.

ರಾಜ್ಯದ ವಿವಿಧೆಡೆ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಎಐಎಡಿಎಂಕೆ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

‘ಪುರಚ್ಚಿ ಥಲೈವಿ ವಾಳ್ಗೆ’ (ಕ್ರಾಂತಿಕಾರಿ ನಾಯಕಿ ನೂರು ಕಾಲ ಬಾಳಲಿ) ಎಂಬ ಘೋಷಣೆಗಳು  ಪ್ರತಿಧ್ವನಿಸಿದವು. ಭದ್ರತೆಗಾಗಿ ಹತ್ತು ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದ್ದರೂ ಜನರನ್ನು ನಿಯಂತ್ರಿಸಲಾಗದೆ  ಪರದಾಡಿದರು.

ಜಯಾ ಮತ್ತೆ ಮುಖ್ಯಮಂತ್ರಿಯಾಗಿರುವುದು, ಮುಂದಿನ ವರ್ಷ ವಿಧಾನಸಭಾ ಚುನಾವಣೆ ಎದುರಿಸಬೇಕಿರುವ ಪಕ್ಷಕ್ಕೆ ರಾಜಕೀಯವಾಗಿ ಬಲ ಬಂದಂತಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT