ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜರ್ಮನಿಯಿಂದ ಜೋಗಪ್ಪನ ಅರಮನೆವರೆಗೂ

Last Updated 27 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಮಗುವೊಂದನ್ನು ದತ್ತು ಪಡೆಯುವ ಪ್ರಕ್ರಿಯೆಯೊಂದಿಗೆ ಆರಂಭವಾದ ಭಾರತದೊಂದಿಗಿನ ನಂಟು ಜರ್ಮನಿಯ ಪ್ರಜೆ ಸಾರಾ ಮ್ಯಾರ್ಕೆಲೆ ಅವರನ್ನು ಇಂಡಾಲಜಿ ಬಗ್ಗೆ ಅಧ್ಯಯನ ಮಾಡಲು ಪ್ರೇರೇಪಿಸಿದೆ. ಮುಂದುವರಿದು ಜೋಗಪ್ಪಗಳ ಬಗ್ಗೆ ಅವರು ಈಗ ಪಿಎಚ್‌.ಡಿ. ಮಾಡುತ್ತಿದ್ದಾರೆ.

ತಾಯಿ, ಇಬ್ಬರು ಮಕ್ಕಳು. ಸಹೋದರ ಅಕಾಲಿಕ ಮರಣ ಹೊಂದುತ್ತಾನೆ. ಮೂರು ಕೊಠಡಿಗಳ ಮನೆ ಸಹೋದರನ ಸಾವಿನ ನಂತರ ಬಿಕೋ ಎನ್ನಲಾರಂಭಿಸುತ್ತದೆ. ಮೂರು ಮಂದಿಗಾಗುವಷ್ಟು ಸೌಕರ್ಯ ಹೊಂದಿದ್ದ ಮನೆಯ ಒಬ್ಬ ಸದಸ್ಯ ಇನ್ನಿಲ್ಲವಾದಾಗ, ಸಹೋದರನಿಗಾಗಿ ಮುಡಿಪಾಗಿದ್ದ ಕೊಠಡಿ ಖಾಲಿಖಾಲಿ ಹೊಡೆಯುತ್ತಿರುತ್ತದೆ. ತಮ್ಮಲ್ಲಿ ಹೆಚ್ಚಿಗೆ ಇರುವುದು ಮತ್ತೊಬ್ಬರಿಗೆ ನೀಡಿದರೆ ಅನುಕೂಲವಾಗುತ್ತದೆ ಎಂಬುದನ್ನು ಅರಿತು ಸೌಕರ್ಯದ ಅವಶ್ಯಕತೆ ಇರುವ ಮಗುವಿಗೆ ವಿಶ್ವದ ನಾನಾ ಕಡೆ ಹುಡುಕಾಟ ನಡೆಸುತ್ತಾರೆ ಜರ್ಮನಿಯ ಉತ್ತರ ಬವೇರಿಯಾದ ಕೋಬರ್ಗ್‌ನ ಸಾರಾ ಮ್ಯಾರ್ಕೆಲೆ ಮತ್ತು ಮ್ಯಾರ್ಕೆಲೆ.

ಆದರೆ, ತಂದೆಯಿಲ್ಲ ಎಂಬುದು ಸೇರಿದಂತೆ ನಾನಾ ಕಾರಣಗಳಿಂದ ಮಗುವೊಂದನ್ನು ದತ್ತು ಪಡೆಯುವ ಕಾರ್ಯ ಅವರಿಗೆ ಸಾಧ್ಯವಾಗುವುದಿಲ್ಲ. ಈ ನಡುವೆ ಕೋಬರ್ಗ್‌ನಲ್ಲಿ ಪಕ್ಕದ ಮನೆಯವರೊಬ್ಬರಿಂದ ಹಿಮಾಚಲದ ಪ್ರದೇಶದ ಧರ್ಮಶಾಲಾ ಬಳಿಯ ಗ್ರಾಮೊಂದರಲ್ಲಿ ಹೆಣ್ಣು ಮಗುವೊಂದು ದತ್ತು ಸಿಗುತ್ತದೆ ಎಂಬ ಸುದ್ದಿ ತಿಳಿದು, ಸಾರಾ ಮತ್ತು ಮ್ಯಾರ್ಕೆಲೆ 2000ದಲ್ಲಿ ಭಾರತಕ್ಕೆ ಬರುತ್ತಾರೆ.

ಈ ಭೇಟಿ ಮುಂದೆ ಸಾರಾ–ಭಾರತದೊಂದಿಗಿನ ನಂಟು ಬೆಳೆಯಲು ಕಾರಣವಾಗುತ್ತದೆ. ಆರು ಮಕ್ಕಳಲ್ಲಿ ಒಬ್ಬಳಾದ ಏಳು ವರ್ಷದ ದೋಲ್ಕರ್‌ ಲಾಮೊ ಅವರನ್ನು ದತ್ತು ಪಡೆಯುವ ಪ್ರಕ್ರಿಯೆ 2002ರಲ್ಲಿ ಪೂರ್ಣಗೊಳ್ಳುತ್ತದೆ. ಅಂದಿನಿಂದ ಇಲ್ಲಿಯವರೆಗೆ ಸುಮಾರು 10ಕ್ಕೂ ಹೆಚ್ಚು ಭಾರಿ ಭಾರತಕ್ಕೆ ಭೇಟಿ ನೀಡಿರುವ ಸಾರಾ, ಇಂಡಾಲಜಿ (ಭಾರತೀಯ ಸಂಸ್ಕೃತಿ, ಧರ್ಮ, ರಾಜಕೀಯ) ವಿಷಯದಲ್ಲಿ ಪದವಿ ಪಡೆದಿದ್ದಾರೆ. ಭಾರತದ ಹಿಜಡಾಗಳ ಬಗ್ಗೆ ಎಂ.ಫಿಲ್‌ ಪದವಿ ಪಡೆದಿದ್ದಾರೆ. ಸದ್ಯ ಉತ್ತರ ಕರ್ನಾಟಕದಲ್ಲಿರುವ ಜೋಗಪ್ಪಂದಿರ ಬಗ್ಗೆ ಪಿಎಚ್‌.ಡಿ ಮಾಡುತ್ತಿದ್ದಾರೆ.

ಜರ್ಮನಿಯ ಬ್ಯಾಂಬರ್ಗ್‌ನಲ್ಲಿರುವ ಮ್ಯಾಕ್ಸಿಮಿಲಿಯಾನ್ಸ್‌ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕಿ­ಯಾಗಿ ಕಾರ್ಯನಿರ್ವಹಿಸುತ್ತಿರುವ ಸಾರಾ, 2014ರ ಸೆಪ್ಟೆಂಬರ್‌ನಿಂದ ಫೆ.17ರ ವರೆಗೆ   ಕರ್ನಾಟಕದ ಹಂಪಿ, ಕೊಪ್ಪಳ, ಬಳ್ಳಾರಿ, ಧಾರವಾಡ ಮತ್ತು ಬೆಳಗಾವಿಯ ವಿವಿಧೆಡೆ ಸುತ್ತಿ ಜೋಗಪ್ಪಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ.

ಜೋಗಪ್ಪಗಳ ಬದುಕು ದುರ್ಬರ
ಯಾವುದೋ ಕಾರಣಕ್ಕೆ ಜೋಗಪ್ಪಗಳಾಗುವ ಸಾಕಷ್ಟು ಮಂದಿ ಹೊಟ್ಟೆಗಿಲ್ಲದೇ ಪಡಿಪಾಟಲು ಪಡುತ್ತಾರೆ. ಜೋಗಪ್ಪ ಆದವರಿಗೆ ಮನೆ ಇರುವುದಿಲ್ಲ. ಮನೆಯಿಂದ ಹೊರಹಾಕಲಾಗುತ್ತದೆ. ಬಹುತೇಕರು ತಮ್ಮ ಊರನ್ನೂ ಬಿಟ್ಟು ನಡೆಯುತ್ತಾರೆ. ಇದೇ ಕಾರಣಕ್ಕಾಗಿ ಅವರಿಗೆ ಬಹುತೇಕ ಸಂದರ್ಭದಲ್ಲಿ ಯಾವುದೇ ಕೆಲಸ ಸಿಗುತ್ತಿಲ್ಲ. ಹೊಟ್ಟೆಪಾಡಿಗಾಗಿ ಕೆಲವರು ಲೈಂಗಿಕ ಚಟುಚಟಿಕೆಗಳಲ್ಲಿ ತೊಡಗುತ್ತಾರೆ. ಸಮಾಜದ ಮೂದಲಿಕೆಗೆ ಒಳಗಾಗುವ ಈ ಅಲ್ಪಸಂಖ್ಯಾತರಿಗೆ  ಸರ್ಕಾರ, ಸಂಘ–ಸಂಸ್ಥೆಗಳಿಂದಲೂ ನಿರೀಕ್ಷಿತ ಪ್ರಮಾಣದ ಬೆಂಬಲ ಸಿಗುತ್ತಿಲ್ಲ.

‘ವಿಶ್ವದ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎಂದು ಹೇಳಿಕೊಳ್ಳುವ ಭಾರತ ಇಂಥ ನಿರ್ಲಕ್ಷಿತ ಸಮುದಾಯಗಳ ಬಗ್ಗೆ ಕಾಳಜಿ ಇಟ್ಟುಕೊಳ್ಳಬೇಕು. ಆದರೆ, ಕೆಲವು ಕಡೆ ಈ ಜನರನ್ನು  ಪ್ರಾಣಿಗಳಿಗಿಂತಲೂ ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತಿದೆ’ ಎನ್ನುತ್ತಾರೆ ಸಾರಾ ಮ್ಯಾರ್ಕೆಲೆ.

ಪಿಎಚ್‌.ಡಿ ನಿರ್ಧಾರದಿಂದ ಹಿಂಜರಿಯಲಾರೆ
ಇತ್ತೀಚೆಗೆ ಭಾರತದಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ನಾನೂ ನಂಬಿದವರಿಂದಲೇ ಸಾಕಷ್ಟು ಬಾರಿ ಅನುಚಿತ ವರ್ತನೆಯಿಂದ ಬೇಸತ್ತಿದ್ದೇನೆ. ಜೋಗಪ್ಪಗಳನ್ನು ಭೇಟಿ ಮಾಡಲು ಹೊರಹೋದಾಗ ಸಹಾಯಕ್ಕೆ ಬರುತ್ತಿದ್ದ ಕೆಲವರು ಅತ್ಯಂತ ಕೆಟ್ಟದಾಗಿ ವರ್ತಿಸಿದ್ದಾರೆ. ಈ ಥರದ ಅನುಭವ ಜರ್ಮನಿಯಲ್ಲಿ ನನಗೆ ಆಗಿಲ್ಲ. ಒಮ್ಮೊಮ್ಮೆ ಜೋಗಪ್ಪಗಳ ಬಗ್ಗೆ ಪಿಎಚ್‌.ಡಿ. ಮಾಡುವ ನಿರ್ಧಾರ ಸರಿ ಎನ್ನಿಸಿದೆ. ಏಕೆಂದರೆ ಅವರು ಪುರುಷರಲ್ಲದೇ ಇರುವುದು! ಎನ್ನುತ್ತಾರೆ ಸಾರಾ.

ದೋಲ್ಕರ್ ಲಾಮೊ  ಡಾಕ್ಟರ್‌ ಆಗಬೇಕಂತೆ...
ಭಾರತದ ದೋಲ್ಕರ್‌ ಲಾಮೊ ಈಗ ಜರ್ಮನಿ ಪ್ರಜೆ. ಕಾಲೇಜು ಶಿಕ್ಷಣ ಪಡೆಯುತ್ತಿರುವ ಆಕೆ, ಡಾಕ್ಟರ್‌ ಆಗುವ ಗುರಿ ಇಟ್ಟುಕೊಂಡಿದ್ದಾಳೆ. ಹಿಂದಿ ಭಾಷೆ ಆಕೆಗೆ ಬರುವುದಿಲ್ಲ. ತಂದೆ–ತಾಯಿ, ಸಹೋದರ–ಸಹೋದರಿಯನ್ನು ಭೇಟಿ ಮಾಡಲು ಆಗಾಗ್ಗೆ ಆಕೆಯನ್ನು ಭಾರತಕ್ಕೆ ಕರೆದುಕೊಂಡು ಬರುತ್ತೇವೆ. ದೋಲ್ಕರ್‌ ಮಡಿಲಿಗೆ ಬರುವುದರೊಂದಿಗೆ ಭಾರತದ ಸಂಸ್ಕೃತಿಯ ವಿವಿಧ ಮಜಲುಗಳನ್ನು ಅರಿಯುವಂತಾಗಿದೆ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT