ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲಕ್ಷಾಮದ ಗೋಳು

ನೀರಿನ ಬವಣೆ : ನಿವಾರಣೆಗಿದೆ ಉಪಾಯ
Last Updated 18 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಪುಟಾಣಿ ಮಕ್ಕಳಿಂದ ಆರಂಭಿಸಿ ನಾಡಿನ ಎಲ್ಲರಲ್ಲಿ ಜಲ ಸಂರಕ್ಷಣೆಯ ಜಾಗೃತಿ ಅಗತ್ಯವಿದೆ. ನಲ್ಲಿಯಲ್ಲಿ ನೀರಿಲ್ಲದಾಗ, ಕೆರೆ ಒಣಗಿದಾಗ ಬೊಬ್ಬೆ ಹೊಡೆಯುವುದಕ್ಕಿಂತ ಜಲಸಾಕ್ಷರತೆ ಮೂಡಿಸಿ ನೀರ ನೆಮ್ಮದಿಯ ದಾರಿ ಅನುಸರಿಸಬೇಕಾಗಿದೆ. ಬನ್ನಿ, ಕೆರೆಯ ಹೂಳಿನಂತೆ ಸ್ವಲ್ಪ ತಲೆಯ ಹೂಳು ತೆಗೆಯೋಣ.

ಉತ್ತರ ಕನ್ನಡ ಜಿಲ್ಲೆಯ ಚಿನ್ನಾಪುರದ ಕೆರೆಯಲ್ಲಿ ಚಿನ್ನದ ರಥ ಹೂತು ಹೋಗಿದೆಯೆಂಬ ಪ್ರತೀತಿ ಇದೆ. ಹತ್ತು ವರ್ಷ ಹಿಂದೆ ಕೆರೆಯ ಹೂಳು ತೆಗೆಯುವ ಕೆಲಸ ನಡೆಯುತ್ತಿತ್ತು. ಕೂಲಿಕಾರರ ಯಾವ ಸಲಾಕೆ ಹೊಡೆತಕ್ಕೆ ಹುಗಿದ ರಥ ಸಿಗ­ಬಹುದು? ರಥ ಎಷ್ಟು ಕ್ವಿಂಟಲ್ ತೂಗಬಹುದು? ಎಂದೆಲ್ಲ ಜನಪದರ ಕತೆ ನಂಬಿದ­ವರು ಮಾತಾಡುತ್ತಿದ್ದರು. ಕೆರೆಯಲ್ಲಿ ಚಿನ್ನದ ರಥ ಹೂತು ಹೋಗಿದ್ದು ನಿಜವೋ? ಕಟ್ಟು ಕತೆಯೋ!? ಕೆರೆ, ಕಟ್ಟೆಗಳಲ್ಲಿ ಅಪಾರ ಪ್ರಮಾಣದ ಹೂಳು ತುಂಬಿದ್ದರಿಂದ ಬಂಗಾರ­ದಂಥ ಕೃಷಿ ಭೂಮಿ ಒಣಗುತ್ತಿ­ರುವು­ದಂತೂ ಸತ್ಯ. ಊರಿಗೊಂದು ಕೆರೆ, ಕೆರೆಗೊಂದು ಚೆಂದದ ಕತೆ... ರಾಜ್ಯದ ಯಾವ ಪ್ರದೇಶಕ್ಕೆ ಹೋದರೂ ಇಂಥ ಸ್ವಾರಸ್ಯಕರ ಸಂಗತಿಗಳು ಸಿಗುತ್ತವೆ.

ರಾಜ್ಯದ ಪುರಾತನ ಕೆರೆಗಳಲ್ಲಿ ಕದಂಬರ ಗುಡ್ಡ ತಟಾಕ ಮೊದಲ ಸಾಲಿ ನಲ್ಲಿ ನಿಲ್ಲುತ್ತದೆ. ಗುಡ್ಡದ ತುದಿಯಿಂದ ಕಣಿವೆಯಲ್ಲಿ ಹರಿಯುವ ನೀರಿಗೆ ಅರ್ಧ ವೃತ್ತಾಕಾರದಲ್ಲಿ ಮಣ್ಣಿನ ಕಟ್ಟೆ ಕಟ್ಟುವ ಸರಳ ವಿದ್ಯೆಯಿದು. ಕಾಂಕ್ರೀಟ್ ಯುಗದ ನಮಗೆ ಮಣ್ಣಿನ ಕೆರೆದಂಡೆಯ ತಾಕತ್ತಿನ ಬಗೆಗೆ ಅನುಮಾನ ಸಹಜ. ತಂತ್ರಜ್ಞರಂತೂ ಕಣಿವೆಯಲ್ಲಿ ಹೊಸ ಕೆರೆ ನಿರ್ಮಿಸಿದ ಬಳಿಕ ಅದು 50 ವರ್ಷ ಮಾತ್ರ ಬಾಳಿಕೆ ಬರಬಹುದು ಎನ್ನುತ್ತಾರೆ.

ಶಿಕಾರಿಪುರದ ತಾಳಗುಂದದಲ್ಲಿ ಪ್ರಣವೇಶ್ವರ ಗುಡಿಯಿದೆ. ಅಲ್ಲಿ ಕಾಕುತ್ಸವರ್ಮನ ಶಾಸನವಿದೆ. ಗುಡಿ ನಿರ್ಮಿಸಿ ಅದರ ಪಕ್ಕದಲ್ಲಿ ಕೆರೆ ನಿರ್ಮಿಸಲಾಗಿದೆಯೆಂದು ಬರೆಯಲಾಗಿದೆ.  ೧೭೦೦ ವರ್ಷಗಳ ಹಿಂದೆ ಕದಂಬರ ಕಾಲದ ಗುಡಿ ಪಕ್ಕದ ಗುಡ್ಡ ತಟಾಕ ಈಗಲೂ ಚೆನ್ನಾಗಿದೆ. ಬೇಸಿಗೆ ಭತ್ತದ ಬೆಳೆಗೆ ನೀರು ನೀಡುತ್ತಿದೆ!

ಕಲ್ಯಾಣ ಚಾಲುಕ್ಯರ ಕಾಲವನ್ನು ಕೆರೆಗಳ ಸ್ವರ್ಣ ಯುಗವೆಂದು ಗುರುತಿಸಿದ ನೆಲ ನಮ್ಮದು. ಅಸಂಖ್ಯಾತ ಕೆರೆಗಳು ಈ ಕಾಲದಲ್ಲಿ ನಿರ್ಮಾಣವಾಗಿವೆ. ಆದಿಲ್ ಷಾಹಿಗಳ ಕಾಲದ ವಿಜಾಪುರದ ಬಾವಡಿ, ಬೀದರ್‌ ಕೋಟೆಯ ಬಾವಿ, ಜಮಖಂಡಿ ಅರಮನೆ ಹಿಂಭಾಗದ ಬೆಟ್ಟಗಳಲ್ಲಿ ಬೆರಗಿನ ರಚನೆಗಳಿವೆ. ಅಬ್ಬರದ ಮಳೆ ಸುರಿಯುವ ಮಲೆನಾಡು ಇಕ್ಕೇರಿಯಲ್ಲಿ ನೀರಿನ ಸಮಸ್ಯೆ ಇತ್ತೆ? ರಾಜ್ಯವಾಳಿದ ಎರಡನೇ ಸದಾಶಿವ ನಾಯಕ (೧೫೧೨–-೪೬) ರಾಜಧಾನಿಯ ಸುತ್ತ ಕಟ್ಟಿರುವ ೧೪ ಕೆರೆಗಳು ಇಂದಿಗೂ ಬಳಕೆಯಲ್ಲಿವೆ.

೧೭-–೧೮ನೇ ಶತಮಾನದಲ್ಲಿ ಚಿತ್ರದುರ್ಗದ ಪಾಳೆಯಗಾರರು ಜೋಗಿಮಟ್ಟಿ ಬೆಟ್ಟದ ಮಳೆ ನೀರು ದೊಡ್ಡಣ್ಣನ ಕೆರೆ, ತಿಮ್ಮಣ್ಣ ನಾಯಕನ ಕೆರೆ, ಸಣ್ಣಕೆರೆ, ಕೆಳಗಿನಕೆರೆ, ಡಬಡಬ, ವಡ್ಡುಗಳಲ್ಲಿ ಸಂಗ್ರಹವಾಗುವಂತೆ ಸರಣಿ ರಚಿಸಿದವರು. ಈ ಜಲಾಶಯದಲ್ಲಿ ನೀರು ತುಂಬಿದ ಬಳಿಕ ಕೋಟೆಯ ಕಂದಕಕ್ಕೆ ಬೀಳುವ ವ್ಯವಸ್ಥೆ ಮಾಡಿದವರು, ಸಂತೆಹೊಂಡ ಬತ್ತದಂತೆ ತಂತ್ರ ರೂಪಿಸಿದವರು. ರಾಜ್ಯದ ಕೋಟೆ ಕೆರೆಯ ರಚನೆಗಳನ್ನು ನೋಡುತ್ತ ಹೋದರೆ ಸಂರಕ್ಷಣೆಯ ವಿಸ್ಮಯವ ಅರಿಯಬಹುದು. ರಾಜ್ಯದ ಗಿರಿದುರ್ಗ, ವನದುರ್ಗಗಳಲ್ಲಿ ನೀರಿರುವ ಕೆರೆಗಳು ಎತ್ತರದ ಗುಡ್ಡಗಳಲ್ಲಿವೆ.

ಬರಗಾಲ, ಜಲ ಕ್ಷಾಮಗಳು ಪಾಠಗಳನ್ನು ಶತಮಾನಗಳಿಂದ ವಿವಿಧ ಮುಖದಲ್ಲಿ ನೀಡಿವೆ. ವಿದ್ಯುತ್ ಪಂಪು, ಕೊಳವೆ ಬಾವಿಗಳಿಲ್ಲದ ಕಾಲದಲ್ಲಿ ಜನ ಮಣ್ಣಿನಲ್ಲಿ ಮಾದರಿ ಹುಡುಕಿದ್ದಾರೆ. ಬಹತ್ತರ್ (೧೯೭೨ನೇ ಇಸ್ವಿ) ಬರ ಹೈದರಾಬಾದ್ ಕರ್ನಾಟಕವನ್ನು ಕಾಡಿದ ಸಂದರ್ಭದಲ್ಲಿ ಊರೆಲ್ಲ ಗುಳೆ ಹೋಗಿತ್ತು. ಜಾನುವಾರುಗಳನ್ನು ಗುಲ್ಬರ್ಗ ಕೃಷಿಕರು ಕೊಪ್ಪಳ ಸೀಮೆಗೆ ಹೊಡೆದಿದ್ದರು.

ಇಂಥ ಕ್ಷಾಮದ ಕಾಲದಲ್ಲಿಯೂ  ಗುಲ್ಬರ್ಗದ ಗಡಿ ಕಾಡಿನ ಗೊಟ್ಟಂಗೊಟ್ಟ ಗುಡ್ಡದ ಕಲ್ಲುಬಂಡೆಯ ಸಣ್ಣ ಝರಿಯ ನೀರು ಬತ್ತಲಿಲ್ಲ. ಅಲ್ಲಿನ ದೇಗುಲದಲ್ಲಿ ಭಕ್ತರು ಈ ನೀರು ನಂಬಿ ಬದುಕಿದ್ದರು. ಸುಮಾರು ಎರಡು ಶತ­ಮಾನ­ಗಳ ಹಿಂದೆ ಬಕ್ಕಪ್ರಭುಗಳ ತಪಸ್ಸಿನ ತಾಣವಿದು. ನೀರು ದೊರೆಯುವ ಈ ಸಿದ್ಧಗೊಂಡ ಪವಿತ್ರ ತಾಣವಾಗಿದೆ.  ಕ್ಷಾಮದಲ್ಲಿ ನೀರು ನೀಡಿದ ತಾಣವನ್ನು ಪ್ರೀತಿಸುವ, ಪೂಜಿಸುವಲ್ಲಿ ಸಂರಕ್ಷಣೆಯ ಸೂತ್ರವಿದೆ.

ದೇವರ ಗುಡಿ ಸನಿಹ ಕೆರೆ ನಿರ್ಮಿಸುವುದು, ಪೂಜೆಗೆ ನೀರು ಬಳಸುವುದು, ಹೊಲದ ಬಯಲಿಗೆ  ಆ ನೀರುಣಿಸಿ ದೇಗುಲಕ್ಕೆ ಬಂದ ಭಕ್ತರಿಗೆ ದಾಸೋಹ ನಡೆಸಿದವರು ಹೊಯ್ಸಳ ಅರಸು ವಿಷ್ಣುವರ್ಧನರ ದಂಡನಾಯಕ ಗಂಗಪ್ಪಯ್ಯ!  ನೀರಿನ ಮೂಲಕ ಊರು ಕಟ್ಟಿದ ಮಾದರಿಗಳು ಚರಿತ್ರೆಯಲ್ಲಿ ಸಿಗುತ್ತವೆ. ಕೃಷಿಕರು, ಶಾನಭೋಗರು, ಪಟೇಲರು, ರಾಜ ರಾಣಿಯರು, ಸೂಳೆಯರು ಕೆರೆ ಕಟ್ಟಿದ್ದಾರೆ.

ನಾಯಕನಹಟ್ಟಿಯ ತಿಪ್ಪೇಸ್ವಾಮಿ, ನೀರು ಹಿಡಿಯುವ ವಿದ್ಯೆಯನ್ನು ಬರದ ಸೀಮೆಗೆ ಸಾರಿದ ಮಹಾನ್ ಸಂತರು. ನಾಡು ಇಂದಿಗೂ ಅವರನ್ನು ನೆನಪಿಸಿಕೊಳ್ಳುತ್ತಿದೆ. ಕಾಡು ಎಂದರೆ ನೀರು, ನೀರು ಎಂದರೆ ಅನ್ನ, ಅನ್ನವೆಂದರೆ ಪ್ರಾಣವೆಂದು ಚರಿತ್ರೆ ಸಾರಿ ಸಾರಿ ಹೇಳಿದೆ. ನದಿಯಂಚಿನಲ್ಲಿ ಕೃಷಿ ಬದುಕು ಆರಂಭಿಸಿದ ನಾವು ಸಾಮ್ರಾಜ್ಯ ವಿಸ್ತರಿಸಿ ಗುಡ್ಡದ ತುದಿ ತಲುಪಿದ್ದೇವೆ. ನಾವಿದ್ದಲ್ಲಿ ನೀರು ಬರಬೇಕೆಂದು ಬಯಸಿದ್ದೇವೆ. ಕೆರೆ-ಕಾಡು ಮರೆತು ಪಂಪು, ಪೈಪು, ಬೋರ್‌ವೆಲ್‌ಗಳನ್ನು ಬಹಳ ನಂಬಿದ್ದೇವೆ. ಕಾಂಕ್ರೀಟ್ ಬಡಾವಣೆಗಳನ್ನು ಕಟ್ಟುತ್ತ ಮಣ್ಣಿಗೆ ನೀರು ಇಂಗದಂತೆ ಮಾಡಿದ್ದೇವೆ. ಜಲಮೂಲಗಳ ಮಹತ್ವ ಮರೆತಿದ್ದೇವೆ.

ಕಾಡಿನ ಮರ ಕಡಿದು, ಗುಡ್ಡದ ಕಲ್ಲು ಒಡೆದು, ದಂಡೆಯ ಮರಳು ಸಾಗಿಸುವ ವ್ಯವಹಾರದಲ್ಲಿ ಮುಳುಗಿದ ಬಳಿಕ ಕಾಡೇ ನದಿಗಳ ತಾಯಿ, ನದಿ ನಾಡಿನ ಜೀವನಾಡಿ ಎಂಬುದು ಮರೆತು ಹೋಗಿದೆ. ಬೇಸಿಗೆ ಶುರುವಾದರೆ ಜೋರಾಗುವ ನೀರಿನ ಸಮಸ್ಯೆಗಳು, ನದಿ ಜಗಳಗಳು ಮಳೆ ಬಂದಾಗ ಮರೆತು ಹೋಗುತ್ತವೆ.

ರಾಜ್ಯದಲ್ಲಿ ೨೦೦ ಮಿಲಿ ಮೀಟರ್ ಮಳೆ ಸುರಿಯುವ ಪ್ರದೇಶದಿಂದ ೬೦೦೦ ಮಿಲಿ ಮೀಟರ್ ಮಳೆ ಬರುವ ನೆಲೆಯಿದೆ. ಪ್ರದೇಶಕ್ಕೆ ತಕ್ಕ ಪರಂಪರೆಯ ಸಂರಕ್ಷಣಾ ವಿಧಾನಗಳಿವೆ, ಕೃಷಿ ಬೆಳೆ ವಿಧಾನಗಳಿವೆ. ಕೆರೆಯಲ್ಲಿ ಹೂಳು ತುಂಬಿದಂತೆ ನಮ್ಮ ತಲೆಯಲ್ಲಿ ನೈಸರ್ಗಿಕ ಸಂಪತ್ತಿನ ಬಗೆಗೆ ಅಜ್ಞಾನ, ನಿರ್ಲಕ್ಷ್ಯ ತುಂಬಿದೆ.

ಜಲಜಾಗೃತಿಗೆ ಕಾಲಾಳುಗಳು ಬೇಕು: ಒಂದು ಚದರ ಮೀಟರ್ ಜಾಗದಲ್ಲಿ ಒಂದು ಮಿಲಿ ಮೀಟರ್ ಮಳೆ ಸುರಿದರೆ ಒಂದು ಲೀಟರ್ ನೀರಾಗುತ್ತದೆ. ಮಲೆನಾಡಿನ ಒಂದು ಎಕರೆಯಲ್ಲಿ ೮೦ ಲಕ್ಷದಿಂದ ೧.೨೫ ಕೋಟಿ ಲೀಟರ್ ಮಳೆ ನೀರು ಸುರಿಯುತ್ತದೆ. ತಗ್ಗಿನತ್ತ ಓಡಿ ನದಿ ಸೇರುತ್ತದೆ. ೧೦ರಿಂದ ೪೫ ಲಕ್ಷ ಲೀಟರ್ ಸುರಿಯುವ ಪ್ರದೇಶಗಳು ಬಯಲು ನಾಡಿನಲ್ಲಿವೆ. ಇಲ್ಲಿ ಕಾಲಕ್ಕೆ ಮಳೆ ಸುರಿಯದಿದ್ದರೂ ಯಾವುದೇ ಸಂದರ್ಭದಲ್ಲಿ ಅಬ್ಬರದ ಆಲಿಕಲ್ಲು ಮಳೆ ಬರಬಹುದು. ಕೆರೆ ಕಾಲುವೆ ಮುಚ್ಚಿದೆ, ಕೆರೆ ಪಾತ್ರಗಳಲ್ಲಿ ಹೂಳು ತುಂಬಿ ನೀರು ಹಿಡಿಯಲು ಎಲ್ಲಿಯೂ ಪಾತ್ರೆಗಳಿಲ್ಲ. ಬೃಹತ್ ನೀರಾವರಿ ಪ್ರದೇಶಗಳಲ್ಲಂತೂ ವಾಣಿಜ್ಯ ಬೆಳೆ ಆರ್ಭಟಕ್ಕೆ ಕೆರೆಗಳು ಕಣ್ಮರೆಯಾಗಿವೆ.

ಮನೆಯ ಚಾವಣಿ, ಅಂಗಳ, ಹಿತ್ತಲಿನಲ್ಲಿ ಮಳೆ ಸುರಿಯುತ್ತಿದೆ. ಎಲ್ಲೋ ಬಿದ್ದ ನೀರು ರಸ್ತೆಯ ಕಾಲುವೆಗುಂಟ ಕಣ್ಣೆದುರು ಓಡುತ್ತಿದೆ. ಬಿದ್ದ ಹನಿಯನ್ನು ಬಿದ್ದಲ್ಲೇ ಇಂಗಿಸುವ ಸಣ್ಣ ಕೆಲಸ ಆರಂಭಿಸಿದರೂ ನಮ್ಮ ಬಹು ದೊಡ್ಡ ಸಮಸ್ಯೆ ಪರಿಹಾರವಾಗುತ್ತದೆ. ತುಮಕೂರು ಜಿಲ್ಲೆಯ ಗುಬ್ಬಿಯ ಅತ್ತಿಕಟ್ಟೆ ಹಳ್ಳಿಯ ಕೆಲವು ಮನೆಗಳವರು ಕಳೆದ ವರ್ಷದ ಮಳೆನೀರು ಶೇಖರಿಸಿ ಕುಡಿಯುವ ಮಾದರಿ ಮಾರ್ಗ ಅನುಸರಿಸಿದ್ದಾರೆ. ಇದೇ ಜಿಲ್ಲೆಯ ಸಿದ್ದನಕಟ್ಟೆಯ ಕೆಲವರು ವರ್ಷದಿಂದ ಚಿಕ್ಕನಾಯಕನ ಹಳ್ಳಿಯಿಂದ ದುಡ್ಡು ಕೊಟ್ಟು ಕುಡಿಯುವ ನೀರು ಖರೀದಿಸುತ್ತಿದ್ದಾರೆ!

ನೀರು ನಂಬಿದವರು ಅಕ್ಕಪಕ್ಕದ ಮಾದರಿ ತಿಳಿಯದಿದ್ದರೆ ಹೇಗೆ? ಮನೆ ಮನವನ್ನು ತಲುಪಿ ಮಾದರಿ ಪರಿಚಯಿಸಿ ನಿರ್ಮಾಣದ ಪರಿಣತರನ್ನು ನೀಡಿದಾಗ ಮಾತ್ರ ಸಂರಕ್ಷಣೆಯ ಕಾರ್ಯ ವೇಗ ಪಡೆಯುತ್ತದೆ. ಮನೆಯಿಂದ ಮನೆಗೆ, ಊರಿನಿಂದ ಊರಿಗೆ ಹಬ್ಬುತ್ತದೆ. ಜಲ ಭವಿಷ್ಯ ಬದಲಿಸುವ ಜಾಗೃತಿಗೆ ಊರೂರಿಗೆ ಕಾಲಾಳುಗಳು ಬೇಕಾಗಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT