ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲವರ್ಣದ ಕಲೆಗಾರ!

ಕಲಾಪ
Last Updated 26 ನವೆಂಬರ್ 2015, 19:30 IST
ಅಕ್ಷರ ಗಾತ್ರ

ಮಂಜಿನ ಹಾಸಿನ ಮೇಲೆ ಚೆಂದಗೆ ಮನ ಸೆಳೆವ ಪುಟ್ಟ ಮನೆ, ಬೆಳ್ಳಗೆ ಕಾಣುವ ಮರಗಿಡಗಳ ಅಂದ,  ಅಲ್ಲಲ್ಲಿ ಇಣುಕಿ ನೋಡುವ ಹಸಿರಿನ ಮಧ್ಯೆ ತೆರೆದುಕೊಳ್ಳುವ ನೀಲ ಆಕಾಶ, ಪಕ್ಕದಲ್ಲೇ ಸಂವಾದಕ್ಕಿಳಿದಿರುವ ಬಾತುಕೋಳಿಗಳ ಹಿಂಡು, ಕಣ್ಸೆಳೆವ ಹಂಪಿ ವೈಭವ...

ಒಂದಾದ ಮೇಲೊಂದರಂತೆ ಮನಸೆಳೆವ ಈ ಚಿತ್ರಗಳು ಮೂಡಿದ್ದು ರಾಮದಾಸ ಎಂ. ಅವರ ಕಲಾಕುಂಚದಲ್ಲಿ. ಛಾಯಾಚಿತ್ರವೋ, ಕುಂಚದಲ್ಲಿ ಅರಳಿದ  ಚಿತ್ರಗಳೋ ಎಂದು ಅನುಮಾನ ಹುಟ್ಟಿಸುವಷ್ಟು ಅಂದವಾಗಿ ಅವರು ಚಿತ್ರ ರಚಿಸಬಲ್ಲರು. ಸ್ಪಾಟ್‌ ಪೇಂಟಿಂಗ್‌ ಅಥವಾ ಚಿತ್ರಗಳನ್ನು ಖುದ್ದಾಗಿ ತಾವೇ ಕ್ಲಿಕ್ಕಿಸಿ ನಂತರ ಅವುಗಳನ್ನು ಪೇಪರ್‌ ಮೇಲೆ ಚಿತ್ರವಾಗಿಸುತ್ತಾರೆ ರಾಮದಾಸ್‌.

ನೀರ ತೋಯುವಿಕೆಯಲ್ಲಿ ಪಾಚಿಗಟ್ಟಿದ ಬಂಡೆಗಲ್ಲು, ಹರಿವ ಹಾಲ್ಝರಿ, ಅಲ್ಲಲ್ಲಿ ತಲೆ ಎತ್ತಿರುವ ಗಿಡಗಳು ಎಳೆಯ ಎಲೆ ಚಿಗುರಿಸಿ ನಗುತ್ತಿವೆ. ಸಮುದ್ರದಂಚಲ್ಲಿ ಸರತಿ ಸಾಲಲ್ಲಿ ನಿಂತ ಹಳೆಯ ದೋಣಿಗಳಿಗೂ ಬಣ್ಣಗಳ ಮೆರುಗು, ಹಸಿರ ದಟ್ಟ ಅರಣ್ಯದಲ್ಲಿ ಸಾಗುವ ಪುಟ್ಟ ದಾರಿ, ಒಣಗಿದ ಹುಲ್ಲುಗಳ ಪಕ್ಕದಲ್ಲೇ ಹಾರಾಟ ಯಾನ ಹೊರಟಿರುವ ಜೋಡಿ ಹಕ್ಕಿ... ಹೀಗೆ ರಾಮದಾಸ ಅವರ ಚಿತ್ರಗಳ ತುಂಬೆಲ್ಲಾ ವೇದ್ಯವಾಗುವುದು ಪ್ರಕೃತಿ ಪ್ರೀತಿ.

ಕೇರಳದ ಹಸಿರ ಸಮೃದ್ಧಿಯಲ್ಲೇ ಹುಟ್ಟಿ ಬೆಳೆದ ಅವರಿಗೆ ಮೊದಲಿನಿಂದಲೂ ನಿಸರ್ಗದ ಬಗ್ಗೆ ಅಪಾರವಾದ ಪ್ರೀತಿ. ಚಿಕ್ಕಂದಿನಿಂದಲೂ  ಕಲೆಯ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದ  ರಾಮದಾಸ ‘ತಮಗೆ ಕಲೆ ಹುಟ್ಟಿನಿಂದಲೇ ಪ್ರಾಪ್ತವಾಗಿದೆ’ ಎಂದು ನಂಬಿದ್ದಾರೆ. ‘ವಿಶ್ವಕರ್ಮ ಸಮುದಾಯದವರಾದ್ದರಿಂದ ಕಲೆ ವಂಶಪಾರಂಪರ್ಯವಾಗಿ ತನ್ನೊಳಗೆ ಬೇರೂರಿತು’ ಎಂದು ಭಾವಿಸಿರುವ ಅವರು ಬಾಲ್ಯದಿಂದಲೇ ಪೇಂಟಿಂಗ್‌ ಸ್ಪರ್ಧೆಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳುತ್ತಿದ್ದರು. ಪೇಪರ್‌ ಪೆನ್‌ಗಳ ಮೇಲೆ ಅಂದದ ಚಿತ್ರ ಮೂಡಿಸಿ ಮೆಚ್ಚುಗೆ ಗಳಿಸುತ್ತಿದ್ದರು.

ಆಸಕ್ತಿಯ ದಾರಿಯಲ್ಲೇ ಹೆಜ್ಜೆ ಇಟ್ಟ ಅವರು ಪಿಯುಸಿ ಮುಗಿಯುತ್ತಿದ್ದಂತೆ ಕೇರಳದ ‘ಬ್ರಶ್‌ಮ್ಯಾನ್‌ ಸ್ಕೂಲ್‌ ಆಫ್‌ ಆರ್ಟ್ಸ್‌’ನಲ್ಲಿ ಪದವಿ ಪಡೆದರು. ನಂತರ ಬೆಂಗಳೂರಿಗೆ ಕೆಲಸ ಅರಸಿ ಬಂದ ಅವರು ಜಾಹೀರಾತು ಏಜೆನ್ಸಿಯಲ್ಲಿ ಕ್ರಿಯೇಟಿವ್‌ ತಂಡದಲ್ಲಿ ಕೆಲಸ ಗಿಟ್ಟಿಸಿಕೊಂಡರು. ಕಳೆದ 26 ವರ್ಷಗಳಿಂದ ನಗರದಲ್ಲಿ ನೆಲೆಸಿರುವ ಅವರಿಗೆ ಮನದ ಮಾತುಗಳನ್ನು ತೆರೆದಿಡುವ ಮಾಧ್ಯಮವಾಗಿ ಪೇಂಟಿಂಗ್‌ ಒದಗಿಬಂದಿದೆ.

‘ನಾನು ಪ್ರಕೃತಿ ಪ್ರಿಯ. ನಾವು ಚಿಕ್ಕಂದಿನಲ್ಲಿ ಕಾಣುತ್ತಿದ್ದ ಹಸಿರು, ಮರಗಿಡಗಳ ಸೊಬಗು ಇಂದು ಇಲ್ಲ. ಪ್ರಕೃತಿ ನಾಶದ ಕ್ರಿಯೆ ಹೀಗೇ ಮುಂದುವರೆದರೆ ಮುಂದಿನ ಜನಾಂಗಕ್ಕೆ ಹಸಿರು ಎನ್ನುವುದು ಕೇವಲ ಫೋಟೊ ಫ್ರೇಮ್‌ ಒಳಗಿನ ಚಿತ್ರವಾಗಿ ಲಭಿಸಬಹುದು. ಹೀಗಾಗಬಾರದು ಎನ್ನುವ ಕಾರಣಕ್ಕೆ ಚಿತ್ರಗಳ ಮೂಲಕ ಜಾಗೃತಿ ಕಾರ್ಯ ಮಾಡುತ್ತೇನೆ’ ಎನ್ನುತ್ತಾರೆ ಅವರು.

ಜಲವರ್ಣವನ್ನು ಮಾಧ್ಯಮವಾಗಿಸಿಕೊಂಡಿರುವ ಅವರಿಗೆ ಕ್ಲಿಷ್ಟಕರ ಎಂಬ ಕಾರಣಕ್ಕೇ ಈ ಶೈಲಿ ಆಪ್ತವಾಗಿದೆ. ಪ್ರಕೃತಿಯನ್ನು ಹಿಂದಿಕ್ಕಿ ಕಟ್ಟಡಗಳೇ ಮೇಲುಗೈ ಸಾಧಿಸುತ್ತಿರುವ ಈ ಸಂದರ್ಭದಲ್ಲಿ ನಿಸರ್ಗ ಸೌಂದರ್ಯವನ್ನು ತುಂಬಿಕೊಳ್ಳುವ ತವಕ ಅವರದ್ದು. ಸೌಂದರ್ಯ ಹಾಗೂ ವಿಭಿನ್ನತೆಯ ಸಾಕಾರಮೂರ್ತಿಯಾಗಿ ಒದಗುವ ಪ್ರಕೃತಿಯೇ ಅವರಿಗೆ ಸ್ಫೂರ್ತಿ. ಹೀಗಾಗಿಯೇ ಆಗಾಗ ಕ್ಯಾಮೆರಾ, ಡ್ರಾಯಿಂಗ್‌ ಹಾಳೆ, ಪೇಂಟಿಂಗ್‌ ಸೆಟ್‌ಗಳನ್ನು ಹಿಡಿದು ಅವರು ಪ್ರಯಾಣ ಹೊರಡುತ್ತಾರೆ.

ಅನೇಕ ಬಾರಿ ಅದೇ ಸ್ಥಳದಲ್ಲಿ ತಾಸುಗಟ್ಟಲೆ ನಿಂತು ಚಿತ್ರಕ್ಕೆ ದನಿಯಾಗುತ್ತಾರೆ. ಇನ್ನು ಕೆಲವು ಬಾರಿ ಕ್ಯಾಮೆರಾದಲ್ಲಿ ಚಿತ್ರ ಕ್ಲಿಕ್ಕಿಸಿ ತಂದು ಅವುಗಳನ್ನು ಜಲವರ್ಣಕ್ಕಿಳಿಸುತ್ತಾರೆ. ಇದುವರೆಗೆ ಅನೇಕ ಕಡೆ ಸೋಲೊ ಹಾಗೂ ಗುಂಪು ಚಿತ್ರ ಪ್ರದರ್ಶನಗಳಲ್ಲೂ ಅವರು ಭಾಗವಹಿಸಿದ್ದು, ಪೇಂಟಿಂಗ್‌ ಬೆಲೆ ₹5000ದಿಂದ 30 ಸಾವಿರದವರೆಗಿದೆ.

ವೃತ್ತಿಯ ನಡುವೆಯೂ ಪ್ರವೃತ್ತಿ ಪ್ರೀತಿಯನ್ನು ಉಳಿಸಿಕೊಂಡಿರುವ ಅವರಿಗೆ ಪೇಂಟಿಂಗ್‌ ಮಾಡಲು ಸಿಗುವ ಸಮಯ ರಾತ್ರಿ. ‘ಹೆಚ್ಚಾಗಿ ಜಲವರ್ಣದ ಕಲಾಕೃತಿಯನ್ನು ರಾತ್ರಿ ಸಮಯದಲ್ಲಿ ಮಾಡುವುದು ಸೂಕ್ತವಲ್ಲ ಎಂಬುದೇ ತಜ್ಞರ ಅಭಿಪ್ರಾಯ. ಆದರೆ ನನಗೆ ಬಣ್ಣಗಳ ಬಗೆಗೆ ಸಾಕಷ್ಟು ಪರಿಣತಿ, ಹಿಡಿತ ಇರುವುದರಿಂದ ಯಾವುದೇ ಸಮಯದಲ್ಲಿ ಬೇಕಾದರೂ ಮನಸ್ಸು ಬಯಸಿದಂಥದ್ದೇ ವರ್ಣ, ಚಿತ್ರಗಳ ಸಂಗಮವನ್ನು ಮೂಡಿಸಬಲ್ಲೆ’ ಎಂದು ವಿಶ್ವಾಸದಿಂದ ನುಡಿಯುತ್ತಾರೆ ಅವರು.

ಕಳೆದ 20 ವರ್ಷಗಳಿಂದ ಪೇಂಟಿಂಗ್‌ನ್ನು ಹವ್ಯಾಸವಾಗಿಸಿಕೊಂಡಿರುವ ಅವರಿಗೆ ಇದು ಒತ್ತಡ ನಿವಾರಣೆಗೆ ಹೇಳಿಮಾಡಿಸಿದ  ಥೆರಪಿ. ‘ದಿನೇದಿನೇ ಬೆಳೆಯುತ್ತಿರುವ ನಗರ, ಟ್ರಾಫಿಕ್‌ ಜಂಜಡ, ಕೆಲಸದ ಒತ್ತಡ ಇವುಗಳ ಮಧ್ಯೆಯೂ ಕುಂಚ ಹಿಡಿದು ಚಿತ್ರ ಬಿಡಿಸಲು ಕುಳಿತಾಗ ಮನಸ್ಸು ಖುಷಿಯಿಂದ ತೇಲುತ್ತದೆ. ಸುಸ್ತೆಲ್ಲಾ ಮಾಯವಾಗಿ ಮನಸ್ಸು ಪ್ರಶಾಂತಗೊಳ್ಳುತ್ತದೆ’ ಎನ್ನುತ್ತಾರೆ ಅವರು.

ಪ್ರದರ್ಶನದ ವಿವರ
ರಾಮದಾಸ್‌ ಅವರ ಪ್ರಕೃತಿ ಚಿತ್ರಗಳನ್ನು ಆಸ್ವಾದಿಸುವ ಮನಸ್ಸಿರುವವರು ಸ್ಥಳ: ಗ್ಯಾಲರಿ ನಂ. 2, ಕರ್ನಾಟಕ ಚಿತ್ರಕಲಾ ಪರಿಷತ್ತು, ಕುಮಾರ ಕೃಪಾ ರಸ್ತೆ ಇಲ್ಲಿ ಭೇಟಿ ನೀಡಬಹುದು. ನ. 29ರವರೆಗೆ ನಡೆಯಲಿದೆ.  ಬೆಳಿಗ್ಗೆ 10.30ರಿಂದ ಸಂಜೆ 7.30.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT