ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಸ್ಟ್‌ ಪಾಸಿನ ಸಂಕಟಗಳು

Last Updated 20 ಮೇ 2015, 19:30 IST
ಅಕ್ಷರ ಗಾತ್ರ

ಈಗಷ್ಟೇ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದೆ. ಮತ್ತದೇ ಹುಡುಗಿಯರು ಮೇಲುಗೈ ಸಾಧಿಸಿ ವೃತ್ತಪತ್ರಿಕೆಗಳ ಹಳೇ ತಲೆಬರಹವನ್ನು ಪುನರಾವರ್ತಿಸಿದ್ದಾರೆ. ಮೂರು ಜನರು ಪಾಸಾಗುವಷ್ಟು ಅಂಕಗಳನ್ನು ಒಬ್ಬೊಬ್ಬರೇ ಪಡೆದುಕೊಂಡ ಅಪ್ಪಟ ‘ಮಾರ್ಕ್ಸ್‌’ವಾದಿಗಳ ಚಿತ್ರಗಳು ಸಾಲು ಸಾಲಾಗಿ ಪ್ರಕಟಗೊಳ್ಳುತ್ತಿವೆ.

ಇದ್ದ ಆರುನೂರಾ ಇಪ್ಪತ್ತೈದು ಅಂಕಗಳಲ್ಲಿ ಎರಡು ಅಂಕಗಳನ್ನು ಕಳೆದುಕೊಂಡು ಆರುನೂರಾ ಇಪ್ಪತ್ತಮೂರು ಅಂಕಗಳನ್ನು ಬಾಚಿ ಸರ್ಟಿಫಿಕೇಟಿಗೆ ತುಂಬಿಕೊಂಡು ಮೊದಲ ರ‍್ಯಾಂಕ್‌ ಪಡೆದ ಆ ಪ್ರಕಾಂಡ ಪ್ರತಿಭಾವಂತ ಹುಡುಗನಿಗೊಂದು ಸಾಷ್ಟಾಂಗ ನಮನ ಸಲ್ಲಿಸಲೇಬೇಕು. ಈ ಫಲಿತಾಂಶದಿಂದ ಅವನೆದುರು ತೆರೆದುಕೊಂಡ ಕೆಂಪು ಹಾಸಿನ ರಾಜಮಾರ್ಗದಲ್ಲಿ ಅವನನ್ನು ಹೋಗಲು ಬಿಟ್ಟು ನಾವು ಕೊಂಚ ಪಕ್ಕಕ್ಕೆ ಸರಿದು ಕಾಲುದಾರಿಗಳ ಕಡೆಗೆ ದೃಷ್ಟಿಹರಿಸೋಣ.

ಎಸ್ಸೆಸ್ಸೆಲ್ಸಿ ಅಂತಷ್ಟೇ ಅಲ್ಲ, ಯಾವುದೇ ಪರೀಕ್ಷೆಗಳ ಫಲಿತಾಂಶ ಬಂದಾಗಲೂ ಸಾಮಾನ್ಯವಾಗಿ ಎರಡು ವರ್ಗದ ವಿದ್ಯಾರ್ಥಿಗಳ ಮೇಲೆ ಸಮಾಜದ ಗಮನ ಬೀಳುತ್ತದೆ.

ಮೊದಲನೆಯದು ರ‍್ಯಾಂಕಿಂಗ್‌ ವರ್ಗ. ಅಂಕಗಳ ಲೆಕ್ಕಾಚಾರದಲ್ಲಿ ಇದೊಂಥರ ಮೇಲುವರ್ಗ. ಇವರ ಬಗ್ಗೆ ಹೇಳಬೇಕಾದದ್ದೇನೂ ಇಲ್ಲ. ಅಂಕಕ್ಕಾಗಿಯೇ ವಿದ್ಯಾರ್ಥಿ ಜೀವನದ ಸರ್ವ ಸುಖ ಭೋಗಗಳನ್ನೂ ತ್ಯಜಿಸಿದವರು. ಅಂಕಪಟ್ಟಿಯಲ್ಲಿ ತೊಂಬತ್ತೈದು ಪರ್ಸೆಂಟೇಜ್‌ ಗಡಿ ದಾಟುವ ಸಾಹಸದಲ್ಲಿ 360ಡಿಗ್ರಿ ಬದುಕನ್ನು ಪಠ್ಯಪುಸ್ತಕಕ್ಕೆ ತೆತ್ತವರು. ದಿನದ ಮುಕ್ಕಾಲು ಪಾಲು ಸಮಯವನ್ನು ಓದಿಗೆ ಮೀಸಲಿಟ್ಟು ತಮ್ಮದೇ ಮನೆಯ ಬಾತ್‌ರೂಂನಲ್ಲಿ ಎಷ್ಟು ಮಗ್‌ಗಳಿವೆ ಎಂಬುದನ್ನೂ ಮರೆತವರು...

ಫಲಿತಾಂಶದ ದಿನ ರ‍್ಯಾಂಕುಗಳ ಪಟ್ಟಿಯಲ್ಲಿ ಮೇಲು ಮೇಲಕ್ಕೇರಿ ಟೀವಿ ಪೇಪರಿನವರೆದುರು ಅಪ್ಪ ಅಮ್ಮನಿಂದ ಮುದ್ದು ಪಡೆಯುತ್ತಾ ಪೋಸು ಕೊಡುವರು. ಮೂಗಿನ ಮೇಲಿನ ಕನ್ನಡಕ ಸರಿಪಡಿಸಿಕೊಳ್ಳುತ್ತಾ ಈ ಸಾಧನೆಯ ಹಿಂದಿನ ಸ್ಫೂರ್ತಿಗಳ ಬಗ್ಗೆ  ವಿವರಿಸುವವರು. ‘ಮುಂದೇನು ಮಾಡ್ಬೇಕಂತಿದ್ದೀರಾ’ ಎಂಬ ಪ್ರಶ್ನೆಗೆ ತಡವರಿಸುತ್ತಾ ಅಪ್ಪನ ಮುಖ ನೋಡುವರು. ಅಂಕಪಟ್ಟಿಯಲ್ಲಿ ಗುಡ್ಡೆಬಿದ್ದ ರಾಶಿರಾಶಿ ಅಂಕಗಳ ಬಲದಿಂದಲೇ ತೆರೆದುಕೊಳ್ಳುವ ಭವ್ಯ ಭವಿಷ್ಯತ್ತಿನ ಹೆದ್ದಾರಿಯಲ್ಲಿ ರಾಜವೈಭವದಿಂದ ಸಾಗುವವರು.

ಇನ್ನೊಂದು ವರ್ಗವಿದೆ. ಅದು ಫೇಲಿಂಗ್‌ ವರ್ಗ! ಇದನ್ನು ಕೆಳವರ್ಗ ಎನ್ನಬಹುದು. ವಿದ್ಯಾರ್ಥಿಗಳನ್ನೆಲ್ಲಾ ಪಾಸು ಮಾಡಿ ಮುಂದಿನ ತರಗತಿಗೆ ಕಳುಹಿಸಿ ತಾವು ಮಾತ್ರ ಆಜೀವಪರ್ಯಂತ ಅದೇ ತರಗತಿಯಲ್ಲಿ ಕೂತಿರುವ ಮೇಷ್ಟ್ರ ಬಗೆಗಿನ ಅತೀವ ಕಾಳಜಿಯಿಂದ ತಾವೂ ಫೇಲಾಗಿ ಅವರಿಗೆ ಸಾಥ್‌ ನೀಡುವ ಹೃದಯವಂತರ ವರ್ಗವಿದು. ಪರೀಕ್ಷೆಯ ಫಲಿತಾಂಶದ ದಿನ ರ‍್ಯಾಂಕಿಂಗ್‌ ವರ್ಗದವರ ನಂತರ ಸಮಾಜದ ದೃಷ್ಟಿ ಬೀಳುವುದೇ ಈ ಫೇಲಿಂಗ್‌ ವರ್ಗದವರ ಮೇಲೆ.

ಅಂಕಪಟ್ಟಿಯಲ್ಲಿನ ಕೆಂಪುಬಣ್ಣವನ್ನು ಕಣ್ಣಿಗೂ ತಂದುಕೊಂಡು ಬದುಕೇ ಮುಗಿದು ಹೋದವರಂತೆ ಹತಾಶರಾದ ಇವರಲ್ಲಿ ಜೀವನೋತ್ಸಾಹ ಹೆಚ್ಚಿಸುವ ಕೆಲಸಕ್ಕೆ ಇಡೀ ಸಮಾಜವೇ ನಿಂತುಕೊಳ್ಳುತ್ತದೆ.

‘ಎಲ್ಲಿ ಹೆಚ್ಚು ಕಮ್ಮಿ ಮಾಡ್ಕೊಂಡು ಬಿಡ್ತಾರೋ’ ಎಂಬ ಕಳಕಳಿಯಲ್ಲಿ ಜಗತ್ತೇ ಅವರತ್ತ ಸಾಂತ್ವನದ ಕೈಚಾಚುತ್ತದೆ. ಅವರಲ್ಲಿ ಆತ್ಮಸ್ಥೈರ್ಯ ತುಂಬುವ ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟವಾಗುತ್ತವೆ. ಅವರಿಗಾಗಿ ಆಪ್ತ ಸಮಾಲೋಚನಾ ಕೇಂದ್ರಗಳು ತೆರೆದುಕೊಳ್ಳುತ್ತವೆ. ಪರೀಕ್ಷೆಯಲ್ಲಿ ಫೇಲಾಗಿ ಬದುಕಿನಲ್ಲಿ ಸಾಧನೆಯ ಉತ್ತುಂಗಕ್ಕೇರಿದ ಮಹನೀಯರ ಕತೆಗಳ ವಾಚನವೂ, ಶಿಕ್ಷಣವೇ ಬೇರೆ, ಬದುಕೇ ಬೇರೆ, ಪರೀಕ್ಷೆಯಲ್ಲಿ ಫೇಲಾದ್ರೇನಂತೆ ಬದುಕಿನ ವಿಶ್ವವಿದ್ಯಾಲಯದಲ್ಲಿ ಶ್ರೇಷ್ಠ ವಿದ್ಯಾರ್ಥಿಯಾಗುವುದು ಮುಖ್ಯ... ಹೀಗೆ ಉಪದೇಶಾಮೃತಗಳ ಸರಣಿ ಪ್ರವಚನವೂ ನಡೆಯುತ್ತದೆ. ‘ದಡ್ಡರಾಗುವುದು ಅಂಥ ದೊಡ್ಡ ತಪ್ಪಲ್ಲ’ ಎಂಬ ಭಾವ ಮೂಡಿಸಲು ಎಲ್ಲರೂ ಅವರ ಜತೆ ನಿಲ್ಲುತ್ತಾರೆ.

ಪ್ರತಿ ಪರೀಕ್ಷೆಯ ಫಲಿತಾಂಶದ ನಂತರ ಈ ಎರಡೂ ವರ್ಗದ ವಿದ್ಯಾರ್ಥಿಗಳೂ ಸಮಾಜದ ಗಮನ ಸೆಳೆಯುವುದು ಸರ್ವೇ ಸಾಮಾನ್ಯ. ಆದರೆ ಇವೆರಡನ್ನೂ ಬಿಟ್ಟು ಇನ್ನೊಂದು ವರ್ಗವಿದೆ. ಅವರು ಭವಲೋಕದ ಕಣ್ಣಲ್ಲಿ ಪೂರ್ತಿ ನಿರ್ಲಕ್ಷಿತರು.

ಅದು ‘ಜಸ್ಟ್‌ ಪಾಸ್‌’ ಆದ ವಿದ್ಯಾರ್ಥಿಗಳ ಮಧ್ಯಮ ವರ್ಗ!
ಮೇಲಿನ ಎರಡೂ ವರ್ಗದವರು ಭಿನ್ನ ಕಾರಣಕ್ಕಾಗಿಯಾದರೂ ಸಮಾಜದ ಕಣ್ಣಿನಲ್ಲಿ ಗಮನಿತರಾಗುತ್ತಾರೆ. ಈ ಮಧ್ಯಮ ವರ್ಗದವರು ನಿಜವಾಗಿ ದಮನಿತರು.

ಅತ್ತ ರ‍್ಯಾಂಕಿಂಗ್‌ ವರ್ಗದವರ ಹರ್ಷೋದ್ಘಾರ, ಇತ್ತ ಫೇಲಿಂಗ್‌ ವರ್ಗದವರ ಹತಾಶ ಚೀತ್ಕಾರ. ಇವೆರಡರ ನಡುವೆ ನಲ್ವತ್ತು–ಐವತ್ತರ ಗಡಿಮಧ್ಯದ ಈ ‘ಜಸ್ಟ್‌ ಪಾಸ್‌’ ವರ್ಗದವರ ಮೂಕ ರೋಧನ ಯಾರಿಗೂ ಕೇಳುವುದೇ ಇಲ್ಲ. ‘ಮೇಲ್ವರ್ಗ’ದವರಿಗೆ ಸಿಗುವ ಅಪ್ಪ–ಅಮ್ಮನ ಮುತ್ತಿನ ಪೋಸ್‌, ‘ಕೆಳವರ್ಗ’ದವರಿಗೆ ಸಿಗುವ ಸಾಂತ್ವನದ ಸಾಥ್‌ ಎರಡರಿಂದಲೂ ಇವರು ಪೂರ್ತಿ ವಂಚಿತರು. ಇವರಿಗೆ ಇವರೇ ಗೆಳೆಯರು.

ಆಚೆ ದಡಕ್ಕೂ ದಾಟಲಾಗದೇ ಈಚೆ ತಟಕ್ಕೂ ಮರಳಲಾಗದೇ ಆಳ ಹಳ್ಳದ ಸಪೂರ ಸಂಕ ಮಧ್ಯದಲ್ಲಿಯೇ ಬದುಕ ಬ್ಯಾಲೆನ್ಸು ಮಾಡಲು ತೊಳಲಾಡುವ ಅತೀವ ಸಂತ್ರಸ್ಥರಿವರು. ಈ ಬಹುಸಂಖ್ಯಾತ ನಿರ್ಲಕ್ಷಿತರ ಸಂಕಟಗಳು ಒಂದೆರಡಲ್ಲ.

ಫೇಲಾದವರಿಗೆ ದಡ್ಡರು ಎಂಬ ಹಣೆಪಟ್ಟಿಯೊಟ್ಟಿಗೇ ಸಿಗುವ ಸ್ವೇಚ್ಛೆಯ ಅವಕಾಶವಾಗಲಿ, ಯಾವ ಕನಿಕರದ ವಿನಾಯ್ತಿಯಾಗಲಿ ಈ ಪಾಸಿಂಗ್‌ ಕ್ಲಾಸ್‌ನವರಿಗಿಲ್ಲ. ಅನುತ್ತೀರ್ಣರನ್ನು ದಡ್ಡರೆಂದು ತೀರ್ಮಾನಿಸಿದಷ್ಟು ಸುಲಭವಾಗಿ ಮೇಷ್ಟ್ರಾಗಲೀ, ಪಾಲಕರಾಗಲಿ ಇವರನ್ನು ಬಿಡುವುದಿಲ್ಲ.

‘ಬುದ್ಧಿವಂತ ಇದ್ದಾನೆ. ಆದ್ರೆ ಓದುವುದಿಲ್ಲ. ಮಹಾ ಸೋಮಾರಿ’. ‘ಅಲ್ಲಾ ಏನೂ ಓದದೆಯೇ ಪಾಸಾಗಿರೋನು, ಚೆನ್ನಾಗಿ ಓದಿದ್ರೆ ಇನ್ನೆಷ್ಟು ಚೆನ್ನಾಗಿ ಮಾರ್ಕು ತೆಗೀತಿದ್ದ’ ಹೀಗೆ ಮೇಲ್ನೋಟಕ್ಕೆ ಹೊಗಳಿಕೆಯಂತೆ ಕಾಣುವ ಈ ಮಾತುಗಳು ಎಂಥ ಅಪಾಯಕಾರಿ ಖೆಡ್ಡ ಎನ್ನುವುದು ಅದನ್ನು ಹೇಳಿಸಿಕೊಳ್ಳುವ ಮಧ್ಯಮ ಮಾರ್ಗಿಗಳಿಗೇ ಗೊತ್ತು.

ಪೋಷಕರು, ಶಿಕ್ಷಕರ ಕತೆ ಅತ್ಲಾಗಿರಲಿ. ತರಗತಿಯ ಹುಡುಗಿಯರ ಕಣ್ಣಿನಲ್ಲೂ ಇವರು ಯಕಶ್ಚಿತರೇ. ಆಗಷ್ಟೇ ತಮ್ಮೊಳಗೆ ಅರಳಿಕೊಳ್ಳುತ್ತಿರುವ ಹರೆಯವೆಂಬ ರಂಗು–ಗುಂಗಿನ ಲೋಕದ ಅಮಲಿನಲ್ಲಿರುವವರಿಗೆ ಈ ನಿರ್ಲಕ್ಷ್ಯ ಎಂಥ ಆಘಾತಕಾರಿ ಸಂಗತಿ ಎಂಬುದು ಅನುಭವಿಸಿದವರಿಗೇ ಗೊತ್ತು. ಬುದ್ಧಿವಂತ ವಿದ್ಯಾರ್ಥಿಗಳು ಅನಾಯಾಸವಾಗಿ ಅಂಕಗಳ ಮೂಲಕವೇ ಆಕರ್ಷಣೆಯ ಕೇಂದ್ರವಾಗಿಬಿಡುತ್ತಾರೆ.

ಫೇಲಿಂಗ್‌ ಕ್ಲಾಸ್‌ ಹುಡುಗರಿಗೂ ಹೆಣ್ಣು ಹೈಕಳ ಹೃದಯದಲ್ಲಿ ಫೀಲಿಂಗ್‌ ಹುಟ್ಟಿಸಲು ಹಲವು ದಾರಿಗಳಿವೆ. ‘ತಾನು ದಡ್ಡನಿರಬಹುದು ಆದರೆ ಹೃದಯ ಶ್ರೀಮಂತ’ ‘ಮೈಮುರಿದು ನಿನ್ನನ್ನು ರಾಣಿಯ ಹಾಗೆ ನೋಡಿಕೊಳ್ಳುತ್ತೇನೆ’. ‘ಇಡೀ ಜಗತ್ತಿನಿಂದಲೇ ಪರಿತ್ಯಕ್ತನಾದ ನನ್ನ ಕೈಯನ್ನು ನೀನೂ ಬಿಟ್ಟರೆ ನನಗ್ಯಾರು ಗತಿ’. ‘ನಾನು ಒರಟ ನಿಜ. ನನ್ನನ್ನು ಹಾಗೆ ಮಾಡಿದ್ದು ಈ ಸಮಾಜ. ಇದರಲ್ಲಿ ನನ್ ತಪ್ಪೇನೂ ಇಲ್ಲ’ ಹೀಗೆ ತಮ್ಮ ದೌರ್ಬಲ್ಯವನ್ನೇ ಬಂಡವಾಳವಾಗಿಸಿಕೊಂಡು ಹುಡುಗಿಯರ ಅನುಕಂಪ ಗಿಟ್ಟಿಸಿಕೊಂಡು ಬಿಡಬಲ್ಲ ಅವಕಾಶ ಅವರಿಗಿದೆ.

ಅದರಲ್ಲಿಯೂ ಫೇಲಾಗುವ ಹುಡುಗರು– ದಡ್ಡರು ಎಂಬ ವಿಶೇಷಣೆಯೊಟ್ಟಿಗೇ ಸಕಲ ಶೋಕಿತನಗಳಿಗೆ ವಾರಸುದಾರರಾಗುವ ಹಕ್ಕೂ ಅವರಿಗೆ ಉಚಿತವಾಗಿ ಬಂದುಬಿಡುವುದರಿಂದ ಹೆಣ್ಮಕ್ಕಳ ಕಡೆಗಣ್ಣ ನೋಟವನ್ನು ತಮ್ಮತ್ತ ತಿರುಗಿಸಿಕೊಳ್ಳುವುದು ಅಷ್ಟೇನೂ ಕಷ್ಟವಲ್ಲ. ಅಲ್ಲದೇ ನಮ್ಮ ಸಿನಿಮಾ– ಹಾಡುಗಳು ಕೂಡ ಫೇಲಿಂಗ್‌ ಕ್ಲಾಸ್‌ ಹುಡುಗರಿಗೆ ಮಾತ್ರ ನಿಜವಾದ ಪ್ರೀತಿಯ ಫೀಲಿಂಗ್‌ ಅರ್ಥವಾಗುವುದು ಎಂಬ ನಂಬಿಕೆಯನ್ನು ಸ್ಥಾಪಿಸಿಬಿಟ್ಟಿವೆ.

ಆದರೆ ಅಂತೂ ಇಂತೂ ಉತ್ತೀರ್ಣತೆಯ ಗಡಿದಾಟಿ ನಿಟ್ಟುಸಿರು ಬಿಡುವ ಮಧ್ಯಮ ವರ್ಗದವರಿಗೆ ಮಾತ್ರ ಈ ಎಲ್ಲ ಸಾಧ್ಯತೆಗಳ ದಾರಿಯೂ ಮುಚ್ಚಿರುತ್ತದೆ. ಆದ್ದರಿಂದಲೇ ಹುಡುಗಿಯರ ಕಣ್ಣ ಪರಿಧಿಯೊಳಗೆ ಇವರು ನುಸುಳುವುದೇ ಇಲ್ಲ. ತಾವಾಗಿಯೇ ಮುನ್ನುಗ್ಗಲು ಗರಿಷ್ಠ ಅಂಕದ ಸಾಧನವಾಗಲೀ, ಫೇಲ್‌ ಆಗುವ ಹುಡುಗರ ಬಿಂದಾಸ್‌ತನವಾಗಲಿ ಇವರಿಗಿರುವುದಿಲ್ಲ. ಆದ್ದರಿಂದಲೇ ಒಂದು ದಿನ ನೀಟು ಡೀಸೆಂಟು ವೇಷದಲ್ಲಿ ಬಂದು ಯಾರೂ ನೋಡದಿದ್ದಾಗ ಜೀನ್ಸು ಟೀ ಷರ್ಟು ತೊಟ್ಟು ಆಗಲೂ ಲಲನೆಯರ ನೋಟಲೋಕದಲ್ಲಿ ಅಸ್ತಿತ್ವ ಪಡೆಯಲು ವಿಫಲರಾಗಿ ಕಂಗಾಲಾಗುತ್ತಾರೆ.

ಅತ್ಲಾಗೆ ಜಾಣರ ಗುಂಪಿಗೂ ಸೇರಲಾಗದ ಇತ್ಲಾಗೆ ದಡ್ಡರಾಗಲೂ ಅನರ್ಹರಾದ ಹತಭಾಗ್ಯರಿವರು. ಅದೇ ಹಳೇ ಬಟ್ಟೆಗೆ ಮತ್ತೆ ಮತ್ತೆ ಇಸ್ತ್ರಿ ಹಾಕಿ,  ದೃಷ್ಟಿತೊಂದರೆ ಇಲ್ಲದಿದ್ದರೂ ಸಪೂರ ಫ್ರೇಮಿನ ಸ್ಪೆಕ್ಟು ಹಾಕಿ ಪದೇ ಪದೇ ಇನ್‌ಷರ್ಟ್‌ ಸರಿಮಾಡಿಕೊಳ್ಳುತ್ತಾ ಜಾಣರ ವರ್ಗಕ್ಕೆ ಬಡ್ತಿ ಪಡೆಯಲು ಹೆಣಗಾಡುವರು. ಮಾತಿನಲ್ಲಿ ಪ್ರಯತ್ನಪೂರ್ವಕ ಇಂಗ್ಲಿಷ್‌ ಶಬ್ದ ತೂರಿಸಿ ತಪ್ಪು ತಪ್ಪಾಗಿ ಉಚ್ಚರಿಸಿ ಪೆಚ್ಚಾಗುವರು.

ಯಾವುದೋ ಪತ್ರಿಕೆಯಲ್ಲಿ ಪ್ರಕಟವಾದ ತಮ್ಮ ಓದುಗರ ಓಲೆ ಬರಹ, ಇನ್ಯಾವುದೋ ಕ್ಯಾಂಪಿನಲ್ಲಿ ಭಾಗವಹಿಸಿದ ಪ್ರಮಾಣಪತ್ರ, ರಕ್ತದಾನ ಶಿಬಿರದಲ್ಲಿ ಕೊಟ್ಟ ಸರ್ಟಿಫಿಕೇಟುಗಳನ್ನು ಝೆರಾಕ್ಸ್‌ ಮಾಡಿ ಮಾಡಿ, ಹಣೆಗಾದ ಮೊಡವೆಯನ್ನು ಕೂದಲಲ್ಲಿ ಮುಚ್ಚಲು ಒದ್ದಾಡುವಂತೇ, ಮಿನಿಮಮ್‌ ಬ್ಯಾಲೆನ್ಸಿನ ಅಂಕಪಟ್ಟಿಯ ಮೇಲೆ ಪೇರಿಸಿಟ್ಟು ಮೇಲು ಮೇಲಿಂದ ನಗುವರು. ಇಷ್ಟೆಲ್ಲಾ ಆಗಿಯೂ ಜಾಣರ ಹೆದ್ದಾರಿಯಲ್ಲಿ ಪ್ರವೇಶಾತಿ ಸಿಕ್ಕದೇ ಹತಾಶರಾಗುವರು. ಅದೇ ದುಃಖದಲ್ಲಿ ಸಂಜೆ  ಗೆಳೆಯರೊಟ್ಟಿಗೆ ತೀರ್ಥ ಸೇವನೆಗೆ ಕೂತರೆ ಅಲ್ಲಿಯೂ ಕೆಳವರ್ಗದ ಪೈಲ್ವಾನರಿಂದ ಅಪಹಾಸ್ಯಕ್ಕೀಡಾಗುವರು.

ವಿದ್ಯಾರ್ಥಿ ಬದುಕಿನ ಅವಧಿಯ ಸಂಕಟಗಳನ್ನು ಬಿಡಿ, ಹೇಗೋ ತುಟಿಕಚ್ಚಿ ಸಹಿಸಿಕೊಂಡುಬಿಡಬಹುದು. ಆದರೆ ವಿದ್ಯಾರ್ಥಿ ದಿನಗಳಲ್ಲಿ ಹುಟ್ಟಿಕೊಳ್ಳುವ ಈ ಮಧ್ಯಮ ವರ್ಗದ ಸಂಕಟಗಳು ಬದುಕಿನುದ್ದಕ್ಕೂ ಅವರಿಗೆ ಅಂಟಿಕೊಂಡು ಬೆಂಬಿಡದ ಬೇತಾಳದಂತೇ ಕಾಡುವವು.
ವಯಸ್ಸಾದ ಮೇಲೆ ತಮ್ಮ ಮಕ್ಕಳಿಗೆ ಬುದ್ಧಿ ಹೇಳುವ ಕಾಲದಲ್ಲಿಯೂ ಇವರದು ಎಡಬಿಡಂಗಿ ಪರಿಸ್ಥಿತಿಯೇ. ಅತ್ಲಾಗೆ ‘ನಾನು ನಿನ್ನ ಕ್ಲಾಸಿನಲ್ಲಿ ಇಷ್ಟು ಒಳ್ಳೆ ಅಂಕಗಳನ್ನು ತೆಗೆದುಕೊಂಡಿದ್ದೆ.

ಗಣಿತಕ್ಕೆ ಎರಡು ಅಂಕ ಕಡಿಮೆಯಾಗಿದ್ದಕ್ಕೆ ಒಂದೂವರೆ ದಿನ ಊಟ ಬಿಟ್ಟದ್ದೆ ಗೊತ್ತಾ?’ ಎಂದೆಲ್ಲಾ ಜಬರಿಸುವ ಅದೃಷ್ಟವಾಗಲಿ, ‘ನಾನು ಎಸ್ಸೆಸ್ಸೆಲ್ಸಿಯಲ್ಲಿಯೇ ಫೇಲು. ಆದ್ರೂ ಮೈಮುರಿ ದುಡಿದು ನಿಮ್ಮನ್ನು ಈ ಮಟ್ಟಕ್ಕೆ ತಂದು ನಿಲ್ಸಿದ್ದೇನೆ. ನಾನು ಬೆವರು ಸುರಿಸಿದಷ್ಟು ನೀವು ನೀರು ಕುಡಿದಿಲ್ಲ ತಿಳ್ಕೊಳ್ಳಿ’ ಎಂದು ಜಾಡಿಸುವ ಹಕ್ಕಾಗಲಿ ಇವರಿಗಿರುವುದಿಲ್ಲ. ‘ಅಂತೂ ಇಂತೂ  ಪಾಸಾಗುತ್ತಿದ್ದೆ’ ಅನ್ನುವುದು ಮಕ್ಕಳು– ಮೊಮ್ಮಕ್ಕಳೆದುರು ಹೇಳುವ ಆಕರ್ಷಕ ಹೆಗ್ಗಳಿಕೆ ಅಲ್ಲವೇ ಅಲ್ಲ.

ಹೀಗೆ ಪಟ್ಟಿ ಮಾಡುತ್ತ ಹೋದರೆ ಸರ್ವರಿಂದಲೂ ನಿರ್ಲಕ್ಷಕ್ಕೊಳಗಾದ ಈ ವರ್ಗದ ಸಂಕಟಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಈ ಎಲ್ಲ ಕುದಿತಗಳನ್ನೂ ಎದೆಯೊಳಗೇ ಬಚ್ಚಿಟ್ಟುಕೊಂಡ ಈ ಮಧ್ಯಮ ವರ್ಗಿಗಳ ಬದುಕುವ ಛಲಕ್ಕೆ ಯಾರಾದರೂ ತಲೆಬಾಗಲೇಬೇಕು. ರ‍್ಯಾಂಕ್‌ ವಿಜೇತರು ಅಥವಾ ಫೇಲಾದವರು ಹೇಳಿಕೊಳ್ಳುವಂತೆ ಹೆಮ್ಮೆಯಿಂದ ಇವರೆಂದೂ ತಮ್ಮ ಅಂಕಗಳ ಬಗ್ಗೆ ಬಾಯಿಬಿಡದ ಪ್ರಚಾರ ದ್ವೇಷಿಗಳು.

ನೋವಿನ ನದಿಯನ್ನೇ ಮನದಲ್ಲಿ ಹರಿಬಿಟ್ಟು ಹುಸಿನಗುವೊಂದನ್ನು ತುಟಿಮೇಲುಟ್ಟುಕೊಂಡು ಅಜ್ಞಾತ ದಾರಿಯಲ್ಲಿ ಸುಮ್ಮನೇ ಸಾಗುವ ಸ್ಥಿತಪ್ರಜ್ಞರು. ಬಹುಸಂಖ್ಯಾತರಾಗಿದ್ದೂ ಶಕ್ತಿಪ್ರದರ್ಶನಕ್ಕಿಳಿಯದೇ ‘ಮೇಲಿನವರ’ ದಬ್ಬಾಳಿಕೆಗೆ ಬೆನ್ನುಕೊಟ್ಟು ‘ಕೆಳಗಿನವರಿಂದ’ ಸುರಕ್ಷಿತ ಅಂತರ ಕಾಯ್ದುಕೊಂಡು ಸಮತೋಲನ ಸಾಧಿಸುವ ನಿಜದ ಪ್ರಜಾಪ್ರಭುತ್ವವಾದಿಗಳು.

ತಮ್ಮ ಭಾವಕ್ಕೆ ಧ್ವನಿಯಾಗುವ ಒಂದು ಸ್ವರಕ್ಕಾಗಿ ಆರ್ತವಾಗಿ ಕಾಯುತ್ತಿರುವ ಈ ಅಜ್ಞಾತ ವರ್ಗದ ಮೇಲೊಮ್ಮೆ ಬೆಳಕು ಹಾಯಿಸಿ. ಅವಕಾಶ ಕೊಟ್ಟು ನೋಡಿ. ನಿಮ್ಮ ನೋಟದ ಕ್ರಮವನ್ನೇ ಬದಲಿಸಿಬಿಡುವ ಕಥನಗಳು ಬಿಚ್ಚಿಕೊಳ್ಳಬಹುದು.

ಪಿಯುಸಿಯಲ್ಲಿ ಕ್ಲೀನ್‌ಸ್ವೀಪ್!

ನಾನು ಹತ್ತನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿಯೇ ಓದಿದ್ದು. ಆಗ ನಾನು ರ‍್ಯಾಂಕಿಂಗ್‌ ವರ್ಗದಲ್ಲೇ ಇದ್ದೆ. ಆದರೆ ಪಿಯುಸಿ ವಿಜ್ಞಾನ ವಿಭಾಗಕ್ಕೆ ಸೇರಿಕೊಂಡಾಗ ಎಲ್ಲ ಬದಲಾಯಿತು. ಅಲ್ಲಿ ಇಂಗ್ಲಿಷ್‌ ಮಾಧ್ಯಮದಲ್ಲಿ ಕಲಿಯಬೇಕಿತ್ತು. ನನಗೂ ಇಂಗ್ಲಿಷ್‌ಗೂ ಆಗಿಬರುತ್ತಿರಲಿಲ್ಲ. ಇಂಗ್ಲಿಷ್‌ ಅರ್ಥ ಮಾಡಿಕೊಳ್ಳುವಷ್ಟರಲ್ಲಿ ವರ್ಷ ಕಳೆದುಹೋಗಿತ್ತು. ಫೇಲಾದೆ. ಒಂದೆರಡಲ್ಲ, ಎಲೆಕ್ಟ್ರಾನಿಕ್ಸ್‌ ಒಂದು ವಿಷಯ ಬಿಟ್ಟು ಉಳಿದೆಲ್ಲ ವಿಷಯದಲ್ಲಿಯೂ ಡುಮ್ಕಿ. ಒಂಥರ ಕ್ಲೀನ್‌ಸ್ವೀಪ್. ಎಲೆಕ್ಟ್ರಾನಿಕ್ಸ್‌ನಲ್ಲಿಯೂ ಸರ್ಕಿಟ್‌ಗಳ ಚಿತ್ರ ಬರೆಯುವುದಿರುತ್ತದಲ್ಲ. ಅವುಗಳನ್ನು ಬರೆದು ಪಾಸಾಗಿದ್ದೆ. ನಂತರ ಅಂತೂ ಇಂತೂ ಪಿಯೂಸಿ ಪಾಸುಮಾಡಿದೆ. ಸಿಇಟಿಯನ್ನೂ ಬರೆದಿದ್ದೆ. ಆದರೆ ಫಲಿತಾಂಶ ನೋಡುವ ಧೈರ್ಯವಿರಲಿಲ್ಲ. ಪದವಿಗೆ ಆರ್ಟ್ಸ್‌ ವಿಭಾಗಕ್ಕೆ ಸೇರಿಕೊಂಡೆ. ಅಲ್ಲಿ ಮತ್ತೆ ರ‍್ಯಾಂಕ್‌ ಸ್ಟೂಡೆಂಟ್‌!

ಈ ಜಸ್ಟ್‌ಪಾಸ್‌ ವರ್ಗದ ಕಷ್ಟಗಳು ನನಗೂ ಗೊತ್ತು. ಸಿಇಟಿಯಲ್ಲಿ ಎಷ್ಟೋ ಸಾವಿರ ರ‍್ಯಾಂಕ್‌ ಪಡೆದಿರು ತ್ತಾರೆ. ಯಾವುದೋ ಗೊತ್ತಿಲ್ಲದ ಕಾಲೇಜಿನಲ್ಲಿ ಸೀಟು ಸಿಗುತ್ತದೆ. ನಂತರ ಸಣ್ಣ ಕಂಪೆನಿಯಲ್ಲಿ ಕೆಲಸ. ನಮ್ಮ ಕಡೆಗಳಲ್ಲೆಲ್ಲ ಒಂದು ನಂಬಿಕೆ ಇದೆ. ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಬೇಕು. ಒಂದು ಸಲವಾದರೂ ಅಮೆರಿಕಕ್ಕೆ ಹೋಗಿಬರಬೇಕು. ಇಲ್ಲದಿದ್ದರೆ ಅವನು ಹುಡುಗನೇ ಅಲ್ಲ. ಈ ಪಾಸಿಂಗ್‌ ಕ್ಲಾಸ್‌ ಹುಡುಗರು ಇವೆಲ್ಲದರಿಂದ ವಂಚಿತರಾಗಿ ಒದ್ದಾಡುತ್ತಿರುತ್ತಾರೆ.
 –ಅಭಯ ಸಿಂಹ, ಚಲನಚಿತ್ರ ನಿರ್ದೇಶಕ

ಪಾಸಿಂಗ್‌ ಕ್ಲಾಸೇ ಗ್ರೇಟು

ನಾನು ಮೊದಲಿನಿಂದ ರ‍್ಯಾಂಕ್್ ಸ್ಟೂಡೆಂಟ್‌ ಆಗಿದ್ದೆ. ಹಾಗೆಂದು ನಾನೇನೂ ತುಂಬ ಓದಿ ಕಷ್ಟಪಟ್ಟು ರ‍್ಯಾಂಕ್‌ ತಗೋತಿರಲಿಲ್ಲ. ನಾನೊಬ್ಬ ಸಾಮಾನ್ಯ ಓದುಗ. ಆದರೆ ರ‍್ಯಾಂಕ್‌ ಬರುತ್ತಿತ್ತಷ್ಟೇ.

ಆದರೆ ನಾನು ಪಾಸಿಂಗ್‌ ಕ್ಲಾಸ್‌ ವಿದ್ಯಾರ್ಥಿಗಳ ಮನಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬಲ್ಲೆ. ನನ್ನ ಅನೇಕ ಸ್ನೇಹಿತರು ಅದೇ ವರ್ಗದವರಾಗಿದ್ದರು.

ಈ ರ‍್ಯಾಂಕ್‌ ವಿದ್ಯಾರ್ಥಿಗಳಿಗಿರುವಷ್ಟು ಟೆನ್ಶನ್‌, ಪ್ರೆಷರ್‌ ಪಾಸಿಂಗ್‌ ಮಾರ್ಕ್ಸ್‌ ವಿದ್ಯಾರ್ಥಿಗಳಿಗಿರುವುದಿಲ್ಲ. ಯಾಕೆಂದರೆ ಅವರಿಗೆ ಜಸ್ಟ್‌ ಪಾಸ್  ಆದ್ರೆ ಸಾಕಾಗಿರುತ್ತದೆ. ಅವರ ಆಸೆ ಅಭಿಲಾಷೆಗಳೂ ಮಿತವಾಗಿರುತ್ತವೆ. ಆದ್ದರಿಂದ ಕಡಿಮೆ ಅಂಕಗಳು ಬಂದರೂ ಅವರೇನೂ ಬೇಸರ ಮಾಡಿಕೊಳ್ಳುವುದಿಲ್ಲ. ಸೋತರೆ ವ್ಯಥೆ ಪಡುವುದು, ಡಿಪ್ರೆಶನ್‌ಗೆ ಹೋಗುವುದು, ಆತ್ಮಹತ್ಯೆ ಮಾಡಿಕೊಳ್ಳುವುದು ಇವೆಲ್ಲ ಈ ಪಾಸಿಂಗ್‌ ಮಾರ್ಕ್ಸ್‌ ವಿದ್ಯಾರ್ಥಿಗಳಲ್ಲಿರುವುದಿಲ್ಲ. ಅವರು ಮಾನಸಿಕ ಸಮತೋಲನ ಸಾಧಿಸಿರುತ್ತಾರೆ.  ಇದು ರ‍್ಯಾಂಕ್‌ ವಿದ್ಯಾರ್ಥಿಗಳಲ್ಲಿ ಕಂಡುಬರುವುದಿಲ್ಲ. ಅವರು ತುಂಬ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ. ಸಮಾಜದಿಂದ, ಪಾಲಕರಿಂದ, ಶಿಕ್ಷಕರಿಂದ ಎಲ್ಲ ಕಡೆಯಿಂದಲೂ ಅವರ ಮೇಲೆ ತುಂಬ ಒತ್ತಡ ಇರುತ್ತದೆ. ಹಾಗೆ ಹೋಲಿಸಿದ್ರೆ ಜಸ್ಟ್‌ ಪಾಸ್‌ ವಿದ್ಯಾರ್ಥಿಗಳ ಜೀವನ ಉತ್ತಮವಾದದ್ದು.

ಒಬ್ಬ ರ‍್ಯಾಂಕ್‌ ವಿದ್ಯಾರ್ಥಿ ಎಸ್ಸೆಸ್ಸೆಲ್ಸಿ ಪಿಯುಸಿ ಎಕ್ಸಾಂ ಬರೀತಿದ್ದಾರೆ ಅಂದರೆ ಅವರ ಮನೆಯವರಿಗೆಲ್ಲಾ ಎಕ್ಸಾಂ ಶುರುವಾಗಿರುತ್ತದೆ. ಅವರು ಯಾರ ಮನೆಗೂ ಹೋಗುವುದಿಲ್ಲ. ಅವರ ಮನೆಗೂ ಯಾರೂ ಹೋಗುವಂತಿಲ್ಲ.  ಬರೀ ಓದು ಓದು ಓದು... ಒಟ್ಟಾರೆ ಅದೊಂದು ಜೈಲಾಗಿಬಿಡುತ್ತದೆ.

ನನ್ನ ಸಂಬಂಧಿಕೊಬ್ಬರ ಮಗ ಒಳ್ಳೆಯ ಫುಟ್‌ಬಾಲ್‌ ಆಟಗಾರ. ಆದರೆ ರ‍್ಯಾಂಕಿಂಗ್‌ ಗೀಳಿಗೆ ಬಿದ್ದು ಒಂದಿಡೀ ವರ್ಷ ಫುಟ್‌ಬಾಲ್‌  ಆಡಲಿಲ್ಲ. ಓದಿನ ಆಚೆಗೂ ಒಂದು ಜೀವನವಿದೆ ಎನ್ನುವುದನ್ನು ನಾವು ಮರೆತೇ ಬಿಡುತ್ತೇವೆ.

ಈ ಶಿಕ್ಷೆಗಳೆಲ್ಲ ಪಾಸಿಂಗ್‌ ಕ್ಲಾಸ್‌ ವಿದ್ಯಾರ್ಥಿಗಳಿಗಿರಲ್ಲ. ಆಟವಾಡಿಕೊಂಡು ಆರಾಮವಾಗಿರ್ತಾರೆ ಅವರು.
ರ‍್ಯಾಂಕ್‌ ಬಂದವರೆಲ್ಲ ಬುದ್ಧಿವಂತರು. ಸಾಧನೆ ಮಾಡುವವರು ಎಂದು ತಿಳಿದುಕೊಳ್ಳುವುದು ತಪ್ಪು. ಅಂಕಿ ಅಂಶದ ಪ್ರಕಾರ ಕೂಡ ಅವರು ಒಳ್ಳೆಯ ಬದುಕನ್ನು ಬದುಕುವುದಿಲ್ಲ. ಈ ಕನ್ನಡ ಮಾಧ್ಯಮದಲ್ಲಿ ಕಲಿತು ಪಾಸಾಗಿ ಹೋಗಿರ್ತಾರೆ ನೋಡಿ, ಅವರೇ ಜೀವನದಲ್ಲಿ ಸಾಧನೆ ಮಾಡುವುದು. ಯಾಕೆಂದರೆ ಅವರು ಜೀವನದ ಪಾಠ ಕಲಿತುಕೊಂಡಿರುತ್ತಾರೆ. ರ‍್ಯಾಂಕ್‌ ವಿದ್ಯಾರ್ಥಿಗಳಿಗೆ ಹೋಗಿ ಎಟಿಎಂನಿಂದ ಹಣ ಡ್ರಾ ಮಾಡಿಕೊಂಡು ಬಾ ಅಂದ್ರೆ ಗೊತ್ತಿರಲ್ಲ. ಮನಿ ಆರ್ಡರ್ ಮಾಡಿ ಬಾ ಅಂದ್ರೆ ಗೊತ್ತಿರಲ್ಲ. ರ‍್ಯಾಂಕ್‌ನವರು ಜನರೊಂದಿಗೂ ಸಾಕಷ್ಟು ಬೆರೆಯಲ್ಲ. ಇವೆಲ್ಲದನ್ನೂ ನೋಡಿದರೂ ಪಾಸಿಂಗ್ ಕ್ಲಾಸ್‌ ವಿದ್ಯಾರ್ಥಿಗಳೇ ಗ್ರೇಟು.
- ಡಾ. ನಿಸರ್ಗ, ಹೃದಯ ಶಸ್ತ್ರಚಿಕಿತ್ಸಾ ತಜ್ಞರು.

ಸ್ಕೂಲಿನಾಚೆಯ ಓದಿನ ಆಯಾಮಗಳು

ನಾನು ಸ್ಕೂಲಿಗೆ ಹೋಗಿ ಓದಿರೋದೆ ಎಸ್ಸೆಸ್ಸೆಲ್ಸಿವರೆಗೆ.  ಶಿಕ್ಷಣವ್ಯವಸ್ಥೆಯ ಬಗ್ಗೆ ನನಗೆ ಸಣ್ಣವನಿದ್ದಾಗಿನಿಂದಲೇ ಒಂದು ರೀತಿಯ ರೇಜಿಗೆ ಇತ್ತು. ಮನೆಯಲ್ಲಿಯೂ ನಾನೊಬ್ಬನೇ ಮಗ. ನೀನು ಕಲಿತು ಮಾಡಬೇಕಾಗಿದ್ದೇನಿಲ್ಲ. ಮನೆಯಲ್ಲಿಯೇ ಅಡಿಕೆ ತೋಟ ಮಾಡಿಕೊಂಡಿರು ಎಂತಲೇ ಹೇಳುತ್ತಿದ್ದರು.

ಆದರೆ ಓದುವುದರ ಬಗ್ಗೆ ನನಗೆ ತುಂಬಾನೇ ಆಸಕ್ತಿಯಿತ್ತು. ಆದರೆ ಈ ಥರ ಅಕಾಡೆಮಿಕ್‌ ಓದಿನಲ್ಲಿ ಆಸಕ್ತಿ ಇರಲಿಲ್ಲ. ಎಸ್ಸೆಸ್ಸೆಲ್ಸಿಯಲ್ಲಿ ಒಳ್ಳೆಯ ಅಂಕಗಳನ್ನೇ ತೆಗೆದುಕೊಂಡಿದ್ದೆ. ನಮ್ಮ ಪರೀಕ್ಷಾ ಕೇಂದ್ರಕ್ಕೇ ಎರಡನೇ ಸ್ಥಾನ ಪಡೆದಿದ್ದೆ. ನಂತರ ಕೆಲವು ದಿನ ಪಿಯುಸಿಗೆ ಹೋದರೂ ಮುಂದುವರಿಸಲು ಸಾಧ್ಯವಾಗದೇ ಬಿಟ್ಟುಬಿಟ್ಟೆ.

ಅದಾದಮೇಲೆ ನಾನು ದೂರಶಿಕ್ಷಣದ ಮೂಲಕ ಪಿಯುಸಿ ಮಾಡಿದೆ. ಎಂ.ಎ. ಮಾಡಿದೆ. ಆದರೆ ಅವ್ಯಾವುವೂ ನನಗೆ ಅಷ್ಟೇನೂ ಖುಷಿ ಕೊಡಲಿಲ್ಲ.

ಓದು ಬೇರೆ ಬೇರೆ ಹಂತಗಳಲ್ಲಿ ಆಗುತ್ತಿರುತ್ತದೆ. ಶಾಲಾ ಶಿಕ್ಷಣವಷ್ಟೇ ಅಲ್ಲ. ಆ ಭಿನ್ನ ಆಯಾಮಗಳಲ್ಲಿಯೇ ನನ್ನ ಆಸಕ್ತಿ ಇದ್ದದ್ದು. ಯಾವುದೋ ಒಂದು ವಿಷಯದ ಬೇಸಿಕ್‌ಗಳನ್ನು ತಿಳಿದುಕೊಳ್ಳಬೇಕೆಂದರೆ ಈವತ್ತಿಗೂ ಕೂತು ನಾನು ಒಂಬತ್ತನೇ ತರಗತಿಯ ಪಠ್ಯವನ್ನು ಓದ್ತಾ ಇರ್ತೀನಿ.

ಎಸ್ಸೆಸ್ಸೆಲ್ಸಿವರೆಗೂ ಅಂಕಗಳು ಅಷ್ಟೇನೂ ಮಹತ್ವದ್ದಲ್ಲ ಎಂಬುದು ನನ್ನ ಅನಿಸಿಕೆ. ಈಗ ಕಲರ್ಸ್‌ ಕನ್ನಡದ ಬಿಸಿನೆಸ್‌ ಹೆಡ್‌ ಆಗಿ ಕೆಲಸ ಮಾಡುತ್ತಿರುವ ನಾನು ಕನ್ನಡ ಮಾಧ್ಯಮದಲ್ಲಿ ಎಸ್ಸೆಸ್ಸೆಲ್ಸಿ ಮುಗಿಸಿ ಓದು ನಿಲ್ಲಿಸಿದವನು ಎಂದರೆ ಯಾರೂ ನಂಬಲ್ಲ. ಇಂದು ನಾನು ಕಲರ್ಸ್‌ ಕನ್ನಡ ವಾಹಿನಿಯ ಕ್ರಿಯೇಟಿವ್‌ ವಿಭಾಗವನ್ನು ನೋಡಿಕೊಳ್ಳುತ್ತೀನಿ. ಲಾಭ–ನಷ್ಟಗಳ ಲೆಕ್ಕಾಚಾರ ನೋಡಿಕೊಳ್ಳುತ್ತೀನಿ. ಎಲ್ಲ ಆಡಳಿತ ಮೇಲ್ವಿಚಾರಣೆ ನೋಡಿಕೊಳ್ಳುತ್ತೇನೆ. ಒಬ್ಬ ಸಮೂಹ ಸಂವಹನ ಎಂ.ಎ. ಮತ್ತು ಎಂ.ಬಿ.ಎ ಮಾಡಿರುವ ವ್ಯಕ್ತಿ ನಿಭಾಯಿಸುವ ಹುದ್ದೆಯನ್ನು ನಾನು ನಿಭಾಯಿಸುತ್ತಿದ್ದೇನೆ.

ಮೊದಲು ಇಂಗ್ಲಿಷ್‌ ನನ್ನನ್ನು ತುಂಬ ಹೆದರಿಸುತ್ತಿತ್ತು. ನಾನು ಶಾಲೆಗಳಿಗಿಂತ ಹೊರಗೆ ಕಲಿತಿದ್ದೇ ಜಾಸ್ತಿ. ಇಂಗ್ಲಿಷ್‌ನ ‘ಎಬ್ಸಲೂಟ್ಲಿ’ ಎಂಬ ಶಬ್ದ  ಕಲಿತಿದ್ದು ಒಬ್ಬ ಹರ್ಷ ಬೋಗ್ಲೆಯಿಂದ. ಮ್ನಾಗ್ನಿಫಿಸೆಂಟ್‌ ಅನ್ನೋ ಶಬ್ದ ಕಲಿತಿದ್ದು ರವಿಶಾಸ್ತ್ರಿಯಿಂದ. ಹಿಂದಿಯನ್ನು ಕಲಿತಿದ್ದು ಬಿಬಿಸಿಯ ಆಜ್‌ಕಲ್‌ ಕಾರ್ಯಕ್ರಮದಿಂದ. ಒಬ್ಬ ಆಲಿಂದೋ ಚಕ್ರವರ್ತಿಯ ಇಂಗ್ಲಿಷ್‌ ವಾರ್ತೆಗಳನ್ನು ಕೇಳುತ್ತಾ ನಾನು ಇಂಗ್ಲಿಷ್‌ ಮತ್ತು ನ್ಯೂಸ್ ಎರಡನ್ನೂ ಕಲಿತೆ. ಆಗ ನಮ್ಮ ಊರಿಗೆ ಬರುತ್ತಿದ್ದ ಇಂಗ್ಲಿಷ್‌ ಪತ್ರಿಕೆ ಎಂದರೆ ‘ಡೆಕ್ಕನ್‌ ಹೆರಾಲ್ಡ್‌ ’ ಒಂದೇ. ಆ ಪತ್ರಿಕೆಯನ್ನು ಓದಿ ಓದಿಯೇ ಇಂಗ್ಲಿಷ್‌ ಶಬ್ದಗಳನ್ನು ಕಲಿತಿದ್ದು. ಕ್ರಿಕೆಟ್‌ ಸ್ಕೋರ್‌, ಅಂಕಿ ಅಂಶಗಳನ್ನು ನೋಡಿ ನಾನು ಗಣಿತವನ್ನು ಕಲಿತಿದ್ದು. ಬಿಬಿಸಿ ಹಿಂದಿ ಸರ್ವೀಸ್‌ ಕೇಳುತ್ತಲೇ ಸಮಾಜ ವಿಜ್ಞಾನ, ವಿಜ್ಞಾನಗಳನ್ನು ಕಲಿತಿದ್ದು. ಬಿಬಿಸಿ ಹಿಂದಿ ಸರ್ವೀಸ್‌, ಡೆಕ್ಕನ್‌ ಹೆರಾಲ್ಡ್‌, ಕ್ರಿಕೆಟ್‌ ಇವೆಲ್ಲ ನನಗೆ ದೊಡ್ಡ ಸ್ಕೂಲ್‌ಗಳು. ರವಿಶಾಸ್ತ್ರಿ, ಹರ್ಷ ಬೋಗ್ಲೆ, ಟೋನಿ ಗ್ರೇ, ಜೆಸ್ಸಿ ಬಾಯ್‌ಕಾಟ್‌ ಇವರೆಲ್ಲ ನನ್ನ ಗುರುಗಳು.

ಓದು ಅನ್ನುವುದು ಒಂದು ಹಸಿವು ಅಷ್ಟೇ. ಇವತ್ತಿಗೂ ನಾನು ಓದುತ್ತಲೇ ಇರ್ತೀನಿ. ಎಸ್ಸೆಸ್ಸೆಲ್ಸಿ ಸ್ಕೋರ್‌ ಅನ್ನು ಯಾರೂ ಲೆಕ್ಕ ಹಾಕಲೇ ಬಾರದು ಎಂಬುದು ನನ್ನ ಅಭಿಪ್ರಾಯ.

ಯಾಕೆಂದರೆ ಸ್ಕೋರ್‌ ಮಾಡುವುದು ಅನ್ನುವುದು ತುಂಬ ದುಃಖದ ವಿಷಯ ನೋಡಿ. ಯಾಕೆಂದರೆ ಯಾವುದೋ ಒಂದು ವಿಷಯವನ್ನು ಓದಿದಾಗ ‘ವ್ಹಾ ಇದೊಂದು ಮಜಾ ಬಂತು’ ಅಂತ ಅನ್ನಿಸಬೇಕಲ್ಲ. ನನಗೆ ಎಸ್ಸೆಸ್ಸೆಲ್ಸಿವರೆಗೆ ಯಾವ ವಿಷಯವೂ ಹಾಗೆ ಮಜಾ ಕೊಟ್ಟಿಲ್ಲ.
- ಪರಮೇಶ್ವರ ಗುಂಡ್ಕಲ್‌, ಬಿಸಿನೆಸ್‌ ಹೆಡ್‌, ಕಲರ್ಸ್‌ ಕನ್ನಡ

ಬಹುಸಂಖ್ಯಾತ ವಿದ್ಯಾರ್ಥಿಗಳನ್ನು ಕಾಡುವ ಅಸ್ಪಷ್ಟತೆ
ಪರೀಕ್ಷೆಯಲ್ಲಿ ರ‍್ಯಾಂಕ್‌ ಪಡೆದ ವಿದ್ಯಾರ್ಥಿಗಳಿಗೆ ಮುಂದೆ ಯಾವ ಕಾಲೇಜು ಸೇರಬೇಕು, ಏನು ಮಾಡಬೇಕು ಎಂಬ ಬಗ್ಗೆಯೆಲ್ಲಾ ತುಂಬ ಸ್ಪಷ್ಟತೆ ಇರುತ್ತದೆ. ಹಾಗೆಯೇ ಫೇಲಾದವರೂ ಇದು ತಮಗೆ ಒಗ್ಗುವ ದಾರಿಯಲ್ಲ ಎಂದು ಬೇರೆ ದಾರಿ ಹಿಡಿಯುತ್ತಾರೆ. ಆದರೆ ಈ ಜಸ್ಟ್‌ ಪಾಸ್‌ ಅಂಕಗಳನ್ನು ತೆಗೆದುಕೊಂಡ ವಿದ್ಯಾರ್ಥಿಗಳಿಗೆ ಆ ಸ್ಪಷ್ಟತೆ ಇರುವುದಿಲ್ಲ.

ಒಂದು ಸಮಾಜದಲ್ಲಿ ಅತೀ ಹೆಚ್ಚು ಅಂಕ ಪಡೆದವರು ಮತ್ತು ಫೇಲಾದವರು ಎರಡೂ ವರ್ಗದ ವಿದ್ಯಾರ್ಥಿಗಳ ಸಂಖ್ಯೆ ತುಂಬ ಕಡಿಮೆ ಇರುತ್ತದೆ. ಈ ನಡುವಣ ಮಾರ್ಗದ ವಿದ್ಯಾರ್ಥಿಗಳೇ ಬಹುಸಂಖ್ಯಾತರಾಗಿರುತ್ತಾರೆ. ನಿಜವಾಗಿ ಸಮಾಜವನ್ನು ಪ್ರತಿನಿಧಿಸುವವರೇ ಅವರು.

ಆದರೆ ಉನ್ನತ ಗುಣಮಟ್ಟದ ಶಿಕ್ಷಣ ದೊರೆಯುವುದು ಗರಿಷ್ಠ ಅಂಕಪಡೆದ ವಿದ್ಯಾರ್ಥಿಗಳಿಗೆ ಮಾತ್ರ. ಪಾಸಿಂಗ್‌ ಮಾರ್ಕ್ಸ್‌ ವಿದ್ಯಾರ್ಥಿಗಳು ಕಳಪೆ ಗುಣಮಟ್ಟದ ಶಿಕ್ಷಣ ಕೊಡುವ ಯಾವುದೋ ಕಾಲೇಜಿನಲ್ಲಿ ಅಭ್ಯಸನ ನಡೆಸುತ್ತಾರೆ. ಇದು ದೊಡ್ಡ ದುರಂತವಲ್ಲವೇ? ನಮ್ಮ ಶಿಕ್ಷಣ ತಜ್ಞರಾಗಲಿ, ಅಕಾಡೆಮಿಗಳಾಗಲಿ, ಕಾಲೇಜುಗಳಾಗಲಿ ಇವರ ಬಗ್ಗೆ ಗಮನಹರಿಸುವುದೇ ಇಲ್ಲ.
-ನಾರಾಯಣ ಎ., ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT