ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಗತೀಕರಣ ಗಿರಣಿಯಲ್ಲಿ ದೇಸಿ ‘ಕೌದಿ’

Last Updated 29 ಜನವರಿ 2015, 19:30 IST
ಅಕ್ಷರ ಗಾತ್ರ

ಕೌದಿ, ಮಕ್ಕಳನ್ನು ತೊಟ್ಟಿಲಿನಲ್ಲಿ ಬೆಚ್ಚಗಿಡುವ, ಹಾಸಿದರೆ ಹಾಸಿಗೆಯಾಗುವ ಹೊದ್ದರೆ ಹೊದಿಕೆಯಾಗುವ ಬೆಚ್ಚನೆಯ ಹಚ್ಚಡ. ಅಮ್ಮನ ನವೆದ ಸೀರೆ, ಅಪ್ಪನ ಹಳೆಯ ಲುಂಗಿ, ಅಜ್ಜಿಯ ಹರಿದ ಪಟ್ಟೆಪಟ್ಟೆಯ ಸೀರೆಗಳಲ್ಲಿ ಮೈದಳೆಯುವ ಕೌದಿ ಅಲೆಮಾರಿ ‘ಗೊಂದಲಿಗ’ ಸಮುದಾಯದ ಕಲೆಯ ಪ್ರತೀಕ ಸಹ. ಈ ವಿಶಿಷ್ಟ ‘ಕೌದಿ’ ನೇಯ್ಗೆಯ ಕಾರಣದಿಂದ ಈ ಸಮುದಾಯವನ್ನು ಗುರ್ತಿಸಲಾಗುತ್ತದೆ. ಒಂದರ್ಥದಲ್ಲಿ ಇದು ‘ಗೊಂದಲಿಗ’ ಸಮುದಾಯದ ಹೆಣ್ಣುಮಕ್ಕಳ ಕುಲ ಕಸುಬು ಎಂದರೂ ತಪ್ಪಲ್ಲ. ಹೀಗೆ ಒಂದು ಸಮುದಾಯದ ಕಲೆ ಮತ್ತು ಬದುಕಿನ ಸಂಕೇತದಂತೆ ಕಾಣುವ ಕೌದಿಗೂ ಒಂದು ಕಥೆಯನ್ನು ಕಟ್ಟಿ ಚಿತ್ರರೂಪಕ್ಕೆ ಇಳಿಸಿದ್ದಾರೆ ನಿರ್ದೇಶಕ ರವೀಂದ್ರ ಸಿರಿವರ.

ಸಿರಿವರ ನಿರ್ದೇಶನದ ‘ಕೌದಿ’ ಚಿತ್ರಕ್ಕೆ ‘ಯು’ ಪ್ರಮಾಣ ಪತ್ರ ಸಿಕ್ಕಿದ್ದು ಫೆಬ್ರುವರಿಯಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಒಂದು ಸಣ್ಣ ಅಲೆಮಾರಿ ಸಮುದಾಯದ ಬದುಕು–ಬಾಳ್ವೆ ಮತ್ತು ಕಲೆಯ ಸಿರಿವಂತಿಕೆಯನ್ನು ಕಟ್ಟಿಕೊಡುವುದಷ್ಟೇ ಅಲ್ಲದೆ ಆ ಸಮುದಾಯದ ಮೇಲೆ ಜಾಗತೀಕರಣ ಬೀರುವ ಪರಿಣಾಮಗಳನ್ನು ‘ಕೌದಿ’ ಚಿತ್ರಿಸಿದೆಯಂತೆ. 100–200 ರೂಪಾಯಿಗಳಿಗೆ ಸಿದ್ಧವಾಗುವ ಕೌದಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆ ಇದೆ. ಆದರೆ ಅನಕ್ಷರತೆಯ ಕಾರಣದಿಂದ ಶ್ರಮಸಂಸ್ಕೃತಿಯಲ್ಲಿನ ಈ ಜನರಿಗೆ ಆ ಹಣ ಸಿಗದೆ ಮಧ್ಯವರ್ತಿಗಳ ಪಾಲಾಗುತ್ತಿದೆ. ಹೀಗಿರುವಾಗ ಒಂದು ಸಣ್ಣ ಕಸುಬಿನ ಮೂಲಕ ಇಡೀ ಆ ಜನ ಸಮುದಾಯದ ಬದುಕನ್ನು ಅವಲೋಕಿಸುವ ಪ್ರಯತ್ನವಾಗಿಯೂ ‘ಕೌದಿ’ ರೂಪುಗೊಂಡಿದೆ.

ಸಿರಿವರ ಅವರಿಗೆ ‘ಕೌದಿ’ ಚಿತ್ರಕಥೆ ಸಿಕ್ಕಿದ್ದಕ್ಕೂ ಒಂದು ವಿಶೇಷ ಸಂದರ್ಭವಿದೆ. ‘ಬಿ. ಜಯಶ್ರೀ ಅವರು ಮೈಸೂರಿನಲ್ಲಿ ಆಯೋಜಿಸುವ ಸಂಪದ ಉತ್ಸವದಲ್ಲಿ ಕಲಾ ನಿರ್ದೇಶಕ ಶಶಿಧರ ಅಡಪ ಮತ್ತು ನಾನು ತೊಡಗಿದ್ದೆವು. ಉತ್ಸವದಲ್ಲಿ ಒಂದು ಮಳಿಗೆಯನ್ನು ಕೌದಿಗಳ ಮಾರಾಟ ಮತ್ತು ತಯಾರಿಕೆಗೆ ಮೀಸಲಿಡಲು ನಿರ್ಧರಿಸಿದೆವು. ರಾಯಚೂರು ಜಿಲ್ಲೆಯ ಹಳ್ಳಿಯೊಂದರಲ್ಲಿ ಕೌದಿ ಸಿದ್ಧ ಮಾಡುವವರನ್ನು ಸಂಪರ್ಕಿಸಿದೆವು. ಅವರಿಗೆ ಊಟ–ವಸತಿ ನೀಡುವ ಜತೆಗೆ ಐದು ಕೌದಿಗಳನ್ನು ಮೂರು ಸಾವಿರ ರೂಪಾಯಿಗೆ ಒಂದರಂತೆ ನಾವೇ ಕೊಳ್ಳುವುದಾಗಿ ಮತ್ತು ಉಳಿದದ್ದನ್ನು ನೀವು ಮಾರಾಟ ಮಾಡಬಹುದು ಎಂದು ಭರವಸೆ ನೀಡಿದೆವು. ಆದರೆ ಅವರು ಉತ್ಸವದಲ್ಲಿ ಪಾಲ್ಗೊಳ್ಳಲಿಲ್ಲ. ಸ್ವಲ್ಪ ದಿನಗಳ ತರುವಾಯ ಅವರನ್ನು ನಾನು ಸಂಪರ್ಕಿಸಿದೆ. ‘ನಾವು 10–15 ಕೌದಿಗಳನ್ನು ಸಿದ್ಧಮಾಡಿಕೊಂಡಿದ್ದೆವು. ನಮ್ಮೂರಲ್ಲಿ ವಿಪರೀತ ಮಳೆ.

ಮನೆಯಲ್ಲಿದ್ದ ಸಾಮಾನು–ಸರಂಜಾಮುಗಳೆಲ್ಲ ಕೊಚ್ಚಿ ಹೋದವು. ನಾವು ಮಾಡಿದ್ದ ಕೌದಿಗಳನ್ನು ನಮ್ಮೂರಿನ ಮಕ್ಕಳಿಗೆ ಹೊದೆಯಲು ಕೊಟ್ಟೆವು’ ಎನ್ನುವ ಉತ್ತರ ಬಂದಿತು. ನಾನು ಮತ್ತು ಶಶಿಧರ ಅಡಪ ಈ ಪ್ರಸಂಗವನ್ನು ಹಂಚಿಕೊಳ್ಳುವಾಗ ಸಿನಿಮಾದ ಕಥೆ ಹೊಳೆಯಿತು. ಇದೇ ಸಂದರ್ಭದಲ್ಲಿ ನಾನು ದೆಹಲಿಯ ಪಂಚತಾರಾ ಹೋಟೆಲ್‌ನಲ್ಲಿ ತಂಗಿದ್ದಾಗ ಹೊದಿಯಲು ಕೌದಿ ಕೊಟ್ಟರು. ಹಾಸನದಲ್ಲಿ ಒಬ್ಬರ ಬಳಿ ಇದನ್ನು ಕೊಳ್ಳಲು ಹೋದಾಗ ಅವರು ಹೇಳಿದ ಬೆಲೆ 10 ಸಾವಿರ ರೂಪಾಯಿ! ಬಡ ಜನರು ಬಡತನದ ಕಾರಣಕ್ಕೆ ಬಳಸುವ ಮತ್ತು ಸಿರಿವಂತರು ಹೊದೆಯುವ ಕೌದಿ ಕಾಣಿಸಿತು. ಇದೆಲ್ಲವನ್ನೂ ಜತೆಗಿಟ್ಟುಕೊಂಡು ಆರು ತಿಂಗಳುಗಳ ಕಾಲ ಅಧ್ಯಯನದಲ್ಲಿ ತೊಡಗಿದಾಗ ಕೌದಿಯ ಜತೆ ಜತೆಗೆ ಕಾಣಿಸಿದ್ದು ಗೊಂದಲಿಗ ಸಮುದಾಯದ ಬದುಕು ಮತ್ತು ಕಲೆ’ ಎಂದು ಚಿತ್ರಕಥೆಯ ಹಿಂದಿನ ಚಿತ್ರಿಕೆಗಳನ್ನು ನೆನಪಿಸಿಕೊಂಡರು ರವೀಂದ್ರ ಸಿರಿವರ.

ಅಂಬವ್ವನ ಕಥೆ
ತನ್ನ ಮಗಳ ಮದುವೆಗಾಗಿ ವಿಶೇಷವಾದ ಕೌದಿ ತಯಾರಿಸುವ ಅಂಬವ್ವನ ಕಥೆ ಚಿತ್ರದ್ದು. ಮಗಳ ಮದುವೆಗೆ ಸಿದ್ಧಮಾಡುತ್ತಿರುವ ಕೌದಿಯ ಮೇಲೆ ಆಕೆಗೆ ವಿಶೇಷ ಪ್ರೀತಿ. ಬಡತನದಲ್ಲೂ ರೇಷ್ಮೆಯ ತುಣುಕುಗಳನ್ನು ಅದಕ್ಕೆ ಪೋಣಿಸುವಳು. ಆಕೆಗೆ ಸಿರಿತನದ ಕಂಠವಿದೆ. ಈ ಕಾರಣಕ್ಕೆ ಆಕೆಯನ್ನು ಸಂದರ್ಶಿಸಲು ಬರುವ ವಾಹಿನಿಯ ಮಂದಿಗೆ ಅಂಬವ್ವನ ಕೌದಿ ಕಲೆಯೂ ಕಾಣಿಸುತ್ತದೆ. ಆ ಕಲೆ ಅವಳಿಗೆ ಬದುಕು ಮತ್ತು ಮಮತೆಯ ತುಡಿತವಾದರೆ ಮತ್ತೆ ಕೆಲವರಿಗೆ ಬಂಡವಾಳದ ಸರಕು. ಇಲ್ಲಿ ಗೊಂದಲಿಗರ ಸಾಮಾಜಿಕ, ಆರ್ಥಿಕ ಬದುಕಿನ ಅನಾವರಣವೂ ಆಗುತ್ತದೆ.

ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲ್ಲೂಕಿನ ಪುರ ಗ್ರಾಮದಲ್ಲಿ ‘ಕೌದಿ’ ಚಿತ್ರೀಕರಿಸಲಾಗಿದ್ದು ಬಿ. ಜಯಶ್ರೀ, ಮಾನಸ ಜೋಷಿ, ಸುಮತಿ ಪಾಟೀಲ್, ಮಧು,  ವೆಂಕಟರಾಜು ಮುಖ್ಯ ತಾರಾಗಣದಲ್ಲಿದ್ದಾರೆ. ತಾರಾಗಣದಲ್ಲಿನ ಅನೇಕರು ಹೂವಿನಹಡಗಲಿಯ ‘ರಂಗಭಾರತಿ’ ರಂಗತಂಡದ ಕಲಾವಿದರೇ ಆಗಿದ್ದಾರೆ.

‘ಗೊಂದಲಿಗರ ಗಂಡಸರು ಊರೂರು ಸುತ್ತುತ್ತ ಅಲೆಮಾರಿಗಳಾಗಿ ಹೋಗುತ್ತಾರೆ. ಇವರಲ್ಲಿ ಉಢಾಪೆ ಮತ್ತು ಬೇಜವಾಬ್ದಾರಿ ಹೆಚ್ಚು. ಮನೆಯನ್ನು ನಡೆಸುವುದು ಹೆಂಗಸರು. ರಾಜ್ಯದಲ್ಲಿರುವ ಈ ಸಮುದಾಯದಲ್ಲಿ ಕೇವಲ ಐದು ಮಂದಿ ಮಾತ್ರ ಸ್ನಾತಕೋತ್ತರ ಪದವಿ ಪಡೆದವರು ಇದ್ದಾರೆ. ಚಿತ್ರದಲ್ಲಿ ಗೊಂದಲಿಗರ ಜನಪದ ಸಂಸ್ಕೃತಿ, ಗೊಂದಲ ಹಾಕುವುದು ಸೇರಿದಂತೆ ಅವರ ಸಂಸ್ಕೃತಿಯನ್ನು ಬಳಸಿಕೊಂಡಿದ್ದು ಅವರಿಂದಲೇ ಹಾಡಿಸಲಾಗಿದೆ. ಕೌದಿ ಇಲ್ಲಿ ಒಂದು ಸಾಂಕೇತಿಕ ಮತ್ತು ಪ್ರಧಾನ ಎಳೆಯಂತೆ ಬಳಕೆಯಾಗಿದ್ದು, ಒಂದು ಸಮುದಾಯದ ಬದುಕನ್ನು ತೋರುವ ಪ್ರಯತ್ನ ಮಾಡಲಾಗಿದೆ’ ಎಂದು ರವೀಂದ್ರ ಹೇಳುತ್ತಾರೆ.

ಈ ಹಿಂದೆ ‘ಗಾಂಧಿಜಯಂತಿ’ ಚಿತ್ರವನ್ನು ನಿರ್ದೇಶಿಸಿದ್ದ ಸಿರಿವರ ಅವರಿಗೆ ಕಲಾತ್ಮಕ ಚಿತ್ರಗಳನ್ನು ಜನರಿಗೆ ತಲುಪಿಸುವಲ್ಲಿ ಎದುರಾಗುವ ಸಮಸ್ಯೆಗಳ ಅರಿವು ಇದೆ. ‘ಬೆಂಗಳೂರು ಬಿಟ್ಟು ಉತ್ತರ ಕರ್ನಾಟಕದ ತಾಲ್ಲೂಕು ಮಟ್ಟದಲ್ಲಿನ ಸಣ್ಣ ಚಿತ್ರಮಂದಿರಗಳಲ್ಲಿ ಸಿನಿಮಾವನ್ನು ತೆರೆಗೆ ತರಲಾಗುವುದು. ಆ ನಂತರ ಬೆಂಗಳೂರಿಗೆ ತರುವ ಆಲೋಚನೆ ಇದೆ’ ಎನ್ನುತ್ತಾರೆ.
 
ಗೊಂದಲಿಗರು ಮತ್ತು ಕೌದಿ
ಗೊಂದಲಿಗ ಸಮುದಾಯದಲ್ಲಿ ಕೌದಿಗೆ ಪೂರ್ವಿಕರ ಸ್ಥಾನವಿದೆ. ತಮ್ಮ ಪೂರ್ವಿಕರು ಈ ಹಚ್ಚಡದ ಮೂಲಕ ತಮ್ಮನ್ನು ರಕ್ಷಿಸುತ್ತಿದ್ದಾರೆ ಎನ್ನುವ ನಂಬಿಕೆ ಇದೆ. ಕೌದಿ ಸವೆದರೂ ಅದನ್ನು ಇವರು ಬಿಸಾಕುವುದಿಲ್ಲ. ಸವೆದ ಕೌದಿಯನ್ನು ಬೂದಿ ಮಾಡಿ ಅದಕ್ಕೆ ಗಂಜಲವನ್ನು ಸೇರಿಸಿ ಮರಕ್ಕೆ (ಧಾನ್ಯಗಳನ್ನು ಹಸನು ಮಾಡುವುದು) ಬಳಿಯುತ್ತಾರೆ. ಮರಾಠರ ಶಿವಾಜಿ ಕಾಲದಲ್ಲಿ ಆತನ ರಾಜ್ಯದ ಗುಪ್ತಚಾರದಲ್ಲಿ ತಾವು ಇದ್ದು ಆ ಕಾರಣಕ್ಕೆ ಅಲೆಮಾರಿ ಸಮುದಾಯವಾದೆವು ಎನ್ನುವ ನಂಬಿಕೆ ಗೊಂದಲಿಗರದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT