ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಡಮಾಲಿ

ಕಥೆ
Last Updated 20 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ದೈತ್ಯ ಹಾರ್ಲೆ ಡೇವಿಡ್‌ಸನ್ ಮೋಟಾರ್‌ಸೈಕಲ್ ಸುಂಟರಗಾಳಿಯಂತೆ ನುಗ್ಗಿಹೋಗಿದ್ದರ ಪರಿಣಾಮ ಸಾವಧಾನವಾಗಿ ಎದ್ದು ಕುಳಿತಳು ಗಂಗಾ. ಚಳಿಗಾಲ, ಮಂಜು ಮಳೆಯಂತೆ ಎಡೆಬಿಡದೆ ಸುರಿಯುತ್ತಿತ್ತು. ಕತ್ತಲಿನ್ನೂ ಕರಗಿರಲಿಲ್ಲ, ರಾತ್ರಿ ನಿದ್ದೆ ಹತ್ತಿದ್ದೇ ತಡವಾಗಿ. ತೀರಿಹೋದ ತನ್ನ ಕಿರುಜಗತ್ತಿನ ಕುರಿತು ಗೊಣಗಾಡಿಕೊಂಡು ರೆಸ್ಟೋರೆಂಟ್ ಗೋಡೆಗೆ ತಬ್ಬಿ ಮಲಗುವುದು ಅಭ್ಯಾಸವಾಗಿ ಹೋಗಿದೆ. ಬೆಳಿಗ್ಗೆ ಏಳುವಾಗಲೂ ಗೊಣಗುವಿಕೆ ಪುನರಾವರ್ತನೆಯಾಗುವುದು.

ಮೊದಲು ಕೆಫೆ ಡೇ ಮುಂಭಾಗದಲ್ಲಿ ಕುಳಿತುಕೊಳ್ಳುತ್ತಿದ್ದಳು. ‘ಇಲ್ಲಿ ಅನಾಥರು, ಭಿಕ್ಷುಕರು ಇರುವಂತಿಲ್ಲ’– ಮಿಲಿಟರಿಯಿಂದ ನಿವೃತ್ತಿ ಹೊಂದಿ, ಆಗಷ್ಟೇ ಕಾವಲುಗಾರ ವೃತ್ತಿಗೆ ಬಡ್ತಿ ಪಡೆದಿದ್ದ ಕೊಡಗಿನವನು ಗತ್ತಿನಲ್ಲಿ ಗಂಗಾಳಿಗೆ ಆದೇಶಿಸಿದ್ದ. ಅಂದಿನಿಂದ ರೆಸ್ಟೋರೆಂಟ್, ಬಾರ್, ಗ್ಯಾರೇಜ್ ವರಾಂಡಗಳಲ್ಲಿ ಮಲಗಿಕೊಳ್ಳುವಳು. ಒಂದು ಗಳಿಗೆ ಬಂಡೆಗಲ್ಲಿನಂತೆ ಕುಳಿತು ಗಟ್ಟಿಯಾಗಿ ಕಣ್ಣುಜ್ಜಿಕೊಂಡಳು.

ರಸ್ತೆ ಆ ಬದಿಯ ಏರುಕಟ್ಟಡಗಳು, ಬ್ರಾಂಡೆಡ್ ಶೋರೂಮ್‌ಗಳು, ಸ್ಪೈಸ್ ಜೆಟ್, ಕಿಂಗ್‌ಫಿಶರ್ ಹೋಲ್ಡಿಂಗ್‌ಗಳು ಶುಭ್ರಗೊಂಡವು. ಕೂರೆ ಹೇನುಗಳು ಕಾಡತೊಡಗಿದವು. ಕೆರೆದಿದ್ದೇ ನರೆಗೂದಲ ಗುಚ್ಛ ಕೈಗೆ ದಕ್ಕಿತು. ಬೊಗಸೆಯಲ್ಲಿಡಿದು ನೋಡಿದಳು, ಆ ಕಾಲದ ನೆನಪು ಹಕ್ಕಿಯಂತೆ ಆಳದಿಂದ ತನ್ನೊಳಗೆ ಚಿಮ್ಮಿತು.
***
ಚಾಪೆ, ಬುಟ್ಟಿ ಹೆಣೆಯುವ ಬೂರನ ಕುಟುಂಬದೊಂದಿಗೆ ಗಂಗಾ ತೆಲುಗುನಾಡಿನಿಂದ ಕರ್ನಾಟಕಕ್ಕೆ ಬಂದಾಗ ಅವಳಿಗೆ ವಯಸ್ಸು ಇಪ್ಪತ್ತು. ಈಗ ಅರವತ್ತು ದಾಟಿದೆ. ಅಂದರೆ ಬರೋಬ್ಬರಿ ನಲವತ್ತು ವರ್ಷಗಳು ಈ ನೆಲದಲ್ಲಿ ದೇಹ ಮತ್ತು ಮನಸ್ಸು ಎರಡನ್ನೂ ಸವೆಸಿದ್ದಾಳೆ. ಸಾತನೂರು ಹತ್ತಿರ ನೀಲಗಿರಿತೋಪಿನ ಬಳಿ ಬೂರ ಬಿಡಾರ ಹೂಡಿದ. ಅನುಮತಿ ಕೇಳದೆ ತನ್ನೊಂದಿಗೆ ರೈಲು ಹತ್ತಿದ್ದರಿಂದ ಬೂರ ಗಂಗಾಳನ್ನು ಗದರುತ್ತಿದ್ದ, ಅವಳ ಮುಖ ಕಂಡರಾಗುತ್ತಿರಲಿಲ್ಲ. ಹಾಗೆ ನೋಡಿದರೆ ಗಂಗಾ ಬೂರನಿಗೆ ಹತ್ತಿರದ ಸಂಬಂಧಿಕಳೇ.

ಆ ಕಾರಣಕ್ಕೆ ಉರಿದುಬೀಳುತ್ತಿದ್ದ, ನೆರೆಹೊರೆಯವಳಾಗಿದ್ದರೆ ಲೆಕ್ಕಿಸುತ್ತಿರಲಿಲ್ಲ. ಸಂಬಂಧಿಕರಲ್ಲಿ ಮಾತಿಗೆ ಸಿಲುಕಿಕೊಂಡರೆ ಜಾಲಿಮುಳ್ಳೊಳಗೆ ಬಿದ್ದಂತೆ, ಸತ್ತ ನಂತರವೂ ಬದುಕಗೊಡರು. ಇವನ ಹೆಂಡತಿ ಅಲ್ಲೂರಮ್ಮ, ‘ಬುಟ್ಟಿಚಾಪೆ ಹೆಣಿಯಾಕೆ ಆಳು ಬೇಕು ಸುಮ್ನಿರು’ ಎಂದು ಗಂಡನನ್ನು ಸಮಾಧಾನಪಡಿಸುತ್ತಿದ್ದಳು. ಬೆಳಿಗ್ಗೆ ಎದ್ದ ಕೂಡಲೇ ಬೂರ ಉದ್ದನೆಯ ಕತ್ತಿ ಹಿಡಿದುಕೊಂಡು ಹಳ್ಳಿಹಳ್ಳಿಗಳ ಮೇಲೆ ಸವಾರಿ ಹೊರಡುತ್ತಿದ್ದ. ಅವನೊಂದಿಗೆ ಅಲ್ಲೂರಮ್ಮ, ಮಗಳು ದೇವಿ, ಗಂಗಾಳೂ ಸಾಲುಗಟ್ಟುತ್ತಿದ್ದರು.

ದೇವನಹಳ್ಳಿ, ದೊಡ್ಡಬಳ್ಳಾಪುರ, ವೆಂಕಟಾಲ ಸುತ್ತಲಿನ ಹಳ್ಳಿಗಳಲ್ಲಿ ಈಚಲುಕಾಡನ್ನು ಹುಡುಕುತ್ತಿದ್ದರು. ಎಳೆರೆಕ್ಕೆಗಳನ್ನು ಕೊಯ್ದು ಮುಳ್ಳುಎಲೆಗಳನ್ನು ಸವರಿ ಕಡ್ಡಿಗಳನ್ನು ಬಿಸಿಲಿಗೆ ಒಣಹಾಕುತ್ತಿದ್ದರು. ಸಂಪೂರ್ಣ ಒಣಗಿದ ನಂತರ ಚಾಪೆಯೋ, ಬಿದಿರ ಬುಟ್ಟಿಯೋ, ಹೂದಾನಿಯೋ, ಡಾಬಾಗಳಿಗೆ ಕಟ್ಟುವ ಕಿಟಕಿ ಪರದೆಯನ್ನು ಹೆಣೆಯಲು ಸಜ್ಜಾಗುತ್ತಿದ್ದರು. ಆರಂಭದಲ್ಲಿ ಗಂಗಾ ಈಚಲುಮರದಲ್ಲಿನ ತಿವಿಯಲು ಸಿದ್ಧವಾಗಿ ನಿಂತಿರುವ ಮುಳ್ಳುರೆಕ್ಕೆಗಳನ್ನು ಕೊಯ್ಯಲು  ಹರಸಾಹಸ ಪಡುತ್ತಿದ್ದಳು.

ಎದೆಗೋ, ಕೈಬೆರಳುಗಳಿಗೋ, ತಲೆಗೋ ತಿವಿದುಕೊಂಡು ಕಿಟಾರನೆ ಚೀರಿಕೊಂಡು ಅಲ್ಲೇ ಬುಡದಲ್ಲಿ ಕುಳಿತುಬಿಡುತ್ತಿದ್ದಳು. ಅಲ್ಲೂರಮ್ಮ ನಿಂತಲ್ಲೇ ರೆಕ್ಕೆ ಕೊಯ್ಯುವುದನ್ನು ಹೇಳಿಕೊಡುತ್ತಿದ್ದಳು. ಬರುಬರುತ್ತಾ ಗಂಗಾ ಮುಳ್ಳುರೆಕ್ಕೆ ಕೊಯ್ಯುವುದಲ್ಲದೆ ಬೂರನ ಕೈ ಬೆರಳುಗಳು ಮತ್ತು ಕ್ರಿಯಾಶೀಲವಾಗಿ ಓಡುವ ಅವನ ಮನಸ್ಸಿನೊಂದಿಗೆ ಮುನ್ನಡೆಯತೊಡಗಿದಳು. ಪುಟ್ಟಬುಟ್ಟಿಗಳನ್ನು ಕಟ್ಟುತ್ತಿದ್ದವಳು, ದೊಡ್ಡಬುಟ್ಟಿಗಳನ್ನು ಮತ್ತು ವಿವಿಧ ಆಕಾರದ ಹೂದಾನಿಗಳನ್ನು ಹೆಣೆಯತೊಡಗಿದಳು. ಬೂರ ಮೇಲ್ನೋಟಕ್ಕೆ ಧಿಮಾಕು, ಸಿಟ್ಟು ಪ್ರದರ್ಶಿಸಿದರೂ ಒಳಗೊಳಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದ.

ಬೂರ ಆವೊತ್ತು ಬಾಗಲೂರು ಕ್ರಾಸ್‌ನಲ್ಲಿನ ಡಾಬಾಗೆ ಕಿಟಕಿ ಪರದೆ ಕಟ್ಟಿಕೊಡಲು ಹೋಗಿದ್ದ. ಗಂಗಾ ಹತ್ತಿಪ್ಪತ್ತು ಬುಟ್ಟಿಗಳನ್ನು ಹೆಣೆದು, ಬಣ್ಣ ಹನಿಸಿ ಹೆಗಲಿಗೆ ತೂಗಿಸಿಕೊಂಡು ಎಂಟು ವರ್ಷದ ಬೂರನ ಹೆಣ್ಣುಮಗಳು ದೇವಿಯನ್ನು ಕರೆದುಕೊಂಡು ಮಿಲಿಟರಿ ಕ್ವಾಟ್ರಸ್ ಕಡೆ ವ್ಯಾಪಾರಕ್ಕೆ ನಡೆದಳು. ದೇವಿ ತುಂಟ ಹುಡುಗಿ. ತಂದೆತಾಯಿ ಹತ್ತಿರ ಇರುವಾಗಲಷ್ಟೇ ಘನಗಂಭೀರವಾಗಿ ಹೇಳಿದ ಕೆಲಸ ಮಾಡುವುದು. ತಾನೊಬ್ಬಳೆ ಆಚೆಬಂದರೆ, ಅಥವಾ ಹೀಗೆ ಗಂಗಾಳೊಟ್ಟಿಗೆ ಬಂದಾಗ ಮನಸೋಇಚ್ಛೆ ನಲಿದುಬಿಡುವಳು.

ಗಂಗಾ ತಿರುಗಿ ನೋಡಿದರೆ ಅವಳು ಕಾಣುತ್ತಿರಲಿಲ್ಲ, ಅಲ್ಲೆಲ್ಲೋ ಮರಗಿಡಗಳ ಹಿಂದೆಯೋ ಬಾರ್ ಮಗ್ಗುಲಿನಲ್ಲೋ ಕಾಣಿಸಿಕೊಳ್ಳುತ್ತಿದ್ದಳು. ಗಂಗಾಳಿಗೆ ಒಂದು ಕ್ಷಣ ಜೀವವೇ ಹೋದಂತಾಗುತ್ತಿತ್ತು. ಏಕೆಂದರೆ ಬೂರನಿಗೆ ಅವಳೆಂದರೆ ಜಗತ್ತು. ಒಮ್ಮೆ ಹೀಗೆ ಈಚಲುಕಾಡಿನಲ್ಲಿ ಮುಳ್ಳುಎಲೆ ಕೊಯ್ಯುವಾಗ ದೇವಿಗೆ ಮುಳ್ಳು ಚುಚ್ಚಿಕೊಳ್ತು, ಸಹಿಸಿಕೊಳ್ಳದೆ ನೋವಿನಿಂದ ಚೀರಿಕೊಳ್ಳತೊಡಗಿದಳು.

ಬೂರನಿಗೆ ಎಲ್ಲಿತ್ತೋ ಸಿಟ್ಟು, ಮುಳ್ಳುರೆಕ್ಕೆ ಕಿತ್ತುಕೊಂಡು ಅಲ್ಲೂರಮ್ಮನನ್ನು ಈಚಲುಕಾಡು ಅಲೆಯುವಂತೆ ಓಡಾಡಿಸಿಕೊಂಡು ಹೊಡೆದಿದ್ದ. ಕತ್ತಿಯನ್ನೂ ಬೀಸಿದ್ದ, ಅವಳ ತಲೆ ಕತ್ತರಿಸಿ ಬೀಳುವಂತೆ. ನಡಗುತ್ತಾ ಈಚಲುಬುಡದಲ್ಲಿ ಅವಿತುಕೊಂಡಿದ್ದಳು, ಮುಳ್ಳುರೆಕ್ಕೆಗಳನ್ನು ಬಿಡಿಸಿ ನೋಡಿದರೆ ಅರೆನಗ್ನಳಾಗಿದ್ದಳು. ಆ ಸಂದರ್ಭವನ್ನು ನೆನೆಸಿಕೊಂಡರೆ ಗಂಗಾಳ ಗುಂಡಿಗೆ ಕೈಗೆ ಬಂದಂತಾಗುತ್ತದೆ.

ಮಿಲಿಟರಿ ಕಂಪೆನಿ ಸಬ್ಸಿಡೈರಿ ಟ್ರೈನಿಂಗ್ ಸೆಂಟರ್ (ಎಸ್‌ಟಿಸಿ) ಬಳಿಯಿರುವ ಅಪಾರ್ಟ್‌ಮೆಂಟ್ಸ್ ಕಡೆ ಇಬ್ಬರೂ ನಡೆಯುತ್ತಿದ್ದರು. ವೇಗವಾಗಿ ಚಲಿಸುವ ಪ್ರತಿವಾಹನಕ್ಕೂ ದೇವಿ ಕೈ ಬೀಸುತ್ತಾ ಮುಂದೆ ಮುಂದೆ ಸಾಗುತ್ತಿದ್ದಳು, ಕೆಲವೊಮ್ಮೆ ನಿಂತಲ್ಲೇ ನಿಂತುಬಿಡುತ್ತಿದ್ದಳು. ಆಗ ಗಂಗಾ ಮತ್ತೆ ಹಿಂದಕ್ಕೆ ನಡೆದು ಬೆರಗಿನಲ್ಲಿ ಕಳೆದುಹೋದ ಹುಡುಗಿಯನ್ನು ಎಚ್ಚರಿಸಿ ಕರೆದುಕೊಂಡು ಮುನ್ನಡೆಯುತ್ತಿದ್ದಳು. ನೀಲಗಿರಿ ತೋಪಿನ ಪಕ್ಕದಲ್ಲಿ ಉದ್ದನೆಯ ಕಲ್ಲು ಕಾಂಪೌಂಡ್ ಎದುರಾಯಿತು. ಗಂಗಾ ತನ್ನ ಎಡಗೈಅನ್ನು ಕಲ್ಲುಗಳ ಮೇಲೆ ಸವರತೊಡಗಿದಳು. ಏನೇನೋ ಕೈಬರಹಗಳು.

ಬಹುಜನ ಸಮಾಜ ಪಾರ್ಟಿಯಿಂದ ಐನೂರ ಒಂದು ಉಚಿತ ಸಾಮೂಹಿಕ ‘ಅತ್ಯಾಚಾರ’, ಯಾರೋ ಪುಂಡರು ‘ವಿವಾಹ’ವನ್ನು ಅಳಿಸಿ ಅತ್ಯಾಚಾರ ಎಂದು ಗೀಚಿದ್ದರು. ಜಸ್ಸಿ ಸಿಂಗ್ ಟ್ರಾವೆಲ್ಸ್, ಮಾದಿಗ ದಂಡೋರ... ಕೈ ಆಡುವುದು ನಿಂತಿತು, ತಾನೂ ನಿಶ್ಚೇಷ್ಟಳಾದಳು. ಆಂಧ್ರದಲ್ಲಿ ನಡೆಯುತ್ತಿದ್ದ ಮಾದಿಗ ದಂಡೋರ ಚಳುವಳಿಯಲ್ಲಿ ತಾನು ಭಾಗವಹಿಸುತ್ತಿದ್ದ ದಿನಗಳು ನೆನಪಾದವು. ತಮಟೆ ಸದ್ದು, ಎದೆ ಹೊಡೆದುಕೊಂಡು ಕೂಗುವ ಘೋಷಣೆಗಳು, ಬೀದಿನೃತ್ಯಗಳು... ಹೀಗೆ ಒಂದೊಂದಾಗಿ ಸಾಲುಚಿತ್ರಗಳು ಸರಿದು ಹೋಗತೊಡಗಿದವು.
ಶಾಲೆ ಓದುತ್ತಿದ್ದಾಗಲೇ ಗಂಗಾಳಿಗೆ ಚಳವಳಿ, ಹೋರಾಟಗಳಲ್ಲಿ ಆಸಕ್ತಿ ಮೂಡಿತು.

ನಾಯಕನ ಮಾತು ಅನುಸರಿಸಿ ಜೋರಾಗಿ ಕೂಗುವುದು, ರಸ್ತೆ ತಡೆ ಮಾಡುವುದು, ಸರ್ಕಾರಿ ಕಚೇರಿ, ಪೊಲೀಸ್ ಸ್ಟೇಷನ್ನು ಮುತ್ತಿಗೆ ಹಾಕುವುದು... ಹೀಗೆ ಚಳವಳಿ ಇವಳ ಪಾಲಿಗೆ ಆಟ ಎನಿಸಿತ್ತು. ಮಾದಿಗ ದಂಡೋರ ಹೋರಾಟ ಸಮಿತಿಯ ಸಂಚಾಲಕ ಎರ್ರ ನಾರಾಯಣನ ಕರೆಯ ಮೇರೆಗೆ ನೂರಾರು ಹೆಣ್ಣಮಕ್ಕಳು ಬಸ್ಸು ಹತ್ತಿದರು. ಅವರಲ್ಲಿ ಗಂಗಾಳೂ ಇದ್ದಳು. ದಲಿತ ಹೆಣ್ಣೊಬ್ಬಳನ್ನು ಜಮೀನ್ದಾರ ಮಕ್ಕಳು ಸಾಮೂಹಿಕ ಅತ್ಯಾಚಾರ ಮಾಡಿ ಕೊಲೆಗೈದ ಪಾತಕಿಗಳನ್ನು ಕೋರ್ಟ್ ನಿರಪರಾಧಿಗಳೆಂದು ತೀರ್ಪು ನೀಡಿತ್ತು.

ಕೋರ್ಟು ಮತ್ತು ಫ್ಯೂಡಲ್‌ಗಿರಿ ವಿರುದ್ಧ ದಂಗೆ ಸಾರಿದ ಚಳವಳಿ ಅದಾಗಿತ್ತು. ಬಸ್ಸಿನ ಮೇಲೆ ಕುಳಿತುಕೊಂಡು ಚಿತ್ರಾನ್ನ ತಿಂದಳು. ಪ್ರತಿಭಟನೆ ಮುಗಿದ ನಂತರ ಎರ್ರ ನಾರಾಯಣ ಗಂಗಾಳ ಜೇಬಿನಲ್ಲಿ ನಾಲ್ಕು ಕಾಸು ಮಡಗಿದ್ದ. ಇದ್ಯಾಕೋ ಖುಷಿ ತಂದಿತು. ಇದು ಗಂಗಾಳ ಮೊದಲ ಚಳವಳಿ. ಕಲಿತ ನಾಲ್ಕು ಅಕ್ಷರ ಅಲ್ಲೇ ಬಿಟ್ಟು ಜನರೊಂದಿಗೆ ಬೆರೆಯುವ ಪ್ರೀತಿಯಿಂದ, ಹಸಿವು ನೀಗಿಸಿಕೊಳ್ಳಲು ಜನಾಂದೋಲನದಲ್ಲಿ ಪಾಲ್ಗೊಳ್ಳತೊಡಗಿದಳು.  ಗೆಜ್ಜೆ ಕಟ್ಟಿ ಕುಣಿದರೆ ನೆಲ ಬಗೆದುಕೊಳ್ಳುವ, ತನ್ನ ಒಂದೇ ಒಂದು ಕೂಗಿನಲ್ಲಿ ನೊಂದ ಜೀವಗಳನ್ನು ಬಡಿದೆಬ್ಬಿಸುವ, ಅಧಿಕಾರಿಶಾಹಿಯ ದರ್ಪ ಮೆಟ್ಟಿ ನಿಲ್ಲುವ, ರಾಜಕಾರಣಿಗಳ ಭ್ರಷ್ಟತೆಯನ್ನು ಸಾರುವ ಗದ್ದರ್ ತಮಟೆ ಏಟಿಗೂ ಕುಣಿದುಬಿಟ್ಟಳು.

ಜಾತಿ ಜನಾಂಗಗಳು ನಡೆಸುವ ದಂಗೆಗಳ ಅರಿವಿಲ್ಲದೆ ಅವುಗಳೊಳಗೆ ಕಳೆದುಹೋಗಿದ್ದಳು. ಚಳವಳಿಯ ಮಹತ್ವವೇನು ಎಂಬುದು ಸುತಾರಾಂ ಇವಳಿಗೆ ಗೊತ್ತಿರಲಿಲ್ಲ.  ‘ಜಿಂದಾಬಾದ್’, ‘ಮುರ್ದಾಬಾದ್’ ಘೋಷಣೆಯನ್ನು ಯಾವ ಸ್ವರದಲ್ಲಿ ಕೂಗಬೇಕೆಂಬುದನ್ನು ಸರಿಯಾಗಿ ಅರಿತಿದ್ದಳು. ಎರ್ರ ನಾರಾಯಣ ಹೃದಯಾಘಾತದಿಂದ ಮೃತನಾದ ಸುದ್ದಿ ತಿಳಿದು ಗಂಗಾ ದಿಕ್ಕು ತೋಚದಾದಳು, ಚಳವಳಿಗಳ ಕಾಲ ಮುಗಿದುಹೋಯಿತೇನೋ ಅನ್ನುವಷ್ಟರಮಟ್ಟಿಗೆ ಚಿಂತಾಕ್ರಾಂತಳಾದಳು. ಇವಳ ಮೇಲೆ ಕಣ್ಣಿಟ್ಟವರು ಹೋರಾಟಗಳಿಗೆ ಕರೆದರು.

ದಲಿತ ಸೇನೆಯೊಂದಿಗೆ ಒರಿಸ್ಸಾದ ಕಡೆ ಹೊರಟಿದ್ದಳು. ರೈಲಿನ ಕಿಟಕಿ ಪಕ್ಕದಲ್ಲಿ ಕುಳಿತು ಹಿಂಡುಹಿಂಡು ಬೀಸಿಬರುವ ಧೂರ್ತ ಗಾಳಿಗೆ ಮೈಯೊಡ್ಡಿದ್ದಳು. ಗುಂತಕಲ್‌ನ ಸಾಂಬಾರು ವ್ಯಾಪಾರಿ ಬಸವರಾಜ್ ಗಂಗಾಳ ಮಗ್ಗುಲಿಗೆ ಕುಳಿತ. ಅವನು ಯಾವ ನಿಲ್ದಾಣದಲ್ಲಿ ಹತ್ತಿಕೊಂಡನೆಂಬುದು ಇವಳಿಗೆ ಊಹಿಸಲಾಗಿರಲಿಲ್ಲ. ಹಸಿದ ಬಡ ಸಹಪ್ರಯಾಣಿಕರಿಗೆ ತುಂಡುರೊಟ್ಟಿ, ಹುಣಸೆಗೊಜ್ಜು ಕೊಡುವುದು ಇವನ ಧಾರಾಳಿತನ. ಗಂಗಾಳ ಮುಖವನ್ನೇ ದಿಟ್ಟಿಸುತ್ತಿದ್ದವನು, ಕಾಗದದ ಚೂರಿನಲ್ಲಿ ರೊಟ್ಟಿ, ಗೊಜ್ಜು ಹಾಕಿ ಅವಳ ಮುಂದೆ ಹಿಡಿದ. ರೈಲು ಪಶ್ಚಿಮ ಗೋದಾವರಿಯ ದೀರ್ಘ ಸೇತುವೆಯ ಮೇಲೆ ಓಡುತ್ತಿತ್ತು. ಚಪ್ಪಲಿಯಿಲ್ಲದೆ ಅವಳ ಕಾಲುಗಳು ವಿಕಾರಗೊಂಡಿದ್ದವು.

ಹಿಂಗಾಲುಗಳು ಒಡೆದು ರಕ್ತ ಸೋರುತ್ತಿದ್ದವು. ರೊಟ್ಟಿ ತಿಂದು ಕಿಟಕಿಗೆ ಆನಿಕೊಂಡಳು. ಆಳನಿದ್ರೆ ಅವಳನ್ನು ನುಂಗಿಕೊಂಡಿತ್ತು. ಅಯ್ಯೋ ಎದ್ದಿರಬೇಕಾಗಿತ್ತು, ಅವನ ಕಣ್ಣುಗಳನ್ನು ತನ್ನ ಹೃದಯದಿಂದ ಮೀಟಬೇಕಾಗಿತ್ತು ಅನಿಸಿದ್ದು ಆಮೇಲೆ, ಅವನು ಅದೃಶ್ಯನಾದ ನಂತರ.
‘ಚಾಯ್...ಚಾಯ್...’ ಸದ್ದಿಗೆ ಗಂಗಾ ಎಚ್ಚರಗೊಂಡಳು. ಮಡಚಿಕೊಂಡಿದ್ದ ಕಾಲು ನೀಟಿದಳು. ಹಸಿದ ಹೊಟ್ಟೆಗೆ ಅಲ್ಲಲ್ಲ, ಹಸಿದ ಮನಕ್ಕೆ ಕ್ಷಣಕ್ಷಣವೂ ತಂಪೆರೆವ ಜೀವಪರ ಆಸಾಮಿ ಎಲ್ಲಿ ಹೋದ ಎಂದು ಹುಡುಕಾಡಿ ಅಕ್ಷರಶಃ ಸತ್ತಳು.

ಓದೂ ಇಲ್ಲ, ಕೈಯಲ್ಲಿ ಕಸುಬೂ ಇಲ್ಲ. ಅದೆಲ್ಲ ತೊರೆದು ಊರುಸೂಳೆಯಂತೆ ಬೀದಿಗಿಳಿವ ಗಂಗಾಳಿಗೆ ಮನೆ ಕಡೆಯಿಂದ ಕಿರುಕುಳ ಆರಂಭವಾಯಿತು. ಸಿನಿಮಾ ಪೋಸ್ಟರ್ ಹಚ್ಚುವ ಹುಡುಗನ ಜೊತೆ ತನ್ನ ಮದುವೆ ಕುದುರಿಸುತ್ತಿರುವ ವಿಷಯ ತಿಳಿದಿದ್ದೇ ಜಾಗೃತಳಾದಳು. ಚಳವಳಿಗಳ ನೇತೃತ್ವ ವಹಿಸುವವನೇ ತನ್ನನ್ನು ಕಟ್ಟಿಕೊಳ್ಳಬೇಕೆಂದು ಬಯಸಿದ್ದಳೇನೋ! ‘ಚಳವಳಿ, ಪ್ರತಿಭಟನೆ ನಮ್ಮೊಳಗೆ ನಡೆಯುತ್ತಿರಬೇಕು, ಅದು ನಿಜವಾದ ದಿಟ್ಟ ನಡಿಗೆ’ ಎಂದು ಎರ್ರ ನಾರಾಯಣ ಪದೇಪದೇ ಸಾರುತ್ತಿದ್ದ ಮಾತು ಜ್ಞಾಪಕಕ್ಕೆ ಬಂತು. ಬೂರನೊಂದಿಗೆ ರೈಲು ಹತ್ತಿಬಿಟ್ಟಳು.  

ಮೋಟಾರ್‌ಸೈಕಲ್‌ನಲ್ಲಿ ಹೋಗುತ್ತಿದ್ದವನು, ‘ಯಾವಳೇ ಅವಳು, ಎಣ್ಣೆ ಹೊಡೆದಿದ್ದೀಯೇನೆ?’ ನೆನಪುಗಳಲ್ಲಿ ಜಾರಿ ರಸ್ತೆ ಮಧ್ಯೆ ನಡೆಯುತ್ತಿದ್ದ ಗಂಗಾಳನ್ನು ಫುಟ್‌ಪಾತ್‌ಗೆ ದೂಡಿದ. ಆ ರಭಸಕ್ಕೆ ಹೆಗಲಿನಲ್ಲಿ ತೂಗಾಡುತ್ತಿದ್ದ ಬಿದಿರಬುಟ್ಟಿಗಳು ಕಿತ್ತುಕೊಂಡವು. ಅವುಗಳನ್ನು ಹಾಗೇ ಹಿಡಿದುಕೊಳ್ಳುತ್ತಾ ಅರೆ, ದೇವಿಯನ್ನು ಎಲ್ಲಿ ಬಿಟ್ಟೆ ಎಂದು ಹಿಂದಕ್ಕೆ ತಿರುಗಿ ನೋಡಿದಳು. ಕೈಕಾಲುಗಳು ತಣ್ಣಗಾಗತೊಡಗಿದವು, ಎಂಥಾ ಅಚಾತುರ್ಯ ನಡೆದುಹೋಯಿತು. ‘ದೇವಿ, ದೇವಿ...’ ಕೂಗಿಕೊಂಡು ದಿಕ್ಕು ತೋಚಿದ ಕಡೆ ಓಡಿದಳು. ಎಲ್ಲೂ ಕಾಣಲಿಲ್ಲ, ಎದೆ ಹೇಗೆ ಹೊಡೆದುಕೊಳ್ಳುತ್ತಿತ್ತೆಂದರೆ ಇನ್ನೇನು ಹೃದಯಭಾಗ ಕಿತ್ತುಕೊಂಡು ಆಚೆ ಬೀಳಬೇಕು! ನಿಜಕ್ಕೂ ಹಾಗೇ ಆಯಿತು, ದೇವಿ ರಕ್ತದ ಮಡುವಿನಲ್ಲಿ ಬಿದ್ದಿದ್ದಳು.

ಮೋಟಾರ್‌ಸೈಕಲ್ಲೋ, ಟ್ರಕ್ಕೋ ಇವಳನ್ನು ಸವರಿಕೊಂಡು ಹೋಗಿತ್ತು, ಆ ಹೊಡೆತಕ್ಕೆ ದೇವಿ ಜೀವ ಕಳೆದುಕೊಂಡಿದ್ದಳು. ಬಿದಿರಬುಟ್ಟಿಗಳನ್ನು ಎಸೆದು, ರಸ್ತೆಯಲ್ಲಿ ಹಾದುಹೋಗುತ್ತಿದ್ದ ವಾಹನಗಳಿಗೆಲ್ಲ ಕೈ ಅಡ್ಡ ಹಾಕತೊಡಗಿದಳು. ಮಿಲಿಟರಿ ಜೀಪು ನಿಂತಿತು, ಸೈನ್ಯಾಧಿಕಾರಿ ಇಳಿದು ದೇವಿಯನ್ನು ಪರೀಕ್ಷಿಸಿ ತಲೆತಗ್ಗಿಸಿದ. ಗಂಗಾ, ‘ಸಾರ್...’ ಎರಡೂ ಕೈಗಳನ್ನು ಜೋಡಿಸಿದಳು. ಅಧಿಕಾರಿ ಗಂಗಾಳ ಕೈಯಲ್ಲಿ ಹಣ ಇಟ್ಟು ಜೀಪು ಹತ್ತಿದ. ಬೂರ ಕಣ್ಮುಂದೆ ಧುಮುಕಿದಂತಾಯಿತು. ಭಯಭೀತಳಾಗಿ ಚೀರಿಕೊಂಡಳು, ಕೈಯಲ್ಲಿದ್ದ ಹಣವನ್ನು ದೇವಿಯ ತಲೆ ಹತ್ತಿರ ಇಟ್ಟು ಹುಚ್ಚಿಯಂತೆ ಓಡತೊಡಗಿದಳು.

ಅಲ್ಲಿಂದ ಓಡಿದವಳು ಯಲಹಂಕದ ರೈಲ್ವೆ ಸ್ಟೇಷನ್ನಿಗೆ ಬಂದು ತಲುಪಿದಳು. ಮಳೆ ಹೇಗೆ ಸುರಿಯುತ್ತಿತ್ತೆಂದರೆ, ಕಣ್ಣ ಮುಂದಿನದೇನೂ ಕಾಣುತ್ತಿರಲಿಲ್ಲ. ಲ್ಯಾವೇಟರಿ ಸನಿಹದಲ್ಲಿ ಕುಕ್ಕರುಗಾಲಿನಲ್ಲಿ ಕುಳಿತುಬಿಟ್ಟಳು. ರೈಲು ಕೂಗುವ ಸದ್ದು ಬೂರನೇ ಕೂಗಿದಂತಾಗಿ ಬೆಚ್ಚುತ್ತಿದ್ದಳು. ಮತ್ತೆ ಎದ್ದು ಮಳೆಯಲ್ಲೇ ದೌಡಾಯಿಸುತ್ತಿದ್ದಳು, ಬೂರನ ಆಕೃತಿ ವಿವಿಧರೀತಿಯಲ್ಲಿ ತಿನ್ನತೊಡಗಿತು. ತನ್ನನ್ನು ಮಳೆಹನಿಗಳು ತಿವಿದು ಭೀಕರವಾಗಿ ಕೊಲ್ಲಲಿ ಎಂದು ನೆಲದ ಮೇಲೆ ಅಂಗಾತ ಬಿದ್ದಳು. ಬೆಳಗಿನ ಜಾವ ಜಾಡಮಾಲಿಯೊಬ್ಬ ಕಸ ಗುಡಿಸಲು ಬಂದಾಗ ಗಂಗಾ ಕಾಣಿಸಿದಳು.

ಜಾಡಮಾಲಿಯರು ಸರ್ಕಾರಿ ಆಸ್ಪತ್ರೆಯಲ್ಲಿ ಇವಳಿಗೆ ಚಿಕಿತ್ಸೆ ಕೊಡಿಸಿದರು, ಬದುಕುಳಿದಳು. ಕಾಲಾಂತರದಲ್ಲಿ ಜಾಡಮಾಲಿಯರೊಂದಿಗೆ ತಾನೂ ಪೊರಕೆ ಹಿಡಿದಳು. ಆ ದಿನ ಸಂಜೆ ಫ್ಲಾಟ್‌ಫಾರಂ ಮೇಲೆ ಓಡಾಡಿಕೊಂಡು ಕಸ ಗುಡಿಸುತ್ತಿದ್ದಾಗ ಬೂರ ಕಂಡಂತಾಯಿತು. ಏಳು ಗಂಟೆಗೆ ಕಾಚಿಗುಡ ಎಕ್ಸ್‌ಪ್ರೆಸ್ ಬರುವುದರಲ್ಲಿತ್ತು. ಹೌದು, ತನ್ನ ಕುಟುಂಬದೊಂದಿಗೆ ಅಂದರೆ, ತನ್ನ ಪ್ರೀತಿಪಾತ್ರ ಮಗಳಿಲ್ಲದ ದುರದೃಷ್ಟ ಸಂಸಾರದೊಂದಿಗೆ ಬಟ್ಟೆ ತುಂಬಿದ ಚೀಲ, ಮೂಟೆ ಮತ್ತಿತರ ಸಾಮಾನು ಸರಂಜಾಮುಗಳೊಂದಿಗೆ ನಡೆದುಬರುತ್ತಿದ್ದ. ದೇವಿಯನ್ನು ಕಳೆದುಕೊಂಡ ಅವನು ಹೇಗಿರಬಹುದೆಂದು ದೂರದಿಂದ ಮರೆಯಲ್ಲಿ ನಿಂತು ನೋಡಲೆತ್ನಿಸಿದಳು. ಬೂರ ಮೃತನಾಗಿದ್ದ, ಅವನ ಅಸ್ತಿತ್ವ ಉತ್ಸಾಹರಹಿತ ಒಣಸೌದೆಯಂತಾಗಿತ್ತು.

ಸ್ವಲ್ಪ ಧೈರ್ಯ ವಹಿಸಿ ಗಂಗಾ ಹೋಗಿ ಅವನೆದುರು ನಿಂತರೂ ಅವನು ಏನೂ ಪ್ರತಿಕ್ರಿಯಿಸಲಾರದವನಾಗಿರುತ್ತಿದ್ದನೇನೋ? ಅವನ ಸ್ಥಿತಿ ನೋಡಿ ಅವನೊಂದಿಗೆ ಒಂದು ಮಾತು ಆಡಿಬಿಡಲೇ ಎನಿಸಿತು. ಹಸಿದ ಬಡಕಲು ನಾಯಿಗೆ ಎಲುಬು ಸಿಕ್ಕರೆ ಏನು ಮಾಡೀತು? ಆ ಕ್ಷಣ ನೆನೆದು ತಲ್ಲಣಿಸಿದಳು. ಈ ಸಂದಿಗ್ಧ ಯೋಚನೆಯ ಗಂಗಾಳ ಕಾಲುಗಳನ್ನೇ ದಿಟ್ಟಿಸುತ್ತಿದ್ದ ಚಮ್ಮಾರ, ‘ಚಪ್ಪಲಿ ಕಿತ್ತೋಗದೆ, ಎರ್ಡು ಹೊಲ್ಗೆ ಹಾಕ್ಕೊಡ್ತೀನಿ ಕೊಡೂ’ ಆಸೆಯಿಂದ ನಗುತ್ತಾ ವಿನಂತಿಸಿಕೊಂಡ. ಕರುಳು ಬಾಯಿಗೆ ಬಂದಂತಾಗಿ ಹೌಹಾರಿದಳು. ಚಮ್ಮಾರನನ್ನು ನೋಡಿ, ‘ಅಯ್ಯೋ...’ ಅನ್ನುತ್ತಾ ತಲೆ ಮೇಲೆ ಕೈ ಹೊತ್ತು ಅಲ್ಲೇ ಕುಳಿತುಕೊಂಡಳು.

ಹೊಸ ಸೆಳಕಿನ ತರುಣ ಚಮ್ಮಾರನ ಮುಖವನ್ನು ನೋಡುತ್ತಲೇ ಇರಬೇಕೆನಿಸಿತು, ಬೂರ ಎಬ್ಬಿಸಿದ ಭಯ ಆರಿಹೋಗಿತ್ತು. ಅವನೇ ಅವಳ ಕಾಲಿನಿಂದ ಚಪ್ಪಲಿಯನ್ನು ಎಳೆದುಕೊಂಡ, ಗಂಡು ಅವಳನ್ನು ಸ್ಪರ್ಶಿಸಿದ ಮೊದಲ ಗಳಿಗೆ. ‘ಅಟ್ಟ ಸವ್ದುಹೋಗೆದೆ, ಹೊಸ ಅಟ್ಟ ಕಟ್ಟಬೇಕು. ಆ ಕಾಸ್ನಲ್ಲಿ ಹೊಸಚಪ್ಲೀನೇ ಬತ್ತದೆ’ ಅನ್ನುತ್ತಾ ಚಪ್ಪಲಿಯನ್ನು ಪರೀಕ್ಷಿಸತೊಡಗಿದ. ಗಂಗಾ ಮಾತನಾಡಲಿಲ್ಲ, ಚಪ್ಪಲಿಯನ್ನು ಕಿತ್ತು, ಕಾಲಿಗೆ ಹಾಕಿಕೊಂಡಳು. ಬೂರ ಇತ್ತಕಡೆಯೇ ಬರುತ್ತಿದ್ದಾನೆ! ಓಡಿಹೋಗಿ ಕಳ್ಳಿಗಿಡಗಳ ಸಾಲಿನಲ್ಲಿ ನಿಂತಳು. ಹೆಗಲಿನ ಚೀಲದಿಂದ ಚಪ್ಪಲಿ ತೆಗೆದು ಚಮ್ಮಾರನಿಗೆ ಕೊಟ್ಟ.

ಗಂಗಾ ಆಶ್ಚರ್ಯದಿಂದ ಕಣ್ಣರಳಿಸಿ ನೋಡಿದಳು. ದೇವಿ ಧರಿಸುತ್ತಿದ್ದ ಪಕ್ಷಿಯಾಕಾರದ ಚಪ್ಪಲಿಗಳು ಅವು! ಅಲ್ಲೂರಮ್ಮ ಒಳಗೊಳಗೆ ದುಃಖಿಸುತ್ತಿದ್ದಳು. ‘ಅಯ್ಯೋ ದೇವರೇ...’ ಎದೆ ಹಿಸುಕಿಕೊಂಡು ಗಂಗಾ ರೋದಿಸಿದಳು. ಈ ಹಿಂಸಾತ್ಮಕ, ಪಾಪದ ಬದುಕಿಗೆ ‘ಮುರ್ದಾಬಾದ್’ ಎಂದು ಕೂಗಬೇಕೆನಿಸಿತು. ಚಮ್ಮಾರ ಚಪ್ಪಲಿಯನ್ನು ಹೊಲಿದುಕೊಟ್ಟ, ಅಷ್ಟೊತ್ತಿಗೆ ರೈಲು ಬಂತು. ಕಳ್ಳಿಗಿಡದ ಮಗ್ಗುಲಿನಲ್ಲೇ ನಿಂತು ಕಾಲಿನಿಂದ ಚಪ್ಪಲಿ ಕಳಚಿಕೊಂಡು ಕೈಗಳು ಸೋಲುವವರೆಗೂ ತನ್ನನ್ನು ತಾನು ಹೊಡೆದುಕೊಂಡು ಅಲ್ಲೇ ಕುಕ್ಕರುಗಾಲಿನಲ್ಲಿ ಕುಳಿತುಬಿಟ್ಟಳು. 

ರೈಲು ಸೇತುವೆಯ ಒಂದು ಮೂಲೆಯಲ್ಲಿ ಮಲಗಲು ಸ್ಥಳ ಮಾಡಿಕೊಂಡು ಗಾಳಿ, ಮಳೆ, ಚಳಿ ತೂರುವ ಕಡೆ ಟಾರ್ಪಾಲಿನ್ ಕಟ್ಟಿಕೊಂಡಿದ್ದಳು. ಬೇಯಿಸಿದ ಅನ್ನಕ್ಕೆ ಗೊಜ್ಜು ಹಿಸುಕಿಕೊಂಡು ತಿಂದು ಮಲಬೇಕೆನ್ನುವಷ್ಟರಲ್ಲಿ ತನ್ನ ಎಡಭಾಗದಲ್ಲಿ ಮನುಷ್ಯನೊಬ್ಬ ಕಂಬಳಿಯೋ ಚಾಪೆಯನ್ನೋ ಕೊಡಹುವ ಸದ್ದು ಕೇಳಿಬಂತು. ಆದರೆ ಬಹಳ ದೂರದಲ್ಲಿ ಇರುವಂತೆ ಏನೂ ಅನ್ನಿಸಲಿಲ್ಲ, ಹದಿನೈದಿಪ್ಪತ್ತು ಅಡಿ ದೂರದಲ್ಲಿ ಇರಬೇಕು. ಕತ್ತಲೆಯಾದ್ದರಿಂದ ಏನೊಂದು ಸ್ಪಷ್ಟವಾಗಿ ಕಾಣುತ್ತಿರಲಿಲ್ಲ. ಕಡ್ಡಿ ಅಂಟಿಸಿ ಸಿಗರೇಟು ಸೇದತೊಡಗಿದ. ಉರಿಯುವ ಬೆಂಕಿ ಮಾತ್ರ ಕೆಣಕತೊಡಗಿತು. ‘ನಾ ಕಳ್ಳು ಚೆಬುತುನ್ನಾಯೀ ನಿನ್ನು ಪ್ರೇಮಿಂಚಾನನಿ’ ಹಾಡು ಗುನುಗತೊಡಗಿದ.

ನಗು ಬಂತು, ಆ ಕಣ್ಣುಗಳು ತನ್ನನ್ನೇ ದಿಟ್ಟಿಸುತ್ತಿರಬೇಕೆನ್ನುವ ಗುಮಾನಿ ಮೂಡಿತು. ಸೇತುವೆಯ ಅಲ್ಲಲ್ಲಿ ಇವಳಂತೆ ಇನ್ನೂ ಹಲವು ಅನಾಥರು ಮತ್ತು ಬಡ ಪ್ರಯಾಣಿಕರು ಮಲಗುತ್ತಿದ್ದದ್ದರಿಂದ ನಿರಾಳ ಇತ್ತು. ಆ ಭಯ ಮತ್ತು ನಿರಾಳದಲ್ಲೇ ನಿದ್ದೆಗೆ ಜಾರಿದಳು.
ಬೆಳಿಗ್ಗೆ ಎದ್ದೊಡನೆ ಆ ಕಡೆ ನೋಡಿದಳು. ಆ ಮನುಷ್ಯನ ಮುಖ ಆ ಕಡೆ ತಿರುಗಿತ್ತು, ಎಮ್ಮೆ ಕತ್ತು ಮುರಿದುಬಿದ್ದಂತೆ. ಮುಖಕ್ಕೆ ನೀರು ಬಡಿದುಕೊಂಡು ಪೊರಕೆ ಹಿಡಿದುಕೊಂಡು ಅತ್ತಕಡೆಯೇ ನಡೆದಳು. ಚಪ್ಪಲಿಗೆ ಹೊಲಿಗೆ ಹಾಕಿಕೊಡುತ್ತೇನೆ ಎಂದು ವಿನಂತಿಸಿಕೊಂಡ ಅದೇ ತರುಣ ಚಮ್ಮಾರ! ಕಟ್ಟಿಕೊಂಡಿದ್ದ ಲುಂಗಿ ಉದುರಿ ದೂರದಲ್ಲಿ ಬಿದ್ದಿತ್ತು. ಪೊರಕೆಗೆ ಬಿಗಿದಿದ್ದ ಹಿಡಿಕಡ್ಡಿಯಲ್ಲಿ ಎಳೆದು ತಂದು ಅವನ ಪಕ್ಕದಲ್ಲಿ ಬಿಟ್ಟು, ಮುಗುಳ್ನಗುವಿನೊಂದಿಗೆ ಸೇತುವೆಯ ಮೆಟ್ಟಿಲಿಳಿಯತೊಡಗಿದಳು.

ಫ್ಲಾಟ್‌ಫಾರಂ ಮೇಲಿನ ಎಲ್ಲ ಕಸವನ್ನು ಒಗ್ಗೂಡಿಸಿಕೊಂಡು ಅವಳಿಗೇ ತಿಳಿಯದಂತೆ ಅಥವಾ ತಿಳಿಯುವ ನಾಟಕವಾಡಿಕೊಂಡು ಚಮ್ಮಾರನಿರುವಲ್ಲಿಗೇ ನಡೆದುಬಿಡುತ್ತಿದ್ದಳು. ಚಪ್ಪಲಿ ಆಗಾಗ ತುಂಡರಿಸಿ ಬೀಳುವುದು, ಅವಳು ಬೇರ್ಪಟ್ಟ ತುಂಡುಗಳನ್ನು ಬಟ್ಟೆಪಿನ್ನಿನಿಂದ ಜೋಡಿಸಿಕೊಳ್ಳುವುದನ್ನು ಗಮನಿಸುತ್ತಲೇ ಇದ್ದ. ಗಂಗಾ ಅಲ್ಲಿಗೆ ಬರುತ್ತಿದ್ದಂತೆ ಒಂದು ಜೊತೆ ಚಪ್ಪಲಿಯನ್ನು ಅವಳ ಮುಂದಕ್ಕೆ ತಳ್ಳಿದ. ಹೊಸತೇನೂ ಆಗಿರಲಿಲ್ಲ, ಗಿರಾಕಿ ಯಾರೋ ಎಸೆದುಹೋಗಿದ್ದನ್ನು ಹೊಲೆದು ಮಿರಮಿರನೆ ಹೊಳೆಯುವಂತೆ ಸಿದ್ಧಗೊಳಿಸಿದ್ದ.

ಅವಳು ಹಿಂದೆ ಸರಿದಿದ್ದನ್ನು ಕಂಡು, ‘ಕಾಸೇನೂ ಬೇಡ’ ಅಂದು ನಗುತ್ತಾ ಹೊಲೆದಿದ್ದ ಚಪ್ಪಲಿಯನ್ನು ಕೈಗೆ ತೆಗೆದುಕೊಂಡು ಧೂಳು ಜಾಡಿಸುತ್ತಾ ಹಾಡು ಆರಂಭಿಸಿದ. ‘ಇನ್ನೊಬ್ಬನ ದಯೆ’ ತನಗೆ ಬೇಡ ಅಂದುಕೊಳ್ಳುತ್ತಾ ಕೋಟು ಜೇಬಿನಿಂದ ಇಪ್ಪತ್ತು ರೂಪಾಯಿಗಳನ್ನು ತೆಗೆದು ಮುಂದಿಡಿದಳು. ತಾನು ನಂಬಿದ ವೃತ್ತಿ ದೈವ, ಅದನ್ನು ಅಗೌರವದಿಂದ ಕಾಣಬಾರದೆಂದು ಹಣ ಇಸಕೊಂಡ. ಚಪ್ಪಲಿಗಳನ್ನು ನ್ಯೂಸ್‌ಪೇಪರಿನಲ್ಲಿ ಸುತ್ತಿ ಕಂಕುಳಿನಲ್ಲಿಟ್ಟುಕೊಂಡು ಮುಂದುಮುಂದಕ್ಕೆ ನಿಧಾನ ಹೆಜ್ಜೆ ಇಡತೊಡಗಿದಳು. ತರುಣ ಚಮ್ಮಾರ ಗೋಂದು ಮೆತ್ತಿದ ಅಟ್ಟೆಯನ್ನು ಜೋರಾಗಿ ತಟ್ಟುತ್ತ ಅವಳ ಕಡೆ ನೋಡುತ್ತಲೇ ಇದ್ದ. ಅವಳು ಹುಡುಗಿ, ತಿರುಗಿ ನೋಡಬೇಕಾಗಿರಲಿಲ್ಲ. ಎದೆಯೊಳಗೆ ಇಟ್ಟುಕೊಂಡಿದ್ದ ಕೈಗನ್ನಡಿಯಲ್ಲಿ ತನ್ನ ಮುಖವನ್ನು ಬಲಕ್ಕೆ ಹಿಡಿದರೆ ಅರೆಬರೆ ಕಾಣುವ ಅವನನನ್ನೂ ಒಗ್ಗೂಡಿಸಿ ಹಿಡಿದಿಟ್ಟುಕೊಳ್ಳಲೆತ್ನಿಸುತ್ತಿದ್ದಳು.

ಸೇತುವೆಯ ಮೇಲೆ ನಿಂತು ಹಾದುಬರುವ ರೈಲುಗಳನ್ನು ಏಕ ದಿಟ್ಟಿಸುತ್ತಿದ್ದವಳ ಬೆನ್ನಿಗೆ ನಿಂತು, ‘ಯೋಚ್ನೆ ಮಾಡಿ ನೋಡು, ಇಲ್ಲೇ ಹಟ್ಟಿಯಲ್ಲಿ ಒಂದು ಚಿಕ್ಮನೆ ಬಾಡಿಗೆ ಹಿಡಿಯನ’ ಕೈಗನ್ನಡಿಯಲ್ಲಿ ಗಳಿಗೆ ಗಳಿಗೆಯೂ ಮುಖ ನೋಡಿಕೊಳ್ಳುವಂತೆ ಪ್ರಚೋದಿಸಿದ ತರುಣ ಚಮ್ಮಾರ ತನ್ನ ಇಂಗಿತ ವ್ಯಕ್ತಪಡಿಸಿದ. ಪ್ರೇಮಿಸುವ ಮಾತು ಬಿಟ್ಟು ಏಕಾಏಕಿ ಮದುವೆ ನಂತರದ ಉಸಾಬರಿ ಕುರಿತು ಮಾತನಾಡುತ್ತಿದ್ದುದ್ದನ್ನು ನೆನೆದು ಬೆದರಿದಳು. ಪ್ರೀತಿ ಮಾಡುವುದಕ್ಕೆ ಸಿದ್ಧವಾಗು ಅಂತ ಹೇಳುವುದರ ಬದಲಿಗೆ, ‘ಮೊದ್ಲು ಚಪ್ಲಿ ಹೊಲೆಯೋದು ಕಲೀ’ ಬಾಯಿ ತಪ್ಪಿ ಅಂದುಬಿಟ್ಟಳು. ನೋಡಿದ, ಅವೇ ಹಳೆಚಪ್ಪಲಿಯಲ್ಲಿದ್ದಳು. ನಕ್ಕು ಸುಮ್ಮನಾದ.

ಒದಗಿಬಂದ ಆಸರೆಗೆ ಎರಡು ಹನಿ ಕಣ್ಣೀರು ಸುರಿಸಿದಳು. ಸಾಯಲೂ ಯೋಗ್ಯವಲ್ಲದ ತನ್ನ ದೇಹ ಇಟ್ಟುಕೊಂಡು ಮಾಡುವುದಾದರೂ ಏನು? ತಿರುಗಿ ನೋಡಿದಳು, ಚಪ್ಪಲಿ ಹೊಲೆಯುವ ಚೀಲ ಹೆಗಲಿಗೆ ತೂಗಿಸಿಕೊಂಡು ಸೀಟಿ ಹೊಡೆಯುತ್ತಾ ರೈಲ್ವೆ ಹಳಿ ಮೇಲೆ ಬಡಬಡನೆ ನಡೆದುಹೋಗುತ್ತಿದ್ದ. ಅವನಿಂದ ಕೊಂಡ ಚಪ್ಪಲಿಯನ್ನು ಕಣ್ಣಿಗೊತ್ತಿಕೊಂಡು ಧರಿಸಿ ಅಲ್ಲೇ ಕುಳಿತುಕೊಂಡಳು.
ಸಿನಿಮಾ ಹಾಡು ಗುನುಗಿದರೂ, ಸೀಟಿ ಹೊಡೆದರೂ ತರುಣ ಚಮ್ಮಾರ ಸೂಕ್ಷ್ಮಮತಿಯಾಗಿದ್ದ. ಜಗತ್ತಿನ ಕಸ, ಕೊಳಚೆ, ಅಸಹ್ಯವನ್ನು ತುಳಿದು ಬರುವ ಮನುಷ್ಯನ ಚಪ್ಪಲಿಯನ್ನು ಹಣೆಗೊತ್ತಿ ನಮಸ್ಕರಿಸಿ, ಕಳಚಿಕೊಂಡು ಹೊಲೆದುಕೊಡುವ ಚಮ್ಮಾರನಾದರೂ ಸ್ವಾಭಿಮಾನದ ಮಾತು ಬಂದಾಗ ಜಗ್ಗುತ್ತಿರಲಿಲ್ಲ.

ಯಾವ ತೀರ್ಮಾನಕ್ಕೂ ಬರದ, ಯಾವುದಕ್ಕೂ ಮುಂದಾಗದ ಜಾಡಮಾಲಿ ಗಂಗಾ, ತರುಣ ಚಮ್ಮಾರನಲ್ಲಿ ಬಗೆಬಗೆಯ ದ್ವಂದ್ವ ಎಬ್ಬಿಸುತ್ತಿದ್ದಳು. ಮುಂಬೈ ರೈಲು ಇಳಿದ ಪ್ರಯಾಣಿಕರಲ್ಲೊಬ್ಬ ಮಾರ್ವಾಡಿ ಗೇಟ್ ಬಳಿ ಕುಳಿತಿದ್ದ ಚಮ್ಮಾರನನ್ನು ಕಂಡು, ‘ಎರ್ಡು ಎಕ್ಡ ಹೊಲ್ದರೂ ಮೂರ್ಕಾಸು ಸಿಕ್ಕಲ್ಲ ಇಲ್ಲಿ. ಬಾಂಬೆಗೆ ಬಾ, ಆರು ತಿಂಗ್ಳಲ್ಲಿ ಕಾರ್ನಲ್ಲಿ ಓಡಾಡ್ತೀಯ’– ಕಿತ್ತುಹೋದ ಶೂಸ್ ಅನ್ನು ಮುಖದ ಮುಂದೆ ಬಿಟ್ಟ. ಚಮ್ಮಾರ ತಲೆಯೆತ್ತಿ ಅವನ ಮುಖ ನೋಡಿದ. ‘ಗಮ್ ಹಾಕಿ ಹೊಲ್ದು ಕೊಡಲೇ, ಬಾಂಬೇಲಿ ನನ್ದು ದೊಡ್ಡ ಬೂಟ್‌ಹೌಸ್ ಇದೆ. ಬರಂಗಿದ್ರೆ ಈ ನಂಬರ್ಗೆ ಫೋನ್ ಮಾಡು’ ಕಾರ್ಡು ಕೊಟ್ಟು, ಸಿಗರೇಟು ಹಚ್ಚಿದ.

ಮುಂಬೈಯವನ ಆಹ್ವಾನದ ಕುರಿತು ಗಂಟೆಗಟ್ಟಲೆ ಯೋಚಿಸಿದ. ಬದುಕಿನ ಬೇರೆಬೇರೆ ಘಟ್ಟಗಳಲ್ಲಿ ಹೊಡೆತಗಳನ್ನು ತಿನ್ನುತ್ತಿದ್ದ, ಬಡತನದಲ್ಲಿ ಬೇಯುತ್ತಿದ್ದ ಚಮ್ಮಾರ ತನ್ನ ಆತ್ಮೀಯ ಗೆಳೆಯರು ಮತ್ತು ಹತ್ತಿರದ ಸಂಬಂಧಿಗಳ ಅಭಿಪ್ರಾಯ ಕೇಳಲು ಹೊರಟೇಬಿಟ್ಟ. ಆವೊತ್ತು ಸೇತುವೆ ಮೇಲೆ ಮಲಗಲು ಹೋಗಲಿಲ್ಲ, ಹೋಗುವ ಆಸೆಯೂ ಮೂಡಲಿಲ್ಲ. ಇನ್ನೇನು ಎಲ್ಲವೂ ಕೂಡಿಕೊಳ್ಳಬೇಕೆನ್ನುವಷ್ಟರಲ್ಲಿ ತರುಣ ಚಮ್ಮಾರ ಮುಂಬೈ ರೈಲು ಹತ್ತಿದ್ದನ್ನು ಜಾಡಮಾಲಿಯೊಬ್ಬ ಗಂಗಾಳಿಗೆ ತಿಳಿಸಿದ. ತನ್ನಿಂದ ಆದ ಅಚಾತುರ್ಯ ಏನಿರಬಹುದೆಂದು ಯೋಚಿಸುತ್ತಾ ಚಿಂತಾಕ್ರಾಂತಳಾದಳು. ನಿಂತಲ್ಲೇ ಕುಸಿದು ಕುಳಿತಳು.

ಇನ್ನೊಬ್ಬರ ಹಕ್ಕಿಗಾಗಿ ಹೋರಾಟ ಮಾಡಿದ ತಾನು ತನ್ನ ಬಡಪ್ರೇಮದ ವಿರುದ್ಧವೇ ಚಳವಳಿ ಹೂಡಿ ಜಯಿಸಿದೆನಲ್ಲ ಎಂದು ಹಲುಬತೊಡಗಿದಳು. ಅಂದಿನಿಂದ ಇವಳ ಯಾತನೆ ಆರಂಭವಾಯಿತು. ನಿಂತಲ್ಲಿ ನಿಲ್ಲದೆ, ಕುಳಿತಲ್ಲಿ ಕೂರದೆ, ಮಲಗಿದಲ್ಲಿ ಮಲಗಲಾಗದೆ ಒದ್ದಾಡತೊಡಗಿದಳು. ರೈಲ್ವೆ ಸ್ಟೇಷನ್ನಿನಲ್ಲಿ ತರುಣ ಚಮ್ಮಾರನ ನೆನಪು ಎಡಬಿಡದೆ ಮುಗಿಬೀಳುತ್ತಿತ್ತು. ಅವನು ಗುನುಗಿದ ಹಾಡುಗಳು ಎದೆ ತಿವಿದು ನೆತ್ತರು ತರಿಸುತ್ತಿದ್ದವು. ರಾತ್ರೋರಾತ್ರಿ ಚೀಲ ಕಟ್ಟಿಕೊಂಡು ಸ್ಟೇಷನ್ನು ತೊರೆದಳು. ಬೆಂಗಳೂರಿನ ಮಹಾತ್ಮಾ ಗಾಂಧಿ ರಸ್ತೆಯ ಚರ್ಚ್‌ಸ್ಟ್ರೀಟ್‌ನ ಕಲ್ಲು ಕಟ್ಟಡದ ಮೂಲೆಯಲ್ಲಿ ನೆಲೆಯೂರಲು ನೋಡಿದಳು.

ಭಿಕ್ಷಾಟನೆ ಮಾಡದೆ ಗ್ಯಾಲರಿ, ರೆಸ್ಟೋರೆಂಟ್, ಬೀಡಾ ಅಂಗಡಿಗಳ ಹತ್ತಿರ ಕಸ ಗುಡಿಸಿಕೊಂಡು ಬದುಕು ಸಾಗಿಸತೊಡಗಿದಳು. ತೃಪ್ತ, ಅತೃಪ್ತ ಗಂಡಸರು, ದಾರಿಹೋಕರು, ಪೊಲೀಸರು ದೈಹಿಕ ಸುಖಕ್ಕಾಗಿ ಹಿಂಸಿಸತೊಡಗಿದರು. ಚಳವಳಿ ಕಾವಿನ ಕೆಂಡಗಣ್ಣುಗಳಲ್ಲಿ ಸಿಡಿದು ನಿಂತಳು, ಪ್ರತಿರೋಧ ಬಹಳ ಕಾಲ ನಿಲ್ಲಲಿಲ್ಲ. ದೇಹದ ಪೊರೆಯನ್ನು ಅಲೆಅಲೆಯಾಗಿ ಎಬ್ಬಿದರು. ಕಳಚಿಕೊಂಡು ಸುಲಿದ ಹಣ್ಣಿನ ಸಿಪ್ಪೆಯಂತಾಗಿದ್ದವಳು ಅಲ್ಲಿಂದ ಏರ್‌ಪೋರ್ಟ್ ರಸ್ತೆಗೆ ತನ್ನ ನೆಲೆ ಬದಲಿಸಿದಳು. 

ವರ್ಷಗಳ ಮೇಲೆ ವರ್ಷಗಳು ಉರುಳಿದವು. ವೃದ್ಧೆ ಗಂಗಾ ತನ್ನನ್ನೇ ತಾನು ಗುರುತು ಹಿಡಿಯದಷ್ಟು ಅಸಂಗತಳಾದಳು.  ಅವಳಲ್ಲೊಬ್ಬ ಬೆಂಕಿ ಸೀಳುವ ಹುಡುಗಿಯಂತೂ ಇದ್ದೇ ಇದ್ದಳು, ಅವಳೂ ಸತ್ತುಹೋಗಿದ್ದಳು. ಪೊರಕೆ ಹಿಡಿದು ಬೀದಿಗಿಳಿವ ಶಕ್ತಿ ಗಂಗಾಳಲ್ಲಿ ಇನ್ನಿಲ್ಲವಾಗಿತು. ಕುಳಿತಲ್ಲಿ ತುಕ್ಕಿಡಿಯುವಷ್ಟು ಜಡ್ಡು ಹಿಡಿದುಹೋಗಿದ್ದಳು. ಯಾರಾದರೂ ಬನ್ನು ತಂದು ಮುಂದೆ ಎಸೆದು ಕರೆದರೆ ಎಷ್ಟೋ ಹೊತ್ತಿಗೆ ತಲೆ ಎತ್ತಿ ನೋಡುವಳು.      
            
***
ನೆನಪುಗಳ ಬೊಗಸೆ ಕ್ಷೀಣಿಸಿತು. ಎರ್ರ ನಾರಾಯಣ, ಸಾಂಬಾರು ವ್ಯಾಪಾರಿ ಬಸವರಾಜ್ ಮತ್ತು ತರುಣ ಚಮ್ಮಾರ ಇಳಿದುಬಂದು ಕೈ ಹಿಡಿದುಕೊಂಡರೋ ಏನೋ ಎಂದು ಚಡಪಡಿಸಿದಳು. ತರುಣ ಚಮ್ಮಾರನಿಂದ ಕೊಂಡ ಚಪ್ಪಲಿಗಳನ್ನು ಎದೆಗೆ ಅವುಚಿಕೊಂಡು ಎದ್ದು ನಿಲ್ಲಲೆತ್ನಿಸಿದಳು. ವ್ಯವಸ್ಥೆ ವಿರುದ್ಧ ದಂಗೆಯೇಳುವಾಗ ಕೂಗುತ್ತಿದ್ದ ‘ಮುರ್ದಾಬಾದ್’ ಎನ್ನುವ ಕೊನೆ ಘೋಷಣೆ ಅವಳಿಂದ ಕೇಳಿಬಂತು. ಅವಳಿಗೇ ವಿರೋಧಿಸಿಕೊಂಡಂತಿತ್ತು. ಬರಡು ಒಣಮರವೊಂದು ನೆಲಕ್ಕೆ ಉರುಳಿಬಿದ್ದಂತೆ ಗಂಗಾ ಕಲ್ಲುಗೋಡೆಗೆ ಒಡೆದುಕೊಂಡು ದಬಾರನೆ ಬಿದ್ದಳು. ನೆತ್ತರು ಜಿನುಗತೊಡಗಿತು, ದೇಹದೊಳಗಿನ ಅಲೆಮಾರಿ ಹಕ್ಕಿ ಒಂದು ಗಳಿಗೆ ಅಲ್ಲೇ ಸುತ್ತುವರಿದು ಹಾರುತ್ತಾರುತ್ತಾ ಅದೃಶ್ಯವಾಯಿತು.

ಎಂದಿನಂತೆ ಕೆಫೆ ಡೇ ಆಸುಪಾಸಿನಲ್ಲಿ ಕಸ ಗುಡಿಸಲು ಬರುತ್ತಿದ್ದ ವೃದ್ಧ ಜಾಡಮಾಲಿ, ‘ಗಂಗಮ್ಮೋ, ತಗಾ ಬನ್ನು ಟೀ’ ಮುಂದೆ ಇಟ್ಟ. ತಲೆ ಆ ಕಡೆಗೆ ವಾಲಿಕೊಂಡಿತ್ತು. ಅಸ್ತವ್ಯಸ್ತವಾಗಿ ಮಲಗಿಕೊಳ್ಳುವುದು ಅಭ್ಯಾಸವಾಗಿ ಹೋಗಿತ್ತಾದ್ದರಿಂದ ಏನೂ ಅನ್ನಿಸಲಿಲ್ಲ. ಮೊದಲ ಕೂಗಿಗೆ ಏಳಲಾರಳು. ಒಂದು ಸುತ್ತು ಗುಡಿಸಿ ಬರುವಷ್ಟೊತ್ತಿಗೆ ಬನ್ನು ತಿಂದು, ಟೀ ಕುಡಿದಿರುತ್ತಾಳೆ. ಕಸ ತಳ್ಳಿ ಮತ್ತೆ ಬಂದ, ನಾಯಿ ಬಾಲವಾಡಿಸುತ್ತ ಬನ್ನು, ಟೀ ಎದುರು ಕುಳಿತುಕೊಂಡಿತ್ತು. ಆದರೂ ಏನೋ ಚಡಪಡಿಕೆ... ಮುಖದ ಕಡೆ ಬಂದ, ರಕ್ತ ಮಡುಗಟ್ಟಿತ್ತು.

ಕಣ್ರೆಪ್ಪೆಗಳ ಮೇಲೆ ಕೈಯಾಡಿಸಿದ. ಎದೆಗೆ ಅವುಚಿಕೊಂಡಿದ್ದ ಚಪ್ಪಲಿಗಳನ್ನು ಬಿಡಿಸಿಕೊಳ್ಳಲು ಮುಂದಾದ, ಆಗಲಿಲ್ಲ. ಹಾರೆ ಬಡಿದು ಮೀಟಿದರೂ ಬರುವಂತಿರಲಿಲ್ಲ, ಅಷ್ಟೊಂದು ಬಲವಾಗಿ ತಬ್ಬಿಹಿಡಿದಿದ್ದಳು. ನಾಯಿಗೆ ಬನ್ನು ಎಸೆದು, ರಸ್ತೆಗೆ ಟೀ ಚೆಲ್ಲಿದ. ಜನ ಅಸಹ್ಯಿಸಿಕೊಳ್ಳುತ್ತಾರೆಂದು ರಕ್ತ ಕರೆ ಕಟ್ಟಿದಲ್ಲಿ ಮಣ್ಣು ಎಳೆದ. ತಳ್ಳುವ ಕೈಗಾಡಿಯಲ್ಲಿ ಗುಬ್ಬಚ್ಚಿ ತೂಕದ ಗಂಗಾಳ ಮೃತದೇಹವನ್ನು ಹೊತ್ತುಹಾಕಿ ಹಣೆಗೆ ಅರಿಶಿಣ ಕುಂಕುಮ ಉಜ್ಜಿದ.

ಕಾಂಪೌಂಡಿನಿಂದ ಆಚೀಚೆ ಸುಳಿದ ಟುಲಿಪ್ ಹೂಗಳನ್ನು ಕಿತ್ತುಕೊಂಡು ಎದೆ ಮೇಲೆ ಚೆಲ್ಲಿ, ಗೋಣಿಬಟ್ಟೆ ಸುತ್ತಿದ ಮುಖ ಮಾತ್ರ ಕಾಣುವಂತೆ. ಗಂಗಾಳ ಮುಖದಲ್ಲಿ ಎದ್ದ ಸುಕ್ಕುಗಳು ಅವಳು ನಡೆದುಬಂದ ದಾರಿಗಳನ್ನು ಸೂಚಿಸುತ್ತಿದ್ದವು. ಹಣೆಯ ಮೇಲೆ ಇಳಿದ ನರೆಗೂದಲು ಬೆಳ್ಳನೆ ಹೊಳೆಯುತ್ತಿದ್ದವು. ಹಲವು ಗೊಂದಲಗಳಲ್ಲಿ ಸಿಲುಕಿ ನರಳುವ ಅಸಂಖ್ಯ ಜನರ ನಡುವೆ ಗಂಗಾಳ ಅನಾಥ ಹೆಣ ಸಹಜವಾಗಿ ಸಾಗತೊಡಗಿತು. ಗಂಗಾ ಹೂಡಿದ ಕೊನೆಯ ಚಳುವಳಿ ಹೀಗೆ ತಣ್ಣಗೆ ಅಸಹನೀಯವಾಗಿ ಆರಂಭಗೊಂಡಿತ್ತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT