ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿ ಸಮೀಕ್ಷೆ ಪಾರದರ್ಶಕವಾಗಿದೆ: ಸಚಿವ ಆಂಜನೇಯ

Last Updated 24 ಮೇ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಜಾತಿ ಸಮೀಕ್ಷೆ ವರದಿ ಪಾರದರ್ಶಕವಾಗಿದೆ. ಅದನ್ನು ಬಹಿರಂಗಪಡಿಸಲು ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ’ ಎಂದು ಸಮಾಜ ಕಲ್ಯಾಣ ಸಚಿವ ಎಚ್‌. ಆಂಜನೇಯ ಹೇಳಿದರು.

ಪರಿಶಿಷ್ಟ ಜಾತಿ ಮತ್ತು ಪಂಗಡದ ಉಪ ಯೋಜನೆ ಕುರಿತು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮಂಗಳವಾರ ನಡೆದ  ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಂಸದರು, ಶಾಸಕರ ಸಭೆಯ ಬಳಿಕ ಮಾತನಾಡಿದ ಅವರು, ‘ವರದಿ ಬಹಿರಂಗಪಡಿಸುವ  ಸಂಬಂಧ ಇದೇ 26ರಂದು ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಜೊತೆ ಚರ್ಚೆ ನಡೆಸುತ್ತೇನೆ’ ಎಂದರು.

‘ವೀರಶೈವ ಮಹಾಸಭಾ ಮತ್ತು ರಾಜ್ಯ ಒಕ್ಕಲಿಗರ ಒಕ್ಕೂಟ ಸಮೀಕ್ಷೆ ಬಹಿರಂಗಪಡಿಸದಂತೆ ಆಗ್ರಹಿಸಿರುವುದು ಗಂಭೀರ ವಿಷಯ. ಎಲ್ಲರಿಗೂ ಸಾಮಾಜಿಕ ನ್ಯಾಯ ದೊರಕಿಸಿಕೊಡುವ ಉದ್ದೇಶದಿಂದ  ಸಮೀಕ್ಷೆ ನಡೆಸಲಾಗಿದೆ. ವರದಿಯಲ್ಲಿ  ದೋಷ ಇದ್ದರೆ ವಿರೋಧಿಸುವ ಹಕ್ಕು ಎಲ್ಲರಿಗೂ ಇದೆ’ ಎಂದರು.

‘ಪರಿಶಿಷ್ಟ ಜಾತಿ, ಪಂಗಡದ ಉಪ ಯೋಜನೆ ಅನುಷ್ಠಾನ ತ್ವರಿತವಾಗಿ ಮತ್ತು ಸಮರ್ಪಕವಾಗಿ ನಡೆಯುವಂತೆ ನಿಗಾ ಇಡಲು ಪ್ರತಿ ಎರಡೂವರೆ ತಿಂಗಳಿಗೊಮ್ಮೆ ಅಧಿಕಾರಿಗಳ ಸಭೆ ಕರೆಯುತ್ತೇನೆ. ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು’ ಎಂದೂ ಎಚ್ಚರಿಕೆ ನೀಡಿದರು.

‘ಯೋಜನೆಯಡಿ 2016–17ನೇ ಸಾಲಿಗೆ ₹19,542 ಕೋಟಿ ಮೀಸಲಿಡಲಾಗಿದೆ. ಹಳೆ ಯೋಜನೆಗಳನ್ನು ಮುಂದುವರಿಸುವ ಜತೆಗೆ ಕೆಲವು ಹೊಸ ಯೋಜನೆಗಳನ್ನು ಸೇರಿಸಿಕೊಂಡು ಸಮರ್ಪಕ ಅನುಷ್ಠಾನಕ್ಕೆ ಒತ್ತು ನೀಡುವಂತೆ ಜನಪ್ರತಿನಿಧಿಗಳು ಸಲಹೆ ನೀಡಿದ್ದಾರೆ. ಬುಧವಾರ ಅಧಿಕಾರಿಗಳು ಮತ್ತು ನೋಡಲ್‌ ಏಜೆನ್ಸಿಗಳ ಜತೆ ಸಭೆ ನಡೆಸಲಿದ್ದೇನೆ. ಅಂತಿಮವಾಗಿ ನಿರ್ದಿಷ್ಟ ಕ್ರಿಯಾ ಯೋಜನೆ ಸಿದ್ಧಪಡಿಸಿ ಮುಂದಿನ ತಿಂಗಳ ಮೊದಲ ವಾರದಲ್ಲಿ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿರುವ ರಾಜ್ಯ ಪರಿಷತ್ತಿನಲ್ಲಿ ಮಂಡಿಸಲಾಗುವುದು’ ಎಂದರು.

ನರೇಂದ್ರಸ್ವಾಮಿ-ಆಂಜನೇಯ ವಾಗ್ವಾದ
ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ಮತ್ತು ಕಾಂಗ್ರೆಸ್ ಶಾಸಕ ಪಿ.ಎಂ. ನರೇಂದ್ರಸ್ವಾಮಿ ಮಧ್ಯೆ ಮಂಗಳವಾರ ಮಾತಿನ ಚಕಮಕಿ ನಡೆಯಿತು. ಕ್ಷಮೆ ಯಾಚಿಸುವುದರೊಂದಿಗೆ ವಾಗ್ವಾದ ಅಂತ್ಯವಾಗಿದೆ ಎನ್ನಲಾಗಿದೆ.

ಉಪಯೋಜನೆಯ ಪ್ರಗತಿ ಕುರಿತು ಮಾತನಾಡಿದ ನರೇಂದ್ರಸ್ಪಾಮಿ, ‘ಹಣ ಸರಿಯಾಗಿ ವೆಚ್ಚ ಆಗುತ್ತಿಲ್ಲ. ಹಾಸ್ಟೆಲ್‌ಗಳಿಗೆ ಮೂಲಸೌಲಭ್ಯ ಒದಗಿಸಲು ಗುತ್ತಿಗೆ ನೀಡಿರುವ ಸಂಸ್ಥೆ ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ’ ಎಂದು ಆಕ್ಷೇಪಿಸಿದಾಗ ಸಿಟ್ಟಿಗೆದ್ದ ಸಚಿವರು, ‘ಬಾಯಿಗೆ ಬಂದ ಹಾಗೆ ಮಾತನಾಡಬೇಡ’ ಎಂದರು. ಇದಕ್ಕೆ ಪ್ರತಿಯಾಗಿ ನರೇಂದ್ರಸ್ವಾಮಿ, ‘ಸರ್ಕಾರ ಯಾರಪ್ಪನದ್ದೂ ಅಲ್ಲ’ ಎಂದಿದ್ದಾರೆ. ಸಭೆಯಲ್ಲಿದ್ದ ಸಂಸದ ಕೆ.ಎಚ್.ಮುನಿಯಪ್ಪ ಅವರು ಇಬ್ಬರನ್ನೂ ಸಮಾಧಾನಪಡಿಸಿದ್ದಾರೆ ಎಂದು ತಿಳಿದುಬಂದಿದೆ.

ಈ ಹಂತದಲ್ಲಿ ಶಾಸಕ ಪಿ. ರಾಜೀವ್ ಮತ್ತಿತರ ಕೆಲವರು ಎದ್ದು ನಿಂತು, ‘ಶಾಸಕರ ವಿರುದ್ಧ ಸಚಿವರು ಬಳಸಿದ ಪದ ಸರಿಯಲ್ಲ. ನಾಳೆ ನಮ್ಮ ವಿರುದ್ಧವೂ ಈ ರೀತಿ ಪದ ಬಳಸಬಹುದು. ಅವರು ಕ್ಷಮೆ ಯಾಚಿಸಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT