ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾನುವಾರು ಆಹಾರವಾಗಿ ಅಡಿಕೆ ಹಾಳೆ

ಅಕ್ಷರ ಗಾತ್ರ

ಹೈನುಗಾರಿಕೆಯ ಬಹುದೊಡ್ಡ ಅಗತ್ಯವೆಂದರೆ ಜಾನುವಾರುಗಳಿಗೆ ಉತ್ತಮ ಆಹಾರ. ಅದು ಗುಣಮಟ್ಟದಿಂದ ಕೂಡಿರಬೇಕು, ಆರೋಗ್ಯಕ್ಕೆ ಪೂರಕ ವಾಗಿರಬೇಕು. ಸಾಧ್ಯವಾದಷ್ಟು ಕಡಿಮೆ ಖರ್ಚಿನದ್ದಾಗಿರಬೇಕು.

ಆದರೆ ಇಂದು ಜಾನುವಾರುಗಳಿಗೆ ಪೌಷ್ಟಿಕ ಮೇವಿನ ಕೊರತೆ ಎಲ್ಲೆಡೆ ಕಾಣುತ್ತಿದೆ. ಮಲೆನಾಡಿ ನಲ್ಲಂತೂ ಸ್ಥಳೀಯವಾಗಿ ಬೆಳೆಯುವ ಕೃಷಿಯ ಬಹುತೇಕ ಉಪ ಉತ್ಪನ್ನಗಳು ಜಾನುವಾರು ಮೇವಾಗಿ ಬಳಸಲು ಯೋಗ್ಯವಾಗಿಲ್ಲ. ಭತ್ತದ ಬೆಳೆಯೂ ಇತ್ತೀಚೆಗೆ ಕಡಿಮೆಯಾಗುತ್ತಿದ್ದು ಅಡಿಕೆಯಂತಹ ವಾಣಿಜ್ಯಿಕ ಬೆಳೆಯ ಪ್ರದೇಶ ಹೆಚ್ಚುತ್ತಿವೆ.

ಅದರಲ್ಲೂ  ಭತ್ತದ ಹುಲ್ಲು ಬಹಳ ದುಬಾರಿ ಮತ್ತು ಪೋಷಕಾಂಶಗಳ ದೃಷ್ಟಿಯಿಂದ ಕಳಪೆ ಆಹಾರ. ಹೀಗಾಗಿ ಸ್ಥಳೀಯವಾಗಿ ದೊರೆಯುವ ಅಡಿಕೆ ಹಾಳೆಯನ್ನು ಪಶು ಆಹಾರವಾಗಿ ಬಳಸುವ ವಿಧಾನ ವೈಜ್ಞಾನಿಕವಾಗಿ ಬೆಂಗಳೂರಿನ ಪಶುಪೋಷಣೆ ಮತ್ತು ಶರೀರಕ್ರಿಯಾ ವಿಜ್ಞಾನ ಸಂಸ್ಥೆಯ (ಎನ್.ಐ.ಎ. ಎನ್.ಪಿ.) ಸಂಶೋಧನೆಯಿಂದ  ಧೃಡಪಟ್ಟಿದೆ.

ನಮ್ಮ ರಾಜ್ಯದಲ್ಲಿ ಒಂದೂಕಾಲು ಲಕ್ಷ ಹೆಕ್ಟೇರು ಗಳಿಗಿಂತ ಹೆಚ್ಚು ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗು ತ್ತಿದೆ. ಮಲೆನಾಡಿನಲ್ಲಂತೂ ಅಡಿಕೆಯು ಸಾರ್ವತ್ರಿಕ ವಾಗಿ ಬೆಳೆಯಲಾಗುವ ಒಂದು ವಾಣಿಜ್ಯಿಕ ಬೆಳೆ. ಅಡಿಕೆ ಮರದ ಎಲೆಯ ತೊಟ್ಟನ್ನು ಅಡಿಕೆ ಹಾಳೆ ಎನ್ನುತ್ತಾರೆ. ಈ ಎಲೆ ಹಣ್ಣಾದಾಗ ಸ್ವಾಭಾವಿಕವಾಗಿ ನೆಲಕ್ಕೆ ಉದುರುತ್ತದೆ.

ರೈತರು ಇದನ್ನು ಕಾಂಪೋಸ್ಟ್ ಗೊಬ್ಬರ ಮತ್ತು ಬಸಿಗಾಲುವೆ ಮುಚ್ಚಿಗೆ ಮಾಡಲು  ಬಳಸುತ್ತಾರೆ. ಇದರಿಂದ ದೊರೆಯುವ ಹಾಳೆಯನ್ನು ಒಣಗಿಸಿ ಪಶು ಆಹಾರವಾಗಿ ಉಪಯೋಗಿಸಬಹುದು. ನೆಲಕ್ಕುದು ರುವ ಹಾಳೆಯನ್ನು ಸಂಗ್ರಹಿಸಿ ಒಣಗಿಸಲು ಮಳೆಗಾಲ ದಲ್ಲಿ ಸಾಧ್ಯವಿಲ್ಲ.

ಹಾಗಿದ್ದರೂ ಒಂದು ಎಕರೆ ಅಡಿಕೆ ತೋಟದಲ್ಲಿ ಅರ್ಧದಷ್ಟನ್ನು ಮಾತ್ರ ಸಂಗ್ರಹಿಸಿದರೂ ವರ್ಷಕ್ಕೆ ಸುಮಾರು ನಾಲ್ಕೂವರೆ ಕ್ವಿಂಟಾಲು ಆಗುತ್ತದೆ. ಇದು ಒಂದು ಹಸುವಿಗೆ ಒಣ ಮೇವಾಗಿ ಮೂರು ತಿಂಗಳವರೆಗೆ ಸಾಕು. ಹಸುವೊಂದಕ್ಕೆ ದಿನಾಲೂ ಐದು ಕಿಲೋ ತನಕ ಹಾಳೆ ಪುಡಿಯನ್ನು ಹಾಕಬಹುದು. 

ಅಡಿಕೆ ಹಾಳೆಯ ಬಳಕೆ ಹೇಗೆ?
ಅಡಿಕೆ ಹಾಳೆಯನ್ನು ಐದಾರು ದಿನ ಬಿಸಿಲಿನಲ್ಲಿ ಒಣಗಿಸಿ ಸಂಗ್ರಹಿಸಬೇಕು. ಇದನ್ನು ಅವಲಕ್ಕಿಯ ಆಕಾರದಲ್ಲಿ ಪುಡಿ ಮಾಡಿ ಹಸುಗಳಿಗೆ ನೀಡಬೇಕು. ಇದಕ್ಕೆಂದೇ ಈಗ ಹಾಳೆ ಪುಡಿ ಮಾಡುವ ಯಂತ್ರವನ್ನೂ ಸಿದ್ಧಪಡಿಸಲಾಗುತ್ತಿದೆ. ಭೋಪಾಲಿನ ಕೇಂದ್ರ ಕೃಷಿ ವಿಜ್ಞಾನ ಎಂಜಿನಿಯರಿಂಗ್‌ ಸಂಸ್ಥೆ (ಸಿ.ಐ.ಎ.ಇ) ಈ ನಿಟ್ಟಿನಲ್ಲಿ ಸಂಶೋಧನೆ ನಡೆಸಿ ತಯಾರಿಸಿದ ಒಂದು ಯಂತ್ರ ದಕ್ಷಿಣ ಕನ್ನಡದ ಪಾಣಾಜೆಯ ಹಾಲು ಉತ್ಪಾದಕರ ಸಹಕಾರಿ ಸಂಘದಲ್ಲಿ ಸ್ಥಾಪಿಸಲಾಗಿದೆ.

‘ಹೈನುಗಾರರು ಇಲ್ಲಿ ಅಡಿಕೆ ಹಾಳೆಯನ್ನು ತಂದು ಪುಡಿ ಮಾಡಿಸಿಕೊಂಡು ಹೋಗುತ್ತಾರೆ. ಈ ಘಟಕ ಯಶಸ್ವಿಯಾಗಿ ನಡೆಯುತ್ತಿದೆ. ಅಡಿಕೆ ಹಾಳೆ ಉತ್ತಮ ಆಹಾರ ಎಂದು ರೈತರಿಗೂ ಮನವರಿಕೆಯಾಗಿದೆ’ ಎನ್ನುತ್ತಾರೆ ಪಶುವೈದ್ಯ ಡಾ.ರಾಮಕೃಷ್ಣ ಭಟ್. ಹಾಳೆಯ ಪುಡಿಯನ್ನು ಪಶು ಆಹಾರದ ಜೊತೆಗೆ ಸೇರಿಸಿ ಕೂಡ ಕೊಡಬಹುದು.

ಇದರ ಪೌಷ್ಟಿಕತೆ ಇನ್ನೂ ಹೆಚ್ಚಿಸಬೇಕೆಂದರೆ ಇದಕ್ಕೆ  ಶೇಕಡ ಎರಡರ ಯೂರಿಯಾ ಸೇರಿಸಿ ಕೂಡ ಉಪಯೋಗಿಸಬಹುದು ಎಂಬುದು ಎನ್.ಐ.ಎ.ಎನ್.ಪಿ.ಯ ವಿಜ್ಞಾನಿಗಳ ಅಭಿಪ್ರಾಯ. ಅಡಿಕೆ ಹಾಳೆ ಪುಡಿಯನ್ನು ಗಾಳಿಯಾಡದ ಚೀಲಗಳಲ್ಲಿ ತುಂಬಿ ಇಟ್ಟರೆ ಎರಡು ತಿಂಗಳವರೆಗೆ ಕೆಡದಂತೆ ಇಡಬಹುದು.

ಹಾಳೆಯ  ಹೆಚ್ಚುಗಾರಿಕೆ
ಅಡಿಕೆ ಹಾಳೆಯಲ್ಲಿ ಶೇ 25-30 ನಾರಿನ ಅಂಶ, ಶೇ 3.5ರಷ್ಟು ಪ್ರೊಟೀನ್ ಹಾಗೂ ಅಧಿಕ ಪ್ರಮಾಣದ ಸುಣ್ಣ (ಕ್ಯಾಲ್ಸಿಯಂ), ಗಂಧಕ ಹಾಗೂ ತಾಮ್ರದ ಅಂಶಗಳು ಭತ್ತದ ಹುಲ್ಲಿಗೆ ಹೋಲಿಸಿದರೆ ಅಧಿಕವಾಗಿದೆ. ಜೀರ್ಣವಾಗದ ಆಹಾರವಸ್ತುಗಳಾದ ಲಿಗ್ನಿನ್ ಹಾಗೂ ಸಿಲಿಕಾ ಅಂಶಗಳು ಭತ್ತದ ಹುಲ್ಲಿಗಿಂತ ಕಡಿಮೆ ಪ್ರಮಾಣದಲ್ಲಿವೆ.

ಭತ್ತದ ಹುಲ್ಲಿನಲ್ಲಿರುವ ಅನಪೇಕ್ಷಣೀಯ ಅಂಶವಾದ ಆಕ್ಸಾಲಿಕ್ ಆಮ್ಲ  ಇದರಲ್ಲಿ ಕಡಿಮೆ. ಅಡಿಕೆ ಹಾಳೆಯು ಯಾವುದೇ ಖರ್ಚಿಲ್ಲದೇ ದೊರೆವ ವಸ್ತುವಾಗಿದ್ದು ಅದರ ಸಂಗ್ರಹ ಮತ್ತು ಪುಡಿ ಮಾಡುವ ಖರ್ಚನ್ನು ಗಣನೆಗೆ ತೆಗೆದುಕೊಂಡರೆ ಕಿಲೋ ಒಂದಕ್ಕೆ ಹೆಚ್ಚೆಂದರೆ ಎರಡು ರೂಪಾಯಿ ತಗಲಬಹುದು. ಹೀಗೆ ಜಾನುವಾರುಗಳ ಒಣ ಹುಲ್ಲಿನ ಬಾಬತ್ತಿನಲ್ಲಿ ಅರ್ಧಕ್ಕಿಂತ ಹೆಚ್ಚು ಹಣ ಉಳಿತಾಯವಾಗುತ್ತದೆ.

ಹಾಲಿನ ಉತ್ಪಾದನೆಯಲ್ಲಿ ಹೆಚ್ಚಳ
ಅಡಿಕೆ ಹಾಳೆಯ ಪುಡಿಯನ್ನು ನೀಡುವುದರಿಂದ ಹಾಲಿನ ಉತ್ಪಾದನೆಯು ಶೇಕಡ ಹತ್ತರಷ್ಟು ಮತ್ತು ಹಾಲಿನ ಕೊಬ್ಬಿನ ಅಂಶವು ಶೇ0.2-0.3ರಷ್ಟು ಹೆಚ್ಚಾಗುವುದು ಕಂಡುಬಂದಿದೆ. ಖನಿಜಾಂಶಗಳ ಪ್ರಮಾಣವೂ ಹೆಚ್ಚಿರುವುದರಿಂದ ರಾಸುಗಳ ಆರೋಗ್ಯ ಮತ್ತು ಸಂತಾನೋತ್ಪತ್ತಿಗೂ ಪೂರಕ.

‘ಅಡಿಕೆ ಹಾಳೆಯನ್ನು ನಾನು ಒಣಗಿಸಿ ಸಾಧ್ಯ ವಾದಷ್ಟು ಚಿಕ್ಕದಾಗಿ ಕತ್ತರಿಸಿ ಹಸುಗಳಿಗೆ ಹಲವಾರು ವರ್ಷಗಳಿಂದಲೂ ಕೊಡುತ್ತಿದ್ದೇನೆ. ಇದು ಒಣ ಹುಲ್ಲಿಗೆ ಪರ್ಯಾಯ ಆಹಾರ’ ಎನ್ನುತ್ತಾರೆ ಶಿರಸಿಯ ಕೃಷಿಕ ರಾಮಚಂದ್ರ. ಚೆನ್ನಾಗಿ ಪುಡಿ ಮಾಡಿದ ಹಾಳೆಯಿಂದ ರಾಸುಗಳ ಜೀರ್ಣಶಕ್ತಿಯೂ ವೃದ್ಧಿಸುತ್ತದೆ ಎಂಬುದು ಮಂಗಳೂರಿನ ಪಶುವೈದ್ಯ ಡಾ.ಮನೋಹರ ಉಪಾಧ್ಯರ ಅಭಿಪ್ರಾಯ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT