ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾನ್ ಮೆಕ್ಕೆರೆಲ್‌ನ ಕನ್ನಡ ವ್ಯಾಕರಣ

ಹಳತುಹೊನ್ನು
Last Updated 20 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ
ADVERTISEMENT

ಜಾನ್ ಮೆಕ್ಕೆರೆಲ್‌ನ ‘ಕನ್ನಡ ವ್ಯಾಕರಣ’ವು ನವೆಂಬರ್‌ 16, 1820ರಲ್ಲಿ ಮದರಾಸಿನ ದಿ ಕಾಲೇಜ್ ಪ್ರೆಸ್ಸಿನಲ್ಲಿ ಮುದ್ರಣವಾಗಿ ಪ್ರಕಟಗೊಂಡಿದೆ. ವಾಸ್ತವವಾಗಿ ಈ ಕೃತಿಯ ಹಸ್ತಪ್ರತಿಯನ್ನು ಮೆಕ್ಕೆರೆಲ್‌ನು 1816ರಲ್ಲಿಯೇ ಸಿದ್ಧಪಡಿಸಿದ್ದನು. 220 ಪುಟಗಳ ಈ ಕೃತಿಯ ಬೆಲೆ ಪುಸ್ತಕದಲ್ಲಿ ನಮೂದಾಗಿಲ್ಲ. ಇದು ಹೊಸಗನ್ನಡದ ಎರಡನೆಯ ವ್ಯಾಕರಣ ಕೃತಿ ಹಾಗೂ ಕನ್ನಡದ ಎರಡನೆಯ ಮುದ್ರಿತ ಪುಸ್ತಕ ಎನ್ನುವ ಖ್ಯಾತಿಗೂ ಭಾಜನವಾಗಿದೆ. 1871ರಲ್ಲಿ ಬಂಗಾಳದ ಶ್ರೀರಾಂಪೋರ್ ಪ್ರೆಸ್ಸಿನಲ್ಲಿ ಅಚ್ಚಾದ ವಿಲಿಯಂ ಕ್ಯಾರಿ ಅವರ GRAMMAR OF THE KURNATA LANGUAGE ಎನ್ನುವ ಕನ್ನಡ ವ್ಯಾಕರಣವೇ ಕನ್ನಡದ ಲಭ್ಯ ಮೊದಲನೆಯ ಮುದ್ರಿತ ಕೃತಿ. ಈ ಎರಡೂ ಕೃತಿಗಳಲ್ಲಿ ಇಂಗ್ಲಿಷ್ ಮತ್ತು ಕನ್ನಡ ಭಾಷಾ ಲಿಪಿಗಳೆರಡನ್ನೂ ಬಳಸಲಾಗಿದೆ. ಕನ್ನಡದ ಮೊದಲ ಮುದ್ರಿತ ಕೃತಿ ದುರದೃಷ್ಟವಶಾತ್ ಈಗ ಎಲ್ಲಿಯೂ ಲಭ್ಯವಿಲ್ಲದ, 1810ರಲ್ಲಿ ಮುದ್ರಣಗೊಂಡಿದೆ ಎನ್ನಲಾದ ಶ್ರೀರಂಗಪಟ್ಟಣದ ಕೃಷ್ಣಮಾಚಾರ್ಯ ಅವರಿಂದ ರಚಿತವಾದ ‘ಧಾತುಮಂಜರಿ’ ಎನ್ನುವ ವ್ಯಾಕರಣ ಕೃತಿ.  

ಕನ್ನಡಕ್ಕೆ ಒಂದು ಶ್ರೀಮಂತ ನಿಘಂಟು ಪರಂಪರೆ ಇದ್ದಂತೆ ಒಂದು ಶ್ರೀಮಂತ ವ್ಯಾಕರಣ ಪರಂಪರೆಯೂ ಇದೆ. ನಾಗವರ್ಮನು ಸಂಸ್ಕೃತದಲ್ಲಿ ರಚಿಸಿದ ‘ಕರ್ಣಾಟಕ ಭಾಷಾಭೂಷಣಂ’, ಕೇಶಿರಾಜನು ಕನ್ನಡದಲ್ಲಿ ರಚಿಸಿದ ‘ಶಬ್ದಮಣಿದರ್ಪಣಂ’ ಹಾಗೂ ಭಟ್ಟಾಕಳಂಕನು ಸಂಸ್ಕೃತದಲ್ಲಿ ರಚಿಸಿದ ‘ಶಬ್ದಾನುಶಾಸನಂ’– ಈ ಮೂರೂ ಕೃತಿಗಳು ಹಳಗನ್ನಡದ ವ್ಯಾಕರಣ ಗ್ರಂಥಗಳು. ರನ್ನಕವಿಯು ವ್ಯಾಕರಣ ಗ್ರಂಥವೊಂದನ್ನು ರಚಿಸಿದ್ದಿರಬಹುದು ಎನ್ನುವ ಅನುಮಾನ ಕನ್ನಡ ವಿದ್ವದ್ವಲಯದಲ್ಲಿದೆ. 1810ರಿಂದ 1899ರವರೆಗೆ ದೇಸೀ ವಿದ್ವಾಂಸರು ಹಾಗೂ ವಿದೇಶೀ ಪಂಡಿತರು ಕನ್ನಡ ಹಾಗೂ ಇಂಗ್ಲಿಷ್ ಭಾಷೆಗಳೆರಡರಲ್ಲಿಯೂ ಸುಮಾರು 25 ಕನ್ನಡ ವ್ಯಾಕರಣ ಗ್ರಂಥಗಳನ್ನು ರಚಿಸಿರುತ್ತಾರೆ. ಕನ್ನಡ ಮುದ್ರಣಕ್ಕೆ ಮೊದಲು ಮೊಳೆಗಳನ್ನು ರೂಪಿಸಿದ ಕೀರ್ತಿ ಬಂಗಾಳದವನಾದ ಮನೋಹರ ಎನ್ನುವವನಿಗೆ ಸಲ್ಲುತ್ತದೆ. ನಂತರ ಬೆಂಗಳೂರಿನ ರಂಗ ಎನ್ನುವ ಕನ್ನಡಿಗನು ಕನ್ನಡದ ಅಚ್ಚು ಮೊಳೆಗಳನ್ನು 1830ರ ದಶಕದಲ್ಲಿ ರೂಪಿಸಿದನು.

1838ರಲ್ಲಿ ಆಧುನಿಕ ವಿದ್ಯೆಯನ್ನು ಪಡೆದ ಮೊದಲ ಕನ್ನಡಿಗ ಶ್ರೀರಂಗಪಟ್ಟಣದ ಕೃಷ್ಣಮಾಚಾರ್ಯನು ತನ್ನ ‘ಹೊಸಗನ್ನಡ ನುಡಿಗನ್ನಡಿ’ ಹೊಸಗನ್ನಡ ವ್ಯಾಕರಣ ಗ್ರಂಥದಲ್ಲಿ ‘ಈ ಹೊಸಗನ್ನಡವನ್ನು ಕುರಿತು ಪೂರ್ವದಲ್ಲಿ ಜಾನ್ ಮಕ್ಕರೆಲು ದೊರೆಯವರು ಗ್ರಾಮರೆಂಬೊಂದು ವ್ಯಾಕರಣ ಪುಸ್ತಕವ ಮಾಡಿದರು; ಆದರೆ ಅದರಲ್ಲಿ ಸೂತ್ರಗಳನ್ನು ಇಂಗಿಲೀಷು ಭಾಷೆಯಿಂದ ಹೇಳಿರುವದ್ದರಿಂದ ಅದು ಬಾರದವರು ಓದಲಿಕ್ಕದಶಕ್ಯವಾಗಿ ಹೋಯಿತು’ ಎಂದು ಮೆಕ್ಕೆರೆಲ್‌ನ ಕೃತಿಯನ್ನು ಪ್ರಸ್ತಾಪಿಸಿದ್ದಾರೆ. ಆಚಾರ್ಯರಿಗೆ ಕನ್ನಡದಲ್ಲಿ ವ್ಯಾಕರಣ ರಚಿಸಲು ಮೆಕ್ಕೆರೆಲ್‌ನು ಸಹಾಯ ಮಾಡಿದ್ದನು.

ಜಾನ್ ಮೆಕ್ಕೆರೆಲ್‌ನ ವ್ಯಾಕರಣವನ್ನು ಕುರಿತು 1894ರಲ್ಲಿ ಬರೆದ ತಮ್ಮ ‘ಕರ್ಣಾಟಕ ಭಾಷಾ ವ್ಯಾಕರಣೋಪನ್ಯಾಸ ಮನ್ಜರಿ’ ಕೃತಿಯಲ್ಲಿ ರಾ.ರಘುನಾಥರಾಯರಾದರೋ ಜಾನ್ ಮೆಕೆರಲ್ ಸಾಹೇಬರೊಬ್ಬರು ಗ್ರಾಮರ್ ಎಂಬೊಂದು ವ್ಯಾಕರಣ ಪುಸ್ತಕವನ್ನು ಮಾಡಿದರೆಂದು ಹೊಸಗನ್ನಡನುಡಿಗನ್ನಡಿಯನ್ನು ಬರೆದ ಶ್ರೀರಂಗಪಟ್ಟಣದ ಕೃಷ್ಣಮಾಚಾರ್ಯರವರು ತಾವು ಬರೆದ ಗ್ರಂಥದ ಪೀಠಿಕೆಯಲ್ಲಿ ಹೇಳುತ್ತಾರೆ. ಇವರು ತಮ್ಮ ವ್ಯಾಕರಣ ಸೂತ್ರಗಳನ್ನು ಇಂಗ್ಲೀಷಿನಲ್ಲಿ ಬರೆದರಂತೆ. ಇದನ್ನು ನೋಡಿದರೆ ತಮ್ಮ ಪುಸ್ತಕವನ್ನು ತಮ್ಮ ಯೂರೋಪಿಯನ್ ಸಹೋದರರಿಗೆ ಬರೆದಂತೆ ತೋರುತ್ತದೆ. ಇವರಿಗೆ ಕನ್ನಡವೆಷ್ಟು ತಿಳಿದಿತ್ತೊ ನಮಗೆ ತಿಳಿಯದು ಎಂದು ಲೇವಡಿ ಮಾಡಿದ್ದಾರೆ. ಆ ಕಾಲಘಟ್ಟಕ್ಕೇನೆ ಮೆಕ್ಕೆರೆಲ್‌ನ ಕೃತಿ ವಿದ್ವಜ್ಜನರ ಗಮನ ಸೆಳೆದಿತ್ತು. ವಿಲಿಯಮ್ ಕ್ಯಾರಿಯವರ ಪುಸ್ತಕವು ಬಂಗಾಳದಲ್ಲಿ ಮುದ್ರಿತವಾಗಿ ಇಲ್ಲಿ ಅಲಭ್ಯವಿದ್ದುದರಿಂದಲೂ ಹಾಗೂ ಆ ಕೃತಿಯಲ್ಲಿ ಇದರನ್ನು, ಇದರುಗಳನ್ನು, ಇದರುಗಳಿಂದ ಮುಂತಾದ ದೊಷಪೂರಿತ ಪ್ರಯೋಗಗಳಿದ್ದುದರಿಂದಲೂ ವಿಲಿಯಂ ಕ್ಯಾರಿಗಿಂತ ಮೆಕ್ಕೆರೆಲ್‌ನ ವ್ಯಾಕರಣವೇ ಮುಂದೆ ಕನ್ನಡದಲ್ಲಿ ಜನರ ಗಮನ ಸೆಳೆಯಿತು ಹಾಗೂ ಮುಂದಿನ ಎಲ್ಲ ಹೊಸಗನ್ನಡ ವ್ಯಾಕರಣ ಗ್ರಂಥಗಳಿಗೆ ಬುನಾದಿಯಾಯಿತು.

1804ರಲ್ಲಿ ವಿದೇಶದಿಂದ ಮದರಾಸಿಗೆ ಬಂದ ಜಾನ್ ಮೆಕ್ಕೆರೆಲ್ 1806ರಿಂದ 1811ರವರೆಗೆ ಕೆನರ ಜಿಲ್ಲೆಯ ಸಬ್-ಕಲೆಕ್ಟರ್ ಆಗಿದ್ದನು. ಸಂಸ್ಕೃತ, ಪರ್ಷಿಯನ್, ತಮಿಳು, ತೆಲುಗು ಹಾಗೂ ಕನ್ನಡ ಭಾಷೆಗಳಲ್ಲಿ ನಿಸ್ಸೀಮ ಪಂಡಿತನಾಗಿದ್ದ ಆತ ಮತೀಯ ಸೇವೆಯನ್ನು ಪಕ್ಕಕ್ಕಿರಿಸಿ ಕನ್ನಡ ಸಾಹಿತ್ಯ ಸೇವೆಯಲ್ಲಿ ತೊಡಗಿದ ಪಾದ್ರಿ. ವಿಲಿಯಂ ಕ್ಯಾರಿಗಿಂತ ಕನ್ನಡದಲ್ಲಿ ಹೆಚ್ಚಿನ ನೈಪುಣ್ಯ ಹೊಂದಿದ್ದ ಮೆಕ್ಕೆರೆಲ್ ತನ್ನ ವ್ಯಾಕರಣ ರಚನೆಗೆ ಹಿನ್ನೆಲೆಯಾಗಿ ಕೇಶಿರಾಜನ ‘ಶಬ್ದಮಣಿದರ್ಪಣಂ’, ಭಟ್ಟಾಕಳಂಕನ ‘ಶಬ್ದಾನುಶಾಸನಂ’ ಕೃತಿಗಳ ಓಲೆಗರಿ ಪ್ರತಿಗಳನ್ನು ಅಭ್ಯಾಸ ಮಾಡಿದ್ದನು. 1809ರಲ್ಲಿಯೇ ಮದರಾಸು ಸರಕಾರದ ಮುಂದೆ ತಾನು ಕನ್ನಡದಲ್ಲಿ ವ್ಯಾಕರಣ ಬರೆಯುವುದರ ಬಗ್ಗೆ ಸೂಚನೆಯನ್ನಿಟ್ಟು 1816ರಲ್ಲಿ ಅದನ್ನು ಮುಗಿಸಿ, 1817ರಲ್ಲಿ ತಾನು ಮದರಾಸು ಸರಕಾರದ ಭಾಷಾಂತರಕಾರನಾಗಿದ್ದುಕೊಂಡು 1820ರಲ್ಲಿ ಪ್ರಕಟಿಸಿದನು.

ಮೆಕ್ಕೆರೆಲ್ ತನ್ನ ಕೃತಿಯಲ್ಲಿ ಅಂದಿನ ಕರ್ನಾಟಕದ ಗಡಿ ರೇಖೆಗಳನ್ನು ಉಲ್ಲೇಖಿಸಿ ಕರ್ನಾಟಕದಾಚೆಯೂ ಕನ್ನಡ ಮಾತಾಡುವ ಜನರಿರುವುದನ್ನು ಗಮನಿಸಿರುತ್ತಾನೆ. ಕೆನರ ಎನ್ನುವುದು ಕರ್ನಾಟಕ ಶಬ್ದದ ಅಪಭ್ರಂಶ ಎಂದು ಒಂದೆಡೆ ಉಲ್ಲೇಖಿಸುತ್ತಾನೆ. ತನ್ನ ಕೃತಿರಚನೆಗೆ ಕಾರಣವನ್ನು ಹೇಳುತ್ತಾ Tippoo Sultan, although a Mohmmedan, was well acquinted with this, the Hindu Language of his State; and Hyder Ally, his Father and immediate Predecessor, was quite familiar with it. Both were men of stern and unrelenting dispositions, and little partial to their Hindu subjects ; but they knew mankind too well not tobe aware, but unless those who govern , be acquinted with the Language of the governed, a set of middle men will arise, who will ultimately become the scorges of the Country ಎಂದು ಪ್ರಾದೇಶಿಕ ಭಾಷೆಯ ಅರಿವು ಎಷ್ಟು ಮಹತ್ವದ್ದೆಂದು ತಿಳಿಸುತ್ತಾನೆ.

A Grammar of the Carnataca Language ಕೃತಿಯಲ್ಲಿ ಮೆಕ್ಕೆರೆಲ್‌ನ ಗುರಿ ಕನ್ನಡ ಬಾರದ ಮತ್ತು ಕನ್ನಡ ಕಲಿಯುತ್ತಿದ್ದ ವಿದೇಶೀ ವಾಚಕರು. ಇದರಿಂದಾಗಿಯೇ ಅವನು ಕನ್ನಡ ವ್ಯಾಕರಣದ ವ್ಯಾಖ್ಯೆ, ಸೂತ್ರಗಳು, ಪರಿಕಲ್ಪನೆಗಳು ಹಾಗೂ ಪ್ರಕ್ರಿಯೆಗಳ ಅಂಶಗಳನ್ನು ಇಂಗ್ಲಿಷ್ ಭಾಷೆಯಲ್ಲಿ ನಿರೂಪಿಸಿರುತ್ತಾನೆ. ಅವಕ್ಕೆ ಉದಾಹರಣೆಗಳನ್ನು ಮಾತ್ರ ಕನ್ನಡ ಭಾಷೆಯಲ್ಲಿ ಕನ್ನಡದ ಲಿಪಿಯಲ್ಲಿ ನೀಡಿರುತ್ತಾನೆ. ಹೀಗಾಗಿ ಈ ಕೃತಿಯಲ್ಲಿ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳ ಮಿಶ್ರಣವಿದೆ.

ಮೆಕ್ಕೆರೆಲ್‌ನ ಕೃತಿಯು ಒಟ್ಟು ಎಂಟು ಅಧ್ಯಾಯಗಳನ್ನೂ ಕೆಲವು ಉಪಯುಕ್ತ ಅನುಬಂಧಗಳನ್ನೂ ಒಳಗೊಂಡಿದೆ. Of Letters (ವರ್ಣಮಾಲೆ), Nouns (ನಾಮವಾಚಕ), Verbs (ಕ್ರಿಯಾಪದ), Indeclinable words and Particles (ಅವ್ಯಯ ಹಾಗೂ ಪ್ರತ್ಯಯ), Derivative words (ಸಾಧಿತ ಪದ), Words borrowed from the Sanscrit (ಸಂಸ್ಕೃತದಿಂದ ಸ್ವೀಕರಿಸಿದ ಶಬ್ದಗಳು), Compound words (ಸಂಕೀರ್ಣ ಶಬ್ದಗಳು), Syntax (ವಾಕ್ಯಗಳು) ಹಾಗೂ Appendix (ಅನುಬಂಧ)- ಇವೇ ಆ ಅಧ್ಯಾಯಗಳು. ಇಲ್ಲಿ ಬಳಸಿರುವ ಕನ್ನಡದ ಅಕ್ಷರಗಳು ತಂಬಾ ಸುಂದರವಾದ ಆಕಾರವನ್ನು ಒಳಗೊಂಡಿವೆ. ಅನುಬಂಧದಲ್ಲಿ ಕನ್ನಡ ಅಂಕಿಗಳ ನಿರೂಪಣೆ, ಕಾಲು ಅರೆ ಮುಕ್ಕಾಲು ಇತ್ಯಾದಿ ಅಂಕಿಗಳ ಭಾಗಾಕಾರ ರೂಪ, ಹಣದ ವಿವಿಧ ಮೌಲ್ಯದ ಘಟಕಗಳು, ಧಾನ್ಯ ಹಾಗೂ ದ್ರವ್ಯಗಳ ಸ್ಥೂಲ ಹಾಗೂ ಸೂಕ್ಷ್ಮ ಅಳತೆ ಮತ್ತು ತೂಕದ ಮೂಲಾಂಶಗಳು, ಭಾರತೀಯ ಪಂಚಾಂಗದ ಪ್ರಭವಾದಿ ಅರವತ್ತು ಸಂವತ್ಸರಗಳು, ಚೈತ್ರಾದಿ ದ್ವಾದಶ ಮಾಸಗಳು, ಪಾಡ್ಯ ಇತ್ಯಾದಿ ಹದಿನೈದು ಪಕ್ಷ ದಿನಗಳು, ಮೂಡ ಪಡು ತೆಂಕ ಬಡಗ – ಈ ದಿಕ್ಕುಗಳ ಕನ್ನಡ ನಾಮಾವಳಿಗಳ ವಿವರಗಳನ್ನು ಕೊಟ್ಟಿರುವುದರಿಂದ ವಾಚಕರಿಗೆ ತುಂಬಾ ಉಪಯೋಗಕ್ಕೆ ಬರುತ್ತದೆ.

ಕನ್ನಡ ಲಿಪಿಯಲ್ಲಿನ ಬರೆವಣಿಗೆಯ ಕ್ರಮವನ್ನು ಕುರಿತು ಮೆಕ್ಕೆರೆಲ್ ಹೇಳುವುದು ಹೀಗೆ : The Carnataca Language is written from left to right. The charecters, like those in the most ancient Greek and Roman manuscripts, are formed of equal sizes, and placed at equal distances, without either connexion or stops, and without any distinction whatsoever of Words. ಅಂದವಾದ ಕನ್ನಡದ ಬರೆವಣಿಗೆಯ ಸೊಗಸಿನ ಕ್ರಮವನ್ನು ಇದಕ್ಕಿಂತ ಸೂಕ್ತವಾಗಿ ವರ್ಣಿಸುವುದು ಹೇಗೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT