ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾರಿಗೆ ಬಾರದ ಘೋಷಣೆ!

ಕಳೆದ ಬಜೆಟ್‌ನ ಅನೇಕ ಕಾರ್ಯಕ್ರಮಗಳೇ ಇನ್ನೂ ಅನುಷ್ಠಾನ ಆಗಿಲ್ಲ
Last Updated 17 ಮಾರ್ಚ್ 2016, 10:18 IST
ಅಕ್ಷರ ಗಾತ್ರ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2016–17ನೇ ಸಾಲಿನ ಬಜೆಟ್‌ ಮಂಡನೆಗೆ (ಮಾರ್ಚ್‌ 18) ಅಂತಿಮ ಹಂತದ ತಯಾರಿಯಲ್ಲಿ ಮಗ್ನರಾಗಿದ್ದಾರೆ. ಆದರೆ ಕಳೆದ ವರ್ಷ ಮಂಡಿಸಿದ್ದ ಬಜೆಟ್‌ನಲ್ಲಿನ ಅನೇಕ ಕಾರ್ಯಕ್ರಮಗಳು ಜಾರಿಗೆ ಬರದೆ, ಘೋಷಣೆಗಷ್ಟೇ ಸೀಮಿತವಾಗಿವೆ.

ಪ್ರಮುಖ ರಸ್ತೆಗಳ ಸಂಪರ್ಕಕ್ಕೆ ಸೇತುವೆಗಳನ್ನು ನಿರ್ಮಿಸಲು ₹ 1 ಸಾವಿರ ಕೋಟಿ ನೀಡುವುದಾಗಿ ಮುಖ್ಯಮಂತ್ರಿ ಘೋಷಣೆ ಮಾಡಿದ್ದರು. ಆದರೆ, ಅದು ಅನುಷ್ಠಾನ ಆಗಿಲ್ಲ.  ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಪ್ರಕಟಿಸಿದ ಹಲವಾರು ಯೋಜನೆಗಳು ಇನ್ನೂ ಕಾಗದದಲ್ಲೇ ಇವೆ. ಅವುಗಳ ಸಾಲಿಗೆ ಗಿರಿಧಾಮಗಳಿಗೆ ಕೇಬಲ್‌ ಕಾರು ಒದಗಿಸುವುದೂ ಸೇರಿದೆ.

ನಂದಿಬೆಟ್ಟ, ಚಾಮುಂಡಿಬೆಟ್ಟ, ಮಧುಗಿರಿ ಏಕಶಿಲಾ ಬೆಟ್ಟ ಹಾಗೂ ಕೆಮ್ಮಣ್ಣುಗುಂಡಿ ಗಿರಿಧಾಮದಲ್ಲಿ ಕೇಬಲ್‌ ಕಾರ್‌ ಯೋಜನೆ ಜಾರಿ ಮಾಡುವುದಾಗಿ ಮುಖ್ಯಮಂತ್ರಿ ಹೇಳಿದ್ದರು. ಆದರೆ, ಅವು  ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ.

ಇವುಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ಜಾರಿ ಮಾಡುವುದಾಗಿ ಪ್ರವಾಸೋದ್ಯಮ ಇಲಾಖೆ ಈಗಲೂ ಹೇಳುತ್ತಲೇ ಇದೆ.

ವಸತಿಯಲ್ಲೂ ಹಿಂದೆ: ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಗ್ರಾಮೀಣ ಭಾಗದಲ್ಲಿ ಒಂದು ಲಕ್ಷ ಮತ್ತು ನಗರ ಪ್ರದೇಶದಲ್ಲಿ 50 ಸಾವಿರ ಮನೆಗಳನ್ನು ನಿರ್ಮಿಸಲು ಸಮಾಜ ಕಲ್ಯಾಣ ಇಲಾಖೆ ಯೋಜನೆ ರೂಪಿಸಿ, ಅದರ ಅನುಷ್ಠಾನದ  ಜವಾಬ್ದಾರಿ ವಸತಿ ಇಲಾಖೆಗೆ ವಹಿಸಿತ್ತು.

ಈ ಸಲುವಾಗಿ ₹2,307 ಕೋಟಿ ಕೊಟ್ಟಿತ್ತು. ಆದರೆ, ಅದು ಇನ್ನೂ ಪೂರ್ಣ ಜಾರಿ ಆಗಿಲ್ಲ. ಬದಲಿಗೆ, ‘ಹಣ ಖರ್ಚು ಮಾಡಲು ಸಾಧ್ಯ ಇಲ್ಲ’ ಎಂದು ಹೇಳಿ ₹273 ಕೋಟಿಯಷ್ಟು ಅನುದಾನವನ್ನು ವಸತಿ ಇಲಾಖೆಯು ಸಮಾಜ ಕಲ್ಯಾಣ ಇಲಾಖೆಗೆ ಹಿಂದಿರುಗಿಸಲು ಮುಂದಾಗಿತ್ತು. ಅದಕ್ಕೆ ಸಮಾಜ ಕಲ್ಯಾಣ ಸಚಿವ ಎಚ್‌.ಆಂಜನೇಯ ಆಕ್ಷೇಪ ವ್ಯಕ್ತಪಡಿಸಿದ ನಂತರ ಈ ಹಣವನ್ನು ರಾಜೀವ್‌ಗಾಂಧಿ ವಸತಿ ನಿಗಮದ ಖಾತೆಗೆ ವರ್ಗಾಯಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಶೇ 76  ಹಣ ಬಿಡುಗಡೆ
2015–16ನೇ ಸಾಲಿನ ಬಜೆಟ್‌ನಲ್ಲಿ ವಿವಿಧ ಇಲಾಖೆಗಳ ಯೋಜನಾ ಬಾಬ್ತಿಗಾಗಿ ಮೀಸಲಿಟ್ಟ ಒಟ್ಟು ಅನುದಾನದಲ್ಲಿ ಫೆಬ್ರುವರಿ

ಅಂತ್ಯದವರೆಗೆ ಶೇ 76ರಷ್ಟು ಬಳಕೆ ಆಗಿದೆ. ಮಾರ್ಚ್‌ 31ರೊಳಗೆ ಪೂರ್ಣ ಅನುದಾನ ಬಳಕೆ ಆಗದಿದ್ದರೆ ಅದು ರದ್ದಾಗುವ ಅಥವಾ ವಾಪಸ್‌ ಹಣಕಾಸು ಇಲಾಖೆ ಪಾಲಾಗುವ ಸಾಧ್ಯತೆ ಇರುತ್ತದೆ.

ಕಾಗದದ ಮೇಲೆ ಉಳಿದ ಯೋಜನೆ

* ಲೋಕೋಪಯೋಗಿ ಇಲಾಖೆಯ ಸಿವಿಲ್‌ ಗುತ್ತಿಗೆ ಕಾಮಗಾರಿಗಳಲ್ಲಿ ಪರಿಶಿಷ್ಟರಿಗೆ ಮೀಸಲಾತಿ
* ಉತ್ತರ ಕರ್ನಾಟಕದಲ್ಲಿ ಐಟಿ ಕ್ರಾಂತಿ. ಅದಕ್ಕಾಗಿ  ಬಾಗಲಕೋಟೆಯಲ್ಲಿ ಐಟಿ ಪಾರ್ಕ್‌ ಸ್ಥಾಪನೆ (ಭೂಸ್ವಾಧೀನ ಸಮಸ್ಯೆಯಿಂದಾಗಿ ಅದು ಜಾರಿಗೊಳ್ಳಲಿಲ್ಲ ಎಂದು ಐಟಿ ಇಲಾಖೆ ಹೇಳುತ್ತಿದೆ)
* ರಾಮನಗರ– ಮೈಸೂರು ನಡುವಿನ ರೈಲ್ವೆ ಜೋಡಿ ಮಾರ್ಗದ ಕಾಮಗಾರಿ (ಇದನ್ನು ಈ ವರ್ಷ ಮುಗಿಸಿ,  ಸಂಚಾರಕ್ಕೆ ತೆರವು ಮಾಡುವುದಾಗಿ  ಬಜೆಟ್‌ನಲ್ಲಿ ಹೇಳಲಾಗಿತ್ತು. ಇವತ್ತಿಗೂ ಅದು ಕಾರ್ಯರೂಪಕ್ಕೆ ಬಂದಿಲ್ಲ. ಶ್ರೀರಂಗಪಟ್ಟಣ ಸಮೀಪದ ಟಿಪ್ಪು ಶಸ್ತ್ರಾಗಾರವನ್ನು ಸ್ಥಳಾಂತರಿಸುವ ಕೆಲಸ ಇನ್ನೂ ಆಗಿಲ್ಲ).
* ತುಮಕೂರು– ರಾಯದುರ್ಗ ರೈಲ್ವೆ ಯೋಜನೆಗೆ ಭೂಸ್ವಾಧೀನ (ಈ ನಿಟ್ಟಿನಲ್ಲಿ ಯಾವ ಪ್ರಯತ್ನವೂ ಆಗಿಲ್ಲ ಎನ್ನುತ್ತವೆ ಇಲಾಖೆ ಮೂಲಗಳು).
* ಗ್ರಾಮೀಣ ಭಾಗದಲ್ಲಿ ನಾಲ್ಕು ಸಾವಿರ ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆ (ಇದುವರೆಗೂ ಪೂರ್ಣ ಪ್ರಮಾಣದಲ್ಲಿ ಜಾರಿಯಾಗಿಲ್ಲ).
* ‘ಗ್ರಾಮೀಣ ಗೌರವ’ ಯೋಜನೆ ಮೂಲಕ ಬಡವರ ಮನೆಗಳಲ್ಲಿ ಸ್ನಾನಗೃಹ ಸಹಿತ ಶೌಚಾಲಯಗಳ, ಗ್ರಾಮೀಣ ಭಾಗದ ಪ್ರತಿ ಮನೆಗೆ ವೈಯಕ್ತಿಕ ಶೌಚಾಲಯ ನಿರ್ಮಾಣ(ಇದು ಕೂಡ ಹೆಚ್ಚಿನ ಕಡೆ ಅನುಷ್ಠಾನ ಆಗಿಲ್ಲ).
* ಸಣ್ಣ ನೀರಾವರಿ ಇಲಾಖೆಯಿಂದ ಪರಿಶಿಷ್ಟ ಜಾತಿ ಮತ್ತು ವರ್ಗದ ರೈತರಿಗೆ ಸೌರಶಕ್ತಿಯ ಕೃಷಿ ಪಂಪ್‌ಸೆಟ್‌ ವಿತರಣೆ (ಇದಕ್ಕೆ ಪರಿಶಿಷ್ಟರ ರಾಜ್ಯ ಪರಿಷತ್‌ನಲ್ಲಿ ಒಪ್ಪಿಗೆ ಸಿಗದ ಕಾರಣ ನನೆಗುದಿಗೆ ಬಿದ್ದಿದೆ).
* ಸಾಹಿತಿ ಯು.ಆರ್‌. ಅನಂತಮೂರ್ತಿ ಮತ್ತು ಚಿತ್ರಕಲಾವಿದ ಪಿ.ಆರ್‌.ತಿಪ್ಪೇಸ್ವಾಮಿ ಹೆಸರಿನಲ್ಲಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಪೀಠ ಸ್ಥಾಪನೆಗೆ ತಲಾ ₹ 1 ಕೋಟಿ. (ಹಣ ಬಿಡುಗಡೆ ಆಗಿಲ್ಲ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT