ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಗಳಿಗೆ ಸಂಪುಟ ಉಪಸಮಿತಿ ಭೇಟಿ

ಕಸ್ತೂರಿರಂಗನ್ ವರದಿ ಸಾಧಕ ಬಾಧಕ ಚರ್ಚೆ
Last Updated 19 ಡಿಸೆಂಬರ್ 2014, 8:55 IST
ಅಕ್ಷರ ಗಾತ್ರ

ಸುವರ್ಣಸೌಧ (ಬೆಳಗಾವಿ): ಪಶ್ಚಿಮ ಘಟ್ಟ ಸಂರಕ್ಷಣೆ ಕುರಿತ ಕಸ್ತೂರಿ ರಂಗನ್ ವರದಿಯ ಸಾಧಕ ಬಾಧಕ ಪರಿಶೀಲಿಸಲು ರಚಿಸಲಾಗಿರುವ ಸಚಿವ ಸಂಪುಟದ ಉಪ ಸಮಿತಿ ಜಿಲ್ಲೆಗಳಿಗೆ ಭೇಟಿ ನೀಡಿ ಶಾಸಕರು ಹಾಗೂ ಜನಪ್ರತಿನಿಧಿಗಳ ಅಭಿಪ್ರಾಯ ಪಡೆಯಲಿದೆ. ಬಳಿಕವೇ ಕೇಂದ್ರ ಸರ್ಕಾರಕ್ಕೆ ರಾಜ್ಯದ ನಿಲುವನ್ನು ತಿಳಿಸಲಿದೆ ಎಂದು ಅರಣ್ಯ ಸಚಿವ ಬಿ.ರಮಾನಾಥ ರೈ ಸ್ಪಷ್ಟಪಡಿಸಿದರು.

ವಿಧಾನಸಭೆಯಲ್ಲಿ ಬುಧವಾರ ಕಸ್ತೂರಿರಂಗನ್ ವರದಿಯ ಕುರಿತ ಚರ್ಚೆ ಸಂದರ್ಭದಲ್ಲಿ ಅವರು ಉತ್ತರ ನೀಡಿದರು. ಪಶ್ಚಿಮ ಘಟ್ಟಗಳಲ್ಲಿನ ಪರಿಸರ ಸೂಕ್ಷ್ಮ ಪ್ರದೇಶ­ಗಳನ್ನು ಘೋಷಿಸಲು ಹೊಸ ಅಧಿಸೂಚನೆ ಹೊರಡಿಸ­ಲಾಗುವುದು ಹಾಗೂ ಈ ಬಗ್ಗೆ ಆಯಾ ರಾಜ್ಯಗಳ ಸಲಹೆ ಸೂಚನೆಗಳನ್ನು ಆಹ್ವಾನಿಸಲಾಗುವುದು ಎಂದು ಕೇಂದ್ರ ಪರಿಸರ ಹಾಗೂ ಅರಣ್ಯ ಇಲಾಖೆಯ ಕಾರ್ಯದರ್ಶಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯ­ದರ್ಶಿ ಅವರಿಗೆ ಪತ್ರ ಬರೆದು ತಿಳಿಸಿದ್ದಾರೆ.

ಹೀಗಾಗಿ ಅಧಿಸೂಚನೆಯ ಪರಿಣಾಮ ಸದ್ಯಕ್ಕೆ ಇಲ್ಲ. ಪಶ್ಚಿಮ ಘಟ್ಟದ ಪರಿಸರ ಸೂಕ್ಷ್ಮ ಪ್ರದೇಶಗಳ ಜನರನ್ನು ಒಕ್ಕಲೆಬ್ಬಿಸುವುದಿಲ್ಲ ಎಂದು ಅವರು ಭರವಸೆ ನೀಡಿದರು. ಶೇ 20ಕ್ಕಿಂತ ಹೆಚ್ಚು ಅರಣ್ಯ ಪ್ರದೇಶ ಇರುವ ಗ್ರಾಮಗಳನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಕಸ್ತೂರಿ ರಂಗನ್ ವರದಿ ತಿಳಿಸಿತ್ತು.

ಈ ವರದಿಯು ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ಅದಿರು ಗಣಿಗಾರಿಕೆ, ಕಲ್ಲು ಗಣಿಗಾರಿಕೆ, ಮರಳು ಗಣಿಗಾರಿಕೆ ನಿಷೇಧಿಸ­ಬೇಕು ಎಂದು ತಿಳಿಸಿತ್ತು. ಇದರ ಸಾಧಕ ಬಾಧಕಗಳ ಚರ್ಚೆಗೆ ಸಚಿವ ಸಂಪುಟ ಉಪ ಸಮಿತಿಯನ್ನು ರಚಿಸಲಾಗಿತ್ತು. ಈ ಸಮಿತಿ ಆರು ಬಾರಿ ಸಭೆ ಸೇರಿ ಚರ್ಚಿಸಿ ಹಲವು ಶಿಫಾರಸುಗಳನ್ನು ಮಾಡಿತ್ತು. ಇದರ ಶಿಫಾರಸುಗಳಿಗೆ ಸಚಿವ ಸಂಪುಟದಲ್ಲಿ ಅನು­ಮೋದನೆ ಪಡೆಯಲಾಗಿದೆ ಎಂದರು.

ಉನ್ನತ ಶಿಕ್ಷಣ ಸಚಿವ ಆರ್.ವಿ. ದೇಶಪಾಂಡೆ ಮಾತ­ನಾಡಿ, ಶೇ 50ಕ್ಕಿಂತ ಜಾಸ್ತಿ ಅರಣ್ಯ ಇರುವ ಗ್ರಾಮ­ಗಳನ್ನು ಪರಿಸರ ಸೂಕ್ಷ್ಮ ಪ್ರದೇಶಗಳೆಂದು ಗುರು­ತಿಸಲು ಸಮಿತಿ ಶಿಫಾರಸು ಮಾಡಿದೆ. ರಾಜ್ಯದ 1,537 ಹಳ್ಳಿಗಳನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಗುರುತಿಸಿತ್ತು. ಅದನ್ನು 858ಕ್ಕೆ ಇಳಿಸಲಾಗಿದೆ. 20,668 ಚದರ ಕಿ.ಮೀ. ಪ್ರದೇಶವನ್ನು 13,109 ಚದರ ಕಿ.ಮೀ.ಗೆ ಇಳಿಸಲಾಗಿದೆ ಎಂದು ಮಾಹಿತಿ ನೀಡಿದರು.

‘ಈಗ ಜನರ ಅಭಿಪ್ರಾಯ ಪಡೆಯದೆ ರಾಜ್ಯ ಸರ್ಕಾರ ತನ್ನ ಅಭಿಪ್ರಾಯ ನೀಡಿ ಅಪಾಯ ಆಹ್ವಾನಿ­ಸಿದೆ. ಮುಂದೆ ಈ ರೀತಿ ಆಗಬಾರದು. ವರದಿಯ ಸಾಧಕ ಬಾಧಕಗಳ ಚರ್ಚೆಗೆ ಸದನ ಸಮಿತಿ ರಚಿಸಿ ಸಂತ್ರಸ್ತ ಜಿಲ್ಲೆಗಳಿಗೆ ಕಳುಹಿಸಿ ಜನರ ಅಭಿಪ್ರಾಯ ಸಂಗ್ರಹಿಸಬೇಕು’ ಎಂದು ಸ್ಪೀಕರ್ ಕಾಗೋಡು ತಿಮ್ಮಪ್ಪ ಸಲಹೆ ನೀಡಿದರು.

ಬಿಜೆಪಿಯ ಕೆ.ಜೆ.ಬೋಪಯ್ಯ ಮಾತನಾಡಿ, ರಾಜ್ಯ ಸರ್ಕಾರ ನಿದ್ದೆ ಮಾಡುತ್ತಿದೆ. ಈ ವರದಿ ಜಾರಿ­ಯಾದರೆ ಪಶ್ಚಿಮ ಘಟ್ಟದ ಜನರು ಗುಳೆ ಹೋಗ­ಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು. ಕಾಂಗ್ರೆಸ್‌ನ ಶಿವರಾಮ ಹೆಬ್ಬಾರ್ ಮಾತನಾಡಿ, ಈ ವರದಿಯಿಂದ ಯಾವುದೇ ಲಾಭ ಇಲ್ಲ. ವರದಿಯನ್ನು ಒಪ್ಪಿಕೊಳ್ಳಬಾರದು ಎಂದು ಮನವಿ ಮಾಡಿದರು.

ಜೆಡಿಎಸ್ ನ ಎಚ್.ಕೆ. ಕುಮಾರಸ್ವಾಮಿ ಮಾತ­ನಾಡಿ, ವರದಿಯ ಸಾಧಕ ಬಾಧಕಗಳ ಬಗ್ಗೆ ಜನರ ಅಭಿಪ್ರಾಯ ಸಂಗ್ರಹಿಸಿ ತನ್ನ ನಿಲುವನ್ನು ಕೇಂದ್ರಕ್ಕೆ ತಿಳಿಸಬೇಕು ಎಂದರು. ಕರಾವಳಿ, ಮಲೆನಾಡು ಹಾಗೂ ಕೊಡಗು ಜಿಲ್ಲೆಗಳ ಶಾಸಕರು ಕಸ್ತೂರಿ­ರಂಗನ್ ವರದಿಗೆ ವಿರೋಧ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT