ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವ ಸಂಕಟದಲ್ಲಿ ಜಲಚರಗಳು

Last Updated 23 ನವೆಂಬರ್ 2015, 19:30 IST
ಅಕ್ಷರ ಗಾತ್ರ

ನದಿಗಳು ಊರೊಂದಕ್ಕೆ ಮಾನವನ ಶರೀರದ ರಕ್ತನಾಡಿಗಳಿದ್ದಂತೆ. ಶುದ್ಧ ರಕ್ತ ಮಾತ್ರ ಜೀವ ಪೋಷಕ. ಕಲುಷಿತಗೊಂಡ ರಕ್ತ, ಜೀವವನ್ನು ಹಿಂಡಿದಂತೆ ಮಲಿನಗೊಂಡ ನದಿಗಳು ಊರ ಆರೋಗ್ಯವನ್ನೇ ಕೆಡಿಸುವುದು ಮಾತ್ರವಲ್ಲದೇ ಜಲಚರಗಳ ನಾಶಕ್ಕೂ ಕಾರಣವಾಗಿದೆ.

ನೆಲದ ಮೇಲೆ ಪ್ರಾಣಿ–ಪಕ್ಷಿ–ಚಿಟ್ಟೆಗಳಂತೆ ನೀರೊಳಗೆ ಮೀನುಗಳು. ಜಲಚರಗಳದ್ದು ವರ್ಣಮಯ ಜಗತ್ತು. ಹೊಳೆ ದಂಡೆಯಲ್ಲಿ ಅಥವಾ ಹರಿವ ನೀರಿನ ಮಧ್ಯೆ ಇರುವ ಬಂಡೆಯ ಮೇಲೆ ಕುಳಿತು ನೋಡಿದರೆ ಬಣ್ಣ ಬಣ್ಣದ ಕಿನ್ನರ ಲೋಕವೊಂದು ತೆರೆದುಕೊಳ್ಳುತ್ತದೆ. ಹಗಲಿನಲ್ಲಿ ಬಿಸಿಲಿಗೆ ಕಾಣುವ ಜೀವ ಜಗತ್ತೇ ಬೇರೆ. ರಾತ್ರಿ ಎರಚುವ ಕೃತಕ ಬೆಳಕಿಗೆ ಕಾಣುವ ಜೀವಗಳೇ ಬೇರೆ. ಇಂತಹ ಹೊಳೆದಂಡೆಯ ಮೇಲೆ ಆ ಜೀವ ಜಗತ್ತೊಳಗೆ ತನ್ಮಯವಾಗಿ ತಾಳ್ಮೆಯಿಂದ ಮೀನಿಗಾಗಿ ಗಾಳ ಹಾಕಿ ತಪಸ್ಸಿಗೆ ಬಿದ್ದವರಂತೆ ಕುಳಿತುಕೊಳ್ಳುವ ಸುಖ ಅನುಭವಿಸಿದವರಿಗೆ ಮಾತ್ರ ಗೊತ್ತು.

ಜೀವಚರಗಳ ಬೇಟೆ ಇಂದು ನಿನ್ನೆಯದೇನಲ್ಲ. ತಲೆತಲಾಂತರಗಳಿಂದಲೂ ಇದು ನಡೆದು ಬಂದಿದೆ. ನದಿ, ತೋಡು, ಹೊಳೆಗಳಿಂದ ಅನೇಕ ಸಾಂಪ್ರದಾಯಿಕ ವಿಧಾನಗಳಿಂದ ಮೀನುಗಳನ್ನು ಹಿಡಿಯುವ ಪದ್ಧತಿ ನಮ್ಮ ಪೂರ್ವಜರಿಂದಲೇ ಇದೆ. ಗಾಳ ಹಾಕುವುದು, ಬಲೆ ಬೀಸುವುದು, ಕಪ್ಪೆಕೋಲು, ಸೂಟೆಯೊಂದಿಗೆ ಮೀನು ಬೇಟೆ, ಕಡು ಹಾಕುವುದು, ಇತ್ಯಾದಿ ಸಾಂಪ್ರದಾಯಿಕ ವಿಧಾನಗಳಿಗಷ್ಟೇ ಇವು ಮೀಸಲಿದ್ದವು. ಇದಾವುದೇ ಬೇಟೆ ಪದ್ಧತಿ ಮೀನಿನ ಸಂತತಿ ನಾಶಕ್ಕೆ ಕಾರಣವಾಗಿರಲಿಲ್ಲ.

ಆದರೆ ಕಳೆದ ಮೂರ್ನಾಲ್ಕು ದಶಕಗಳಿಂದ ನಿರಂತರವಾಗಿ ಎಂಡ್ರಾಕ್ಸ್, ಎಂಡೋಸಲ್ಫಾನ್, ಹಾಗೂ ಕಾಪರ್‌ಸಲ್ಪೇಟ್ (ಮೈಲುತುತ್ತು) ಇತ್ಯಾದಿಗಳ ನೇರವಾಗಿ ನೀರಿಗೆ ಸುರಿವ ಮುಖಾಂತರ ಮೀನುಗಳನ್ನು ಹಿಡಿಯಲಾಗುತ್ತಿದೆ. ಮಲೆನಾಡಿನ ಅನೇಕ ಭಾಗಗಳಲ್ಲಿ ಇದು ನಿರಂತರ ಕೆಲವರ್ಷ ನಡೆದಿದ್ದು ಅದರ ಪರಿಣಾಮವಾಗಿ ಹಲವು ತರಹದ ಮೀನಿನ ಸಂತತಿ ಇಳಿಮುಖವಾಗಿರುವುದು ಮಾತ್ರವಲ್ಲ ಕೆಲವೊಂದು ಜಾತಿಗಳು ಕಣ್ಮರೆಯೇ ಆಗಿ ಬಿಟ್ಟಿವೆ. ಸಿಹಿ ನೀರ ಮೀನುಗಳ ಕುರಿತಾದ ಸಮಗ್ರ ಅಧ್ಯಯನ ನಮ್ಮಲ್ಲಿ ಇರದ ಕಾರಣ ಈ ಕುರಿತಾದ ಹೆಚ್ಚಿನ ಮಾಹಿತಿಯೂ ಲಭ್ಯವಿಲ್ಲ. ಡೈನಮೆಟ್  ಸಿಡಿಸಿ  ಮೀನು ಬೇಟೆ ನಡೆಸುವುದು ಬೇಸಿಗೆಯಲ್ಲಿ ಅನೇಕ ಹಳ್ಳಿಗರ ಹಾನಿಕಾರಕ ಕಾಯಕ.

ಮೀನಿನ ಸಂತತಿ ಅಸಂಪ್ರಾದಾಯಿಕ ವಿಧಾನದ  ಬೇಟೆಯಿಂದ  ಮಾತ್ರ ನಾಶವಾಗುತ್ತಿಲ್ಲ. ಜೊತೆಗೆ ನದಿಗಳಿಗೆ ಹತ್ತಿರವಿರುವ  ಸಣ್ಣ ಪುಟ್ಟ ನಗರಗಳ ತ್ಯಾಜ್ಯಗಳ  ವಿಲೇವಾರಿ  ನದಿಗಳಲ್ಲೇ ಆಗುತ್ತಿವೆ. ಮಾಂಸದ ಅಂಗಡಿಗಳ ತ್ಯಾಜ್ಯ, ಸಣ್ಣ ಕೈಗಾರಿಕೆಗಳ ರಾಸಾಯನಿಕಗಳು, ಪ್ಲಾಸ್ಟಿಕ್‌ ಕಸಗಳು ನದಿಗಳನ್ನೇ ನಿರ್ಜೀವವಾಗಿಸುತ್ತಿದ್ದು ಆಧುನಿಕತೆ ಐಷಾರಾಮದ ಜೀವನ ನಮಗೆ ಕಂಟಕವಾಗಿ ಪರಿಣಮಿಸುತ್ತಿದೆ. ವರ್ಷದಲ್ಲಿ ಕೆಲಬಾರಿಯಾದರೂ ನದಿ ಕೆರೆಗಳಲ್ಲಿ ಸತ್ತು ತೇಲುತ್ತಿರುವ ಮೀನುಗಳ ಚಿತ್ರ ಮನಕಲುಕುವಂತಹದು. ಮಾನವನ ರಾಕ್ಷಸ ಪ್ರವೃತ್ತಿಗೆ ಮಿತಿಯೇ ಇಲ್ಲವೇನೋ?

ಒಂದು ಕಾಲದಲ್ಲಿ ದಟ್ಟ ಅರಣ್ಯ ಪ್ರದೇಶಗಳಿಂದ ಕೂಡಿದ ಮಲೆನಾಡು ಈಗ ಮಿತಿಮೀರಿರುವ ಹಲವಾರು ಚಟುವಟಿಕೆಯಿಂದ ಬರಡಾಗುತ್ತಿರುವ  ಈ ಹೊತ್ತಿನಲ್ಲಿ ಕಾಡುಗಳನ್ನು, ನದಿಗಳನ್ನುಆಶ್ರಯಿಸಿ ಬದುಕುತ್ತಿರುವ ಪ್ರಾಣಿ, ಪಕ್ಷಿ, ಜಲಚರಗಳ ಸಂಕಟಕ್ಕೀಡುಮಾಡುತ್ತಿರುವುದು ವಿಷಾದನೀಯ. ಕಳೆದ ಐದು ದಶಕಗಳಿಂದ ವಾಣಿಜ್ಯ ಬೆಳೆಗಳಿಗಾಗಿ ದಟ್ಟ ಕಾಡನ್ನು ಸವರುತ್ತಿರುವುದು, ಉತ್ಪನ್ನಗಳ ಹೆಚ್ಚಳಕ್ಕಾಗಿ ರಾಸಾಯನಿಕಗಳ ಮೊರೆ ಹೋಗುತ್ತಿರುವುದು, ನೆಲ ಜಲವನ್ನೆಲ್ಲ ಕಲುಷಿತಗೊಳಿಸುತ್ತಿವೆ.

ಗಿಡಮರ, ಬಳ್ಳಿ ದಟ್ಟವಾಗಿ ಹೆಚ್ಚಿದ್ದ ತಂಪಿನ ಜಾಗಗಳು ಒಣ ನೆಲವಾಗಿ ಪರಿವರ್ತಿತವಾಗುತ್ತಿರುವುದು ಜಲ ಮೂಲಗಳ ನಾಶಕ್ಕೆ ಕಾರಣವಾದರೆ ಅತಿಯಾದ ರಾಸಾಯನಿಕಗಳ ಬಳಕೆ ಹರಿವ ನೀರನ್ನು ಇನ್ನಷ್ಟು ಕಲುಷಿತಗೊಳಿಸಿದೆ. ಇದರಿಂದ ಜಲಚರಗಳ ಉಳಿವೇ ಪ್ರಶ್ನಾರ್ಹವಾಗಿಬಿಟ್ಟಿದೆ.ಮಾನವ ಇತಿಹಾಸದ ಪಯಣದುದ್ದಕ್ಕೂ ತನ್ನ ಸುತ್ತಮುತ್ತಲಿನ ಪ್ರಾಣಿ ಪ್ರಪಂಚದ ಜತೆ ಸಹಬಾಳ್ವೆಯನ್ನು ನಡೆಸಿಕೊಂಡೇ ಬಂದಿದ್ದಾನೆ. ಆದರೆ ಮೂರು ಶತಮಾನಗಳಿಂದ ಈಚೆಗೆ ಕೈಗಾರಿಕೆ ಯಂತ್ರನಾಗರೀಕತೆಗಳ ಕಂಡುಕೊಂಡ ಮೇಲೆ ಅತಿಯಾದ ಸ್ವಾರ್ಥ, ಪ್ರಕೃತಿ ಕುರಿತಾದ ದುಷ್ಟತನ, ಸಿಕ್ಕದ್ದೆಲ್ಲವನ್ನೂ ಮುಕ್ಕುವ ಕೊಳ್ಳುಬಾಕ ಸಂಸ್ಕೃತಿ ಬೆಳೆಸಿಕೊಂಡಿರುವ ಕಾರಣ ಪರಿಸರಕ್ಕೆ ಶಾಪವಾಗಿ ಪರಿಣಮಿಸುತ್ತಿದೆ.

ಇವೆಲ್ಲಾ ಎಲ್ಲಿ ಹೋದವೋ...
ಚಿಕ್ಕ ಹಳ್ಳ ತೋಡುಗಳಲ್ಲಿ ಕಾಣುವ ಜಲಚರಗಳ ಕೆಲ ಸ್ಥಳೀಯ ಹೆಸರುಗಳು ಇಂತಿವೆ. ಚೆಂಬರೆಗೆಂಡೆ, ಪಾಚೋಳ್ತಿ, ನಿಡ್ಕ, ಕಲ್ಲುಮುಳ್ಳ,  ಕಲ್ಲುಪಾತಿ, ಕಣ್ಣ, ನೊಳು, ಕಾಜವು, ಕೊಂತಿ, ಗಯೆಚರು,  ಗದ್ದೆಚರು, ಮುಳ್ಳ, ಮೊರಂಟೆ, ಬಾಳೆ ಮುಗುಡು, ಏಡಿ, ಇಟ್ಟಿ, ಕೊಂಬಇಟ್ಟಿ ಇತ್ಯಾದಿ.  ನದಿ ಹೊಳೆಗಳ ಮೀನುಗಳೆಂದರೆ, ಕೀಜಣು, ಕರಿಮೀನು, ಹೂ ಮೀನು, ಚಾಮೀನು, ಹಾವುಮೀನು, ಮಳ್ಜಿ, ಹಾವುಮಳ್ಜಿ, ಮಡಂಜಿ, ಕುಚ್ಚಿ, ಪಾಲೆಪೂ, ಪೊಯ್ಯುಕುಜ್ಜೆ, ನಳ್ಳಿ, ಕುರ್ಚಿ, ಪಂಜಿಕುರ್ಚಿ, ಕಲ್ಬಯಿ, ಹೆರ್ಗಿಲು, ಹುಲಿಮೀನು ಇತ್ಯಾದಿ. ಆದರೆ ಇವುಗಳ ಸಂತತಿ ನಶಿಸುತ್ತಿದ್ದು, ಭೂತಗನ್ನಡಿ ಹಿಡಿದು ನೋಡುವಂತಾಗಿದೆ.

ಜೈವಿಕ ವೈವಿಧ್ಯ ಅಧಿನಿಯಮ 2004ರಂತೆ ಪಂಚಾಯತ್ ರಾಜ್ ವ್ಯವಸ್ಥೆಯ ಮೂರು ಹಂತಗಳಲ್ಲೂ ಜೈವಿಕ ವೈವಿಧ್ಯ ಉಳಿಸಲು ಕಾರ್ಯಪ್ರವೃತ್ತರಾಗಬೇಕು. ಆ ಕುರಿತಾಗಿ ಸಮಿತಿಗಳ ರಚಿಸಿಕೊಂಡು ಪರಿಸರ ಸಂರಕ್ಷಣೆಯ ಜವಾಬ್ದಾರಿಗಳನ್ನು ನಿರ್ವಹಿಸಬೇಕು. ಆದರೆ ಎಷ್ಟು ಗ್ರಾಮ ಪಂಚಾಯತ್‌ಗಳು ಈ ಬಗ್ಗೆ ತಲೆ ಕೆಡಿಸಿಕೊಂಡಿವೆ. ಅವು ತಮ್ಮ ವ್ಯಾಪ್ತಿಗೆ ಬರುವ ಪ್ರದೇಶಗಳ ಜೀವ ವೈವಿಧ್ಯದ ದಾಖಲಾತಿ ಮತ್ತು ಪರಿಸರ ನಿರ್ವಹಣೆಯ ಜವಾಬ್ದಾರಿ ಹೊತ್ತಿವೆಯೇ?

ಪಶ್ಚಿಮ ಘಟ್ಟಗಳ ಕುರಿತಾಗಿ ಬಂದಿರುವ ಮಾಧವ ಗಾಡ್ಗಿಳ್ ವರದಿ, ಕಸ್ತೂರಿ ರಂಗನ್ ವರದಿ ಮಾತ್ರವಲ್ಲ ಪಶ್ಚಿಮ ಘಟ್ಟಗಳನ್ನು ಯುನೆಸ್ಕೊ ಪಾರಂಪರಿಕ ತಾಣವಾಗಿ ಘೋಷಿಸಿದಾಗಲೂ ಮಲೆನಾಡಿನ ಭಾಗದ ಪಂಚಾಯತ್‌ಗಳು ಎಲ್ಲವನ್ನು ವಿರೋಧಿಸುವ ತಿರಸ್ಕರಿಸುವ ಮುಖಾಂತರ ‘ಪರಿಸರವಾದ’ ಎನ್ನುವುದು ಜನ ವಿರೋಧಿ ನಿಲುವು ಎಂಬ ತೀರ್ಮಾನಕ್ಕೆ ಬಂದಂತಿದ್ದವು. ಇದೊಂದು ವಿಪರ್ಯಾಸಕರ ಸಂಗತಿ. ಇನ್ನಾದರೂ ಗ್ರಾಮಗಳಲ್ಲಿರುವ ಪಂಚಾಯತ್‌ಗಳು, ಸ್ಥಳೀಯ ಸಂಘ ಸಂಸ್ಥೆಗಳು ಮುಂದಿನ ಜನಾಂಗಕ್ಕಾಗಿ ನೆಲ ಜಲ ಉಳಿಸಿಕೊಳ್ಳುವ ಕಾರ್ಯದಲ್ಲಿ ತೊಡಗಿಕೊಳ್ಳಬೇಕು.ಉತ್ತಮ ಪರಿಸರ, ಸದೃಢ ಮತ್ತು ಆರೋಗ್ಯವಂತ ಜನಾಂಗ ದೇಶದ ಬಹುದೊಡ್ಡ ಸಂಪತ್ತು ಎಂಬುದರ ಅರಿವು ಎಲ್ಲರಿಗೆ ಬರಲಿ.

ಪರಿಸರ  ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ  ಬೆಂಗಳೂರು– ಇದರ ಮಾಹಿತಿಯಂತೆ, ಕರ್ನಾಟಕದಲ್ಲಿ ಒಟ್ಟು 201 ಸಿಹಿನೀರು ಮೀನಿನ ಪ್ರಭೇದಗಳಿದ್ದು ಅದರಲ್ಲಿ 40 ಪ್ರಭೇದಗಳು ಅಳಿವಿನ ಅಂಚಿನಲ್ಲಿವೆ. ಇದು ಹತ್ತು ವರ್ಷಗಳ ಹಿಂದಿನ ಮಾಹಿತಿ. ಪರಿಸ್ಥಿತಿ ಈಗ ಇನ್ನಷ್ಟು ಬಿಗಡಾಯಿಸಿರಬಹುದು. ಸಿಹಿನೀರ ಮೀನುಗಳು ಸೇರಿದಂತೆ ಎಲ್ಲಾ ತರಹದ ಜಲಜೀವಿಗಳ ಸಮೀಕ್ಷೆ ಮತ್ತದರ ಸಂರಕ್ಷಣೆ ಬಗ್ಗೆ ಸರ್ಕಾರ ಮನಸ್ಸು ಮಾಡಬೇಕು. ಜೀವ ವೈವಿಧ್ಯತೆಯ ಉಳಿಯುವಿಕೆಯಲ್ಲಿ ಇದು ಮಹತ್ತರ ಪಾತ್ರ ವಹಿಸಬಲ್ಲದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT