ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೂನಿಯರ್ ಹಾಕಿ: ಭಾರತಕ್ಕೆ ಜಯ

Last Updated 29 ಜುಲೈ 2016, 19:30 IST
ಅಕ್ಷರ ಗಾತ್ರ

ಮಾರ್ಲೊ, ಇಂಗ್ಲೆಂಡ್‌:  ಭಾರತದ ಜೂನಿಯರ್‌ ಬಾಲಕರ ತಂಡದವರು ಇಂಗ್ಲೆಂಡ್‌ ಪ್ರವಾಸದ ಹಾಕಿ ಸರಣಿಯಲ್ಲಿ ಗೆಲುವಿನ ಓಟ ಮುಂದುವರಿಸಿದ್ದಾರೆ.
ಬಿಶಾಮ್‌ ಅಬೆ ಕ್ರೀಡಾ ಸಂಕೀರ್ಣದಲ್ಲಿ ಗುರುವಾರ ರಾತ್ರಿ ನಡೆದ ಪಂದ್ಯದಲ್ಲಿ ಭಾರತ ತಂಡ 7–1 ಗೋಲುಗಳಿಂದ ಆತಿಥೇಯ ಇಂಗ್ಲೆಂಡ್‌ ತಂಡವನ್ನು ಪರಾಭವಗೊಳಿಸಿತು.

ಹಿಂದಿನ ಪಂದ್ಯಗಳಲ್ಲಿ  ಬಲಿಷ್ಠ ತಂಡಗಳನ್ನು ಮಣಿಸಿ ವಿಶ್ವಾಸ ಹೆಚ್ಚಿಸಿಕೊಂಡಿದ್ದ ಭಾರತ ತಂಡ ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. 15ನೇ ನಿಮಿಷದಲ್ಲಿ ಮನ್‌ಪ್ರೀತ್‌ ಚೆಂಡನ್ನು ಗುರಿ ಮುಟ್ಟಿಸಿ ಗೋಲಿನ ಖಾತೆ ತೆರೆದರು.

‌ಆ ಬಳಿಕ ತಂಡ ಇನ್ನಷ್ಟು ಚುರುಕಾಗಿ ಆಡಿತು. ಎದುರಾಳಿ ತಂಡದ ದುರ್ಬಲ ರಕ್ಷಣಾ ಕೋಟೆಯನ್ನು ಭೇದಿಸಿ ಒಳನುಗ್ಗಿದ ಅಜಯ್‌ ಯಾದವ್‌ 27ನೇ ನಿಮಿಷದಲ್ಲಿ  ತಂಡದ ಖಾತೆಗೆ ಮತ್ತೊಂದು ಗೋಲು ಜಮೆಮಾಡಿದರು. ಇದಾದ ಆರು ನಿಮಿಷದಲ್ಲಿ ವರುಣ್‌ ಕುಮಾರ್‌ (32) ಗೋಲು ತಂದಿತ್ತು  ತಂಡದ ಮುನ್ನಡೆಯನ್ನು 3–0ಗೆ ಹೆಚ್ಚಿಸಿದರು.

ಇದರ ಬೆನ್ನಲ್ಲೇ ವರುಣ್‌ ಮತ್ತೊಮ್ಮೆ ಕಾಲ್ಚಳಕ ತೋರಿದರು. 35ನೇ ನಿಮಿಷದಲ್ಲಿ ಸಹ ಆಟಗಾರ ನೀಡಿದ ಪಾಸ್‌ನಲ್ಲಿ ಚೆಂಡನ್ನು ನಿಯಂತ್ರಣಕ್ಕೆ ಪಡೆದ ವರುಣ್‌ ಅದನ್ನು ಗುರಿ ಮುಟ್ಟಿಸುವಲ್ಲಿ ಯಾವುದೇ ತಪ್ಪು ಮಾಡಲಿಲ್ಲ. 38ನೇ ನಿಮಿಷದಲ್ಲಿ ಗುರ್ಜಾಂತ್‌ ಸಿಂಗ್‌ ಗೋಲು ದಾಖಲಿಸಿ ಭಾರತದ ಪಾಳಯದಲ್ಲಿ ಮನೆ ಮಾಡಿದ್ದ ಸಂಭ್ರಮವನ್ನು ಹೆಚ್ಚಿಸಿದರು.

ಈ ಹಂತದಲ್ಲಿ ಚೇತರಿಕೆಯ ಆಟ ಆಡಿದ ಆತಿಥೇಯ ಇಂಗ್ಲೆಂಡ್‌ ತಂಡ ಭಾರತಕ್ಕೆ ಪ್ರಬಲ ಪೈಪೋಟಿ ನೀಡಿತಾದರೂ ಪ್ರವಾಸಿ ತಂಡದ ರಕ್ಷಣಾ ಕೋಟೆಯನ್ನು ಭೇದಿಸಿ ಗೋಲು ಗಳಿಸಲು ಮಾತ್ರ ಈ ತಂಡಕ್ಕೆ ಸಾಧ್ಯವಾಗಲಿಲ್ಲ.

ಆರಂಭದಲ್ಲೇ ಗೋಲು ದಾಖಲಿಸಿ ವಿಶ್ವಾಸದ ಉತ್ತುಂಗದಲ್ಲಿದ್ದ ಭಾರತ ತಂಡ ದ ಆಟಗಾರರು ಆ ಬಳಿಕವೂ ಆತಿಥೇಯರ  ರಕ್ಷಣಾ ವಿಭಾಗದ ಆಟಗಾರರಿಗೆ ತಲೆ ನೋವಾಗಿ ಪರಿಣಮಿಸಿದರು. 

40ನೇ ನಿಮಿಷದಲ್ಲಿ ಸಿಮ್ರಾನ್ಜೀತ್‌ ಸಿಂಗ್‌ ಗೋಲು ದಾಖಲಿಸಿ ಮುನ್ನಡೆಯನ್ನು ಹೆಚ್ಚಿಸಿದರು.  43ನೇ ನಿಮಿಷದಲ್ಲಿ ಅಜಯ್‌ ಯಾದವ್‌ ಅವರು ವೈಯಕ್ತಿಕ ಎರಡನೇ ಗೋಲು ದಾಖಲಿಸಿ ತಂಡ ಸಂಭ್ರಮದ ಹೊಳೆಯಲ್ಲಿ ಮಿಂದೇಳುವಂತೆ ಮಾಡಿದರು. ಆತಿಥೇಯ ತಂಡದ ಎಡ್‌ ಹೋಲರ್‌ ಏಕೈಕ ಗೋಲು ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT