ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೋಕಾಲಿ ಆಡುವಾಗ ಬಾಲಕಿ ಸಾವು

ಜೋಳಿಗೆ ತಿರುಗಿ ಕುತ್ತಿಗೆಗೆ ಸುತ್ತಿಕೊಂಡ ಸೀರೆ
Last Updated 1 ಮೇ 2016, 19:41 IST
ಅಕ್ಷರ ಗಾತ್ರ

ಬೆಂಗಳೂರು:  ಜೋಕಾಲಿ ಆಡುತ್ತಿದ್ದ ವೇಳೆ ಕುತ್ತಿಗೆಗೆ ಸೀರೆ ಸುತ್ತಿಕೊಂಡು ಅಂಜಲಿ (9) ಎಂಬ ಬಾಲಕಿ ಮೃತಪಟ್ಟ ದಾರುಣ ಘಟನೆ ಸುಂಕದಕಟ್ಟೆ ಸಮೀಪದ ಮಾರ್ಕಂಡೇಶ್ವರನಗರದಲ್ಲಿ ಶನಿವಾರ ಸಂಜೆ ನಡೆದಿದೆ.

ಕೂಲಿ ಕೆಲಸ ಮಾಡುವ ಗೌರಮ್ಮ ಎಂಬುವರ ಮಗಳಾದ ಅಂಜಲಿ, ಮನೆ ಹತ್ತಿರದ ಶಾಲೆಯಲ್ಲಿ 3ನೇ ತರಗತಿ ಓದುತ್ತಿದ್ದಳು. ಸಂಜೆ 4.30ರ ಸುಮಾರಿಗೆ ಆಕೆ ಜೋಳಿಗೆಯಲ್ಲಿ ಕುಳಿತು ಆಟವಾಡುತ್ತಿದ್ದಾಗ, ಸೀರೆ ಕುತ್ತಿಗೆ ಸುತ್ತಿಕೊಂಡಿದೆ. ಜೋಳಿಗೆ ತಿರುಗಿದಂತೆಲ್ಲಾ ಅದರ ಬಿಗಿತ ಹೆಚ್ಚಾಗಿದ್ದರಿಂದ ಉಸಿರಾಡಲು ಆಗದೆ ಅಂಜಲಿ ಮೃತಪಟ್ಟಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.

ಅಂಗಳದಲ್ಲಿ ಆಟವಾಡುತ್ತಿದ್ದ ಅಂಜಲಿಯ ತಂಗಿ ಮಂಜುಳಾ, ಅರ್ಧ ತಾಸಿನ ನಂತರ ಮನೆಗೆ ಬಂದಿದ್ದಾಳೆ. ಆಗ ಅಕ್ಕ ಜೋಳಿಗೆಯಲ್ಲಿ ಸಿಲುಕಿರುವುದನ್ನು ಕಂಡು ಪಕ್ಕದ ಮನೆಯ ಕಾಂತಮ್ಮ ಅವರಿಗೆ ವಿಷಯ ತಿಳಿಸಿದ್ದಾಳೆ. ಕೂಡಲೇ ಮನೆಗೆ ಬಂದ ಅವರು, ನಿತ್ರಾಣಳಾಗಿದ್ದ ಅಂಜಲಿಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು. ಆದರೆ, ಅಷ್ಟರಲ್ಲಾಗಲೇ ಆಕೆ ಕೊನೆಯುಸಿರೆಳೆದಿದ್ದಳು.

ಗೌರಮ್ಮ ಅವರ ಮೊದಲ ಪತಿ ಹನುಮಂತರಾಜು ಆರು ವರ್ಷಗಳ ಹಿಂದೆ ಮೃತಪಟ್ಟಿದ್ದರು. ನಂತರ ಬಸವರಾಜು ಎಂಬುವರನ್ನು 2ನೇ ವಿವಾಹವಾಗಿದ್ದಾರೆ.  ಗೌರಮ್ಮ ಅವರ ನಾಲ್ವರು ಮಕ್ಕಳಲ್ಲಿ ಅಂಜಲಿ ಹಿರಿಯ ಮಗಳು.

ಎರಡು ತಿಂಗಳ ಹಿಂದೆ ಕೆಲಸದ ವೇಳೆ ವಿದ್ಯುತ್ ಪ್ರವಹಿಸಿ ಬಸವರಾಜು ಅವರ ಕಾಲುಗಳು ಸ್ವಾಧೀನ ಕಳೆದುಕೊಂಡಿವೆ. ಘಟನೆ ನಡೆದಾಗ ಅವರು ನಾಟಿ ಔಷಧ ಪಡೆಯಲು ಸ್ಥಳೀಯರ ಮನೆಗೆ ಹೋಗಿದ್ದರು ಎಂದು ಪೊಲಿಸರು ಹೇಳಿದ್ದಾರೆ.

‘ಒಂದು ವರ್ಷದ ಮಗುವನ್ನು ಮಲಗಿಸಲು ಜೋಳಿಗೆ ಕಟ್ಟಿದ್ದೆ. ಮಗು ಎದ್ದ ನಂತರ ಮಕ್ಕಳು ಅದರಲ್ಲಿ ಆಟವಾಡುತ್ತಿದ್ದರು. ಎಂದಿನಂತೆ ಶನಿವಾರ ಬೆಳಿಗ್ಗೆಯೇ ಕೂಲಿ ಕೆಲಸಕ್ಕೆ ಹೋಗಿದ್ದೆ. ಬೇಸಿಗೆ ರಜೆ ಕಾರಣ ಮಗುವನ್ನು ನೋಡಿಕೊಂಡು ಮಕ್ಕಳು ಮನೆಯಲ್ಲೇ ಇದ್ದರು. ಸಂಜೆ ಐದು ಗಂಟೆ ಸುಮಾರಿಗೆ ನೆರೆಮನೆಯ ಕಾಂತಮ್ಮ ಕರೆ ಮಾಡಿ ವಿಷಯ ತಿಳಿಸಿದರು. ಆಸ್ಪತ್ರೆಗೆ ಹೋಗುವಷ್ಟರಲ್ಲಿ ಮಗಳ ಪ್ರಾಣ ಹೋಗಿತ್ತು’ ಎಂದು ಗೌರಮ್ಮ ದುಃಖತಪ್ತರಾದರು.
ಘಟನೆ ಸಂಬಂಧ ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT