ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೋಡಿ ಮತ್ಸ್ಯಗಳು

ಕಥೆ

ಕಾಸರಗೋಡಿನ ಎಂಡೋಸಲ್ಫಾನ್ ದುರಂತವನ್ನು ಆಧರಿಸಿ ಮಲೆಯಾಳ ಸಾಹಿತಿ ಶ್ರೀ ಅಂಬಿಕಾಸುತನ್ ಮಾಂಗಾಡ್ ಬರೆದ ‘ಎಣ್ಮಕಜೆ’ ಎಂಬ ವಿಶಿಷ್ಟ ಕಾದಂಬರಿಯು ಎಂಟು ಮುದ್ರಣಗಳನ್ನು ಕಂಡು ಅಲ್ಲಿಯ ಸಾಹಿತ್ಯಲೋಕದಲ್ಲಿ ಪ್ರಖ್ಯಾತವಾಗಿದೆ. ‘ಜೋಡಿ ಮತ್ಸ್ಯಗಳು’ ಅವರ ಪ್ರಸಿದ್ಧ ಕಥೆ. ಮೀನುಗಳ ಜೀವನಚಕ್ರದ ವಿಸ್ಮಯ, ಪರಿಸರ ಕಾಳಜಿ ಮತ್ತು ಪೌರಾಣಿಕ ಕಥನತಂತ್ರ– ಇವುಗಳನ್ನು ಹದವಾಗಿ ಬೆರೆಸಿದ ವಿಶಿಷ್ಟ ಕಥನವಿದು.

‘ಆಳವೇ! ನಿನ್ನ ಕವಲುಗಳಲ್ಲಿ ಎಲ್ಲೆಲ್ಲೂ ಮೀನುಗಳು ಕೆತ್ತನೆ ಕುಸುರಿಗಳ ಮಾಡುತ್ತಿವೆ’
–ಪಿ. ರಾಮನ್

ಕವ್ವಾಯಿ ಕಾವಲಿನ ನಿಶ್ಚಲವಾದ ನೀರಿನ ಆಳಕ್ಕೆ ಮೆಲ್ಲಗೆ ಇಳಿದು ಬಂದ ಎರೆಹುಳದ ಕಡೆಗೆ ಆಸೆಯಲ್ಲಿ ಹಾರಲು ಸಿದ್ಧವಾದ ಪೂವಾಲಿಯನ್ನು ಅಳಗ ತಡೆದ.

‘ಹೋಗಬೇಡ ಚಿನ್ನಾ, ಅದು ಸಾವಿನ ಉರುಳು’.

ಎರೆಹುಳವನ್ನು ಸೀಳಿ ಹೊರಗೆ ಬಂದಿರುವ ಹೊಳೆಯುವ ಗಾಳದ ಮೊನೆಯನ್ನು ಪೂವಾಲಿ ಆಗ ತಾನೇ ನೋಡಿದ್ದು. ಅವಳ ಮೈ ಒಮ್ಮೆ ನಡುಗಿ ಬಿಟ್ಟಿತು.

ಅಳಗ ಅವಳನ್ನು ಬೈದುಬಿಟ್ಟ. ‘ಜಾಗ್ರತೆ ಮಾಡ್ಬೇಡ್ವಾ ನಾವು? ಮೀನುಗಳಿಗೆ ಮೈಯ ನಾಲ್ಕು ಸುತ್ತಲೂ ಕಣ್ಣುಗಳು ಬೇಕಾಗುತ್ತವೆ. ನಾನು ಹೇಳಿರಲಿಲ್ವಾ- ನೀನು ಎಂದೂ ಹೀಗೆ ಹಾರಾಟ ಮಾಡಬಾರದು ಅಂತ?’.

ತಪ್ಪಿನ ಅರಿವಾದ ಪೂವಾಲಿ ಅಳಗನಿಗೆ ತಾಗಿ ಒರಸಿಕೊಂಡು ನಿಂತಳು. ಅವನು ಅವಳನ್ನು ಸಮಾಧಾನಮಾಡಿದ. ‘ನಿನಗೆ ಬೇಸರ ಮಾಡಲು ಹೇಳಿದ್ದಲ್ಲ ಪೂವಾಲಿ. ನೀನು ಈಗ ತುಂಬಾ ಜಾಗ್ರತೆ ಇರಬೇಕು’.

ಈ ಮಾತುಗಳ ಕೇಳಿದೊಡನೆ ಬಹು ಉತ್ಸಾಹದಿಂದ ಪೂವಾಲಿ ಕೇಳುತ್ತ ಹೋದಳು, ‘ನಾವು ಯಾವಾಗ ನಮ್ಮ ಪಯಣ ಸುರು ಮಾಡುವುದು? ಮಳೆಬಾರದೆ ನಮಗೆ ಹೇಗೆ ಹೋಗಲು ಸಾಧ್ಯ? ಎಷ್ಟು ದಿನವಾಯಿತು ನೋಡು ಮಳೆ ಹೀಗೆ ಕಣ್ಣುಮುಚ್ಚಾಲೆ ಆಡುತ್ತಿರುವುದು? ನೆಲದ ಬಿಸಿ ಈಗ ನೀರಿಗೂ ಹಬ್ಬುತ್ತ ಇದೆ. ಇದು ಹೀಗೆಯೆ ಮುಂದುವರಿದರೆ ಈ ಕಾಯಲಿನಲ್ಲಿ ನಮಗೆ ಬದುಕುವುದೇ ಸಾಧ್ಯವಾಗದು’.

ನೀರಿನೊಳಗಡೆಯಿಂದ ಕಾಣುತ್ತಿರುವ ಹೊರಗಿನ ಆಕಾಶದ ಅಂದಚಂದ ನೋಡುತ್ತಾ ನೆಮ್ಮದಿಯಾದ ಪೂವಾಲಿ ಹೇಳಿದಳು:  ‘ಒಳ್ಳೆ ಮೋಡ ಇದೆ. ಇಂದು ಮಳೆ ಬಾರದೆ ಇರುವುದಿಲ್ಲ’.

ಅಳಗ ಮಾತ್ರ ನಿಟ್ಟುಸಿರು ಬಿಟ್ಟ. ಬೇಸರದಿಂದ ಗೊಣಗಿದ. ‘ಹತ್ತು-ಹದಿನೈದು ದಿನಗಳಾಯಿತಲ್ವಾ ಆಕಾಶ ಹೀಗೆ ಕಪ್ಪಗೆ ಮುಖ ಊದಿಸಿಕೊಂಡೆ ಇರಲು ಸುರುಮಾಡಿ? ಈ ಬಾನು ಒಂದು ಸಲ ಬಿರಿದುಬಿಟ್ಟು ಅಳಬಾರದೇನು?’

ಸುಂದರ ಕಣ್ಣುಗಳನ್ನು ತನಗಾಗುವಷ್ಟು ತೆರೆದು ಅದರೊಳಗೆ ಪ್ರೀತಿ ಸುರಿದು ಪೂವಾಲಿ ಕೇಳಿದಳು,  ‘ಈ ಮಳೆ ಆಕಾಶದ ಕಣ್ಣೀರು ಅಂತಿಯೇನು?’

‘ಹೂಂ, ಆಗಿರಲೂಬಹುದು, ಆದರೆ ಈಗ ಒಮ್ಮೆ ಅಳುವುದಕ್ಕೂ ಆಕಾಶಕ್ಕೆ ಆಗುತ್ತಿಲ್ಲವಲ್ಲಾ?’

ಬಹು ಆತಂಕದಲ್ಲಿ ಪೂವಾಲಿ ಕೇಳಿದಳು ‘ಮಳೆ ಬಾರದೆ ಇದ್ದರೆ ನಾವೇನು ಮಾಡುವುದೋ, ಅಳಗಾ? ’

ಎಷ್ಟು ಯೋಚನೆ ಮಾಡಿದರೂ ಯಾವ ದಾರಿಯೂ ಅಳಗನ ಮನಸ್ಸಿಗೆ ಹೊಳೆಯಲಿಲ್ಲ. ಆಸಕ್ತಿ ಕುಸಿದ ಮಾತುಗಳಲ್ಲಿ ಅವನು ಹೇಳಿದ ‘ನನಗೆ ಗೊತ್ತಿಲ್ಲ ಚಿನ್ನಾ, ಒಂದೆರಡು ಮಳೆ ಚೆನ್ನಾಗಿ ಸುರಿದರೆ ಮಾತ್ರ ಬೆಟ್ಟಗಳಲ್ಲಿ ನೀರಿನ ಕೆಳಹರಿವು ಹುಟ್ಟುತ್ತದೆ. ಆಗ ಅದನ್ನು ಹಿಡಿದುಕೊಂಡು ಮೇಲೆ ಹತ್ತಿ ಹೋದರೆ ಮಾತ್ರ ನಾವು ಆ ಶೂಲಾಪು ಕಾವಿಗೆ ತಲುಪಲು ಸಾಧ್ಯ.

ಈ ಮಹಾ ಬೇಸಿಗೆಯಲ್ಲಿ ನೀರಿನ ಹರಿವು ಇಲ್ಲದೇ ಬೆಟ್ಟಗಳ ಮೂಲಕ ಈಜುತ್ತ ನಾವು ಹೇಗೆ ಮೇಲಕ್ಕೆ ಹೋಗುವುದು?’

ಪೂವಾಲಿಯ ಕಣ್ಣುಗಳು ಅಗಲಿದುವು.

‘ಅಂದರೇ . . . ?’

ಅಳಗ ‘ಕೇಳಿದ ನಿನಗೆ ಈ ಉಪ್ಪು ನೀರಿನೊಳಗೆ ಮೊಟ್ಟೆಯಿಡಲು ಸಾಧ್ಯವಿದೆಯೇನು? ನಿನ್ನ ಯಾವ ಮೊಟ್ಟೆಯೂ ಉಪ್ಪು ನೀರಿನಲ್ಲಿ ಒಡೆದು ಮರಿಯಾಗಲಾರದು ಪೂವಾಲಿ. ಅವೆಲ್ಲಾ ಕೊಳೆತು ಹೋದಾವು, ಇಲ್ಲಾ ಕಾಯಲಿನಲ್ಲೇ ಇರುವ ನಮ್ಮ ಶತ್ರುಗಳು ಅವನ್ನು ನುಂಗಿ ಮುಗಿಸಿಯಾವು. ನಾವು ಹೇಗಾದರೂ ಸಿಹಿನೀರಿರುವ ಶೂಲಾಪುಕಾವನ್ನು ತಲುಪಲೇಬೇಕು.

ಎಷ್ಟೋ ತಲೆಮಾರಿನಿಂದ ಅಲ್ಲಿರುವ ಶುದ್ಧನೀರಿನಲ್ಲಿಯೇ ನಮ್ಮ ಕುಲದ ಮೀನುಗಳು ಮೊಟ್ಟೆ ಇಡುತ್ತ ಬಂದಿವೆ. ಇನ್ನೊಂದು ಕಡೆಗೆ ಹೋಗಿ ಮೊಟ್ಟೆ ಇಡುವುದು, ಮಕ್ಕಳ ಪೋಷಣೆ ಮಾಡುವುದು ನಮ್ಮ ನೆಡುಂಚೂರಿ ಜಾತಿಯ ಮೀನುಗಳಿಗೆ ಸಾಧ್ಯವಿಲ್ಲ’.

‘ಮಳೆಗಾಲದ ಜೋರು ಮಳೆ ಬರುವವರೆಗೂ ಕಾದು ಮತ್ತೆ ಶೂಲಾಪುಕಾವು ಸೇರುವುದು ನಮಗೆ ಸುಲಭವಲ್ಲವೇ?’

‘ಅಸಂಬದ್ಧ ಹೇಳಬೇಡ ಪೂವಾಲಿ. ಪ್ರತಿಯೊಂದಕ್ಕೂ ಅದರದ್ದೇ ಸಮಯವಿಲ್ಲವೇ? ಬೇಸಿಗೆಯ ಮಳೆ ಸುರುವಾಗುವ ಸಮಯದಲ್ಲೇ ನೆಡುಂಚೂರಿಗಳು ಬೆಟ್ಟ ಹತ್ತಿ ಕಾವು ತಲುಪುವುದು. ಅಲ್ಲಿ ಮೊಟ್ಟೆ ಇಟ್ಟು ಮಕ್ಕಳನ್ನು ಚೆನ್ನಾಗಿ ಬೆಳೆಸುವಾಗ ಕರ್ಕಾಟಕ ಮಾಸದ ಮಾರಿಮಳೆ ಸುರುವಾಗುತ್ತದೆ, ಬೆಟ್ಟಗಳಿಂದ ಹೊಳೆಗಳಿಗೆ ಒಳ್ಳೆಯ ನೀರಿನ ಧುಮುಕುವಿಕೆ ಇರುತ್ತದೆ. ಆಗ ಅಲ್ವೇ ತಾಯಂದಿರು ಪುಟ್ಟಮಕ್ಕಳನ್ನು ಕೂಡಿಕೊಂಡು ಶತ್ರುಗಳಿಂದ ತಪ್ಪಿಸಿಕೊಂಡು ಸುರಕ್ಷಿತವಾಗಿ ಹೊಳೆಗೆ ಬಂದು ಕಾಯಲನ್ನು ಮರಳಿ ಕೂಡುವುದು’.

‘ಓ, ನನಗೆ ಅದರ ನೆನಪಿರಲಿಲ್ಲ ಅಳಗಾ, ಬೇಸಿಗೆಯ ಮಳೆ ಬಂದರೆ ಮಾತ್ರವೇ ನಮಗೆ ಸುರಕ್ಷೆ ಅಲ್ವಾ?’

‘ಹೌದು, ಆಕಾಶದೇವನಲ್ಲಿಯೂ ಶೂಲಾಪುದೇವಿಯಲ್ಲಿಯೂ ನಾವೀಗ ಮನತುಂಬಿ ಪ್ರಾರ್ಥಿಸೋಣ. ಪೂವಾಲೀ, ನೀನು ತಾಯಾಗಲು ತುಡಿಯುತ್ತಿರುವ ಹೆಣ್ಣಲ್ಲವೇ? ನೀನು ಪ್ರಾರ್ಥನೆ ಮಾಡಿದರೆ ಯಾವ ದೇವರೂ ಒಪ್ಪುತ್ತಾನೆ, ಮಳೆಯು ಬಂದೇಬರುತ್ತದೆ. ನನಗೆ ಖಾತ್ರಿ ಇದೆ’.

‘ಅಳಗಾ, ನಾನು ಪ್ರಾರ್ಥಿಸುತ್ತೇನೆ. ನಮಗಾಗಿ ಮಾತ್ರವಲ್ಲ. ಭೂಮಿಯಲ್ಲಿರುವ ಎಲ್ಲಾ ಜೀವರಾಶಿಗಳಿಗೂ ಮಳೆ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ನೀನು ನನ್ನ ಜೊತೆಗೆ ನಿಲ್ಲು’.

ಅಳಗನು ಪೂವಾಲಿಗೆ ತಾಗಿ ನಿಂತು ಕಣ್ಣು ಮುಚ್ಚಿ ಪ್ರಾರ್ಥನೆಯಲ್ಲಿ ನಿರತನಾದ. ಬಹಳ ಸಮಯವು ಈ ಮೌನದಲ್ಲಿಯೆ ಕಳೆದು ಹೋಯಿತು. ಅವನು ಕಣ್ಣು ತೆರೆದಾಗ ಅವಳು ಧ್ಯಾನದಲ್ಲಿಯೇ ಮುಳುಗಿ ಇದ್ದಳು. ಅಳಗ ಕಾಯುತ್ತ ನಿಂತ.

ಪೂವಾಲಿ ಕಣ್ತೆರೆದು ಖುಷಿಯಲ್ಲಿ ಹೇಳಿದಳು ‘ಅಳಗಾ, ಆಕಾಶದೇವ ನನ್ನಲ್ಲಿ ಹೇಳಿದ, ಶೂಲಾಪುದೇವಿಯೂ ನನ್ನಲ್ಲಿ ಹೇಳಿದಳು, ಬೇಗನೆ ಮಳೆ ಬರುತ್ತದೆ’.

ಕಪ್ಪು ಸಮುದ್ರದಂತೆ ಇರುವ ಕತ್ತಲು ಕವಿದ ಆಕಾಶವನ್ನು ನೋಡಿಬಿಟ್ಟು ಅಳಗನೂ ಸಮಾಧಾನದ ಮಾತಾಡಿದ -‘ಬರುತ್ತದೆ. ಇಂದು ಮಳೆ ಬಂದೇ ಬರುತ್ತದೆ. ಇಂದು ಮಳೆ ಬಂದರೆ ನಾಳೆ ಬೆಳ್ಳಂಬೆಳಗ್ಗೆ ಬೆಳಕು ಮೂಡುವ ಮೊದಲೇ ನಾವು ಬೆಟ್ಟ ಹತ್ತುತ್ತೇವೆ. ಬೆಳಕು ಬೀಳಲು ತೊಡಗಿಬಿಟ್ಟರೆ ದಾರಿಯುದ್ದಕ್ಕೂ ಶತ್ರುಗಳಿರುತ್ತಾರೆ, ಕತ್ತಿ ಖಡ್ಗ ಭರ್ಜಿ ಹಿಡಿದು ಕಾಯುವ ಮನುಷ್ಯರೂ ಇರುತ್ತಾರೆ’.

‘ಈ ಮನುಷ್ಯನ ಬಗ್ಗೆಯೇ ಅಲ್ವಾ ನಾವು ತುಂಬಾ ಹೆದರಬೇಕಾದ್ದು, ಅಳಗಾ?’

‘ಬಹು ಹಿಂದೆ ನೆಡುಂಚೂರಿಗಳು ಶೂಲಾಪುಕಾವಿನ ಕಡೆಗೆ ಬೆಟ್ಟ ಹತ್ತುವಾಗ ತುಂಬಾ ಭಯಪಡುತ್ತಿದ್ದುದು- ಮಣ್ಣನ್ ಜಾತಿಯ ಮೊಸಳೆಗಳ ಬಗ್ಗೆ. ನನ್ನ ಅಜ್ಜಿ ಹೇಳುತ್ತಿದ್ದ ಕತೆಗಳಲ್ಲಿ ಭೀಕರವಾದ ಆ ಮೊಸಳೆಗಳು ತುಂಬ ಇರುತ್ತಿದ್ದುವು. ಸತ್ತ ಹಾಗೆ ಅಲುಗಾಡದೇ ಅವುಗಳು ದಾರಿಯಲ್ಲಿ ಮಲಗಿರುತ್ತವೆ. ಬಂಡೆಗಳಂತೆಯೇ ಕಾಣಿಸುತ್ತವೆ.

ಹತ್ತಿರ ಬಂದಾಗ ಪಾತಾಳಕ್ಕೆ ತೆರೆದಂತಿರುವ ಆವುಗಳ ಬಾಯಿ ಠಪಾ ಎಂದು ಅಗಲುತ್ತದೆ. ಮುಗಿಯಿತು ಕತೆ. ಒಂದೇ ಒಂದು ಸಲ ಬೊಬ್ಬೆ ಹಾಕಲಿಕ್ಕೂ, ಒಮ್ಮೆ ಅಲುಗಾಡಲಿಕ್ಕೂ ಸಮಯವಿರುವುದಿಲ್ಲ. ಮಣ್ಣನ್ ಮೊಸಳೆಗಳಿಗಿಂತಲೂ ಕುತಂತ್ರಿಗಳು ಆ ನೀರುನಾಯಿಗಳು’.

ಪೂವಾಲಿ ಬೆದರಿದಳು. ‘ಅಳಗಾ ನೀನು ನನ್ನನ್ನು ಹೆದರಿಸುತ್ತೀಯಾ?’

‘ಹೆದರಿಸಲು ಹೇಳುತ್ತಿಲ್ಲ ಪೂವಾಲಿ. ಯಾಕೆಂದರೆ ಮಣ್ಣನ್ ಮೊಸಳೆಗಳ ಮತ್ತು ನೀರುನಾಯಿಗಳ ವಂಶಗಳೇ ನಿರ್ನಾಮವಾಗಿ ವರ್ಷಗಳು ಕಳೆದುವು. ಮೀನುಗಳ ಮೇಲೆ ಶರವೇಗದಲ್ಲಿ ಬಂದು ಬೀಳುವ ಮಿಂಚುಳ್ಳಿಗಳಿಗೂ ಈಗ ನಾವು ಹೆದರುವ ಅಗತ್ಯವಿಲ್ಲ. ಆದರೆ ಮನುಷ್ಯ ಅಂದರೆ ಹೆದರಲೇಬೇಕು. ಹೋಗುವ ದಾರಿಯಲ್ಲಿ ಅಲ್ಲಲ್ಲಿ ಅವನು ಬಲೆ ಹರಡಿರುತ್ತಾನೆ.

ತಾಯಂದಿರು ಮೊಟ್ಟೆ ಇಡಲು ಹೋಗುತ್ತಿದ್ದಾರೋ, ಮಕ್ಕಳನ್ನು ಕರೆದುಕೊಂಡು ಹೋಗುತ್ತಾರೋ ಅಂತೆಲ್ಲಾ ಅವನು ನೋಡುವುದಿಲ್ಲ. ನಾವು ನೀರಿನ ಅಡ್ಡಕಟ್ಟಗಳನ್ನು ಜಿಗಿದು ಹೋಗುವ ಕಡೆಯಲ್ಲೆಲ್ಲ್ಲಾ ಅವನು ಬಲೆಗಳನ್ನು ಹರಡಿ ಇಟ್ಟಿರುತ್ತಾನೆ. ಬೆಟ್ಟಗಳ ತಗ್ಗಿನಲ್ಲೆಲ್ಲಾ ಕಬ್ಬಿಣದ ಕತ್ತಿಗಳು, ಭರ್ಜಿಗಳನ್ನು ಹಿಡಿದು ಆಕ್ರಮಣ ಮಾಡಲು ಕಾದು ಕುಳಿತಿರುತ್ತಾನೆ’

‘ಅಳಗಾ, ನೀನು ನನ್ನನ್ನು ಪುನ: ಹೆದರಿಸುತ್ತೀಯಾ?’

‘ಇಲ್ಲ, ಜಾಗ್ರತೆ ಮಾಡಬೇಕೆಂದು ಇದನ್ನೆಲ್ಲ ಹೇಳುತ್ತಾ ಇದ್ದೇನೆ ಪೂವಾಲಿ. ನಿನಗೆ ಯಾವಾಗಲೂ ಮೇಲೆ ಹಾರಿ ಬೀಳುವ ಅಭ್ಯಾಸ ಇದೆ. ಆದ್ದರಿಂದ ಹೇಳುತ್ತಾ ಇದ್ದೇನೆ. ಬೆಟ್ಟ ಹತ್ತುವಾಗ ನಾವು ನಮ್ಮ ಒಳಗಣ್ಣುಗಳ ತೆರೆದಿರಬೇಕು’

‘ಅದು ನಿಜವಾಗಿಯೂ ಅಗತ್ಯ’ ಎನ್ನುತ್ತ ಪೂವಾಲಿ ನುಡಿದಳು ‘ನಾವು ನಮ್ಮ ಮಕ್ಕಳ ಜೊತೆಯಲ್ಲಿ ಹಲವಾರು ವರ್ಷ ಈ ಕಾಯಲಿನಲ್ಲಿ ಬದುಕಿ ಬಾಳಬೇಕು’.

ನೆಡುಂಚೂರಿಗಳ ದೊಡ್ಡ ಒಂದು ಗುಂಪು ಸ್ವಲ್ಪ ದೂರದಲ್ಲಿ ಹಾದುಹೋದಾಗ ಅಳಗ ನೆನಪುಗಳ ಸುಂದರ ಸುಳಿಯಲ್ಲಿ ಬಿದ್ದ. ಕೆನ್ನೆಗಳು ಕೆಂಪಾಗುತ್ತಿದ್ದಂತೆ ಪ್ರೀತಿಯಿಂದ ಕೇಳಿದ- ‘ನೆನಪಿದೆಯಾ ಪೂವಾಲಿ ಇಂದಿನ ವಿಶೇಷ?’

ಅವಳು ಇಲ್ಲಾ ಅಂತ ತಲೆ ಅಲ್ಲಾಡಿಸಿದಳು.

‘ನಾವು ಭೇಟಿಯಾಗಿ ಇಂದಿಗೆ ಒಂದು ವರ್ಷ ತುಂಬಿತು’

ಪೂವಾಲಿಗೆ ಆಶ್ಚರ್ಯವಾಯಿತು. ಸಂತೋಷ ಉಕ್ಕುವ ಸ್ವರದಲ್ಲಿ ಅವಳು ಹೇಳಿದಳು ‘ಓ! ನನಗೆ ನಂಬಲು ಆಗುತ್ತಿಲ್ಲ, ಸಮಯ ಎಷ್ಟು ಬೇಗ ಹರಿದು ಹೋಗುತ್ತದೆ, ಅಲ್ಲಾ?’

ಅಳಗನನ್ನು ಮೊದಲಾಗಿ ನೋಡಿದ ಆ ಕ್ಷಣವು ಅವಳ ಮನಸ್ಸಲ್ಲಿ ಮೂಡಿ ಬಂತು. ಶತ್ರುಪಾಳಯಕ್ಕೆ ಧಾವಿಸಿ ನುಗ್ಗುತ್ತಿರುವ ಸೈನ್ಯದಂತೆ  ಎದುರಾಗಿ ಬಂದ ನೆಡುಂಚೂರಿ ಮೀನುಗಳ ಸಮೂಹದ ನೇತೃತ್ವ ವಹಿಸಿದ್ದವನು ಅಳಗ. ಅವನನ್ನು ನೋಡಿದಾಗ ಅವಳಿಗೆ ಕಣ್ಣು ತೆಗೆಯಲು ಸಾಧ್ಯವಾಗಿರಲಿಲ್ಲ. ಯಾರಾದರೂ ನೋಡಲೇಬೇಕು-ಎಂಬಂತೆ ಉಬ್ಬಿ ನಿಂತಿದ್ದ ಬೆನ್ನಿನ ಆಕಾರ, ತುಟಿಯ ಗಾಂಭೀರ್ಯ, ಕಣ್ಣುಗಳ ತೀಕ್ಷ್ಣತೆ, ಶರೀರದ ಬಳುಕು-ಎಲ್ಲ ಒಬ್ಬ ವೀರಯೋಧನನ್ನು ನೆನಪಿಸುತ್ತಿತ್ತು.

ಅಳಗ ಸಹ ಯೋಚಿಸುತ್ತಿದ್ದ. ಮೊದಲ ಸಮಾಗಮದ ಆ ನಿಮಿಷಗಳು! ಅವನು ಕುತೂಹಲ ಚಿಮ್ಮುವಂತೆ ಹೇಳಿದ-‘ಯಾವಾಗಲೂ ನೀನು ನಿನ್ನ ಗುಂಪಿನ ಕೊನೆಯಲ್ಲಿ ಇರುತ್ತಿದ್ದಿ. ಉದ್ದದ ನಿನ್ನ ಬಾಲ ಮಾತ್ರ ಹೊರಗೆ ಕಾಣಿಸುತ್ತಿತ್ತು. ಹೊರಗಡೆ ಮೈ ಕಾಣದಂತೆ ನೆಡುಂಚೂರಿಗಳು ನಿನ್ನನ್ನು ಬಳಸಿರುತ್ತಿದ್ದುವು. ನನಗೆ ಅನಿಸಿತ್ತು- ನೀನು ಆ ಮತ್ಸ್ಯ ಸಮೂಹದ ರಾಜಕುಮಾರಿ ಅಂತ. ನಿನ್ನಷ್ಟು ಚೆಂದದ ಬಾಲ ಯಾವ ನೆಡುಂಚೂರಿ ಹೆಣ್ಣಿನಲ್ಲೂ ನಾನು ನೋಡಲಿಲ್ಲ.

ಒಂದು ದಿನ ಗುಂಪಿನಿಂದ ಹೊರಗೆ ಬಿದ್ದ ನಿನ್ನ ಸೌಂದರ್ಯ ಕಂಡು ನಾನು ಮರುಳಾದೆ. ಮುಂದೆ ಸಾಗಿದ್ದ ಸ್ನೇಹಿತರೆಲ್ಲಾ ನನಗಾಗಿ ಕಾದು ನಿಂತಿದ್ದರು. ಆದರೆ ನಾನು ನಿನ್ನ ಹಿಂದೆಯೇ ಬಂದೆ. ನೀರಲ್ಲೆ ಸ್ವಲ್ಪ ದೂರ ಸಾಗಿದಾಗ ನೀನು ಸಹ ನಿನ್ನ ಸಂಬಂಧಿಕರ ಕಣ್ಣು ತಪ್ಪಿಸಿ ನನ್ನ ಬಳಿಗೆ ಬಂದೆ. ಯಾವ ಗುಂಪಿಗೂ ಸೇರದೇ ನಾವಿಬ್ಬರೂ ಬೇರೆಯಾಗಿ ನಿಂತಾಗ ನನಗೆ ಹೆದರಿಕೆ ಆಯಿತು. ಒಂದು ದೊಡ್ಡ ಯುದ್ಧವೇ ಅಂದು ಆಗಿ ಬಿಡುತ್ತಿತ್ತು ಪೂವಾಲಿ. ಆದರೆ ಯಾಕೋ...’

ಪ್ರೀತಿ ತುಂಬಿ ಬಂದು ಪೂವಾಲಿ ಅವನ ಕಿವಿರುಗಳಿಗೆ ಮುತ್ತಿಟ್ಟಳು.

‘ಅಳಗಾ, ನೀನು ನನ್ನ ಜೀವನದ ಅತೀ ದೊಡ್ಡ ಸೌಭಾಗ್ಯ, ನಮ್ಮ ಮರಣದ ನಂತರವೂ ನಾವು ಬದುಕಬೇಕು... ನಮ್ಮ ಮಕ್ಕಳ ಮೂಲಕ, ಅವರ ಮಕ್ಕಳ ಮೂಲಕ, ಅವರ ಮಕ್ಕಳ ಮೂಲಕ... ಹೀಗೆ ಕಾಲವನ್ನು ದಾಟಿ ನಮ್ಮ ಬದುಕು ಪ್ರೀತಿ ನಿಂತು ಬಿಡಬೇಕು’

ಆವೇಶದಲ್ಲಿ ಅಳಗ ಹೇಳಿದ ‘ಪೂವಾಲಿ, ಈ ಮಾತುಗಳು ನಿನ್ನಿಂದ ನಾನು ಇದುವರೆಗೆ ಕೇಳಿದ ಮಾತುಗಳಲ್ಲೇ ಬಹು ಪ್ರೀತಿ ತುಂಬಿದಂಥವು. ಈ ಮಾತುಗಳಿಗಾಗಿ ನಾನು ಬಾಳಿನುದ್ದಕ್ಕೂ ನಿನಗೆ ಋಣಿಯಾಗಿರುವೆ. ಬದುಕಿನ ಕಷ್ಟಗಳನ್ನು ಮಾತ್ರವಲ್ಲ ಸಾವನ್ನೂ ಬೆಚ್ಚಿಬೀಳಿಸುವಷ್ಟು ಶಕ್ತಿಯುಳ್ಳ ಪ್ರೀತಿಯನ್ನು ನೀನು ನನಗೆ ಅರ್ಥಮಾಡಿಸಿಬಿಟ್ಟೆ. ಕಾಲವೆಷ್ಟೋ ಕಳೆದ ಬಳಿಕ ನಮ್ಮ ನಂತರ ಬರುವ ತಲೆತಲಾಂತರದ ಮಕ್ಕಳು ಕವ್ವಾಯಿಕಾಯಲಿನಲ್ಲಿ ಈಜುತ್ತಾ ಆಡುತ್ತಾ ಈ ನಮ್ಮ ಪ್ರಣಯದ ವೀರಹಾಡುಗಳನ್ನು ಹಾಡುತ್ತ ಇರುತ್ತವೆ, ಪೂವಾಲೀ’.

ಆಗ ಆಕಾಶದೇವನೂ, ಶೂಲಾಪುದೇವಿಯೂ ಒಲಿದುಬಿಟ್ಟರೋ ಎಂಬಂತೆ ಮಳೆಯ ಮೊದಲ ಹನಿಗಳು ನೀರಿನ ತಲದ ಮೇಲೆ ಬಿದ್ದು ಸಿಡಿದುವು. ಅದನ್ನು ಕೇಳಿದ ಅಳಗನೂ ಪೂವಾಲಿಯೂ ಸಂತೋಷದಿಂದ ಮೈ ಮರೆತರು. ಇಬ್ಬರೂ ನೀರಮೇಲಕ್ಕೆ ಹಾರಿ ಕುಣಿದು ಮಳೆಹನಿಗಳ ಚೆಂದದ ತಂಪನ್ನು ದೇಹದ ತುಂಬ ಅನುಭವಿಸಿದರು.

ಆದರೆ ಅದಾದುದು ಕೇವಲ ಐದಾರು ನಿಮಿಷ. ಮಳೆಯು ನಿಂತುಬಿಟ್ಟಿತು. ಈರ್ವರು ಮೀನುಗಳೂ ದು:ಖ ತುಂಬಿಬಂದು ಮೌನವಾದರು. ಪೂವಾಲಿಯನ್ನು ಸಮಾಧಾನಿಸಲು ಅಳಗ ಮುಚ್ಚಿದ್ದ ತುಟಿ ಬಿಚ್ಚಿದ. ‘ಇದು ಬರೇ ಆರಂಭ ಪೂವಾಲಿ, ಇಂದು ರಾತ್ರಿ ಮಳೆ ಅಬ್ಬರಿಸುತ್ತದೆ’. ಅಳಗನನ್ನು ಸಮಾಧಾನಪಡಿಸುವುದಕ್ಕೆ ಅವಳೂ ಅಂದಳು ‘ಹೌದೌದು, ಇಂದು ರಾತ್ರಿ ಮಳೆ ಜಡಿಯುತ್ತದೆ’

ರಾತ್ರಿ ಎರಡು ಮೂರು ಸಲ ಮಳೆ ಬಂತು. ಭೂಮಿ ಒದ್ದೆಯಾಗಲು ಮಾತ್ರ ಸಾಕಾಗುವಂತಿದ್ದ ಮಳೆ. ಒಂದು ಒಳ್ಳೆಯ ಮಳೆಗಾಗಿ ಅಳಗ ಮತ್ತು ಪೂವಾಲಿ ರಾತ್ರಿಯಿಡೀ ಪ್ರಾರ್ಥಿಸುತ್ತ ಕಾಲ ಕಳೆದರು. ಮುಂಜಾನೆ ಆಕಾಶದಲ್ಲಿ ಬೆಳ್ಳಿ ಉದಯಿಸುವ ಹೊತ್ತಿಗೆ ಮಳೆಯು ಸ್ವಲ್ಪ ಜೋರಾಯಿತು.

ಅಳಗ ಹೇಳಿದ ‘ನಮಗೆ ಬೆಟ್ಟ ಹತ್ತಲು ಈ ಮಳೆ ಸಾಕಾಗುತ್ತದೆ ಪೂವಾಲಿ. ಇನ್ನೂ ಕಾದು ಕುಳಿತರೆ ಆಮೇಲೆ ಮಳೆ ಬಾರದೇ ಇದ್ದರೆ? ಬೆಳ್ಳಿಮೀನು ಉದಯಿಸುವ ಈ ಹೊತ್ತು ಒಳ್ಳೆಯ ಕಾಲ. ನಾವು ಈಗಲೆ ಹೊರಟುಬಿಡೋಣ’

ಬಹುವಿಶಾಲವಾದ ಕವ್ವಾಯಿಕಾಯಲಿನ ಮೂಲಕ ಅವರು ಮುಂದಕ್ಕೆ ನುಗ್ಗಿಸಾಗಿದರು. ಕಾಯಲಿನಿಂದ ಹೊಳೆಗೆ ಏರುವಾಗ ಮಳೆಯು ಕಡಿಮೆಯಾಗಿತ್ತು. ಹೊಳೆಯ ನೀರೂ ಇಳಿದಿತ್ತು. ಮಳೆಯಿಂದ ಬಂದ ಕೆಸರುನೀರು ರಕ್ತವನ್ನು ಕಾರಿದ ಹೆಣದಂತೆ ಅಲ್ಲಲ್ಲಿ ಹೊಳೆಯಲ್ಲಿ ನಿಂತಿತ್ತು.

ಹೊಳೆಯ ದಾರಿಯಲ್ಲೆ ಸಾಕಷ್ಟು ಹೊತ್ತು ಈಜಿದ ಮೀನುಗಳು ದೊಡ್ಡ ಒಂದು ಚೇರಮರದ ಬುಡ ತಲುಪಿದರು. ಆ ಜಾಗದ ನೀರಿನ ರುಚಿಯನ್ನು ತಿಳಿದು ಅಳಗ ಹೇಳಿದ.

‘ಇಲ್ಲಿಂದಲೇ ನಾವು ಗುಡ್ಡ ಹತ್ತಬೇಕಾಗಿರುವುದು. ಅಗೋ, ಅಲ್ಲಿ ಬಂಡೆಯಿಂದ ಕೆಳಗಡೆ ನೀರು ಜಿಗಿಯುವುದು ಕಾಣಿಸುತ್ತದಲ್ಲಾ? ಅಲ್ಲಿಂದ ಕೆಳಗಡೆ ಹಾರಿ ಮುಂದೆ ಏರು ಏರಿ ಶೂಲಾಪುಕಾವಿಗೆ ನಾವು ಹೋಗಬೇಕು’

ತುಂಬಾ ಎತ್ತರವಾದ ಬಂಡೆಕಲ್ಲು. ಆದರೂ ಅಳಗನನ್ನು ಹಿಂಬಾಲಿಸಿ ಸುಲಭವಾಗಿ ಅವಳು ಚಿಮ್ಮಿಕೊಂಡು ಅದರ ಮೇಲೆ ಹತ್ತಿದಳು. ಬಂಡೆಯ ಮೇಲಿನ ನೀರಿನ ಪಸೆಯಲ್ಲಿ ಜಾರಿ, ಕೆಲವೊಮ್ಮೆ ಏರಿ, ಗುಂಡಿಯ ನೀರಿನಲ್ಲಿ ಒಂದಷ್ಟು ಹೊತ್ತು ಮಲಗಿ ಅವರಿಬ್ಬರು ಮುಂದೆ ಸಾಗಿದರು.

ಅಳಗ ಹೇಳಿದ ‘ಪೂವಾಲಿ, ಇನ್ನು ಮುಂದಿನ ನಮ್ಮ ಪಯಣ ಕಠಿಣವಾದುದು. ಮನುಷ್ಯ ಬಲೆ ಹಿಡಿದು ಅಲ್ಲಲ್ಲಿ ಅಡಗಿ ಕುಳಿತಿರುತ್ತಾನೆ. ತುಂಬ ಜಾಗ್ರತೆಯಲ್ಲಿ ಮುಂದೆ ಹೋಗಬೇಕು’.

ಪೂವಾಲಿ ಒಪ್ಪಿದಳು.

ಅಳಗನಿಗೆ ತುಂಬ ಹೆದರಿಕೆ ಆಯಿತು. ಅವನು ಸ್ವಲ್ಪವೂ ತೋರಿಸಿಕೊಳ್ಳಲಿಲ್ಲ.

ನಡುನಡುವೆ ಒಂದೊಂದು ತುಂಟಾಟ ಆಡುತ್ತಾ, ಒಂದೊಂದು ತಮಾಷೆ ಮಾತುಗಳನ್ನಾಡುತ್ತಾ ಅವನು ಮುಂದೆ ನಡೆದ. ಕಗ್ಗಲ್ಲಿನ ಮೇಲೆ ಹರಡಿದ ನೀರಿನಲ್ಲಿ ತೇಲಿ ತೇಲಿ ಜಾಣ್ಮೆಯಲ್ಲಿ ಹೋಗುತ್ತಿರುವಾಗ ‘ಇನ್ನೊಂದು ಬಾರಿ ಮಳೆ ಬರಲಿ’ ಎಂದು ಅವನು ಪ್ರಾರ್ಥನೆ ಮಾಡಿದ.

ತಕ್ಷಣ ಒಂದು ಭೀಕರವಾದ ದೃಶ್ಯವನ್ನು ಕಂಡು ಅಳುವ ಸ್ವರದಲ್ಲಿ ಅವನು ಹೇಳಿದ ‘ಅಯ್ಯೋ, ಅಗೋ ಅಲ್ಲಿ ಕೆಲವು ಮನುಷ್ಯರು ನಮ್ಮ ಕಡೆ ನುಗ್ಗಿ ಬರುತ್ತಿದ್ದಾರೆ. ಅವರು ನಮ್ಮನ್ನು ನೋಡಿದ್ದಾರೆ ಅಂತ ಕಾಣುತ್ತದೆ. ಬಾ, ನಾವು ಎಲ್ಲಿಯಾದರೂ ಅಡಗೋಣ’

ಒಂದು ಪೊದೆಯೊಳಗೆ ಅಳಗ ಹಾರಿದ. ಹಿಂದೆಯೇ ಅವಳು ಬಂದಳು. ಒದ್ದೆಯಾದ ಎಲೆಗಳಡಿಯಲ್ಲಿ ಅವರಿಬ್ಬರು ಅಡಗಿ ಕುಳಿತರು. ಪೂವಾಲಿ ದೇವರಲ್ಲಿ ಬೇಡಿದಳು ‘ನನ್ನ ಶೂಲಾಪುದೇವಿಯೆ, ನಮ್ಮನ್ನು ಕಾಪಾಡು’.

ಎಲ್ಲೆಲ್ಲ ನೀರಿನ ಒದ್ದೆ ಇದೆಯೋ ಅಲ್ಲೆಲ್ಲ ಮನುಷ್ಯರು ಹುಡುಕುತ್ತ ಇದ್ದಾರೆ. ಅವರಲ್ಲಿ ಒಬ್ಬನ ಕೈಯಲ್ಲಿರುವ ಸಪೂರ ಕೋಲಿನಲ್ಲಿ ಚುಚ್ಚಿ ಸಿಕ್ಕಿಸಿದ ಹತ್ತಾರು ನೆಡುಂಚೂರಿಗಳನ್ನು ಅಳಗ ನಡುನಡುಗುತ್ತಾ ಕಂಡ. ಎಲ್ಲರ ಕೈಯಲ್ಲಿ ಹೊಳೆಯುವ ಕತ್ತಿಗಳು, ಭರ್ಜಿಗಳು.

ಇವರಿದ್ದ ಪೊದೆಯ ಕಡೆಗೆ ಅವರಲ್ಲಿ ಒಬ್ಬನ ಕಣ್ಣುಗಳು ನೂರಿಕೊಂಡು ಬಂದವು. ಹೊಳೆಯುವ ಆ ಎರಡು ಕಣ್ಣುಗಳನ್ನು ಅಳಗ ನೋಡಿದ. ಆ ಮನುಷ್ಯನ  ಗರ್ಜನೆಯು ತಕ್ಷಣ ಕೇಳಿ ಬಂತು.

‘ಇಗೋ, ಈ ಎರಡೂ ಕಳ್ಳರು ಇಲ್ಲಿ ಇದ್ದಾರೆ’.

ಖಡ್ಗಗಳೂ, ಭರ್ಜಿಗಳು ತಮ್ಮ ಕಡೆಗೆ ತೂರುವುದನ್ನು ಕಂಡು ಸರ್ವಶಕ್ತಿಯಿಂದ ಅಳಗ ಮತ್ತು ಪೂವಾಲಿ ದೂರ ಹಾರಿದರು. ಈಗ ಅವರು ಹೋಗಿ ಬಿದ್ದುದು ಬಂಡೆಯ ಮಧ್ಯೆ ಇರುವ ಒಂದು ಬಿರುಕಿನಲ್ಲಿ. ಪುಣ್ಯವಶಾತ್ ಅಲ್ಲಿ ಮಳೆ ನೀರು ಕೊಂಚ ಉಳಿದಿತ್ತು. ಅದು ಎರಡು ಮೀನುಗಳು ಕಷ್ಟದಲ್ಲಿ ಇರಬಹುದಾದ ಚಿಕ್ಕ ಜಾಗ.

ಮತ್ತೆ ಮನುಷ್ಯರ ಶಬ್ದಗಳು ಬಿರುಕಿನ ಹತ್ತಿರ ಬರುವುದನ್ನು ತಿಳಿದ ಮೀನುಗಳು ಭಯಭೀತರಾದರು. ಅವರಿಗೆ ಹಿಂದೆ ಮುಂದೆ ಹೋಗಲು ಜಾಗವಿರಲಿಲ್ಲ. ಹೊಳೆಯುವ ಎರಡು ಕಣ್ಣುಗಳು ಬಂಡೆಯ ಬಿರುಕಿನ ನಡುವೆ ಕಂಡು ಬಂದಾಗ ಅಳಗ ಅತ್ತುಬಿಟ್ಟ.

‘ಪೂವಾಲಿ, ಈಗ ನಮ್ಮ ಬದುಕು ಮುಗಿಯುತ್ತಿದೆ’.

‘ಇಲ್ಲ ಅಳಗಾ, ಶೂಲಾಪುದೇವಿ ನಮ್ಮ ಯಾವತ್ತೂ ಬಿಟ್ಟುಬಿಡುವುದಿಲ್ಲ’

‘ನೀನು ಸ್ವಲ್ಪ ಒಳಗಡೆ ಸೇರಿಕೋ, ಅವರು ನನ್ನನ್ನು ಹಿಡಿದರೂ ಪರವಾಗಿಲ್ಲ. ನೀನು ಹೆಣ್ಣು-ಬರುವ ತಲೆಮಾರಿಗೆ ಜೀವ ನೀಡುವುದಕ್ಕೆ ನೀನು ಅತ್ಯಗತ್ಯ’

‘ಇಲ್ಲ ಅಳಗಾ, ನೀನಿಲ್ಲದೆ ನಾನು ಈ ಲೋಕದಲ್ಲಿ ಬದುಕುವುದಿಲ್ಲ’

‘ಅಸಂಬದ್ಧ ನುಡಿಯುವ ಹೊತ್ತಲ್ಲ ಇದು’

‘ನನಗೆ ಒಳಗೆ ಸೇರಿ ನಿಲ್ಲಲು ಜಾಗ ಇಲ್ಲ ಅಳಗಾ’

ಒಮ್ಮೆಲೇ ಕಬ್ಬಿಣದ ಭರ್ಜಿ ಭಯಂಕರ ಶಬ್ದದೊಂದಿಗೆ ಅಳಗನ ದೇಹ ಸ್ಪರ್ಶ ಮಾಡಿತೋ ಎಂಬಂತೆ ಬಂಡೆಕಲ್ಲಿಗೆ ತಾಗಿ ಬಿತ್ತು.

ಎಲ್ಲವೂ ಮುಗಿಯಿತು ಎಂದು ಅನಿಸಿ ಕಣ್ಣು ಮುಚ್ಚಿದಾಗ ಅಳಗನ ಕಿವಿಯಲ್ಲಿ ಪೂವಾಲಿಯ ಸ್ವರ ಕೇಳಿಸಿತು ‘ಅಳಗಾ, ಒಳಗಡೆ ಬಾ. ಇಗೋ ಇಲ್ಲಿ ಒಳಗೆ ಹೋಗಲು ಒಂದು ದಾರಿ’.

ಬಂಡೆ ಸೀಳಿ ಉಂಟಾದ ಬಿರುಕಿನ ಮೂಲಕ ಮೀನುಗಳು ಒಳಗಡೆ ಹೊಕ್ಕುಬಿಟ್ಟರು. ಅದು ಹತ್ತಿಪ್ಪತ್ತು ಮೀನುಗಳಿಗೆ ಆರಾಮದಲ್ಲಿ ಮಲಗಲು ಸಾಕಾಗುವ ಸ್ಥಳ.

ಹೊರಗಡೆ ಕ್ರೂರವಾದ ಶಬ್ದಗಳು ಕೇಳುತ್ತಿದ್ದುವು.

‘ಛೇ, ಎರಡೂ ತಪ್ಪಿಸಿಬಿಟ್ಟವು’

ಪೂವಾಲಿಯನ್ನು ತಾಗಿ ನಿಂತು ಅಳಗ ಸಮಾಧಾನಪಡಿಸಿದ.

‘ನೀನು ಹೆದರಿದೆಯೇನು?’

ಮೈಯೆಲ್ಲಾ ನಡುಗುತ್ತಿದ್ದ ಪೂವಾಲಿಗೆ ಏನು ಹೇಳಲೂ ಸಾಧ್ಯವಾಗಲಿಲ್ಲ.

ಆಗ ಅಪರಿಚಿತವಾದ, ಆದರೆ ಕರುಣೆಯಿಂದ ಆರ್ದ್ರವಾದ ಒಂದು ಧ್ವನಿ ಕೇಳಿಸಿತು.

‘ಓ ಜೋಡಿ ಮತ್ಸ್ಯಗಳೇ, ನೀವು ಇಲ್ಲಿಗೆ ಯಾಕೆ ಬಂದಿರಿ?’

ಸ್ವರ ಬಂದ ಕಡೆಗೆ ನೋಡಿದಾಗ ಅವರು ಕಂಡದ್ದು ಒಂದು ಅಸಾಧಾರಣ ಗಾತ್ರದ ಮುದಿ ಕಪ್ಪೆ. ಅದರ ಕಡುಹಸಿರು ಬಣ್ಣದ ದೇಹದಲ್ಲಿ ಸಾವಿರಾರು ವರ್ಷಗಳ ಪ್ರಾಯವು ಕುಳಿತುಕೊಂಡಿತ್ತು.

‘ಇದು ನನ್ನ ಧ್ಯಾನಸ್ಥಳ. ಇಲ್ಲಿಗೆ ಯಾರೂ ಬರುವುದಿಲ್ಲ’

ಅಳಗ ವಿನಯದಿಂದ ಹೇಳಿದ ‘ಕ್ಷಮಿಸಿ ಒಡೆಯಾ, ಹೊರಗಡೆ ಮನುಷ್ಯರ ಆಕ್ರಮಣ ಆದಾಗ ರಕ್ಷಣೆಗಾಗಿ ನಾವು ಬಂದುಬಿಟ್ಟೆವು. ಈ ಕೂಡಲೇ ನಾವು ಇಲ್ಲಿಂದ ಹೋಗುತ್ತೇವೆ’.

‘ಎಲ್ಲಿಗೆ ನಿಮ್ಮ ಪ್ರಯಾಣ?’

‘ಶೂಲಾಪುಕಾವಿಗೆ’

‘ಓ, ಹಾಗಾದರೆ ಈಗ ಹೊರಗೆ ಬೇಸಿಗೆ ಮಳೆ ಶುರುವಾಗಿರಬಹುದು ಅಲ್ವಾ? ಇದು ಮೀನುಗಳು ಮೊಟ್ಟೆ ಇಡುವ ಕಾಲ. ನೀವು ದಾರಿ ತಪ್ಪದೆ ಸರಿಯಾಗಿಯೇ ಬಂದಿದ್ದೀರ.  ಆದರೆ ದುಷ್ಟ ಮಾನವ ಗುಂಪು ಇನ್ನೂ ಹೊರಗಿದೆ. ಸ್ವಲ್ಪ ಕಾಲ ನೀವಿಲ್ಲಿ ವಿಶ್ರಮಿಸಿ, ಅವರು ಅಲ್ಲಿಂದ ಒಮ್ಮೆ ಹೋಗಿಬಿಡಲಿ’

ಪೂವಾಲಿಗೆ ಸಂತೋಷವಾಯಿತು, ಹೇಳಿದಳು- ‘ದೇವರು ನಿಮ್ಮನ್ನು ಕಾಪಾಡಲಿ’

ಕಪ್ಪೆಯ ತುಟಿಯಲ್ಲಿ ವಿಚಿತ್ರವಾದ ಮಂದಹಾಸ ಅರಳಿತು.

ಸ್ವಲ್ಪ ಹೊತ್ತಿನ ನಂತರ ಕಪ್ಪೆ ಹೇಳಿತು- ‘ಆ ದೇವರು ಒಂದೊಮ್ಮೆ ನನ್ನನ್ನು ಅನುಗ್ರಹಿಸಿದ್ದರು, ಮಗೂ. ಅದು ಆದುದು ಎಷ್ಟೋ ಕಾಲದ ಹಿಂದೆ. ಆದರೆ ಆ ವರವೇ ಇಂದೆನಗೆ ಶಾಪವಾಗಿದೆ’

ಅಳಗ ಆಶ್ಚರ್ಯಪಟ್ಟು ಕೇಳಿದ ‘ಆದುದಾದರೂ ಏನು?’

‘ಶೂಲಾಪುಕಾವಿನಲ್ಲೇ ನಾನು ಜನ್ಮ ತಾಳಿದ್ದು. ಆಗ ಶೂಲಾಪುಕಾವಿಗೆ ಮಾನವನ ಪ್ರವೇಶ ಇರಲಿಲ್ಲ.  ವರ್ಷದಲ್ಲಿ ಒಮ್ಮೆ ಒಂದು ವಿಶೇಷ ರಾತ್ರಿ ಮನುಷ್ಯನೊಬ್ಬ ಸ್ನಾನ ಮಾಡಿ ಶುದ್ಧದಲ್ಲಿ ಬಂದು ನಿಶ್ಶಬ್ದವಾಗಿ ದೇವಿಗೆ ಪೂಜೆ ಸಲ್ಲಿಸುತ್ತಾನೆ. ಒಟ್ಟಿಗೆ ಬಂದವರೆಲ್ಲ ಕಾವಿನೊಳಗೆ ಬಾರದೆ ಹೊರಗೆಯೇ ನಿಲ್ಲುತ್ತಾರೆ. ಮನುಷ್ಯರನ್ನು ಬಿಟ್ಟು ಬೇರೆ ಜೀವಿಗಳಿಗೆಲ್ಲಾ ದೇವಿ ಆಗ ಸಾಕಷ್ಟು ಸ್ವಾತಂತ್ರ್ಯ ಕೊಟ್ಟಿದ್ದಳು. ಕಾವಿನ ಸುತ್ತಮುತ್ತ ನಡೆದಾಡುವ ಜನರು ಅಂದು ಮೌನ ತಾಳುತ್ತಿದ್ದರು. ಆದರೆ ಇಂದು?’

ಜೋಡಿಮೀನುಗಳು ಕುತೂಹಲದಿಂದ ಕೇಳುತ್ತಿದ್ದರು.

‘ಇಂದು ಕಲ್ಲು ಕತ್ತರಿಸುವ, ಬಂಡೆ ತಿನ್ನುವ ದೊಡ್ಡ ಯಂತ್ರಗಳು ಕಾವಿನ ಸುತ್ತ ಇವೆ. ಹಗಲೂ ಇರುಳೂ ಯಂತ್ರಗಳ ಘರ್ಜನೆ. ಕಾವಿನ ಒಂದು ಬದಿಯಲ್ಲಿ ರಬ್ಬರ್ ಕಾಡು. ಎಕರೆಗಟ್ಟಲೆ ಜಾಗದಲ್ಲಿದ್ದ ಕಾವನ್ನು ಎಲ್ಲ ಆಕ್ರಮಿಸಿ ಆಕ್ರಮಿಸಿ ಈಗ ಇದು ಒಂದು ಸಣ್ಣ ದ್ವೀಪದಂತಾಗಿದೆ. ಮಾನವೇ ಇಲ್ಲದ ಆ ಮನುಷ್ಯನ ಚಟುವಟಿಕೆಗಳು ಕಾವಿನೊಳಗಿನ ಜೀವರಾಶಿಗಳಿಗೆ ಮರಣವನ್ನೆ ವಿಧಿಸುತ್ತಿವೆ’.

ಭಾವಾವೇಶಗೊಳ್ಳುತ್ತಿದ್ದ ಅಳಗ ಹೇಳಿದ. ‘ನೀವು ದೈವಾನುಗ್ರಹದ ಸಂಗತಿಯನ್ನು ಹೇಳಲಿಲ್ಲ’

‘ಓ ಅದುವೋ’ ಪರಮಾನಂದವು ಕರಗಿರುವಂಥ ನಗುವಿನಲ್ಲಿ ಕಪ್ಪೆ ಮುಂದುವರಿಸಿತು-

‘ಶೂಲಾಪು ಕಾವಿನೊಳಗೆ ದೇವಿಯ ಪುಣ್ಯಗರ್ಭಪಾತ್ರದಂತೆ ಇರುವ ಕೊಳದ ಬದಿಯ ಒದ್ದೆ ನೆಲದಲ್ಲಿ ನಾನಂದು ಆರಾಮವಾಗಿ ಮಲಗಿಕೊಂಡಿದ್ದೆ. ನನಗೆ ಚೆನ್ನಾಗಿ ನೆನಪಿದೆ, ಬೇಸಿಗೆಯು ಮುಗಿದು ಬಿಟ್ಟಿತ್ತು. ಸಾವಿರಾರು ನೆಡುಂಚೂರಿಗಳು ಭಯವೆಂಬುದೇ ಇಲ್ಲದೆ ತಮ್ಮ ಮಕ್ಕಳೊಂದಿಗೆ ನೀರಿನಲ್ಲಿ ಈಜುತ್ತಿದ್ದರು. ಬೇಕಾದಷ್ಟು ಕಾಡುಜಿಂಕೆಗಳೂ, ಹುಲಿಗಳೂ ಕಾವಿನೊಳಗೆ ವಾಸುತ್ತಿದ್ದ ಕಾಲ ಅದಾಗಿತ್ತು. ಆ ಸಮಯದಲ್ಲೇ ಧ್ಯಾನಕ್ಕಾಗಿ ಬುದ್ಧದೇವನು ಈ ಕಾಡಿಗೆ ಬಂದದ್ದು’

ಅಳಗನೂ ಪೂವಾಲಿಯೂ ಒಟ್ಟಿಗೆ ಆಶ್ಚರ್ಯದಿಂದ ಕೇಳಿದರು ‘ಬುದ್ಧದೇವನೇ?’

‘ಹೌದು ಸಾಕ್ಷಾತ್ ಬುದ್ಧದೇವ! ಜೋಡಿಮೀನುಗಳೇ, ನಾನು ನಿಮಗೆ ಹೇಳುತ್ತಾ ಇರುವುದು ನೂರಾರು ವರ್ಷಗಳ ಹಿಂದೆ ನಡೆದ ಕತೆ. ಒಣಗಿದ ಎಲೆಗಳ ಶಬ್ದ ಕೇಳಿ ಕಣ್ಣು ತೆರೆದು ನೋಡಿದಾಗ  ನನಗೆ ಅನಿಸಿತ್ತು- ಉದಯಿಸುವ ಸೂರ್ಯನೇ ಈ ಕಾವಿಗೆ ಬರುತ್ತಾ ಇದ್ದಾನೆ ಅಂತ. ಹೋ!, ಮುಖದಲ್ಲಿ ಎಂತಹ ತೇಜಸ್ಸು.

ಕರುಣೆಯ ಕಡಲಿನಂತೆ ಶೋಭಿಸುತ್ತಾ ಹೊಳೆಯುತ್ತಿರುವ ದೊಡ್ಡ ಎರಡು ಕಣ್ಣುಗಳು, ಆಕಾಶದಂತೆ  ವಿಶಾಲವಾದ ಹಣೆ , ನೀರು ಕುಡಿಯುವುದಕ್ಕೆ ಕೊಳದ ಕಡೆಗೆ ಅವನು ಬರುತ್ತಿದ್ದಾನೆ. ನೆಲಕ್ಕೆ ನೋವು ಆಗದಂತೆ, ಒಂದು ಇರುವೆಯನ್ನು ಕೂಡ ನೋಯಿಸದಂತೆ ಜಾಗ್ರತೆ ವಹಿಸುತ್ತಿತ್ತು-ಅವನ ನಡಿಗೆ. ಅತ್ಯಾಶ್ಚರ್ಯಗೊಂಡ ನನಗೆ ದಾರಿ ಬಿಡುವುದಕ್ಕೇ ತಿಳಿಯಲಿಲ್ಲ.

ಬುದ್ದನ ಬಲ ಪಾದವು ಎಲೆಯಡಿಯ ಒದ್ದೆ ನೆಲದಲ್ಲಿ ಮಲಗಿದ್ದ ನನ್ನ ದೇಹದ ಮೇಲೆಯೇ ಬಿತ್ತು. ಆದರೆ ನನಗೆ ನೋವಾಗಲಿಲ್ಲ. ದಾರಿ ಕೊಡುವ ಗಡಿಬಿಡಿಯಲ್ಲಿ ನಾನು ಒಮ್ಮೆ ಹೊರಳಾಡಿದೆ.

ನನಗೆ ನೋವಾಯಿತು ಎಂದು ಭಾವಿಸಿ ಬುದ್ದ ನನ್ನನ್ನು ಕೈಯಲ್ಲಿ ಪ್ರೀತಿಯಿಂದ ಎತ್ತಿದ. ನನ್ನ ಭುಜವನ್ನು ಮೆಲ್ಲನೆ ನೇವರಿಸಿದ. ಬುದ್ದನ ಕಣ್ಣುಗಳಲ್ಲಿ ನೀರಿನ ಒದ್ದೆ ಹಬ್ಬಿತ್ತು. ಹುಬ್ಬಿನ ಮೇಲೆ ನೀರಿನ ತೇವವು ಬಲೆಯನ್ನು ಹೆಣೆದಿತ್ತು. ಕರುಣೆ ತುಂಬಿದ ಸ್ವರದಲ್ಲಿ ಅವನು ನನ್ನ ಮಾತಾನಾಡಿಸಿದ. ‘ಮಗೂ ನಾನು ನಿನ್ನನ್ನು ನೋಯಿಸಿಬಿಟ್ಟೆ ಅಲ್ಲಾ? ನನ್ನ ಕ್ಷಮಿಸು’.

ಸಂತೋಷದಿಂದ ನನಗೆ ಮಾತಾಡಲೂ ಸಾಧ್ಯವಾಗಲಿಲ್ಲ. ಎಂಥದೋ ಒಂದು ರೀತಿಯಲ್ಲಿ ಹೇಗೋ ನಾನು ಹೇಳಿಬಿಟ್ಟೆ- ‘ನೋವು ಏನೆಂದೇ ನನಗೆ ಅರಿವಾಗಲಿಲ್ಲ ಪ್ರಭೋ. ತಮ್ಮ ಪಾದ ಸ್ಪರ್ಶದಿಂದ ನಾನು ಧನ್ಯನಾದೆ. ತಾವು ನನ್ನನ್ನು ಅನುಗ್ರಹಿಸಿದಿರಿ. ಈ ಕಾವಿನೊಳಗೆ ವಾಸಿಸುವ ಎಲ್ಲಾ ಜೀವಿಗಳನ್ನು ತಮ್ಮ ಪಾದ ಸ್ಪರ್ಶದಿಂದ  ತಾವು ಅನುಗ್ರಹಿಸಿದಿರಿ’.

ಅಳಗ ಹೃದಯದ ಆಳದಿಂದ ಮಾತಾಡಿದ  ‘ಹಾ, ಎಷ್ಟು ಸುಂದರವಾಗಿದೆ. ಈ ಕತೆ ಕೇಳುವ ಭಾಗ್ಯ ಲಭಿಸಿದ ನಾವು ಧನ್ಯರಾದೆವು. ಅದಿರಲಿ, ಅವನ ಅನುಗ್ರಹವನ್ನು ಶಿಕ್ಷೆಯೆಂದು ನೀವು ಯಾಕೆ ಕರೆಯುತ್ತೀರಿ?’.

‘ಬುದ್ಧನ ದಿವ್ಯಸ್ಪರ್ಶ ಅನುಭವಿಸಿದ ನಂತರ ಮರಣವು ನನ್ನ ಬಳಿ ಬರಲೇ ಇಲ್ಲ. ಜರೆ ನರೆಗಳು ನನ್ನಿಂದ ದೂರ ಸರಿದುವು. ನಾನು ಹಾಗೆಯೇ ಚಿರಂಜೀವಿಯಾಗಿ ಉಳಿದೆ. ಇದಕ್ಕಾಗಿ ನಾನು ತುಂಬ ಹೆಮ್ಮೆ ಪಟ್ಟುಕೊಂಡಿದ್ದೆ. ಆದರೆ ಕೆಲವು ವರ್ಷಗಳಿಂದ ನಾನು ಮರಣವನ್ನೆ ಕಾಯುತ್ತಿದ್ದೇನೆ. ಹಾಗಾಗಿ...’

ಪೂವಾಲಿಗೆ ಆಶ್ಚರ್ಯವಾಯಿತು.

‘ಒಡೆಯಾ, ಯಾಕೆ ಈ ಸಾಯುವ ಬಯಕೆ?’

‘ಭೂಮಿಯಲ್ಲಿ ಮಾನವನ ವಿವೇಕ ಇಲ್ಲದ ಕ್ರೂರ ಕೆಲಸಗಳಿಂದ ನಾನು ಬೆಚ್ಚಿಬಿದ್ದಿದ್ದೇನೆ. ಶೂಲಾಪು ಕಾವಿನೊಳಗೆ ಇಂದು ಉಳಿದಿರುವ ಸಣ್ಣ ಕೊಳದಲ್ಲಿ ಮನುಷ್ಯ ಮಾಡಿಟ್ಟ ವಿಷವೇ ತುಂಬಿದೆ. ನಾನು ಹಾಗಾಗಿ ಬಂಡೆಯ ಮಧ್ಯದ ಈ ಸಣ್ಣ ಇಕ್ಕಟ್ಟಿಗೆ ಬಂದು ಬಾಳುತ್ತಿದ್ದೇನೆ. ಈಗ ಈ ಬಂಡೆಯನ್ನು ಕೂಡ ಯಂತ್ರಗಳು ತಿನ್ನತೊಡಗಿವೆ. ನನಗೆ ಅನಿಸುತ್ತದೆ. ಮಕ್ಕಳೇ, ಮನುಷ್ಯ ಎಂಬಾತ ಪ್ರಕೃತಿಯಲ್ಲಿ ಸಂಭವಿಸಿಬಿಟ್ಟ ಒಂದು ದೊಡ್ಡ ತಪ್ಪು’.

ಕಪ್ಪೆಯ ಮಾತುಗಳನ್ನು ಕೇಳಿ ಆಶ್ವರ್ಯಗೊಂಡ ಮೀನುಗಳು ಮಾತಾಡದೆ ಪರಸ್ಪರ ಮುಖಮುಖ ನೋಡಿಕೊಂಡವು. ದೀರ್ಘವಾದ ಒಂದು ನೋವಿನ ಮೌನವನ್ನು ದಾಟಿಬಂದ ಕಪ್ಪೆಯು ಸಿಟ್ಟಿನಲ್ಲಿ ಕೇಳಿತು-

‘ಮನುಷ್ಯನೆಂಬವ ಮಾತ್ರ ಬದುಕಿ ಉಳಿಯುವ ಈ ತಂತ್ರಗಳನ್ನಲ್ಲವೇ ಅವನು ಅಭಿವೃದ್ಧಿ, ಅಭಿವೃದ್ದಿ ಅಂತ ವಿಚಿತ್ರ ಶಬ್ದವೊಂದರಲ್ಲಿ ಕರೆಯುವುದು?’

ಮಾತನ್ನು ತಡೆದು ಅಳಗ ಕೇಳಿದ ‘ಅಭಿವೃದ್ದಿ? ಹಾಗೆಂದರೆ ಏನದು, ನಮಗೆ ಇದಾವುದೂ ಗೊತ್ತಾಗುವುದಿಲ್ಲ ಪ್ರಭು’

‘ಜೋಡಿ ಮೀನುಗಳೇ, ನಿಮಗೆ ಮಾತ್ರವಲ್ಲ ಯಾರಿಗೂ ಏನೂ ಗೊತ್ತಾಗುವುದಿಲ್ಲ. ಬನ್ನಿ, ನಾವೆಲ್ಲ ಶೂಲಾಪುಕಾವಿಗೆ ತೆರಳೋಣ. ಆ ವೈರಿಗಳು ದೂರ ಹೋದಂತೆ ಕಾಣುತ್ತದೆ’.

ಭೂಮಿಯ ರಕ್ತಸ್ರಾವವೋ ಎಂಬ ಹಾಗೆ ಹರಿಯುವ ಆ ಸಣ್ಣ ಪ್ರವಾಹದಲ್ಲಿ ಕಪ್ಪೆಯ ಹಿಂದೆ ಮೀನುಗಳು ಈಜಿದರು. ಅವರು ಶೂಲಾಪುಕಾವು ತಲುಪಿದರು. ಅಲ್ಲಿ ಕಣ್ಮುಂದೆ ಕಾಣುತ್ತಿರುವ ದೃಶ್ಯಗಳನ್ನು ನಂಬಲಾಗದೆ ಅಚ್ಚರಿಯಲ್ಲಿ ಕಪ್ಪೆ ನೋಡಿತು.

ಒಂದೊಮ್ಮೆ ಕಾವು ಪೂರ್ತಿ ತುಂಬಿಕೊಂಡಿದ್ದ ಕಾಡಿನ ನೆನಪನ್ನಷ್ಟೇ ತರುವ ಹಾಗೆ ಬರೇ ನಾಲ್ಕೈದು ಮರಗಳು ಅಲ್ಲಿದ್ದುವು. ನೋಡಬಾರದ ಏನನ್ನೋ ನೋಡಿದ ಭಯವೊಂದರಲ್ಲಿ ನಡುಗುವಂತೆ ಇದ್ದ ಅವುಗಳನ್ನು ಆತುಕೊಂಡು ಅನೇಕ ಬಳ್ಳಿಗಳು ತಬ್ಬಿಕೊಂಡಿದ್ದವು. ಅಲ್ಲೆ ಬಳಿಯಲ್ಲಿ ಕೊಳವು ಇದ್ದಂಥ ಸ್ಥಳವನ್ನು ಸಮತಟ್ಟು ಮಾಡಿ ಅಮೃತಶಿಲೆಯ ಒಂದು ಸುಂದರ ಸೌಧ ಮಾಡಲಾಗಿತ್ತು. ‘ಶೂಲಾಪು ಭಗವತಿ ಕ್ಷೇತ್ರ’ ಅಂತ ಅದರ ಬಾಗಿಲಿನ ಮೇಲೆ ಕೆತ್ತಲಾಗಿತ್ತು.

ಅರ್ಧ ಉರಿದು ನಿಂತಿದ್ದ ಅಲ್ಲಿಯ ಬಿಲ್ವಮರವೊಂದರ ಮೇಲೆ ಕುಳಿತು, ಅಳುತ್ತಿದೆಯೇನೋ ಎಂಬ ಹಾಗೆ ಹಾಡುತ್ತಿದ್ದ ಹಸಿರು ಗಿಳಿಯೊಂದರಲ್ಲಿ ಕಪ್ಪೆಯು ಕೇಳಿತು- ‘ಗಿಳಿಮಗಳೇ, ಏನಾಗಿ ಹೋಯಿತು ಇಲ್ಲಿ?’

ಅಳುವಿನ ಹಾಡು ನಿಲ್ಲಿಸಿ, ನಡುಗು ಸ್ವರದಲ್ಲಿ ಗಿಳಿಮಗಳು ಹೇಳಿದಳು ‘ಪ್ರಭೋ, ಕಳೆದ ವರ್ಷ ಮೊಟ್ಟೆ ಇಡಲು ಬಂದ ಮೀನುಗಳೆಲ್ಲಾ ಸತ್ತುಬಿಟ್ಟು ಮೇಲಕ್ಕೆ ತೇಲಿಬಂದಾಗ ತುಂಬಾ ಮನುಷ್ಯರು ಇಲ್ಲಿಗೆ ಬಂದರು. ‘ಇದು ಶೂಲಾಪುದೇವಿಯ ಕೋಪದಿಂದಲೇ ಆಯಿತು’-ಅಂತ ಹೇಳುತ್ತ ಕೊಳವನ್ನು ಮುಚ್ಚಿದರು. ದೇವಿಗೆ ಹೊಸಕ್ಷೇತ್ರವೊಂದನ್ನು ನಿರ್ಮಿಸಬೇಕೆಂದು ಇಡಿಯ ಕಾವಿಗೇ ಬೆಂಕಿ ಹಚ್ಚಿದರು. ಅವರು ಬೆಂಕಿ ಕೊಟ್ಟದ್ದು ರಾತ್ರಿಯಲ್ಲಾಗಿತ್ತು. ನನ್ನ ಬಂಧುಗಳೆಲ್ಲಾ ಬೆಂಕಿಯಲ್ಲಿ ಉರಿದು ಹೋದರು. ನಾನು ನೋಡುತ್ತಿರುವಂತೆ ನನ್ನ ಪ್ರಿಯತಮನೂ ಬೆಂಕಿಗೆ ಬಿದ್ದು ಜೀವಂತ ಬಲಿಯಾಗಿ ಹೋದ’.

ಬಿದಿರು ತಿಕ್ಕಾಡಿ ಚೀರುವ ಹಾಗೆ ಗಿಳಿಮಗಳು ಪುನ: ಅಳಲು ತೊಡಗಿದಳು.

ಇದ್ದಕ್ಕಿದ್ದಂತೆ- ದೇಹವೆಲ್ಲಾ ಇರುವೆ ಹರಿದು ಕಂಪಿಸಿದಂತೆ, ಜೊತೆಜೊತೆಗೆ ಯಾವುದೋ ಕಾಣದ ಕರುಣೆಯ ಕೈಗಳು ಬೆನ್ನು ತಟ್ಟಿದಂತೆ ಕಪ್ಪೆಗೆ ಅನಿಸತೊಡಗಿತು. ಕಣ್ಣುಗಳು ಉಬ್ಬಿಬಂದು ತನ್ನ ಬಾಯಿ ತೆರೆದುಕೊಂಡಂತೆ ಅದಕ್ಕೆ ಅನುಭವವಾಯಿತು. ಜ್ಞಾನದ ಬೆಳಕು ಅರಳಿ ಕಪ್ಪೆಯು ಹೇಳಿತು ಜೋಡಿ ಮೀನುಗಳೇ, ಇಗೋ ಸಾವು ನನ್ನನ್ನು ಹರಸುತ್ತಾ ಇದೆ. ನೀವು ಬೇಗನೇ ಸುರಕ್ಷಿತವಾದ ಸ್ಥಳವೊಂದಕ್ಕೆ ಹೋಗಿ. ಮನುಷ್ಯನು ಮುಟ್ಟಲಾರದ ಒಂದು ಸ್ವರ್ಗವು ಎಲ್ಲಾದರೂ ನಿಮ್ಮನ್ನು ಕಾಯುತ್ತಾ ಇರಬಹುದು

ಅಳು ನಿಲ್ಲಿಸಿ ಆಶ್ಚರ್ಯದಲ್ಲಿರುವ ಗಿಳಿಯನ್ನು ತನ್ನ ಬಳಿಗೆ ಕರೆದು ಕಪ್ಪೆಯು ಉಪದೇಶಿಸಿತು.

‘ಏ ಗಿಳಿಮಗಳೇ, ನೀನು ಒಳ್ಳೆಯ ಹಾಡುಗಾರ್ತಿಯಲ್ಲವೇ?, ನಿನ್ನೊಳಗಿನ ದು:ಖಕ್ಕೆ ನೀನೇ ಕಾವಾಗಿ ಕೂತು ಉರಿದು ಮುಗಿದುಹೋಗಬೇಡ. ಅದರ ಬದಲು ಇಲ್ಲಿ ಕಂಡ ಎಲ್ಲದರ ಅರ್ಥವನ್ನು ಇಡಿಯ ಭೂಮಿಗೇ ಹಾಡಿ ಕೇಳಿಸುತ್ತಾ ಇರು. ನಿನ್ನ ಬಾಳ ನಿಯೋಗ ಇನ್ನು ಮುಂದೆ ಇದಕ್ಕಾಗಿಯೆ ಇರಲಿ’.

ಗಿಳಿಮಗಳು ಧೈರ್ಯವನ್ನು ಕೂಡಿಸಿಕೊಂಡು ಅಂದಳು-‘ನಾನು ಇನ್ನು ಮುಂದೆ ಅಳುವುದಿಲ್ಲ ಪ್ರಭೋ’

ಕಪ್ಪೆಯ ಕಣ್ಣುಗಳು ನಿಧಾನವಾಗಿ ಮುಚ್ಚಿತು. ಶರೀರ ನಿಶ್ಚಲವಾಯಿತು. ಪೂವಾಲಿಗೆ ದು:ಖ ಸಹಿಸಲು ಸಾಧ್ಯವಾಗಲಿಲ್ಲ. ಅವಳು ಬಿಕ್ಕತೊಡಗಿದಳು.

ಅಳಗ ಸಮಾಧಾನಪಡಿಸಿದ ‘ಪೂವಾಲಿ, ಅಳುವ ಹೊತ್ತಲ್ಲ ಇದು. ನಾವು ಕೂಡಲೇ ಹೊರಡಬೇಕು. ಈ ಮಣ್ಣಿನಲ್ಲಿ ಎಲ್ಲಾದರೂ ಇರಬಹುದು- ಜೀವಕ್ಕೆ ಉತ್ಸಾಹ ಸುರಿಯುವಂಥ ತುಂಬು ನೀರಿರುವ ಒಂದು ಸ್ಥಳ’.

ಎರಡು ಮೀನುಗಳು ಕಿವಿರುಗಳನ್ನು ತೆರೆದು ಬೇಕಾದ ಪ್ರಾಣವಾಯುವನ್ನು ನೀರಿನಿಂದ ತಮ್ಮೊಳಗೆ ಎಳೆದುಕೊಂಡರು. ಗಿಳಿಮಗಳಲ್ಲಿ ‘ಬರುತ್ತೇವೆ’ ಅಂತ ಹೇಳಿ ನೀರು ಆರತೊಡಗಿದ ಬಂಡೆಯ ಬಿರುಕಿನ ಮೂಲಕ ಮುಂದಿನ ಪಯಣವನ್ನು ಆರಂಭಿಸಿದರು.

ಅನುವಾದಿಸಲಾಗದ ಮೂರು ಶಬ್ದಗಳ ಬಗ್ಗೆ
ಕವ್ವಾಯಿ ಕಾಯಲ್:
ಸಮುದ್ರದ ನೀರು ಭೂಪ್ರದೇಶಕ್ಕೆ ನುಗ್ಗಿ ಉಂಟಾಗುವ ವಿಶಿಷ್ಟ ಹಿನ್ನೀರು ಜಲಾಶಯಗಳನ್ನು ಮಲೆಯಾಳದಲ್ಲಿ ಕಾಯಲ್ ಎನ್ನುತ್ತಾರೆ. ಕೇರಳದ ತುಂಬ ಅಪಾರ ಕಾಯಲ್‌ಗಳು ಇದ್ದು ಅವು ಮಲೆಯಾಳ ಸಂಸ್ಕೃತಿಯ ಭಾಗವಾಗಿವೆ. ಕವ್ವಾಯಿ ಎಂಬುದು ಇಂಥಾ ಒಂದು ಕಾವಲ್‌ನ  ಹೆಸರು.

ಶೂಲಾಪು ಕಾವು: ಅರಣ್ಯದೊಳಗೆ ಬೃಹತ್ ಮರಗಳು ಕವಿದಿರುವಲ್ಲಿ ಕೆಲವು ನಿಶ್ಚಿತ ಪ್ರದೇಶಗಳಲ್ಲಿ ಕಾವು ಎಂಬ ವಿಶಿಷ್ಟ ಪೂಜಾಸ್ಥಳಗಳಿರುತ್ತವೆ. ಇವು ಕರಾವಳಿಯ ನಾಗಬನದಂತಿರುವ ರಚನೆಗಳು. ಶೂಲಾಪು ಎಂಬುದು ಒಂದು ಕಾವಿನ ಹೆಸರು.

ನೆಡುಂಚೂರಿ ಮೀನು: ಕೇರಳ ಕರಾವಳಿಯ ಕಾಯಲ್‌ಗಳಲ್ಲಿ ವಾಸಿಸುವ ಒಂದು ಉದ್ದಜಾತಿಯ ಮೀನು. ಬೇಸಿಗೆಯ ಕೊನೆಗೆ ಮೊದಲ ಮಳೆ ಸುರಿಯುವಾಗ ಇವುಗಳು ನದಿಯ ನೀರಿನಲ್ಲಿ ಬೆಟ್ಟಾರಣ್ಯಗಳ ಕಡೆಗೆ ಏರಿಹೋಗಿ ಅಲ್ಲಿಯ ಸಿಹಿನೀರಿನಲ್ಲಿ ಮೊಟ್ಟೆ ಇಡುತ್ತವೆ. ಮೊಟ್ಟೆಯೊಡೆದ ಬಳಿಕ ಮರಿಗಳ ಸಹಿತ ಪುನಃ ಕಾಯಲ್‌ಗೆ ಮರಳುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT