ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ್ಞಾನದೇಗುಲದ ‘ಕಾಯಂ’ ಅತಿಥಿಗಳು...!

Last Updated 6 ಫೆಬ್ರುವರಿ 2016, 5:07 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಕಾಲೇಜೊಂದರಲ್ಲಿ ಪಾಠ ಮಾಡುತ್ತಿದ್ದ ಅತಿಥಿ ಉಪನ್ಯಾಸಕಿ ದೇವಮ್ಮ ಕುಸಿದುಬಿದ್ದು

ಮೃತರಾದರು. ಹೀಗೆ ಅನಾರೋಗ್ಯ, ಮಾನಸಿಕ ಒತ್ತಡದಿಂದ ಅತಿಥಿ ಉಪನ್ಯಾಸಕರು ಸಾಯುವುದು ವಿಶೇಷವೇನಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ವಾಣಿಜ್ಯ ವಿಷಯದ ಅತಿಥಿ ಉಪನ್ಯಾಸಕ ಚಂದ್ರಶೇಖರ್, ಕೋಲಾರ ಜಿಲ್ಲೆಯ ಬಂಗಾರಪೇಟೆಯ ಅತಿಥಿ ಉಪನ್ಯಾಸಕರಾದ ನಾರಾಯಣಸ್ವಾಮಿ ಮತ್ತು ಮಂಜುಳಾ ಇದೇ ರೀತಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಕಳೆದ 5 ವರ್ಷಗಳಲ್ಲಿ 12ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಅನಾರೋಗ್ಯಕ್ಕೆ ಸೂಕ್ತ ಚಿಕಿತ್ಸೆ ದೊರೆಯದೆ ಸಾವನ್ನಪ್ಪಿದ್ದಾರೆ.

ಕೃಷಿ ಕೂಲಿ ಕಾರ್ಮಿಕ ಅಥವಾ ಕಟ್ಟಡ ಕಾರ್ಮಿಕರು ಕೆಲಸ ಮಾಡುವ ಸಮಯದಲ್ಲಿ ಸತ್ತರೆ ಸಂಬಂಧಪಟ್ಟ ಮಾಲೀಕರು ಬಂದು ಕುಟುಂಬದವರಿಗೆ ಸಾಂತ್ವನ ಹೇಳಿ ಕನಿಷ್ಠ ಪ್ರಮಾಣದಲ್ಲಾದರೂ ಪರಿಹಾರ ಕೊಟ್ಟು ಹೋಗುತ್ತಾರೆ. ಆದರೆ ಅತಿಥಿ ಉಪನ್ಯಾಸಕರು ಸತ್ತರೆ ಪರಿಹಾರ ಕೊಡುವುದಿರಲಿ, ಸೌಜನ್ಯಕ್ಕಾದರೂ ಶಿಕ್ಷಣ ಇಲಾಖೆ ಅಧಿಕಾರಿಗಳು ಭೇಟಿಕೊಟ್ಟು ಸಾಂತ್ವನ ಹೇಳುವ ಮಾನವೀಯತೆ ತೋರಿದ ಉದಾಹರಣೆಯೇ ಇಲ್ಲ.

ಹೀಗೆ ರಾಜ್ಯದ ನೂರಾರು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸಾವಿರಾರು  ಅತಿಥಿ ಉಪನ್ಯಾಸಕರು ಸರ್ಕಾರಿ ಜೀತದಾಳುಗಳಂತೆ ಬದುಕುತ್ತಿದ್ದಾರೆ. ಇವರಲ್ಲಿ ಹಲವರು 15–20 ವರ್ಷಗಳ ಕಾಲ ಅನುಭವ ಮತ್ತು ಸೇವಾ ಹಿರಿತನ ಹೊಂದಿದ್ದಾರೆ. ಆರಂಭದಲ್ಲಿ ₹ 12 ಸಾವಿರ ಮಾಸಿಕ ವೇತನಕ್ಕೆ ದುಡಿಯುತ್ತಾ ಬಂದಿದ್ದಾರೆ. ಈಗ ಕೆಲವರಿಗೆ ₹ 20–25 ಸಾವಿರ ವೇತನ ಸಿಗುತ್ತಿದೆ. ಇವರಲ್ಲಿ ಅನೇಕರು ಎಂ.ಎಡ್., ಎಂ.ಫಿಲ್., ನೆಟ್, ಸ್ಲೆಟ್, ಪಿಎಚ್‌.ಡಿ. ವಿದ್ಯಾರ್ಹತೆ ಹೊಂದಿದ್ದಾರೆ. ಇಷ್ಟೆಲ್ಲ ಉನ್ನತ ಮಟ್ಟದ ವಿದ್ಯಾರ್ಹತೆ ಹೊಂದಿರುವ ಇವರು ಸರ್ಕಾರಿ ಪದವಿ ಕಾಲೇಜುಗಳಲ್ಲಿ ಓದುವ ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುತ್ತಿದ್ದಾರೆ.

ಸಂಕಷ್ಟದ ಜೀವನ ನಡೆಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಪ್ರತಿನಿತ್ಯ ನೋವು ಉಣ್ಣುವುದು ಅಭ್ಯಾಸವೇ ಆಗಿ ಹೋಗಿದೆ. ಇವರಿಗೆ ಪ್ರತಿ ತಿಂಗಳು ವೇತನ ಸಿಗುತ್ತಿಲ್ಲ.  ಐದಾರು ತಿಂಗಳು ದುಡಿದ ಮೇಲೆ, ಕಾಲೇಜುಗಳಿಂದ ಹಾಜರಾತಿ ಪಟ್ಟಿ ಸಮೇತ ವೇತನದ ಬಿಲ್ಲನ್ನು ಶಿಕ್ಷಣ ಇಲಾಖೆಯ ಪ್ರಾದೇಶಿಕ ಜಂಟಿ ನಿರ್ದೇಶಕರ ಕಚೇರಿಗೆ ಕಳುಹಿಸಬೇಕು. ಅಲ್ಲಿಂದ ಬಿಲ್್ ಪಾಸಾಗಿ ಮತ್ತೆ ಕಾಲೇಜುಗಳ ಪ್ರಾಂಶುಪಾಲರ ಹೆಸರಿಗೆ 2–3 ತಿಂಗಳ ನಂತರ ಬರುತ್ತದೆ. ಅದನ್ನು ಕಾಲೇಜಿನಿಂದ ಬಿಡಿಸಿ, ಅತಿಥಿ ಉಪನ್ಯಾಸಕರ ಖಾತೆಗೆ ಜಮಾ ಮಾಡಿಸಿಕೊಳ್ಳಲು ಕೆಲವು ಕಡೆ ಪ್ರಾಂಶುಪಾಲರಿಗೆ, ಮ್ಯಾನೇಜರ್‌ಗೆ ಲಂಚ ಕೊಡಬೇಕು. ಈ ರೀತಿ ಆರು ತಿಂಗಳಿಗೊಮ್ಮೆ ವೇತನ ಪಡೆಯುವ ಎಷ್ಟೋ ಅತಿಥಿ ಉಪನ್ಯಾಸಕರು ಬಡ್ಡಿಗೆ ಹಣ ಸಾಲ ಪಡೆದು ಜೀವನ ನಿರ್ವಹಿಸುತ್ತಿದ್ದಾರೆ. ಎಂದೋ ಬರುವ ವೇತನದಲ್ಲಿ ಹೆಚ್ಚಿನ ಬಾಪ್ತು ಸಾಲದ ಬಡ್ಡಿಗೇ ಹೋಗುತ್ತಿದೆ.

ಅತಿಥಿ ಉಪನ್ಯಾಸಕರಿಗೆ ಇಷ್ಟೆಲ್ಲ ತೊಂದರೆ ಇದ್ದರೂ ಅವರಿಲ್ಲದೆ ಕಾಲೇಜುಗಳು ನಡೆಯುವುದಿಲ್ಲ. ಸರ್ಕಾರ ಇವರ ಮೇಲೇ ಅವಲಂಬಿತವಾಗಿದ್ದರೂ  ಇವರ ಉದ್ಯೋಗ ಭದ್ರತೆಯ ಬಗ್ಗೆ ಆಲೋಚಿಸುತ್ತಿಲ್ಲ. ಕಾಲೇಜುಗಳಲ್ಲಿ, ಶಿಕ್ಷಣ ಇಲಾಖೆಯ ಕಚೇರಿಗಳಲ್ಲಿ ಕನಿಷ್ಠ ಗೌರವವೂ ಸಿಗುತ್ತಿಲ್ಲ. 40–50 ಕಿಲೊ ಮೀಟರ್ ದೂರದ ಹಳ್ಳಿಗಳಿಂದ ನಗರ ಪ್ರದೇಶಗಳಲ್ಲಿರುವ ಪದವಿ ಕಾಲೇಜುಗಳಿಗೆ ಬೆಳಿಗ್ಗೆಯೇ ಬರಬೇಕು. ಸಂಜೆಯ ನಾಲ್ಕೈದು ಗಂಟೆಯವರೆಗೆ ಇರಬೇಕು. ಬೆಳಿಗ್ಗೆ ಒಂದೆರಡು ತರಗತಿಗಳಿಗೆ ಉಪನ್ಯಾಸ, ಮತ್ತೆ ಮಧ್ಯಾಹ್ನದ ನಂತರ ಒಂದು ತರಗತಿಗೆ ಉಪನ್ಯಾಸ. ಬಹುತೇಕ ಕಡೆ ಸರಿಯಾದ ಸಮಯಕ್ಕೆ ಕಾಯಂ ಉಪನ್ಯಾಸಕರು ಸಮಯ ನಿಗದಿ ಮಾಡಿಕೊಂಡು ಉಳಿದ ಸಮಯದಲ್ಲಿ ಅತಿಥಿ ಉಪನ್ಯಾಸಕರು ತರಗತಿ ತೆಗೆದುಕೊಳ್ಳುವಂತಹ ಪರಿಸ್ಥಿತಿ ಇದೆ. ಕೆಲವು ಕಡೆ ಪೂರ್ಣಾವಧಿ ಕಾಯಂ ಉಪನ್ಯಾಸಕರಿಗಿಂತ ಹೆಚ್ಚಿನ ಕಾರ್ಯಭಾರವನ್ನು ಅತಿಥಿ ಉಪನ್ಯಾಸಕರು ನಿರ್ವಹಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಅತಿ ಹೆಚ್ಚು ಸಮಸ್ಯೆಗಳನ್ನು ಎದುರಿಸುತ್ತಿರುವವರು ಮಹಿಳಾ ಅತಿಥಿ ಉಪನ್ಯಾಸಕರು. ಎಷ್ಟೋ ಸಂದರ್ಭದಲ್ಲಿ ಅವರು ಸೂಕ್ತ ಶೌಚಾಲಯ ಸೌಲಭ್ಯವೂ ಇಲ್ಲದೆ ಪರಿತಪಿಸುವಂತಾಗುತ್ತಿದೆ.

ಹೆರಿಗೆ ರಜೆ ಇಲ್ಲ.  ಹೆರಿಗೆಯಾದ ಒಂದು ವಾರದಲ್ಲೇ ಮರಳಿ ಬಂದು ತರಗತಿಗಳನ್ನು ತೆಗೆದುಕೊಳ್ಳುವ ಅಮಾನವೀಯ ಸ್ಥಿತಿಯನ್ನು ನಮ್ಮ ಉನ್ನತ ಶಿಕ್ಷಣ ಇಲಾಖೆ ಜಾರಿಯಲ್ಲಿಟ್ಟಿದೆ. ಈ ಬಗ್ಗೆ ಹಲವಾರು ಬಾರಿ ಗಮನಕ್ಕೆ ತಂದರೂ ಸರ್ಕಾರ ಕಣ್ಣು, ಕಿವಿ, ಮೆದುಳು ಇಲ್ಲದಂತೆ ವರ್ತಿಸುತ್ತಿದೆ.

ಬಹುತೇಕ ಕಡೆ ಅತಿಥಿ ಉಪನ್ಯಾಸಕರು ತಾತ್ಕಾಲಿಕ ಹುದ್ದೆಯ ಕಾರಣಕ್ಕೆ ಕಾಯಂ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳಿಂದಲೂ ಅವಮಾನಕ್ಕೀಡಾಗುವ, ಅವಜ್ಞೆಗೊಳಗಾಗುವ ಸಂದರ್ಭವೂ  ಇದೆ. ತರಗತಿಗಳು ಇಲ್ಲದ ಸಮಯದಲ್ಲಿ ವಿಶ್ರಾಂತಿ ಪಡೆಯಲು ಕೋಣೆಗಳಿಲ್ಲ, ಕುರ್ಚಿ-ಟೇಬಲ್‌ಗಳಿಲ್ಲ. ಎಲ್ಲಿ ಉದ್ಯೋಗ ಕೈಬಿಟ್ಟು ಹೋಗುವುದೋ ಎಂಬ ಆತಂಕ ಪ್ರತಿದಿನ ಕಾಡುತ್ತಿರುತ್ತದೆ. ವರ್ಷದಲ್ಲಿ 10 ತಿಂಗಳು ಮಾತ್ರ ಕೆಲಸ. ಶೈಕ್ಷಣಿಕ ವರ್ಷದ ಆರಂಭದಲ್ಲಿ ಇಂತಹ ಕಾಲೇಜಿನಲ್ಲಿ ದಿನಕ್ಕೆ ಇಂತಿಷ್ಟು ಕಾರ್ಯಭಾರದ ತರಗತಿಗಳು ಎಂದು ನಿಗದಿಯಾಗಿದ್ದರೂ, ಆ ಜಾಗಕ್ಕೆ ಒಬ್ಬ ಪೂರ್ಣಾವಧಿ ಕಾಯಂ ಉಪನ್ಯಾಸಕರು ವರ್ಗವಾಗಿ ಬಂದರೆ ಇಬ್ಬರು ಅತಿಥಿ ಉಪನ್ಯಾಸಕರು ಆ ಕ್ಷಣದಲ್ಲೇ ಕೆಲಸ ಕಳೆದುಕೊಂಡು ಮನೆಗೆ ಹೋಗಬೇಕು (ನಮ್ಮನ್ನಾಳುವ ಸರ್ಕಾರಗಳು ವರ್ಗಾವಣೆ ಪ್ರಕ್ರಿಯೆಯನ್ನು ಇಡೀ ವರ್ಷ ನಡೆಸುತ್ತಿರುತ್ತವೆ). ಆಗ ಅವರಿಗೆ ಎಲ್ಲಿ ಅತಿಥಿ ಉಪನ್ಯಾಸಕ ಹುದ್ದೆ ಖಾಲಿ ಇದೆಯೋ ಅಲ್ಲಿಗೆ ಹೋಗಿ ಎಂದು ಹೇಳಲಾಗುತ್ತದೆ.  10–12 ವರ್ಷ ಕೆಲಸ ಮಾಡಿದ್ದರೂ ಕೆಲಸ ಕಳೆದುಕೊಂಡು ಬೀದಿ ಪಾಲಾಗಿರುವ ನೂರಾರು ಉಪನ್ಯಾಸಕರಿದ್ದಾರೆ.

ಹೀಗಾಗಿ ಬೇರೆ ದಾರಿ ಇಲ್ಲದೆ ಅತಿಥಿ ಉಪನ್ಯಾಸಕರು ತಮ್ಮ ವಿಷಯಕ್ಕೆ ಸಂಬಂಧಿಸಿದ ಹುದ್ದೆ ಎಲ್ಲಾದರೂ ಖಾಲಿ ಇದೆಯೇ ಎಂದು ಹುಡುಕಿಕೊಂಡು ಎಷ್ಟೇ ದೂರವಿದ್ದರೂ ಸರಿ ಅಲ್ಲಿಗೆ ಹೋಗುತ್ತಿದ್ದಾರೆ. ಹೆಸರಿಗೆ ಉಪನ್ಯಾಸಕರೆಂದು ಬಿರುದು. ಸಂಬಂಧಿಕರು ಹಾಗೂ ಸುತ್ತಮುತ್ತಲಿನ ಜನರಿಗೆ ಉಪನ್ಯಾಸಕರೆಂದು ಗೊತ್ತಾಗಿ, ಬಳಿಕ ಕೆಲಸವಿಲ್ಲದೆ ಮನೆಯಲ್ಲಿದ್ದಾರೆ ಎಂಬ ಅವಮಾನ ಒಂದೆಡೆಯಾದರೆ, ಇನ್ನೊಂದೆಡೆ ಬೇರೆ  ಉದ್ಯೋಗಾವಕಾಶವೂ ಇರುವುದಿಲ್ಲ. ಅತಿ ಕಡಿಮೆ ವೇತನ ಪಡೆದು ಅತ್ಯಂತ ಜವಾಬ್ದಾರಿಯುತ ಕೆಲಸ ನಿರ್ವಹಿಸುವ ಅತಿಥಿ ಉಪನ್ಯಾಸಕರು ರಾಜ್ಯದ ಬೊಕ್ಕಸಕ್ಕೆ ಕೋಟಿಗಟ್ಟಲೆ ಹಣ  ಉಳಿಸಿಕೊಡುತ್ತಿದ್ದಾರೆ. ಮುಂದಿನ ಜನಾಂಗವನ್ನು ಅಕ್ಷರಸ್ಥರನ್ನಾಗಿ ಮಾಡುತ್ತಿರುವ ಇವರಿಗೆ ತಮ್ಮ ಮಕ್ಕಳ ಭವಿಷ್ಯ ರೂಪಿಸುವುದೇ ಕಷ್ಟವಾಗಿದೆ.

ಈ ಹಿಂದಿನ ಸರ್ಕಾರಗಳು ಉಪನ್ಯಾಸಕರ ಅಗತ್ಯವಿದ್ದಾಗ ಕಾಯಂ ನೇಮಕಾತಿ ಪ್ರಕ್ರಿಯೆಯನ್ನು ಕೈಗೊಳ್ಳದಿದ್ದುದೇ  ಇದಕ್ಕೆ ಮುಖ್ಯ ಕಾರಣ. ಈ ರೀತಿಯ ನೇಮಕಾತಿ ವಿಳಂಬದಿಂದ ಹಲವು ರೀತಿಯ ಸಮಸ್ಯೆಗಳು ಎದುರಾಗಿವೆ. ಈಗ ಸೇವೆಯಲ್ಲಿರುವ ಅತಿಥಿ ಉಪನ್ಯಾಸಕರಲ್ಲಿ ಬಹುತೇಕರು  ಕಾಯಂ ನೇಮಕಾತಿಗೆ ಅಗತ್ಯವಾದ ಅರ್ಹತೆ ಹೊಂದಿದ್ದಾರೆ. ಕಾಯಂ ಉಪನ್ಯಾಸಕರ ನೇಮಕಾತಿ ಸಂದರ್ಭದಲ್ಲಿ ಈಗಾಗಲೇ ಕೆಲಸ ನಿರ್ವಹಿಸುತ್ತಿರುವ, ಎಲ್ಲ ಬಗೆಯ ಸಾಮರ್ಥ್ಯ ಹೊಂದಿರುವ, ಮೀಸಲಾತಿ ಅನ್ವಯಕ್ಕೆ ಒಳಗಾಗುವ ಉಪನ್ಯಾಸಕರನ್ನು ಪರಿಗಣಿಸಬೇಕು ಎಂದು ಒತ್ತಾಯಿಸುತ್ತಿದ್ದರೂ ಏನೂ ಪರಿಣಾಮವಾಗುತ್ತಿಲ್ಲ.

ಸರ್ಕಾರ ಅಭ್ಯರ್ಥಿಗಳ ಅಂಕಗಳನ್ನಷ್ಟೇ  ಪರಿಗಣಿಸಿ ನೇಮಕಾತಿ ಮಾಡ ಹೊರಟರೆ ಅದು ಅತಾರ್ಕಿಕ ಮತ್ತು ಅಮಾನವೀಯವಾಗುತ್ತದೆ. ಈಗ ಸೇವೆಯಲ್ಲಿರುವ ಅತಿಥಿ ಉಪನ್ಯಾಸಕರು 15–20 ವರ್ಷಗಳ ಹಿಂದೆ ಪದವಿ ಪಡೆದವರು. ಆಗ ಕಡಿಮೆ ಅಂಕ ನೀಡಲಾಗುತ್ತಿತ್ತು. ಈಗಿನ ಸ್ನಾತಕೋತ್ತರ ಪದವೀಧರರು ಸೆಮಿಸ್ಟರ್ ಪದ್ಧತಿಯಲ್ಲಿ ಶೇ 90ಕ್ಕಿಂತ ಹೆಚ್ಚಿನ ಅಂಕ ಗಳಿಸುತ್ತಿದ್ದಾರೆ. ಇಂತಹವರ ಮಧ್ಯೆ  ಹಿಂದಿನವರೂ ಸ್ಪರ್ಧೆಯಲ್ಲಿ ಗೆದ್ದು ಬನ್ನಿ ಎಂಬುದು ಅತ್ಯಂತ ಅವೈಜ್ಞಾನಿಕವಾಗಿದೆ. ಇದನ್ನು ಗಮನಿಸಿ, ಈಗ ಸೇವೆಯಲ್ಲಿರುವವರಿಗೆ ಸೇವಾ ಭದ್ರತೆ ಒದಗಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು.

ಅತಿಥಿ ಉಪನ್ಯಾಸಕರು ಆರ್ಥಿಕವಾಗಿ, ಸಾಮಾಜಿಕ ವಾಗಿ ಅಭದ್ರತೆಯಿಂದ ಬಳಲುತ್ತಿದ್ದಾರೆ. ಇನ್ನೊಂದೆಡೆ ವಿದ್ಯಾರ್ಥಿಗಳು ಸಮರ್ಪಕವಾದ ಉಪನ್ಯಾಸ ಪ್ರಕ್ರಿಯೆಗಳಿಲ್ಲದೆ ಬಳಲುವಂತಾಗಿದೆ.  ಅವರು ಪಡೆಯಬೇಕಾದ ಜ್ಞಾನದಲ್ಲಿ ಅಭಾವವಾಗುತ್ತಿದ್ದು ಕಲಿಕಾ ಪ್ರಕ್ರಿಯೆ ರೋಗ್ರಗ್ರಸ್ತವಾಗಿದೆ. ಇದಕ್ಕೆಲ್ಲ ಹೊಣೆ ಯಾರು? ಕಡಿಮೆ ವೇತನ ಪಡೆದು ಪರಿತಪಿಸುತ್ತಾ ಕೆಲಸ ಮಾಡುತ್ತಿರುವ ಅತಿಥಿ ಉಪನ್ಯಾಸಕರೋ? ಉನ್ನತ ಶಿಕ್ಷಣ ವಲಯವನ್ನು ಅವಜ್ಞೆಗೆ ಈಡುಮಾಡುತ್ತಿರುವ ಸರ್ಕಾರಗಳೋ? ಈ ಬಗ್ಗೆ ಪ್ರಜ್ಞಾವಂತ ಜನರೇ ನಿರ್ಧರಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT