ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ್ಞಾನಾನ್ನ ದಾಸೋಹದ ಈ ಪರಿ...

Last Updated 22 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ಸುತ್ತೂರಿನ 23ನೇ ಪೀಠಾಧಿಪತಿ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಸಾರಥ್ಯದಲ್ಲಿ 40ರ ದಶಕದಲ್ಲಿ ಒಂದು ಪುಟ್ಟ ಝರಿಯಂತೆ ಪ್ರಾರಂಭವಾದ ಜ್ಞಾನಾನ್ನ ದಾಸೋಹ ಕಾಯಕ ಇಂದು ತುಂಬಿ ಹರಿಯುತ್ತಿರುವ ಜೀವಧಾರೆಯಾಗಿದೆ.

ಅಂದಿನ ಸ್ವಾಮೀಜಿ ಹಾಕಿಕೊಟ್ಟ ಮಾರ್ಗದಲ್ಲಿ ಇಂದಿನ ಪೀಠಾಧಿಪತಿ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಯಶಸ್ವಿಯಾಗಿ ಹೆಜ್ಜೆ ಇಡುತ್ತಿದ್ದಾರೆ. ಇದೇ 26ರಿಂದ 29ರವರೆಗೆ ರಾಜೇಂದ್ರ ಸ್ವಾಮೀಜಿ ಅವರ ಜನ್ಮ ಶತಮಾನೋತ್ಸವ ಸಮಾರೋಪ. ಈ ಅಂಗವಾಗಿ ಮಠದ ಸಾಧನೆಗಳ ಅನಾವರಣ ಇಲ್ಲಿದೆ...

ಕಾಗೆ ಒಂದಗುಳ ಕಂಡಡೆ ಕರೆಯದೆ ತನ್ನ ಬಳಗವನು
ಕೋಳಿ ಒಂದಗುಳ ಕಂಡಡೆ ಕೂಗಿ ಕರೆಯದೆ
ತನ್ನ ಕುಲವೆಲ್ಲವ, 
ಶಿವಭಕ್ತನಾಗಿ ಭಕ್ತಿ ಪಕ್ಷವಿಲ್ಲದಿದ್ದಡೆ 
ಕಾಗೆ ಕೋಳಿಗಿಂತ ಕರಕಷ್ಟ ಕೂಡಲಸಂಗಮದೇವಾ...
-ಬಸವಣ್ಣ

‘ನೀವೊಬ್ಬರೇ ವಿದ್ಯಾವಂತರಾದರೆ ಸಾಲದು, ಊರಿಗೆ ಮರಳಿದ ಮೇಲೆ ಬಡಮಕ್ಕಳ ವಿದ್ಯಾಭ್ಯಾಸಕ್ಕೆ ಆಸರೆಯಾಗಬೇಕು. ನೀವೊಂದು ದೀಪವಾಗಿ ಬೆಳಗಬೇಕೆನ್ನುತ್ತೀರೊ? ಅಥವಾ ನಿಮ್ಮಿಂದ ಸಹಸ್ರಾರು ದೀಪಗಳು ಬೆಳಗಬೇಕೆನ್ನುತ್ತೀರೊ? ಯೋಚಿಸಿ’

–ಕಾಶಿಯಲ್ಲಿ ವ್ಯಾಸಂಗ ಮುಗಿಸಿ ತವರಿಗೆ ಹೊರಡಲು ಸಿದ್ಧವಾಗಿದ್ದ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರನ್ನು ಉದ್ದೇಶಿಸಿ ಅರಮನೆ ಪಂಚಗವಿ ಮಠದ ಗೌರಿಶಂಕರಸ್ವಾಮಿ ಹೇಳಿದ್ದ ಮಾತಿದು.

ಆ ಮಾತುಗಳು ರಾಜೇಂದ್ರ ಸ್ವಾಮೀಜಿಯವರ ಹೃದಯದಲ್ಲಿ ತರಂಗವನ್ನೆಬ್ಬಿಸಿದವು. ತವರಿಗೆ ಹಿಂತಿರುಗುವ ಹಾದಿಯಲ್ಲಿಯೇ ನೂರಾರು ಕನಸುಗಳು. ಆ ಕನಸುಗಳು ನನಸಾಗಲು ಹೆಚ್ಚು ಕಾಲ ಬೇಕಾಗಲಿಲ್ಲ. 12ನೇ ವಯಸ್ಸಿಗೆ ಸುತ್ತೂರು ಮಠದ ಅಧಿಕಾರ ವಹಿಸಿಕೊಂಡ ಅವರು ಅನ್ನ ಹಾಗೂ ಅಕ್ಷರ ಕ್ಷೇತ್ರದಲ್ಲಿ ಕ್ರಾಂತಿ ಉಂಟು ಮಾಡಿದರು.

ಅಂದಿನ ಸರ್ಕಾರಗಳಿಂದಲೂ ಆಗದ ಕೆಲಸವನ್ನು ತಾವು ಮಾಡಿ ತೋರಿಸಿದರು. ಬಹು ದೊಡ್ಡ ಧಾರ್ಮಿಕ ಪರಂಪರೆಯ ಮುಖ್ಯಸ್ಥ ಆಗಿದ್ದರೂ ಅದನ್ನು ಕೇವಲ ಧಾರ್ಮಿಕ ಚಟುವಟಿಕೆಗೆ ಸೀಮಿತಗೊಳಿಸಲಿಲ್ಲ. ಸುತ್ತಲ ಸಮಾಜದ ಅಸಮಾನತೆ, ಬಡತನ, ಹತಾಶೆಗಳು ಅವರ ಮನಸ್ಸು ಬದಲಾಯಿಸಿದವು. ‘ಬಡಜನರ ದುಃಖದ ಕತ್ತಲೆಗೆ ಬೆಳಕಿನ ಒಂದು ಕಿರಣವಾಗುವುದು ನಿಜವಾದ ಜಗದ್ಗುರುತ್ವ’ ಎಂದು ಬಲವಾಗಿ ನಂಬಿದ್ದರು.

ಮರುಗಿದ ಹೃದಯ
‘ಚಿತ್ರದುರ್ಗದಿಂದ ಮೈಸೂರಿಗೆ ಓದಲೆಂದು ಬಂದಿದ್ದ ವಿದ್ಯಾರ್ಥಿಯೊಬ್ಬ ಊಟವಿಲ್ಲದೆ ನಿತ್ರಾಣನಾಗಿದ್ದ. ಅದನ್ನು ನೋಡಿದ ಸ್ವಾಮೀಜಿ ಬಹಳ ದುಃಖಪಟ್ಟರು. ಇಂಥ ಅಸಂಖ್ಯಾತ ಯುವಕರ ಬಡತನದ ಪರಿಸ್ಥಿತಿ ಕಂಡು ಮಮ್ಮಲ ಮರುಗಿದರು.

ಆರಂಭದಲ್ಲಿ ತಾವು ವಾಸ್ತವ್ಯ ಹೂಡಿದ್ದ ಕೊಠಡಿಯಲ್ಲೇ ನಾಲ್ಕಾರು ಬಡ ವಿದ್ಯಾರ್ಥಿಗಳಿಗೆ ಊಟದ ವ್ಯವಸ್ಥೆ ಮಾಡಿದರು. ಬಡತನದ ಕಾರಣ ವಿದ್ಯಾಭ್ಯಾಸ ಮುಂದುವರಿಸಲು ಸಾಧ್ಯವಾಗದಿರುವ ವಿದ್ಯಾರ್ಥಿಗಳಿಗೆ ನೆರವಾಗಬೇಕೆಂದು 1941ರಲ್ಲಿಯೇ ಉಚಿತ ಪ್ರಸಾದ ನಿಲಯ ಆರಂಭಿಸಿದರು. ಆಗ ಅವರು ಕೂಡ ವಿದ್ಯಾರ್ಥಿಯೇ’ ಎಂದು ಮಠದಲ್ಲಿ ಸೇವೆ ಸಲ್ಲಿಸಿದ ಹಿರಿಯರು ನೆನಪಿಸಿಕೊಳ್ಳುತ್ತಾರೆ.

ಆಗ ದವಸಧಾನ್ಯಕ್ಕೆ ಕೊರತೆ ಉಂಟಾಯಿತು. ಕೂಡಲೇ ಸ್ವಾಮೀಜಿ ಗಾಡಿ ಕಟ್ಟಿಕೊಂಡು ಊರೂರು ಅಲೆದು ದವಸಧಾನ್ಯ ಸಂಗ್ರಹಿಸಿದರು. ಒಮ್ಮೆ ರೈಲಿನಲ್ಲಿ ಬೆಂಗಳೂರಿಗೆ ತೆರಳಿ ಮೆಜೆಸ್ಟಿಕ್‌ನಿಂದ ಕುದುರೆ ಗಾಡಿಯಲ್ಲಿ ಮಠಗಳಿಗೆ ಹೋಗಿ ಸಾಲ ಪಡೆದು ವಿದ್ಯಾರ್ಥಿನಿಲಯದ ಮಕ್ಕಳಿಗೆ ಉಣಬಡಿಸಿದ್ದರು. ಚಾಮರಾಜನಗರದ ವಿದ್ಯಾರ್ಥಿ ನಿಲಯದಲ್ಲಿ ಒಂದು ದಿನ ಆಹಾರ ಪದಾರ್ಥ ಖಾಲಿಯಾಗಿತ್ತು.

ರಾತ್ರಿಯ ಊಟವಿಲ್ಲದ ಕಾರಣ ಮಕ್ಕಳೆಲ್ಲಾ ಕಡಲೆಪುರಿ ತಿಂದು ಮಲಗಿಕೊಂಡಿದ್ದರು. ವಿಷಯ ಗೊತ್ತಾದಾಗ ಮಧ್ಯರಾತ್ರಿ ಹೋಗಿ ಊಟಕ್ಕೆ ವ್ಯವಸ್ಥೆ ಮಾಡಿದ್ದರು. ಕೆಲ ದಿನ ತಮ್ಮ ನಿಷ್ಠೆಯ ಇಷ್ಟಲಿಂಗ ಪೂಜೆಯನ್ನೂ ಮಾಡಲು ಸಾಧ್ಯವಾಗದ ಒತ್ತಡಕ್ಕೆ ಸಿಲುಕಿ ಬಡ ವಿದ್ಯಾರ್ಥಿಗಳ ಹಸಿದ ತುತ್ತಿನ ಚೀಲ ತುಂಬಿಸಲು ಚಿಂತಾಕ್ರಾಂತರಾಗಿದ್ದರು.

ಹಸಿವು ನೀಗಿಸಿದರೆ ವಿದ್ಯೆ ತಾನಾಗಿಯೇ ಒಲಿಯುತ್ತದೆ ಎಂಬ ಅಂಶದ ಮೇಲೆ ಬಲವಾದ ನಂಬಿಕೆ ಇಟ್ಟಿದ್ದರು. ಆ ಕ್ಷಣಗಳನ್ನು ಅವರ ನಿಕಟವರ್ತಿಗಳು ಇಂದಿಗೂ ನೆನಪಿಸಿಕೊಳ್ಳುತ್ತಾರೆ.

1945ರಲ್ಲಿ ಚಾಮರಾಜನಗರದಲ್ಲಿ ಉಚಿತ ವಿದ್ಯಾರ್ಥಿನಿಲಯ ಆರಂಭಿಸಿದರು. 1954ರಲ್ಲಿ ಮೈಸೂರಿನಲ್ಲಿ ಜಗದ್ಗುರು ಶ್ರೀ ಶಿವರಾತ್ರಿ (ಜೆಎಸ್‌ಎಸ್‌) ಮಹಾವಿದ್ಯಾಪೀಠ ತೆರೆದರು. 1974ರಲ್ಲಿ ಆರೋಗ್ಯ ಕೇಂದ್ರ ಸ್ಥಾಪಿಸಿದರು. ಅಕ್ಷರದಾಸೋಹಕ್ಕಾಗಿ ಶಾಲಾಕಾಲೇಜುಗಳು, ಅನ್ನದಾಸೋಹಕ್ಕಾಗಿ ವಸತಿನಿಲಯಗಳನ್ನು ಹಾಗೂ ಆರೋಗ್ಯಸೇವೆಗಾಗಿ ಆಸ್ಪತ್ರೆಗಳನ್ನು ಆರಂಭಿಸಿ ಮೌನ ಕ್ರಾಂತಿಗೆ ಕಾರಣರಾದರು.

‘ಸಾಮಾಜಿಕ ಧಾರ್ಮಿಕ ಸೇವೆಯಲ್ಲಿ ತಮ್ಮ ಜೀವನವನ್ನು ಗಂಧದಂತೆ ಸವೆಸಿ, ದೀಪದಂತೆ ಉರಿಸಿ, ಹೂವಿನಂತೆ ಅರಳಿಸಿ ನಗುತ್ತಾ ಒಲುಮೆಯ ಸಿಂಚನ ಸುರಿಸಿದ ಧೀಮಂತ’ ಎಂದು ಸಂಸ್ಥೆಯಲ್ಲಿ ಓದಿದ ಹಿರಿಯ ವಿದ್ಯಾರ್ಥಿಗಳು ನೆನಪಿಸಿಕೊಳ್ಳುತ್ತಾರೆ. 1986ರಲ್ಲಿ ರಾಜೇಂದ್ರ ಸ್ವಾಮೀಜಿಯವರು ಲಿಂಗೈಕ್ಯರಾದರು. ಅಷ್ಟರಲ್ಲಿ ಅವರಿಗೆ ಸಾರ್ಥಕ ಭಾವನೆ ಮೂಡಿತ್ತು.

ಹೀಗೆ, ಪುಟ್ಟದಾಗಿ ಆರಂಭವಾಗಿ ನೂರಾರು ಮಕ್ಕಳಿಗೆ ಅನ್ನ–ಅಕ್ಷರ–ಆರೋಗ್ಯ ನೀಡಿದ ಸಂಸ್ಥೆ ಈಗ ಬೃಹದಾಕಾರವಾಗಿ ಬೆಳೆದು ನಿಂತಿದೆ. ಇಲ್ಲಿ ಕಲಿತ ಪದವೀಧರರು ದೇಶ–ವಿದೇಶಗಳಲ್ಲಿ ಉನ್ನತ ಹುದ್ದೆಗಳಲ್ಲಿದ್ದಾರೆ. ‘ವಿದ್ಯೆಯ ಒಂದು ದೀಪ ಹತ್ತಿಸಿದರೆ ಅದರಿಂದ ಮನೆಮನೆಯ ದೀಪಗಳು ಬೆಳಗುತ್ತವೆ’ ಎಂಬ ಜಗದ್ಗುರುಗಳ ಆಶಯ ನಿಜವಾಗಿದೆ.

ನಾನಾ ಧರ್ಮದ, ನಾನಾ ಜಾತಿಯ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಅವಕಾಶ ಕಲ್ಪಿಸಲಾಗಿದೆ. ಶಿಶುವಿಹಾರಗಳಿಂದ ಹಿಡಿದು ಸ್ನಾತಕೋತ್ತರ ಶಿಕ್ಷಣದವರೆಗೆ 310ಕ್ಕೂ ಹೆಚ್ಚಿನ ಸಂಸ್ಥೆಗಳನ್ನು ತನ್ನ ತೆಕ್ಕೆಯಲ್ಲಿ ಹೊಂದಿರುವ ಜೆಎಸ್‍ಎಸ್ ಮಹಾವಿದ್ಯಾಪೀಠದಲ್ಲಿ ಸದ್ಯ ಐವತ್ತು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಸಾವಿರಾರು ಜನರ ದುಡಿಮೆಗೆ ವೇದಿಕೆ ಸಿಕ್ಕಿದೆ.

ರಾಜ್ಯ, ರಾಷ್ಟ್ರದಾಚೆಗೂ ಮಠದ ಸೇವಾಕ್ಷೇತ್ರ ವಿಸ್ತರಿಸಿದೆ. ಆಸ್ಪತ್ರೆಗಳಲ್ಲಿ ಮತ್ತು ಚಿಕಿತ್ಸಾಲಯಗಳಲ್ಲಿ ಪ್ರತಿವರ್ಷ ಸುಮಾರು ಮೂರು ಲಕ್ಷ ಮಂದಿ ರೋಗಿಗಳು ಚಿಕಿತ್ಸೆ ಪಡೆಯುತ್ತಾರೆ. ಕೃಷಿ ಸಂಶೋಧನೆಗೆ ಸಂಬಂಧಿಸಿದ ಹಲವಾರು ಯೋಜನೆಗಳ ಮೂಲಕ ಈ ಪ್ರದೇಶದ ಸಾವಿರಾರು ಮಂದಿ ರೈತರು ಲಾಭ ಪಡೆದಿದ್ದಾರೆ. ಜೀವನದ ಸಂಧ್ಯಾಕಾಲವನ್ನು ಕಳೆಯಲು ಇಚ್ಛಿಸುವ ವೃದ್ಧರಿಗಾಗಿ ಜೆಎಸ್‍ಎಸ್ ಹಿರಿಯರ ಮನೆ ನಿರ್ಮಿಸಲಾಗಿದೆ.

ಪರಂಪರೆ ಮುಂದುವರಿಕೆ...
ಅನ್ನ, ಅರಿವು, ಆರೋಗ್ಯ, ಕೃಷಿ, ಕಲೆ, ಸಾಹಿತ್ಯ, ಸಂಗೀತ, ಸಮಾಜ ಸುಧಾರಣೆ, ಧರ್ಮ ಜಾಗೃತಿ ಸೇರಿದಂತೆ ಮಠ ಇಂದು ಕೈಗೆತ್ತಿಕೊಂಡಿರುವ ಎಲ್ಲಾ ಸೇವೆಗಳಿಗೆ ಭದ್ರ ಬುನಾದಿ ಹಾಕಿಕೊಟ್ಟಿದ್ದು ‘ತ್ರಿವಿಧದಾಸೋಹಿ’ ರಾಜೇಂದ್ರ ಸ್ವಾಮೀಜಿ. ಅವರು ಕಟ್ಟಿ ಬೆಳೆಸಿದ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕಾರ್ಯಗಳನ್ನು ವಿಸ್ತರಿಸುವ ಹಾಗೂ ಕಾಲದ ಅಗತ್ಯಕ್ಕೆ ತಕ್ಕ ಹಾಗೆ ಹೊಸ ಆಯಾಮಗಳಲ್ಲಿ ರೂಪಿಸುವ ಜವಾಬ್ದಾರಿ ಈಗಿನ ಪೀಠಾಧಿಪತಿ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯವರ ಹೆಗಲೇರಿತು.

ಬಹಳ ಹಿಂದೆಯೇ ಇವರನ್ನು ರಾಜೇಂದ್ರ ಸ್ವಾಮೀಜಿ ತಮ್ಮ ಉತ್ತರಾಧಿಕಾರಿಯನ್ನಾಗಿ ಆಯ್ಕೆ ಮಾಡಿಕೊಂಡಿದ್ದರು. ತಮ್ಮೆಲ್ಲಾ ತಪಸ್ಸಿನ ಸಿದ್ಧಿ ಸಾಧನೆಗಳನ್ನು ಧಾರೆಯೆರೆದರು. ಉನ್ನತ ಶಿಕ್ಷಣ ಕೊಡಿಸಿ ಉನ್ನತ ಜವಾಬ್ದಾರಿಯೊಂದನ್ನು ಹೆಗಲ ಮೇಲೇರಿಸಿದರು. 1956ರಲ್ಲಿ ಜನಿಸಿದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯವರಿಗೆ ಈ ಹೆಸರಿಟ್ಟಿದ್ದೇ ರಾಜೇಂದ್ರ ಸ್ವಾಮೀಜಿ.

ಸಾಕಾರವಾಗದೆ ಉಳಿದ ಅವರ ಕೆಲ ಕನಸುಗಳನ್ನು ದೇಶಿಕೇಂದ್ರ ಸ್ವಾಮೀಜಿ ನನಸಾಗಿಸುತ್ತಿದ್ದಾರೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುತ್ತಿದ್ದಾರೆ. ಅದಕ್ಕೆ ಇನ್ನೂ ಹೆಚ್ಚಿನ ವ್ಯವಸ್ಥಿತ ರೂಪ ಕೊಟ್ಟು ಬೆಳೆಸಲು ಶ್ರಮಿಸುತ್ತಿದ್ದಾರೆ. ಈ ಮೂಲಕ ಗುರುಪರಂಪರೆಯನ್ನು ಎತ್ತಿ ಹಿಡಿದಿದ್ದಾರೆ. ‘ಸುತ್ತೂರು ಜಗದ್ಗುರು ಪರಂಪರೆ ಎರಡು ಬತ್ತಿಗಳುಳ್ಳ ದೀಪದ ಪ್ರಕಾಶ’ ಎಂದು ಗೌರಿಶಂಕರಸ್ವಾಮೀಜಿ ಒಂದು ಕಡೆ ಉಲ್ಲೇಖಿಸುತ್ತಾರೆ.

ಸಂಸ್ಕೃತ ಪಾಠಶಾಲೆ, ಹೈಸ್ಕೂಲು, ಕಾಲೇಜುಗಳ ಜೊತೆ ಎಂಜಿನಿಯರಿಂಗ್, ವೈದ್ಯಕೀಯ ಕಾಲೇಜನ್ನೂ ನಡೆಸುತ್ತಿದ್ದಾರೆ. ಶಿಕ್ಷಕರ ತರಬೇತಿ ಕಾಲೇಜನ್ನೂ ತೆರೆದಿದ್ದಾರೆ. ಮಠದ ಶಿಕ್ಷಣ ಸಂಸ್ಥೆಗಳ ವಿಸ್ತಾರ ಒಂದು ವಿಶ್ವವಿದ್ಯಾಲಯದ ಬೃಹತ್ ಪ್ರಮಾಣಕ್ಕೆ ಹಬ್ಬಿದೆ. ಒಂದು ಮಠ ಇಷ್ಟೊಂದು ಸಂಸ್ಥೆಗಳನ್ನು ನಡೆಸುವುದು ಅಪರೂಪ.

ಸರ್ಕಾರ ಕೂಡ ಈ ಮಾದರಿಯ ವ್ಯವಸ್ಥೆಯನ್ನು ಒದಗಿಸಲು ಸಾಧ್ಯವಾಗದ ಈ ಹೊತ್ತಿನಲ್ಲಿ ಸ್ವಾಮೀಜಿಯವರು ಯಾವುದೇ ಜಾತಿಯ ಹಂಗಿಲ್ಲದೆ ಸಾವಿರಾರು ಸಂಖ್ಯೆಯ ಬಡ ಮಕ್ಕಳಿಗೆ, ಸೌಲಭ್ಯ ಮತ್ತು ಅವಕಾಶಗಳನ್ನು ಗ್ರಾಮಾಂತರ ಪರಿಸರದಲ್ಲಿ ಕಲ್ಪಿಸಿರುವುದು ದೊಡ್ಡ ಸಾಧನೆಯೇ ಸರಿ. ಸೂರ್ಯನ ಬೆಳಕು ಎಲ್ಲರಿಗೂ ಸಿಗುತ್ತದೆ ಅಲ್ಲವೇ?

‘ಉಪ್ಪು ಕೊಟ್ಟವರನ್ನು ಮುಪ್ಪಿನವರೆಗೂ ನೆನೆಯಬೇಕು’ ಎಂಬ ಗಾದೆ ಮಾತೊಂದಿದೆ. ಅದರಂತೆ ಮಠದ ಸೇವೆ ಸ್ಮರಿಸುತ್ತಾ ನಾಡಿನ ಅದೆಷ್ಟೋ ಮಂದಿ ಬದುಕುತ್ತಿದ್ದಾರೆ. ಇತ್ತ ‘ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ’ ಎಂಬಂತೆ ಮಠದ ಸೇವಾ ಕಾರ್ಯಗಳು ನಿರಂತರವಾಗಿ ನಡೆಯುತ್ತಲೇ ಇವೆ.

ಧರ್ಮವೆನ್ನುವುದು ನಡೆದು ತೋರಿಸಬೇಕಾದ ಆಶಯವೇ ಹೊರತು ಪ್ರವಚನ, ಭಾಷಣಗಳಿಂದ ಕಲಿಸುವಂಥ ಹಗುರ ಸಂಗತಿ ಅಲ್ಲ. ಹಾಗೆ ನಡೆದು ತೋರಿಸಿದ್ದು ಶಿವರಾತ್ರಿ ರಾಜೇಂದ್ರ ಸ್ವಾಮೀಜಿ. ಈಗ ಹಾಗೆ ನಡೆದು ತೋರಿಸುತ್ತಿರುವುದು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ.

‘ದೀಪವಾಗಿರು, ಜೀವರಕ್ಷಕ ದೋಣಿಯಾಗು ಮತ್ತು ಏಣಿಯಾಗು, ನೊಂದ ಹೃದಯದ ನೋವು ನಿವಾರಿಸು...’ ಎಂದಿರುವ ಪರ್ಷಿಯನ್ ಸೂಫಿ ಕವಿ ಜಲಾಲುದ್ದೀನ್‌ ರೂಮಿ ಮಾತು ಇಲ್ಲಿ ಚಾಚೂ ತಪ್ಪದೆ ಪಾಲನೆ ಆಗುತ್ತಿದೆ.

‘ಒಂದು ಸಂಸ್ಥೆಯ ಯಶಸ್ಸು, ಜೀವಂತಿಕೆ ಹಾಗೂ ಅದರ ಹಿರಿಮೆ ಕಲ್ಲು ಮಣ್ಣಿನ ಕಟ್ಟಡಗಳನ್ನು ಅವಲಂಬಿಸಿಲ್ಲ; ಅಲ್ಲಿಯ ವ್ಯಕ್ತಿಗಳ ಸಾಧನೆ ಸಿದ್ಧಿಗಳನ್ನು ಅವಲಂಬಿಸಿದೆ. ಅದೇ ಅವರ ನಿಜವಾದ ಐಶ್ವರ್ಯ’ ಎಂದು ಸಾಹಿತಿ ದೇ.ಜವರೇಗೌಡ ಒಮ್ಮೆ ಹೇಳಿದ್ದು ನೆನಪಾಗುತ್ತಿದೆ.

ರಾಜೇಂದ್ರ ಸಾಮೀಜಿ ಜನ್ಮ ಶತಮಾನೋತ್ಸವ...
ಸುತ್ತೂರು ಕ್ಷೇತ್ರದ ಶರಣ ದಂಪತಿ ಮಲ್ಲಿಕಾರ್ಜುನಸ್ವಾಮಿ ಮತ್ತು ಮರಮ್ಮಣ್ಣಿಯವರು ರಾಜೇಂದ್ರ ಸ್ವಾಮೀಜಿಯವರ ಪೂರ್ವಾಶ್ರಮದ ಪೋಷಕರು. 1916ರ ಆಗಸ್ಟ್‌ 29ರಂದು ಜನಿಸಿದ ಸ್ವಾಮೀಜಿ, ಸುತ್ತೂರಿನಲ್ಲಿಯೇ ಆರಂಭಿಕ ವಿದ್ಯಾಭ್ಯಾಸ ಪೂರೈಸಿದರು. ಅವರ ಮೊದಲ ಹೆಸರು ಪುಟ್ಟಸ್ವಾಮಿ ಎಂದು.

ಐದನೇ ವಯಸ್ಸಿಗೆ ಸುತ್ತೂರು ಮಠ ಸೇರಿದರು. ನಂತರ ಅವರನ್ನು ಶಿವರಾತ್ರೀಶ್ವರ ಸ್ವಾಮೀಜಿ ತಮ್ಮ ಶಿಷ್ಯನನ್ನಾಗಿ ಸ್ವೀಕರಿಸಿ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಎಂದು ನಾಮಕರಣ ಮಾಡಿದರು.

‘ತ್ರಿವಿಧದಾಸೋಹಿ’ ರಾಜೇಂದ್ರ ಸ್ವಾಮೀಜಿಯವರ ಜನ್ಮ ಶತಮಾನೋತ್ಸವ ಈಗ ನಡೆಯುತ್ತಿದೆ. 2016ರ ಜನವರಿ 2ರಂದು ಮೈಸೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಸಮಾರಂಭಕ್ಕೆ ಚಾಲನೆ ನೀಡಿದ್ದರು. ಸಮಾರೋಪ ಸಮಾರಂಭ ಇದೇ ಆಗಸ್ಟ್‌ 26ರಿಂದ 29ರವರೆಗೆ ಸುತ್ತೂರಿನಲ್ಲಿ ಜರುಗಲಿದೆ. ರಾಜೇಂದ್ರ ಜ್ಯೋತಿಯಾತ್ರೆಯು ವಿವಿಧ ರಾಜ್ಯಗಳಲ್ಲಿ 114 ದಿನ ಸಂಚರಿಸಿ ಸುತ್ತೂರು ಕ್ಷೇತ್ರ ತಲುಪಿದೆ.

ಜನ್ಮ ಶತಮಾನೋತ್ಸವದ ಅಂಗವಾಗಿ ಕೇಂದ್ರ ಸರ್ಕಾರ ₹ 5 ಮುಖಬೆಲೆಯ ಅಂಚೆಚೀಟಿ ಹೊರತರುತ್ತಿದೆ. ಅಲ್ಲದೆ, ಜೆಎಸ್‌ಎಸ್‌ ಮಹಾವಿದ್ಯಾಪೀಠದ ವಜ್ರಮಹೋತ್ಸವ, ಜೆಎಸ್‌ಎಸ್‌ ಗುರುಕುಲ ಅಮೃತಮಹೋತ್ಸವ, ಸಂತರ ಸಮಾವೇಶ ಕಾರ್ಯಕ್ರಮಗಳೂ ನಡೆಯಲಿವೆ.

*
ಸೇವಾಕ್ಷೇತ್ರದ ಮಹಾತ್ಮರು...

ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಕಪಿಲಾ ನದಿ ದಂಡೆಯ ಮೇಲೆ ಪುಟ್ಟ ಗ್ರಾಮ ಸುತ್ತೂರು. ಶಿವರಾತ್ರೀಶ್ವರ ಶಿವಯೋಗಿಗಳ ಗದ್ದಿಗೆ ಸುತ್ತೂರಿನ ಮುಖ್ಯ ದೇವಸ್ಥಾನ.

ಸುತ್ತೂರು ವೀರಸಿಂಹಾಸನ ಮಠಕ್ಕೆ ಹತ್ತು ಶತಮಾನಗಳ ಇತಿಹಾಸವಿದೆ. ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರು ಈ ಮಠದ 23ನೇ ಜಗದ್ಗುರು. ಅವರ ದೂರದೃಷ್ಟಿಯೇ ಅದ್ಭುತ. ಚಿಕ್ಕಂದಿನಿಂದ ಈ ಸ್ವಾಮೀಜಿಯ ಕಾರ್ಯವೈಖರಿಗಳನ್ನು ನೋಡುತ್ತಾ ಬೆಳೆದವರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ. ಅವರ ಹಾದಿಯಲ್ಲಿ ಮುನ್ನಡೆಯುತ್ತಾ ಅಭಿವೃದ್ಧಿಯತ್ತ ಕೊಂಡೊಯ್ಯುವಲ್ಲಿ 24ನೇ ಪೀಠಾಧಿಕಾರಿ ದೇಶಿಕೇಂದ್ರ ಸ್ವಾಮೀಜಿ ಪಾತ್ರ ಬಹುದೊಡ್ಡದು.

ಜೆಎಸ್‌ಎಸ್‌ ಸಾಮೂಹಿಕ ವಿವಾಹ: ಸುತ್ತೂರು ಜಾತ್ರಾ ಮಹೋತ್ಸವದ ಅಂಗವಾಗಿ ಪ್ರತಿವರ್ಷವೂ ಸಾಮೂಹಿಕ ವಿವಾಹ ನೆರವೇರಿಸಲಾಗುತ್ತದೆ. ಉಚಿತವಾಗಿ ಸೀರೆ, ಕುಪ್ಪಸ, ಪಂಚೆ, ಶಲ್ಯ ಮತ್ತು ಮಾಂಗಲ್ಯ ನೀಡಲಾಗುತ್ತದೆ. ಉಚಿತ ವಿವಾಹ ಸೌಲಭ್ಯ ಎಲ್ಲ ಜನಾಂಗಗಳಿಗೂ ಲಭ್ಯವಿದೆ.

*
ಕರಡಿಗೆಯನ್ನೇ ಬಿಚ್ಚಿಕೊಟ್ಟರು...
1962ರಲ್ಲಿ ಭಾರತದ ಮೇಲೆ ಚೀನಾ ದೇಶ ದಾಳಿ ನಡೆಸಿದಾಗ, ದೇಶದಾದ್ಯಂತ ಚಿನ್ನದ ಸಂಗ್ರಹ ನಡೆಯಿತು. ಅಂದಿನ ಮುಖ್ಯಮಂತ್ರಿ ಒಂದು ಸಾರ್ವಜನಿಕ ಸಭೆಯಲ್ಲಿ ಚಿನ್ನದ ದೇಣಿಗೆಗಾಗಿ ಮನವಿ ಮಾಡಿದಾಗ, ರಾಜೇಂದ್ರ ಸ್ವಾಮೀಜಿಯವರು ಇಷ್ಟಲಿಂಗ ಇಟ್ಟಿದ್ದ ತಮ್ಮ ಚಿನ್ನದ ಕರಡಿಗೆಯನ್ನೇ ದಾನ ಮಾಡಿದರು. ವೀರಶೈವ ಸಿದ್ಧಾಂತದ ಪ್ರಕಾರ ವ್ಯಕ್ತಿಗೆ ಲಿಂಗವೇ ಪ್ರಾಣ ದೇವರು. ಇಂಥ ಪವಿತ್ರ ನಿಧಿಯನ್ನು ಸ್ವಾಮೀಜಿ ಬಹಿರಂಗ ಸಭೆಯಲ್ಲೇ ಬಿಚ್ಚಿಕೊಟ್ಟರು.

ಸ್ವಾಮೀಜಿ ಕುರಿತ ಲೇಖನವೊಂದರಲ್ಲಿ ಹಿರಿಯ ಸಾಹಿತಿ ಕೋ.ಚನ್ನಬಸಪ್ಪ ಈ ಅಂಶವನ್ನು ನೆನಪಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ; ಪಟ್ಟಾಭಿಷೇಕ ಸಂದರ್ಭದಲ್ಲಿ ಕಾಣಿಕೆಯಾಗಿ ಬಂದ ಚಿನ್ನದ ಉಂಗುರ ಮಾರಿ ಮನೆಯೊಂದನ್ನು ಬಾಡಿಗೆಗೆ ತೆಗೆದುಕೊಂಡು ವಿದ್ಯಾರ್ಥಿನಿಲಯ ಪ್ರಾರಂಭಿಸಿದ್ದರಂತೆ. ಮಕ್ಕಳ ಊಟಕ್ಕೆ ಸಮಸ್ಯೆಯಾದಾಗ ಚಿನ್ನದ ಕರಡಿಗೆ ಅಡವಿಟ್ಟು ದವಸಧಾನ್ಯ ತಂದಿದ್ದರಂತೆ.

ಉಚಿತ ವಿದ್ಯಾರ್ಥಿನಿಲಯ
ಶಿಕ್ಷಣ ಕ್ಷೇತ್ರದಲ್ಲಿ ವಿಶೇಷ ಸೇವೆ ಸಲ್ಲಿಸುತ್ತಾ ಬಂದಿರುವ ಜೆಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ವಾಸ್ತವ್ಯ ಮತ್ತು ವ್ಯಾಸಂಗಕ್ಕೆ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಅವಕಾಶವಿದೆ. ಸುತ್ತೂರು ಕ್ಷೇತ್ರದಲ್ಲಿರುವ ಜೆಎಸ್ಎಸ್ ಶಾಲೆ ಹಾಗೂ ಉಚಿತ ವಿದ್ಯಾರ್ಥಿನಿಲಯದಲ್ಲಿ ಪ್ರವೇಶಕ್ಕಾಗಿ ಶೈಕ್ಷಣಿಕ ವರ್ಷದ ಆರಂಭದಲ್ಲಿ ಅರ್ಜಿ ಆಹ್ವಾನಿಸಲಾಗುತ್ತದೆ.

1 ರಿಂದ 7ನೇ ತರಗತಿವರೆಗೆ ಕನ್ನಡ ಮಾಧ್ಯಮಕ್ಕೆ ಮತ್ತು 1 ಹಾಗೂ 5ನೇ ತರಗತಿಗಳ ಇಂಗ್ಲಿಷ್ ಮಾಧ್ಯಮಕ್ಕೆ ಮತ್ತು 8ನೇ ತರಗತಿಗೆ ಕನ್ನಡ, ಇಂಗ್ಲೀಷ್ ಮಾಧ್ಯಮಕ್ಕೆ ಪ್ರವೇಶಾವಕಾಶವಿದೆ.

ಬಡತನ, ಕೂಲಿ ಕಾರ್ಮಿಕರು, ಕೃಷಿ ಕಾರ್ಮಿಕರು, ಶಾಲೆ ಬಹು ದೂರದಲ್ಲಿರುವುದು, ತಂದೆ ಅಥವಾ ತಾಯಿ ಒಬ್ಬರೇ ಇರುವಂತಹ ಮಗು ಅಥವಾ ತಂದೆ ತಾಯಿಯರಿಲ್ಲದ ಮಗು, ಇಂಥವರನ್ನೇ ಪ್ರಮುಖವಾಗಿ ಆಯ್ಕೆ ಮಾಡಲಾಗುತ್ತದೆ. ಗ್ರಾಮೀಣ ಕುಟುಂಬದಿಂದ ಬಂದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದು ಶಾಲೆಯ ಗುರಿ.
ಮಾಹಿತಿಗೆ http://jssonline.org/jss/

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT