ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ್ಞಾನ ವೃದ್ಧಿಸಿದ ಅನಕ್ಷರಸ್ಥ

Last Updated 25 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಅದು 80ರ ದಶಕ. ಮುನ್ನೂರು ಮನೆಗಳಿರುವ ಗ್ರಾಮಕ್ಕೆ ಬರುತ್ತಿದ್ದ ದಿನಪತ್ರಿಕೆಗಳ ಸಂಖ್ಯೆ ಕೇವಲ ಎರಡೇ ಎರಡು. ಆದರೆ ಇವರು

ಮಾತ್ರ ಬಂದಷ್ಟೇ ಪತ್ರಿಕೆಗಳನ್ನು ಓದುಗರಿಗೆ ಮುಟ್ಟಿಸಿ ಕೈ ತೊಳೆದುಕೊಳ್ಳಲಿಲ್ಲ. ಬದಲಾಗಿ ದಿನಪತ್ರಿಕೆಗಳನ್ನು ಓದಿ ಜ್ಞಾನ ವೃದ್ಧಿಸಿಕೊಳ್ಳುವಂತೆ ವಿದ್ಯಾವಂತರಿಗೆ ತಿಳಿ ಹೇಳಿದರು. ತಮ್ಮ ಗ್ರಾಮದ ಗಡಿ ಆಚೆಗೂ ಪತ್ರಿಕೆಯ ಓದುಗರನ್ನು ಹುಟ್ಟು ಹಾಕುವ ಸಂಕಲ್ಪ ತೊಟ್ಟರು.

ಹೀಗಾಗಿ ಕೆಂಪು ಬಸ್ಸು ಮೂತಿ ನೋಡದ ಸುತ್ತಲಿನ ಹತ್ತು ಗ್ರಾಮಗಳಿಗೆ ಸೈಕಲ್ ಏರಿ, ಜನರಲ್ಲಿ ದಿನಪತ್ರಿಕೆಗಳ ಮಹತ್ವ ಕುರಿತು ಅರಿವು ಮೂಡಿಸಿದರು. ಇವರ ಜಾಗೃತಿ ಮಾತುಗಳು ಜನರಿಗೆ ನಾಟಿ, ಅವರಲ್ಲಿ ಓದಿನ ರುಚಿ ಹಚ್ಚಿಸಿತು. ದಿನಕಳೆದಂತೆ ಪತ್ರಿಕೆಯ ವಾಚನವನ್ನು ಚಟವಾಗಿ ಮಾಡಿಕೊಂಡ ಇಲ್ಲಿಯ ನೂರಾರು ಮಂದಿಗೆ ಇಂದು ದಿನಪತ್ರಿಕೆಗಳನ್ನು ನೋಡದೇ ಮನಸ್ಸು ಸಂತುಷ್ಟಗೊಳ್ಳುವುದಿಲ್ಲ. ಫಲವಾಗಿ ಇಂದು ಈ ಗ್ರಾಮಕ್ಕೆ ಬರುವ ಪತ್ರಿಕೆಗಳ ಸಂಖ್ಯೆ ನೂರರ ಗಡಿ ದಾಟಿದೆ.

ಇಂಗ್ಲಿಷ್‌, ತೆಲಗು ಪತ್ರಿಕೆಗಳು, ವಾರ, ಮಾಸ ಪತ್ರಿಕೆಗಳು ಇವರ ಪ್ರಯತ್ನದ ಫಲವಾಗಿ ಇಂದು ಗ್ರಾಮಸ್ಥರ ಮನೆ ಸೇರುತ್ತಿವೆ. ಹೀಗಾಗಿ ಇವರ ಪತ್ರಿಕೆಯ ಪ್ರಸರಣದ ಜೊತೆಗೆ ಇಲ್ಲಿ ಬೆಳೆದಿದ್ದು ಬುದ್ಧಿವಂತರ ಸಂಖ್ಯೆ. ದಿನಪತ್ರಿಕೆಗಳನ್ನು ಓದಿ ಅದೆಷ್ಟೋ ಜನರು ಇಂದು ಸರ್ಕಾರಿ ಉದ್ಯೋಗದಲ್ಲಿದ್ದಾರೆ. ಇದಕ್ಕೆಲ್ಲಾ ಕಾರಣ ಇವರ ಪೇಪರ್ ಪ್ರಸರಣೆಯ ಕ್ರಾಂತಿ. 

ಬಳ್ಳಾರಿ ಜಿಲ್ಲೆಯ ಹಗರಿ ಬೊಮ್ಮನಹಳ್ಳಿ ತಾಲ್ಲೂಕಿನ ಹನಸಿ ಗ್ರಾಮದ ದೇವರಮನಿ ಶಿವಲಿಂಗಪ್ಪನೇ ಈ ಕ್ರಾಂತಿ ಮಾಡಿದವರು. ಹೇಳಲು ಇವರು ಅನಕ್ಷರಸ್ಥ. ಆದರೆ ಜ್ಞಾನವೃದ್ಧಿಯಲ್ಲಿ ಮಾತ್ರ ಇವರದ್ದು ಎತ್ತಿದ ಕೈ. ಇವರಿಗೀಗ 60 ವರ್ಷ. ಈಗಲೂ ಪೇಪರ್ ಹಂಚುವುದು ಇವರ ಕಾಯಕ. ಗ್ರಾಮದ ಅಂಗಡಿ ಮುರುಗೆಪ್ಪ ಇವರ ಈ ಕಾಯಕ್ಕೆ ಪ್ರೇರಣೆ. 1982 ರಲ್ಲಿ ಕೂಡ್ಲಿಗಿ ಹುಬ್ಬಳ್ಳಿ ಮಾರ್ಗದ ಕೆಎಸ್‌ಆರ್‌ಟಿಸಿ ಬಸ್ಸು ಈ ಗ್ರಾಮವನ್ನು ಹಾದು ಹೋಗುತ್ತಿತ್ತು. ಶಿವಲಿಂಗಪ್ಪ ಇದರಲ್ಲಿ ಕೂಡ್ಲಿಗಿಯಿಂದ ದಿನಪತ್ರಿಕೆಗಳನ್ನು ತರಿಸಿಕೊಂಡು ವಿತರಿಸುತ್ತಿದ್ದರು.

ಆಗ ಪೇಪರ್ ಬೆಲೆ 30 ಪೈಸೆ. ಆದರೆ ಓದುಗರ ಸಂಖ್ಯೆ ವಿರಳವಿತ್ತು. ಟಿ.ವಿಗಳು ಹೆಚ್ಚಾಗಿ ಇಲ್ಲದ ಅಂದಿನ ದಿನಗಳಲ್ಲಿ ಶಿವಲಿಂಗಪ್ಪ ಪ್ರಪಂಚ ಜ್ಞಾನಕ್ಕಾಗಿ ಪೇಪರ್ ಓದುವುದು ಅಗತ್ಯ ಎಂದು ಪ್ರತಿಪಾದಿಸಿದರು. ಛಲ ಇವರಿಗೆ ಬಲವಾಗಿತು. ವಿದ್ಯಾವಂತರನ್ನು ಮನವೊಲಿಸಿದರು. ಇವರಿಗೆ ಪತ್ರಿಕೆಗಳ ಮಹತ್ವ ತಿಳಿದುಕೊಳ್ಳಲು ಸ್ವಂತ ಹಣ ಖರ್ಚು ಮಾಡಿ ವಾರಗಟ್ಟಲೆ ತರೇಹವಾರಿ ದಿನ ಪತ್ರಿಕೆಗಳನ್ನು ತರಿಸಿ, ವಿದ್ಯಾವಂತರಿಗೆ ಉಚಿತವಾಗಿ ಓದಲು ಕೊಟ್ಟರು.

ಇವರ ಮಾತು, ಪತ್ರಿಕೆಗಳ ಪ್ರಭಾವಕ್ಕೆ ಒಳಗಾದ ಅನೇಕರು ದಿನಪತ್ರಿಕೆಯನ್ನು ಹಾಕಿಸಿಕೊಂಡರು. ಗ್ರಾಮದಲ್ಲಿ ಪತ್ರಿಕೆ ಓದುಗರನ್ನು ಹುಟ್ಟು ಹಾಕಿದ ನಂತರ ಇವರ ದೃಷ್ಟಿ ನೆಟ್ಟಿದ್ದು ಪಕ್ಕದ ಗ್ರಾಮಗಳತ್ತ. ಪಕ್ಕದ ಕಲ್ಲಹಳ್ಳಿ, ದಶಮಾಪುರ, ಹೊಸಕೇರಿ, ನಾಣ್ಯಪುರ, ಬೊಪ್ಪಲಾಪುರ... ಹಳ್ಳಿಗಳಿಗೂ ತೆರಳಿ ಜನರಲ್ಲಿ ಪತ್ರಿಕೆಗಳನ್ನು ಓದುವುದರ ಲಾಭದ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು. ಹೀಗಾಗಿ ಇತರೆ ಗ್ರಾಮಗಳಲ್ಲಿಯೂ ಪತ್ರಿಕೆ ಓದುಗರು ಹುಟ್ಟಿಕೊಂಡರು.

ಕೆಲ ವರ್ಷಗಳ ಕಾಲ್ನಡಿಗೆ, ಸೈಕಲ್ ತುಳಿದು ಪತ್ರಿಕೆ ಕೊಟ್ಟು ಬಂದರು. ಇವರ ಈ ಶ್ರಮದ ಬದುಕಿಗೀಗ ಬರೋಬ್ಬರಿ 30 ವರ್ಷಗಳು ಸಂದಿವೆ. ಈ ನಡುವೆ ಈ ಭಾಗದಲ್ಲಿ ಪೇಪರ್ ಓದುಗರ ಸಂಖ್ಯೆಯಲ್ಲಿ ನೂರುಪಟ್ಟು ಹೆಚ್ಚಾಗಿದೆ. ಅರವತ್ತರ ಅಂಚಿನಲ್ಲಿರುವ ಶಿವಲಿಂಗಪ್ಪ ಜೀವನೋಪಾಯಕ್ಕಾಗಿ ಹನಸಿ ಬಸ್‌ಸ್ಟ್ಯಾಂಡ್‌ನಲ್ಲಿ ಚಿಕ್ಕದೊಂದು ಶೆಡ್ ಇಟ್ಟುಕೊಂಡಿದ್ದಾರೆ. ಇಲ್ಲಿಯೂ ರಾಜ್ಯಮಟ್ಟದ ವಿವಿಧ ದೈನಂದಿನ ಕನ್ನಡ ಹಾಗೂ ಇಂಗ್ಲಿಷ್‌ ಪತ್ರಿಕೆಗಳ, ವಾರ- ಮಾಸ ಪತ್ರಿಕೆಗಳು ರಾರಾಜಿಸುತ್ತವೆ.

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವ ಹುಡುಗರಲ್ಲಿ ಶಿವಲಿಂಗಪ್ಪನ ಈ ಕಾಯಕದ ಬಗ್ಗೆ ಕೃತಜ್ಞತೆ ಇದೆ. ಶಿವಲಿಂಗಪ್ಪನ ಈ ಕಾಯಕ ಪತ್ರಿಕೆಯ ಓದುಗರನ್ನು ಹುಟ್ಟುಹಾಕುವುದರ ಜೊತೆಗೆ ಅನೇಕರು ಸರ್ಕಾರಿ ನೌಕರಿ ಗಿಟ್ಟಿಸಿಕೊಳ್ಳಲು ಕಾರಣವಾಗಿದೆ. ಇಂದು ಈ ಗ್ರಾಮದ ಬಹುತೇಕ ಮನೆಗಳಲ್ಲಿ ನೌಕರಸ್ಥರಿದ್ದಾರೆ. ಇದರಲ್ಲಿ ಶಿವಲಿಂಗಪ್ಪನ ಪೇಪರ್ ಕಾಯಕದ ಫಲವನ್ನೂ ಕಡೆಗಣಿಸುವಂತಿಲ್ಲ. ಈ ಇಳಿ ವಯಸ್ಸಿನಲ್ಲಿಯೂ ಶಿವಲಿಂಗಪ್ಪ ಪೇಪರ್ ಹಾಕುತ್ತಾರೆ. ಇವರ ಮಗ ಎರ್ರಿಸ್ವಾಮಿ ಪದವೀಧರನಾಗಿದ್ದರೂ ತಂದೆಗೆ ಬೆನ್ನೆಲುಬು ಆಗಿದ್ದಾರೆ.

ಅದೇನೇ ಇರಲಿ, ಇಂದು ಪತ್ರಿಕೆಗಳು ತಮ್ಮ ಪ್ರಸರಣೆಯ ಸಂಖ್ಯೆಯನ್ನು ಹೆಚ್ಚಿಸುವ ಸಲುವಾಗಿ ಪೈಪೋಟಿಗೆ ಬಿದ್ದು ಜನರ ಬಳಿ ಹೋಗುತ್ತಿವೆ. ಆದರೆ ಮೂರು ದಶಕಗಳ ಕೆಳಗೆ ಜನರು ದೈನಂದಿನ ವಿದ್ಯಮಾನ ತಿಳಿದುಕೊಂಡು ಜ್ಞಾನ ವೃದ್ಧಿಸಿಕೊಳ್ಳುವ ಸಲುವಾಗಿ ಪೇಪರ್ ಓದಬೇಕೆಂದು ಜನರಿಗೆ ಎಚ್ಚರಿಸಿ, ಪತ್ರಿಕೆಗಳನ್ನು ಓದುವ ಸಭಿರುಚಿ ಬೆಳೆಸಿ, ದಿನ ಪತ್ರಿಕೆಗಳನ್ನು ಮುಟ್ಟಿಸಿದ ಈ ಶಿವಲಿಂಗಪ್ಪನ ನಿಸ್ವಾರ್ಥ ಕಾಯಕದಿಂದಲೇ ವಿಭಿನ್ನವಾಗಿ ಕಾಣುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT