ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ್ಯೋತಿಷಿಗಳ ವಿರುದ್ಧ ಸಿಡಿಮಿಡಿ

‘ಜನರ ವಿಜ್ಞಾನ ಹಬ್ಬ’ದಲ್ಲಿ ಯು.ಆರ್‌.ರಾವ್‌ ಮಾತು
Last Updated 25 ಜುಲೈ 2014, 19:57 IST
ಅಕ್ಷರ ಗಾತ್ರ

ಬೆಂಗಳೂರು: ‘ಉಪಗ್ರಹಗಳು, ಸಂಪರ್ಕ ಕ್ರಾಂತಿ, ವಿಜ್ಞಾನದ ಆವಿಷ್ಕಾರ ಹಾಗೂ ತಂತ್ರಜ್ಞಾನದ ನೆರವಿನಿಂದ ಸುದ್ದಿ ವಾಹಿನಿ­ಗಳು ಕಾರ್ಯನಿರ್ವಹಿಸುತ್ತಿವೆ. ಆದರೆ  ಈ ವಾಹಿನಿಗಳ ಸ್ಟುಡಿಯೊ­ದೊ­ಳಗೆ ಕುಳಿತು ಗ್ರಹಗತಿಯೇ ಸರಿ ಇಲ್ಲ ಎಂದು ಜ್ಯೋತಿಷಿಗಳು ಬೊಗಳೆ ಬಿಡುತ್ತಾರೆ’
–ವಾಹಿನಿಗಳಲ್ಲಿ ಜ್ಯೋತಿಷ ಕಾರ್ಯ­ಕ್ರಮ ನಡೆಸಿಕೊಡುವ ಜ್ಯೋತಿಷಿಗಳನ್ನು ಈ ರೀತಿ ತರಾಟೆಗೆ ತೆಗೆದುಕೊಂಡಿದ್ದು ಖ್ಯಾತ ವಿಜ್ಞಾನಿ ಹಾಗೂ ಇಸ್ರೊ ಮಾಜಿ ಮುಖ್ಯಸ್ಥ ಪ್ರೊ.ಯು.ಆರ್‌.ರಾವ್‌.

ಬ್ರೇಕ್‌ಥ್ರೂ ಸೈನ್ಸ್‌ ಸೊಸೈಟಿ ಹಾಗೂ ಕೆಎಲ್‌ಇ ಸಂಸ್ಥೆಯ ಎಸ್‌.ನಿಜಲಿಂಗಪ್ಪ ಕಾಲೇಜು ಆಶ್ರಯದಲ್ಲಿ ನಗರದಲ್ಲಿ ಶುಕ್ರ­ವಾರ ಆರಂಭವಾದ ‘ಜನರ ವಿಜ್ಞಾನ ಹಬ್ಬ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತ­ನಾಡಿ­ದರು.

‘ಜಗತ್ತು ವೈಜ್ಞಾನಿಕವಾಗಿ ಬಹಳಷ್ಟು ಪ್ರಗತಿ ಸಾಧಿಸಿದೆ. ಮಾಹಿತಿ ತಂತ್ರಜ್ಞಾನ­ದಲ್ಲಿ ಕ್ರಾಂತಿಯಾಗಿದೆ. ಆದರೂ ಈ ಜ್ಯೋತಿಷಿಗಳು ಜನರನ್ನು ಮೂರ್ಖ­ರನ್ನಾಗಿ­ಸಲು ಪ್ರಯತ್ನಿ­ಸುತ್ತಿದ್ದಾರೆ. ಅಂಥ­ವ­ರಿಗೆ ಸುದ್ದಿ ವಾಹಿನಿಗಳು ಅವ­ಕಾಶ ಮಾಡಿಕೊಡುತ್ತಿವೆ. ಕ್ರಿಕೆಟ್‌, ರಾಜಕೀಯ, ಸಿನಿಮಾದ ಬಳಿಕ ಬೊಗಳೆ ಜ್ಯೋತಿಷಿಗಳಿಗೆ ಮಾಧ್ಯಮಗಳು ಹೆಚ್ಚಿನ ಆದ್ಯತೆ ನೀಡುತ್ತಿವೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಬಹುದೂರದಲ್ಲಿರುವ ಗ್ರಹಗಳು, ತಾರೆಗಳು ತಮ್ಮ ಕೆಲಸ ಬಿಟ್ಟು ಈ ಜ್ಯೋತಿಷಿಗಳ ಮಾತಿಗೆ ಕಿವಿಗೊಡು­ತ್ತ­ವೆಯೇ? ಜನರ ಕಷ್ಟಕ್ಕೂ, ಗ್ರಹಗಳಿಗೂ ಏನು ಸಂಬಂಧ? ಎಂದು ಪ್ರಶ್ನಿಸಿದರು.

ಬಾಹ್ಯಾಕಾಶ ಅಧ್ಯಯನ ಏಕೆ?: ‘ಜನ­ಸಂಖ್ಯೆ ಕ್ಷಿಪ್ರಗತಿಯಲ್ಲಿ ಹೆಚ್ಚುತ್ತಿದೆ. ಅದಕ್ಕೆ ಪೂರಕವಾಗಿ ಆಹಾರದ ಉತ್ಪಾ­ದನೆ ಆಗುತ್ತಿಲ್ಲ. ಮುಂದಿನ 200 ವರ್ಷಗಳಲ್ಲಿ ಎಲ್ಲಾ ಸಂಪನ್ಮೂಲಗಳು ಖಾಲಿಯಾಗಲಿವೆ. ಆಗ ಬಾಹ್ಯಾಕಾಶ ವಿಜ್ಞಾನ ನೆರವಿಗೆ ಬರಬಹುದು. ಮಂಗಳಗ್ರಹ ಹಾಗೂ ಚಂದ್ರನಲ್ಲಿ ದಲ್ಲಿ ಸಂಪನ್ಮೂಲಗಳನ್ನು ಹುಡುಕಬಹುದು. ವಿಜ್ಞಾನ ಹಾಗೂ ತಂತ್ರಜ್ಞಾನದಿಂದ ಮಾತ್ರ ಸಂಪನ್ಮೂಲ ಕಂಡುಕೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ ಯುವ ಪೀಳಿಗೆ ವಿಜ್ಞಾನಕ್ಕೆ ಒತ್ತು ನೀಡಿ ಹೊಸ ಹೊಸ ಸಂಶೋಧನೆ ನಡೆಸಬೇಕು’ ಎಂದರು.

ಕಾರ್ಯಕ್ರಮದಲ್ಲಿ ಎಸ್‌.­ನಿಜ­ಲಿಂಗಪ್ಪ ಪದವಿ ಕಾಲೇಜಿನ ಪ್ರಾಂಶು­ಪಾಲ ಡಾ.ಸುರೇಶ್‌ ಸಿ. ಹೆಗಡಿ, ಪಿಯು ಕಾಲೇಜಿನ ಪ್ರಾಂಶುಪಾಲ ಪ್ರೊ. ಆರ್‌.­ವಿನಯ್‌ಕುಮಾರ್, ಬೆಂಗ­ಳೂರು ಜಿಲ್ಲೆ ಬ್ರೇಕ್‌ಥ್ರೂ ಸೈನ್ಸ್‌ ಸೊಸೈಟಿಯ ಅಧ್ಯಕ್ಷೆ ಕೆ.ಎಸ್‌.ರಜನಿ, ಸೊಸೈಟಿಯ ರಾಜ್ಯ ಸಂಚಾಲಕ ಸತೀಶ್‌ಕುಮಾರ್‌  ಅವರು ಇದ್ದರು.

ವಿಜ್ಞಾನಿಗಳು, ಪ್ರಾಧ್ಯಾ­ಪಕರು, ರಾಜ್ಯದ ವಿವಿಧ ಶಾಲಾ, ಕಾಲೇಜು ವಿದ್ಯಾರ್ಥಿ­ಗಳು ಪಾಲ್ಗೊಂಡಿದ್ದರು.
ಮಾದರಿಗಳ ಪ್ರದರ್ಶನ: ಈ ಹಬ್ಬದ ಅಂಗವಾಗಿ ಕಾಲೇಜಿನಲ್ಲಿ ವಿಜ್ಞಾನ ಮಾದರಿ­ಗಳ ಪ್ರದರ್ಶನ, ವಿಚಾರ­ಗೋಷ್ಠಿ ಹಾಗೂ ಛಾಯಾಚಿತ್ರ ಪ್ರದ­ರ್ಶನ ಆಯೋಜಿಸಲಾಗಿದೆ.

ಇಸ್ರೊ ವತಿಯಿಂದ ಭಾರತದ ಅನೇಕ ಉಪಗ್ರಹ ಹಾಗೂ ರಾಕೆಟ್‌ ಮಾದರಿ­ಯನ್ನು ಪ್ರದರ್ಶನಕ್ಕಿಡಲಾಗಿದೆ.

ಗಮನ ಸೆಳೆದ ಮಂಗಳ ನೌಕೆ ಮಾದರಿ:  ಸೆಪ್ಟೆಂಬರ್‌ 24ರಂದು ಮಂಗಳನ ಅಂಗಳದಲ್ಲಿ ಇಳಿಯಲಿರುವ ಮಂಗಳ ನೌಕೆ (ಮಾರ್ಸ್‌ ಆರ್ಬಿಟರ್‌  ಮಿಷನ್‌) ಮಾದ­ರಿಯು ಪ್ರದರ್ಶನ­ದಲ್ಲಿ ಎಲ್ಲರ ಗಮನ ಸೆಳೆಯಿತು. ಈ ನೌಕೆ ಹಾಗೂ ರಾಕೆಟ್‌ ಬಗ್ಗೆ ಮಕ್ಕಳಿಗೆ ಖುದ್ದಾಗಿ ಯು.­ಆರ್‌.­ರಾವ್‌ ಅವರು ಮಾಹಿತಿ ನೀಡಿದ್ದು ವಿಶೇಷ. ಮಕ್ಕಳು ಕೇಳಿದ ಗಂಭೀರ ಪ್ರಶ್ನೆಗಳಿಂದ ಅವರು ಅಚ್ಚರಿಗೆ ಒಳಗಾದರು.

2013ರ ನವೆಂಬರ್‌ 5ರಂದು ಪಿಎಸ್‌ಎಲ್‌ವಿ–ಸಿ 25  ವಾಹ­ಕದ (ರಾಕೆಟ್‌) ಮೂಲಕ ಉಡ್ಡಯನ ಮಾಡಲಾಗಿರುವ ಮಂಗಳ ನೌಕೆ  ಈಗ ಕೆಂಪು ಕಾಯದ ಸಮೀಪಕ್ಕೆ ಬಂದಿದೆ. ನೌಕೆಯು ಶೇಕಡಾ 80ರಷ್ಟು ದೂರ ಕ್ರಮಿಸಿದ್ದು, ಸೆಪ್ಟೆಂಬರ್‌ 24ರಂದು ಮಂಗ­ಳನ ಅಂಗಳದಲ್ಲಿ ಇಳಿಯಲಿದೆ ಎಂದು ಇಸ್ರೊ ವಿಜ್ಞಾನಿ ಬಿ.ಆರ್‌.­ಗುರುಪ್ರಸಾದ್‌ ಮಾಹಿತಿ ನೀಡಿದರು.

ಬಾಹ್ಯಾಕಾಶದಲ್ಲಿ ನಿವೇಶನಗಳಿವೆ...!
‘ರಾಜಕಾರಣಿಗಳು ಒಂದು ಮಾರ್ಗದ ಟಿಕೆಟ್‌ ಪಡೆದು ಬಾಹ್ಯಾಕಾಶಕ್ಕೆ ಹೋಗಬಹುದು. ಅಲ್ಲಿ ಬೇಕಾ­ದಷ್ಟು ನಿವೇಶನಗಳಿವೆ. ಅವು­ಗಳನ್ನು ತಮ್ಮ ಹೆಸರಿಗೆ ಬರೆಸಿ­ಕೊಳ್ಳ­ಬಹುದು’ ಎಂದು ಯು. ಆರ್‌.­­ರಾವ್‌ ಹಾಸ್ಯಮಿಶ್ರಿತ ಧ್ವನಿ ಯಲ್ಲಿ ಹೇಳಿ­ದಾಗ ಸಭಾಂಗಣ ದಲ್ಲಿ ನಗೆಯ ಬುಗ್ಗೆ ಎದ್ದಿತು.

‘ಹೆಚ್ಚಿನ ಅಧ್ಯಯನ ನಡೆಸಲು ಬಾಹ್ಯಾಕಾಶ ಯಾನ ಕೈಗೊಳ್ಳ ಬೇಕು ಎಂದು ಎಂ.ಎಸ್ಸಿ ಓದುವಾಗ ಹೇಳಿ­ದ್ದರೆ ನನ್ನನ್ನು ಹುಚ್ಚಾಸ್ಪತ್ರೆಗೆ ಸೇರಿ­ಸು­ತ್ತಿದ್ದರು. ಈಗ ನೋಡಿ ಎಷ್ಟೊಂದು ಅಭಿವೃದ್ಧಿಯಾಗಿದೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT