ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೀಕೆಯ ಅಗ್ನಿಕುಂಡ ದಾಟಿ ಬರುವೆ

‘ಸರಸ್ವತಿ ಸಮ್ಮಾನ್‌’ ಪುರಸ್ಕಾರ: ಅಭಿನಂದನೆ ಸ್ವೀಕರಿಸಿ ಮೊಯಿಲಿ ಹೇಳಿಕೆ
Last Updated 29 ಮಾರ್ಚ್ 2015, 20:20 IST
ಅಕ್ಷರ ಗಾತ್ರ

ಬೆಂಗಳೂರು: ‘ನಾನು ‘ಶ್ರೀರಾಮಾಯಣ ಮಹಾನ್ವೇಷಣಂ’ ಮಹಾಕಾವ್ಯವನ್ನು ಯಾರ ಬಳಿಯೋ ಬರೆಸಿದ್ದೇನೆ ಎನ್ನುವ ಟೀಕೆ ಕೇಳಿಬಂದಿದೆ. ವಿದ್ವಾಂಸರ ಆಶೀರ್ವಾದದ ಫಲವಾಗಿ ನಾನು ಪಡೆದ ಜ್ಞಾನದಿಂದ ಇಂತಹ ಸಂಘರ್ಷದ ಅಗ್ನಿಕುಂಡವನ್ನು ದಾಟಿ ಬರುತ್ತೇನೆ’ ಎಂದು ಸಂಸದ ವೀರಪ್ಪ ಮೊಯಿಲಿ ಹೇಳಿದರು.

‘ಸರಸ್ವತಿ ಸಮ್ಮಾನ್‌’ ಪುರಸ್ಕಾರಕ್ಕೆ ಪಾತ್ರರಾದ ಮೊಯಿಲಿ ಅವರಿಗೆ ಚಿತ್ರಕಲಾ ಪರಿಷತ್‌ನಲ್ಲಿ ಭಾನುವಾರ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

‘ಸಂಘರ್ಷವಿಲ್ಲದೆ ಬದುಕೇ ಇಲ್ಲ. ಹಿಂದೆಯೂ ಇಂತಹ ಸಂಘರ್ಷದ ಕಾದ ಕುಲುಮೆಯಿಂದ ಎದ್ದು ಬಂದಿದ್ದೇನೆ. ಈಗ ಟೀಕೆಯ ಅಗ್ನಿಕುಂಡವನ್ನೂ ಯಶಸ್ವಿಯಾಗಿ ದಾಟುತ್ತೇನೆ’ ಎಂದು ಭಾವಾವೇಶದಿಂದ ನುಡಿದರು.

‘ಹಾಗೆ ನೋಡಿದರೆ ಈ ಬದುಕು ನನ್ನ ಬದುಕೇ ಅಲ್ಲ. ಅಮ್ಮನಿಂದ ಹಿಡಿದು ಉದ್ಧಾಮ ಪಂಡಿತರವರೆಗೆ ಒಬ್ಬೊಬ್ಬರಿಂದ ಒಂದೊಂದು ಸಂಗತಿ ಕಲಿತಿದ್ದೇನೆ. ಸಾಹಿತಿಗಳ ಸಹವಾಸದಲ್ಲಿ ನಾನು ಪಡೆದ ಜ್ಞಾನ ಸಾಗರದಲ್ಲಿ ಯಾವ ನೀರು ಎಲ್ಲಿಯದು ಎಂಬುದು ಗುರುತಿ ಸಲು ಆಗದಂತೆ ನನ್ನಲ್ಲಿ ಬೆರೆತು ಹೋಗಿದೆ’ ಎಂದು ಪ್ರತಿಪಾದಿಸಿದರು.

ಮುಖ್ಯಾಂಶಗಳು

*‘ಸಿರಿಮುಡಿ ಪರಿಕ್ರಮಣ’ ಕೃತಿ ಆಧರಿಸಿ ಯಕ್ಷಗಾನ ಪ್ರದರ್ಶನ ನಡೆಯಿತು
* ‘ಶ್ರೀರಾಮಾಯಣ ಮಹಾನ್ವೇಷಣಂ’ ಕಾವ್ಯದ ಆಯ್ದಭಾಗ ವಾಚನ

‘ಕಾಲೇಜು ದಿನಗಳಲ್ಲೇ ನಾನು ‘ಪುಷ್ಪತನಯ’ ಎಂಬ ಕಾವ್ಯನಾಮದಿಂದ ಕವನ ಬರೆಯುತ್ತಿದ್ದೆ. ಅವುಗಳನ್ನೆಲ್ಲ ಸಂಗ್ರಹಿಸಿ ಪ್ರಕಟಿಸಿದ್ದರೆ ದೊಡ್ಡ ಸಂಕಲನ ಆಗುತ್ತಿತ್ತು. ಆ ಕಾವ್ಯಕೃಷಿ ಸ್ವಭಾವ ಹಾಗೇ ಬೆಳೆದುಬಂದಿದೆ’ ಎಂದು ಹೇಳಿದರು.

‘ನಮ್ಮಲ್ಲಿ ವ್ಯಕ್ತಿಪೂಜೆಗೆ ಪ್ರಾಮುಖ್ಯ ಹೆಚ್ಚು. ಸಮಷ್ಟಿ ಪ್ರಜ್ಞೆಯೇ ಇಲ್ಲ. ಸಮಷ್ಟಿ ವಿಷಯ ಬಂದಾಗ ನಾವು ಅಭಿಮಾನ ಶೂನ್ಯರಾಗುತ್ತೇವೆ’ ಎಂದು ಹೇಳಿದ ಅವರು, ‘ನಾಡಿನ ಎಲ್ಲ ವಿದ್ವತ್‌ ಜನರ ಪರವಾಗಿ ನಾನು ‘ಸರಸ್ವತಿ ಸಮ್ಮಾನ್‌’ ಪ್ರಶಸ್ತಿ ಸ್ವೀಕರಿಸಿದ್ದೇನೆ’ ಎಂದು ವಿನಯದಿಂದ ನುಡಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಪ್ರೊ. ಸಿ.ಎನ್‌. ರಾಮಚಂದ್ರನ್‌, ‘ಕನ್ನಡ ಭಾಷೆಯ ಅರ್ಥವಂತಿಕೆ ಹಾಗೂ ಜೀವಂತಿಕೆಗೆ ದೊರೆತ ಪ್ರಶಸ್ತಿ ಇದಾಗಿದೆ’ ಎಂದು ಹೆಮ್ಮೆಯಿಂದ ಹೇಳಿದರು.

‘ಸಮಾಜದ ಅಂಚಿನಲ್ಲಿರುವ ಜನರ ಬದುಕಿನ ವಿಶ್ಲೇಷಣೆಯೇ ಮೊಯಿಲಿ ಅವರ ಸಾಹಿತ್ಯದ ಜೀವಾಳವಾಗಿದೆ. ಮಹಾಕಾವ್ಯದ ಮೂಲಕ ಅವರು ಆದರ್ಶ ರಾಜ್ಯದ ಸ್ವರೂಪವನ್ನು ಹುಡುಕುವ ಯತ್ನ ಮಾಡಿದ್ದಾರೆ’ ಎಂದು ಕೊಂಡಾಡಿದರು.

ಹಿರಿಯ ಸಾಹಿತಿ ಡಾ. ಸಿ.ಪಿ. ಕೃಷ್ಣಕುಮಾರ್‌, ‘ಕುವೆಂಪು ಅವರ ‘ಶ್ರೀರಾಮಾಯಣ ದರ್ಶನಂ’ ಮೀರಿಸು ವಂತಹ ಮಹಾಕಾವ್ಯ ಇದುವರೆಗೆ ಕನ್ನಡ ದಲ್ಲಿ ಬಂದಿಲ್ಲ. ಉಳಿದ ಮಹಾಕಾವ್ಯಗಳಲ್ಲಿ ಮೊಯಿಲಿ ಅವರ ‘ಶ್ರೀರಾಮಾಯಣ ಮಹಾನ್ವೇಷಣಂ’ ಪ್ರಮುಖವಾಗಿದೆ. ಕುವೆಂಪು ಅವರ ಕಾವ್ಯದ ಆಶಯಕ್ಕೂ ಪೂರಕವಾಗಿದೆ’ ಎಂದು ಅಭಿಪ್ರಾಯಪಟ್ಟರು.

‘ವರ್ತಮಾನದ ಆವಿಷ್ಕಾರವೇ ಮೊಯಿಲಿ ಅವರ ಕಾವ್ಯದ ಲಕ್ಷಣ ವಾಗಿದ್ದು, ಅಲ್ಲಿ ಕಲ್ಪನಾವಿಲಾಸ ಅಷ್ಟಾಗಿ ಕಾಣುವುದಿಲ್ಲ’ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಸ್‌.ರಾಜೇಂದ್ರಬಾಬು, ‘ಪ್ರಶಸ್ತಿಗೆ ಮೊಯಿಲಿ ಸಂಪೂರ್ಣವಾಗಿ ಅರ್ಹರು’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಾಲತಿ ಮೊಯಿಲಿ, ದೇಜಗೌ, ಡಿ.ಕೆ.ಚೌಟ, ಬಿ.ಎಲ್‌. ಶಂಕರ್‌ ಮತ್ತು ಪ್ರೊ. ಕೆ.ಇ.ರಾಧಾಕೃಷ್ಣ ವೇದಿಕೆ ಮೇಲಿದ್ದರು. ಹಿರಿಯ ಸಾಹಿತಿಗಳು, ರಾಜಕೀಯ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿದ್ದರು.

ರಾಜಕೀಯಕ್ಕೂ ಸಾಹಿತ್ಯಕ್ಕೂ ಮಧುರ ಸಂಬಂಧವಿಲ್ಲ. ಆದರೆ, ವೀರಪ್ಪ ಮೊಯಿಲಿ ಅದಕ್ಕೆ ಅಪವಾದ. ಅವರು ಮೊದಲು ಕವಿ, ಆಮೇಲೆ ರಾಜಕಾರಣಿ
ಸಿ.ಪಿ.ಕೃಷ್ಣಕುಮಾರ್‌, ಸಾಹಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT