ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೀ ಅಂಗಡಿಗಾಗಿ ಧರೆಗಿಳಿದ ಗೊಂಬೆ...

Last Updated 19 ನವೆಂಬರ್ 2015, 19:38 IST
ಅಕ್ಷರ ಗಾತ್ರ

‘‘ಕಾಲೇಜು ದಿನಗಳಲ್ಲಿ ಗಗನಸಖಿಯಾಗಿ ಕೆಲಸ ಆರಂಭಿಸಿದೆ. ಅದಾದ ನಂತರ ಪ್ರತಿಷ್ಠಿತ ಖಾಸಗಿ ಕಂಪೆನಿಗಳಲ್ಲಿ ಕೆಲಸ ಮಾಡಿದೆ. ಈಗ ಸಿನಿಮಾ ಕ್ಷೇತ್ರಕ್ಕೆ ಕಾಲಿರಿಸಿದ್ದೇನೆ. ಹಿಂದಿನ ಉದ್ಯೋಗದಂತೆ ನಟನೆಯಲ್ಲೂ ಒಮ್ಮೆ ಪ್ರಯೋಗ ಮಾಡಿಬಿಡೋಣ ಎಂದುಕೊಂಡೇ ಚಂದನವನಕ್ಕೆ ಬಂದಿದ್ದು. ಆದರೆ ಈಗ ಇಲ್ಲಿಯೇ ಇದ್ದುಬಿಡುವಷ್ಟು ಕೈ ತುಂಬ ಕೆಲಸಗಳಿವೆ’’.

ಹೀಗೆ ಸಂತಸದ ಲಹರಿಯೊಂದಿಗೆ ನಗುವನ್ನೂ ತುಳುಕಿಸುತ್ತಾರೆ ಅರ್ಚನಾ ಸಿಂಗ್. ತಂದೆ ರಜಪೂತ್, ತಾಯಿ ಆಂಧ್ರದವರು. ಅರ್ಚನಾ ಹುಟ್ಟಿದ್ದು–ಬೆಳೆದಿದ್ದು ಬೆಂಗಳೂರಲ್ಲಿ. ಹಾಗಾಗಿ ಅವರಿಗೆ ಕನ್ನಡ ಸುಲಿದ ಬಾಳೆಯ ಹಣ್ಣು.

ವಿಮಾನ ಹಾರಾಟ ಬೇಡವೆನಿಸಿ, ಮಾಡೆಲಿಂಗ್ ಮಾಡುವ ಆಸೆಯಿಂದ ಬಣ್ಣದ ಲೋಕಕ್ಕೆ ಕಾಲಿಟ್ಟ ಅರ್ಚನಾ ಮಾಡೆಲ್ ಆಗುವ ಮುನ್ನವೇ ಚಿತ್ರರಂಗದತ್ತ ಹೊರಳಿದವರು. ಅವರ ಚೆಲುವನ್ನು ಕಂಡು ಮೊದಲು ಅವಕಾಶ ನೀಡಿದ್ದು ‘ಮಾಮು ಟೀ ಅಂಗಡಿ’ ಚಿತ್ರದ ನಿರ್ದೇಶಕ ಪರಮೇಶ್. ಎರಡು ವರ್ಷಗಳ ಹಿಂದೆಯೇ ನಿರ್ಮಾಣವಾಗಿದ್ದ ‘ಮಾಮು ಟೀ ಅಂಗಡಿ’ ಇಂದು (ನ. 20) ತೆರೆಗೆ ಬರುತ್ತಿದೆ. ಮೊದಲ ಚಿತ್ರವಾದ್ದರಿಂದ ಅರ್ಚನಾ ಕೂಡ ಹೆಚ್ಚಿನ ನಿರೀಕ್ಷೆಯಲ್ಲಿದ್ದಾರೆ.

ಬಣ್ಣದ ಲೋಕಕ್ಕೆ ಕಾಲಿಡುವುದಕ್ಕೆ ಅರ್ಚನಾಗೆ ಮನೆಯಲ್ಲಿ ಪ್ರೋತ್ಸಾಹ ಇರಲಿಲ್ಲ. ಆದರೆ, ಒಳ್ಳೆಯದು–ಕೆಟ್ಟದ್ದನ್ನು ನಿರ್ಧರಿಸುವ ಶಕ್ತಿ ಮಗಳಿಗಿದೆ ಎಂಬ ಧೈರ್ಯದಲ್ಲಿ ಹೆಚ್ಚು ವಿರೋಧವೂ ವ್ಯಕ್ತವಾಗಿಲ್ಲ. ಅದಕ್ಕಿಂತಲೂ ಹೆಚ್ಚಾಗಿ, ‘ಮಗಳು ಆಕಾಶದಲ್ಲಿ ಹಾರಾಡುವ ಉದ್ಯೋಗಕ್ಕಿಂತ ನೆಲದ ಮೇಲೆಯೇ ಯಾವುದಾದರೂ ಕೆಲಸ ಮಾಡಿಕೊಂಡಿರಲಿ’ ಎಂಬ ಆಸೆಯೂ ಹೆತ್ತವರಿಗಿತ್ತು.

‘ಮಾಮು ಟೀ ಅಂಗಡಿ’ಯಲ್ಲಿ ಇರುವವರು ಹೊಸಬರೇ. ನಾಲ್ಕು ನಾಯಕರು, ಮೂವರು ನಾಯಕಿಯರು ಚಿತ್ರದಲ್ಲಿದ್ದಾರೆ. ಚಿತ್ರದ ಕಥಾಹಂದರ ಸ್ನೇಹ. ಯುವ ಸಮುದಾಯವನ್ನೇ ಗುರಿಯಾಗಿಟ್ಟುಕೊಂಡಿರುವ ‘ಮಾಮು ಟೀ ಅಂಗಡಿ’ಯಲ್ಲಿ ಭರಪೂರ ಹಾಸ್ಯ, ಭಾವುಕ ಸನ್ನಿವೇಶಗಳೆಲ್ಲವೂ ಇವೆ ಎನ್ನುತ್ತಾರೆ ಅರ್ಚನಾ.

ಇಲ್ಲಿ ಅರ್ಚನಾ ಸೊಕ್ಕಿನ ಹುಡುಗಿ. ತನ್ನ ನೈಜ ಗುಣಕ್ಕಿಂತ ಪಾತ್ರ ಭಿನ್ನ ಎನ್ನಲು ಮಾತ್ರ ಅವರು ಮರೆಯುವುದಿಲ್ಲ. ಪಾತ್ರದ ಬಹುತೇಕ ಸನ್ನಿವೇಶಗಳನ್ನು ಕಾರಿನಲ್ಲಿಯೇ ಕಳೆಯುವ ಅರ್ಚನಾ ಮಾಮು ಟೀ ಅಂಗಡಿಯ ಎದುರು ಕಾಣಿಸಿಕೊಳ್ಳುವುದು ಕ್ಲೈಮ್ಯಾಕ್ಸ್‌ನಲ್ಲಿ ಮಾತ್ರ. ಅಂದರೆ ಟೀ ಅಂಗಡಿಗೂ ಅವರಿಗೂ ಹೆಚ್ಚಿನ ನಂಟಿಲ್ಲ.

ಎರಡನೇ ನಾಯಕಿಯಾಗಿ ಕಾಣಿಸಿಕೊಂಡಿರುವ ಅರ್ಚನಾ ಪಾತ್ರಕ್ಕೆ ನೆಗೆಟಿವ್ ಶೇಡ್ ಇದೆ. ಮೊದಲ ಚಿತ್ರದಲ್ಲೇ ಈ ರೀತಿ ಕಾಣಿಸಿಕೊಳ್ಳುವುದು ಮುಂದೆ ತೊಂದರೆಯಾಗಬಹುದು ಎಂಬ ನಕಾರಾತ್ಮಕ ಚಿಂತನೆಗಳು ಅವರನ್ನು ಕಾಡಿಲ್ಲ. ನಾಯಕಿಯೇ ಆಗಬೇಕೆಂಬ ಹಂಬಲ ಅವರಿಗಿಲ್ಲ. ಪಾತ್ರದಲ್ಲಿ ಗಟ್ಟಿತನವಿದ್ದರೆ ಖಳ ನಾಯಕಿಯಾಗಲೂ ಸೈ. ಅಷ್ಟಕ್ಕೂ ಅವರಿಗೆ ಅಂಥ ಪಾತ್ರಗಳೆಂದರೆ ಇಷ್ಟ. ‘ಮರ ಸುತ್ತುವ ಪಾತ್ರಗಳನ್ನು ಯಾರು ಬೇಕಾದರೂ ಮಾಡುತ್ತಾರೆ, ಸವಾಲಿನ ಪಾತ್ರ ಮಾಡಬೇಕೆಂಬುದೇ ನನ್ನ ಕನಸು’ ಎನ್ನುತ್ತಾರೆ.

ಹಾರರ್, ಥ್ರಿಲ್ಲರ್ ಚಿತ್ರಗಳ ನೆಗೆಟಿವ್ ಪಾತ್ರಗಳಲ್ಲಿ ಅಭಿನಯಕ್ಕೆ ಹೆಚ್ಚು ಅವಕಾಶವಿರುತ್ತವೆ ಎಂಬ ಕಾರಣಕ್ಕೆ ಅಂಥ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಆಸೆ ಅವರದು. ಸದ್ಯ ನಡೆಯುತ್ತಿರುವುದು ಕೂಡ ಹಾರರ್ ಥ್ರಿಲ್ಲರ್ ಟ್ರೆಂಡ್. ಅಂಥ ಚಿತ್ರಗಳ ಅವಕಾಶ ಸಿಕ್ಕರೆ ಅವರಿಗೆ ಖುಷಿ. ಈಗಾಗಲೇ ತಮಿಳಿನ ‘ಮೋನಿಕಾ’ ಚಿತ್ರದಲ್ಲಿ ಅಂಥ ಪಾತ್ರವನ್ನೂ ನಿರ್ವಹಿಸಿದ್ದಾರೆ. ಅರ್ಚನಾರ ಮೊದಲ ಚಿತ್ರ ತೆರೆಕಾಣುವ ಮುನ್ನವೇ ನಾಲ್ಕೈದು ಅವಕಾಶಗಳು ಹುಡುಕಿಕೊಂಡು ಬಂದಿವೆ. ತಮಿಳಿನಲ್ಲೇ ಮೂರು ಚಿತ್ರಗಳಿವೆ.

ಅಲ್ಲಿ ನಾಯಕಿ ಪ್ರಧಾನ ಪಾತ್ರವನ್ನೂ ಗಿಟ್ಟಿಸಿದ್ದಾರೆ. ಕನ್ನಡದಲ್ಲಿ ‘ನಮ್ ಮುತ್ತು’, ‘ಟ್ಯೂಬ್ ಲೈಟ್’ ಚಿತ್ರಗಳಲ್ಲ ತೊಡಗಿಕೊಂಡಿದ್ದಾರೆ. ಕೆಲವು ತಮಿಳು ಚಿತ್ರಗಳು ಚರ್ಚೆಯ ಹಂತದಲ್ಲಿದೆ. ವಿಶೇಷವೆಂದರೆ ಅವರು ಕೆಲಸ ಮಾಡಿರುವುದೆಲ್ಲ ಹೊಸ ತಂಡದೊಂದಿಗೇ.

ನಟನೆಯ ತರಬೇತಿಯನ್ನೇನೂ ಪಡೆಯದಿದ್ದರೂ ಅರ್ಚನಾಗೆ ಡ್ಯಾನ್ಸ್ ಚಿಕ್ಕಂದಿನಿಂದಲೇ ಗೊತ್ತಿತ್ತು. ‘ಮಾಮು ಟೀ ಅಂಗಡಿ’ ಚಿತ್ರೀಕರಣ ಆರಂಭವಾದಾಗ ಅವರಲ್ಲಿ ಸ್ವಲ್ಪ ಅಳುಕಿತ್ತಾದರೂ ಹೊಸಬರೊಂದಿಗೆ ಬೆರೆಯುವುದು ಹೆಚ್ಚೇನು ಕಷ್ಟವಾಗಲಿಲ್ಲ. ವೇದಿಕೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದ ಅನುಭವವೂ ಅವರ ಸಹಾಯಕ್ಕೆ ಬಂದಿದೆ. ‘ಕಮರ್ಷಿಯಲ್ ನಾಯಕಿಯಾಗಿಯೇ ಗುರ್ತಿಸಿಕೊಳ್ಳಬೇಕೆಂಬುದಿಲ್ಲ. ನನ್ನ ವೃತ್ತಿ ಜೀವನಕ್ಕೆ ಒಳ್ಳೆಯ ಮೈಲೇಜ್ ನೀಡುವಂತಿದ್ದರೆ ಬ್ರಿಡ್ಜ್, ಕಲಾತ್ಮಕ ಚಿತ್ರಗಳಲ್ಲಿ ಕಾಣಿಸಿಕೊಳ್ಳಲೂ ಅಭ್ಯಂತರವಿಲ್ಲ’ ಎನ್ನುತ್ತಾರೆ.

ಸಿನಿಮಾ ಅವರ ನಾಲ್ಕನೇ ವೃತ್ತಿಕ್ಷೇತ್ರ. ‘ನೋಡುವವರಿಗೆ ಸಿನಿಮಾ ವರ್ಣರಂಜಿತವಾಗಿ ಕಾಣುತ್ತದಾದರೂ ಇಲ್ಲಿ ತುಂಬಾ ಕಷ್ಟವಿದೆ’ ಎನ್ನುವ ಅವರು ಈ ವೃತ್ತಿಯನ್ನು ಗೌರವಿಸುತ್ತಾರೆ. ‘ಇಲ್ಲಿ ಖುಷಿಯಿರುವಷ್ಟು ದಿನ ಇರುತ್ತೇನೆ’ ಎನ್ನುತ್ತಲೇ ಮುಂದೆ ಕಿರುತೆರೆಗೆ ಹಾರುವ ಮುನ್ಸೂಚನೆಯನ್ನೂ ನೀಡುತ್ತಾರೆ.
*
‘ಮಾಮು ಟೀ ಅಂಗಡಿ’ಯಲ್ಲಿ ಶ್ರೀನಗರ ಕಿಟ್ಟಿ, ಪ್ರೇಮ್‌, ಅಜೇಯರಾವ್ ಹಾಗೂ ಯೋಗೀಶ್ ಕಾಣಿಸಿಕೊಂಡಿದ್ದಾರೆ, ಹಾಡನ್ನೂ ಹಾಡಿದ್ದಾರೆ. ಇದು ಚಿತ್ರಕ್ಕೆ ಧನಾತ್ಮಕವಾಗಿ ಪರಿಣಮಿಸುವ ನಿರೀಕ್ಷೆ ಅರ್ಚನಾರದ್ದು. ಇಂಥ ಜನಪ್ರಿಯ ನಟರು ಹೊಸಬರ ಚಿತ್ರದಲ್ಲಿ ಕಾಣಿಸಿಕೊಂಡು ಪ್ರೋತ್ಸಾಹಿಸುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಅರ್ಚನಾ ಗುರ್ತಿಸುತ್ತಾರೆ.
*
ಚಹಾ ಅಂಗಡಿಯಲ್ಲಿ ಸಂಬಂಧಗಳ ಘಮ
ಗೆಳೆತನ, ತಂದೆ– ಮಗನ ಸಂಬಂಧ ಹಾಗೂ ಮೌಲ್ಯಗಳನ್ನು ತೆರೆದಿಡುವ ‘ಮಾಮು ಟೀ ಅಂಗಡಿ’ ಚಿತ್ರ ತೆರೆ ಕಾಣಲು ಸಿದ್ಧವಾಗಿದೆ. ‘2ವರ್ಷಗಳಿಂದಲೂ ಕುತೂಹಲದಿಂದ ಕಾಯುತ್ತಿದ್ದ ನಮಗೆ ಪ್ರೇಕ್ಷಕರು ನೀಡುವ ಪ್ರತಿಕ್ರಿಯೆ ಬಗ್ಗೆ ಕಾತರವಿದೆ’ ಎಂದ ನಿರ್ದೇಶಕ ಪರಮೇಶ್‌ ಅವರಲ್ಲಿ ಚಿತ್ರದ ಬಿಡುಗಡೆಯ ಪುಳಕ ಎದ್ದು ಕಾಣುತ್ತಿತ್ತು.


ನಿರ್ದೇಶನಕ್ಕಿಳಿದಿರುವ ಪರಮೇಶ್‌ಗೆ ಸ್ಟಾರ್‌ ನಟರ ಜತೆ ಹೆಚ್ಚು ಒಡನಾಟವಿದೆ. ಅದು ‘ಟೀ ಅಂಗಡಿ’ಯಲ್ಲೂ ಮುಂದುವರಿದಿದೆ. ಹೀಗಾಗಿ ಶ್ರೀನಗರ ಕಿಟ್ಟಿ, ಪ್ರೇಮ್‌, ಅಜೇಯರಾವ್ ಹಾಗೂ ಯೋಗೀಶ್ ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ; ಜತೆಗೆ ಒಂದು ಹಾಡಿಗೆ ದನಿಗೂಡಿಸಿದ್ದಾರೆ. ‘ನಾಲ್ಕು ಸ್ಟಾರ್ ಕಲಾವಿದರನ್ನು ಒಂದೇ ಕಡೆ ಸೇರಿಸುವ ನಮ್ಮ ಪ್ರಯತ್ನ ಸಫಲವಾಗಿದೆ. ಇದು ಚಿತ್ರದ ಯಶಸ್ಸಿಗೆ ಪೂರಕವಾಗಲಿದೆ’ ಎನ್ನುತ್ತಾರೆ ಪರಮೇಶ್.

‘ಡ್ಯಾನ್ಸ್ ಇಂಡಿಯಾ ಡ್ಯಾನ್ಸ್’ ಎಂಬ ರಿಯಾಲಿಟಿ ಷೋದಲ್ಲಿ ವಿಜೇತರಾದ ಕನ್ನಡಿಗ ವರುಣ್‌ಕುಮಾರ್ ‘ಟೀ ಅಂಗಡಿ’ಗೆ ನಾಯಕ. ಅಭಿಷೇಕ್, ರಿತೇಶ್ ಹಾಗೂ ಮಹೇಶ್‌ರಾಜ್ ಇವರ ಜತೆಗೂಡಿದ್ದಾರೆ. ಸಂಗೀತಾ ಭಟ್, ರಾಶಿ ಸಿಂಗ್ ಹಾಗೂ ಅರ್ಚನಾ ಸಿಂಗ್ ನಾಯಕಿಯರು. ಬಹುತೇಕ ನಾಯಕ–ನಾಯಕಿಯರಿಗೆ ಇದು ಮೊದಲ ಸಿನಿಮಾ. ನಂದಕುಮಾರ್ ಕ್ಯಾಮೆರಾ ಹಿಡಿದಿದ್ದಾರೆ. ಐದು ಹಾಡುಗಳಿಗೆ ರಾಜೇಶ್ ರಾಮನಾಥ್ ಸಂಗೀತ ಸಂಯೋಜಿಸಿದ್ದಾರೆ. ನವೆಂಬರ್ 20ರಂದು ಸುಮಾರು 100 ಕೇಂದ್ರದಲ್ಲಿ ಚಿತ್ರವು ತೆರೆಗೆ ಬರಲಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT