ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆಕ್ಕಿಯ ಪರಿಸರ ಪ್ರೀತಿ

ಪಂಚರಂಗಿ
Last Updated 17 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

‘ಪರಿಸರ ಮಾಲಿನ್ಯ ಅತಿಯಾಗುತ್ತಿದೆ. ಆರೋಗ್ಯ ಕೆಡುತ್ತಿದೆ. ನೀರು ಪೋಲಾಗುವಿಕೆ ಮಿತಿಮೀರುತ್ತಿದೆ. ಹೀಗೇ ಆದರೆ ಮುಂದಿನ ಪೀಳಿಗೆಯ ಪಾಡೇನು...’ ಇದು ನಿತ್ಯದ ಗೋಳು. ಎಲ್ಲ ಗೊತ್ತಿದ್ದೂ ಪರಿಸರ ಸಂರಕ್ಷಣೆ ನಮ್ಮ ಹೊಣೆ ಎಂದು ಅರಿಯುವ ಬದಲು ಸರ್ಕಾರವನ್ನೇ ದೂಷಿಸುತ್ತೇವೆ. ಆದರೆ ಈ ಗುಂಪಿನಿಂದ ಹೊರಗಿದ್ದು, ಭಿನ್ನವಾಗಿ ಯೋಚಿಸಿದ ಟೆಕ್ಕಿ ವೆಂಕಟ್ ಭಾರದ್ವಾಜ್ ಅವರು ತಾವು ಗಮನಿಸಿದ ಇಂತಹ ಸಂದರ್ಭಗಳನ್ನೆಲ್ಲ ಒಟ್ಟಾಗಿಸಿ ಚಿತ್ರವೊಂದನ್ನು ನಿರ್ಮಿಸಿದ್ದಾರೆ.

ಚಿತ್ರದ ಹೆಸರು ‘ಎ ಡೇ ಇನ್‌ ದ ಸಿಟಿ’. ಶೀರ್ಷಿಕೆ ಇಂಗ್ಲಿಷ್ ಆದರೂ ಅಚ್ಚ ಕನ್ನಡದ ಚಿತ್ರ ಇದು. ಬೆಳಿಗ್ಗೆ ಆರು ಗಂಟೆಯಿಂದ ರಾತ್ರಿ ಹನ್ನೆರಡು ಗಂಟೆಯ ನಡುವೆ ನಗರವೊಂದರ ದಿನಚರಿಗಳು, ಪರಿಸರದ ಮೇಲೆ ಉಂಟಾಗುವ ಪರಿಣಾಮಗಳು, ಅದರಿಂದ ಎದುರಾಗುವ ಸಮಸ್ಯೆ ಪರಿಹರಿಸಿಕೊಳ್ಳಲು ನಾಗರಿಕರು, ರಾಜಕಾರಣಿಗಳು ಮತ್ತು ಅಧಿಕಾರಿಗಳು ಹೇಗೆ ಒಟ್ಟಾಗಿ ದುಡಿಯುತ್ತಾರೆ ಎಂಬ ಅಂಶಗಳನ್ನು ಚಿತ್ರದಲ್ಲಿ ನಿರೂಪಿಸಿದ್ದಾರಂತೆ ನಿರ್ದೇಶಕ ವೆಂಕಟ್ ಭಾರದ್ವಾಜ್. ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವುದರ ಜತೆಗೆ ಪ್ರಾಮಾಣಿಕ ಪ್ರಯತ್ನದ ನಡುವೆಯೂ ಕಡೆಗಣನೆಯಾಗುವ ಸರ್ಕಾರಿ ನೌಕರರ ಕುರಿತೂ ಚಿತ್ರದಲ್ಲಿ ಕಳಕಳಿ ವ್ಯಕ್ತಪಡಿಸಿದ್ದಾರೆ.

ವೆಂಕಟ್ ಅವರು ಕನ್ನಡ ಚಿತ್ರರಂಗದ ಹೆಸರಾಂತ ನಿರ್ಮಾಪಕ ಸಿ.ವಿ.ಶಿವಶಂಕರ್ ಅವರ ಮಗ. ಕಲಿತಿದ್ದು ಎಂಜಿನಿಯರಿಂಗ್. ವೃತ್ತಿ ಬದುಕಿನ ಆರಂಭದಲ್ಲಿ ವಿದೇಶಗಳನ್ನು ಸುತ್ತಿದರೂ ‘ನಮ್ಮೂರೇ ಹಿತ’ವೆಂದು ಬೆಂಗಳೂರಿಗೆ ಹಿಂತಿರುಗಿದರು. ಕಳೆದ ೨೦ ವರ್ಷಗಳಿಂದ ತಂತ್ರಜ್ಞಾನ, ಮ್ಯಾನೇಜ್‌ಮೆಂಟ್ ಹೀಗೆ ಜಂಜಾಟಗಳಲ್ಲಿ ಕಳೆದುಹೋದ ಅವರಿಗೆ, ಸೃಜನಶೀಲವಾಗಿ ಏನಾದರೂ ಮಾಡಬೇಕು ಅನ್ನಿಸಿದಾಗ ಹೊಳೆದಿದ್ದೇ ಕಿರುಚಿತ್ರಗಳ ನಿರ್ಮಾಣ. ನಾಲ್ಕು ವರ್ಷಗಳ ಕೆಳಗೆ ಗೆಳೆಯರೊಂದಿಗೆ ಸೇರಿ ‘ಅರ್ಥ್ ಅವೇರ್‌ನೆಸ್ ಫೌಂಡೇಶನ್’ ಆರಂಭಿಸಿದರು. ಈ ಸಂಸ್ಥೆ ಅಡಿಯಲ್ಲಿ ಶಿಕ್ಷಣ, ಪರಿಸರ ಹೀಗೆ ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವ ಕಿರುಚಿತ್ರಗಳನ್ನು ನಿರ್ಮಿಸಿದ್ದಾರೆ.

ಬಾಲ್ಯದಿಂದಲೇ ಸಾಮಾಜಿಕ ಕಾಳಜಿ ಬೆಳೆಸಿಕೊಂಡಿದ್ದ ವೆಂಕಟ್ ಅವರು ಶೂ ಪಾಲಿಶ್ ಮಾಡುವ ಬಾಲಕನೊಬ್ಬನ ಅಕ್ಷರ ಕಲಿಕೆಯ ತುಡಿತ ಬಣ್ಣಿಸುವ ‘ಪಾಲಿಶ್’ ಎಂಬ ಮೂಕಿ ಚಿತ್ರ, ನೀರಿನ ಮಹತ್ವ ಸಾರುವ ‘ಪಾನಿ ಕೇ ರಂಗ್’ ಕಿರುಚಿತ್ರಗಳನ್ನು ನಿರ್ಮಿಸಿದ್ದಾರೆ. ಶಿಕ್ಷಣಕ್ಕೆ ಸಂಬಂಧಿಸಿದಂತೆ ನಿರ್ಮಿಸಿದ ಒಂದು ನಿಮಿಷ ಅವಧಿಯ ‘ಸ್ಕೂಲ್ ಫೀಸ್’ ಚಿತ್ರವು ‘ವುಡ್‌ಪೆಕರ್’ ಚಿತ್ರೋತ್ಸವದಲ್ಲಿ ಪ್ರದರ್ಶನವಾಗಿದೆ. ಈಗ ಕಿರುಚಿತ್ರಗಳ ಸರಣಿಯಿಂದ ಹೊರಬಂದು ‘ಎ ಡೇ ಇನ್ ದ ಸಿಟಿ’ ಚಲನಚಿತ್ರವನ್ನು ನಿರ್ದೇಶಿಸಿದ್ದಾರೆ. ಅಮೆರಿಕದಲ್ಲಿರುವ ಕನ್ನಡಿಗ ಶಂಕರ್ ಚಿತ್ರದ ನಿರ್ಮಾಪಕರು.

‘ಎ ಡೇ ಇನ್ ದ ಸಿಟಿ’ ಚಿತ್ರಕಥೆಗೆ ಆರು ತಿಂಗಳು ತೆಗೆದುಕೊಂಡ ವೆಂಕಟ್, ಮೂರೇ ತಿಂಗಳಲ್ಲಿ ಚಿತ್ರೀಕರಣ ಪೂರ್ಣಗೊಳಿಸಿದ್ದಾರೆ. ಶನಿವಾರ ಮತ್ತು ಭಾನುವಾರ ಮಾತ್ರ ಚಿತ್ರೀಕರಣಕ್ಕೆ ಮೀಸಲಿಟ್ಟಿದ್ದರು. ಮಂಡ್ಯ, ಶ್ರೀರಂಗಪಟ್ಟಣ, ಮೈಸೂರು, ಮಹದೇವಪುರ, ಬೆಂಗಳೂರಿನಲ್ಲಿ ಚಿತ್ರಕ್ಕೆ ದೃಶ್ಯಗಳನ್ನು ಸೆರೆ ಹಿಡಿಯಲಾಗಿದೆ. ನಟ ಶ್ರೀನಿವಾಸ್ ಕಪ್ಪಣ್ಣ ಅವರು ಮುಖ್ಯಮಂತ್ರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿಶೇಷವೆಂದರೆ ೪೫ ಪಾತ್ರಗಳಲ್ಲಿ ೩6 ಪಾತ್ರಗಳನ್ನು ಟೆಕ್ಕಿಗಳೇ ನಿರ್ವಹಿಸಿದ್ದಾರೆ. 125 ನಿಮಿಷಗಳ ಅವಧಿಯ ಚಿತ್ರಕ್ಕೆ ಶಿವ ಸತ್ಯ ಮೂರು ಹಾಡುಗಳನ್ನು ಸಂಯೋಜಿಸಿದ್ದಾರೆ. ಈ ತಿಂಗಳ ಕೊನೆಯಲ್ಲಿ ಚಿತ್ರವನ್ನು ತೆರೆಗೆ ತರಲು ತಯಾರಿ ನಡೆದಿದೆ.

ಚಿತ್ರವು ಬೆಂಗಳೂರಿನ ಸಮಸ್ಯೆಗೆ ಸಂಬಂಧಿಸಿದ್ದೇ ಎಂದು ಕೇಳಿದರೆ, ‘ಪರಿಸರದ ಸಮಸ್ಯೆಗಳನ್ನು ಎದುರಿಸುವ ಎಲ್ಲ ನಗರಗಳಿಗೆ ಸಂಬಂಧಿಸಿದ್ದು’ ಎನ್ನುತ್ತಾರೆ ನಿರ್ದೇಶಕರು. ಹೆಸರಾಂತ ನಟರ ಲವ್ ಸ್ಟೋರಿಗಳೇ ನೆಲ ಕಚ್ಚುತ್ತಿರುವಾಗ ನೀವು ಸಂದೇಶ ನೀಡಲೆಂದೇ ಚಿತ್ರ ಮಾಡಿದ್ದೀರಿ. ಬಂಡವಾಳವಾದರೂ ವಾಪಸ್ ಬರುವ ನಂಬಿಕೆ ಇದೆಯೇ ಎಂದರೆ, ‘ಅದು ಗೊತ್ತಿಲ್ಲ. ಹಣಕ್ಕಾಗಿ ಮಾಡಿದ ಚಿತ್ರ ಇದಲ್ಲ. ಜಾಗೃತಿ ಮೂಡಿಸುವುದೇ ನಮ್ಮ ಉದ್ದೇಶ’ ಎಂದು ಗಂಭೀರವಾಗಿ ನುಡಿಯುತ್ತಾರೆ ಅವರು.

ಜನ ಚಿತ್ರವನ್ನು ನೋಡೇ ನೋಡುತ್ತಾರೆ ಎಂದು ವೆಂಕಟ್ ಹೇಳುವುದಿಲ್ಲ. ದೇಶ, ವಿದೇಶಗಳಲ್ಲಿ ನೀರಿನ ಸಮಸ್ಯೆಯನ್ನು ಕಣ್ಣಾರೆ ಕಂಡ ಅವರು, ‘ನಮ್ಮ ಕಥೆ ಒಳ್ಳೆಯ ಸಂದೇಶ ನೀಡುತ್ತದೆ. ಪ್ರೇಕ್ಷಕರಿಗೆ ಇಷ್ಟವಾಗುವುದರ ಜೊತೆಗೆ ಸರ್ಕಾರದ ಗಮನ ಸೆಳೆಯುವಲ್ಲಿಯೂ ಚಿತ್ರ ಯಶಸ್ವಿಯಾಗುತ್ತದೆ’ ಎಂಬ ನಂಬಿಕೆ ಇಟ್ಟುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT