ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆನಿಸ್‌: ಫೈನಲ್‌ಗೆ ಜೊಕೊವಿಚ್‌

ಪ್ರಶಸ್ತಿ ಸುತ್ತಿಗೆ ಪೇಸ್‌; ಸಾನಿಯಾಗೆ ನಿರಾಸೆ
Last Updated 30 ಜನವರಿ 2015, 19:30 IST
ಅಕ್ಷರ ಗಾತ್ರ

ಮೆಲ್ಬರ್ನ್‌ (ಎಎಫ್‌ಪಿ/ ಪಿಟಿಐ): ಹಾಲಿ ಚಾಂಪಿಯನ್‌ ಸ್ಟಾನಿಸ್ಲಾಸ್‌ ವಾವ್ರಿಂಕ ಒಡ್ಡಿದ ಸವಾಲನ್ನು ಮೆಟ್ಟಿನಿಂತ ವಿಶ್ವದ ಅಗ್ರ ರ್‍್ಯಾಂಕಿಂಗ್‌ನ ಆಟಗಾರ ನೊವಾಕ್‌ ಜೊಕೊವಿಚ್‌ ಆಸ್ಟ್ರೇಲಿಯಾ ಓಪನ್‌ ಗ್ರ್ಯಾಂಡ್‌ ಸ್ಲಾಮ್‌ ಟೆನಿಸ್‌ ಟೂರ್ನಿಯ ಫೈನಲ್‌ ಪ್ರವೇಶಿಸಿದರು.

ಶುಕ್ರವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಸೆಮಿಫೈನಲ್‌ನಲ್ಲಿ ಸರ್ಬಿಯದ ಜೊಕೊವಿಚ್‌ 7–6, 3–6, 6–4, 4–6, 6–0 ರಲ್ಲಿ ಸ್ವಿಟ್ಜರ್‌ ಲೆಂಡ್‌ನ ವಾವ್ರಿಂಕ ಅವರನ್ನು ಮಣಿಸಿ ದರು. ಮೂರು ಗಂಟೆ 30 ನಿಮಿಷಗಳ ಹೋರಾಟದ ಬಳಿಕ ಜೊಕೊವಿಚ್‌ ಗೆಲುವು ತಮ್ಮದಾಗಿಸಿಕೊಂಡರು.

ಹೋದ ವರ್ಷ ಇದೇ ಟೂರ್ನಿಯ ಕ್ವಾರ್ಟರ್‌ ಫೈನಲ್‌ನಲ್ಲಿ ಜೊಕೊವಿಚ್‌ ಅವರು ಸ್ವಿಸ್‌ ಆಟಗಾರನ ಎದುರು ಪರಾಭವಗೊಂಡಿದ್ದರು. ಆ ಸೋಲಿಗೆ ಈ ಬಾರಿ ಮುಯ್ಯಿ ತೀರಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಭಾನುವಾರ ನಡೆಯಲಿರುವ ಫೈನಲ್‌ನಲ್ಲಿ ಜೊಕೊವಿಚ್‌ ಮತ್ತು ಬ್ರಿಟನ್‌ನ ಆ್ಯಂಡಿ ಮರ್ರೆ ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿದ್ದಾರೆ.

ಫೈನಲ್‌ಗೆ ಪೇಸ್‌, ಸಾನಿಯಾಗೆ ನಿರಾಸೆ: ಲಿಯಾಂಡರ್‌ ಪೇಸ್‌ ಮತ್ತು ಸ್ವಿಟ್ಜರ್‌ಲೆಂಡ್‌ನ ಮಾರ್ಟಿನಾ ಹಿಂಗಿಸ್‌ ಜೋಡಿ ಮಿಶ್ರ ಡಬಲ್ಸ್‌ ವಿಭಾಗದ ಫೈನಲ್‌ ಪ್ರವೇಶಿಸಿತು.

ಶುಕ್ರವಾರ ನಡೆದ ಫೈನಲ್‌ನಲ್ಲಿ ಭಾರತ– ಸ್ವಿಟ್ಜರ್‌ಲೆಂಡ್‌ ಜೋಡಿ 7–5, 6–4 ರಲ್ಲಿ ತೈಪೆಯ ಸು ವೀ ಸೀ ಮತ್ತು ಉರುಗ್ವೆಯ ಪ್ಯಾಬ್ಲೊ ಕೆವಾಸ್‌ ಅವರನ್ನು ಮಣಿಸಿತು. ಈ ಮೂಲಕ ಪೇಸ್‌ 15ನೇ ಗ್ರ್ಯಾಂಡ್‌ ಸ್ಲಾಮ್‌ ಪ್ರಶಸ್ತಿ ಗೆಲ್ಲುವತ್ತ ಮತ್ತೊಂದು ಹೆಜ್ಜೆಯಿಟ್ಟರು.

ಆದರೆ ಭಾರತದ ಸಾನಿಯಾ ಮಿರ್ಜಾ ಮತ್ತು ಬ್ರೆಜಿಲ್‌ನ ಬ್ರೂನೊ ಸ್ವಾರೆಸ್‌ ಸೆಮಿಫೈನಲ್‌ನಲ್ಲಿ ಎಡವಿದರು. ಈ ಜೋಡಿ 6–3, 2–6, 8–10 ರಲ್ಲಿ ಕ್ರಿಸ್ಟಿನಾ ಮ್ಲಾಡೆನೊವಿಚ್‌ ಮತ್ತು ಡೇನಿಯಲ್‌ ನೆಸ್ಟರ್‌ ಕೈಯಲ್ಲಿ ಪರಾಭವಗೊಂಡಿತು. 

ಸೆರೆನಾ– ಶರಪೋವಾ ಫೈನಲ್‌ ಇಂದು: ಮಹಿಳೆಯರ ಸಿಂಗಲ್ಸ್‌ ವಿಭಾಗದ ಫೈನಲ್‌ ಪಂದ್ಯ ಶನಿವಾರ ನಡೆಯಲಿದ್ದು, ಅಮೆರಿಕದ ಸೆರೆನಾ ವಿಲಿಯಮ್ಸ್‌ ಮತ್ತು ರಷ್ಯಾದ ಮರಿಯಾ ಶರಪೋವಾ ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿದ್ದಾರೆ. ಸೆರೆನಾ ಅವರು ಶರಪೋವಾ ವಿರುದ್ಧ ಆಡಿದ ಕೊನೆಯ 15 ಪಂದ್ಯಗಳಲ್ಲೂ ಗೆಲುವು ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT