ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ವಿಟರ್‌ನಲ್ಲಿ ಮೆಹದಿ ಜತೆ ನಿರಂತರ ಸಂಪರ್ಕ

48 ಮಂದಿಯ ಹೇಳಿಕೆ ಪಡೆಯಲು ಪೊಲೀಸರ ಯತ್ನ
Last Updated 19 ಡಿಸೆಂಬರ್ 2014, 19:36 IST
ಅಕ್ಷರ ಗಾತ್ರ

ಬೆಂಗಳೂರು: ಇಸ್ಲಾಮಿಕ್ ಸ್ಟೇಟ್ (ಐ.ಎಸ್) ಭಯೋತ್ಪಾದನಾ ಸಂಘಟನೆಯ ‘@shami witness’ ಖಾತೆಯಲ್ಲಿ ಮೆಹದಿ ಮಸ್ರೂರ್‌ ಬಿಸ್ವಾಸ್ ಜತೆ ನಿರಂತರವಾಗಿ ಟ್ವೀಟ್ ಮಾಡುತ್ತಿದ್ದ 48 ಮಂದಿಯನ್ನು ಗುರುತಿಸಿರುವ ಸಿಸಿಬಿ ಪೊಲೀಸರು, ಮೊಬೈಲ್ ಮತ್ತು ಸಾಮಾಜಿಕ ಜಾಲ ತಾಣಗಳ ಮೂಲಕವೇ ಅವರ ಹೇಳಿಕೆ ದಾಖಲಿಸಿಕೊಳ್ಳುತ್ತಿದ್ದಾರೆ.

‘@shami witness’ ಖಾತೆ ಅನುಸರಿಸುತ್ತಿದ್ದ 17 ಸಾವಿರ ಮಂದಿಯ ವಿವರಗಳನ್ನೂ ಪರಿಶೀಲಿಸ­ಲಾ­ಗಿದೆ. ಅದರಲ್ಲಿ 48 ಮಂದಿ ನಿತ್ಯ ಮೆಹದಿ ಜತೆ ಟ್ವಿಟರ್ ಮೂಲಕ ಸಂವಹನ ನಡೆಸಿರುವುದು ಗೊತ್ತಾಗಿದೆ. ಹೀಗಾಗಿ ಅವರ ಹೇಳಿಕೆಯನ್ನು ಪಡೆಯುವ ಕಾರ್ಯ ಪ್ರಗತಿಯಲ್ಲಿದೆ. ಈವರೆಗೆ 11 ಮಂದಿ  ಸಂಪ­ರ್ಕಕ್ಕೆ ಸಿಕ್ಕಿ­ದ್ದಾರೆ ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದರು.

ಭಾಷಾ ತಜ್ಞರ ನೆರವು: ‘ಮೆಹದಿ ಮಾಡಿದ್ದ 1.2 ಲಕ್ಷ ಟ್ವೀಟ್‌ಗಳು ಮತ್ತು ಆತನ ಮೇಲ್‌ನಿಂದ ರವಾನೆ­ಯಾಗಿರುವ ಬಹುತೇಕ ಸಂದೇಶಗಳ ಪ್ರಿಂಟ್ ತೆಗೆಯ­ಲಾಗಿದೆ. ಅವು ಅರ್ಧ ಕೊಠಡಿಯಷ್ಟು ತುಂಬಿವೆ. ಇದರಲ್ಲಿ ಕೆಲವು ಅರೇಬಿಕ್ ಭಾಷೆಯಲ್ಲಿವೆ. ಹೀಗಾಗಿ ಅರೇಬಿಕ್ ಭಾಷಾ ತಜ್ಞರ ನೆರವು ಪಡೆದು, ಅವರ ಸಮ್ಮುಖದಲ್ಲೇ ಟ್ವೀಟ್‌ಗಳ ಬಗ್ಗೆ ಮೆಹದಿಯಿಂದ ಅಧಿಕೃತವಾಗಿ ಹೇಳಿಕೆ ದಾಖಲಿಸಿಕೊಳ್ಳಲಾಗುತ್ತಿದೆ. ಈ ಪ್ರಕ್ರಿಯೆ ಸೋಮವಾರದೊಳಗೆ ಪೂರ್ಣಗೊಳ್ಳಲಿದ್ದು, ಆ ನಂತರ ತನಿಖೆಗಾಗಿ ಹೊರ ರಾಜ್ಯಗಳಿಗೆ ಕರೆದೊ­ಯ್ಯ­ಲಾಗುವುದು’ ಎಂದು ಅಧಿಕಾರಿಗಳು ತಿಳಿಸಿದರು.

‘ಐದು ದಿನಗಳ ಕಾಲ ನಡೆಸಿದ ಮೊದಲ ಹಂತದ ತನಿಖೆಯಲ್ಲಿ ಮೆಹದಿಯ ಪೂರ್ವಾಪರವನ್ನು ತಿಳಿದುಕೊಂಡಿದ್ದೇವೆ. ಇದರಲ್ಲಿ ಆತನ ಬಾಲ್ಯ, ಕಾಲೇಜು ಅವಧಿ, ವೃತ್ತಿ ಜೀವನ, ಹವ್ಯಾಸಗಳು, ಧಾರ್ಮಿಕ ಒಲವು ಸೇರಿದಂತೆ ಸಂಪೂರ್ಣ ವಿವರಗಳನ್ನು ಪಡೆಯಲಾಗಿದೆ. ದ್ವಿತೀಯ ಹಂತದ ತನಿಖೆಯಲ್ಲಿ ಮುಖಾಮುಖಿ ವಿಚಾರಣೆಗೇ ಹೆಚ್ಚು ಒತ್ತು ನೀಡಲಾಗುವುದು’ ಎಂದು ಮಾಹಿತಿ ನೀಡಿದರು.

ಪ್ರಕರಣದ ತನಿಖೆ ನಡೆಸು­ತ್ತಿ­ರುವ ಸಿಸಿಬಿ ಪೊಲೀಸರು, ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ನಾಲ್ಕು ಪುಟಗಳ ಪ್ರಾಥಮಿಕ ಮಾಹಿತಿ ಸಲ್ಲಿಸಿದ್ದಾರೆ. ಅದರಲ್ಲಿ ಮೆಹ­ದಿಯ 11 ಸಾವಿರ ಟ್ವೀಟ್‌ಗಳ ಬಗ್ಗೆ ವಿವರಿಸಿದ್ದಾರೆ.

‘ಐ.ಎಸ್ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದಾರೆ ಎನ್ನಲಾಗಿರುವ ಮಹಾರಾಷ್ಟ್ರದ ಮೂವರ ಜತೆ ಮೆಹದಿ ನೇರ ಸಂಪರ್ಕ ಹೊಂದಿದ್ದಾನೆ. ಹೀಗಾಗಿ ತನಿಖೆ­ಗಾಗಿ ಆತನನ್ನು ಮಹಾರಾಷ್ಟ್ರಕ್ಕೆ ಕರೆದೊಯ್ಯಬೇಕಿದೆ’ ಎಂದು  ಪ್ರಾಥಮಿಕ ಮಾಹಿತಿಯಲ್ಲಿ ಕೋರಿದ್ದಾರೆ.

‘ಪಾಸ್‌ವರ್ಡ್‌ ನೆನಪಿಲ್ಲ’
‘ಮೆಹದಿ ‘@shami witness’ ಮಾತ್ರವಲ್ಲದೆ ಇನ್ನು ಮೂರ್ನಾಲ್ಕು ಟ್ವಿಟರ್ ಖಾತೆ, ಇ–ಮೇಲ್ ಐಡಿಗಳನ್ನು ಹೊಂದಿರುವುದು ತನಿಖೆ­ಯಿಂದ ಗೊತ್ತಾಗಿದೆ. ಅವುಗಳ ಬಗ್ಗೆ ವಿಚಾರಿಸಿದರೆ, ಪಾಸ್‌ವರ್ಡ್‌ ನೆನಪಿಲ್ಲ ಎಂದು ಉತ್ತರಿಸುತ್ತಿದ್ದಾನೆ’ ಎಂದು ಹಿರಿಯ ಅಧಿಕಾರಿಗಳು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT