ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಎಲ್‌ ಅಮಾನತಿಗೆ ಶಿಫಾರಸು: ಸಲೀಂ

ಮದ್ಯ ಸೇವಿಸಿ ವಾಹನ ಚಾಲನೆ ಮಾಡುವವರಿಗೆ ಕಾದಿದೆ ಕಂಟಕ
Last Updated 24 ಏಪ್ರಿಲ್ 2014, 10:49 IST
ಅಕ್ಷರ ಗಾತ್ರ

ಮೈಸೂರು: ಮದ್ಯ ಸೇವಿಸಿ ವಾಹನ ಚಾಲನೆ ಮಾಡುವವರು ಇನ್ನು ಮುಂದೆ ನ್ಯಾಯಾಲಯಲ್ಲಿ ದಂಡ ಕಟ್ಟುವ ಜತೆಗೆ ವಾಹನ ಚಾಲನಾ ಪರವಾನಗಿ (ಡಿಎಲ್‌) ಕಳೆದುಕೊಳ್ಳುವಿರಿ. ಕುಡಿದು ವಾಹನ ಚಾಲಿಸಿ ಮೊದಲ ಬಾರಿ ಪೊಲೀಸರ ಕೈಗೆ ಸಿಕ್ಕಿಬಿದ್ದವರ ಡಿಎಲ್‌ ಅಮಾನತಿಗೆ ಶಿಫಾರಸು ಮಾಡಲು ನಗರ ಪೊಲೀಸರು ನಿರ್ಧರಿಸಿದ್ದಾರೆ.

‘ಈ ಹಿಂದೆ ಕುಡಿದು ಎರಡು ಬಾರಿ ಸಿಕ್ಕಿಬಿದ್ದವರ ಡಿಎಲ್‌ ಅನ್ನು ಅಮಾನತು ಮಾಡಲು ಕ್ರಮ ಕೈಗೊಳ್ಳಲಾಗುತ್ತಿತ್ತು. ಇನ್ನು ಮುಂದೆ ರಾಜಧಾನಿ ಬೆಂಗಳೂರಿನ ಮಾದರಿಯಲ್ಲಿ ಮೊದಲ ಬಾರಿಗೆ ಸಿಕ್ಕಿಬಿದ್ದವರ ಡಿಎಲ್‌ ಅಮಾನತು ಮಾಡಲು ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಶಿಫಾರಸು ಮಾಡಲಾಗುವುದು. ಇದಕ್ಕೆ ಶನಿವಾರದಿಂದಲೇ ಚಾಲನೆ ನೀಡಲಾಗುವುದು’ ಎಂದು ನಗರ ಪೊಲೀಸ್‌ ಕಮಿಷನರ್‌ ಡಾ.ಎಂ.ಎ. ಸಲೀಂ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ನಗರದಲ್ಲಿ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರ ಸಂಖ್ಯೆ ಹೆಚ್ಚುತ್ತಿದ್ದು, ಇದರಿಂದ ರಸ್ತೆ ಅಪಘಾತಗಳು ಸಂಭವಿಸಿ, ಅನೇಕರು ಗಾಯಗೊಂಡು ಪ್ರಾಣಹಾನಿ ಯಾಗುತ್ತಿದೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರನ್ನು ವಾರಾಂತ್ಯದಲ್ಲಿ ತಪಾಸಣೆ ಮಾಡಿದ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಈಚಿನ ದಿನಗಳಲ್ಲಿ ವಾರದಲ್ಲಿ ಯಾವುದಾದರೂ ದಿನ ದಿಢೀರ್‌ ವಾಹನ ತಪಾಸಣೆ ಮಾಡಲಾಗುತ್ತಿದೆ. ಇದರಿಂದ ಅನೇಕರು ಸಿಕ್ಕಿಬೀಳುತ್ತಿದ್ದಾರೆ. ಮುಂದೆ ತಪಾಸಣೆ ತೀವ್ರಗೊಳಿಸಲಾಗುವುದು’ ಎಂದು ಹೇಳಿದರು.

‘ಡಿಎಲ್‌ ಅಮಾನತಿಗೆ ಸಾರಿಗೆ ಕಚೇರಿಗೆ ಶಿಫಾರಸು ಮಾಡಿದ ಬಳಿಕ, ಸಾರಿಗೆ ಅಧಿಕಾರಿಗಳು ವಾಹನ ಸವಾರರ ಮನೆಗೆ ಷೋಕಾಸ್‌ ನೋಟಿಸ್‌ ಜಾರಿ ಮಾಡಿ ವಿವರಣೆ ಪಡೆಯಲಿದ್ದಾರೆ. ತಿಂಗಳು, ಮೂರು ಇಲ್ಲವೆ ಆರು ತಿಂಗಳವರೆಗೆ ಡಿಎಲ್‌ ಅಮಾನತು ಮಾಡುವ ಸಾಧ್ಯತೆ ಇದೆ. ಅದು ಸಾರಿಗೆ ಅಧಿಕಾರಿಗಳ ವಿವೇಚನೆಗೆ ಬಿಟ್ಟಿದ್ದು. ಅಲ್ಲದೆ, ನ್ಯಾಯಾಲಯದಲ್ಲಿ ದಂಡ ಸಹ ಕಟ್ಟಬೇಕಾಗುತ್ತದೆ’ ಎಂದು ಹೇಳಿದರು.

ಕುಡಿಯುವುದು ತಪ್ಪಲ್ಲ: ‘ಮದ್ಯಪಾನ ಮಾಡುವುದು ತಪ್ಪಲ್ಲ. ಆದರೆ, ಮದ್ಯ ಸೇವಿಸಿ ವಾಹನ ಚಾಲನೆ ಮಾಡುವುದು ತಪ್ಪು. ವಿದೇಶಗಳಲ್ಲಿ ಇದನ್ನು ಗಂಭೀರವಾಗಿ ಪರಿಗಣಿಸ ಲಾಗುತ್ತದೆ. ಅಪಘಾತದಲ್ಲಿ ವ್ಯಕ್ತಿ ಸತ್ತರೆ ಅದನ್ನು ಕೊಲೆ ಎಂದೇ ಪರಿಗಣಿಸಲಾಗುತ್ತದೆ. ಒಂದು ವೇಳೆ ಮದ್ಯ ಸೇವಿಸಿ ಕಾರಿನಲ್ಲಿ ಮನೆಗೆ ಹೋಗ ಬೇಕಾದವರು ಡ್ರೈವರ್‌ ಇಟ್ಟುಕೊಳ್ಳಬೇಕು. ಕಾರು ಇಲ್ಲದವರು ಪ್ರೀಪೇಯ್ಡ್ ಆಟೊ ಸೇವೆಯಿಂದ ವಾಹನವನ್ನು ಪಡೆಯಬಹುದು. ಅಲ್ಲದೆ, ಪೊಲೀಸ್‌ ನಿಯಂತ್ರಣ ಕೊಠಡಿ 100ಕ್ಕೆ ಕರೆ ಮಾಡಿ ಆಟೊ ಕರೆಸಿಕೊಳ್ಳಬಹುದು’ ಎಂದು ವಿವರಿಸಿದರು.

ಡಿಸಿಪಿ (ಕಾನೂನು–ಸುವ್ಯವಸ್ಥೆ) ಎ.ಎನ್‌. ರಾಜಣ್ಣ, ಡಿಸಿಪಿ (ಅಪರಾಧ ಸಂಚಾರ) ಕಲಾ ಕೃಷ್ಣಸ್ವಾಮಿ, ಎಸಿಪಿ (ಸಂಚಾರ) ಪ್ರಭಾಕರ ಬಾರ್ಕಿ ಇದ್ದರು.

ಆಟೊ ಚಾಲಕರಿಗೆ ಕಾರ್ಡ್‌ ವಿತರಣೆ
ಮೈಸೂರು: 
ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ನಗರ ಪೊಲೀಸ್‌ ಮತ್ತೊಂದು ಯೋಜನೆಗೆ ಮರುಚಾಲನೆ ನೀಡಿದೆ. ಆಟೊ ಚಾಲಕರ ಸಂಪೂರ್ಣ ವಿವರವುಳ್ಳ ಮಾಹಿತಿ ಫಲಕವನ್ನು ಚಾಲಕರ ಹಿಂಬದಿ ಸೀಟಿನಲ್ಲಿ ಪ್ರದರ್ಶಿಸುವ ಕಾರ್ಯಕ್ಕೆ ನಗರ ಪೊಲೀಸ್‌ ಕಮಿಷನರ್‌ ಡಾ.ಎಂ.ಎ. ಸಲೀಂ ಬುಧವಾರ ಚಾಲನೆ ನೀಡಿದರು.

ನಗರ ಪೊಲೀಸ್‌ ಕಮಿಷನರ್‌ ಕಚೇರಿ ಆವರಣದಲ್ಲಿ ಸಲೀಂ ಅವರು ಚಾಲಕರಿಗೆ ಸಾಂಕೇತಿಕವಾಗಿ ಮಾಹಿತಿ ಫಲಕ (ಕಾರ್ಡ್‌)ಗಳನ್ನು ಸಾಂಕೇತಿಕವಾಗಿ ವಿತರಿಸಿದರು. ನಗರದಲ್ಲಿ ಒಟ್ಟು 27 ಸಾವಿರ ಆಟೊ ಚಾಲಕರಿದ್ದು, ಕೃಷ್ಣರಾಜ, ನರಸಿಂಹರಾಜ ಮತ್ತು ಲಷ್ಕರ್‌ ಸಂಚಾರ ಪೊಲೀಸ್‌ ಠಾಣೆಗಳಲ್ಲಿ ಫಲಕಗಳನ್ನು ವಿತರಿಸಲಾಗುವುದು. ಚಾಲಕರು ಚಾಲನಾ ಪರವಾನಗಿ (ಡಿಎಲ್‌), ವಾಸ ಸ್ಥಳ ದೃಢೀಕರಣಪತ್ರ, ರಕ್ತದ ಮಾದರಿ, ಮೂರು ಪಾಸ್‌ಪೋರ್ಟ್‌ ಅಳತೆಯ ಭಾವಚಿತ್ರಗಳನ್ನು ಬರುವ ಜೂನ್15ರ ಒಳಗೆ ಸಲ್ಲಿಸಿ ಫಲಕಗಳನ್ನು ಪಡೆದು, ಆಟೊದಲ್ಲಿ ಅಳವಡಿಸಿಕೊಳ್ಳಬೇಕು.

ಬೆಂಗಳೂರು ಮಾದರಿಯಲ್ಲೇ ಮೈಸೂರಿನಲ್ಲಿ ಫಲಕ ಪ್ರದರ್ಶನಕ್ಕೆ ಚಾಲನೆ ನೀಡಲಾಗಿದೆ. ಪ್ರಯಾಣಿಕರು ಇನ್ನು ಮುಂದೆ ಆಟೊದಲ್ಲಿ ಪ್ರಯಾಣ ಮಾಡುವಾಗ ತೊಂದರೆ ಅನುಭವಿಸಿದಾಗ ಕೂಡಲೇ ಪೊಲೀಸರಿಗೆ ತಿಳಿಸಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ನಗರದಲ್ಲಿ ಅಪರಾಧ ಪ್ರಕರಣಗಳು ಕಡಿಮೆ ಆಗಬೇಕು. ನಗರವನ್ನು ಮತ್ತಷ್ಟು ಸುರಕ್ಷತೆ ಮಾಡಬೇಕು ಎನ್ನುವ ನಿಟ್ಟಿನಲ್ಲಿ ಈ ಯೋಜನೆ ಯನ್ನು ಜಾರಿಗೆ ತರಲಾಗಿದೆ’ ಎಂದು ಹೇಳಿದರು.

ಸೀಟ್‌ ಬೆಲ್ಟ್‌ ಕಡ್ಡಾಯ
ಕಾರು ಚಾಲಕರು ಇನ್ನು ಮುಂದೆ ಸೀಟ್‌ ಬೆಲ್ಟ್‌ ಕಡ್ಡಾಯವಾಗಿ ಹಾಕಬೇಕು. ಇಲ್ಲವಾದಲ್ಲಿ ಸಿಕ್ಕಿಬಿದ್ದವರಿಗೆ ದಂಡ ಹಾಕಲಾಗುವುದು. ಮುಂದೆ ಸೀಟ್‌ ಬೆಲ್ಟ್‌ ಹಾಕಿದ್ದಾರೆಯೇ ಎಂಬುದನ್ನು ಸಿಬ್ಬಂದಿ ತಪಾಸಣೆ ವೇಳೆ ಪರಿಶೀಲಿಸಿ, ದಂಡ ಹಾಕಲಿದ್ದಾರೆ ಎಂದು ಸಲೀಂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT