ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಎಸ್ಪಿ ಹತ್ಯೆ: ರಾಜಾ ಭಯ್ಯಾ ರಾಜೀನಾಮೆ, 8 ಪೊಲೀಸರ ಅಮಾನತು

Last Updated 4 ಮಾರ್ಚ್ 2013, 14:03 IST
ಅಕ್ಷರ ಗಾತ್ರ

ಲಕ್ನೊ (ಪಿಟಿಐ): ಪ್ರತಾಪಗಡ ಜಿಲ್ಲೆಯಲ್ಲಿ ಶನಿವಾರ ರಾತ್ರಿ ನಡೆದ ಡಿಎಸ್ಪಿ ಜಿಯಾ-ಉಲ್-ಹಕ್ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ವಿವಾದಾತ್ಮಕ ಸಚಿವ ರಘುರಾಜ್ ಪ್ರತಾಪ್ ಸಿಂಗ್ ಅಲಿಯಾಸ್ `ರಾಜಾ ಭಯ್ಯಾ' ಅವರು ಸೋಮವಾರ ರಾಜೀನಾಮೆ ನೀಡಿದ್ದು, ಓರ್ವ ಇನ್‌ಸ್ಪೆಕ್ಟರ್ ಸೇರಿದಂತೆ ಎಂಟು ಜನ ಪೊಲೀಸ್ ಪೇದೆಗಳನ್ನು ಕೂಡ ಅಮಾನತು ಮಾಡಲಾಗಿದೆ.

ಡಿಎಸ್ಪಿ ಹತ್ಯೆಯ ಹಿಂದೆ ರಾಜಾ ಅವರ ಪಿತೂರಿ ಇರುವುದಾಗಿ ಹೇಳಿ ಅವರ ವಿರುದ್ಧ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಥಮ ವರ್ತಮಾನ ವರದಿ (ಎಫ್‌ಆರ್‌ಐ) ಸಿದ್ಧಪಡಿಸಿದ ಹಿನ್ನೆಲೆಯಲ್ಲಿ ರಾಜಾ ಅವರ ತಲೆದಂಡ ಪಡೆಯಲಾಗಿದೆ.

ಸೋಮವಾರ ರಾಜ್ಯ ವಿಧಾನಸಭೆಯಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಡಿಎಸ್ಪಿ ಹತ್ಯೆ ಪ್ರಕರಣ ಕುರಿತಂತೆ ಧ್ವನಿ ಎತ್ತಿದ ವಿರೋಧ ಪಕ್ಷಗಳು ನಡೆಸಿದ ಗದ್ದಲದಿಂದ ಸದನವನ್ನು ಒಂದು ಗಂಟೆಯ ಮಟ್ಟಿಗೆ ಮುಂದೂಡಲಾಯಿತು.

ಹತ್ಯೆ ಪ್ರಕರಣ ಕುರಿತಂತೆ ರಾಜ್ಯ ವಿಧಾನಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಪ್ರಕರಣದಲ್ಲಿ ಭಾಗಿಯಾದವರ ವಿರುದ್ಧ `ಶೀಘ್ರ ಹಾಗೂ ನಿಷ್ಪಕ್ಷಪಾತ' ಕ್ರಮ ಕೈಗೊಳ್ಳಲಾಗುವುದು ಎಂದು ಸದನಕ್ಕೆ ಭರವಸೆ ನೀಡಿದರು.

ಡಿಎಸ್ಪಿ ಅವರ ಮೇಲೆ ದಾಳಿ ಮಾಡಿದ ವೇಳೆ ಘಟನಾಸ್ಥಳದಿಂದ ಪಲಾಯನ ಮಾಡಿದ ಆರೋಪದ ಮೇಲೆ ಕುಂಡಾ ಪೊಲೀಸ್ ಠಾಣೆ  ಓರ್ವ ಇನ್‌ಸ್ಪೆಕ್ಟರ್ ಸೇರಿದಂತೆ ಎಂಟು ಜನ ಪೊಲೀಸ್ ಪೇದೆಗಳನ್ನು ಅಮಾನತು ಮಾಡಲಾಗಿದೆ.

ಬೆಳಿಗ್ಗೆ ಮುಖ್ಯಮಂತ್ರಿ ಅಖಿಲೇಶ್ ಅವರನ್ನು ಭೇಟಿ ಮಾಡಿದ ರಾಜಾ ಭಯಾ ಅವರು ರಾಜೀನಾಮೆ ಸಲ್ಲಿಸಿದ್ದು, ಇದನ್ನು ರಾಜ್ಯಪಾಲರಾದ ಬಿ.ಎಲ್.ಜೋಶಿ ಅಂಗೀಕರಿಸಿದ್ದಾರೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

ಪ್ರತಾಪ್ ಗಢ್ ಜಿಲ್ಲೆಯಲ್ಲಿರುವ ಕುಂಡಾ ಪಟ್ಟಣದಲ್ಲಿ ವೃತ್ತ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಜಿಯಾ ಅವರ ಮೇಲೆ ಶನಿವಾರ ರಾತ್ರಿ ಆಸ್ತಿ ವಿವಾದವೊಂದಕ್ಕೆ ಸಂಬಂಧಿಸಿದಂತೆ ಗುಂಪೊಂದು ಹಲ್ಲೆ ನಡೆಸಿ, ಗುಂಡಿಕ್ಕಿ ಹತ್ಯೆಗೈದಿತ್ತು.

ಸಿಬಿಐ ತನಿಖೆಗೆ ಆಗ್ರಹ:
ಹತ್ಯೆಗೀಡಾದ ಜಿಯಾ ಅವರ ಪತ್ನಿ ಪರ್ವಿನ್ ಅವರು ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಒತ್ತಾಯಿಸಿದ್ದು `ನನಗೆ ನ್ಯಾಯ ಬೇಕಿದೆ. ಒಂದು ವೇಳೆ ನನಗೆ ನ್ಯಾಯ ದೊರೆಯದೆ ಹೋದರೆ ನಾನು ಮುಖ್ಯಮಂತ್ರಿಗಳ ನಿವಾಸದೆದುರು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ. ಇದನ್ನು ನಾನು ಬರಿ ಹೇಳುವುದಿಲ್ಲ, ಮಾಡಿ ತೋರಿಸುತ್ತೇನೆ' ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT