ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಜಿಟಲ್ ಯುಗದಲ್ಲಿ ಖಾಸಗಿತನದ ಹಂಬಲ!

ಅಕ್ಷರ ಗಾತ್ರ

ಇಂದಿನ ಮೊಬೈಲ್ ಫೋನ್‌ಗಳು ಮತ್ತು ಇಂಟರ್ನೆಟ್ ಸೌಕರ್ಯಗಳನ್ನು ಬಳಸಿ­ಕೊಂಡೂ ಖಾಸಗಿತನ ಕಾಯ್ದುಕೊಳ್ಳುವ ಹಂಬಲ ಅಮೆರಿಕನ್ನರಿಗೆ ಇದೆ. ಇಂಟರ್ನೆಟ್ ಕಂಪೆನಿಗಳು ಅಥವಾ ಸರ್ಕಾರ ಖಾಸಗಿತನವನ್ನು ಕಾಪಾಡುತ್ತವೆ ಎಂಬ ನಂಬಿಕೆ ತಮಗಿಲ್ಲ ಎಂದು ಅವರು ಹೇಳುತ್ತಾರೆ. ಇಷ್ಟಿದ್ದರೂ, ಇಂಟರ್ನೆಟ್ ಮೂಲಕ ದೊರೆಯುವ ಸೇವೆಗಳನ್ನು ಅವರು ಬಳಸುತ್ತಿದ್ದಾರೆ, ಖಾಸಗಿ ಮಾಹಿತಿಗಳನ್ನು ವಿವಿಧ ಕಂಪೆನಿಗಳಿಗೆ ನೀಡುತ್ತಿದ್ದಾರೆ.

ಪೀವ್ ಸಂಶೋಧನಾ ಕೇಂದ್ರ ಇತ್ತೀಚೆಗೆ ನಡೆಸಿದ ಅಧ್ಯಯನದಲ್ಲಿ ಈ ವಿರೋಧಾಭಾಸ­ಗಳನ್ನು ದಾಖಲಿಸಿದೆ. ಖಾಸಗಿ ವಿಚಾರಗಳನ್ನು ಹೇಳಿ­ಕೊಳ್ಳಲು ಇ–-ಮೇಲ್, ಸ್ಥಿರ ದೂರವಾಣಿ ಅಥವಾ ಮೊಬೈಲ್ ದೂರವಾಣಿ ಸುರಕ್ಷಿತವಲ್ಲ ಎಂದೇ ಬಹುಪಾಲು ಅಮೆರಿಕನ್ನರು ನಂಬಿದ್ದಾರೆ ಎಂಬುದನ್ನು ಅಧ್ಯಯನ ಬಯಲುಮಾಡಿದೆ. ಸ್ಥಿರ ದೂರವಾಣಿ ಮೂಲಕ ಖಾಸಗಿ ಸಂಗತಿಗಳನ್ನು ಹೇಳಿಕೊಳ್ಳುವುದು ತುಸು ಮಟ್ಟಿಗೆ ಸುರಕ್ಷಿತ ಎಂಬುದು ಅಮೆರಿಕನ್ನರ ನಂಬಿಕೆ. ಆದರೆ ಸ್ಥಿರ ದೂರವಾಣಿ ಬಳಕೆದಾರರ ಸಂಖ್ಯೆ ಅಲ್ಲಿ ಕಡಿಮೆ.

ಆನ್‌ಲೈನ್ ಮೂಲಕ ನಡೆಯುವ ಮಾತುಕತೆ­ಗಳು, ವ್ಯವಹಾರಗಳ ಬಗ್ಗೆ ಅಮೆರಿಕ ಸರ್ಕಾರ ಕಣ್ಗಾವಲು ಇಟ್ಟ ಸಂಗತಿಯನ್ನು ಎಡ್ವರ್ಡ್ ಸ್ನೊಡೆನ್ ಬಹಿರಂಗಪಡಿಸಿದ ನಂತರ, ಡಿಜಿಟಲ್ ಸಂಪರ್ಕ ಮಾಧ್ಯಮಗಳ ಬಗ್ಗೆ ಅಲ್ಲಿನ ಯುವ ಸಮುದಾಯದಲ್ಲಿ ಅಪನಂಬಿಕೆ ಹೆಚ್ಚಾಗಿದೆ. ಡಿಜಿಟಲ್ ಯುಗದಲ್ಲಿ ಬಾಳುವವರು ಮಾಡಿ­ಕೊಳ್ಳ­ಬೇಕಾದ ಹೊಂದಾಣಿಕೆಗಳು ಇವು ಎಂಬ ನಂಬಿಕೆಗೆ ಕೆಲವರು ಬಂದಿದ್ದಾರೆ. ಈ ಕುರಿತು ಏನೂ ಮಾಡಲಾಗದ ಸ್ಥಿತಿಗೆ ಬಂದಾಗಿದೆ ಎಂದೂ ಅವರು ಅಂದುಕೊಂಡಿದ್ದಾರೆ ಎಂಬುದನ್ನು ಅಧ್ಯಯನ ಕಂಡುಕೊಂಡಿದೆ.

‘ಜನರಿಗೆ ಬೇರೆ ಆಯ್ಕೆ ಇದ್ದಂತಿಲ್ಲ’ ಎಂದು ಎಲೆಕ್ಟ್ರಾನಿಕ್ ಖಾಸಗಿತನ ಮಾಹಿತಿ ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕ ಮಾರ್ಕ್ ರೊಟೆನ್‌­ಬರ್ಗ್ ಹೇಳುತ್ತಾರೆ. ದಿನಪತ್ರಿಕೆ ಓದಿ, ಐಸ್ ಕ್ರೀಂನಲ್ಲಿ ಕ್ಯಾಲರಿ ಹೆಚ್ಚಿದೆ, ಹಾಗಾಗಿ ಅದರ ಬದಲು ಬೇರೆ ಏನಾದರೂ ತಿನ್ನೋಣ ಎಂದು ಅರ್ಥ ಮಾಡಿಕೊಂಡಂತೆ ಅಲ್ಲ ಇ–ಮಾಧ್ಯಮ­ಗಳನ್ನು ಬಳಸುವುದು ಎಂದು ಅವರು ಹೇಳು­ತ್ತಾರೆ. ಇಂಟರ್ನೆಟ್ ಸೇವೆಗಳನ್ನು ಹಲವು ವರ್ಷ­ಗಳಿಂದ ಜನ ಬಳಸುತ್ತಿದ್ದಾರೆ.

ಅವರ ಸಂಪರ್ಕ­ದಲ್ಲಿ­ರುವ ಬಹುಪಾಲು ವ್ಯಕ್ತಿಗಳ ವಿವರ ಫೇಸ್‌­ಬುಕ್‌ನಲ್ಲಿ ಇದ್ದರೆ, ವರ್ಷಗಳಿಂದ ನಡೆಯು­ತ್ತಿರುವ ಇ-–ಮೇಲ್ ವ್ಯವಹಾರಗಳೆಲ್ಲ ಜಿಮೇಲ್‌­ನಲ್ಲಿ ಇದ್ದರೆ ಅವುಗಳ ಬಳಕೆ ಕೈಬಿಡುವುದು ಕಷ್ಟದ ಕೆಲಸ. ಹೊಸ ಅರ್ಥವ್ಯವಸ್ಥೆ ಕೇವಲ ಹಣದ ಮೌಲ್ಯದ ಮೇಲೆ ನಿಂತಿಲ್ಲ. ವ್ಯಕ್ತಿ ಹೊಂದಿರುವ ಸಂಪರ್ಕ ಕೂಡ ಇಲ್ಲಿ ಪ್ರಮುಖ. ಬೇರೊಂದು ಮಾರ್ಗ ಹುಡುಕಿಕೊಳ್ಳಲು ಆಗದಿರಲು ಏನೆಲ್ಲ ಮಾಡಬಹುದೋ ಅವೆಲ್ಲವನ್ನೂ ಕಂಪೆನಿಗಳು ಮಾಡಿವೆ ಎಂದು ರೊಟೆನ್‌ಬರ್ಗ್ ಹೇಳುತ್ತಾರೆ.

ಖಾಸಗಿ ಮಾಹಿತಿಗಳನ್ನು ವಿನಿಮಯ ಮಾಡಿ­ಕೊಳ್ಳಲು ಸಾಮಾಜಿಕ ಜಾಲ ತಾಣಗಳು ಸುರಕ್ಷಿತ­ವಲ್ಲ ಎಂದು ಶೇಕಡ 81ರಷ್ಟು ಜನ ನಂಬಿದ್ದಾರೆ. ಆನ್‌ಲೈನ್ ಮೂಲಕ ಮಾಡುವ ಹರಟೆಗಳ (ಚಾಟಿಂಗ್) ಬಗ್ಗೆ ಇದೇ ಭಾವನೆಯನ್ನು ಶೇ 68ರಷ್ಟು ಜನ ಹೊಂದಿದ್ದಾರೆ. ಮೊಬೈಲ್ ಸಂದೇಶ ಕಳುಹಿಸುವ ಬಗ್ಗೆ ಶೇ 59ರಷ್ಟು ಜನ, ಇ-–ಮೇಲ್‌ಗಳ ಬಗ್ಗೆ ಶೇ 57ರಷ್ಟು ಜನ, ಮೊಬೈಲ್ ಮೂಲಕ ಮಾತನಾಡುವ ಕುರಿತು ಶೇ 46ರಷ್ಟು ಜನ ಮತ್ತು ಸ್ಥಿರ ದೂರವಾಣಿ ಮೂಲಕ ಮಾತ­ನಾಡುವ ಕುರಿತು ಶೇ 31ರಷ್ಟು ಜನ ಇದೇ ನಿಲುವು ಹೊಂದಿದ್ದಾರೆ.

ಇಂಥ ಸಂಪರ್ಕ ಮಾಧ್ಯಮಗಳ ಮೂಲಕ ನಡೆಯುವ ಮಾತುಕತೆಗಳ ಮೇಲೆ ಸರ್ಕಾರದ ಕಣ್ಗಾವಲಿದೆ ಎಂಬ ಅರಿವಿರುವ ಬಹುಪಾಲು ಮಂದಿ ಇವು ಸುರಕ್ಷಿತವಲ್ಲ ಎಂಬ ನಿಲುವು ಹೊಂದಿ­­ದ್ದಾರೆ. ಜಾಹೀರಾತು ನೀಡುವವರು ಮತ್ತು ಸರ್ಕಾರದ ಕುರಿತ ಜನರ ಅಪನಂಬಿಕೆ ಒಂದೇ ಪ್ರಮಾಣದಲ್ಲಿದೆ ಎಂಬುದನ್ನು ಪೀವ್ ಕಂಡುಕೊಂಡಿದೆ. ಸಾಮಾಜಿಕ ಜಾಲ ತಾಣಗಳನ್ನು ಬಳಸುವ ಶೇ 80ರಷ್ಟು ಜನ, ತಮ್ಮ ಖಾಸಗಿ ಸಂಗತಿಗಳನ್ನು ಜಾಹೀರಾತುದಾರರು ಮತ್ತು ವಾಣಿಜ್ಯ ಕಂಪೆನಿಗಳು ತಿಳಿದುಕೊಳ್ಳುವ ಬಗ್ಗೆ ಕಳವಳ ಹೊಂದಿದ್ದಾರೆ. ಸರ್ಕಾರ ತಮ್ಮ ಖಾಸಗಿ ಮಾಹಿತಿಗಳನ್ನು ಪಡೆಯುತ್ತಿದೆ ಎಂಬ ಬಗ್ಗೆ ಶೇ 70ರಷ್ಟು ಜನ ತುಸು ಕಳವಳ ಹೊಂದಿದ್ದಾರೆ.

ಖಾಸಗಿತನದ ವಿಚಾರದಲ್ಲಿರುವ ವಿರೋಧಾ­ಭಾಸವೊಂದನ್ನು ಇಲ್ಲಿ ಗಮನಿಸಬೇಕು. ಇಂಟ­ರ್ನೆಟ್ ಮೂಲಕ ಉಚಿತ ಸೇವೆಗಳನ್ನು ಪಡೆ­ಯಲು ಖಾಸಗಿ ಮಾಹಿತಿ ವಿನಿಮಯ ಮಾಡಿ­ಕೊಳ್ಳಲು ಶೇ 55ರಷ್ಟು ಮಂದಿ ಸಿದ್ಧರಿದ್ದಾರೆ. ಅಲ್ಲದೆ, ಶೇ 36ರಷ್ಟು ಜನರ ಪ್ರಕಾರ, ಈ ಸೇವೆ­ಗಳು ಉತ್ತಮವಾಗಿರಲು ಕಾರಣ ಕಂಪೆನಿ­ಗಳು ಹೊಂದಿರುವ ಬಳಕೆದಾರರ ಖಾಸಗಿ ಮಾಹಿತಿ. ತಮ್ಮ ಆರೋಗ್ಯದ ಕುರಿತ ಮಾಹಿತಿ, ಇ–-ಮೇಲ್‌ಗಳಲ್ಲಿರುವ ವಿಚಾರ­ಗಳು, ದೂರ­ವಾಣಿ ಮೂಲಕ ನಡೆಸುವ ಮಾತು­ಕತೆಗಳು ತಾವು ವಾಸಿಸುವ ಪ್ರದೇಶದ ವಿವರಗಳು ಅತ್ಯಂತ ಸೂಕ್ಷ್ಮ ಎಂಬುದು ಜನರ ತಿಳಿವಳಿಕೆ.

ಅಲ್ಲದೆ, ಯುವಕರು ಖಾಸಗಿತನದ ಕುರಿತು ಹೆಚ್ಚು ಗಮನಹರಿಸುವು­ದಿಲ್ಲ ಎಂಬ ಮಾತುಗಳು ಇದ್ದರೂ, ಹಳಬರಿಗಿಂತ ಯುವಕರು ಈ ಕುರಿತು ಹೆಚ್ಚು ಕಾಳಜಿ ವಹಿಸುತ್ತಾರೆ ಎನ್ನುವುದು ಅಧ್ಯಯನದಲ್ಲಿ ಗೊತ್ತಾ­ಗಿದೆ. ಉದಾಹರಣೆಗೆ ಇ-– ಮೇಲ್. ಶೇ 59ರಷ್ಟು ಯುವಕರ ಪ್ರಕಾರ, ಇ-– ಮೇಲ್‌­ಗಳಲ್ಲಿ ಇರುವ ಮಾಹಿತಿ ಸೂಕ್ಷ್ಮ. ಇದು ಸೂಕ್ಷ್ಮ ಎಂದು ಭಾವಿಸಿರುವ ಹಿರಿಯರ ಪ್ರಮಾಣ ಶೇ 42ರಷ್ಟು ಮಾತ್ರ.
ಡಿಜಿಟಲ್ ಸಂಪರ್ಕ ಮಾಧ್ಯಮಗಳ ಮೇಲೆ ಸರ್ಕಾರ ಕಣ್ಗಾವಲು ಇಟ್ಟಿರುವ ಕಾರಣ ಯುವ­ಕರು ಜಾಗರೂಕರಾಗಿದ್ದಾರೆ ಎಂಬುದಕ್ಕೆ ಸಾಕಷ್ಟು ಆಧಾರಗಳು ಸಿಗುತ್ತಿವೆ ಎಂದು ಪೀವ್ ವರದಿ ಸಿದ್ಧಪಡಿಸಿದ ಮೇರಿ ಮ್ಯಾಡನ್ ಹೇಳುತ್ತಾರೆ.

ಕಂಪೆನಿಗಳು ಗ್ರಾಹಕರ ಖಾಸಗಿ ವಿಚಾರಗಳನ್ನು ಹೇಗೆ ಸಂಗ್ರಹಿಸುತ್ತವೆ ಮತ್ತು ಅವುಗಳನ್ನು ಹೇಗೆ ಬಳಸಿಕೊಳ್ಳುತ್ತಿವೆ ಎಂಬ ವಿಚಾರದಲ್ಲಿ ಗ್ರಾಹಕರಿಗೆ ಯಾವ ಹಿಡಿತವೂ ಇಲ್ಲ ಎಂದು ಶೇ 91ರಷ್ಟು ಜನ ಭಾವಿಸಿದ್ದಾರೆ. ಖಾಸಗಿತನ ರಕ್ಷಿಸಿಕೊಳ್ಳಲು ಏನಾದರೂ ಮಾಡಬೇಕು ಎಂದು ಶೇ 66ರಷ್ಟು ಜನ ಹೇಳಿದ್ದಾರೆ. ಅಂದಾಜು ಇಷ್ಟೇ ಪ್ರಮಾಣದ ಜನರ ಪ್ರಕಾರ ಖಾಸಗಿತನ ರಕ್ಷಿಸಲು ಸರ್ಕಾರ ಏನಾದರೂ ಮಾಡಬೇಕು. ಖಾಸಗಿ ಮಾಹಿತಿ ಕಾಪಾಡಲು ಕೆಲವು ತಂತ್ರಾಂಶಗಳಿವೆ. ಆದರೆ ನೀತಿ ನಿರೂಪಣೆಯಲ್ಲಿ ಬದಲಾವಣೆ ತರುವ ಮೂಲಕ ಖಾಸಗಿತನದ ರಕ್ಷಣೆಗೆ ವಿಸ್ತೃತ ಆಯಾಮ ಒದಗಿಸಬೇಕು ಎಂದು ಖಾಸಗಿತನದ ಪ್ರತಿಪಾದ­ಕರು ಹೇಳುತ್ತಾರೆ.

ಸರ್ಕಾರದ ನೀತಿ ನಿರೂಪಣೆ ಮಟ್ಟದಲ್ಲಿ ಹೆಚ್ಚಿನ ಕೆಲಸ ನಡೆಯಬೇಕು. ಹಾಗೆ ಮಾಡಿದಾಗ ಈ ಸೇವೆಗಳ ಕುರಿತ ವಿಶ್ವಾಸ ಹೆಚ್ಚುತ್ತದೆ. ಕಾನೂ­ನು­ಗಳನ್ನು ಕಾಲಕ್ಕೆ ತಕ್ಕಂತೆ ಪರಿಷ್ಕರಿಸ­ಬೇಕು. ನಿರ್ದಿಷ್ಟ ಸಂದರ್ಭಗಳಲ್ಲಿ ಮಾತ್ರ ಸರ್ಕಾರ ಖಾಸಗಿ ಮಾಹಿತಿಗೆ ಕೈಹಾಕಬಹುದು ಎಂಬ ಕಾನೂನು ಬೇಕು ಎಂದು ರೊಟೆನ್‌ಬರ್ಗ್ ವಿವರಿಸುತ್ತಾರೆ. ಆದರೆ ಪ್ರಶ್ನೆ ಇರುವುದು ಇಷ್ಟೇ: ನೀತಿ ನಿರೂಪಕರು ಖಾಸಗಿತನ ರಕ್ಷಣೆಗೆ ಮುಂದಾಗು­ತ್ತಾರಾ? ಅಥವಾ ಖಾಸಗಿತನ ಕಳೆದು­ಕೊಳ್ಳು­ವುದು ಕೂಡ ಡಿಜಿಟಲ್ ಯುಗದ ಅನಿವಾರ್ಯ ವಾಸ್ತವ ಎಂದು ಅವರೂ ಒಪ್ಪಿಕೊಂಡಿದ್ದಾರಾ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT