ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿ. ಡಿ. ಕೋಸಂಬೀ: ಭಾರತವನ್ನು ಎಡಕ್ಕೆ ವಾಲಿಸಿದ ವಿದ್ವಾಂಸ

Last Updated 25 ಜೂನ್ 2016, 19:30 IST
ಅಕ್ಷರ ಗಾತ್ರ

ಭಾರತೀಯ ಸಮಾಜದಲ್ಲಿ ಇಂದು ಕಾಣುತ್ತಿರುವ ಜಾತಿಪದ್ಧತಿ, ಶೋಷಣೆ, ಬಡತನ, ಅನಕ್ಷರತೆಗಳಂಥ ಹಲವು ಸಮಸ್ಯೆಗಳ ಮೂಲಕಾರಣವನ್ನು ವೇದ–ರಾಮಾಯಣ–ಭಗವದ್ಗೀತೆಗಳಲ್ಲಿ ಹುಡುಕಿದ ಮೊದಲಿಗರಲ್ಲಿ ಡಿ. ಡಿ. ಕೋಸಂಬೀ ಒಬ್ಬರು. ಅವರು ತೀರಿಕೊಂಡು ಇದೇ ಜೂನ್ 29ಕ್ಕೆ ಐವತ್ತು ವರ್ಷಗಳಾಗುತ್ತವೆ. ನಮ್ಮ ದೇಶದ ಬೌದ್ಧಿಕ ವಾತಾವರಣದಲ್ಲಿ ಗಟ್ಟಿತನ, ಪ್ರಾಮಾಣಿಕತೆ, ಅಧ್ಯಯನಶೀಲತೆಗಳು ಪುನರುಜ್ಜೀವಿತಗೊಳ್ಳಲು ಅವರ ಸ್ಮರಣೆ ಪ್ರೇರಣೆ ಒದಗಿಸಬಲ್ಲದು.

ಭಾರತೀಯರಿಗೆ ಇತಿಹಾಸಪ್ರಜ್ಞೆ ಇರಲಿಲ್ಲ – ಎಂಬ ಮಾತು ಒಂದು ಕಾಲದಲ್ಲಿ ಚಲಾವಣೆಯಲ್ಲಿತ್ತು. ಈ ಮಾತಿನಲ್ಲಿ ಸ್ವಲ್ಪ ಸತ್ಯಾಂಶವೂ ಇತ್ತೆನ್ನಿ. ಏಕೆಂದರೆ ‘ಇತಿಹಾಸ’ ಎಂದು ಪರಿಗಣಿಸುತ್ತಿದ್ದುದು ಪಾಶ್ಚಾತ್ಯ ಮಾದರಿಯ ಇತಿಹಾಸದ ಪರಿಕಲ್ಪನೆಯನ್ನೇ. ಪ್ರಾಚೀನ ಭಾರತದಲ್ಲಿ ಆ ಮಾದರಿಯಲ್ಲಿ ಇತಿಹಾಸದ ನಿರ್ಮಾಣ ಆಗಲಿಲ್ಲ. ಮಧ್ಯಕಾಲೀನ ರಾಜರ ಕಥೆಯನ್ನೇ ಹೇಳುವ ‘ರಾಜತರಂಗಿಣಿ’ಯಂಥ ಕೃತಿಯೂ ಪಾಶ್ಚಾತ್ಯ ಮಾದರಿಯ ‘ಇತಿಹಾಸ’ಕ್ಕೆ ಹೊಂದುವಂಥದ್ದಲ್ಲ. ಮಹಾಭಾರತಕ್ಕೆ ಈ ನೆಲದಲ್ಲಿ ‘ಇತಿಹಾಸ’ದ ಪಟ್ಟ ಸಿಕ್ಕಿದೆ. ಮಹಾಭಾರತ ಏಕಕಾಲದಲ್ಲಿ ಪುರಾಣವೂ ಹೌದು, ಇತಿಹಾಸವೂ ಹೌದು. ಮಹಾಭಾರತದ ಈ ‘ದ್ವಿಪಾತ್ರ’ವೇ ಅಧ್ಯಯನಾರ್ಹವಾದುದು; ಭಾರತೀಯ ಚಿಂತನವಿಧಾನದ ಎಳೆಗಳು ಈ ಭೂಮಿಕೆಯಲ್ಲಿ ಅಡಗಿವೆ.

ಆದರೆ ಕಾಲಕ್ರಮದಲ್ಲಿ ಪಾಶ್ಚಾತ್ಯ ಇತಿಹಾಸಕಲ್ಪನೆಯ ಜಾಡಿನಲ್ಲಿಯೇ ಭಾರತದ ಇತಿಹಾಸವನ್ನು ನಿರೂಪಿಸುವ, ವಿಶ್ಲೇಷಿಸುವ ಕೆಲಸ ಈ ದೇಶದಲ್ಲೂ ಆರಂಭವಾಯಿತು. ಆಗ ಈ ದೇಶವನ್ನು ಆಳುತ್ತಿದ್ದ ಬ್ರಿಟಿಷರಿಗೆ ಅಂಥದೊಂದು ಇತಿಹಾಸವನ್ನು ಹುಟ್ಟುಹಾಕುವುದು ಹಲವು ಕಾರಣಗಳಿಂದ ಅನಿವಾರ್ಯ ಅಸ್ತ್ರವಾಯಿತು. ಬಹಳ ಬೇಗ ಇಡಿಯ ದೇಶದ ಬೌದ್ಧಿಕ ವಲಯ ಆ ಜಾಡಿಗೆ ಪಕ್ಕಾಯಿತು. ‘ಭಾರತೀಯರಿಗೆ ಇತಿಹಾಸಪ್ರಜ್ಞೆ ಇರಲಿಲ್ಲ’ ಎನ್ನುವ ವಾದದ ಪರ–ವಿರೋಧಗಳೂ ಕೂಡ ಪಾಶ್ಚಾತ್ಯ ಮಾದರಿಯ ನೆರಳಿನಿಂದಲೇ ನಡೆಯುವಷ್ಟರ ಮಟ್ಟಿಗೆ ‘ಇತಿಹಾಸಪ್ರಜ್ಞೆ’ ನೆಲೆಯೂರಿತು. ಈ ಪ್ರಕ್ರಿಯೆಯಲ್ಲಿ ನಾವು ಎಷ್ಟನ್ನೋ ಕಳೆದುಕೊಂಡಿದ್ದೇವೆ, ಎಷ್ಟನ್ನೋ ಪಡೆದುಕೊಂಡಿದ್ದೇವೆ.

ಆದರೆ ಕಳೆದುಕೊಂಡದ್ದೇನು, ಪಡೆದುಕೊಂಡದ್ದೇನು – ಎನ್ನುವುದರ ಸರಿಯಾದ ಅಜಮಾಯಿಷಿ ಇನ್ನೂ ನಡೆಯಬೇಕಿದೆ. ಹೀಗಿದ್ದರೂ ಭಾರತೀಯತೆಯ ಹಲವು ಆಯಾಮಗಳನ್ನು ಈ ‘ಇತಿಹಾಸಪ್ರಜ್ಞೆ’ಯ ತಕ್ಕಡಿಯಲ್ಲಿ ತೂಗುವ ಕೆಲಸ ನಿರಂತರವಾಗಿ ನಡೆಯುತ್ತಲೇ ಬಂದಿದೆ. ಈ ಮೌಲ್ಯಮಾಪನದಲ್ಲಿ ಕೆಲವರ ಪಾತ್ರವನ್ನು ‘ಕಟ್ಟುವ’ಕ್ರಿಯೆಯಾಗಿಯೂ, ಮತ್ತೆ ಕೆಲವರ ಪಾತ್ರವನ್ನು ‘ಕೆಡಹುವಿಕೆ’ಯಾಗಿಯೂ ನೋಡುವುದುಂಟು. ಈ ವಿಂಗಡಣೆಯ ಮಾನದಂಡಗಳು, ನಿರೀಕ್ಷೆಗಳು, ಸತ್ಯಾಸತ್ಯಗಳು ಏನಾದರೂ ಇರಲಿ, ಈ ಎರಡು ದಾರಿಗಳಲ್ಲಿಯೂ ಹಲವರು ಶ್ರೇಷ್ಠ ವಿದ್ವಾಂಸರು ಬೆಳಕಿಗೆ ಬಂದರು; ಅವರ ಸಂಶೋಧನೆ–ಅಧ್ಯಯನಗಳ ಪರಿಶ್ರಮದಿಂದ ಭಾರತೀಯತೆಯ ಹಲವು ಸ್ವರೂಪಗಳು ಅಕ್ಷರರೂಪವನ್ನು ಕಂಡವು.

ಈ ಪರಂಪರೆಗೆ ಸೇರಿದ ವಿದ್ವಾಂಸರಲ್ಲಿ ಒಬ್ಬರು ಡಿ. ಡಿ. ಕೋಸಂಬೀ. ‘ಇತಿಹಾಸಪ್ರಜ್ಞೆ’ಯನ್ನು ರಾಜಕಾರಣವು ಯಶಸ್ವಿಯಾಗಿ ಬಳಸಿಕೊಳ್ಳುತ್ತದೆ. ಸ್ವಾತಂತ್ರ್ಯಪೂರ್ವದ ಭಾರತದಲ್ಲಿ ಬ್ರಿಟಿಷರು ಇತಿಹಾಸವನ್ನು ಅವರ ಅನುಕೂಲಕ್ಕೆ ತಕ್ಕಂತೆ ಸೃಷ್ಟಿಸಿ, ಬಳಸಿಕೊಂಡದ್ದು ಈಗ ಚರಿತ್ರೆಯ ಭಾಗವೇ ಆಗಿದೆ. ಹೀಗೆಯೇ ಸ್ವಾತಂತ್ರ್ಯಾನಂತರದ ಭಾರತದಲ್ಲಿಯೂ ಅಂಥದ್ದೇ ರಾಜಕೀಯಬುದ್ಧಿ ಮುಂದುವರೆದು, ಇತಿಹಾಸವನ್ನು ರಾಜಕೀಯ ಪಕ್ಷಗಳು ಸ್ವಹಿತಾಸಕ್ತಿಗೆ ಬಳಸಿಕೊಳ್ಳುತ್ತಿರುವುದು ಗುಟ್ಟಾಗೇನೂ ಉಳಿದಿಲ್ಲ. ಹೀಗಾಗಿ ಇತಿಹಾಸ ಎನ್ನುವುದು ಕೇವಲ ನೆನ್ನೆಯ ಬಗ್ಗೆ ನಡೆಯುವ ಸಂಶೋಧನೆಯಷ್ಟೆ ಅಲ್ಲ, ಅದು ಇಂದಿನ ವಿದ್ಯಮಾನವನ್ನು ಪ್ರಭಾವಿಸಿ, ನಾಳೆಗೆ ದಾರಿಯನ್ನು ನಿರ್ಮಿಸುವ ಭಾವಚಕ್ರವಾಗಿದೆ.

ಇಂದಿನ ಸಮಸ್ಯೆಗಳಿಗೆಲ್ಲ ಹಿಂದಿನ ಸಮಾಜದ ದುಷ್ಟಪದ್ಧತಿಗಳೇ ಕಾರಣ ಎಂದು ‘ನೆನ್ನೆ’ಯನ್ನು ದೂರುವ ಇತಿಹಾಸಪ್ರಜ್ಞೆ ಒಂದು ಕಡೆ; ಮತ್ತೊಂದು ಕಡೆ, ಪ್ರಾಚೀನ ಭಾರತ ಎಂದರೆ ಅದು ಶ್ರೇಷ್ಠತೆಯ ತವರು – ಎಂದು ಪ್ರತಿಪಾದಿಸುವ ‘ಇತಿಹಾಸಪ್ರಜ್ಞೆ’. ಒಂದೇ ಕೃತಿ ಒಂದು ಗುಂಪಿನವರಿಗೆ ಶ್ರೇಷ್ಠತೆಯ ಮಾನದಂಡವಾಗಿ ಕಂಡರೆ, ಮತ್ತೊಂದು ಗುಂಪಿಗೆ ಅದೇ ಕೃತಿ ಶೋಷಣೆಯ ಪ್ರತಿರೂಪವಾಗಿ ಕಾಣುತ್ತದೆ. ಭಾರತೀಯ ಸಮಾಜದಲ್ಲಿ ಇಂದು ಕಾಣುತ್ತಿರುವ ಜಾತಿಪದ್ಧತಿ, ಶೋಷಣೆ, ಬಡತನ, ಅನಕ್ಷರತೆ – ಹೀಗೆ ಹಲವು ಸಮಸ್ಯೆಗಳ ಮೂಲಕಾರಣವನ್ನು ವೇದ–ರಾಮಾಯಣ–ಭಗವದ್ಗೀತೆಗಳಲ್ಲಿ ಹುಡುಕಿದ ಮೊದಲಿಗರಲ್ಲಿ ಡಿ. ಡಿ. ಕೋಸಂಬೀ ಸೇರುತ್ತಾರೆ. ಭಗವದ್ಗೀತೆಯು ಸ್ತ್ರೀ–ಶೂದ್ರರನ್ನು ಕೀಳಾಗಿ ಕಾಣುತ್ತದೆ, ಬ್ರಾಹ್ಮಣಿಕೆಯ ವಿಜೃಂಭಣೆಯೇ ಅದರಲ್ಲಿ ಮೆರೆದಿದೆ;

ಸಂಸ್ಕೃತಕಾವ್ಯ ಎಂದರೆ ಅದು ತಿಂದು–ಕೊಬ್ಬಿ ಮೈಮರೆತ ರಾಜಾಸ್ತಾನದಲ್ಲಿ ಸಮಯ ಕಳೆಯಲು ಹುಟ್ಟಿಕೊಂಡ ಚಮತ್ಕಾರದ ಬೊಗಳೆ; ಯಜ್ಞ ಎನ್ನುವುದು ಬ್ರಾಹ್ಮಣರು ದಕ್ಷಿಣೆಗಾಗಿ ಸೃಷ್ಟಿಸಿಕೊಂಡ ವ್ಯಾಪಾರ; ಹೊರಗಿನಿಂದ ಬಂದ ಆರ್ಯರು ಈ ದೇಶದ ಮೂಲನಿವಾಸಿಗಳನ್ನೇ ಜೀತದಾಳುಗಳನ್ನಾಗಿಸಿಕೊಂಡರು – ಇವು, ಇಂಥವು ಹಲವು ಸಿದ್ಧಾಂತಗಳ ಬಳಕೆ ನಮ್ಮ ದೇಶದ ಬೌದ್ಧಿಕ–ಸಾಮಾಜಿಕ ವಲಯಗಳಲ್ಲಿ ನಿತ್ಯವೂ ನಡೆಯುತ್ತಲೇ ಇರುತ್ತವೆ. ಇವೆಲ್ಲವುಗಳ ಹಿನ್ನೆಲೆಯಲ್ಲಿ ಡಿ. ಡಿ. ಕೋಸಂಬೀ ಚಿಂತನೆಗಳು ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಕೆಲಸ ಮಾಡುತ್ತಿರುವುದನ್ನು ತಳ್ಳಿಹಾಕಲಾಗದು. ಭಾರತೀಯ ಇತಿಹಾಸವನ್ನು ಮಾರ್ಕ್ಸಿಸ್ಟ್‌ ದೃಷ್ಟಿಕೋನದಿಂದ ನಿರೂಪಿಸಿದವರಲ್ಲಿ ಅವರು ಅಗ್ರಗಣ್ಯರು. ಅವರ ನಿಲುವುಗಳು ಹಲವರಿಗೆ ಪ್ರಶ್ನಾರ್ಹವಾಗಿ ಕಾಣುವುದು ಸಹಜ;

ಆದರೆ ಅವರ ಪಾಂಡಿತ್ಯ–ಪ್ರತಿಭೆಗಳನ್ನು ಯಾರೂ ಪ್ರಶ್ನಿಸಲಾರರು. ‘ಆಸ್ತಿಕ’ ಎಂದರೆ ‘ಆಸ್ತಿ’ ಇರುವವನು – ಎಂದು ಅಪೂರ್ವ ವ್ಯುತ್ಪತ್ತಿ ಹೇಳುವ ‘ವಿದ್ವತ್’ ಪರಂಪರೆಗೆ ಸೇರಿದವರಲ್ಲ ಕೋಸಂಬೀ. ಅವರದ್ದು ಗಟ್ಟಿಯಾದ ವಿದ್ವತ್ತು. ಹೀಗಾಗಿ ಅವರ ನಿಲುವುಗಳನ್ನು ಭಾರತೀಯ ಇತಿಹಾಸದಲ್ಲಿ ಆಸಕ್ತಿ ಇರುವ ಎಲ್ಲ ಪಂಥಗಳ ವಿದ್ವಾಂಸರೂ ಸಂಶೋಧಕರೂ ಗಮನಿಸಲೇಬೇಕಾಗುತ್ತದೆ. ಬೌದ್ಧಿಕ ಚರ್ಚೆಗಳೇ ಬಹಳ ತೆಳುವಾಗಿಯೂ ಅಗ್ಗವಾಗಿಯೂ ನಡೆಯುತ್ತಿರುವ ಈ ಕಾಲದಲ್ಲಿ ಅವರಂಥವರ ಸ್ಮರಣೆ–ಅಧ್ಯಯನಗಳು ನಮ್ಮ ಚಿಂತನೆಗಳಿಗೆ ಶಕ್ತಿಯನ್ನೂ ಕ್ಷಮತೆಯನ್ನೂ ಹೊಣೆಗಾರಿಕೆಯನ್ನೂ ಒದಗಿಸಿಯಾವು. ಇಂದು ನಮ್ಮ ದೇಶದಲ್ಲಿ ‘ಪೂರ್ವಪಕ್ಷ’ ಮತ್ತು ‘ಸಿದ್ಧಾಂತ’ಗಳ ಪರಿಕಲ್ಪನೆ ಮತ್ತೆ ಸುದ್ದಿಯಲ್ಲಿವೆ.

ಶೆಲ್ಡಾನ್ ಪೊಲಾಕ್ ಮತ್ತು ರಾಜೀವ್‌ ಮಲ್ಹೋತ್ರಾ ಮಧ್ಯೆ ನಡೆದಿರುವ ಬೌದ್ಧಿಕ ಸಮರದಲ್ಲಿ ಈ ಕಲ್ಪನೆಗಳ ಪ್ರಸ್ತಾಪವಾಗಿದೆಯಷ್ಟೆ. ಪ್ರಾಚೀನ ಭಾರತದ ಮೌಲ್ಯಗಳಲ್ಲಿ ಶ್ರದ್ಧೆಯುಳ್ಳವವರು ಖಂಡಿತವಾಗಿಯೂ ಅವರ ಪೂರ್ವಪಕ್ಷಕ್ಕಾದರೂ ರಾಹುಲ ಸಾಂಕೃತ್ಯಾಯನ, ಶೆಲ್ಡಾನ್‌ ಪೊಲಾಕ್‌, ದೇವೀಪ್ರಸಾದ ಚಟ್ಟೋಪಾಧ್ಯಾಯರಂಥವರ ಜೊತೆಯಲ್ಲಿ ಕೋಸಂಬಿಯವರನ್ನು ನೋಡಲೇಬೇಕಾಗುತ್ತದೆ. ಅಂತೆಯೇ ವೇದ–ಗೀತೆ–ಯಜ್ಞ–ರಾಮಾಯಣ–ಸಂಸ್ಕೃತಕಾವ್ಯಗಳಲ್ಲಿ ದೋಷಗಳನ್ನಷ್ಟೆ ಕಾಣುವವರು – ಆನಂದ ಕುಮಾರಸ್ವಾಮಿ, ಹಜಾರೀಪ್ರಸಾದ್‌ ದ್ವಿವೇದಿ, ಗೋಪಿನಾಥ ಕವಿರಾಜ್. ಕಪಿಲಾ ವಾತ್ಸ್ಯಾಯನರಂಥವರ ಬರಹಗಳನ್ನು ಅಧ್ಯಯನ ಮಾಡಲೇಬೇಕು. ಕೋಸಂಬಿಯವರು ತೀರಿಕೊಂಡು ಇದೇ ಜೂನ್ 29ಕ್ಕೆ ಐವತ್ತು ವರ್ಷಗಳಾಗುತ್ತವೆ.

ನಮ್ಮ ದೇಶದ ಬೌದ್ಧಿಕ ವಾತಾವರಣದಲ್ಲಿ ಗಟ್ಟಿತನ, ಪ್ರಾಮಾಣಿಕತೆ, ಅಧ್ಯಯನಶೀಲತೆಗಳು ಪುನರುಜ್ಜೀವಿತಗೊಳ್ಳಲು ಅವರ ಸ್ಮರಣೆ ಕಾರಣವಾಗಲಿ ಎಂಬ ಆಶಯವಷ್ಟೆ ಈ ಬರಹದ ಹಿಂದಿರುವ ಮನೋಧರ್ಮ. ಡಿ. ಡಿ. ಕೋಸಂಬೀ ಹುಟ್ಟಿದ್ದು ಗೋವಾದಲ್ಲಿ, 1907ರ ಜುಲೈ 31ರಂದು. ದಾಮೋದರ ಧರ್ಮಾನಂದ ಕೋಸಂಬೀ ಅವರ ಪೂರ್ಣ ಹೆಸರು. ಅವರ ತಂದೆ ಧರ್ಮಾನಂದ ದಾಮೋದರ ಕೋಸಂಬೀ (1876-1947); ಖ್ಯಾತ ಬೌದ್ಧವಿದ್ವಾಂಸರು; ಸ್ವಾತಂತ್ರ್ಯ ಸಂಗ್ರಾಮದಲ್ಲೂ ಭಾಗವಹಿಸಿದ್ದವರು. ಗಾಂಧೀಜಿಯವರಿಗೂ ಹತ್ತಿರವಾಗಿದ್ದವರು ಧರ್ಮಾನಂದ ದಾಮೋದರ ಕೋಸಂಬೀ; ಅಂಬೇಡ್ಕರ್‌ ಅವರು ಬೌದ್ಧಧರ್ಮದ ಕಡೆಗೆ ಆಕರ್ಷಿತರಾಗುವಲ್ಲಿ ಅವರ ಪಾತ್ರವಿದೆ ಎನ್ನುತ್ತಾರೆ ಚರಿತ್ರಕಾರರು.

1918ರಲ್ಲಿ ಅಮೆರಿಕಕ್ಕೆ ತಂದೆಯೊಂದಿಗೆ ತೆರಳಿದ ಡಿ. ಡಿ. ಕೋಸಂಬೀ ಅಲ್ಲಿಯ ಮಸಾಚುಸೆಟ್ಸ್‌ನ ಕೇಂಬ್ರಿಡ್ಜ್ ಹೈ ಅ್ಯಂಡ್‌ ಲ್ಯಾಟಿನ್‌ ಸ್ಕೂಲಿನಲ್ಲಿ ವಿದ್ಯಾಭ್ಯಾಸವನ್ನು ಮುಂದುವರೆಸಿದರು. ಮುಂದೆ ಹಾರ್ವರ್ಡ್‌ ವಿಶ್ವವಿದ್ಯಾಲಯದಲ್ಲಿ ಗಣಿತದಲ್ಲಿ ಉನ್ನತ ವಿದ್ಯಾಭ್ಯಾಸವನ್ನು ಮಾಡಿದರು. ಗಣಿತದ ಜೊತೆಯಲ್ಲಿ ಗ್ರೀಕ್‌, ಲ್ಯಾಟಿನ್‌, ಜರ್ಮನ್‌, ಫ್ರೆಂಚ್‌ಭಾಷೆಗಳಲ್ಲಿ ಪ್ರಭುತ್ವವನ್ನೂ ಸಂಪಾದಿಸಿದರು. ಸಂಸ್ಕೃತದಲ್ಲೂ ಅವರ ಪಾಂಡಿತ್ಯ ಗಳಿಸಿದರು. ಭಾರತಕ್ಕೆ 1929ರಲ್ಲಿ ಹಿಂದಿರುಗಿದ ಡಿ. ಡಿ. ಕೋಸಂಬಿಯವರು ಬನಾರಸ್‌ ಹಿಂದು ವಿಶ್ವವಿದ್ಯಾಲಯದ ಗಣಿತವಿಭಾಗದಲ್ಲಿ ಅಧ್ಯಾಪಕರಾಗಿ ನೇಮಕಗೊಂಡರು. ಬಳಿಕ ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ವೃತ್ತಿಯನ್ನು ಮುಂದುವರೆಸಿ, 1932ರಲ್ಲಿ ಪೂನಾದ ಫರ್ಗುಸನ್‌ ಕಾಲೇಜಿನಲ್ಲಿ ಪ್ರೋಫೆಸರ್‌ ಆದರು.

1946ರಲ್ಲಿ ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್‌ ಆಫ್‌ ಫಂಡಮೆಂಟಲ್‌ ರಿಸರ್ಚ್‌ನ ಗಣಿತವಿಭಾಗದಲ್ಲಿ ಪ್ರೊಫೆಸರ್‌ ಹುದ್ದೆಗೆ ಖ್ಯಾತ ವಿಜ್ಞಾನಿ ಡಾ. ಹೋಮಿ ಭಾಭಾ ಅವರೇ ಕೋಸಂಬಿಯವರನ್ನು ಆಹ್ವಾನಿಸಿದರು. 1962ರವರೆಗೆ ಅಲ್ಲಿಯೇ ಇದ್ದರು. ಗಣಿತದಲ್ಲಿ ಹತ್ತಾರು ಸಂಶೋಧನಪ್ರಬಂಧಗಳನ್ನು ಕೋಸಂಬೀ ಪ್ರಕಟಸಿದ್ದಾರೆ. ಗಣಿತದಲ್ಲಿ ಅವರ ಸಾಧನೆಯನ್ನು ಆ ಕ್ಷೇತ್ರದ ತಜ್ಞರಷ್ಟೆ ವಿಶ್ಲೇಷಿಸಬಲ್ಲರು. ಗಣಿತದ ಜೊತೆಗೆ ಕೋಸಂಬಿಯವರಿಗೆ ಪ್ರಾಚೀನ ಭಾರತದ ಇತಿಹಾಸದಲ್ಲೂ ತುಂಬ ಆಸಕ್ತಿ ಇದ್ದಿತು. ಮಾರ್ಕ್ಸಿಸ್ಟ್ ಚಳವಳಿಯೊಂದಿಗೆ ಗುರುತಿಸಿಕೊಂಡಿದ್ದ ಅವರು ಭಾರತದ ಇತಿಹಾಸವನ್ನು ಆ ದೃಷ್ಟಿಯಿಂದಲೇ ವಿಶ್ಲೇಷಿಸಿದರು. 1954ರಲ್ಲಿ ಪ್ರಕಟವಾದ ‘ಆ್ಯನ್ ಇಂಟ್ರಡಕ್ಷನ್‌ ಟು ಸ್ಟಡಿ ಆಫ್‌ ಇಂಡಿಯನ್‌ ಹಿಸ್ಟರಿ’ ಇತಿಹಾಸವನ್ನು ಕುರಿತು ಅವರ ಮೊದಲ ಪುಸ್ತಕ. ಇದು ಪ್ರಾಚೀನ ಭಾರತೀಯ ಇತಿಹಾಸವನ್ನು ಕುರಿತ ಅಧ್ಯಯನದಲ್ಲಿ ತುಂಬ ಪ್ರಭಾವ ಬೀರಿದ ಕೃತಿ.

1962ರಲ್ಲಿ ಪ್ರಕಟವಾದ ‘ಮಿಥ್‌ ಅ್ಯಂಡ್‌ ರಿಯಾಲಿಟಿ’ ಮತ್ತು 1964ರಲ್ಲಿ ಪ್ರಕಟವಾದ ‘ದಿ ಕಲ್ಚರ್ ಅ್ಯಂಡ್‌ ಸಿವಿಲೈಜೇಷನ್‌ ಆಫ್ ಏನ್ಷಿಯೆಂಟ್‌ ಇಂಡಿಯಾ ಇನ್‌ ಹಿಸ್ಟಾರಿಕಲ್‌ ಔಟ್‌ಲೈನ್‌’ – ಈ ಎರಡು ಕೃತಿಗಳು ಹಲವು ಭಾಷೆಗಳಲ್ಲಿ ಅನುವಾದಗೊಂಡು ಪ್ರಾಚೀನ ಭಾರತದ ಇತಿಹಾಸದ ಅಧ್ಯಯನದಲ್ಲಿ ಮಹತ್ತರವಾದ ಬದಲಾವಣೆಯನ್ನು ತಂದವು. ಪುರಾತತ್ತ್ವಶೋಧ, ನಾಣ್ಯಶಾಸ್ತ್ರ, ಭಾಷಾಶಾಸ್ತ್ರಗಳ ಸಹಾಯದೊಂದಿಗೆ ಅವರ ಸಿದ್ಧಾಂತಗಳನ್ನು ವೈಜ್ಞಾನಿಕ ವಿಧಾನದ ನೆರವಿನೊಂದಿಗೆ ಮಂಡಿಸುತ್ತಹೋದರು. ಭಾರತದ ಬಗ್ಗೆ ಯೂರೋಪ್ ಬರೆದಿರುವ ಇತಿಹಾಸಕ್ಕಿಂತ ಭಿನ್ನವಾದ ರೀತಿಯಲ್ಲಿ ಇತಿಹಾಸವನ್ನು ಬರೆಯುವುದು ನನ್ನ ಉದ್ದೇಶ – ಎಂದು ಅವರು ಮೊದಲ ಕೃತಿಯಲ್ಲಿಯೇ ನಿವೇದಿಸಿಕೊಂಡಿದ್ದಾರೆ. ಮಾತ್ರವಲ್ಲ, ಇತಿಹಾಸ ಎಂದರೇನು ಎಂದೂ ವ್ಯಾಖ್ಯಾನಿಸಿದ್ದಾರೆ.

ಸಾಮಾಜಿಕ ಆರ್ಥಿಕತೆಯ ಅಂಶಗಳು ಇತಿಹಾಸದಲ್ಲಿ ಮೂಡಿಸಿರುವ ಹೆಜ್ಜೆಗಳನ್ನು ಕಡೆಗಣಿಸಬಾರದು ಎನ್ನುವುದು ಅವರ ನಿಲುವು. ಜನಸಾಮಾನ್ಯರಿಗೂ ಇತಿಹಾಸದಲ್ಲಿ ಸ್ಥಳಾವಕಾಶ ಒದಗಿಸಿದ್ದು ಕೋಸಂಬಿಯವರ ಇತಿಹಾಸರಚನೆಯ ವಿಶೇಷತೆ ಎಂದು ಅವರನ್ನು ಇತಿಹಾಸತಜ್ಞರು ಕೊಂಡಾಡಿದ್ದಾರೆ. ಅವರು ಆರಿಸಿಕೊಂಡಿರುವ ವಿಷಯಗಳ ಹರವು ಕೂಡ ದೊಡ್ಡದು. ಆರ್ಯರ ‘ಆಕ್ರಮಣ’ದ ಪರಿಣಾಮಗಳು, ಭಗವದ್ಗೀತೆ, ಮಾತೃದೇವತೆಯ ಪರಿಕಲ್ಪನೆ, ಜಾತಿಪದ್ಧತಿ, ಪಂಢರಾಪುರದ ಯಾತ್ರೆ, ಗೋವಾದ ಇತಿಹಾಸ, ಐತಿಹಾಸಿಕ ಕೃಷ್ಣ, ಗೋತ್ರಗಳ ಕಲ್ಪನೆ–ವಿಕಾಸ, ಬೌದ್ಧಧರ್ಮದ ಬೆಳವಣಿಗೆ, ಕಾಲಿದಾಸನ ನಾಟಕಗಳ ಹಿನ್ನೆಲೆ, ಕೋಸಲ ಮತ್ತು ಮಗಧರಾಜ್ಯಗಳು, ಅಶೋಕನ ಶಾಸನಗಳು, ಅರ್ಥಶಾಸ್ತ್ರ, ವೇದರ್ಷಿಗಳು – ಹೀಗೆ ಹತ್ತಾರು ವಿಷಯಗಳನ್ನು ಕುರಿತಾದ ಅವರ ಸಂಶೋಧನ ಪ್ರಬಂಧಗಳು ಅಧ್ಯಯನಾರ್ಹವಾಗಿವೆ.

ಬೌದ್ಧಧರ್ಮದ ಅವನತಿಗೆ ಬೌದ್ಧವಿಹಾರಗಳ ಮೋಜು, ಅವುಗಳ ನಿರ್ವಹಣೆಗೆ ಆರ್ಥಿಕ ಕೊರತೆ ಎದುರಾದದ್ದು, ಭಿಕ್ಷುಗಳಲ್ಲಿ ಸಡಿಲವಾದ ಶ್ರದ್ಧೆಗಳೇ ಕಾರಣವಾದವು ಎಂದಿದ್ದಾರೆ ಅವರು. ಭರ್ತೃಹರಿಯ ‘ಶತಕತ್ರಯ’ವನ್ನು ಸಂಪಾದಿಸಿ ಪ್ರಕಟಿಸಿರುವುದೂ ಇಲ್ಲಿ ಉಲ್ಲೇಖಾರ್ಹ. ಈ ಕೃತಿಯನ್ನು ಅವರು ಮಾರ್ಕ್ಸ್, ಇಂಗೆಲ್ಸ್‌ ಮತ್ತು ಲೆನಿನ್‌ಗೆ ಅರ್ಪಿಸಿರುವುದು ಸ್ವಾರಸ್ಯಕರವಾಗಿದೆ.  1966ರ ಜೂನ್‌ 29ರಂದು ಡಿ. ಡಿ. ಕೋಸಂಬೀ ನಿಧನರಾದರು. ಡಿ. ಡಿ. ಕೋಸಂಬೀ ಅವರು ಮಹಾಪ್ರತಿಭಾವಂತ, ವಿದ್ವಾಂಸ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಅವರ ಎಷ್ಟೋ ನಿಲುವುಗಳ ಪ್ರಶ್ನಾರ್ಹ ಎನ್ನುವುದನ್ನೂ ತಳ್ಳಿಹಾಕುವಂತಿಲ್ಲ. ಉದಾಹರಣೆಗೆ, ಆರ್ಯರ ಆಕ್ರಮಣವಾದವನ್ನು ಎತ್ತಿಹಿಡಿದದ್ದು, ಸಂಸ್ಕೃತಕಾವ್ಯಪರಂಪರೆಯನ್ನೇ ತಿರಸ್ಕರಿಸಿದ್ದು – ಇಂಥ ಎಷ್ಟೋ ವಾದಗಳು ಅವರು ನಂಬಿದ್ದ ‘ಸಿದ್ಧಾಂತ’ಕ್ಕೆ ಸರಿಯಾಗಿ ಹೊಂದಿಸುವಂಥ ಪ್ರಯಾಸಗಳಾಗಿಯೇ ಕಾಣುತ್ತವೆ.

ಯಾವುದೋ ಒಂದು ಕೃತಿಯನ್ನೋ ಅಥವಾ ಲಭ್ಯ ಶಾಸನಗಳನ್ನೋ ಆಧರಿಸಿ ಇತಿಹಾಸದ ಚಕ್ರವನ್ನು ‘ಹೀಗೇ ಇತ್ತು’ ಎಂದು ಹೇಳಲು ಸಾಧ್ಯವೇ ಎನ್ನುವುದನ್ನು ಎಲ್ಲ ಕಾಲದ ಪ್ರಜ್ಞಾವಂತರು ಯೋಚಿಸಬೇಕಾದ ವಿಷಯ. ಉದಾಹರಣೆಗೆ ಹೇಳುವುದಾದರೆ, ‘ಪುರುಷಸೂಕ್ತ’ ಹೇಗೆ ಜಾತಿವ್ಯವಸ್ಥೆಗೆ ಸಾಕ್ಷ್ಯವಾಗಲಾರದೋ, ಹಾಗೆಯೇ ರಾಮಾಯಣದ ಪುಷ್ಪಕವಿಮಾನ ಆ ಕಾಲದಲ್ಲಿ  ವಿಮಾನ ಇದ್ದುದಕ್ಕೆ ಸಾಕ್ಷ್ಯವೂ ಆಗಲಾರದು. ಕೋಸಂಬೀ ಅವರೇ ಗ್ರಂಥವೊಂದರ ಆರಂಭದಲ್ಲಿ ಹೇಳಿರುವ ಮಾತು: ‘A dispassionate observer who looks at India with ditachment and penetration would be struck by two mutually contradictory features: diversity and unity at the same time’ (ಆವೇಶಕ್ಕೆ ತುತ್ತಾಗದೆ ಭಾರತವನ್ನು ನಿರ್ಲಿಪ್ತವಾಗಿಯೂ ಆಳವಾದ ಒಳನೋಟದಿಂದಲೂ ನೋಡುವವನಿಗೆ ಎರಡು ಪರಸ್ಪರ ವಿರುದ್ಧ ಸಂಗತಿಗಳು ಎದುರಾಗುತ್ತವೆ:

ಏಕಕಾಲದಲ್ಲಿ ಏಕತೆ ಮತ್ತು ವಿವಿಧತೆ). ಹೀಗಿರುವಾಗ ಭಾರತದಂಥ ಪ್ರಾಚೀನವೂ ಸಂಕೀರ್ಣವೂ ಆದ ದೇಶದ ಇತಿಹಾಸವನ್ನು ಸರಳರೇಖಾತ್ಮಕವಾಗಿ ಬರೆಯಲಾದೀತೆ? ಇಂದು ‘ಇತಿಹಾಸಪ್ರಜ್ಞೆ’ ನಮ್ಮ ದೇಶದಲ್ಲಿ ಅತಿಯಾಗಿಯೇ ಎಚ್ಚರವಾಗಿರುವಂತಿದೆ. ಆದರೆ ಅದು ಆಯಾ ಗುಂಪಿನ ಉದ್ದೇಶಕ್ಕೆ ತಕ್ಕಂತೆ ಸಿದ್ಧವಾಗುವ ಇತಿಹಾಸವಾಗುತ್ತಿರುವುದೂ ಸ್ಪಷ್ಟ. ಇತಿಹಾಸದಿಂದ ಯಾರೂ ಪಾಠ ಕಲಿಯುವುದಿಲ್ಲ ಎನ್ನುವುದು ಕೂಡ ಇತಿಹಾಸವೇ ಕಲಿಸುತ್ತಿರುವ ಪಾಠ. ಜಗತ್ತಿನ ಹಲವು ಸಂಸ್ಕೃತಿಗಳನ್ನು, ಹಲವು ದೇಶಗಳ ಇತಿಹಾಸವನ್ನು ಸುಮಾರು ಎಂಬತ್ತು ವರ್ಷಗಳು ಅಧ್ಯಯನ ಮಾಡಿ, ತಮ್ಮ ತೊಂಬತ್ತೈದನೆಯ ವಯಸ್ಸಿನಲ್ಲಿ ‘ಕಾಲದ ಓಟದಲ್ಲಿ ಮನುಷ್ಯ ಒಂದು ಕ್ಷಣವಷ್ಟೆ’ – ಎಂದವರು, ವಿಲ್‌ ಡ್ಯುರಾಂಟ್.  ಮಾತ್ರವಲ್ಲ, ‘ಇತಿಹಾಸ ಎಂದರೆ ಉದಾಹರಣೆಗಳ ಮೂಲಕ ನಡೆಯುವ ತತ್ತ್ವಶಾಸ್ತ್ರದ ಶಿಕ್ಷಣ’ (History is philosophy teaching by examples) – ಎಂದೂ ಪ್ರತಿಪಾದಿಸಿದವರು.

‘ಇತಿಹಾಸ ಒಂದು ವಿಶಾಲ ಪ್ರಯೋಗಶಾಲೆಯಿದ್ದಂತೆ; ವಿಶ್ವವೇ ಅದರ ಕಾರ್ಯಾಗಾರ; ಮನುಷ್ಯನೇ ಅಲ್ಲಿ ಬಳಕೆಯಾಗುವ ಸಲಕರಣೆ; ಅನುಭವವೇ ದಾಖಲೆಗಳು. ವಿವೇಕಿಯಾದವನು ಬೇರೆಯವರ ತಪ್ಪಿನಿಂದಲೇ ಬುದ್ಧಿಯನ್ನು ಕಲಿಯಬಲ್ಲ; ಆದರೆ ದಡ್ಡ ಅವನ ತಪ್ಪಿನಿಂದಲೂ ಕೂಡ ಕಲಿಯಲಾರ. ಇತಿಹಾಸ ಎನ್ನುವುದು ಹಲವು ಶತಮಾನಗಳಿಂದ ಹರಿಯುತ್ತಬಂದಿರುವ ಬೇರೆ ಬೇರೆ ಮನುಷ್ಯರ ಅನುಭವಗಳು. ಚಲನಶೀಲವಾಗಿರುವ ಈ ದೃಶ್ಯದ ಕೆಲವು ತುಣುಕುಗಳನ್ನು ನಮ್ಮ ದೃಷ್ಟಿಯು ದಕ್ಕಿಸಿಕೊಂಡರೆ ಆಗ ನಮ್ಮ ತಿಳಿವಳಿಕೆ ವಿಸ್ತಾರವಾದೀತು. ನಮ್ಮ ವರ್ತಮಾನದ ವಿದ್ಯಮಾನಗಳನ್ನು ಬೆಳಗಿಸಬಲ್ಲಂಥ ಬೆಳಕು ಇತಿಹಾಸದಲ್ಲಿದೆಯೆ – ಎಂದು ನಾವು ಪ್ರಶ್ನಿಸಿಕೊಳ್ಳಬೇಕಾಗಿದೆ’ ಎಂದೂ ಅವರು ಎಚ್ಚರಿಸಿದರು. ಇಂಥದೊಂದು ಬೆಳಕಿನ ಹುಡುಕಾಟದಲ್ಲಿಯೇ ನಮ್ಮ ಇತಿಹಾಸದ ಅಧ್ಯಯನ ನಡೆಯಬೇಕೆನಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT