ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೇವಿಸ್‌ ಕಪ್‌ ಮೆಟ್ಟಿ ನಿಲ್ಲುವುದೇ ಸವಾಲು?

Last Updated 31 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

‘ತಂಡದಲ್ಲಿ ಒಳಜಗಳವಿಲ್ಲ. ಒಬ್ಬರು ಇನ್ನೊಬ್ಬರಿಗೆ ಸರಿಯಾದ ಬೆಂಬಲ ನೀಡುತ್ತಿದ್ದಾರೆ. ದೇಶಕ್ಕಾಗಿ ಆಡುವಾಗ ಎಲ್ಲರೂ ಶೇ 100 ರಷ್ಟು ಸಾಮರ್ಥ್ಯ ತೋರುವರು. ಇದರಿಂದ ಯಶಸ್ಸು ದೊರೆಯುವಂತಾಗಿದೆ’

–ಭಾರತ ಡೇವಿಸ್‌ ಕಪ್‌ ಟೆನಿಸ್‌ ತಂಡದ ಕೋಚ್‌ ಜೀಶನ್‌ ಅಲಿ ಅವರು ಇತ್ತೀಚೆಗೆ ತಂಡದ ಬಗ್ಗೆ ಹೇಳಿದ ಮಾತಿದು. ಡೇವಿಸ್‌ ಕಪ್‌ ಟೂರ್ನಿಯ ಏಷ್ಯಾ ಓಸೀನಿಯಾ ಹಂತದಲ್ಲಿ ಗೆದ್ದು ವಿಶ್ವಗುಂಪಿನ ಪ್ಲೇ ಆಫ್‌ಗೆ ಅರ್ಹತೆ ಪಡೆದ ಭಾರತ ತಂಡದ ಬಗ್ಗೆ ಅವರು ಮೆಚ್ಚುಗೆಯ ಮಾತುಗಳನ್ನಾಡಿದ್ದರು.

ಏಷ್ಯಾ ಓಸೀನಿಯಾ ಹಂತದಲ್ಲಿ ಚೀನಾ ತೈಪೆ (5–0) ಮತ್ತು ದಕ್ಷಿಣ ಕೊರಿಯ (3–1) ತಂಡಗಳನ್ನು ಮಣಿಸಿ ಭಾರತ ವಿಶ್ವ ಗುಂಪಿನ ಪ್ಲೇ ಆಫ್‌ಗೆ ಪ್ರವೇಶಿಸಿದೆ. ಆದರೆ ವಿಶ್ವಗುಂಪಿನಲ್ಲಿ ಸ್ಥಾನ ಪಡೆಯುವ ಕನಸು ನನಸಾಗಲು ಬಲುದೊಡ್ಡ ತಡೆಯೊಂದನ್ನು ದಾಟುವ ಸವಾಲು ಭಾರತದ ಮುಂದಿದೆ.

ಬಲಿಷ್ಠ ಸರ್ಬಿಯ ತಂಡವನ್ನು ಮಣಿಸಬೇಕಿರುವುದೇ ಆ ಸವಾಲು. ಈ ಪ್ಲೇ ಆಫ್‌ ಪಂದ್ಯ ಸೆಪ್ಟೆಂಬರ್‌ 12 ರಿಂದ 14ರ ವರೆಗೆ ಬೆಂಗಳೂರಿನಲ್ಲಿ ನಡೆಯಲಿದೆ. ಅನುಭವಿ ಲಿಯಾಂಡರ್‌ ಪೇಸ್‌ ಮತ್ತು ಮಹೇಶ್‌ ಭೂಪತಿ ಅವರ ಅನುಪಸ್ಥಿತಿಯಲ್ಲಿ ಭಾರತ ಈ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಯುವ ಆಟಗಾರರನ್ನೇ ನೆಚ್ಚಿಕೊಂಡು ಬಲಿಷ್ಠ ಸರ್ಬಿಯ ಎದುರು ಪೈಪೋಟಿ ನಡೆಸಬೇಕಿದೆ.

ಸೋಮದೇವ್‌ ದೇವವರ್ಮನ್‌, ರೋಹನ್‌ ಬೋಪಣ್ಣ, ಯೂಕಿ ಭಾಂಬ್ರಿ ಮತ್ತು ಸಾಕೇತ್‌ ಮೈನೇನಿ ಅವರು ಭಾರತ ತಂಡದಲ್ಲಿದ್ದಾರೆ. ಅದೇ ರೀತಿ ಹೆಚ್ಚುವರಿ ಆಟಗಾರರಾಗಿ ರಾಮಕುಮಾರ್‌ ರಾಮನಾಥನ್‌ ಹಾಗೂ ಜೀವನ್‌ ನೆಡುಂಚೆಳಿಯನ್‌ ಅವಕಾಶ ಪಡೆದಿದ್ದಾರೆ. ವೈಯಕ್ತಿಕ ಕಾರಣಗಳಿಂದಾಗಿ ಪೇಸ್‌ ಅವರು ಸರ್ಬಿಯ ವಿರುದ್ಧ ಆಡದಿರಲು ನಿರ್ಧರಿಸಿದ್ದಾರೆ.  ಅಖಿಲ ಭಾರತ ಟೆನಿಸ್‌ ಸಂಸ್ಥೆ ಜೊತೆಗಿನ ‘ಕಚ್ಚಾಟ’ದ ಬಳಿಕ ಮಹೇಶ್‌ ಭೂಪತಿ ಅವರು ಡೇವಿಸ್‌ ಕಪ್‌ನಲ್ಲಿ ಆಡುತ್ತಿಲ್ಲ. ಆದ್ದ ರಿಂದ ಸರ್ಬಿಯ ವಿರುದ್ಧದ ಪಂದ್ಯಕ್ಕೂ ಅವರನ್ನು ಕಡೆಗಣಿಸಲಾಗಿದೆ.

ಭಾರತ 2011 ರಲ್ಲಿ ವಿಶ್ವ ಗುಂಪಿಗೆ ಅರ್ಹತೆ ಪಡೆದಿದ್ದರೂ ಮೊದಲ ಸುತ್ತಿನಲ್ಲಿ ಸೋಲು ಅನುಭವಿಸಿತ್ತು. ಸರ್ಬಿಯ ಕೈಯಲ್ಲಿ 1–4 ರಲ್ಲಿ ಪರಾಭವಗೊಂಡಿತ್ತು. ಇದೀಗ ಮೂರು ವರ್ಷಗಳ ಬಿಡುವಿನ ಬಳಿಕ ಮತ್ತೆ ವಿಶ್ವ ಗುಂಪಿಗೆ ಅರ್ಹತೆ ಪಡೆಯುವ ಹೊಸ್ತಿಲಲ್ಲಿ ಬಂದು ನಿಂತಿದೆ. ಭಾರತ ತಂಡವನ್ನು ವಿಶ್ವ ಗುಂಪಿಗೆ ಕೊಂಡೊಯ್ಯುವ ಬಲುದೊಡ್ಡ ಜವಾಬ್ದಾರಿಯನ್ನು ಹೊತ್ತುಕೊಂಡಿರುವ ಭಾರತದ ಆಟಗಾರರ ಮಾಹಿತಿ ಇಲ್ಲಿದೆ.

ಸೋಮದೇವ್‌ ದೇವವರ್ಮನ್‌
ಸಿಂಗಲ್ಸ್‌ ವಿಭಾಗದಲ್ಲಿ ಭಾರತದ ಭರವಸೆ ಎನಿಸಿರುವ ಸೋಮದೇವ್‌ ಇದೀಗ ಉತ್ತಮ ಫಾರ್ಮ್‌ನಲ್ಲಿಲ್ಲ ಎಂದೇ ಹೇಳಬಹುದು.
29ರ ಹರೆಯದ ಸೋಮದೇವ್‌ ಈಗ ರ್‍್ಯಾಂಕಿಂಗ್‌ನಲ್ಲಿ 147 ನೇ ಸ್ಥಾನದಲ್ಲಿದ್ದಾರೆ. ನ್ಯೂಯಾರ್ಕ್‌ನಲ್ಲಿ ನಡೆಯುತ್ತಿರುವ ಅಮೆರಿಕ ಓಪನ್‌ ಟೂರ್ನಿಯ ಪ್ರಧಾನ ಸುತ್ತು ಪ್ರವೇಶಿಸಲು ಅವರು ವಿಫಲರಾಗಿದ್ದರು. 2011ರಲ್ಲಿ ವಿಶ್ವ ರ್‍್ಯಾಂಕಿಂಗ್‌ನಲ್ಲಿ 62ನೇ ಸ್ಥಾನದಲ್ಲಿದ್ದ ಸೋಮದೇವ್‌ ಬಳಿಕ ಗಾಯದ ಸಮಸ್ಯೆಗೆ ಒಳಗಾಗಿ ಹಳೆಯ ಲಯ ಕಳೆದುಕೊಂಡಿದ್ದಾರೆ.

ಆದರೆ ಡೇವಿಸ್‌ ಕಪ್‌ನಲ್ಲಿ ಆಡುವ ವೇಳೆ ಸೋಮದೇವ್‌ ಅಮೋಘ ಆಟ ತೋರುವರು. ಈ ಕಾರಣ ಅವರ ಮೇಲೆ ನಿರೀಕ್ಷೆ ಇಡಬಹುದು.
2008 ರಲ್ಲಿ ಉಜ್ಬೆಕಿಸ್ತಾನ ವಿರುದ್ಧ ಸೋಮದೇವ್‌ ಚೊಚ್ಚಲ ಡೇವಿಸ್‌ ಕಪ್‌ ಪಂದ್ಯ ಆಡಿದ್ದರು. ಡೇವಿಸ್‌ ಕಪ್‌ನಲ್ಲಿ ಸೋಮ್‌ ಅವರ ಅತಿದೊಡ್ಡ ಗೆಲುವು 2011ರಲ್ಲಿ ಬಂದಿತ್ತು. ಸರ್ಬಿಯದ ವಿರುದ್ಧ ನೋವಿ ಸಾದ್‌ನಲ್ಲಿ ನಡೆದಿದ್ದ ವಿಶ್ವಗುಂಪಿನ ಪಂದ್ಯದ ಎರಡನೇ ಸಿಂಗಲ್ಸ್‌ನಲ್ಲಿ ಭಾರತದ ಆಟಗಾರ ಜಾಂಕೊ ತಿಪ್ಸರೆವಿಕ್‌ ಅವರನ್ನು ಮಣಿಸಿದ್ದರು.

ಸರ್ಬಿಯ ವಿರುದ್ಧದ ಪಂದ್ಯ ನಡೆಯಲಿರುವ ಕೆಎಸ್‌ಎಲ್‌ಟಿಎ ಕೋರ್ಟ್‌ ಸೋಮದೇವ್‌ ಆಟಕ್ಕೆ ಹೇಳಿ ಮಾಡಿಸಿದಂತಿದೆ. ಇಲ್ಲಿ ಚೆಂಡು ನೆಲಕ್ಕೆ ಅಪ್ಪಳಿಸಿದ ಬಳಿಕ ತುಂಬಾ ಮೇಲಕ್ಕೆ ಪುಟಿದೇಳುತ್ತದೆ. ಇದು ಸೋಮದೇವ್‌ಗೆ ನೆರವಾಗಲಿದೆ. ವಿಶ್ವಗುಂಪು ಪ್ರವೇಶಿಸುವ ಭಾರತದ ಕನಸು ಈಡೇರಬೇಕಾದರೆ ಸೋಮದೇವ್‌ ತಮ್ಮ ಎರಡೂ ಸಿಂಗಲ್ಸ್‌ ಪಂದ್ಯಗಳಲ್ಲಿ ಗೆಲುವು ಪಡೆಯುವುದು ಅನಿವಾರ್ಯ.

ಯೂಕಿ ಭಾಂಬ್ರಿ
ಗಾಯದ ಕಾರಣ ಐದು ತಿಂಗಳ ಕಾಲ ಅಂಗಳದಿಂದ ದೂರವುಳಿದಿದ್ದ ಯೂಕಿ ಭಾಂಬ್ರಿ ಸರ್ಬಿಯ ವಿರುದ್ಧದ ಪಂದ್ಯದಲ್ಲಿ ಆಡಲಿರುವುದು ಭಾರತ ತಂಡಕ್ಕೆ ಹೆಚ್ಚಿನ ಬಲ ತಂದಿತ್ತಿದೆ.

2009ರ ಆಸ್ಟ್ರೇಲಿಯ ಓಪನ್‌ ಜೂನಿಯರ್‌ ಚಾಂಪಿಯನ್‌ಷಿಪ್‌ ಗೆಲ್ಲುವ ಮೂಲಕ ಟೆನಿಸ್‌ ಜೀವನವನ್ನು ಸ್ಮರಣೀಯವಾಗಿ ಆರಂಭಿಸಿದ್ದ ಯೂಕಿ ಬಳಿಕ ನಿರೀಕ್ಷಿಸಿದಷ್ಟು ಯಶಸ್ಸು ಪಡೆದಿಲ್ಲ. ಆದರೂ ಕೆಲವೊಂದು ಟೂರ್ನಿಗಳಲ್ಲಿ ಮಿಂಚು ಹರಿಸಿದ್ದಾರೆ. 22ರ ಹರೆಯದ ಯೂಕಿ ಪ್ರಸಕ್ತ ರ್‍್ಯಾಂಕಿಂಗ್‌ನಲ್ಲಿ 153ನೇ ಸ್ಥಾನದಲ್ಲಿದ್ದಾರೆ.

ಅಮೆರಿಕದಲ್ಲಿ ಇತ್ತೀಚೆಗೆ ನಡೆದ ಐಟಿಎಫ್‌ ಟೂರ್ನಿಯ ಫೈನಲ್‌ ಪ್ರವೇಶಿಸುವ ಮೂಲಕ ಅವರು ಫಾರ್ಮ್‌ಗೆ ಮರಳಿದ ಸೂಚನೆ ನೀಡಿದ್ದಾರೆ.

ರೋಹನ್‌ ಬೋಪಣ್ಣ
ಕೊಡಗಿನ ಆಟಗಾರ ರೋಹನ್‌ ಬೋಪಣ್ಣ ಡಬಲ್ಸ್‌ನಲ್ಲಿ ಭಾರತದ ಸವಾಲನ್ನು ಮುನ್ನಡೆಸಲಿ ದ್ದಾರೆ. ಗ್ರ್ಯಾಂಡ್‌ ಸ್ಲಾಮ್‌ ಒಳಗೊಂಡಂತೆ ಹಲವು ಟೂರ್ನಿಗಳಲ್ಲಿ ಆಡಿರುವ ರೋಹನ್‌ ಅಪಾರ ಅನುಭವ ಹೊಂದಿದ್ದಾರೆ.

2010 ರಲ್ಲಿ ಬ್ರೆಜಿಲ್‌ ತಂಡವನ್ನು ಮಣಿಸಿ ಭಾರತ ವಿಶ್ವ ಗುಂಪಿಗೆ ಅರ್ಹತೆ ಪಡೆಯುವಲ್ಲಿ ಬೋಪಣ್ಣ ಅವರ ಪಾತ್ರ ಪ್ರಮುಖವಾಗಿತ್ತು. 34ರ ಹರೆಯದ  ಈ ಆಟಗಾರ ಮಹೇಶ್‌ ಭೂಪತಿ ಜೊತೆ ಡೇವಿಸ್‌ ಕಪ್‌ನಲ್ಲಿ ಹಲವು ಪಂದ್ಯಗಳಲ್ಲಿ ಗೆಲುವು ಪಡೆದಿದ್ದಾರೆ.

ಇದೀಗ ಭೂಪತಿ ಆಡದೇ ಇರುವ ಕಾರಣ ಬೋಪಣ್ಣ ಅವರು ಯುವ ಆಟಗಾರರ ಜೊತೆ ಡಬಲ್ಸ್‌ನಲ್ಲಿ ಭಾರತದ ಸವಾಲನ್ನು ಮುನ್ನಡೆಸುತ್ತಿದ್ದಾರೆ. ಈ ವರ್ಷ ಆಡಿದ ಎರಡೂ ಡೇವಿಸ್‌ ಕಪ್‌ ಪಂದ್ಯಗಳಲ್ಲಿ ಬೋಪಣ್ಣ ಜಯ ಪಡೆದಿದ್ದಾರೆ.

ಅಮೆರಿಕ ಓಪನ್‌ ಗ್ರ್ಯಾಂಡ್‌ ಸ್ಲಾಮ್‌ ಟೂರ್ನಿಯಲ್ಲಿ ಪಾಕಿಸ್ತಾನದ ಐಸಾಮ್‌ ಉಲ್‌ ಹಕ್‌ ಖುರೇಷಿ ಜೊತೆ ಆಡಿದ್ದ ಬೋಪಣ್ಣ ಮೊದಲ ಸುತ್ತಿನಲ್ಲೇ ನಿರಾಸೆ ಅನುಭವಿಸಿದ್ದರು.

ಸಾಕೇತ್‌ ಮೈನೇನಿ
ಡಬಲ್ಸ್‌ನಲ್ಲಿ ಬೋಪಣ್ಣ ಅವರಿಗೆ ಸಾಥ್‌ ನೀಡಲಿರುವ ಸಾಕೇತ್‌ ಮೈನೇನಿ ಭಾರತದ ಭವಿಷ್ಯದ ತಾರೆ ಎನಿಸಿದ್ದಾರೆ.
ಈ ವರ್ಷದ ಆರಂಭದಲ್ಲಿ ಚೀನಾ ತೈಪೆ ವಿರುದ್ಧ ನಡೆದ ಏಷ್ಯಾ ಓಸೀನಿಯಾ  ‘ಗುಂಪು–1’ ಹಂತದ ಪಂದ್ಯದ ಮೂಲಕ ಸಾಕೇತ್‌ ಡೇವಿಸ್‌ ಕಪ್‌ಗೆ ಪದಾರ್ಪಣೆ ಮಾಡಿದ್ದರು.

ಬೋಪಣ್ಣ ಜೊತೆಗೂಡಿ ಆಡಿದ್ದ ಅವರು ಗೆಲುವು ಸಾಧಿಸಿದ್ದರು. ಅದೇ ರೀತಿ ದಕ್ಷಿಣ ಕೊರಿಯ ವಿರುದ್ಧವೂ ಅವರು ಜಯ ಪಡೆದಿದ್ದರು.
ಈ ಮೂಲಕ ಡೇವಿಸ್‌ ಕಪ್‌ನಲ್ಲಿ ಅಜೇಯ ಸಾಧನೆ ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT