ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಣ್ಣನೆಯ ಪ್ರೀತಿ ಸಾಧ್ಯವೇ..?

ಅಂಕುರ, ಸರಣಿ– 5
Last Updated 25 ಜುಲೈ 2014, 19:30 IST
ಅಕ್ಷರ ಗಾತ್ರ

ಒಂದರೆ ನಿಮಿಷ ಬಿಡುವು ಮಾಡಿಕೊಳ್ಳಿ. ನೀವೀಗ ಆರಾಮವಾಗಿದ್ದೀರ. ಆದರೆ ಯಾವುದೋ ಕಾರಣಕ್ಕೆ ನಿಮ್ಮಲ್ಲಿ ಉದ್ರೇಕ ಕಾಣಿಸಿಕೊಳ್ಳುತ್ತದೆ. ಉದ್ವಿಗ್ನರಾಗುವಿರಿ. ನಿಮ್ಮೊಳಗೇನೋ ಬದಲಾವಣೆ. ಕಾಮನೆಗಳು ಕೆರಳಿದ ಅನುಭವ. ಈ ಒಂದು ಕ್ಷಣದಲ್ಲಿ ಏನೆಲ್ಲ ಆಗಿ ಹೋಯಿತು ನಿಮ್ಮ ದೇಹದಲ್ಲಿ?
ಕಾಮನೆಗಳ ವಿಷಯ ಬದಿಗಿಟ್ಟು ನೋಡುವ. ನಿಮ್ಮ ದೇಹದೊಳಗಿನ ರಕ್ತ ಪರಿಚಲನೆಯಲ್ಲಿ ಇದ್ದಕ್ಕಿದ್ದಂತೆ ಸಣ್ಣದೊಂದು ಬದಲಾವಣೆಯಾಯಿತು. ಶಿಶ್ನದೊಳಗಿನ ರಕ್ತಾನಳಗಳಿಗೆ ರಕ್ತ ನುಗ್ಗಿತು. ಪರಿಚಲನೆಯಾಗದೇ ಅಲ್ಲೇ ಉಳಿಯಿತು. ಪರಿಣಾಮ ಶಿಶ್ನ ಗಡುಸಾಯಿತು. ರಕ್ತ ಅಲ್ಲಿಯೇ ಉಳಿದ ಪರಿಣಾಮ ಉದ್ರೇಕ ಹಾಗೆಯೇ ಉಳಿಯಿತು. ಲೈಂಗಿಕಾಸಕ್ತಿ ನೆಲೆ ನಿಲ್ಲುವ ಬಗೆ ಇದು. ಒಮ್ಮೆ ಕಾಮನೆ ಕೆರಳಿದ ಕ್ಷಣ, ಮೆದುಳು ಕಾರ್ಯಕ್ಷೇತ್ರಕ್ಕಿಳಿಯುತ್ತದೆ. ಕೂಡಲೇ ನರವ್ಯೂಹಕ್ಕೆ ಒಂದು ಸಂದೇಶ ರವಾನಿಸುತ್ತದೆ. ದೇಹದ ದಕ್ಷಿಣ ಭಾಗದಲ್ಲಿ ಹೆಚ್ಚು ರಕ್ತ ಪೂರೈಸಲು ಸಂಕೇತ ನೀಡುತ್ತದೆ. ರಕ್ತ ಸರಬರಾಜು ಆಗುತ್ತದೆ. ನಿಮ್ಮಲ್ಲಿ ಉದ್ರೇಕ ಸ್ಥಿರಗೊಳ್ಳುತ್ತದೆ. ಕೆರಳಿದ ಕಾಮನೆಗಳು ಶಾಂತವಾಗುವವರೆಗೂ ಅದೃಷ್ಟಶಾಲಿಯಾಗಿದ್ದಲ್ಲಿ ಆ ಉದ್ರೇಕ ಸ್ಥಿರಗೊಂಡಿರುತ್ತದೆ. ನೀವು ಸಂತೃಪ್ತರಾಗುವವರೆಗೂ.

ಇದ್ಹೇಗೆ ಆಯಿತು?
ಉದ್ರೇಕಕ್ಕಾಗಿ ಮೂರು ಸಿಲಿಂಡರ್ ಆಕಾರಿನ ಟಿಶ್ಯುಗಳು ಶಿಶ್ನದಲ್ಲಿವೆ. ಎರಡು ಒಂದರ ಪಕ್ಕ ಒಂದು, ಇನ್ನೊಂದು ಇವೆರಡರ ಮೇಲೆ. ಯುರೆತ್ರಾ ಎನ್ನುತ್ತಾರೆ ಇದಕ್ಕೆ. ಮೂತ್ರನಾಳ ಹಾಗೂ ವೀರ್ಯನಾಳ ವಾಹಿನಿ ಇದು. ಈ ಸಿಲಿಂಡರ್‌ಗಳಲ್ಲಿ 100–140 ಎಂ.ಎಲ್ ರಕ್ತ ಚಲನೆಯಾದಾಗ ಉದ್ರೇಕ ಉಂಟಾಗುತ್ತದೆ. ಈ ಸಿಲಿಂಡರ್‌ಗಳಲ್ಲಿ ಒಂದು ಬಗೆಯ ಊತ ಕಂಡುಬರುತ್ತದೆ. ಉದ್ರೇಕದ ಪದರುಗಳಲ್ಲಿ ಊತ ಕಂಡಾಗ ಶಿಶ್ನದೊಳಗಿನ ನರಗಳನ್ನು ಇದು ಹಿಂಡುತ್ತದೆ. ಹೀಗಾದಾಗ ಶಿಶ್ನದಿಂದ ಸರಬರಾಜು ಆದ ರಕ್ತವನ್ನು ಇದು ಹೀರುತ್ತದೆ. ಹೀಗೆ ನರಗಳನ್ನು ಸಂಕುಚಿತಗೊಳಿಸುವುದರಿಂದ ರಕ್ತ ಪರಿಚಲನೆಯಾಗುವುದು ಒಂದಷ್ಟು ಗಳಿಗೆಯವರೆಗೂ ತಡೆ ಹಿಡಿಯುತ್ತದೆ. ಆಗ ನಿಮ್ಮಲ್ಲಿಯ ಉದ್ರೇಕ ಸ್ಥಾಯಿಯಾಗುತ್ತದೆ. ಒಮ್ಮೆ ನಿಮ್ಮ ಬಯಕೆ ತೀರಿದಾಗ, ಸಂತೃಪ್ತ ಸ್ಥಿತಿ ತಲುಪಿದಾಗ ಈ ಇಡೀ ಕ್ರಿಯೆ ಹಿಮ್ಮುಖವಾಗಿ ಸಾಗುತ್ತದೆ. ರಕ್ತ ಪರಿಚಲನೆ ಆರಂಭವಾಗುತ್ತದೆ. ಸಿಲಿಂಡರ್‌ಗಳು ಕುಗ್ಗುತ್ತವೆ. ರಕ್ತನಾಳಗಳು ಹಿಗ್ಗುತ್ತವೆ. ಶಿಶ್ನ ಸಾಮಾನ್ಯ ಸ್ಥಿತಿಗೆ ಮರಳುತ್ತದೆ.

ಇದೊಂದು ವ್ಯವಸ್ಥಿತ ಕ್ರಿಯೆ. ರಾಗ, ತಾಳ, ಲಯಬದ್ಧವಾಗಿದ್ದರೆ ಸೃಷ್ಟಿಕ್ರಿಯೆ ಸಂಗೀತದಷ್ಟೇ ಸುಮಧುರ. ಉಸಿರು, ರಕ್ತ, ಭಾವ, ದೇಹಗಳ ಲಯಬದ್ಧ ಚಲನೆಯಿಂದ ಸೃಷ್ಟಿಕ್ರಿಯೆಯ ಗೋಷ್ಠಿ ಸುಮಧುರವೆನಿಸುತ್ತದೆ. ಆದರೆ ಇಲ್ಲಿಯೂ ತಾಳತಪ್ಪಬಹುದು. ಗೋಷ್ಠಿಯೊಂದರಲ್ಲಿ ತಾಳ, ಲಯ ತಪ್ಪಿದೊಡನೆ ರಾಗ ವಿಕಾರವೆನಿಸುವಂತೆ ಇಲ್ಲಿಯೂ ಆಗಬಹುದು. ಮೆದುಳಿನಿಂದ, ನರವ್ಯೂಹಕ್ಕೆ ಸಂದೇಶ ಹೋಗದಿದ್ದರೆ, ಆ ಸಂಕೇತವನ್ನು ನರವ್ಯೂಹ ಸ್ವೀಕರಿಸದಿದ್ದರೆ, ಈ ಮಿಲನಗಾನವೇ ಕಿರಿಕಿರಿ ಎನಿಸಬಹುದು. ಉದ್ವೇಗವಿದ್ದು, ಉದ್ರೇಕವಿರದಿದ್ದರೆ...

ಹೌದು, ಒಂದು ವೇಳೆ ನೀವು ಸ್ಥೂಲಕಾಯದವರಾಗಿದ್ದರೆ, ನಿಯಮಿತ ವ್ಯಾಯಾಮ ಮಾಡದಿದ್ದರೆ, ಧೂಮಪಾನಿಗಳಾಗಿದ್ದಲ್ಲಿ, ಹೃದಯ ಸಂಬಂಧಿ ಸಮಸ್ಯೆಗಳಿದ್ದಲ್ಲಿ, ರಕ್ತ ಪರಿಚಲನೆ ಸರಾಗವಾಗಿ ಆಗದು. ನಿಮ್ಮ ರಕ್ತನಾಳಗಳು ಸಂಕುಚಿತವಾಗಿದ್ದಲ್ಲಿ, ಅವುಗಳಲ್ಲಿ ಅಡೆತಡೆಯುಂಟಾದಲ್ಲಿ ಉದ್ರೇಕ ಸ್ಥಿತಿಯೇ ಉಂಟಾಗದು. ನಿಮ್ಮ ಸಂಗಾತಿ ಎಷ್ಟೇ ಆಕರ್ಷಕವಾಗಿದ್ದರೂ, ಎಂಥದ್ದೇ ಪ್ರೀತಿ ತುಂಬಿದ ಸಂದರ್ಭವಾಗಿದ್ದರೂ, ನಿಮ್ಮಲ್ಲಿ ಅವರನ್ನು ಪಡೆಯುವ ತವಕವಿದ್ದರೂ... ಏನೂ ಪ್ರಯೋಜನವಾಗದು. ಉದ್ರೇಕವಿಲ್ಲದೆಯೇ ಎಲ್ಲವೂ ತಣ್ಣಗೆ ಮರಗಟ್ಟಿದಂತೆನಿಸಬಹುದು.

ಇಂಥ ಸಂದರ್ಭಗಳಲ್ಲಿ ನಿಮ್ಮ ನೆರವಿಗೆ ಯಾರು ಬರುತ್ತಾರೆ? ನೀವೇ...
ಧೂಮಪಾನ ಮತ್ತು ಮದ್ಯಪಾನವನ್ನು ಗಣನೀಯವಾಗಿ ಕಡಿಮೆ ಮಾಡಿ. ನಂತರ ಬಿಟ್ಟು ಬಿಡಿ. ಇನ್ನಿತರ ಯಾವುದೇ ಮಾದಕ ದ್ರವ್ಯಗಳನ್ನು ಸೇವಿಸುತ್ತಿದ್ದಲ್ಲಿ ಅದನ್ನೂ ಬಿಟ್ಟುಬಿಡಿ. ಸಾಕಷ್ಟು ವಿಶ್ರಮಿಸಿ. ಸಾಧ್ಯವಿದಷ್ಟೂ ನಿರಾಳವಾಗಿರಿ.
ನಿಯಮಿತವಾಗಿ ವ್ಯಾಯಾಮ ಮಾಡಿ. ಆರೋಗ್ಯಕರ ಆಹಾರ ಸೇವಿಸಿ. ರಕ್ತ ಪರಿಚಲನೆ ಸರಾಗವಾಗಿರುವಂತೆ ನೋಡಿಕೊಳ್ಳಿ.
ಎಚ್‌ಐವಿ ಹಾಗೂ ಲೈಂಗಿಕ ಸೋಂಕು ರೋಗಗಳಿಂದ ದೂರ ಇರುವಂತೆ ಆರೋಗ್ಯಕರ ಲೈಂಗಿಕ ಜೀವನ ನಡೆಸಿ.
ನಿಮ್ಮ ಸಂಗಾತಿಯೊಡನೆ ಲೈಂಗಿಕ ಜೀವನದ ಬಗ್ಗೆ, ನಿಮ್ಮ ಸಂಬಂಧದ ಬಗ್ಗೆ ಮುಕ್ತವಾಗಿ ಮಾತನಾಡಿ.
ಆಪ್ತ ಸಮಾಲೋಚಕರನ್ನು ಭೇಟಿ ಮಾಡಿ. ನಿಮ್ಮಲ್ಲಿಯ ಆತಂಕ ಕಡಿಮೆ ಮಾಡುವಲ್ಲಿ ಇದು ಸಹಾಯ ಮಾಡುತ್ತದೆ. ಹಾಗೆಯೇ ಸಂಬಂಧಗಳ ಸ್ಥಾಪನೆಯಲ್ಲಿಯೂ ನಿರ್ವಹಣೆಯಲ್ಲಿಯೂ ಇದು ಸಹಾಯಕಾರಿಯಾಗಿದೆ.

ವೈದ್ಯಕೀಯ ಸಹಾಯ ಯಾವಾಗ ಬೇಕು?
ಯಾವಾಗಲಾದರೂ ಇಂಥ ಅಡೆತಡೆಗಳು ಕಂಡು ಬಂದರೆ ಅದು ಸಹಜ ಮತ್ತು ಸಾಮಾನ್ಯ. ಆದರೆ ಬಹುತೇಕವಾಗಿ ಮತ್ತು ಮೇಲಿಂದ ಮೇಲೆ ನೀವು ಉದ್ರೇಕವನ್ನು ಕಳೆದುಕೊಳ್ಳುತ್ತಿದ್ದರೆ ಇದು ನಿಮ್ಮ ವೈದ್ಯರೊಡನೆ ಸಮಾಲೋಚಿಸಲು ಸಕಾಲವಾಗಿದೆ.
ನಿಮಗೆ ಗೊತ್ತಿಲ್ಲದೆಯೇ ನಿಮ್ಮ ದೇಹದ ಈ ಪ್ರಮುಖ ಅಂಗ, ನಿಮ್ಮ ದೇಹಾರೋಗ್ಯದ ಬಗ್ಗೆ ಮುನ್ಸೂಚನೆ ನೀಡುತ್ತಿದೆ ಎಂದೇ ಭಾವಿಸಬಹುದು. ಹೃದಯ ಸಂಬಂಧಿ ಸಮಸ್ಯೆ, ರಕ್ತದ ಏರೊತ್ತಡ ಮುಂತಾದವುಗಳನ್ನು ಸೂಚಿಸಬಹುದಾಗಿದೆ.
ನಿಮ್ಮ ಅನುದ್ರೇಕ ಸ್ಥಿತಿಗೆ ಯಾವುದೇ ಗಂಭೀರ ಕಾರಣಗಳಿರದಿದ್ದಲ್ಲಿ, ಅದೇ ಒಂದು ಗಂಭೀರ ಸಮಸ್ಯೆಯಾಗಿಯೂ ಪರಿಣಮಿಸಬಹುದು. ನಿಮ್ಮ ಸಂಬಂಧದಲ್ಲಿ ಬಿರುಕು ತರಬಹುದು. ಎಲ್ಲಕ್ಕೂ ಮುಖ್ಯವಾಗಿ ನಿಮ್ಮ ಆತ್ಮಘನತೆಗೇ ಚ್ಯುತಿ ಬರಬಹುದು.

ವೈದ್ಯರನ್ನು ಸಂಪರ್ಕಿಸಿ: ಒಂದು ವೇಳೆ, ನಿಮ್ಮ ಜೀವನ ಶೈಲಿ ಬದಲಾದ ನಂತರವೂ ಈ ಸಮಸ್ಯೆ ಮೇಲಿಂದ ಮೇಲೆ ಕಾಣಿಸುತ್ತಿದ್ದರೆ, ವೃಷಣ ಸಂಬಂಧಿ ಶಸ್ತ್ರಚಿಕಿತ್ಸೆ ಅಥವಾ ಯಾವುದೇ ಗಾಯಗಳಾದ ನಂತರ ಈ ಸಮಸ್ಯೆ ಕಂಡು ಬಂದಲ್ಲಿ, ಕೆಳ ಬೆನ್ನು ನೋವು, ಹೊಟ್ಟೆ ನೋವು ಅಥವಾ ಮೂತ್ರ ವಿಸರ್ಜನೆಯಲ್ಲಿ ಯಾವುದೇ ಬದಲಾವಣೆಗಳು ಕಂಡು ಬಂದಲ್ಲಿ, ಯಾವುದೇ ಸಮಸ್ಯೆಗೆ ದೀರ್ಘಕಾಲೀನ ಔಷಧಿಗಳನ್ನು ಸೇವಿಸುತ್ತಿದ್ದಲ್ಲಿ ಅಥವಾ ಯಾವುದೇ ಔಷಧಿಗಳ ಸೇವನೆಯ ನಂತರ ಈ ಸಮಸ್ಯೆ ಕಂಡು ಬಂದಲ್ಲಿ, ಧಿಡೀರ್‌ ಎಂದು ಔಷಧಿ ಸೇವನೆ ನಿಲ್ಲಿಸಬೇಡಿ. ವೈದ್ಯರೊಂದಿಗೆ ಸಮಾಲೋಚಿಸಿ. ನಿರ್ಧಾರ ತೆಗೆದುಕೊಳ್ಳಿ.

ಒಂದು ವೇಳೆ ವೈದ್ಯರ ಸಲಹೆಯ ಮೇರೆಗೆ ಉದ್ರೇಕಕ್ಕಾಗಿ ಯಾವುದಾದರೂ ಔಷಧಿ ಸೇವಿಸುತ್ತಿದ್ದು, ನಾಲ್ಕುಗಂಟೆಗಳ ವರೆಗೂ ಉದ್ರೇಕದ ಸ್ಥಿತಿ ಮುಂದುವರೆದರೆ ಕೂಡಲೇ ನಿಮ್ಮ ವೈದ್ಯರನ್ನು ಭೇಟಿ ಮಾಡಿ. ಇಷ್ಟಕ್ಕೂ ಪ್ರೀತಿ ಒಬ್ಬರನ್ನೊಬ್ಬರು ಸ್ವೀಕರಿಸುವುದಷ್ಟೇ ಅಲ್ಲ, ನಮ್ಮನ್ನೇ ನಾವು ಸ್ವೀಕರಿಸುವುದೂ ಆಗಿದೆ. ವೈದ್ಯರೊಂದಿಗೆ ಮುಕ್ತ ಮಾತುಕತೆ ಇದ್ದಲ್ಲಿ ಪರಿಹಾರ ಬಲು ಶೀಘ್ರವೇ ಸಾಧ್ಯ.

ಮಾಹಿತಿಗೆ: vasan@manipalankur.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT