ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತತ್ವಪದ ಸಮಗ್ರ ಸಾಹಿತ್ಯ ಸಂಪಾದನೆಗೂ ಮುನ್ನ...

Last Updated 1 ಡಿಸೆಂಬರ್ 2014, 6:40 IST
ಅಕ್ಷರ ಗಾತ್ರ

‘ಈ  ಭೂಪತಿಗಳ ಮೆಚ್ಚಿ ಅರಸುಖಃ     ತನಗಾಯ್ತು,
ತಾ ಪೂರ್ಣ ಸುಖ ಇಲ್ಲದೆ ಹೋಯ್ತು,
ಆ ಪರಬ್ರಹ್ಮ ಒಲಿದರೆ ಏನಾಯಿತು
ಈ ಪರಿಭವವೆಲ್ಲ ಹರಹರದ್ಹೋಯ್ತು’
-–ಇದು ೧೮ನೇ ಶತಮಾನದಲ್ಲಿ ಬಾಳಿದ್ದ ಕಲಬುರ್ಗಿ ಜಿಲ್ಲೆಯ ಕಡಕೋಳ ಮಡಿವಾಳಪ್ಪ­ನವರು ಬರೆದ ತತ್ವಪದವೊಂದರ ಪಲ್ಲವಿ­ಯಾಗಿದೆ. ಈ ಸಾಲುಗಳು ಪ್ರಭುತ್ವದ ದಬ್ಬಾಳಿಕೆ­ಯಡಿ ಸಿಲುಕಿ ನಲುಗಿದ ಜನ­ಸಾಮಾ­ನ್ಯರ ಬವಣೆ­ಯನ್ನು ಧ್ವನಿಸುತ್ತವೆ. ಶ್ರಮಪಟ್ಟರೆ ಬ್ರಹ್ಮನಂಥ ಬ್ರಹ್ಮ ಬೇಕಾದರೂ ಒಲಿಯ­ಬಹುದು.

ಆದರೆ ಎಷ್ಟೇ ಓಲೈಸಿದರೂ ಆಳುವ ಭೂಪತಿಗಳು ಮಾತ್ರ ಯಾವತ್ತೂ ಒಲಿಯರು. ಅರ್ಥಾತ್‌ ಜನರ ಬದುಕಿನ ಒಳಿತಿಗಾಗಿ ಅವ­ರೆಂದೂ ಚಿಂತಿಸುವುದಿಲ್ಲ ಎಂದು ಮಡಿವಾಳಪ್ಪ ನೇರವಾಗಿ ಅಂದಿನ ಪ್ರಭುತ್ವವನ್ನು ಟೀಕಿಸುತ್ತಾರೆ. ಜನ ಬದುಕಲೆಂದು ಕಾವ್ಯ ಕೃಷಿಗೈದವರಲ್ಲಿ ೧೨ನೇ ಶತಮಾನದ ಶಿವಶರಣರ ನಂತರ ಕನ್ನಡದ ತತ್ವಪದಕಾರರು ಅಗ್ರಪಂಕ್ತಿಯಲ್ಲಿ ನಿಲ್ಲುತ್ತಾರೆ.

ವಚನದಂತೆ ತತ್ವಪದ ಪ್ರಕಾರಕ್ಕೂ ಶಿವ­ಶರಣರೇ ಮೊದಲಿಗರು ಎಂಬ ಅಭಿಪ್ರಾಯ-­ವಿದೆ­ಯಾದರೂ ಈ ಪ್ರಕಾರ ವ್ಯಾಪಕವಾದದ್ದು ಹಾಗೂ ಪರಿಣಾಮಕಾರಿಯಾದದ್ದು ೧೭, ೧೮ನೇ ಶತಮಾನಗಳ ಸಂದರ್ಭದಲ್ಲಿ. ಶಿವಶರಣರಲ್ಲಿ ಬೀಜಾಂಕುರವಾಗಿದ್ದದ್ದು, ನಿಜಗುಣ ಶಿವಯೋಗಿ ಮುಂತಾದವರಲ್ಲಿ ಕುಡಿಯೊಡೆದು, ಕಡಕೋಳ ಮಡಿವಾಳಪ್ಪ, ಶಿಶುನಾಳ ಶರೀಫರ ಹೊತ್ತಿಗೆ ದಾಂಗುಡಿಯಿಟ್ಟು ವಸಾಹತುಶಾಹಿ ಕಾಲದಲ್ಲಿ ಭರ್ತಿ ಸುಗ್ಗಿ ಮಾಡಿದ ಈ ತತ್ವಪದ ಪ್ರಕಾರವು  ಕನ್ನಡ ಸಾಹಿತ್ಯ ಚರಿತ್ರೆಕಾರರ ಅವಜ್ಞೆಗೆ ಒಳ­ಗಾ­ದದ್ದೂ ಇದೆ. ೧೭ರಿಂದ ೨೦ನೇ ಶತಮಾನದ ಅವಧಿಯಲ್ಲಿ ಕನ್ನಡ ನಾಡು ಮತ್ತು ಗಡಿಭಾಗ­ಗಳು­ದ್ದಕ್ಕೂ ನೂರಾರು ತತ್ವಪದಕಾರರು ಸಾವಿ­ರಾರು ಕೃತಿಗಳನ್ನು ರಚಿಸಿ ಹರವಿ ಹೋಗಿದ್ದಾರೆ. 

ಅನುಭಾವಜನ್ಯ ಹೃತ್ಕಾವ್ಯ ಕಾರಂಜಿಯಂತೆ ಪುಟಿದು ಬಂದ ಈ ಪದಗಳು ಜನಪದರ ನಿಧಿ­ಗಳಾಗಿ ಮೌಖಿಕ ಪರಂಪರೆಯಲ್ಲಿಯೇ ದಾಖ­ಲಾ­­ಗುತ್ತ ಪಯಣ ಬೆಳೆಸಿದವು. ಜನ­ಸಾಮಾನ್ಯ ದುಡಿ­ಯುವ ವರ್ಗದ ದೇಣಿಗೆಯಾಗಿ ಸೃಷ್ಟಿ­ಯಾದ ಅವು ತನ್ನಲ್ಲಿ ಗರ್ಭೀಕರಿಸಿ­ಕೊಂಡಿರುವ ಜೀವನಾ­ನುಭವ­ದಿಂದಾಗಿ ಚಲನ­ಶೀಲತೆ­ಯನ್ನು ಮೈಗೂ­ಡಿಸಿ­ಕೊಂಡಿವೆ. ಶಿವ­ಯೋಗಿ, ಸಾಧು, ಸಂತ, ಮೌಲ್ವಿ, ಮುಲ್ಲಾಗಳಾ­ದಿಯಾಗಿ ಸಾಮಾನ್ಯ ಸಂಸಾರಿಗಳು ಕೂಡ ಇವುಗಳನ್ನು ರಚಿಸಿ ಕನ್ನಡ ಸಾಹಿತ್ಯ ಪರಂಪರೆಗೆ ವೈವಿಧ್ಯವನ್ನು ತಂದು ಕೊಟ್ಟರು. ಸಾಮಾನ್ಯ ಲೋಕಾನುಭಾವ­ದಿಂದ  ಉನ್ನತ ದಾರ್ಶನಿಕ ನಿಲುವುಗಳವರೆಗೆ ಇದರ ಹರಹು.

ಶರಣ, ಸಂತ, ಆರೂಢ, ನಾಥ, ಸಿದ್ಧ, ಶಾಕ್ತ, ಸೂಫಿ ಮುಂತಾದ ಆಯಾ ಕಾಲದ ಸಂವೇದನೆಗಳನ್ನು ಅನುರಣಿಸುತ್ತಿರುವ ಇವುಗಳ ಕ್ಯಾನವಾಸ್‌ ತುಂಬಾ ವೈವಿಧ್ಯಪೂರ್ಣವಾಗಿದೆ. ಸ್ಥಗಿತಗೊಂಡಿದ್ದ ಸನಾತನತೆಗೆ ಸೆಡ್ಡು ಹೊಡೆದು ಪರ್ಯಾಯ ದಾರ್ಶನಿಕತೆಯನ್ನು ಅಸ್ತಿತ್ವ­ಗೊಳಿ­ಸಿದ್ದು ಇದೆ. ಇಂಥ ಅಪರೂಪದ ಜೀವಂತ ಪರಂಪರೆಯೊಂದು ಶಿಷ್ಟ ಸಾಹಿತ್ಯ ಚರಿತ್ರೆಯ ಪರಿಧಿಯಿಂದ ದೂರವೇ ಉಳಿದದ್ದು ಚಾರಿತ್ರಿಕ ಪ್ರಮಾದವೇ ಹೌದು. ಉದ್ದೇಶಪೂರ್ವಕವಾಗಿ ಹೀಗಾಗಿರಲಿಕ್ಕಿಲ್ಲವಾದರೂ ವಸಾಹತುಶಾಹಿ ಪ್ರವಾಹದ ಹೊಡೆತದಲ್ಲಿ ಈ ದೇಶಿ ರಚನಾ ಸಮೃದ್ಧತೆಯನ್ನು ತಳಕ್ಕೆ ದೂಡಲಾಯಿತು.

ಆಧುನಿಕ ಯುರೋಪಿನ ಸಾಹಿತ್ಯಕ ವಾದ­ಗಳು, ಸಾಹಿತ್ಯರೂಪ ಮತ್ತು ಪರಿಕಲ್ಪನೆಗಳನ್ನು ಮೈಗೂ­ಡಿ­ಸಿಕೊಳ್ಳುವ ಭರಾಟೆಯಲ್ಲಿ ಜನಪದರ ಜೀವ­ನಾಡಿಯಾಗಿದ್ದ ಗುರು–ಶಿಷ್ಯ ಪರಂಪರೆಯ ಭಜನಾ ಪದಗಳು ಪಾಮರರ ಅಕಾರಣ ಚಟುವ­ಟಿಕೆಗಳೆಂದೇ ಪರಿಗಣಿತವಾದವು. ಕುತೂಹಲ ಕ್ಕಾಗಿ ಅಲ್ಲಲ್ಲಿ ಕ್ವಚಿತ್ ಸಂಪಾದನೆ, ಅಧ್ಯಯನಕ್ಕೆ ಒದಗಿ ಬಂದರೂ ಅವು ಶುದ್ಧ ಜಾನಪದೀಯ ರೂಪ­­ವೆಂದೇ ಗುರುತಿಸುವ ಪ್ರಯತ್ನಗಳಾದವು. ಅವುಗಳನ್ನು ಪಾಶ್ಚಾತ್ಯ ಜಾನಪದೀಯ ಸಿದ್ಧಾಂತ­ಗಳ ಅಡಿಯಲ್ಲಿ ನಿಷ್ಕರ್ಷೆ ಮಾಡುವ ಹವ್ಯಾಸವು ಬೆಳೆಯಿತು. ಈ ವಸಾಹತುಶಾಹಿ ಚಿಂತನಾ ಪರಿ­ಪ್ರೇಕ್ಷವು ತತ್ವಪದ ಪರಂಪರೆಯ ವೈವಿಧ್ಯ­ಮಯ ಬಹುಮುಖೀ ನೆಲೆಗಳನ್ನು ಬಗೆಯದೆ ಉಳಿ­ಯಿತು.

ಎಲ್ಲಕ್ಕಿಂತ ಹೆಚ್ಚಾಗಿ ವಸಾಹತು ರಾಜಕಾರ­ಣದ ಸಮ್ಮುಖದಲ್ಲಿ ಅಸೀಮ ಧಾರಣಾ­­ಶಕ್ತಿ­­ಯನ್ನು ತೋರಿದ್ದ ಇವುಗಳ ರಚನೆಕಾರರ ಬದುಕಿನ ಭಿತ್ತಿ­ಗಳನ್ನು ವಿಸ್ಮೃತಿಗೆ ತಳ್ಳಲಾಯಿತು. ಆಶ್ಚರ್ಯ­ವೆಂದರೆ ಆಧುನಿಕ ಕಾಲಘಟ್ಟವು ಸಂದು ಆಧು­ನಿ­ಕೋತ್ತರವಾದ ಮತ್ತು ಕಾರ್ಪೊರೇಟ್ ಜೀವ­ನ­ಶೈಲಿಯು ವಿಜೃಂಭಿಸುತ್ತಿರುವ ಹೊತ್ತಲ್ಲೂ ಗುರು­–­­ಶಿಷ್ಯ ಪರಂಪರೆಯ ಆನುಭಾವಿಕ ನೆಲೆ­ಯೊಂದು ನಿತಾಂತ ಬದುಕಿನ ಪಲುಕಾಗಿ ಹರಳು­ಗಟ್ಟು­ತ್ತಲೇ ಇದೆ. ಅನುಭಾವಿ ಪದ, ಪದರುಗಳ ಭಜನೆ ಮೇಳಗಳ ಸಖ್ಯದ­ಲ್ಲಿದ್ದವರಿಗೆ ಈ ಮಾತು ಅನುಭವಕ್ಕೆ ಬಂದೀತು.

ಏಕತಾರಿಯ ಶ್ರುತಿ, ಸೋಬತಿಯ ನಿಗಿ­ನಿಗಿ ಕೆಂಡದ ಧುನಿಯ ಬೆಳಕಿನಲ್ಲಿ ಬೆಳ್ಳಂಬೆಳ­ಗಿ­ನವರೆಗೆ ನಡೆಯುವ ಪದ ಸಮಾರಾಧನೆಯ ಲೋಕವೇ ಬೇರೆ. ನಿಸರ್ಗ ನಿರ್ಮಿತ ಎಲ್ಲ ಕಷ್ಟ, ಕಾರ್ಪಣ್ಯ ಮತ್ತು  ಮನುಷ್ಯ ಸಮಾಜ ನಿರ್ಮಿತ ದರ್ಪ, ದಬ್ಬಾಳಿಕೆ, ದೌರ್ಬಲ್ಯಗಳ ನಡುವೆಯೂ ಜೀವ ಭಾವ­ವನ್ನು ಕಾಪಿಟ್ಟು  ಸುಮ್ಮನೆ ಕರುಣೆಯ ಸಾಗರವಾಗಿ ತುಂಬಿ ಹರಿಯುವ ಲಹರಿಯೇ ಬೇರೆ. ಇಂಥ ಅಮೂಲ್ಯ, ಅಮಿತ ಜೀವನ ಪ್ರೀತಿ­ಯನ್ನು ತಾತ್ವಿಕ ಗಟ್ಟಿತನದೊಂದಿಗೆ ತುಂಬಿ ಕೊಡುವ ಭಜನೆಯ ಸುತ್ತಲಿನ ಬದುಕು ಮತ್ತು ಸಾಹಿತ್ಯ ಎರಡನ್ನೂ ಅನುಸಂಧಾನಗೈಯುವ ಹಿಕ್ಮತ್ತನ್ನು ನಾವು ತೋರದೆ ಇರುವುದು ನಮ­ಗಾದ ಹಾನಿಯೆಂದೇ ಹೇಳಬೇಕು.

ಆಧುನಿಕ ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಉಳಿದೆಲ್ಲ ಶಿಷ್ಟ ಸಾಹಿತ್ಯವು ಸಂಪಾದನೆ, ಪರಿಷ್ಕ­ರಣೆ, ಪ್ರಸಾರ, ಅಧ್ಯಯನ, ಅಧ್ಯಾಪನದಂಥ ಅಕಡೆಮಿಕ್‌ ಶಿಸ್ತಿಗೆ ತೆರೆದುಕೊಂಡಂತೆ ತತ್ವಪದ ರಚನಾ ಪ್ರಕಾರ ತೆರೆದುಕೊಳ್ಳಲೇ ಇಲ್ಲ. ಎರಡನೆ­ಯದಾಗಿ ಪ್ರಚಾರ, ಪ್ರಸಾರಗಳ ಬಗೆಗೆ ದಿವ್ಯ ನಿರ್ಲಕ್ಷ್ಯ, ಸಾಹಿತ್ಯೋದ್ಯಮದಿಂದ ಉದ್ದೇಶ­ಪೂರ್ವಕ ಅಂತರ ಇಟ್ಟುಕೊಳ್ಳುವ ಈ ಮಂದಿ ಪ್ರಧಾನ ಧಾರೆಯಿಂದ ದೂರವೇ ಉಳಿದರು. ಹೀಗಾಗಿ ಆಧುನಿಕ ಚರಿತ್ರೆಕಾರರ ಕೈಗೆ ಇವರು ದಕ್ಕಿದ್ದು ತುಂಬಾ ಕಡಿಮೆ.

ಹಾಗೆ ನೋಡಿದರೆ ವಚನ ಸಾಹಿತ್ಯವೂ ಪ್ರಗತಿ­ಪರ ವಿದ್ವತ್ ಲೋಕಕ್ಕೆ ತುಂಬಾ ತಡವಾಗಿಯೇ ಒದಗಿಬಂದಿದೆ. ಹೀಗಾಗುವುದರ ಹಿಂದೆ ಒಂದಷ್ಟು ಸಾಂಸ್ಕೃತಿಕ ರಾಜಕಾರಣವು ಇಲ್ಲದಿಲ್ಲ. ಅದೇ ಬೇರೆ ಚರ್ಚೆ. ತತ್ವಪದ ರಾಶಿಗೆ ಸಂಬಂಧಿಸಿ ಹೇಳುವುದಾದರೆ ಮುಖ್ಯವಾಗಿ ಇವು ಗುರು– ಶಿಷ್ಯ ಪರಂಪರೆಯ ದೀಕ್ಷೆ, ಭಜನಾ ಲೋಕದ ಹಾಡು­­ಗಾರಿಕೆಯ ಮೇಳದಲ್ಲಿ ಉದ್ಭೋದ­ಗೊಳ್ಳು­­ವಂಥವು. ಹೀಗಾಗಿ ಇವು ಕೇವಲ ಅಧ್ಯಯನ ಕುತೂಹಲಿಗಳಿಗೆ ಸಿಗಲಿಲ್ಲ. ಶಾಸ್ತ್ರೀಯ ಸಂಪಾ­ದನೆ, ಪ್ರಕಟಣೆಗಳಿಗೆ ಒಳಗಾಗಲಿಲ್ಲ. ವಚನಗಳಿಗೆ ಕನಿಷ್ಠಪಕ್ಷ ವೀರಶೈವ ಮಠ–ಮಾನ್ಯ­ಗಳಲ್ಲಿ ಧಾರ್ಮಿಕ ನೆಲೆಗಟ್ಟಾದರೂ ಲಭ್ಯ

ವಾ­ಗಿತ್ತು. ಸಾಂಸ್ಥಿಕ ಧರ್ಮ ಹಿತಾಸಕ್ತಿಯ ಕಾರಣ­ವಾಗಿಯೂ ವಚನ ಸಾಹಿತ್ಯ ಮತ್ತು ಆ  ಕುರಿತು ರಚನೆಯಾದ ಪುರಾಣ, ಕಾವ್ಯ, ಸಂಪಾದನಾ ಸಂಕಲನಗಳು ಉಳಿದುಕೊಂಡಿದ್ದವು. ಆದರೆ ತತ್ವ­ಪದ ಸಾಹಿತ್ಯ ಮಾತ್ರ ಇಂಥ ಸಾಂಸ್ಥಿಕ ಮತ­, ಧರ್ಮಗಳನ್ನು ಧಿಕ್ಕರಿಸಿ ರಚನೆ ಆಗಿದ್ದೇ ಹೆಚ್ಚು. ಇವು ಮತ­, ಧರ್ಮ, ವಾದ, ಸಿದ್ಧಾಂತಗಳಾಚೆ ಜಿಗಿದು ಎಲ್ಲ­ರೊಳಗೆ ಒಂದಾಗಿಯೂ ಒಂದಾಗ­ದಂತೆ ‘ತನ್ನ ತಾನು ತಿಳಿದ ಮೇಲೆ ಇನ್ನೇನ್ನಿನ್ನೆನೋ’ ಎಂಬಂತೆ ಅನಂತಕ್ಕೆ ಚಾಚಿದ್ದವು.

ಆದ್ದರಿಂದ ಈ ಪದ­ರಾಶಿಯು ‘ಹಿಡದೆನೆಂದರೆ ಸಿಗುವುದಿಲ್ಲಪ್ಪ ಭಾಳ ಬೆರಕಿ’ ಆಗಿದ್ದವು. ಆದಾಗ್ಯೂ ಭಜನಾಸಕ್ತರ ಅನುಕೂಲಕ್ಕಾಗಿ ಕೆಲವು ಅನುಭಾವಿಗಳ ಕೃತಿಗಳು ಜನಪ್ರಿಯ ಮಾಲಿಕೆಯಲ್ಲಿ ಪ್ರಕಟವಾಗುತ್ತಿದ್ದವು. ಅದು ಕೂಡ ಸಮಗ್ರವಾಗಿರುತ್ತಿರಲಿಲ್ಲ. ತೀರ ಕಳಪೆ ಮುದ್ರಣ, ಕಾಗುಣಿತ ದೋಷ ಇತ್ಯಾದಿ­ಗಳಿಂದಾಗಿ ಅವು ವಿದ್ವತ್ ವಲಯದ ಗಮನ ಸೆಳೆ­ಯಲಿಲ್ಲ. ಇತ್ತೀಚೆಗೆ ಸುತ್ತೂರು ಮಠದಿಂದ ಸಮಗ್ರ ಸ್ವರ­ವಚನ ಸಂಪುಟಗಳಾಗಿ ಕೆಲವು ತತ್ವಪದ­ಕಾರರ ಕೃತಿಗಳು ಬೆಳಕು ಕಂಡಿವೆ­ಯಾದರೂ ಅಲ್ಲಿ ವೀರ­ಶೈವ ಪರಂಪರೆಯ ಆಚೆ ಇರುವ ಕವಿ, ಕೃತಿ­ಗಳನ್ನು ಪರಿಗಣಿಸಿಲ್ಲ.

ಅಷ್ಟಕ್ಕೂ ಅವರು ಸ್ವರವಚನ ಎಂಬು­ದಕ್ಕೆ ತಮ್ಮದೇ ಭಿನ್ನ ತಾತ್ವಿಕ ಭಿತ್ತಿಯನ್ನಿಟ್ಟು­ಕೊಂಡು ಸಂಪಾ­ದನೆ ಮಾಡಿ­ದ್ದಾರೆ. ಹೀಗಾಗಿ ಈ ಸಂಪುಟ­ಗಳು ಕನ್ನಡದಲ್ಲಿ ಸೃಷ್ಟಿಯಾದ ಸಮಗ್ರ ತತ್ವಪದಗಳ ಆಕರಗಳಾಗಿ ನಿಲ್ಲುವುದಿಲ್ಲ. ವೀರ­ಶೈವ ತತ್ವ ಸಿದ್ಧಾಂತದ ಆಚೆಗೆ  ಅನುಭಾವದ ಭಿತ್ತಿ­ಯ­ನ್ನಿ­ಟ್ಟುಕೊಂಡು ರಚನೆಯಾದ ಸಾವಿರಾರು ಪದ­ಗಳು ಇಂದಿಗೂ ಭಜನಾಸಕ್ತರ ಖಾಸಗಿ ಪುಸ್ತಕ, ಮಸ್ತಕಗಳಲ್ಲಿಯೇ ಉಳಿದುಕೊಂಡಿವೆ. ವಿಶೇಷ­ವಾಗಿ ಸೂಫಿ, ಶರಣ, ಸಿದ್ಧಧಾರೆಗಳನ್ನು ಮೈ­ಗೂಡಿಸಿಕೊಂಡು ಬರೆದ ಪದಗಳ ರಾಶಿಯೇ ಇದೆ. ಉತ್ತರ ಕರ್ನಾಟಕದಲ್ಲಿಯಂತೂ ಪ್ರತಿ ಹಳ್ಳಿಗೂ ಒಬ್ಬಿಬ್ಬರಾದರೂ ತತ್ವಪದಕಾರರು ಆಗಿ­ಹೋಗಿ­ದ್ದಾರೆ. ಹೈದರಾಬಾದ್‌ ಕರ್ನಾಟಕದಲ್ಲಿ ಮುಸ್ಲಿಂ ತತ್ವಪದಕಾರರ ದೊಡ್ಡ ಸಮೂಹವೇ ಇದೆ.

ಆನುಭಾವಿಕವಾಗಿ ಉತ್ಕೃಷ್ಟವಾದ, ಸಾಹಿತ್ಯಕ ಸತ್ವವುಳ್ಳ  ರಚನೆಗಳನ್ನು ನೀಡಿ  ಇವರು ನಿಜವಾದ ಅರ್ಥದಲ್ಲಿ ಕನ್ನಡ ಸಾಹಿತ್ಯವನ್ನು ಶ್ರೀಮಂತ­ಗೊಳಿಸಿದ್ದಾರೆ. ಕರ್ನಾಟಕದ ಉದ್ದಗ­ಲಕ್ಕೂ ಇಂಥ ತತ್ವಪದಗಳ ರಾಶಿ ಹೇರಳವಾಗಿ ಹರಡಿಕೊಂಡಿದೆ. ಕರ್ನಾಟಕ ಸರ್ಕಾರದ ರಾಷ್ಟ್ರೀಯ ಸಂತಕವಿ  ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರವು ಈಗ ತತ್ವಪದ­ಕಾರರ ಸಮಗ್ರ ಸಾಹಿತ್ಯ ಪ್ರಕಟಿಸುವ ಬೃಹತ್ ಯೋಜನೆಯನ್ನು ಹಾಕಿಕೊಂಡಿದೆ. ನಮ್ಮ ನಾಡಿನ ಹಿರಿಯ ಚಿಂತಕರಾದ ಡಾ.ಕೆ. ಮರುಳಸಿದ್ಧಪ್ಪ­ಅವರ ಅಧ್ಯಕ್ಷತೆಯಲ್ಲಿ, ಪ್ರಧಾನ ಸಂಪಾದಕರಾಗಿ ಕಾ.ತ. ಚಿಕ್ಕಣ್ಣ, ಯೋಜನಾ ಸಂಪಾದಕರಾಗಿ ಡಾ.ಎಸ್. ನಟರಾಜ ಬೂದಾಳ್ ಮತ್ತು ಆರು ಜನ ವಿದ್ವಾಂಸರ ಸದಸ್ಯತ್ವದಲ್ಲಿ ತತ್ವಪದಗಳನ್ನು ಸಂಗ್ರಹಿಸಿ, ಪ್ರಕಟಿಸುವ ಕೆಲಸ ನಡೆಯುತ್ತಿದೆ. ಈಗಾಗಲೇ ವಿವಿಧ ಸಂಸ್ಥೆ, ಅಕಡೆಮಿಕ್‌ ವಲ­ಯ­ದಿಂದ ಕೆಲವು ಪ್ರಾತಿನಿಧಿಕ ಸಂಗ್ರಹಗಳು ಬಂದಿವೆ ಯಾದರೂ ಬೆಳಕು ಕಾಣಬೇಕಾದ ಇನ್ನೂ ಹಲವು ರಚನೆಗಳಿವೆ.

ಸಮಗ್ರ ವಚನ ಸಾಹಿತ್ಯ, ಸಮಗ್ರ ದಾಸ ಸಾಹಿತ್ಯ ಹೊರಬಂದಂತೆ ತತ್ವಪದ ಸಾಹಿತ್ಯವು ತಡವಾಗಿಯಾದರೂ ಬೆಳಕು ಕಾಣುತ್ತಿರುವುದು ಸಮಾ­ಧಾನದ ಸಂಗತಿ. ವಚನ, ಕೀರ್ತನೆಗಳಿಗಿಂತ ತತ್ವ­ಪದ ಪ್ರಕಾರದ ಸಂಪಾದನೆ ತುಂಬಾ ತೊಡ­ಕಿನ ಕೆಲಸ. ಏಕೆಂದರೆ ಈ ಪದಗಳ ಶಾಸ್ತ್ರೀಯ ಲಿಖಿತ ಪಠ್ಯಗಳು ಅಷ್ಟಾಗಿ ದೊರೆಯುವುದಿಲ್ಲ. ಹಸ್ತಪ್ರತಿ­ಗಳಿಗಿಂತ ಮೌಖಿಕ ಪಠ್ಯಗಳೇ ಜಾಸ್ತಿ. ಈ ಪ್ರಕಾ­ರವು ಜನಪದರ ಮನೆ ಅಂಗಳದ ಕೂಸು ಇದ್ದಂತೆ. ಕೃತಿ ಯಾರದೇ ಇರಲಿ ಹಾಡುವ ಭಕ್ತರು ಮಾತ್ರ ಅದನ್ನು  ತಮ್ಮ ಶೈಲಿಗೆ ಒಗ್ಗಿಸಿ­ಕೊಂಡು ಅಂಕಿತ  ವನ್ನು ಸಲೀಸಾಗಿ ಬದಲಿಸಿ­ಕೊಂಡು ಹೊರಡು­ತ್ತಾರೆ.

ಹೀಗಾಗಿ ಪದಗಳ ಮೂಲಕರ್ತೃ, ಮೂಲ ಪಾಠ ನಿಷ್ಕರ್ಷಿಸುವುದು ತುಂಬಾ ಕಷ್ಟದ ಸಂಗತಿ. ಎಲ್ಲಕ್ಕಿಂತ ಹೆಚ್ಚಾಗಿ ಗ್ರಾಮೀಣರು ಈ ಕ್ಷಣಕ್ಕೂ ಪದಗಳನ್ನು ರಚಿಸು­ತ್ತಲೇ ಇದ್ದಾರೆ. ಹೀಗಾಗಿ ಕಾಲಮಿತಿ, ಕರ್ತೃ ನಿರ್ಣಯ, ಮೂಲ ಪಠ್ಯ ನಿರ್ಣಯ ಇವೆಲ್ಲ ಸವಾಲಿನ ಕೆಲಸವೇ ಸರಿ. ಪದ­ಗಳ ವಸ್ತು, ಭಾಷೆ, ತಂತ್ರ, ಸಿದ್ಧಾಂತಗಳಿಗೆ ಸಂಬಂಧ­ಪಟ್ಟಂತೆ ತುಂಬಾ ವೈವಿಧ್ಯ, ಸಂಕೀರ್ಣತೆ ಇದೆ. ಯಾವುದನ್ನು ನಿರ್ದಿಷ್ಟ­ವಾಗಿ ತತ್ವಪದ ಎಂದು ಗುರುತಿಸಬೇಕು ಎಂಬುದರ ಬಗೆಗೆ ವಿದ್ವತ್ ವಲಯದಲ್ಲಿ ಗೊಂದ­ಲಗಳಿವೆ.  ಆದ್ದ­ರಿಂದ ಈ ಸಂಪಾದಕ ಮಂಡ­ಳಿಯು ತತ್ವಪದಗಳ ತಾತ್ವಿಕತೆ, ರಾಚನಿಕ ಸ್ವರೂಪ, ಕಾಲಘಟ್ಟ, ಭಾಷೆ ಇವುಗಳನ್ನು ಗಂಭೀ­ರ­ವಾಗಿ ಅಧ್ಯಯನ ಮಾಡಿ ಸಮಗ್ರ  ತತ್ವಪದ­ಸಾಹಿತ್ಯ ಸಂಪಾದಿಸಿ, ಪ್ರಕಟಿಸುವ ಜವಾಬ್ದಾರಿ ನಿರ್ವಹಿಸಬೇಕಾದದ್ದು ನಮ್ಮ ಈ ಕಾಲದ ಜರೂರಿಯಾಗಿದೆ.

ನಿಮ್ಮ ಅನಿಸಿಕೆ ತಿಳಿಸಿ:
editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT