ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಪ್ಪಿಸಿಕೊಂಡು ಹೋದ ರೋಚಕ ಕಥಾನಕ

ನಿಗೂಢ ನೇತಾಜಿ-10
Last Updated 21 ನವೆಂಬರ್ 2015, 19:59 IST
ಅಕ್ಷರ ಗಾತ್ರ

ಭಾರತಕ್ಕೆ ಸಂಪೂರ್ಣ ಸ್ವಾತಂತ್ರ್ಯ ದಕ್ಕಿಸಿಕೊಡುವುದು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಉದ್ದೇಶವಾಗಿತ್ತು. ಕಾಂಗ್ರೆಸ್‌ನ ಬಹುತೇಕ ಸಮಿತಿಗಳು ಹಂತಹಂತವಾಗಿ ಸ್ಥಳೀಯ ಅಧಿಕಾರ ಪಡೆಯುವ ಮೂಲಕ ಸ್ವಾತಂತ್ರ್ಯ ದಕ್ಕಿಸಿಕೊಳ್ಳುವ ಕುರಿತು ಚಿಂತಿಸುತ್ತಿದ್ದಾಗ ನೇತಾಜಿ ಭಿನ್ನ ರೀತಿಯಲ್ಲಿ ಯೋಚಿಸಿದ್ದರು.

ಭಾರತದಲ್ಲಿ ಹಂಗಾಮಿ ರಾಷ್ಟ್ರೀಯ ಸರ್ಕಾರವನ್ನು ಸ್ಥಾಪಿಸುವ ಹಾಗೂ ನಮ್ಮ ದೇಶದಲ್ಲಿ ಬ್ರಿಟಿಷರ ಆಧಿಪತ್ಯದ ಸಂಕೇತದಂತೆ ಕಲ್ಕತ್ತದಲ್ಲಿ ಇದ್ದ ಹಾಲ್‌ವೆಲ್ ಸ್ಮಾರಕವನ್ನು ನಾಶಪಡಿಸುವ ಪ್ರಸ್ತಾವವನ್ನು ಬೆಂಬಲಿಸಿದ ಕಾರಣಕ್ಕೆ 1940ರಲ್ಲಿ ಸುಭಾಷ್ ಬಂಧನಕ್ಕೊಳಗಾದರು. ಜೈಲಿನಲ್ಲಿ ಅವರು ಉಪವಾಸ ಪ್ರತಿಭಟನೆ ಪ್ರಾರಂಭಿಸಿದರು. ಅವರು ಮೃತಪಟ್ಟರೆ ಕಷ್ಟ ಎಂದು ಆತಂಕಗೊಂಡ ಬ್ರಿಟಿಷರು ಅದೇ ವರ್ಷ ಡಿಸೆಂಬರ್‌ನಲ್ಲಿ ಅವರನ್ನು ಗೃಹ ಬಂಧನದಲ್ಲಿ ಇರಿಸಿದರು.

ಕಲ್ಕತ್ತದ ಎಲ್ಗಿನ್ ರಸ್ತೆ ಹಾಗೂ ವುಡ್‌ಬರ್ನ್ ರಸ್ತೆಯಲ್ಲಿ ಇದ್ದ ಎರಡು ಮನೆಗಳಲ್ಲಿ ಬೋಸ್ ಕುಟುಂಬದವರು ವಾಸವಿದ್ದರು. ಹಗಲು ರಾತ್ರಿ ಆ ಮನೆಗಳ ಮೇಲೆ ಬ್ರಿಟಿಷರು ಹದ್ದಿನ ಕಣ್ಣಿಟ್ಟಿದ್ದರು.

1941ರ ಜನವರಿ 26ರಂದು ಸುಭಾಷ್ ಅವರು ಬ್ರಿಟಿಷ್ ಕೋರ್ಟ್‌ನಲ್ಲಿ ಹಾಜರಾಗಬೇಕಿತ್ತು. ವಿಶ್ವಯುದ್ಧ ಮುಗಿಯುವವರೆಗೆ ತನ್ನನ್ನು ಬಂಧಮುಕ್ತಗೊಳಿಸುವುದಿಲ್ಲ ಎನ್ನುವುದು ಅವರಿಗೆ ತಿಳಿದಿತ್ತು. ಜಪಾನ್, ಜರ್ಮನಿ ಹಾಗೂ ಇಟಲಿ ಯುದ್ಧದಲ್ಲಿ ಬ್ರಿಟನ್ ಮೇಲೆ ದಾಳಿ ಇಟ್ಟಿದ್ದವು. ಈ ದೇಶಗಳು ಹಾಗೂ ಭಾರತ ಒಟ್ಟಾಗಿ ಬ್ರಿಟಿಷ್ ಸಾಮ್ರಾಜ್ಯಶಾಹಿ ವ್ಯವಸ್ಥೆಯನ್ನು ಧ್ವಂಸ ಮಾಡಬಹುದು ಎಂದು ಸುಭಾಷ್ ನಂಬಿದ್ದರು. ಆ ಉದ್ದೇಶ ಈಡೇರಿಸಿಕೊಳ್ಳಲು ದೇಶದಿಂದ ತಪ್ಪಿಸಿಕೊಂಡು ಹೋಗಲು ನಿರ್ಧರಿಸಿದರು.

1941ರ ಜನವರಿ 17ರ ಮಧ್ಯರಾತ್ರಿ 1.30ಕ್ಕೆ ಎಲ್ಗಿನ್ ರಸ್ತೆಯಲ್ಲಿದ್ದ ಸುಭಾಷರ ಮನೆಯ ಮೊದಲ ಮಹಡಿಯಿಂದ ಇಶಾರೆ ಬರುವುದನ್ನೇ ಮೂವರು ಕಾಯುತ್ತಿದ್ದರು. ಮನೆ ಹಿಂಬದಿಯ ಮಹಡಿ ಮೆಟ್ಟಿಲಿನ ಬಳಿ ಕಾರೊಂದು ಕಾಯುತ್ತಿತ್ತು. ಮೆಟ್ಟಿಂಗಾಲಿಟ್ಟುಕೊಂಡು ಎಲ್ಲರೂ ಕಾರು ಹತ್ತಿದರು. ಅವರಲ್ಲಿ ಒಬ್ಬರು ಕಟ್ಟುಮಸ್ತಾದ ಪಠಾಣ. ಕಂದು ಬಣ್ಣದ ಉದ್ದವಾದ ಕೋಟ್ ಧರಿಸಿದ್ದ ಆತ ದೊಗಲೆ ಪೈಜಾಮ ಹಾಗೂ ಕಪ್ಪು ಬಣ್ಣದ ಟರ್ಕಿಷ್ ಟೋಪಿ ತೊಟ್ಟಿದ್ದರು. ಕಾರು ಶಬ್ದ ಮಾಡುತ್ತಾ ವೇಗವಾಗಿ ಸಾಗಿತು. ಚಳಿಗಾಲದ ರಾತ್ರಿ ಅದಾಗಿದ್ದರಿಂದ ಚಾದರದಡಿ ಮಲಗಿದ್ದ ಪೊಲೀಸರ ಕಣ್ತಪ್ಪಿಸಿ ಕಾರು ಸಲೀಸಾಗಿ ಹೊರಟಿತು. ಆ ರೀತಿ ಪಠಾಣರ ದಿರಿಸು ತೊಟ್ಟು ಪಾರಾದವರೇ ಸುಭಾಷ್. ಭವಿಷ್ಯದಲ್ಲಿ ಏನಾಗುತ್ತದೆ ಎನ್ನುವ ಸ್ಪಷ್ಟತೆಯೇ ಇಲ್ಲದೆ ಅವರು ಅಂಥ ದಿಟ್ಟ ಹೆಜ್ಜೆ ಇಟ್ಟಿದ್ದರು.

ಸುಭಾಷ್ ಅವರಣ್ಣ ಡಾ. ಸುನಿಲ್ ಬೋಸ್ ಭಾರತದ ಮೊದಲ ಹೃದ್ರೋಗ ತಜ್ಞ. ಅವರು ಕೂಡ ಅದೇ ಮನೆಯಲ್ಲಿ ವಾಸವಿದ್ದರು. ಅನಾರೋಗ್ಯಪೀಡಿತ ವ್ಯಕ್ತಿಯನ್ನು ಸಾಗಿಸುವ ನೆಪದಲ್ಲಿ ಕಾರು ಆ ರಾತ್ರಿ ಆ ಮನೆಯನ್ನು ತಲುಪಿತ್ತು. ಕಾರು ವೇಗವಾಗಿ ಸಾಗಿದ್ದನ್ನು ಕಂಡವರು ರೋಗಿಗೆ ತುರ್ತಾಗಿ ಚಿಕಿತ್ಸೆ ನೀಡಲು ಹಾಗೆ ಸಾಗಿಸಲಾಗುತ್ತಿದೆ ಎಂದೇ ಭಾವಿಸುವಂತೆ ಯೋಜಿಸಲಾಗಿತ್ತು.

ಸುಭಾಷ್ ತಪ್ಪಿಸಿಕೊಂಡು ಹೋಗಲು ಸೂಕ್ಷ್ಮ ರೀತಿಯಲ್ಲಿ ಯೋಜನೆ ರೂಪಿಸಿದ್ದು ತಮ್ಮ ಅಣ್ಣನ ಮಗ ಶಿಶಿರ್ ಹಾಗೂ ಪಂಜಾಬ್ ಕೃಷಿಕರ ‘ಕೀರ್ತಿ ಪಕ್ಷ’ದ ಭಗತ್ ರಾಮ್ ತಲ್ವಾರ್ ಅವರೊಡಗೂಡಿ.  ಬದ್ರಾಶಿ (ಈಗಿನ ಪಾಕಿಸ್ತಾನದಲ್ಲಿದೆ) ಪ್ರಾಂತ್ಯದ ವಾಯವ್ಯ ಭಾಗದ ‘ಫಾರ್ವರ್ಡ್ ಬ್ಲಾಕ್’ ಶಾಖೆಯ ನಾಯಕ ಮಿಯಾನ್ ಅಕ್ಬರ್ ಶಾ ಅವರಿಗೆ 1940ರ ಡಿಸೆಂಬರ್ ತಿಂಗಳ ಪ್ರಾರಂಭದಲ್ಲಿಯೇ ನೇತಾಜಿ ಒಂದು ಸಂದೇಶ ರವಾನಿಸಿದ್ದರು. ‘ರೀಚ್ ಕಲ್ಕತ್ತ-ಬೋಸ್’ (ಕಲ್ಕತ್ತ ತಲುಪಿ–ಬೋಸ್) ಎಂಬ ಆ ಟೆಲಿಗ್ರಾಂ ಕಂಡಿದ್ದೇ 42 ವರ್ಷ ವಯಸ್ಸಿನ ಆ ಪಠಾಣ್, ನಂತರದ ರೈಲು ಹತ್ತಿ ಮೂರು ದಿನಗಳಲ್ಲಿ ಕಲ್ಕತ್ತ ತಲುಪಿದರು. ಮರುದಿನ ಬೆಳಿಗ್ಗೆ ಅಕ್ಬರ್ ಶಾ, ಸುಭಾಷ್ ಅವರನ್ನು ನೋಡಲು ಹೋದರು. ಆಗ ಸುಭಾಷ್ ಹಾಸಿಗೆ ಮೇಲೆ ರೋಗಿಯಂತೆ ಮಲಗಿದ್ದರು. ಗಡ್ಡ ಬಿಟ್ಟಿದ್ದ ಅವರು ಬಳಲಿದಂತೆ ಕಾಣುತ್ತಿದ್ದರು.

ತಾವು ತಪ್ಪಿಸಿಕೊಂಡು ಹೋಗುವ ಯೋಜನೆಯ ಕುರಿತು ಚರ್ಚಿಸುತ್ತಾ ಶಾ ಅವರಿಗೆ ಸುಭಾಷ್ ಹೀಗೆ ಹೇಳಿದರು: ‘ಈಗ ನಾನು ಕಾಬೂಲ್‌ನ ಬುಡಕಟ್ಟು ಪ್ರದೇಶಗಳ ಮೂಲಕ ವಿದೇಶಕ್ಕೆ ಹೋಗಬೇಕು. ಅದಕ್ಕೆ ನಿನ್ನ ಸಹಾಯ ಬೇಕು. ನಿನಗೆ ಅನುಭವವಿದೆ’. ವೇಷ ಮರೆಸಿಕೊಂಡು ಪೆಷಾವರಕ್ಕೆ ರೈಲಿನ ಮೂಲಕ ಸಾಗುವಂತೆ ಶಾ ಸಲಹೆ ಕೊಟ್ಟರು. ಬುಡಕಟ್ಟು ಪ್ರದೇಶಗಳಲ್ಲಿ ಹೇಗೆ ವರ್ತಿಸಬೇಕು ಎಂದು ಹೇಳಿಕೊಟ್ಟರು. ಅಲ್ಲಿನ ಭಾಷೆ ಸುಭಾಷ್ ಅವರಿಗೆ ಗೊತ್ತಿಲ್ಲ ಎನ್ನುವುದು ಅವರಿಗೆ ತಿಳಿದಿತ್ತು. ಕಿವಿ, ಬಾಯಿಯನ್ನು ಮುಂಡಾಸಿನಿಂದ ಮುಚ್ಚಿಕೊಂಡು, ಮೂಗ-ಕಿವುಡನಂತೆ ನಟಿಸಬೇಕೆಂದು ಅವರು ಉಪಾಯ ಮಾಡಿದರು. ಉದ್ದವಾಗಿ ಗಡ್ಡ ಬಿಟ್ಟು, ಮುಸ್ಲಿಮರಂತೆ ಬಟ್ಟೆ ಹಾಕಿಕೊಂಡು, ‘ಜಿಯಾಉದ್ದೀನ್’ ಎಂಬ ಹೆಸರಿನ ವ್ಯಕ್ತಿಯಾಗುವಂತೆ ಸಲಹೆ ನೀಡಿದ್ದು ‘ಅಖಿಲ ಭಾರತ ಫಾರ್ವರ್ಡ್ ಬ್ಲಾಕ್ ಕ್ರಿಯಾ ಸಮಿತಿ’ಯ ಮೊಹಮ್ಮದ್ ಷರೀಫ್.

ಪಾರಾಗುವ ದಾರಿಯನ್ನು ಸ್ಪಷ್ಟವಾಗಿ ನಿರ್ಧರಿಸಲು ಸುಭಾಷ್ ಹಾಗೂ ಶಿಶಿರ್ ಗಂಟೆಗಟ್ಟಲೆ ಚರ್ಚಿಸುತ್ತಿದ್ದರು. ಬಂಧುಮಿತ್ರರು, ಅತಿಥಿಗಳು, ಕೆಲಸಗಾರರು, ಮನೆಯ ಸುತ್ತ ಮಫ್ತಿಯಲ್ಲಿ ಇದ್ದ ಪೊಲೀಸರು ಎಲ್ಲರನ್ನೂ ಸೂಕ್ಷ್ಮವಾಗಿ ಗಮನಿಸಿ, ತಪ್ಪಿಸಿಕೊಂಡು ಹೋಗುವಾಗ ಯಾರಿಂದಲೂ ಅಡ್ಡಿಯಾಗುವುದಿಲ್ಲವಷ್ಟೆ ಎಂದು ಖಾತರಿಪಡಿಸಿಕೊಂಡರು.

ಯಾವ ಹಾದಿಯಲ್ಲಿ ಸುಭಾಷ್ ತಪ್ಪಿಸಿಕೊಂಡು ಹೋಗಬೇಕು ಎಂದು ನಿರ್ಧರಿಸಲಾಗಿತ್ತೋ ಅದು ಸೂಕ್ತವೇ ಎಂದು ಶಿಶಿರ್ ಮೊದಲು ಖುದ್ದು ಸಾಗಿ ಪರೀಕ್ಷಿಸಿದರು. ಇಡೀ ರಾತ್ರಿ ಸುಭಾಷ್ ಅವರಿಗೆ ತಂಗುವ ವ್ಯವಸ್ಥೆ ಮಾಡುವ ಹಾಗೂ ಪೆಷಾವರ್ ರೈಲಿಗೆ ಟಿಕೆಟ್ ಹೊಂದಿಸುವ ಹೊಣೆಗಾರಿಕೆ ನಿಭಾಯಿಸಿದವರೂ ಶಿಶಿರ್. ‘ಮೊಹಮ್ಮದ್ ಜಿಯಾಉದ್ದೀನ್’ ಹೆಸರಿನಲ್ಲಿ ವಿಸಿಟಿಂಗ್ ಕಾರ್ಡ್‌ಗಳನ್ನು ಮುದ್ರಿಸಿ ಕೊಟ್ಟವರೂ ಅವರೇ. ಮಾರುವೇಷದಲ್ಲಿರುವಾಗ ಆ ವಿಸಿಟಿಂಗ್ ಕಾರ್ಡ್‌ಗಳನ್ನೇ ಸುಭಾಷ್ ಬಳಸಬೇಕೆಂದು ನಿರ್ಧಾರವಾಗಿತ್ತು. ‘ವಿಮಾ ಕಂಪೆನಿಯ ಇನ್ಸ್‌ಪೆಕ್ಟರ್’ ಎಂದೂ ವಿಸಿಟಿಂಗ್ ಕಾರ್ಡ್‌ನಲ್ಲಿ ಮುದ್ರಿಸಲಾಗಿತ್ತು.

ತಪ್ಪಿಸಿಕೊಂಡು ಹೊರಡುವ ಕೆಲವು ದಿನಗಳ ಮೊದಲು ಏಕಾಂತದಲ್ಲಿರಲು ಸುಭಾಷ್ ನಿರ್ಧರಿಸಿದರು. ತಮ್ಮನ್ನು ಯಾರೂ ಭೇಟಿ ಮಾಡಕೂಡದೆಂದು ಕಟ್ಟಪ್ಪಣೆ ಮಾಡಿದರು. ತಮ್ಮ ಕೋಣೆಯ ಪರದೆಯ ಅಡಿಯಿಂದ ಕಾಲಕಾಲಕ್ಕೆ ಸಸ್ಯಾಹಾರವನ್ನು ಪೂರೈಸುವಂತೆಯೂ ಸೂಚಿಸಿದ್ದರು.

ಸುಭಾಷರ ಅಣ್ಣ ಸುರೇಶ್ ಬೋಸರ ಮಗಳು ಇಳಾ ತನ್ನ ಚಿಕ್ಕಪ್ಪನಿಗೆ ಒಳ್ಳೆಯದಾಗಲಿ ಎಂದು ದುರ್ಗಾ ಮಾತೆಯಲ್ಲಿ ಪ್ರಾರ್ಥಿಸುತ್ತಿದ್ದಳು. ಆಗ ಅವಳಿಗಿನ್ನೂ ಚಿಕ್ಕ ಪ್ರಾಯ. ಸುಭಾಷ್ ದುರ್ಗಾ ಮಾತೆಯ ಕಟ್ಟಾಭಕ್ತರಾಗಿದ್ದರು. ದಾನಿಕೇಶ್ವರದ ಕಾಳಿ ದೇವಸ್ಥಾನದ ಅರ್ಚಕರಲ್ಲಿ ತಾನು ಅಂದುಕೊಂಡ ಕೆಲಸ ಆಗುತ್ತದೆಯೇ ಎಂದು ಕೇಳಿ ತಿಳಿದುಕೊಳ್ಳುವಂತೆ ಸ್ನೇಹಿತ ಅಶೋಕ್‌ನಾಥ್ ಶಾಸ್ತ್ರಿ ಅವರಿಗೆ ಸೂಚಿಸಿದ್ದರು. ಆ ಅರ್ಚಕರು ಹೇಳಿದಂತೆ ಇಳಾ 1941ರ ಜನವರಿ 17ರಂದು ಕಾಳಿ ದೇವಸ್ಥಾನಕ್ಕೆ ಹೋಗಿ ವಿಶೇಷ ಪೂಜೆ ಮಾಡಿಸಿ ಚಿಕ್ಕಪ್ಪನಿಗೆ ಪ್ರಸಾದ ತಂದುಕೊಟ್ಟಳು. ಸುಭಾಷ್ ಅದೇ ದಿನ ತಪ್ಪಿಸಿಕೊಂಡು ಹೋಗಲು ನಿರ್ಧರಿಸಿದ್ದುದು.

ತಪ್ಪಿಸಿಕೊಂಡು ಹೋಗಲು ನಿರ್ಧರಿಸಿದ್ದ ಆ ರಾತ್ರಿ ಬಂದೇಬಿಟ್ಟಿತು. ಸುಭಾಷ್ ಅಣ್ಣನ ಮಕ್ಕಳಾದ ಶಿಶಿರ್‌, ದ್ವಿಜೇಂದ್ರನಾಥ್ ಇಬ್ಬರೂ ಅವರ ಜೊತೆ ಇರಲು ನಿರ್ಧರಿಸಿದರು. ನೇತಾಜಿ, ಅರಬಿಂದೊ ಹಾಗೂ ಶಿಶಿರ್ ಅವರಿಗೆ ದ್ವಿಜೇನ್ ಸೂಚನೆ ಕೊಡಬೇಕಿತ್ತು. ಇನ್ನೊಬ್ಬ ಸಂಬಂಧಿ ಪೊಲೀಸರ ಚಲನವಲನ ಇಲ್ಲದ್ದನ್ನು ಹಾಗೂ ರಸ್ತೆ ಖಾಲಿ ಇರುವುದನ್ನು ಗಮನಿಸಿ ಗೇಟನ್ನು ತೆರೆಯಬೇಕಿತ್ತು.

‘ದಾಖಿನೇಶ್ವರದ ವಿಲ್ಲಿಂಗ್ಡನ್ ಸೇತುವೆ ಮೂಲಕ ಹೋಗುವುದು ಸುಲಭವಿತ್ತಾದರೂ ಅಲ್ಲಿ ಶುಲ್ಕ ವಸೂಲು ಮಾಡಲು ತಡೆದು ನಿಲ್ಲಿಸುವ ಪದ್ಧತಿ ಇತ್ತು. ಹಾಗಾಗಿ ನಾವು ಹೌರಾ ಸೇತುವೆಯ ಹಾದಿಯನ್ನು ಆರಿಸಿಕೊಂಡೆವು. ಯಾವುದೇ ಅಡೆತಡೆಯಿಲ್ಲದೆ, ಪೊಲೀಸರ ಕಾಟವಿಲ್ಲದೆ ಚಂದೆರ್‌ನಾಗರ್ ತಲುಪಿದ ಮೇಲೆ ನಮಗೆಲ್ಲಾ ನಿರಾಳವಾಯಿತು. ಆಗ ಅರಣ್ಯ ಪ್ರದೇಶವಾಗಿದ್ದ ದುರ್ಗಾಪುರ್, ಡಕಾಯಿತರು ಒಡ್ಡಿದ ಭಯದಿಂದಾಗಿ ಸುದ್ದಿಯಲ್ಲಿತ್ತು. ಅಲ್ಲಿ ಹಾದು ಹೋಗುವಾಗ ದಿಢೀರನೆ ಎಮ್ಮೆಗಳ ಹಿಂಡು ಅಡ್ಡ ಬಂದು, ಕೂದಲೆಳೆಯಲ್ಲಿ ಅಪಘಾತವಾಗುವುದು ತಪ್ಪಿತಷ್ಟೆ. ವೇಗವಾಗಿ ಸಾಗುತ್ತಿದ್ದ ಕಾರು ಪುಣ್ಯಕ್ಕೆ ಬ್ರೇಕ್ ಒತ್ತಿದೊಡನೆ ನಿಂತಿತು. ನಾವೆಲ್ಲಾ ಬಚಾವಾದೆವು’ ಎಂದು ಡಾ. ಶಿಶಿರ್ ಬೋಸ್ ನೆನಪಿಸಿಕೊಂಡಿದ್ದರು.

ಬಿಹಾರದ ಬರಾರಿಯಲ್ಲಿದ್ದ ಅಣ್ಣನ ಮನೆಯಲ್ಲಿ ರಾತ್ರಿ ತಂಗಿದ ನಂತರ ಶಿಶಿರ್ ಕಾರನ್ನು ಓಡಿಸಿಕೊಂಡು ಸುಭಾಷ್ ಅವರನ್ನು ಗೋಮೊ ತಲುಪಿಸಿದರು. ಅಲ್ಲಿ ದೆಹಲಿ-ಕಾಲ್ಕಾ ಮೇಲ್ ರೈಲು ಮಧ್ಯರಾತ್ರಿಯ ನಂತರ ಹೊರಡುವುದಿತ್ತು. ರೈಲು ಹತ್ತಿದ ಸುಭಾಷ್ ಅವರನ್ನು ಕುಟುಂಬದವರು ನೋಡಿದ್ದು ಅದೇ ಕೊನೆ. ಆ ರೈಲು ನಿಲ್ದಾಣಕ್ಕೆ ಈಗ ನೇತಾಜಿ ಸುಭಾಷ್ ಚಂದ್ರ  ಬೋಸ್ ಅವರ ಹೆಸರನ್ನೇ ಇಟ್ಟಿದ್ದಾರೆ. ಭಾರತದಿಂದ ನೇತಾಜಿ ಕೊನೆಯ ಪಯಣದ ನೆನಪಿನ ಸಂಕೇತವಿದು.

1941ರ ಜನವರಿ 19ರಂದು ಪೆಷಾವರ ದಂಡು ರೈಲು ನಿಲ್ದಾಣವನ್ನು ಸುಭಾಷ್‌ ಅದೇ ಮಾರುವೇಷದಲ್ಲಿ ತಲುಪಿದರು. ‘ಫಾರ್ವರ್ಡ್‌ ಬ್ಲಾಕ್‌’ನ ಅಕ್ಬರ್‌ ಶಾ, ಮೊಹಮ್ಮದ್‌ ಶಾ ಹಾಗೂ ಭಗತ್‌ ರಾಮ್‌ ತಲ್ವಾರ್‌ ಅವರನ್ನು ಇದಿರುಗೊಂಡರು. ಶಾ ತನ್ನ ನಂಬಿಕಸ್ಥ ಸ್ನೇಹಿತ ಅಬಾದ್‌ ಖಾನ್‌ ಅವರ ಮನೆಗೆ ಸುಭಾಷರನ್ನು ಕರೆದುಕೊಂಡು ಹೋದರು. ಅದೇ ಜನವರಿ 26ರಂದು ಸುಭಾಷ್‌ ಅವರು ಖಾನ್‌ ಮನೆಯಿಂದ ಭಗತ್‌ ರಾಮ್‌, ಮೊಹಮ್ಮದ್‌ ಶಾ ಹಾಗೂ ಒಬ್ಬ ಗೈಡ್‌ ಜೊತೆಗೆ ಹೊರಟರು. ಬುಡಕಟ್ಟು ವಾಸಿಗಳಿರುವ ಪ್ರದೇಶಗಳ ಮೂಲಕವೇ ಯುರೋಪ್‌ ತಲುಪುವ ಮಾರ್ಗ ಹುಡುಕುವುದು ಅವರೆಲ್ಲರ ಉದ್ದೇಶವಾಗಿತ್ತು.

ಪೆಷಾವರದಿಂದ ಕಾಬೂಲ್‌ಗೆ ಪ್ರಯಾಣ ಕಷ್ಟಕರವಾಗಿತ್ತು. ಅವರೆಲ್ಲ ಆಫ್ಘಾನಿಸ್ತಾನ ತಲುಪುವ ಹಾದಿಯಲ್ಲಿ ಖೈಬರ್‌ ಪಾಸ್‌ನಿಂದ ದಕ್ಷಿಣಕ್ಕೆ 13 ಮೈಲಿನಷ್ಟು ಪಾದಯಾತ್ರೆಯ ಮೂಲಕವೇ ಕುಶಲಚಲನೆ ಮಾಡಬೇಕಾಯಿತು.

ಸುಭಾಷ್‌ ಬೋಸ್‌ ಹಾಗೂ ಭಗತ್‌ ರಾಮ್‌ ತಲ್ವಾರ್‌ ಆಫ್ಘನ್‌ ಪ್ರದೇಶವನ್ನು ತಲುಪಿದರು. ಸಲ್ವಾರ್‌ ಕಮೀಜ್‌, ಚರ್ಮದ ಜಾಕೆಟ್‌ ತೊಟ್ಟು ವಯೋವೃದ್ಧನ ವೇಷದಲ್ಲಿ ಇದ್ದ ಸುಭಾಷ್, ಖಾಕಿ ಖುಲ್ಲಾವನ್ನು ತಲೆಗೆ ಸುತ್ತಿಕೊಂಡಿದ್ದರು. ಪೆಷಾವರಿ ಚಪ್ಪಲಿಗಳನ್ನು ಹಾಕಿದ್ದ ಅವರು ಮೊದಲೇ ಯೋಜಿಸಿದಂತೆ ಮೂಗ–ಕಿವುಡ ಮೌಲ್ವಿಯಂತೆ ನಟಿಸುತ್ತಾ ಬಾಯಿ, ಕಿವಿಯನ್ನು ವಸ್ತ್ರದಿಂದ ಮುಚ್ಚಿಕೊಂಡಿದ್ದರು. ಪುಷ್ತೂ ಭಾಷೆಯಲ್ಲಿ ಪಳಗಿದ್ದ ಭಗತ್‌ ರಾಮ್‌, ‘ರೆಹಮತ್‌ ಖಾನ್‌ ಲಾಲ್‌ಪುರೆ’ ಎಂದು ತಮ್ಮ ಹೆಸರನ್ನು ಅಲ್ಲಿ ಬದಲಿಸಿಕೊಂಡಿದ್ದರು. ಪವಿತ್ರ ಅದ್ದಾಷರೀಫ್‌ ಮೂರ್ತಿಯನ್ನು ನೋಡಿ, ಅನಾರೋಗ್ಯ ಪೀಡಿತ ವೃದ್ಧರೊಬ್ಬರು ಗುಣಮುಖರಾಗಲೆಂದು ಪ್ರಾರ್ಥಿಸಲು ತಾವೆಲ್ಲಾ ಆಫ್ಘಾನಿಸ್ತಾನಕ್ಕೆ ಬಂದಿರುವುದಾಗಿ ಆಗ ಅವರು ಹೇಳಿಕೊಂಡಿದ್ದರು.

ಕಾಬೂಲ್‌ನಲ್ಲಿ ಭಗತ್‌ ರಾಮ್‌ ತಲ್ವಾರ್‌ ಅವರ ಹಳೆಯ ಸ್ನೇಹಿತ ಉತ್ತಮ್‌ ಚಂದ್‌ ಎನ್ನುವವರ ಮನೆಯಲ್ಲಿ ನೆಲೆ ಪಡೆದರು. 1930ರ ದಶಕದಲ್ಲಿ ಭಗತ್‌, ಉತ್ತಮ್‌ ಇಬ್ಬರೂ ಬ್ರಿಟಿಷ್‌ ಜೈಲು ಸೇರಿದ್ದವರು. ಸುಭಾಷ್‌ ಎಂದರೆ ಉತ್ತಮ್‌ ಚಂದ್‌ ಅವರಿಗೆ ಇನ್ನಿಲ್ಲದ ಗೌರವಾದರ. ತಮ್ಮಿಷ್ಟದ ವ್ಯಕ್ತಿಯನ್ನು ಕಂಡೊಡನೆ ಅವರು ಆನಂದತುಂದಿಲರಾದರು.

ಭಂಡಧೈರ್ಯ ಮಾಡಿ ತಪ್ಪಿಸಿಕೊಂಡು ಹೋಗುವ ದಾರಿಗಳನ್ನು ಹುಡುಕಿದ್ದ ಸುಭಾಷ್‌ ಇನ್ನೊಂದು ಅಡಚಣೆ ಎದುರಿಸಬೇಕಾಯಿತು. ಕಾಬೂಲ್‌ನಲ್ಲಿ ಆಘ್ಫನ್‌ ಬೇಹುಗಾರಿಕೆಯವನು ನಿರಂತರವಾಗಿ ಅವರನ್ನು ಹಿಂಬಾಲಿಸತೊಡಗಿದ. ಅವನು ಹಣಕ್ಕಾಗಿ ಹಿಂದೆ ಬಿದ್ದಿದ್ದಾನೆ ಎನ್ನುವುದನ್ನು ಸುಭಾಷ್‌ ಗೊತ್ತುಪಡಿಸಿಕೊಂಡರು. ತಮ್ಮ ಬಳಿ ಇದ್ದ ಚಿನ್ನದ ಗಡಿಯಾರವನ್ನು ಅವರು ಹಣಕ್ಕೆ ಬದಲಾಗಿ ಕೊಟ್ಟುಬಿಟ್ಟರು. ಆ ಗಡಿಯಾರದ 12ರ ಅಂಕಿ ಕೆಂಪು ಬಣ್ಣದ್ದಾಗಿತ್ತು. ಸುಭಾಷ್‌ ಪಾಲಿಗೆ ಅದು ದೊಡ್ಡ ತ್ಯಾಗವೇ ಹೌದು. ಯಾಕೆಂದರೆ, ಆ ಗಡಿಯಾರ ತಂದೆ ಅವರಿಗೆ ಕೊಟ್ಟಿದ್ದ ಉಡುಗೊರೆ. 

ತಪ್ಪಿಸಿಕೊಂಡು ಹೊರಟ ಹಾದಿಯುದ್ದಕ್ಕೂ ಸುಭಾಷ್‌ ಅವರಿಗೆ ಅನಿರೀಕ್ಷಿತ ಅಡಚಣೆಗಳು ಎದುರಾಗುತ್ತಲೇ ಇದ್ದವು. ರಷ್ಯಾ ನಿಯೋಗವನ್ನು ಭೇಟಿ ಮಾಡಬೇಕೆಂಬ ಉದ್ದೇಶ ಈಡೇರಲಿಲ್ಲ. ಸುಭಾಷ್‌ ಕಾಬೂಲ್‌ನಲ್ಲಿ ಇದ್ದಾರೆನ್ನುವುದನ್ನು ರಷ್ಯಾದ ರಾಯಭಾರಿ ಒಪ್ಪಲಿಲ್ಲ. ಬರ್ಲಿನ್‌ ಅಥವಾ ರೋಮ್‌ ತಲುಪಲು ಜರ್ಮನ್‌ ನಿಯೋಗ ಸುಭಾಷರಿಗೆ ಭರವಸೆ ನೀಡಿದ್ದರಿಂದ ಅದನ್ನು ಭೇಟಿ ಮಾಡುವ ದಾರಿಯೊಂದೇ ಸುಭಾಷ್‌ ಅವರಿಗೆ ಉಳಿದದ್ದು. ಪಾಸ್‌ಪೋರ್ಟ್‌ ಮಾಡಿಕೊಡುವಂತೆ ಮಾಸ್ಕೊದಲ್ಲಿನ ಜರ್ಮನ್‌ ರಾಯಭಾರಿಯಲ್ಲಿ ಕೇಳಿಕೊಂಡರೂ ದಿನಗಳುರುಳಿದವೇ ವಿನಾ ಯಾವ ಪ್ರತಿಕ್ರಿಯೆಯೂ ಬರಲಿಲ್ಲ.

  ಫೆಬ್ರುವರಿ 17 ಆದರೂ ನಿಯೋಗದಿಂದ ಯಾವ ಸುದ್ದಿಯೂ ಬರದೇ ಇದ್ದುದರಿಂದ  ಹಾಗೂ ರಷ್ಯಾ ರಾಯಭಾರಿ ಸಂಪರ್ಕಕ್ಕೆ ಸಿಗದಿದ್ದುದರಿಂದ ಸುಭಾಷ್‌ ಆತಂಕಕ್ಕೆ ಒಳಗಾದರು. ಕೆಲವು ದಿನಗಳ ನಂತರ ಪಾಸ್‌ಪೋರ್ಟ್‌ ವಿಷಯಕ್ಕೆ ಸಂಬಂಧಿಸಿದಂತೆ ಮಾಸ್ಕೊದಲ್ಲಿ ಸಮಸ್ಯೆ ಉಂಟಾಗಿದೆ ಎಂಬ ಸುದ್ದಿ ಜರ್ಮನ್‌ ರಾಯಭಾರಿಯಿಂದ ಬಂತು.

ಹತಾಶೆಗೊಂಡ ಸುಭಾಷ್‌ ಪರ್ಯಾಯ ದಾರಿ ಹುಡುಕಿದರು. ಖಾನಾಬಾದ್‌ನಿಂದ ರಷ್ಯಾ ಗಡಿ ತಲುಪಲು ನಿರ್ಧರಿಸಿದರು. ಖಾನಾಬಾದ್‌ಗೆ ಬಸ್‌ ಟಿಕೆಟ್‌ ಪಡೆದುಕೊಂಡು, ಉತ್ತಮ್‌ ಚಂದ್‌ ಅವರ ಕುಟುಂಬಕ್ಕೆ ಭಾವುಕರಾಗಿ ವಿದಾಯ ಹೇಳಿ, 1941ರ ಮಾರ್ಚ್‌ 17ರಂದು ಹೊರಟರು.

ಜರ್ಮನ್‌ ನಿಯೋಗದ ಸಹಾಯದಿಂದ ಸುಭಾಷ್‌ ಬೋಸ್‌ ಹೊಸ ಗುರುತನ್ನು ಪಡೆದುಕೊಂಡರು. ಇಟಾಲಿಯನ್‌ ‘ಒರ್ಲಾಂಡೊ ಮೊಜಾಟ’ ಹೆಸರಿನಲ್ಲಿ ಅವರಿಗೆ ಪಾಸ್‌ಪೋರ್ಟ್‌ ಸಿಕ್ಕಿತು. ಕಾಬೂಲ್‌ನಿಂದ ಡಾ. ವೆಲ್ಲರ್‌ ಎಂಬ ಜರ್ಮನಿಯ ವ್ಯಕ್ತಿ ಅವರಿಗೆ ಜೊತೆಯಾದದ್ದೇ ಅಲ್ಲದೆ ರಷ್ಯಾ ಗಡಿ ಮುಟ್ಟಿಸಿದರು. ಅದೇ ವರ್ಷ ಮಾರ್ಚ್‌ 20ರಂದು ಸುಭಾಷ್‌ ರೈಲಿನ ಮೂಲಕ ರಷ್ಯಾ ಗಡಿಯಿಂದ ಮಾಸ್ಕೊಗೆ ಹೊರಟರು. ಮಾರ್ಚ್‌ 27ರಂದು ಮಾಸ್ಕೊದಿಂದ ಹೊರಟು ಮರುದಿನ ಬರ್ಲಿನ್‌ ತಲುಪಿದರು.

ಜರ್ಮನಿಯ ಪತ್ರಿಕೆಯೊಂದು ಆ ಸಂದರ್ಭದಲ್ಲಿ ಸುಭಾಷರ ಒಂದು ಫೋಟೊ ಪ್ರಕಟಿಸಿ, ಚಿತ್ರಶೀರ್ಷಿಕೆಯಲ್ಲಿ ಹೀಗೆ ಮುದ್ರಿಸಿತ್ತು: ‘ಭಾರತದಿಂದ ಕೆಲವು ದಿನಗಳ ಹಿಂದೆ ನಿಗೂಢ ರೀತಿಯಲ್ಲಿ ಕಣ್ಮರೆಯಾಗಿದ್ದ ಅಲ್ಲಿನ ಶ್ರೇಷ್ಠ ನಾಯಕ ಹಾಗೂ ಭಾರತ ರಾಷ್ಟ್ರೀಯ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಮಾರ್ಚ್‌ 28ರಂದು ಸುರಕ್ಷಿತವಾಗಿ ಬರ್ಲಿನ್‌ ತಲುಪಿದ್ದಾರೆ’. ಬೋಸ್‌ ತಪ್ಪಿಸಿಕೊಂಡು ಹೋದದ್ದು ಬ್ರಿಟಿಷ್‌ ಬೇಹುಗಾರಿಕಾ ವ್ಯವಸ್ಥೆಯ ಪ್ರತಿಷ್ಠೆಗೆ ದೊಡ್ಡ ಪೆಟ್ಟುನೀಡಿತ್ತು.

‘ಕಲ್ಕತ್ತದಿಂದ ಬರ್ಲಿನ್‌ಗೆ ಬೋಸ್‌ ಪಯಣ ರೋಮಾಂಚಕ ವಿವರಗಳ ಐತಿಹಾಸಿಕ ಕಥಾನಕವಾಗಿದ್ದು, ಅದು ಹೆಚ್ಚೂಕಡಿಮೆ ಔರಂಗಜೇಬ್‌ನ ಹಿಡಿತದಿಂದ ಶಿವಾಜಿ ಪಾರಾದ ಪರಿಗೆ ಸಮ’ ಎಂದು ಇತಿಹಾಸಕಾರ ಡಾ. ಆರ್‌.ಸಿ.ಮಜುಂದಾರ್‌ ಬರೆದಿದ್ದಾರೆ.

‘ನೇತಾಜಿ ಅವರಿಗೆ ಇದ್ದಂಥ ದೃಢಸಂಕಲ್ಪ ಇಲ್ಲದೇ ಹೋಗಿದ್ದರೆ ಪ್ರತಿಕೂಲ ಹವಾಮಾನ ಹಾಗೂ ಹಗಲು ದರೋಡೆ ಸಾಮಾನ್ಯ ಎನ್ನುವಂಥ ಮಾರ್ಗದಲ್ಲಿ ಪ್ರಯಾಣ ಮಾಡುವುದು ಸಾಧ್ಯವಿರಲಿಲ್ಲ’ ಎನ್ನುವುದು ಸಂಶೋಧಕ, ಲೇಖಕ ಅನುಜ್‌ ಧರ್‌ ಅಭಿಪ್ರಾಯ.

ಸುಭಾಷ್‌ ತಪ್ಪಿಸಿಕೊಂಡುಹೋದ ನಂತರ, ದ್ವಿಜೇಂದ್ರನಾಥ್‌ ತನ್ನ ಅಣ್ಣ ಇದ್ದ ಕೋಣೆ ಸೇರಿಕೊಂಡರು. ಅವರೇ ಸುಭಾಷ್‌ ಎಂದು ಒಂದು ವಾರ ಹೊರಗಿನವರನ್ನು ನಂಬಿಸಲಾಯಿತು. ಧನಬಾದ್‌ನಲ್ಲಿ ನೇತಾಜಿ ಅವರನ್ನು ಬಂಧಿಸಲಾಗಿದೆ ಎಂದು ಆಲ್‌ ಇಂಡಿಯಾ ರೇಡಿಯೊದಲ್ಲಿ ಘೋಷಣೆ ಕೇಳಿಬಂತು. ಪೆಷಾವರದಲ್ಲಿ ಯಾರೆಲ್ಲಾ ಸುಭಾಷರಿಗೆ ನೆರವು ನೀಡಿದ್ದರೋ ಅವರನ್ನು 1941ರ ಏಪ್ರಿಲ್‌ನಲ್ಲಿ ಬಂಧಿಸಿ, ಹಲವು ವರ್ಷಗಳ ಕಾಲ ಜೈಲಿನಲ್ಲಿ ಇಡಲಾಯಿತು. ಶಿಶಿರ್‌ ಅವರನ್ನೂ ಬಂಧಿಸಿ, ಕಿರುಕುಳಕ್ಕೆ ಹೆಸರುವಾಸಿಯಾಗಿದ್ದ ಲಾಹೋರ್‌ ಕೋಟೆಗೆ ಕಳುಹಿಸಿದರು.

ಸುಭಾಷ್‌ ತಪ್ಪಿಸಿಕೊಂಡು ಹೋಗುವ ಎರಡು ದಶಕಗಳಿಗೂ ಮೊದಲು ಬಂಗಾಳದವರೇ ಆದ ರಾಶ್‌ ಬಿಹಾರಿ ಬೋಸ್‌ ಎನ್ನುವ ಇನ್ನೊಬ್ಬರು ಬ್ರಿಟಿಷರ ಕಪಿಮುಷ್ಟಿಯಿಂದ ತಪ್ಪಿಸಿಕೊಂಡು ಹೋಗಿದ್ದರು. ಸುಭಾಷ್‌ ಪಾರಾದ ರೀತಿಯಲ್ಲೇ ಅವರೂ ತಪ್ಪಿಸಿಕೊಂಡು ಹೋಗಿದ್ದರೆನ್ನುವುದು ಉಲ್ಲೇಖನೀಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT