ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಮ್ಮ ಸಮಿತಿ ವಿರುದ್ಧವೇ ಗುಡುಗಿದ ಅಧ್ಯಕ್ಷ!

ಬಿ ಖಾತಾಗಳನ್ನು ಸಕ್ರಮ ಮಾಡಲು ಸರ್ಕಾರವೇ ಬಿಡುತ್ತಿಲ್ಲ : ಲಕ್ಷ್ಮೀನಾರಾಯಣ್‌ ಅಸಮಾಧಾನ
Last Updated 29 ಜೂನ್ 2016, 19:47 IST
ಅಕ್ಷರ ಗಾತ್ರ

ಬೆಂಗಳೂರು:‘ನಗರದಲ್ಲಿ ಕಟ್ಟಡ ನಿರ್ಮಾಣ ಮಾಡುತ್ತಿರುವ ಯಾರಿಗೂ ಸಿ.ಸಿ (ಕಾಮಗಾರಿ ಆರಂಭದ ಪ್ರಮಾಣ ಪತ್ರ), ಒ.ಸಿ (ಸ್ವಾಧೀನ ಪ್ರಮಾಣಪತ್ರ) ಸಿಗುತ್ತಿಲ್ಲ. ಇದರಿಂದ ಸಾರ್ವಜನಿಕರು ತೊಂದರೆ ಅನುಭವಿಸಬೇಕಿದೆ’ –ಇದು ವಿರೋಧ ಪಕ್ಷದವರು ಮಾಡಿದ ಆರೋಪ ಅಲ್ಲ; ಸ್ವತಃ ಬಿಬಿಎಂಪಿ ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಆರ್‌.ಲಕ್ಷ್ಮೀನಾರಾಯಣ್‌ ಅವರ ದೂರು. ಅವರ ಈ ಆಕ್ರೋಶದ ಮಾತು ಕೇಳಿ ಬಿಜೆಪಿ ಸದಸ್ಯರು ಹುರುಪಿನಿಂದ ಎದ್ದುನಿಂತು ಬೆಂಬಲಿಸಿದರೆ, ಕಾಂಗ್ರೆಸ್‌ ಸದಸ್ಯರು ಅವರನ್ನು ಸುಮ್ಮನಿರಿಸುವ ಪ್ರಯತ್ನ ಮಾಡಿದರು.

‘ಬಿ ಖಾತಾಗಳನ್ನು ಸಕ್ರಮ ಮಾಡಲು ಸರ್ಕಾರವೇ ಬಿಡುತ್ತಿಲ್ಲ’ ಎಂದು ಲಕ್ಷ್ಮೀನಾರಾಯಣ್‌ ಅಸಮಾ ಧಾನ ಹೊರಹಾಕಿದರು. ‘ಇದರಲ್ಲಿ ಸರ್ಕಾರದ ಪಾತ್ರ ಏನೂ ಇಲ್ಲ. ಪ್ರಕರಣ ಕೋರ್ಟ್‌ನಲ್ಲಿದೆ’ ಎಂದು ಮೇಯರ್‌ ಸ್ಪಷ್ಟನೆ ನೀಡಿದರು. ‘ಸಿ.ಸಿ, ಒ.ಸಿ ಕೊಟ್ಟರೆ ಗುತ್ತಿಗೆದಾರರು, ಕೊಳ್ಳುವವರು, ಮಾರುವವರು ಮಾತ್ರವಲ್ಲ ನಮಗೂ ಅನುಕೂಲ. ಮೊದಲು ಅದಕ್ಕೆ ಕ್ರಮ ಕೈಗೊಳ್ಳಿ ಆಯುಕ್ತರೇ’ ಎಂದು ಸ್ಥಾಯಿ ಸಮಿತಿ ಅಧ್ಯಕ್ಷರು ಹೇಳಿದಾಗ ಸದಸ್ಯರೆಲ್ಲ ಗೊಳ್ಳೆಂದು ನಕ್ಕರು. ಕಾಂಗ್ರೆಸ್‌ ನಾಯಕರಿಗೆ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕು ಎನ್ನುವುದು ತೋಚದೆ ಕಣ್ಣು ಪಿಳಿಕಿಸುತ್ತಾ ಕುಳಿತರು.

ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿರುವ ಲಕ್ಷ್ಮೀನಾರಾಯಣ್‌ ಅವರು, ಮೇಯರ್‌ ಚುನಾವಣೆಯಲ್ಲಿ ಕಾಂಗ್ರೆಸ್‌ ಬೆಂಬಲಕ್ಕೆ ನಿಂತಿದ್ದರಿಂದ ಅವರನ್ನು ಸ್ಥಾಯಿ ಸಮಿತಿ ಅಧ್ಯಕ್ಷರನ್ನಾಗಿ ಮಾಡಲಾಗಿದೆ.


ಗೋಪಾಲಯ್ಯ–ಶಿವಕುಮಾರ್‌ ಜಟಾಪಟಿ: ಶಾಸಕ ಗೋಪಾಲಯ್ಯ ಅವರು ಮಾತನಾಡುವಾಗ ಮಧ್ಯೆ ಪ್ರವೇಶಿಸಿದ ಬಿಜೆಪಿ ಸದಸ್ಯ ಕೆ.ಶಿವಕುಮಾರ್‌, ‘ನೀವು ವಿಧಾನಸಭೆಯಲ್ಲಿ ಮಾತನಾಡಿ’ ಎಂದು ಹೇಳಿದರು. ರೊಚ್ಚಿಗೆದ್ದ ಗೋಪಾಲಯ್ಯ ಅವರು, ‘ನಾನು ಪ್ರತಿನಿಧಿಸುವ ಕ್ಷೇತ್ರ ಬಿಬಿಎಂಪಿಯಲ್ಲೇ ಇದೆ. ಕ್ಷೇತ್ರದ ಜನರ ಪ್ರತಿನಿಧಿಯಾಗಿ ನಾನು ಇಲ್ಲಿ ನಿಂತಿದ್ದೇನೆ. ವೈಯಕ್ತಿಕ ಕೆಲಸ ಮಾಡಿಸಿಕೊಳ್ಳಲು ಇಲ್ಲಿ ಬಂದಿಲ್ಲ. ಪಕ್ಷಾತೀತವಾಗಿ ಮಾತನಾಡಿ, ಜನರ ಸಮಸ್ಯೆ ಬಗೆಹರಿಸಲು ಬಂದಿದ್ದೇನೆ’ ಎಂದು ಸಿಟ್ಟಿನಿಂದಲೇ ಮಾರುತ್ತರ ನೀಡಿದರು. ಜೆಡಿಎಸ್‌ ಸದಸ್ಯರು ಅವರ ಬೆಂಬಲಕ್ಕೆ ನಿಂತರು.
ಶಿವಕುಮಾರ್‌ ಅವರಿಗೆ ಬುದ್ಧಿವಾದ ಹೇಳಿದ ಬಿಜೆಪಿ ನಾಯಕರು ಪರಿಸ್ಥಿತಿ ಯನ್ನು ತಿಳಿಗೊಳಿಸಿದರು.

ಆರೋಗ್ಯ ನಿರೀಕ್ಷಕ ಅಮಾನತು: ವಾಣಿಜ್ಯ ಪರವಾನಗಿ ಶುಲ್ಕದ ಹೆಸರಿನಲ್ಲಿ ಹೆಚ್ಚಿನ ಹಣ ಪಡೆದು ದುರುಪಯೋಗ ಮಾಡಿಕೊಂಡ ಆರೋಪ ಕೇಳಿಬಂದಿದ್ದರಿಂದ ಹಿರಿಯ ಆರೋಗ್ಯ ನಿರೀಕ್ಷಕ ಅಶೋಕ್‌ ಅವರನ್ನು ಅಮಾನತು ಮಾಡಲು ಮೇಯರ್‌ ಬಿ.ಎನ್‌. ಮಂಜುನಾಥ್‌ ರೆಡ್ಡಿ ಅವರು ಆದೇಶ ನೀಡಿದರು. ‘ಅಶೋಕ್‌ ಅವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಬೇಕು’ ಎಂದೂ ಸೂಚಿಸಿದರು.

ಬಿಜೆಪಿಯ ಉಮೇಶ್‌ ಶೆಟ್ಟಿ, ‘ಜಯ ನಗರದ ಹೋಟೆಲ್‌ನಿಂದ ₹ 35 ಸಾವಿರ ಪರವಾನಗಿ ಶುಲ್ಕ ಸಂಗ್ರಹಿಸಿ, ನಕಲಿ ರಸೀದಿ ನೀಡಲಾಗಿದೆ. ಆದರೆ, ಪಾಲಿಕೆ ಖಾತೆಗೆ ₹ 10 ಸಾವಿರ ಮಾತ್ರ ಪಾವತಿ ಮಾಡಲಾಗಿದೆ’ ಎಂದು ದೂರಿ ದರು. ಅದಕ್ಕೆ ಸಂಬಂಧಿಸಿದ ದಾಖಲೆ ಗಳನ್ನೂ ಪ್ರದರ್ಶಿಸಿದರು.
ಎಂಜಿನಿಯರ್‌ಗಳಿಗೆ ನೋಟಿಸ್‌: ಪಾಲಿಕೆಯ 18 ಮುಖ್ಯ ಎಂಜಿನಿಯರ್‌ಗಳ ಪೈಕಿ ಬುಧವಾರ ನಡೆದ ಕೌನ್ಸಿಲ್‌ ಸಭೆಯಲ್ಲಿ ಕೇವಲ ನಾಲ್ಕು ಜನ ಹಾಜರಿದ್ದರು. ಉಳಿದವರಿಗೆ ಷೋಕಾಸ್‌ ನೋಟಿಸ್‌ ಜಾರಿಮಾಡಲು ಮೇಯರ್‌ ಆದೇಶಿಸಿದರು.

ಮರ ತೆರವುಗೊಳಿಸಲು ಲಂಚ: ಮರಗಳ ನಿರ್ವಹಣೆಯಲ್ಲಿ ಅರಣ್ಯ ಘಟಕದ ವೈಫಲ್ಯ ಕೌನ್ಸಿಲ್‌ ಸಭೆಯಲ್ಲಿ ಪ್ರತಿಧ್ವನಿಸಿತು. ‘ಮರಗಳ ಗಣತಿ ಮಾಡಿ, ಬೀಳುವ ಹಂತದಲ್ಲಿರುವ ಮರಗಳ ತೆರವಿಗೆ ಕ್ರಮ ಕೈಗೊಳ್ಳಬೇಕು’ ಎಂದು ಬಿಬಿಎಂಪಿ ಆಡಳಿತ ಪಕ್ಷದ ನಾಯಕ ಆರ್‌.ಎಸ್‌. ಸತ್ಯನಾರಾಯಣ ಆಗ್ರಹಿಸಿದರು. ‘ಮರ ತೆರವುಗೊಳಿಸಲು ಲಂಚ ಪಡೆಯುತ್ತಿರುವ ಆರೋಪ ಕೇಳಿಬಂದಿದೆ. ಸಿಬ್ಬಂದಿಗೆ ಬುದ್ಧಿವಾದ ಹೇಳಿ’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಅವರಿಗೆ ತಿಳಿಸಿದರು. ಸತ್ಯನಾರಾಯಣ ಅವರ ಮಾತಿಗೆ ಹಲವು ಸದಸ್ಯರು ಧ್ವನಿಗೂಡಿಸಿದರು.

ಲಿಂಕ್‌ ಕಾರ್ಯಕರ್ತೆಯರ ವೇತನ ಹೆಚ್ಚಳ: ಲಿಂಕ್‌ ಕಾರ್ಯಕರ್ತೆಯರಿಗೆ ಕನಿಷ್ಠ ವೇತನ ಕಾಯ್ದೆ ಅನ್ವಯ ಸಂಬಳ ನಿಗದಿಗೆ ಕೌನ್ಸಿಲ್‌ ಸಭೆಯಲ್ಲಿ ಬುಧವಾರ ನಿರ್ಣಯ ತೆಗೆದುಕೊಳ್ಳಲಾಯಿತು. ‘ಸದ್ಯ ಬರಿ ₹ 3,500 ವೇತನವನ್ನು ಅವರಿಗೆ ನೀಡಲಾಗುತ್ತಿದ್ದು, ಸಾರಿಗೆ ವೆಚ್ಚಕ್ಕೂ ಅದು ಸಾಕಾಗದು. ಅಲ್ಲದೆ, ಅಷ್ಟೊಂದು ನಿಕೃಷ್ಟ ಸಂಬಳ ನೀಡುವ ಮೂಲಕ ಕನಿಷ್ಠ ವೇತನ ಕಾಯ್ದೆಗೆ ವಿರುದ್ಧವಾಗಿ ನಡೆದುಕೊಂಡಂತೆ ಆಗುತ್ತದೆ’ ಎಂದು ಶಾಸಕ ಗೋಪಾಲಯ್ಯ ಆಕ್ಷೇಪ ಎತ್ತಿದರು. ಕಾಯ್ದೆಯಂತೆ ವೇತನ ನಿಗದಿಗೆ ಮೇಯರ್‌ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT